ಕ್ಷೀರಭಾಗ್ಯ: ಸಿದ್ಧತೆಗಳು ಸಾಕೆ?
ಕಾಂಗ್ರೆಸ್ ಸರ್ಕಾರ ತ್ತೀಚೆಗೆ ಪ್ರಾರಂಭಿಸಿರುವ ಕ್ಷೀರಭಾಗ್ಯ ಯೋಜನೆಯಂತೂ ಪ್ರಾರಂಭದಲ್ಲಿಯೇ ನೂರೆಂಟು ವಿಘ್ನಗಳನ್ನು ಹೊತ್ತು ಬಂದಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಪ್ರಾರಂಭಿಸಿರುವ ಯೋಜನೆ ಎನ್ನುವ ವ್ಯಾಖ್ಯಾನ ಈ ಯೋಜನೆಗಿದೆ.
ಕ್ಷೀರಭಾಗ್ಯ ಯೋಜನೆಯಡಿ ಶಾಲೆಯಲ್ಲಿನ ಮಕ್ಕಳಿಗೆ ಪ್ರತಿದಿನವೂ ಹಾಲು ವಿತರಣೆ ಮಾಡಲು ಸರ್ಕಾರ ಸೂಚಿಸಿದೆ. 96 ಸಾವಿರ ಶಾಲೆಗಳಲ್ಲಿನ ಮಕ್ಕಳಿಗೆ ಈ ಯೋಜನೆ ಲಾಭ ದೊರೆಯಲಿದೆಯಾದರೂ ಇದಕ್ಕಾಗಿ ಸರ್ಕಾರ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೇ ಯೋಜನೆ ಪ್ರಾರಂಭಿಸಿರುವುದು ಹಲವು ಸಂಕಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಮಕ್ಕಳ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯದಲ್ಲಿ 1 ಲಕ್ಷ 10 ಸಾವಿರ ಮಹಿಳೆಯರು ಬಿಸಿಯೂಟ ಯೋಜನೆ (ಅಕ್ಷರ ದಾಸೋಹ) ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 13 ವರ್ಷಗಳಿಂದ ಕಡಿಮೆ ಸಂಬಳದಲ್ಲಿ ನಿಕೃಷ್ಟವಾಗಿ ಬದುಕುತ್ತಿದ್ದು, ಪ್ರತಿಬಾರಿಯ ಬಜೆಟ್ನಲ್ಲಿಯೂ ವೇತನ ಹೆಚ್ಚಿಸುವುದು ಹಾಗೂ ಸೇವಾ ಭದ್ರತೆ ಬಗ್ಗೆ ಕೇಳುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಮಾತ್ರ ಗಮನಹರಿಸುತ್ತಿಲ್ಲ. ಮಕ್ಕಳಿಗೆ ಹಾಲು ನೀಡುವ ಯೋಜನೆ ಜಾರಿಗೆ ತಂದಿತು. ಮಕ್ಕಳಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆ ಹೋಗಲಾಡಿಸಬೇಕಾದಲ್ಲಿ ಮಕ್ಕಳಿಗೆ ಹಾಲು ವಿತರಣೆ ಮಾಡುವುದು ಒಂದು ದೃಷ್ಟಿಕೋನದಿಂದ ಸ್ವಾಗತಾರ್ಹವೇ. ಆದರೆ, ಸರ್ಕಾರ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ನೀಡಬೇಕಿತ್ತೋ ಅದನ್ನೆಲ್ಲಾ ಮರೆತಿದೆ. ಈಗ ಪ್ರತಿ ಶಾಲೆಯಲ್ಲಿಯೂ ಬಿಸಿಯೂಟ ನೌಕರರಿದ್ದು, ಅವರೇ ಈ ಜವಾಬ್ದಾರಿ ನಿಭಾಯಿಸುವುದು ಅನಿವಾರ್ಯ.
ರಾಜ್ಯದ ನೂರಾರು ಗ್ರಾಮಗಳ ಶಾಲೆಗಳಲ್ಲಿನ ಮಕ್ಕಳಿಗೆ ಹಾಲು ವಿತರಣೆ ಮಾಡಲು ಸರ್ಕಾರ ಹಾಲಿನ ಪೌಡರ್ ಪ್ಯಾಕೆಟ್ಗಳನ್ನು ಪೂರೈಕೆ ಮಾಡಿದ್ದು, ಅಲ್ಲಿನ ಬಿಸಿಯೂಟ ನೌಕರರು ಅದನ್ನು ಹಾಲನ್ನಾಗಿ ಸಿದ್ಧಪಡಿಸಿ ಮಕ್ಕಳಿಗೆ ವಿತರಣೆ ಮಾಡಬೇಕಾಗಿದೆ. ಸದ್ಯ ವಾರದಲ್ಲಿ 3 ದಿನ ಹಾಲು ವಿತರಣೆಗೆ ಸೂಚನೆ ನೀಡಲಾಗಿದೆ. ಬಿಸಿಯೂಟ ಸಿದ್ಧಪಡಿಸುವಲ್ಲಿಯೇ ನೌಕರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಈಗ ಹಾಲು ಸಿದ್ಧಪಡಿಸುವುದು ಅದಕ್ಕಿಂತ ಕಷ್ಟ ಕೆಲಸವಾಗಿದೆ. ಮುಖ್ಯವಾಗಿ ಪ್ರತಿ ಶಾಲೆಯಲ್ಲಿಯೂ ಹಾಲು ಸಿದ್ಧಪಡಿಸುವುದಕ್ಕಾಗಿಯೇ ಪ್ರತ್ಯೇಕ ಪರಿಕರಗಳ ಅವಶ್ಯಕತೆ ಇದೆ. ಅದ್ಯಾವುದನ್ನು ಸರ್ಕಾರ ಪೂರೈಕೆ ಮಾಡಿಲ್ಲ. ಅಪೌಷ್ಟಿಕತೆ ಎನ್ನುವುದು ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಮಾರಕ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸ್ವಾಗತಾರ್ಹ. ಆದರೆ, ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಕೇವಲ ಹಾಲಿನಿಂದ ಮಾತ್ರ ಸಾಧ್ಯವಿಲ್ಲ. ಆದರೆ, ಸರ್ಕಾರ ರೈತರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚಿಸಿದ್ದು, ಇದರಿಂದ ಹಾಲು ಉತ್ಪಾದಕರ ಸಂಘಗಳು ಅನುಭವಿಸುವ ನಷ್ಟವನ್ನು ತಗ್ಗಿಸುವ ನಿಟ್ಟಿನಲ್ಲಿಯೂ ಕ್ಷೀರಭಾಗ್ಯ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸ್ವತಃ ಸಿಎಂ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಸರ್ಕಾರ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಹಿಂದೆ ಶಾಲೆಯಲ್ಲಿರುತ್ತಿದ್ದ ದಿನಚರಿ ಇಂದು ಬದಲಾಗಿದೆ. ಶಾಲೆಗೆ ಹೋಗುತ್ತಿದ್ದಂತೆ ಮಗುವಿಗೆ ಹಾಲು ನೀಡುವ ತಯಾರಿ, ನಂತರವೇ ತರಗತಿಗಳು ಪ್ರಾರಂಭ. ಇದರ ಮಧ್ಯೆ ಮಧ್ಯಾಹ್ನದ ಬಿಸಿಯೂಟ ಬಳಿಕ ಕಬ್ಬಿಣಾಂಶದ ಮಾತ್ರೆಗಳು ಹೀಗೆ ಬಹುತೇಕ ಸಮಯ ಪಠ್ಯೇತರ ವಿಷಯಗಳಿಗೆ ಶಾಲಾ ಸಮಯ ಮೀಸಲಾಗುತ್ತಾ ಸಾಗುತ್ತಿದೆ. ಇದು ಶಿಕ್ಷಣ ದೃಷ್ಟಿಕೋನದಿಂದ ಅವಲೋಕಿಸಿದಲ್ಲಿ ಹೆಚ್ಚು ಅಪಾಯಕಾರಿಯಾಗಿ ಕಂಡು ಬರುತ್ತಿದೆ.
ಯೋಜನೆ ಪ್ರಾರಂಭಿಸಿದಲ್ಲಿ ಶಾಲೆಗಳಲ್ಲಿ ಬೇಕಾಗುವ ಸಾಮಗ್ರಿ ಅದಕ್ಕಾಗಿ ಅವಶ್ಯವಿರುವ ಅನುದಾನ, ರಾಜ್ಯದಲ್ಲಿ ಸದ್ಯ ಉತ್ಪಾದನೆಯಾಗುತ್ತಿರುವ ಹಾಲು, ಪ್ರತಿದಿನ ಮಕ್ಕಳಿಗೆ ಬೇಕಾಗುವ ಹಾಲಿನ ಒಟ್ಟು ಪ್ರಮಾಣ ಹೀಗೆ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸದೇ ಯೋಜನೆ ಪ್ರಾರಂಭಿಸಿರುವುದು ಎಷ್ಟು ಸೂಕ್ತ? ಯೋಜನೆ ಉದ್ದೇಶವೇನೋ ಚೆನ್ನಾಗಿದೆ. ಆದರೆ, ಯೋಜನೆ ಸಾಫಲ್ಯದ ಬಗ್ಗೆಯೂ ಏಕೆ ಸರ್ಕಾರ ಚಿಂತಿಸಲಿಲ್ಲ ಎನ್ನುವುದರ ಬಗ್ಗೆ ಚರ್ಚೆಯಾಗಬೇಕಿದೆ.
-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

