ಬಡತನ ಎಂಬುದು ಒಂದು ಮನಸ್ಥಿತಿ ಅಷ್ಟೆ. ತಿನ್ನಲು ಅನ್ನ, ಕೈತುಂಬ ಹಣ ಇಲ್ಲ ಎಂದರೆ ಅದು ಬಡತನ ಅಲ್ಲ. ಆತ್ಮವಿಶ್ವಾಸ ಇದ್ದರೆ ಈ ಮನಸ್ಥಿತಿಯಿಂದ ಯಾರು ಬೇಕಾದರೂ ಹೊರಬರಬಹುದು! ದೇಶದ ಅರ್ಧ ಜನರನ್ನು ಕಾಡುತ್ತಿರುವ ಈ ಜ್ವಲಂತ ಸಮಸ್ಯೆಗೆ ಇದಕ್ಕಿಂತಲೂ ಸರಳವಾದ ವ್ಯಾಖ್ಯಾನ ಅಸಾಧ್ಯ. ಇಷ್ಟು ದಿನ, ಎಷ್ಟೊ ನಾಯಕರಿಗೆ ಬಿಡಿಸಲಾಗದ ಕಗ್ಗಂಟಾಗಿದ್ದ ಈ ಸಮಸ್ಯೆಯನ್ನು ಕಾಂಗ್ರೆಸ್ನ ರಾಹುಲ್ ಗಾಂಧಿ ಅತ್ಯಂತ ಸುಲಭವಾಗಿ ಪರಿಹರಿಸಿಬಿಟ್ಟಿದ್ದಾರೆ. ರಾಹುಲ್ ಗಾಂಧಿ ಅವರ ಇದೇ ವಾದವನ್ನು ಮುಂದುವರಿಸುವುದಾದರೆ ಕಳ್ಳತನ ಮಾಡುವ ಕಳ್ಳನನ್ನು, ಅತ್ಯಾಚಾರಿ, ಕೊಲೆಗಡುಕ ಹೀಗೆ ಯಾರನ್ನೂ ತಪ್ಪಿತಸ್ಥರೆಂಬಂತೆ ನೋಡುವಂತಿಲ್ಲ. ಏಕೆಂದರೆ ಹಾಗೆ ಮಾಡುವುದು ಅವರ ಮನಸ್ಥಿತಿ. ಅದೇ ರೀತಿ ಜನರಿಂದ ಥೂ ಛೀ... ಎಂದೆಲ್ಲ ಉಗಿಸಿಕೊಂಡರೂ ಐದು ವರ್ಷಕ್ಕೊಮ್ಮೆ ಅಧಿಕಾರಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಜನರ ಮುಂದೆ ಬರುವ ರಾಜಕಾರಣಿಗಳನ್ನು ಜನ ಶಿಕ್ಷಿಸುವಂತೆಯೂ ಇಲ್ಲ, ಪ್ರಶ್ನಿಸುವಂತೆಯೂ ಇಲ್ಲ. ಏಕೆಂದರೆ ರಾಜಕಾರಣಿಗಳ ಲಜ್ಜೆಗೇಡಿತನ ಸಹ ಒಂದು ಮನಸ್ಥಿತಿ ಅಷ್ಟೆ!
ಇರಲಿ, ರಾಹುಲ್ ಗಾಂಧಿಯವರ ಮಾತುಗಳನ್ನು ಗಂಭೀರವಾಗಿಯೇ ಪರಿಗಣಿಸುವುದಾದರೆ ಬಡತನದ ಬೇಗೆಯಲ್ಲಿ ಹೊರಳಾಡುತ್ತಿರುವವರನ್ನು ಆ ಮನಸ್ಥಿತಿಯಿಂದ ಹೊರತರಲು ಅವರದೇ ಸರ್ಕಾರ ಏನು ಮಾಡಿದೆ? ಉಚಿತವಾಗಿ ಅಕ್ಕಿ, ಕಾಳು ಕೊಟ್ಟು ಆ ಮನಸ್ಥಿತಿಯನ್ನು ಪೋಷಿಸುತ್ತಿಲ್ಲವೇ? ತಿನ್ನಲು ಅನ್ನ ಇಲ್ಲ ಎಂಬುದು ಬಡತನವಾಗುವುದಿಲ್ಲ ಎಂದಾದರೆ ಅವರದ್ದೇ ಯುಪಿಎ ಸರ್ಕಾರ ದೇಶದ ಖಜಾನೆಗೆ ಕನ್ನ ಹಾಕುವ ಆಹಾರ ಭದ್ರತಾ ಕಾಯಿದೆ ಜಾರಿಗೆ ತರಲು ಮುಂದಾಗಿರುವುದಾದರೂ ಏಕೆ? ಇನ್ನು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಮರು ಕ್ಷಣದಲ್ಲಿಯೇ ಅಗ್ಗದ ದರದಲ್ಲಿ ಬಡವರ ತುತ್ತಿನ ಚೀಲ ತುಂಬಲು ಸಿದ್ದರಾಮಯ್ಯನವರು ಮುಂದಾಗಿದ್ದಾದರೂ ಏಕೆ? ದೇಶದ ಮುಕ್ಕಾಲು ಪಾಲು ಜನರಿಗೆ ಆಹಾರದ ಹಕ್ಕನ್ನು ನೀಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಅವರ ಉಚಿತ ಸಲಹೆ ಆಪ್ತ ಎನಿಸಿಲ್ಲ. ದುಡಿಯಲು ಕೈಯಿದ್ದೂ, ದುಡಿಮೆಗೆ ಅವಕಾಶಗಳಿಲ್ಲದೆ ಬಡತನವನ್ನು ಹೊದ್ದು ಮಲಗಿರುವವರಿಗೆ ಅಗ್ಗದ ದರದಲ್ಲಿ ಅಥವಾ ಉಚಿತವಾಗಿ ಆಹಾರ ಪೂರೈಸುವುದರಿಂದ ಎಷ್ಟು ದಿನ ಅವರನ್ನು ಪೊರೆಯಲು ಸಾಧ್ಯ? ಇದರ ಬದಲು ಅವರಿಗೆ ದುಡಿಮೆಯ ಅವಕಾಶಗಳನ್ನು ಕಲ್ಪಿಸುವ ಉಪಕ್ರಮಗಳಿಗೆ ಸರ್ಕಾರ ಮುಂದಾಗಬೇಕಿತ್ತು. ಆದರೆ ಬಡತನವನ್ನು ಶಾಶ್ವತವಾಗಿ ನಿರ್ಮೂಲಗೊಳಿಸುವುದು ಸರ್ಕಾರಗಳ ರಾಜಕೀಯ ಲೆಕ್ಕಾಚಾರದ ವ್ಯಾಪ್ತಿಯಿಂದ ಹೊರಗಿರುವ ವಿಷಯ. ಇದಕ್ಕೆ ಪೂರಕವಾಗಿ ದೇಶದ ಆರ್ಥಿಕ ಪ್ರಗತಿಯ ರೂಪುರೇಷೆ ನಿರ್ಧರಿಸುವ ಯೋಜನಾ ಆಯೋಗದ ಅಧಿಕಾರಿಗಳಿಗೆ ಸಹ ರಾಹುಲ್ಗಾಂಧಿ ಹೇಳಿದ 'ಮನಸ್ಥಿತಿ'ಯ ಅಂಟು ತಗುಲಿಕೊಂಡಂತಿದೆ. ಇಲ್ಲದಿದ್ದರೆ ಜೀವನ ನಡೆಸಲು ದಿನವೊಂದಕ್ಕೆ 30 ರೂಪಾಯಿ ಸಾಕು. ಅದನ್ನು ದುಡಿಯಲಾಗದವ ನಿಜವಾಗಿಯೂ ಬಡವ ಎಂಬ ಶಿಫಾರಸು ನೀಡುತ್ತಿರಲಿಲ್ಲ. ಮತ್ತು ಅದನ್ನೇ ಮುಂದಿಟ್ಟುಕೊಂಡು ಸರ್ಕಾರ ಆಹಾರ ಭದ್ರತೆ ಕಲ್ಪಿಸಲು ಟೊಂಕ ಕಟ್ಟಿ ನಿಲ್ಲುವ ಅಗತ್ಯವೂ ಇರಲಿಲ್ಲ. ಲಕ್ಷಾಂತರ ಕೋಟಿ ರು.ಗಳ ಹೊರೆಯನ್ನು ಮೈಮೇಲೆ ಎಳೆದುಕೊಂಡು ಇಂತಹ ಯೋಜನೆಗಳನ್ನು ಜಾರಿಗೆ ತರುವ ಬದಲು ಸರ್ಕಾರ ರಾಹುಲ್ ವ್ಯಾಖ್ಯಾನವನ್ನು ಗಂಭೀರವಾಗಿ ಪರಿಗಣಿಸಿ ಬಡತನದ ಮನಸ್ಥಿತಿಯಂದ ಹೊರತರಲು ಬಡವರಿಗೆ ಉಚಿತ ಆಪ್ತ ಸಲಹಾ ಕೇಂದ್ರಗಳನ್ನು ತೆರೆದಿದ್ದರೆ ಸಾಕಿತ್ತು. ಖರ್ಚೆ ಇಲ್ಲದೆ ಬಡವರನ್ನು ಬಡತನದಿಂದ ಮುಕ್ತರನ್ನಾಗಿಸಬಹುದಿತ್ತು!
ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆ ಕೈಕೊಟ್ಟು, ಮಾಡಿದ ಸಾಲ ತೀರಿಸಲಾಗದೆ, ಬಡತನದಿಂದ ಹೊರಬರಲಾಗದೆ ಜೀವ ಕಳೆದುಕೊಂಡಿದ್ದಾರೆ. ಇವರ ಉದ್ಧಾರಕ್ಕೆಂದು ಸರ್ಕಾರಗಳು ಮಾಡಿದ್ದಾದರೂ ಏನು? ಸಾಲ, ಬಡ್ಡಿ ಮನ್ನಾ ಮಾಡಿ ಕೈತೊಳೆದುಕೊಂಡಿವೆ ಅಷ್ಟೆ. ಈ ಸಾಲ ಮನ್ನಾದಿಂದ ಹೆಚ್ಚಿನ ಉಪಯೋಗವಾಗಿದ್ದು ಶ್ರೀಮಂತ ರೈತರಿಗಷ್ಟೇ ಹೊರತು ಬಡ ರೈತರಿಗಲ್ಲ. ಯಾವುದೇ ಪ್ರಗತಿಪರ ಸರ್ಕಾರ ರೈತರ ಬೆಳೆಗೆ ಸೂಕ್ತ ಬೆಂಬಲ ನೀಡಿ, ಅವರ ಬೆಳೆ ದಾಸ್ತಾನಿಗೆ ಗೋದಾಮುಗಳನ್ನು ನಿರ್ಮಿಸಿ, ಕಷ್ಟ ಕಾಲದಲ್ಲಿ ಅವರು ಅಧೀರರಾಗದಂತೆ ಪರ್ಯಾಯ ಉದ್ಯೋಗ ಕಲ್ಪಿಸಲು ಮುಂದಾಗಬೇಕಿತ್ತು. ಇದರಿಂದ ಆತ್ಮಹತ್ಯೆಗಳನ್ನು ತಡೆಯಲೂಬಹುದಿತ್ತು. ಈಗ ಬಡತನವನ್ನು ಒಂದು ಮನಸ್ಥಿತಿ ಎಂದು ಹೇಳುತ್ತಿರುವ ರಾಹುಲ್ಗಾಂಧಿ, ನಾನಾ ಯೋಜನೆಗಳು, ಉಚಿತ ಕೊಡುಗೆಗಳ ಮೂಲಕ ಬಡವರನ್ನು ಬಡವರನ್ನಾಗಿಯೇ ಉಳಿಸುವ, ಇನ್ನಷ್ಟು ಸೋಮಾರಿಗಳನ್ನಾಗಿಸುವ ಈ ಸರ್ಕಾರದ ಮನಸ್ಥಿತಿಯಾದರೂ ಎಂಥದ್ದು ಎಂಬುದನ್ನು ವಿವರಿಸುತ್ತಾರಾ? ಇಷ್ಟಕ್ಕೂ ಬಡವರು, ಬಡತನವನ್ನು ಯುಪಿಎ ಸರ್ಕಾರ ವ್ಯಂಗ್ಯ ಮಾಡಿದಷ್ಟು, ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಷ್ಟು ಯಾವ ಸರ್ಕಾರವೂ ಬಳಸಿಕೊಂಡಿಲ್ಲ. ಗರೀಬಿ ಹಟಾವೊದಿಂದ ಹಿಡಿದು ಆಹಾರ ಭದ್ರತೆವರೆಗೆ ಜಾರಿಗೆ ಬಂದಿರುವ ಖೊಟ್ಟಿ ಯೋಜನೆಗಳಿಂದ ಎಷ್ಟು ಮಂದಿ ಬಡವರು ಶಾಶ್ವತವಾಗಿ ಬಡತನದ ಹಂಗಿನಿಂದ ಹೊರಬಂದಿದ್ದಾರೆ ಹೇಳಿ?
ರಾಹುಲ್ ಗಾಂಧಿಯವರೇ, ಇಷ್ಟಕ್ಕೂ ನಿಮ್ಮ ಮನಸ್ಥಿತಿ ಎಂಥದ್ದು?
ಹೀಗೊಂದು ಪ್ರಶ್ನೆ ಕೇಳಲೇಬೇಕಿದೆ. ಏಕೆಂದರೆ ನಿಮ್ಮದೇ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿರುವ ಯುಪಿಎ ಮೈತ್ರಿಕೂಟ ಕಳೆದ ಒಂಬತ್ತು ವರ್ಷಗಳಿಂದ ದೇಶದ ಆಡಳಿತ ಸೂತ್ರ ಹಿಡಿದಿದೆ. ಈ ಅವಧಿಯಲ್ಲಿ ಅಭಿವೃದ್ಧಿಯ ಮಕರಂದ ಹಂಚುವ ಬದಲು ಸರ್ಕಾರ ಜನರಿಗೆ ಕೊಟ್ಟಿರುವುದಾದರೂ ಏನು? ಭ್ರಷ್ಟಾಚಾರ, ಅಕ್ರಮಗಳ ಸರಮಾಲೆ, ಸ್ವಜನಪಕ್ಷಪಾತದ ನವರಸವಲ್ಲದೆ ಮತ್ತೇನು ಕೊಟ್ಟಿದೆ ಹೇಳಿ? 2004ರಲ್ಲಿ ಇದ್ದ ಆಶಾವಾದ, ಉತ್ತಮ ಭವಿಷ್ಯದ ಕನಸು, ನೆಮ್ಮದಿಯ ನಾಳೆಗಳ ನಿರೀಕ್ಷೆ, ಎಲ್ಲವೂ ನುಚ್ಚು ನೂರಾಗಿಲ್ಲವೇ?
ಮೊದಲ ಐದು ವರ್ಷಗಳಲ್ಲಿ ಹೈವೇಯಲ್ಲಿ ಸರಾಗವಾಗಿ ಸಾಗಿದ ನಿಮ್ಮ ಬಸ್ಸು 2009ರ ನವೀಕೃತ ಜನಾದೇಶದ ನಂತರ ಇಂದು ಕಚ್ಚಾ ರಸ್ತೆಯಲ್ಲಿ ಮುಂದಕ್ಕೂ ಹೋಗಲಾಗದೆ, ಹಿಂದಕ್ಕೂ ಬರಲಾಗದೆ ನಿಂತಲ್ಲೇ ನಿಂತಿರುವುದು ನಿಜವಲ್ಲವೇ? ದೇಶಕ್ಕೆ ಆರ್ಥಿಕತೆಯ ಹೊಸ ಹಾದಿ ತೋರಿಸಿದ್ದ ಮನಮೋಹನ್ಸಿಂಗ್ ಅವರು ಇಂದು ದಾರಿ ಕಾಣದಂತಾಗಿದ್ದಾರೆ. ನಾಲ್ಕು ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಮೊನ್ನೆಯಷ್ಟೇ ಷೇರುಪೇಟೆ ಕುಸಿದಿದೆ. ಡಾಲರ್ ಸಮ್ಮುಖದಲ್ಲಿ ರುಪಾಯಿಯಂತೂ ತೀರಾ ಬಡಪಾಯಿಯಂತಾಗಿದೆ. ವ್ಯಾಪಾರ, ಉದ್ಯಮ, ಉತ್ಪಾದನೆಗಳೆಂಬುದು ನೀರಲ್ಲಿ ವೀಣೆ ಮೀಟಿದಂತೆ ಸದ್ದು ಮಾಡುತ್ತಿವೆ. ಐದು ವರ್ಷಗಳ ಹಿಂದೆ ವಿಶ್ವದ ಉದ್ಯಮಪತಿಗಳ ಪಾಲಿಗೆ ಭಾರತ ಡಾರ್ಲಿಂಗ್ ಆಗಿತ್ತು. ಇಂದು ಅದೇ ಜನ ಭಾರತಕ್ಕೆ ವಿಚ್ಛೇದನ ನೀಡಲು ತುದಿಗಾಲ ಮೇಲೆ ನಿಂತಿದ್ದಾರೆ. ವಿತ್ತ ಸಚಿವ ಚಿದಂಬರಂ ಎಷ್ಟೇ ಕೀಲೆಣ್ಣೆ ಸುರಿದರೂ ಆರ್ಥಿಕತೆಗೆ ಹಿಡಿದ ಕಿಲುಬು ದೂರಾಗುತ್ತಿಲ್ಲ. ಪ್ರಗತಿಯ ಚಕ್ರ ಸುತ್ತುವುದನ್ನೇ ಮರೆತಿದೆ. ಸಾಲದೆಂಬಂತೆ ಭ್ರಷ್ಟಾಚಾರ, ಅಕ್ರಮ, ಹಗರಣಗಳು ಸರದಿ ಸಾಲಿನಲ್ಲಿ ಜನರ ಮುಂದೆ ಬಂದಿವೆ. ಇದೆಲ್ಲದರ ಬಗ್ಗೆ ಉತ್ತರಿಸಬೇಕಾದ ಪ್ರಧಾನಿಯವರದ್ದಂತೂ 'ಮೌನ'ಸ್ಥಿತಿ. ಆದರೆ ಇವುಗಳ ಬಗ್ಗೆ ನೀವು ಎಂದಾದರೂ ಮಾತನಾಡಿದ್ದೀರಾ? ಸರ್ಕಾರದ ಹಗರಣಗಳ ಮಾತು ಹಾಗಿರಲಿ, ಈಗ ಅಕ್ರಮದ ಬೇರು ನಿಮ್ಮ ಕುಟುಂಬದ ಕಾಲಿಗೇ ಸುತ್ತಿಕೊಂಡಿದೆ. ಹರ್ಯಾಣ, ರಾಜಸ್ಥಾನದಲ್ಲಿ ಪ್ರಿಯಾಂಕಾಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಎಸಗಿರುವ ಭೂಅವ್ಯವಹಾರಗಳು ಪ್ರತಿ ದಿನ ಸುದ್ದಿಯಾಗುತ್ತಿವೆ. ಅಧಿಕಾರ ವಿಷ ಎಂದು ನೀವು ಹೇಳಿದಿರಿ. ಆದರೆ ನಿಮ್ಮ ಸರ್ಕಾರ ಜನರಿಗೆ ನಿಧಾನ ವಿಷ ಉಣಿಸುತ್ತಿದೆ. ಇವೆಲ್ಲವುಗಳನ್ನು ಸಹಿಸಿಕೊಂಡು, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಇದ್ದೀರಲ್ಲ ನಿಮ್ಮ ಮನಸ್ಥಿತಿಯಾದರೂ ಎಂಥದ್ದು ಎಂಬ ಶಂಕೆ ಜನರಲ್ಲಿ ಮಾಡುವುದು ಸಹಜ.
ನಿಮ್ಮದೇ ಸರ್ಕಾರದ ಹಗರಣಗಳು ಮತ್ತು ಮನೆ ಅಳಿಯನ ಅವ್ಯವಹಾರಗಳ ಬಗ್ಗೆ ಮಾತನಾಡಲು ನಿಮಗೆ ಮುಜುಗರ ಇರಬಹುದು. ಆದರೆ ಇತ್ತ ಚೀನಾ, ಅತ್ತ ಪಾಕಿಸ್ತಾನ ನಮ್ಮ ಗಡಿಯಲ್ಲಿನ ನೆಮ್ಮದಿ ಕದಡಿ ವಿನಾಕಾರಣ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿವೆ. ಗಡಿ ರಕ್ಷಣೆಯ ಕಾರ್ಯದಲ್ಲಿ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಪಾಕಿಸ್ತಾನವಂತೂ ಸೈನಿಕರ ಮೃತ ದೇಹಗಳಿಗೆ ಸಿಗಬೇಕಾದ ಗೌರವ ನೀಡದೆ ಪಾಶವೀತನ ಪ್ರದರ್ಶಿಸುತ್ತಿದೆ. ಇಷ್ಟಾದರೂ ನಿಮ್ಮ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ತಂಟೆಕೋರರಿಗೆ ತಕ್ಕಶಾಸ್ತಿ ಮಾಡುವುದಿರಲಿ, ಜೋರು ದನಿಯಲ್ಲಿ ಅವರನ್ನು ಪ್ರಶ್ನಿಸುವ ಧೈರ್ಯವನ್ನೂ ತೋರುತ್ತಿಲ್ಲ. ಕನಿಷ್ಟ ನೀವಾದರೂ ಇದರ ಬಗ್ಗೆ ದನಿ ಎತ್ತಬಹುದಿತ್ತಲ್ಲವೇ? ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಲು ನಿಮ್ಮದೇ ಸರ್ಕಾರಕ್ಕೆ ಸೂಚಿಸಬಹುದಿತ್ತು. ಅದೇನೂ ಮಾಡದೆ, ಈ ವಿಚಾರದಲ್ಲಿ ಮಾತನ್ನೇ ಆಡದಿರುವ ನಿಮ್ಮ ಮನಸ್ಥಿತಿಯಾದರೂ ಏನು? ಹುತಾತ್ಮರಾಗುತ್ತಿರುವ ಯೋಧರ ಬಗ್ಗೆ ನಿಮಗೆ ಅನುಕಂಪವೇ ಇಲ್ಲವೇ? ದೇಶದ ಗಡಿ ಗದ್ದಲ ನಿಮ್ಮ ಮನಸ್ಸಿಗೆ ನಾಟಿಯೇ ಇಲ್ಲವೇ? ಇಷ್ಟೆಲ್ಲ ಕೆಸರು ಅಂಟಿದ್ದರೂ ಮತ್ತೆ ಕಾಂಗ್ರೆಸ್ಗೆ ಮತಯಾಚಿಸುತ್ತಿರಲ್ಲ ಆ ಮನಸ್ಥಿತಿಯ ಬಗ್ಗೆ ವಿವರಿಸುತ್ತೀರಾ? ಬಡತನವನ್ನು ಯಾರೂ ಕೇಳಿ ಪಡೆಯುವುದಿಲ್ಲ. ಹಾಗೆಂದು ಎಲ್ಲ ಇದ್ದು ಬಡವರೆಂದು ಯಾರೂ ಪೋಸು ನೀಡುವುದೂ ಇಲ್ಲ. ಅಂತಹವರ ಮನಸ್ಥಿತಿ ಪ್ರಶ್ನಿಸುವ ಮೊದಲು ತಮ್ಮ ಸುತ್ತ ನಡೆಯುತ್ತಿರುವ ಅಕ್ರಮ, ಅನೀತಿಗಳನ್ನು ಸಹಿಸಿಕೊಂಡು ಸುಮ್ಮನಾಗುವ ಮನಸ್ಥಿತಿಯಿಂದ ರಾಹುಲ್ ಗಾಂಧಿ ಹೊರಬರಬೇಕಿದೆ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com