ಪ್ರಧಾನಿ ಭಾಷಣ ಅವರ ಆಡಳಿತದಷ್ಟೇ ನೀರಸ
ದೆಹಲಿಯ ಕೆಂಪು ಕೋಟೆಯ ಮೇಲೆ ಅತಿಹೆಚ್ಚು ಬಾರಿ ತಿರಂಗಾ ಬಾವುಟ ಹಾರಿಸಿದ ಪ್ರಧಾನಿಗಳ ಸಾಲಲ್ಲಿ ಪ್ರಧಾನಿ ಮನಮೋಹನ ಸಿಂಗ್ ಮೂರನೆಯವರು. ಈ ಹೆಗ್ಗಳಿಕೆಗೆ ಈ ಮೊದಲು ಜವಾಹರ್ಲಾಲ್ ನೆಹರು ಹಾಗೂ ಅವರ ಪುತ್ರಿ ಇಂದಿರಾ ಗಾಂಧಿ ಭಾಜನರಾಗಿದ್ದಾರೆ.
ಕಳೆದ 9 ವರ್ಷಗಳಿಂದ ಪ್ರಧಾನಿ ಸಿಂಗ್ ಮಾತನಾಡಿದ್ದಕ್ಕಿಂತ ಮೌನವಾಗಿದ್ದುದ್ದೇ ಹೆಚ್ಚು. ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ದೂರದೃಷ್ಟಿಯ ಕೊರತೆ ಎದ್ದುಕಾಣುತ್ತಿತ್ತು. ಬರೀ ಸಾಧನೆಗಳನ್ನು ಹೊಗಳಿದರೆ ಹೊರತು ದೇಶದ ಭವಿಷ್ಯದ ಕುರಿತಾದ ದೂರದೃಷ್ಟಿ ಮಾತ್ರ ಎಲ್ಲಿಯೂ ಕಾಣಲಿಲ್ಲ.
ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಕೃಷಿ ಉತ್ಪನ್ನಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಾಗಿದೆ. ಮಹತ್ವಾಕಾಂಕ್ಷಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬರುತ್ತಿದೆ. ಗ್ರಾಮೀಣ ಜನರ ವೇತನದಲ್ಲಿ ಏರಿಕೆಯಾಗಿದೆ- ಎಂದೆಲ್ಲಾ ಹೇಳುತ್ತಿದ್ದಾಗ ಕೇಳುತ್ತಿದ್ದವರಿಗೆ ವಿಷಾದದ ನಗು ಉಕ್ಕುತ್ತಿತ್ತು.
ಸ್ವಾತಂತ್ರ್ಯ ಬಂದು 67ವರ್ಷ ಪೂರೈಸಿದ್ದರೂ ಭಾರತದಲ್ಲಿ ಬಡತನದ ಪ್ರಮಾಣ ಶೇ.32ರಷ್ಟಿದೆ. ನಿರುದ್ಯೋಗ ಎಂಬುದು ಎಲ್ಲೆಲ್ಲಿಯೂ ತಾಂಡವವಾಡುತ್ತಿದೆ... ಭ್ರಷ್ಟಾಚಾರ ಎಂಬುದು ದೇಶದ ಉದ್ದಗಲಕ್ಕೂ ವ್ಯಾಪಕವಾಗಿದೆ. ಭಯೋತ್ಪಾದನೆ, ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ಅಕ್ರಮವಾಗಿ ಗಡಿ ಪ್ರವೇಶಿಸಿ ನಮ್ಮ ಸೈನಿಕರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದರೂ ಭಾಷಣದಲ್ಲಿ ಸೊಲೆತ್ತದ ಪ್ರಧಾನಿ ಸಿಂಗ್ ಅವರಲ್ಲಿ ದೇಶದ ಕುರಿತಾದ ಭಾಷಣ ಜಾಳು ಜಾಳು ಎನ್ನಿಸುತ್ತಿತ್ತು.
ಕಾಶ್ಮೀರ ಸಮಸ್ಯೆಯ ಕುರಿತು ಅಂತಿಮ ನಿರ್ಣಯಕ್ಕೆ ಬರದೆ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಯುವಂತೆ ಮಾಡುತ್ತಿದ್ದಾರೆ. 2003ರಲ್ಲಿ ಭಾರತ-ಪಾಕಿಸ್ತಾನ ಮಾಡಿಕೊಂಡ ಕದನ ವಿರಾಮಕ್ಕೆ ಈಗ ಅರ್ಥವಿಲ್ಲದಂತಾಗಿದೆ. ಜನವರಿ 1ರಿಂದ ಪಾಕಿಸ್ತಾನ ಇಲ್ಲಿಯವರೆಗೆ 57ಬಾರಿ ಕದನ ವಿರಾಮ ಉಲ್ಲಂಘಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಾದರೂ ಪಾಕಿಸ್ತಾನಕ್ಕೆ ಸುಖಾಸುಮ್ಮನೆ ನಮ್ಮನ್ನು ಕೆಣಕದಿರಿ ಎಂದು ಎಚ್ಚರಿಕೆ ಮಾತನ್ನು ಹೇಳಿದ್ದಾರೆ. ಆದರೆ ಪ್ರಧಾನಿಯವರಿಗೆ ಏನಾಗಿದೆ? ಗಟ್ಟಿಯಾಗಿ ಪಾಕಿಸ್ತಾನಕ್ಕೆ ಒಂದು ಸಂದೇಶವನ್ನಾದರೂ ನೀಡಲಿಲ್ಲ. ಕಾಶ್ಮೀರದ ತಂಟೆಗೆ ಬರಬೇಡಿ ಎಂದು ಎಚ್ಚರಿಸಲಿಲ್ಲ. ಇದು ನಿಜಕ್ಕೂ 121ಕೋಟಿ ಜನರಿಗೆ ಅವಮಾನವೇ ಸರಿ.
ಸತ್ತ ನಮ್ಮ ಸೈನಿಕರಿಗೆ ಸಾಂತ್ವನ ಹೇಳಿ ಸೆಲ್ಯೂಟ್ ಸಲ್ಲಿಸಿ ಅವರ ತವರಿಗೆ ಕಳುಹಿಸಿದರೆ ಸಮಸ್ಯೆ ಮುಗಿಯಿತೆ? ಕಾಶ್ಮೀರ ಸಮಸ್ಯೆಗೆ ಪರಿಹಾರ ಇಲ್ಲವೆ. ಇಂತಹ ಅವಘಡಗಳು ಸಂಭವಿಸುತ್ತಿರುವುದರಿಂದಲೆ ಏನೋ ಯುವಜನರು ಸೈನ್ಯಕ್ಕೆ ಸೇರುತ್ತಿರುವುದು ಇತ್ತೀಚೆಗೆ ಕಡಿಮೆಯಾಗುತ್ತಿದೆ.
ಪ್ರಧಾನಿ ಸಿಂಗ್ ಒಬ್ಬ ಆರ್ಥಿಕ ತಜ್ಞರಾಗಿ ಆರ್ಥಿಕ ಬೆಳವಣಿಗೆ ಬಗ್ಗೆ ಹೇಳಿದ್ದು ಹೀಗೆ: ಮಿತ್ರ ಪಕ್ಷಗಳ ಹಗ್ಗ ಜಗ್ಗಾಟದಿಂದ ಆರ್ಥಿಕ ಸುಧಾರಣೆ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದರು. 2004ರಲ್ಲಿ ರಾಷ್ಟ್ರದ ಜಿಡಿಪಿ ಶೇ.8.9ರಷ್ಟಿತ್ತು. ಆದರೆ ಪ್ರಸ್ತುತ ದೇಶದ ಜಿಡಿಪಿ ಪ್ರಮಾಣ ಶೇ.5.3ಕ್ಕೆ ಕುಸಿದಿದೆ. ಇಷ್ಟೆಲ್ಲಾ ಆರ್ಥಿಕ ಹಿನ್ನೆಡೆಗೆ ಕಾರಣ ಯುಪಿಎ ಸರ್ಕಾರದ ಕುರುಡು ನೀತಿಗಳು ಹಾಗೂ ಮಿತ್ರ ಪಕ್ಷಗಳು ಮಾಡಿದ ಭ್ರಷ್ಟಾಚಾರವಲ್ಲವೇ? ಇದೆಲ್ಲಾ ಗೊತ್ತಿದ್ದೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರಲ್ಲ ಸಿಂಗ್?
ಡಾಲರ್ ಎದುರು ರುಪಾಯಿ ಮೌಲ್ಯ ಕಳೆದುಕೊಂಡಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಮೊದಲೆಲ್ಲಾ ವರ್ಷಕ್ಕೊಮ್ಮೆ ಎಂಬಂತೆ ಹೆಚ್ಚಾಗುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ ತೈಲ ಬೆಲೆಗಳನ್ನು 15 ಬಾರಿ ಏರಿಸಿ ಎಲ್ಲಾ ಅಗತ್ಯ ವಸ್ತುಗನ್ನು ಗಗನಕ್ಕೇರುವಂತ ಸ್ಥಿತಿ ನಿರ್ಮಾಣಕ್ಕೆ ಕಾರಣ ಯಾರು? ಸ್ವಲ್ಪ ತಿಳಿವಳಿಕೆ ಜ್ಞಾನ ಇರುವ ಪ್ರತಿಯೊಬ್ಬ ಭಾರತೀಯನಿಗೂ ಇದು ಅರ್ಥವಾಗದೇ ಇರದು.
ಇನ್ನು ಭ್ರಷ್ಟಾಚಾರದ ವಿಷಯದ ಬಗ್ಗೆ ಒಂದೂ ಮಾತನಾಡದ ಸಿಂಗ್, ಯುಪಿಎ ಸರ್ಕಾರದಲ್ಲಿ ನಡೆದ ಕಾಮನ್ವೆಲ್ತ್, 2ಜಿ ಹಗರಣ, ಆದರ್ಶ ವಸತಿ ಹಗರಣ, ಆಗಸ್ಟಾವೆಸ್ಟ್ಲ್ಯಾಂಡ್, ಕಲ್ಲಿದ್ದಲು ಹಗರಣ ಸೇರಿದಂತೆ ಸಾಲು ಸಾಲು ಹಗರಣಗಳು ದೇಶದ ನೈತಿಕತೆಗೆ ಧಕ್ಕೆ ಉಂಟು ಮಾಡಿವೆ. ದೇಶದ ಆಡಳಿತವೇ ದಿಕ್ಕುತಪ್ಪುತ್ತಿರುವಾಗ ಸೂತ್ರದ ಗೊಂಬೆಯಂತೆ ಕಾರ್ಯನಿರ್ವಹಿಸಿ ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ ಎಂಬುದನ್ನು ಸಾಬೀತು ಪಡಿಸುವಂತಿತ್ತು ಪ್ರಧಾನಿ ಭಾಷಣ.
ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕಲ್ಪನೆಯಂತೂ ದಿನದಿನಕ್ಕೂ ದೂರಾಗುತ್ತಿದೆ. ಗಾಂಧಿ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ಗೆ ಹಳ್ಳಿಗಳಲ್ಲಿನ ದುಸ್ಥಿತಿಯ ಬಗ್ಗೆ ಒಮ್ಮೆಯಾದರೂ ಯೋಚಿಸಲು ಸಮಯ- ತಾಳ್ಮೆಯಿಲ್ಲ. ಹಳ್ಳಿಗಳಲ್ಲಿನ ಜನ ಪೇಟೆ ಪಟ್ಟಣಗಳಿಗೆ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಕೃಷಿಯನ್ನು ವೃತ್ತಿಯನ್ನಾಗಿಸಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದ ಬೆನ್ನೆಲುಬಾದ ರೈತನ ಬೆನ್ನೆಲುಬು ಮುರಿಯುವ ಯೋಜನೆಗಳು ಯಾರಿಗೆ ತಾನೆ ಬೇಜಾರು ತಂದಿಲ್ಲ? ದೇಶದ ಆದಾಯಕ್ಕೆ ಕೃಷಿಯ ಕೊಡುಗೆ ಅಪಾರವಾಗಿದ್ದರೂ ಕೃಷಿಕರನ್ನು ಕಡೆಗಣಿಸಲಾಗುತ್ತಿರುವುದು ದೇಶಕ್ಕೆ ಮಾರಕವಲ್ಲದೆ ಮತ್ತಿನ್ನೇನು?
ಅಭಿವೃದ್ಧಿ ಎಂದರೆ ಹಣ ಬಿಡುಗಡೆ ಮಾಡಿದರೆ ಮುಗಿಯಿತೇ? ಹಣ ಎಷ್ಟು ಖರ್ಚಾಗಿದೆ ಎಷ್ಟು ಕೆಲಸವಾಗಿದೆ ಎಂಬ ಲೆಕ್ಕವೇ ಇಲ್ಲದೆ ಸರ್ಕಾರದ ಹಣ ಅಧಿಕಾರಿಗಳು ಹಾಗೂ ಬಂಡವಾಳ ಶಾಹಿಗಳ ಪಾಲಾಗಿದೆ. ಪ್ರತಿ ಪ್ರಜೆಯ ತೆರಿಗೆಯ ಹಣದಿಂದಲ್ಲವೇ ಯೋಜನೆಗಳು ಜಾರಿಗೆ ಬರಲು ಸಾಧ್ಯ?
ಮಾಧ್ಯಮಗಳ ಮುಂದೆ ಮಾತೆತ್ತಿದರೆ ಯುಪಿಎ ಸರ್ಕಾರ ಮುಂದಿನ ಬಾರಿಯೂ ಅಧಿಕಾರ ಹಿಡಿಯುತ್ತದೆ ಎಂದೆಲ್ಲಾ ಹೇಳುತ್ತಿರುವ ಕಾಂಗ್ರೆಸ್ ವಕ್ತಾರರು ಹಾಗೂ ಮುಖಂಡರು ಎಂದಾದರೂ ಅವ್ಯವಸ್ಥೆಗಳ ಕುರಿತು ಮಾತನಾಡಿದ್ದನ್ನು ನೋಡಿಲ್ಲ.
ಮಹತ್ವಾಕಾಂಕ್ಷಿಯ ಆಹಾರ ಭದ್ರತೆ ಬಗ್ಗೆ ಹೇಳುವುದಾದರೆ ಅಂಥ ಯೋಜನೆ ನಮ್ಮ ದೇಶಕ್ಕೆ ಖಂಡಿತಾ ಅನವಶ್ಯಕ. ಇಂತಹ ಯೋಜನೆಗಳಿಂದ ಬಡತನ, ಹಸಿವು ನೀಗುತ್ತದೆ ಎಂದು ಅಂದುಕೊಂಡಿದ್ದರೆ ಅದು ಖಂಡಿತಾ ಸುಳ್ಳು, ಬಡವರನ್ನು ನಿರುದ್ಯೋಗಕ್ಕೆ ತಳ್ಳುವ ಯೋಜನೆ ಎಂಬುದು ನನ್ನ ಅಭಿಪ್ರಾಯ. ಮೊದಲು ದುಡಿಯುವ ಕೈಗಳಿಗೆ ಶಾಶ್ವತ ಕೆಲಸ ಕೊಡಿ. ಆಗ ಜನರು ತನ್ನಂತಾನೇ ದುಡಿದು ಆಹಾರ ಉತ್ಪಾದಿಸಿಕೊಳ್ಳುತ್ತಾರೆ.
ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಲೆಂದೇ ತಂದ ನರೇಗಾ ಯೋಜನೆಯು ಪ್ರಸ್ತುತ ಎಷ್ಟೊಂದು ಅವ್ಯವಹಾರ, ಹಗರಣಗಳ ಗೂಡಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಯೋಜನೆ ಒಳ್ಳೆಯದಾದರೂ ಅದನ್ನು ಸಮರ್ಪಕ ಕಾರ್ಯೋನ್ಮುಖಗೊಳ್ಳುವಲ್ಲಿ ವಿಫಲವಾಗಿದೆ. ಕೇವಲ ಮುಂಬರುವ ಚುನಾವಣೆಯಲ್ಲಿ ಆಡಳಿತ ಹಿಡಿಯುವ ಅಭಿಲಾಷೆಯುಳ್ಳ 67ನೇ ಸ್ವಾತಂತ್ರ್ಯೋತ್ಸವದ ಭಾಷಣ, ಸಿಹಿಯಿಲ್ಲದ ಚಹಾದಂತಿತ್ತು.
- ಸೋಮನಗೌಡ ಎಸ್.ಎಂ
ಹವ್ಯಾಸಿ ಲೇಖಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

