ಅಂಕಣಗಳು

ಸರ್ಕಾರಿ ಯೋಜನೆಗಳಿಗೆಕಾಂಗ್ರೆಸ್ಸಿಗರ ಹೆಸರೇಕೆ?

Published On :

ಕರ್ನಾಟಕ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ ಇತ್ಯಾದಿ ಯೋಜನೆಗಳು ತಮ್ಮ ಪಕ್ಷದ ವತಿಯಿಂದ ಪ್ರಸ್ತಾಪಗೊಂಡಿರುವ ಸರ್ಕಾರೀ ಯೋಜನೆಗಳಾಗಿರುವುದರಿಂದ ಅವುಗಳಿಗೆ ಕಾಂಗ್ರೆಸ್ ನಾಯಕರ ಹೆಸರುಗಳನ್ನೇ ಇಡುವುದು ಸೂಕ್ತ ಎಂಬ ಚಿಂತನೆಯನ್ನು ಖಂಡಿಸಲೇಬೇಕಾಗಿದೆ. ಕಾರಣ, ಈ ಯೋಜನೆಗಳು ಪಕ್ಷವು ಕೈಗೊಂಡ ನಿರ್ಣಯಗಳಿಗನುಸಾರವಾಗಿಯೇ ಇದ್ದರೂ, ಯೋಜನೆಗಳ ಅನುಷ್ಠಾನಕ್ಕಾಗಿ ವ್ಯಯವಾಗುತ್ತಿರುವುದು ಸರ್ಕಾರದ ಹಣವೇ ಹೊರತು ಪಕ್ಷದ್ದಲ್ಲ. ಪಕ್ಷದ ಯಾವ ನಾಯಕರದ್ದೂ ಅಲ್ಲ. ಯಾವುದೇ ಸರ್ಕಾರಿ ಯೋಜನೆಗೂ ಯಾವುದೇ ಪಕ್ಷದ, ಎಷ್ಟೇ ಪ್ರತಿಷ್ಠಿತ ನಾಯಕರೇ ಆಗಿರಲಿ ಅವರ  ಹೆಸರನ್ನು ಇಡುವುದು ಒಂದು ಅತ್ಯಂತ ಕೆಟ್ಟ ಕ್ರಮವಾಗಿದೆ. ಅನ್ನ ಭಾಗ್ಯ ಯೋಜನೆಗೆ ಇಂದಿರಾ ಗಾಂಧಿಯವರ ಹೆಸರನ್ನು ಇಡಲಾಗುವುದೆಂಬ ಸುದ್ದಿಯನ್ನು ಓದಿದೆ. ಸಿದ್ದರಾಮಯ್ಯನವರೇ, ಈಗಾಗಲೇ ಅಂಥ ಯೋಜನೆಯೊಂದು ಇಲ್ಲದಿದ್ದರೆ, ಮುಂದೊಂದು ದಿನ ತಮ್ಮ ಪಕ್ಷವು ಬಡತನದ ರೇಖೆಗಿಂತ ಕೆಳಗಿರುವ ವ್ಯಕ್ತಿಗಳು ಮೃತರಾದಾಗ ಅವರ ಅಂತ್ಯಕ್ರಿಯೆಗಾಗಿ, ಅಂತ್ಯಕ್ರಿಯೆಯನ್ನು ಮಾಡುವ ಸಂಬಂಧಪಟ್ಟವರಿಗೆ ಹತ್ತು ಸಾವಿರ ರುಪಾಯಿಗಳಂತೆ ಸರ್ಕಾರವು ಧನಸಹಾಯವನ್ನು ಮಾಡಬೇಕು ಎಂಬ ನಿರ್ಣಯವನ್ನು ಕೈಗೊಂಡು, ಈ ಯೋಜನೆಯನ್ನು ಅನುಷ್ಠಾನಗೊಳಿಸುವ ತೀರ್ಮಾನಕ್ಕೂ ಬರುತ್ತದೆ ಎಂದಿಟ್ಟುಕೊಳ್ಳೋಣ. ಈ ಯೋಜನೆಗೆ  ಮಸಣ ಭಾಗ್ಯ ಯೋಜನೆ ಎಂದೋ ಮುಕ್ತಿ ಭಾಗ್ಯ ಯೋಜನೆ ಎಂದೋ ನಾಮಕರಣ ಮಾಡಬಹುದು. ಆಗ   ಇಂದಿರಾ ಗಾಂಧಿ ಅನ್ನ ಭಾಗ್ಯ ಯೋಜನೆ ಎಂದು ಕರೆದಂತೆ ತಾವು ತಮ್ಮ ಪಕ್ಷದ ಯಾವ ನಾಯಕರ ಹೆಸರನ್ನು ಈ ಹೊಸ (ಅಥವಾ ಹಾಲಿ ಇರುವ) ಯೋಜನೆಗೆ ಇಡಬಯಸುತ್ತೀರಿ? ತಮ್ಮ ನಿಕಟ ಅನುಯಾಯಿಗಳಲ್ಲಿ ಯಾರಾದರೂ ತಮ್ಮ ಹೆಸರನ್ನೇ ಇಟ್ಟರೆ ಸೂಕ್ತ ಎಂಬ ಸಲಹೆಯನ್ನಿತ್ತರೆ ಒಪ್ಪಿಕೊಳ್ಳಲು ಸಿದ್ಧರಿದ್ದೀರಾ? ಸತ್ಯ ಹೇಳುತ್ತೇನೆ. ಅನ್ನ ಭಾಗ್ಯ ಯೋಜನೆ ಬಡವರಿಗಾಗಿ ಇರುವುದು. ಆಗರ್ಭ ಶ್ರೀಮಂತೆಯಾಗಿದ್ದ ಇಂದಿರಾ ಗಾಂಧಿಯವರ ಹೆಸರಿನ ಬದಲು ಲಕ್ಷಣವಾಗಿ ಬಡವರ ಅನ್ನ ಭಾಗ್ಯ ಯೋಜನೆ ಎಂದು ಯೋಜನೆಯ ಫಲಾನುಭವಿಗಳ ಹೆಸರಿಂದಲೇ ಕರೆದಿದ್ದರೆ ಸೊಗಸಾಗಿರುತ್ತಿತ್ತು. ಅದೇ ರೀತಿ ಮಕ್ಕಳಿಗಾಗಿ ಇರುವ ಕ್ಷೀರ ಭಾಗ್ಯ ಯೋಜನೆಯನ್ನೂ ಮಕ್ಕಳ ಕ್ಷೀರ ಭಾಗ್ಯ ಯೋಜನೆ ಎಂದು ಕರೆಯಬಾರದಾ? ಇದಕ್ಕೆಲ್ಲ ಯಾರೋ ಒಬ್ಬ ವ್ಯಕ್ತಿಯ ಹೆಸರೇಕೆ ಬೇಕು? ವ್ಯಕ್ತಿ ಪೂಜೆಯ ಮನೋ ದಾರಿದ್ರ್ಯದಿಂದ ಬಿಡುಗಡೆ ಹೊಂದುವವರೆಗೂ ಸರ್ಕಾರೀ ಯೋಜನೆಗಳಿಗೆ, ಯೋಜನೆಗಳ ಪರಿಣಾಮಗಳಿಗೆ ಹೀಗೆ ಬೇಕೆನ್ನಿಸಿದ, ಪ್ರಿಯರೆನ್ನಿಸಿದ ವ್ಯಕ್ತಿಗಳ ಹೆಸರುಗಳನ್ನು ಇಟ್ಟು ಕೃತಾರ್ಥರಾದೆವೆಂದುಕೊಳ್ಳುವ ಹಂಬಲ ಅಥವಾ ಚಪಲ ದೂರವಾಗುವುದಿಲ್ಲ.   

- ಬೊ.ನಾ. ಕೃಷ್ಣಮೂರ್ತಿ
 ಸಾಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.