ಅಂಕಣಗಳು

ಅಪಾಯಕ್ಕೆ ಅವಕಾಶ ಮಾಡಿಕೊಡುವ ಮಸೂದೆ

ಅಪಾಯಕ್ಕೆ ಅವಕಾಶ ಮಾಡಿಕೊಡುವ ಮಸೂದೆ
Published On :

ಈ ಪ್ರಸ್ತಾಪಿತ ಕಾಯಿದೆ ಭಾರತೀಯ ಸಮಾಜವನ್ನು ಒಡೆಯುತ್ತದೆ. ಚಿಕ್ಕ ಪುಟ್ಟ ಘಟನೆಗಳಿಗೂ ಕೋಮು ಹಿಂಸಾಚಾರದ ಹಣೆಪಟ್ಟಿ ಹಚ್ಚುವ ಕೆಲಸ ಶುರುವಾಗಬಹುದು. ಒಟ್ಟಿನಲ್ಲಿ ಈ ಕಾಯಿದೆಯ ಉದ್ದೇಶವೇ ತಿರುಗುಮರುಗಾಗುವ ಸಾಧ್ಯತೆ ಇದೆ

ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಸಮಯದಲ್ಲೇ ಕೇಂದ್ರ ಯುಪಿಎ ಸರ್ಕಾರ, ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಸಂಸತ್ತಿನ ಮುಂದಿಡಲು ಸಿದ್ಧತೆ ನಡೆಸಿದೆ. ಈ ವಿಷಯ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು, ಈ ಕುರಿತು ಪ್ರಧಾನಿಗಳಿಗೆ ಪತ್ರ ಬರೆದು "ಈ ಮಸೂದೆ ಅಪಾಯಕ್ಕೆ ಅವಕಾಶಮಾಡಿಕೊಡುವಂತಿದೆ" ಎಂದು ಹೇಳಿದ್ದಾರೆ. ಇದು ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದ್ದು, ಇದನ್ನು ಸಂಸತ್ತಿನ ಮುಂದಿಡುವ ಮೊದಲು, ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು, ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಚರ್ಚಿಸಬೇಕು ಎಂದು ಅವರು ಆ ಪತ್ರದಲ್ಲಿ ಹೇಳಿದ್ದಾರೆ...
----
"ಕೋಮು ಹಿಂಸಾಚಾರಗಳನ್ನು ತಡೆಯಲು ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆಯಾದರೂ, ಈ ಮಸೂದೆಯಲ್ಲಿರುವ ಅಂಶಗಳು ಮತ್ತು ಇದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ 'ಸಮಯ' ಅನುಮಾನಕ್ಕೆ ಕಾರಣವಾಗಿದೆ. ಇಷ್ಟು ಅವಸರದಲ್ಲಿ ಈ ಮಸೂದೆಯನ್ನು ಸಂಸತ್ತಿನ ಮುಂದಿಡುವ ಅಗತ್ಯವೇನು? ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ವಿಷಯವನ್ನು ನೋಡಿದಾಗ, ಕೇಂದ್ರ ಸರ್ಕಾರ ಕೋಮು ಹಿಂಸಾಚಾರ ಮಸೂದೆಯ ನೆಪದಲ್ಲಿ ಮತಬ್ಯಾಂಕ್ ರಾಜಕಾರಣ ನಡೆಸುತ್ತಿದೆ ಎಂದೇ ಅನಿಸುತ್ತದೆ. ಈ ಪ್ರಸ್ತಾಪಿತ ಮಸೂದೆಯಲ್ಲಿರುವ ಕೆಲವು ಅಂಶಗಳಿಂದ ಬಹಳಷ್ಟು ಅಪಾಯಗಳು ಎದುರಾಗಬಹುದು. ಉದಾಹರಣೆಗೆ, ಈ ಮಸೂದೆಯ ಸೆಕ್ಷನ್ 3ರಲ್ಲಿ(ಎಫ್) "ಪ್ರತಿಕೂಲ ಪರಿಸರ"ದ ಬಗ್ಗೆ ಹೇಳಲಾಗಿದೆ. ಈ ಅಂಶ ದುರ್ಬಳಕೆಯಾಗುವ ಸಾಧ್ಯತೆಗಳು ಅಧಿಕವಿದೆ. "ಸೆಕ್ಷನ್ 3(ಡಿ) ಅಡಿಯಲ್ಲಿನ ಕೋಮು ಹಿಂಸಾಚಾರದ ಉಲ್ಲೇಖವನ್ನು ಸೆಕ್ಷನ್(4)ರೊಂದಿಗೆ ಓದಿದಾಗ ಕೇಂದ್ರ ಸರ್ಕಾರ ಭಾರತೀಯ ಅಪರಾಧ ನ್ಯಾಯಶಾಸ್ತ್ರದಲ್ಲಿ 'ವಿವಾದಾತ್ಮಕ ಚಿಂತನೆ'ಯನ್ನು ಸೇರಿಸಲು ಪ್ರಯತ್ನಿಸುತ್ತಿದೆಯೇ ಎಂದು ಅನುಮಾನವಾಗುತ್ತದೆ.
ನಾಗರಿಕ ಸೇವಕರು, ಪೊಲೀಸ್ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳಿಗೆ ಘಾಸಿ ಮಾಡಬಹುದಾದ ಅಂಶಗಳನ್ನು ಈ ಅಸಂಬದ್ಧ ಮಸೂದೆ ಹೊಂದಿದೆ. ಇದರಿಂದಾಗಿ ನಮ್ಮ ಭದ್ರತಾ ಸಂಸ್ಥೆಗಳ ಮತ್ತು ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವುದರಲ್ಲಿ ಸಂದೇಹವಿಲ್ಲ. ಅಲ್ಲದೆ ಈ ಮಸೂದೆ ರಾಜಕೀಯವಾಗಿ ದುರ್ಬಳಕೆಯೂ ಆಗಬಹುದು.
ಇನ್ನು ಕಿರಿಯ ಅಧಿಕಾರಿಗಳು ತಪ್ಪೆಸಗಿದರೆ ಹಿರಿಯ ಅಧಿಕಾರಿಗಳಿಗೆ ದಂಡನೆಯಾಗಬೇಕು ಎಂದು ಹೇಳುತ್ತದೆ ಈ ಸಮೂದೆಯ ಸೆಕ್ಷನ್ 10ಬಿ (ಆದೇಶ ಉಲ್ಲಂಘನೆ). ಇಂಥ ವಿಷಯಗಳಿಗೆ ರಚನಾತ್ಮಕ ಪರಿಹಾರಗಳ ಅವಶ್ಯಕತೆಯಿರುತ್ತದೆ. ಎಲ್ಲಾ ಸಮಸ್ಯೆಗಳಿಗೂ ಶಾಸಕಾಂಗದಿಂದ ಪರಿಹಾರ ಹುಡುಕುವುದು ಸರಿಯಲ್ಲ. ಒಂದು ವೇಳೆ ಈ ಕಾನೂನು ಅನುಷ್ಠಾನಕ್ಕೆ ಬಂದಿತೆಂದರೆ ಹಿರಿಯ ಅಧಿಕಾರಿಗಳು, ದಂಡನೆಗೊಳಗಾಗುವ ಭಯದಿಂದಾಗಿ ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಹಿಂದೇಟು ಹಾಕುತ್ತಾರೆ.
ಈ ಪ್ರಸ್ತಾಪಿತ ಕಾಯಿದೆ ಭಾರತೀಯ ಸಮಾಜವನ್ನು ಭಾಷೆ ಮತ್ತು ಧರ್ಮದ ರೇಖೆಯಲ್ಲಿ ಒಡೆಯುತ್ತದೆ. ಚಿಕ್ಕ ಪುಟ್ಟ ಘಟನೆಗಳಿಗೂ ಕೋಮು ಹಿಂಸಾಚಾರದ ಹಣೆಪಟ್ಟಿ ಹಚ್ಚುವ ಕೆಲಸ ಆಗ ಶುರುವಾಗಬಹುದು. ಹಾಗಾಗಿ ಈ ಕಾಯಿದೆಯ ಉದ್ದೇಶವೇ ತಿರುಗುಮರುಗಾಗಲಿದೆ. ದೇಶದ ಸಂಯುಕ್ತ ರಚನೆಯನ್ನು ಕಡೆಗಣಿಸಿ ಈ ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಅದಾಗಲೇ ಏಳನೆಯ ಅನುಸೂಚನೆಯ ಭಾಗವಾಗಿರುವ, "ಕಾನೂನು ಮತ್ತು ಸುವ್ಯವಸ್ಥೆ" ಮತ್ತು "ಸಾರ್ವಜನಿಕ ಸುವ್ಯವಸ್ಥೆ"ಯ ವಿಷಯವಾಗಿ ಮತ್ತೊಂದು ಕಾನೂನನ್ನುರಚಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿರುವುದನ್ನು ನೋಡಿದಾಗ, ದೇಶದ ಸಂಯುಕ್ತ ರಚನೆಯನ್ನು ಮತ್ತು ರಾಜ್ಯಗಳಿಗೆ ತಮ್ಮದೇ ಆದ ಅಧಿಕಾರವಿರಬೇಕು ಎನ್ನುವ ಕಾನೂನನ್ನು ಅದು ಕಡೆಗಣಿಸುತ್ತಿರುವುದು ಗೋಚರಿಸುತ್ತದೆ. ರಾಜ್ಯ ಸರ್ಕಾರಗಳನ್ನು "ಅಸಮರ್ಪಕ ನಿರ್ವಹಣೆ"ಯ ಹೆಸರಿನಲ್ಲಿ ದೂರಲು, ಆ ಮೂಲಕ ತನ್ನ ದೌರ್ಬಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಕೇಂದ್ರ ಸರ್ಕಾರ ಈ ಮಸೂದೆಯನ್ನು ರಚಿಸಿದೆ. ಸಮಸ್ಯೆಗೆ ಪರಿಹಾರ ನೀಡುವ ಬದಲು, ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲಿದೆ ಈ ಮಸೂದೆ.
ಇದು ರಾಜ್ಯಸರ್ಕಾರಗಳಿಗೆ ಸಂಬಂಧಪಟ್ಟ ವಿಷಯ. ರಾಜ್ಯ ಸರ್ಕಾರಗಳೇ ಇದನ್ನು ಅನುಷ್ಠಾನಕ್ಕೆ ತರುತ್ತವಾದ್ದರಿಂದ, ಆ ಕಾನೂನನ್ನು ರೂಪಿಸುವ, ಅದರ ಬಗ್ಗೆ ಚರ್ಚಿಸುವ ಅಧಿಕಾರ ಅವುಗಳಿಗೇ ಸಿಗಬೇಕು. ಕೇಂದ್ರ ಸರ್ಕಾರಕ್ಕೆ ಏನಾದರೂ ಹಂಚಿಕೊಳ್ಳಬೇಕು ಎಂದೆನಿಸಿದರೆ "ಮಾದರಿ ಮಸೂದೆ"ಯನ್ನು ತಯಾರಿಸಿ ಅದನ್ನು ರಾಜ್ಯ ಸರ್ಕಾರಗಳಿಗೆ ಕೊಡಬೇಕು. ಮುಂದಿನ ನಿರ್ಧಾರವನ್ನು ಆಯಾ ಸರ್ಕಾರಗಳೇ ಮಾಡುತ್ತವೆ."
ಇನ್ನು ಆಂತರಿಕ ಭದ್ರತೆಯ ವಿಷಯವಾಗಿ ನಡೆದ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ತಾವು ಎತ್ತಿದ ಪ್ರಶ್ನೆಯೊಂದನ್ನು ಮೋದಿಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಸಂಪರ್ಕವಿಟ್ಟುಕೊಂಡಿರುವ ಕೆಲವರು ಹೇಗೆ ಕೇಂದ್ರ ಸರ್ಕಾರದಯೋಜನಾ ಆಯೋಗ, ರಾಷ್ಟ್ರೀಯ ಸಲಹಾ ಸಮಿತಿ ಮುಂತಾದೆಡೆಗಳಲ್ಲಿ ತೂರಿಕೊಂಡಿದ್ದಾರೆ ಎನ್ನುವುದನ್ನು ಅವರು ಆ ಸಮಾವೇಶದಲ್ಲಿ ಹೇಳಿದ್ದರು. ಬಹುಶಃ ಈ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ರಚಿಸಿದವರೂ ಆ ಜನರೇ ಇರಬೇಕು ಎಂದಿದ್ದಾರವರು.
 ಮುಂದುವರಿಯುತ್ತಾ, "ಹೆಚ್ಚುವರಿ ಸಾಂವಿಧಾನಿಕ ಪ್ರಾಧಿಕಾರಗಳಾದ ರಾಷ್ಟ್ರೀಯ ಸಲಹಾ ಮಂಡಳಿ ಮತ್ತು ಇನ್ನಿತರ ಸಂಸ್ಥೆಗಳು ಚುನಾಯಿತ ಸರ್ಕಾರಗಳ ಕಾನೂನು ನಿರೂಪಣಾ ಅಧಿಕಾರವನ್ನೇ ಕಸಿದುಕೊಳ್ಳುತ್ತಿವೆ. ಇಷ್ಟಕ್ಕೇ ನಿಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಹೆಚ್‌ಆರ್‌ಸಿ) ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಹೆಚ್‌ಆರ್‌ಸಿ)ಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ಕೊಡಬೇಕು ಎಂದು ಈ ಮಸೂದೆ ಒತ್ತಾಯಿಸುತ್ತಿದೆ. ಆದರೆ ಈಗಾಗಲೇ ಜಾರಿಯಲ್ಲಿರುವ ಕಾನೂನು, ಕೋಮು ಹಿಂಸಾಚಾರ ಘಟನೆಗಳಲ್ಲಿ ಸಂಭವಿಸುವ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳ ವಿಷಯವಾಗಿ ಕಾರ್ಯನಿರ್ವಹಿಸಲು ಈ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ನೀಡಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿಯಲು ಮತ್ತು ವ್ಯಕ್ತಿಗತ ಘಟನೆಗಳ ಮೇಲೆ ನಜರು ಇಡಬೇಕೆಂದು ಅವುಗಳಿಗೆ ಹೇಳುವುದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರವೇ ಜವಾಬ್ದಾರಿ ಮತ್ತು ಉತ್ತರದಾಯಿತ್ವಕ್ಕೆ ಬಾಧ್ಯಸ್ಥನಾಗಿರಬೇಕು. ಈ ರಚನೆಯನ್ನು ಅಲುಗಾಡಿಸಿದರೆ ಅಪಾಯ ಎದುರಾಗುತ್ತದೆ."

- ನರೇಂದ್ರ ಮೋದಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.