ಬೆಂಗಳೂರಿನ ಹೀರೋಗಳನ್ನು ಗೌರವಿಸೋಣ ಬನ್ನಿ...

ಇದನ್ನು ಓಪನ್ ಸೀಕ್ರೆಟ್ ಅಂತಾದರೂ ಕರೆಯಿರಿ ಅಥವಾ ಸಾಮಾನ್ಯ ಗ್ರಹಿಕೆ...
ಬೆಂಗಳೂರಿನ ಹೀರೋಗಳನ್ನು ಗೌರವಿಸೋಣ ಬನ್ನಿ...
Updated on: 

ಇದನ್ನು ಓಪನ್ ಸೀಕ್ರೆಟ್ ಅಂತಾದರೂ ಕರೆಯಿರಿ ಅಥವಾ ಸಾಮಾನ್ಯ ಗ್ರಹಿಕೆ ಎಂದರೂ ಅಡ್ಡಿಯಿಲ್ಲ- ಈ ದೇಶದಲ್ಲಿಂದು ರಾಜಕಾರಣಿಗಳ ಪರಿಚಯವಿದ್ದವನಿಗೆ, ಅದ್ಭುತ ಸಂಪರ್ಕ ಹೊಂದಿರುವವನಿಗೆ ಅಥವಾ ಮಾರ್ಕೆಟಿಂಗ್ ಜ್ಞಾನವಿರುವವನಿಗೆ ಮತ್ತು ಯಾವ ಸಮಯದಲ್ಲಿ ಯಾವ ತಂತಿಯನ್ನು ಮೀಟಬೇಕು ಎಂಬ ಅರಿವಿರುವವನಿಗೆ ಪ್ರಶಸ್ತಿ ಪುರಸ್ಕಾರಗಳು ಸಿಗುವುದು ಕಷ್ಟವೇನಲ್ಲ! ಅದಾಗ್ಯೂ ಕೆಲವು ಅದ್ಭುತ ಪ್ರತಿಭೆಗಳು ಮತ್ತು ಅರ್ಹ ವ್ಯಕ್ತಿಗಳಿಗೆ, ಡೊಳ್ಳು ಬಾರಿಸಿಕೊಂಡು ಅಡ್ಡಾಡುವ ಪ್ರಮೇಯ ಎದುರಾಗುವುದಿಲ್ಲ. ಅಂಥವರಿಗೆ ಪ್ರಶಸ್ತಿಗಳು ತಾವಾಗೇ ಒಲಿದು ಬರುತ್ತವೆ. 'ಪದ್ಮ' ಪ್ರಶಸ್ತಿಗಳು, ರಾಜ್ಯೋತ್ಸವ ಪ್ರಶಸ್ತಿಗಳು ಅಥವಾ ಯಾವುದೇ ನಾಗರಿಕ ಪ್ರಶಸ್ತಿಗಳಿರಲಿ, ಅದರಲ್ಲಿ ಆಯ್ಕೆಯಾದವರ ಬಗ್ಗೆ ಜನಮಾನಸದಲ್ಲಿ ತುಸುವಾದರೂ ಸಂದೇಹವಿದ್ದೇ ಇರುತ್ತದೆ. ಆತ ನಿಜಕ್ಕೂ ಆ ಪ್ರಶಸ್ತಿಗೆ ಅರ್ಹನೇ ಎಂಬ ಪ್ರಶ್ನೆ ಸಹಜವಾಗೇ ಉದ್ಭವವಾಗುತ್ತದೆ.
ಇಂಥ ಸಂದೇಹಗಳೇಳುವುದಕ್ಕೂ ಕಾರಣಗಳಿಲ್ಲವೆಂದಲ್ಲ. ಬಹುತೇಕ ಬಾರಿ ಆಯ್ಕೆ ಪ್ರಕ್ರಿಯೆಯೇ ದೋಷಯುಕ್ತವಾಗಿರುತ್ತದೆ. ನಿಯಮಗಳನ್ನು ಮುರಿಯುವುದರಲ್ಲಿ ರಾಜಕೀಯ ವರ್ಗವೇ ಮುಂಚೂಣಿಯಲ್ಲಿದೆ. ಅರ್ಹತೆ ಇರಲಿ ಬಿಡಲಿ, ತಮ್ಮ ಆಪ್ತರಿಗೆ ಪ್ರಶಸ್ತಿಗಳು ದೊರಕುವಂತೆ ಮಾಡುತ್ತಾರೆ ರಾಜಕಾರಣಿಗಳು. ಕೆಲವರಂತೂ ತಮ್ಮ ಸಾಧನೆಗಳ(?) ಪಟ್ಟಿಯನ್ನು ತಯಾರಿಸಿ ಮತ್ತು ಪ್ರಭಾವಿಗಳ ಶಿಫಾರಸು ಪತ್ರಗಳನ್ನು ಲಗ್ಗತ್ತಿಸಿ ಪ್ರಶಸ್ತಿ ಪಡೆಯಲು ಒದ್ದಾಡುತ್ತಾರೆ. ಇನ್ನೂ ಕೆಲವರು ಅದ್ಹೇಗೋ ಪ್ರಶಸ್ತಿ ಪಟ್ಟಿಯಲ್ಲಿ ತೂರಿಕೊಳ್ಳುತ್ತಾರೆ. ಉದಾಹರಣೆಯಾಗಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೇ ತೆಗೆದುಕೊಳ್ಳಿ. ಕಳೆದ ಕೆಲವು ವರ್ಷಗಳವರೆಗೆ ಈ ಪ್ರಶಸ್ತಿಯ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇತ್ತು. ಕೆಲವು ಹೆಸರುಗಳಂತೂ ಪ್ರಶಸ್ತಿ ಘೋಷಿಸುವ ವೇದಿಕೆಯ ಮೇಲೆಯೇ ಪಟ್ಟಿಯಲ್ಲಿ ತೂರಿಕೊಳ್ಳುತ್ತಿದ್ದವು. ಪುಣ್ಯವಶಾತ್, ಈ ಸಂಖ್ಯೆಯನ್ನೀಗ ಕೇವಲ 50 ಮಂದಿಗಷ್ಟೇ ಸೀಮಿತಗೊಳಿಸಲಾಗಿದೆ. ಆದರೂ ಕೆಲವು ವಿಭಾಗಗಳಲ್ಲಿ ಕಾಣಿಸುವ ಹೆಸರುಗಳು ನಿಮ್ಮನ್ನು ದಂಗುಬಡಿಸದೇ ಇರವು!
ಸಾಮಾನ್ಯ ಜನರ ಇಚ್ಛೆ ಇಲ್ಲಿ ಪರಿಗಣನೆಗೆ ಬರುವುದೇ ಇಲ್ಲ. ಅವರು ಸೂಚಿಸಿದ ಹೆಸರನ್ನು ಕಡೆಗಣಿಸಲಾಗುತ್ತದೆ. ಅದಷ್ಟೇ ಅಲ್ಲ, ಸಮಾಜದ ಒಳಿತಿಗಾಗಿ ದುಡಿದ ಸಾಮಾನ್ಯ ಜನರನ್ನು ಯಾರೂ ಗಮನಿಸುವುದೇ ಇಲ್ಲ. ಅದು ಒಬ್ಬ ವ್ಯಕ್ತಿಯೇ ಇರಬಹುದು ಅಥವಾ ನಾಗರಿಕ ಗುಂಪುಗಳಿರಬಹುದು. ಆಸೆ ಆಮಿಷಗಳತ್ತ ಮುಖಮಾಡದೆ ತಮ್ಮ ಉದ್ದೇಶವನ್ನು ಪೂರ್ಣಗೊಳಿಸಲು ಕೆಲವರು ಪರಿಶ್ರಮ ಪಡುತ್ತಲೇ ಇರುತ್ತಾರೆ, ಅನಾಮಿಕರಾಗಿಯೇ ಉಳಿದುಹೋಗುವ ಚಿಂತೆ ಅವರಿಗಿರುವುದಿಲ್ಲ. ತಮ್ಮ ಸಾಧನೆಯನ್ನು ಗುರುತಿಸಿ ಎಂದು ಯಾರ ಮುಂದೆಯೂ ಅವರು ಕೈಯೊಡ್ಡುವುದಿಲ್ಲ. ಇಂಥವರನ್ನು ಗುರುತಿಸಿ ಗೌರವಿಸುವವರು ಯಾರು?
ಈ ಹಿನ್ನೆಲೆಯಲ್ಲಿ "ನಮ್ಮ ಬೆಂಗಳೂರು" ಪ್ರಶಸ್ತಿ ವಿಭಿನ್ನವಾಗಿ ನಿಲ್ಲುತ್ತದೆ. ಈ ಪ್ರಶಸ್ತಿಯ ವಿಶೇಷತಯೆಂದರೆ ಬೆಂಗಳೂರು ಮತ್ತು ಬೆಂಗಳೂರಿಗರಿಗಾಗಿ ದುಡಿದ ವ್ಯಕ್ತಿ ಅಥವಾ ಗುಂಪಿನ ನಾಮನಿರ್ದೇಶನ ಮಾಡುವ ಅಧಿಕಾರವನ್ನು ನಾಗರಿಕರಿಗೇ ಕೊಡಲಾಗಿರುವುದು. ಸ್ವತಂತ್ರ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡುತ್ತಾರೆ. ಹಲವು ಕ್ಷೇತ್ರಗಳಿಂದ ಬಂದ ತೀರ್ಪುಗಾರರಿರುತ್ತಾರೆ. ಯಾವ ವ್ಯಕ್ತಿಯ ಹೆಸರನ್ನು ಎಷ್ಟು ಜನ ಸೂಚಿಸಿದ್ದಾರೆ
ಎನ್ನುವ ಲೆಕ್ಕಾಚಾರ ಇಲ್ಲಿ ನಡೆಯುವುದಿಲ್ಲ, ಬದಲಿಗೆ ಯಾವ ವ್ಯಕ್ತಿ ಎಷ್ಟು ಸಾಧನೆ ಮಾಡಿದ್ದಾನೆ ಎನ್ನುವುದೇ ಪ್ರಮುಖ ಮಾನದಂಡ. ಇದರಿಂದಾಗಿ ನಿಜವಾಗಲೂ ನಿಸ್ವಾರ್ಥ ಸೇವೆಗೈದ ವ್ಯಕ್ತಿಗಳನ್ನು ಗೌರವಿಸುವುದಕ್ಕೆ ಸಾಧ್ಯವಾಗುತ್ತದೆ. ಅವರಿಗೆ ಜನತೆಯ ಕೃತಜ್ಞತೆಯೂ ಸಲ್ಲುತ್ತದೆ. ಇಲ್ಲಿಯವರೆಗೂ ನಮ್ಮ ಬೆಂಗಳೂರು ಪ್ರಶಸ್ತಿ ಯಾರ್ಯಾರಿಗೆ ದಕ್ಕಿದೆಯೋ ಯೋಚಿಸಿ?  ಅನಾಥ ಶವಗಳನ್ನು ಸಾಗಿಸಿ ಶವಸಂಸ್ಕಾರ ನಡೆಸುತ್ತಿದ್ದ ವ್ಯಕ್ತಿಗೆ. ಗತಿಯಿಲ್ಲದವರನ್ನು ರಕ್ಷಿಸಿ ಅವರಿಗೆ ಜೀವನ ಕಟ್ಟಿಕೊಟ್ಟ ಆಟೋ ಡ್ರೈವರ್‌ಗೆ. ಕೊನೆಯ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಉಚಿತವಾಗಿ ಸೇವೆ ಮಾಡುವ ಎನ್‌ಜಿಒಗೆ. ಕೊಳಚೆ ಗುಂಡಿಯಾಗಿ ಬದಲಾಗಿದ್ದ ಕೆರೆಯೊಂದಕ್ಕೆ ಮರುಜೀವ ಕೊಟ್ಟ ನಾಗರಿಕ ಗುಂಪಿಗೆ. ಬೆಂಗಳೂರನ್ನು ನಡುಗಿಸಿದ ಮೂರು ಕೊಲೆಗಳ ಬಗ್ಗೆ ನಡೆದ ತನಿಖೆಗೆ ಮುತುವರ್ಜಿ ವಹಿಸಿ ಸಹಕರಿಸಿದ ಪೊಲೀಸ್ ಪೇದೆಗೆ. ಕೇವಲ 2,250 ರುಪಾಯಿ ಸಂಬಳ ಪಡೆದರೂ ನಗುನಗುತ್ತಲೇ ವಾರದ ಎಲ್ಲಾ ದಿನವೂ ಕೆಲಸ ಮಾಡಿದ, ತನ್ನ ನಿಷ್ಠೆಯಿಂದ ನಿವಾಸಿಗಳ ಮನಸೆಳೆದ ಪೌರಕಾರ್ಮಿಕಳಿಗೆ....ಇಂಥ ಹಲವಾರು ಜನರಿಗೆ ನಮ್ಮ ಬೆಂಗಳೂರು ಪ್ರಶಸ್ತಿ ಲಭಿಸಿದೆ.
ಇದು 'ನಮ್ಮ ಬೆಂಗಳೂರು ಫೌಂಡೇಷನ್‌' ಎನ್ನುವ, ಬೆಂಗಳೂರಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಲಾಭನಿರಪೇಕ್ಷ ಸಂಸ್ಥೆ ಕೊಡುವ ಪ್ರಶಸ್ತಿ. ಪಾರದರ್ಶಕತೆ ಮತ್ತು ದೃಢತೆಯ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತಿರುವ ಈ ಸಂಸ್ಥೆ ಬೆಂಗಳೂರಿನ ಅಭಿವೃದ್ಧಿಯಲ್ಲಿ ಬೆಂಗಳೂರಿಗರ ಜವಾಬ್ದಾರಿಯೂ ಇದೆ ಎಂದು ಹೇಳುತ್ತದೆ. ಸಹಭಾಗಿತ್ವದ ಮೂಲಕ, ಸಂಸ್ಥೆ ಅಥವಾ ವ್ಯಕ್ತಿಗಳನ್ನು ಪ್ರೋತ್ಸಾಹಿಸಿ ಬೆಂಗಳೂರನ್ನು ಉತ್ತಮಗೊಳಿಸುವುದು ಇದರ ಮೂಲ ಉದ್ದೇಶ.
ನಮ್ಮ ಬೆಂಗಳೂರು ಪ್ರಶಸ್ತಿ ಸಮಾರಂಭ ಈಗ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಹೆಸರಿಲ್ಲದ ಹೀರೋಗಳನ್ನು ಇಲ್ಲಿ ಕಳೆದ 5 ವರ್ಷಗಳಿಂದಲೂ ಸನ್ಮಾನಿಸಲಾಗುತ್ತಿದೆ. 2009ರಲ್ಲಿ ಸುಮಾರು 4,000 ನಾಮ ನಿರ್ದೇಶನಗಳು ಬಂದಿದ್ದರೆ, ಕಳೆದ ವರ್ಷ ಸುಮಾರು 61,000 ಹೆಸರುಗಳನ್ನು ಈ ಪ್ರಶಸ್ತಿಗಾಗಿ ಸೂಚಿಸಲಾಗಿತ್ತು. ಒಟ್ಟಿನಲ್ಲಿ ಬೆಂಗಳೂರಿಗರ ಪ್ರತಿಕ್ರಿಯೆ ಮಾತ್ರ ಅತ್ಯದ್ಭುತವಾಗಿದೆ. 2013ರ ಸಮಾರಂಭಕ್ಕೆ ಅದಾಗಲೇ ಸಿದ್ಧತೆ ಶುರುವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ "ಹೀರೋ"ಗಳ ಹೆಸರುಗಳು ಹರಿದುಬರುತ್ತಿವೆ. ಈ ಬಾರಿ ಈ ಪಟ್ಟಿಯಲ್ಲಿ 1 ಲಕ್ಷಕ್ಕಿಂತಲೂ ಅಧಿಕ ಜನರ ಹೆಸರು ಸೇರಿಕೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರಿಗರೆ, ದಯವಿಟ್ಟೂ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಬೆಂಗಳೂರನ್ನು ಇನ್ನಷ್ಟು ಮುದಗೊಳಿಸಲು ಮತ್ತು ಬೆಂಗಳೂರಿಗರ ಜೀವನವನ್ನು ಉತ್ತಮಪಡಿಸಲು, ಯಾವ ಆಸೆ ಆಕಾಂಕ್ಷೆಯೂ ಇರದ, ಹಗಲಿರುಳೆನ್ನದೇ ದುಡಿಯುತ್ತಿರುವವರನ್ನು ಗುರುತಿಸುವ ಕೆಲಸ ಮಾಡಿ. ಅವರು ನಿಮ್ಮ ನಡುವೆಯೇ ಇರಬಹುದು. ನಮ್ಮ ಬೆಂಗಳೂರು ಪ್ರಶಸ್ತಿಗಾಗಿ ಅವರ ಹೆಸರನ್ನು ಸೂಚಿಸಿ.
ಆನ್‌ಲೈನ್ ನಾಮ ನಿರ್ದೇಶನಕ್ಕಾಗಿ, www.nam​m​a​b​en‌g​a​l‌u‌r‌u​a​ ಇಷ್ಟೇ ಅಲ್ಲ, ನೀವು ನಿಮ್ಮ ಆಯ್ಕೆಯನ್ನು ನಮ್ಮ ಬೆಂಗಳೂರು ಫೌಂಡೇಷನ್, 3ಜೆ, ಎನ್‌ಎ ಚೇಂಬರ್ಸ್, 7ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಕೋರಮಂಗಲ, ಬೆಂಗಳೂರು-5600034ಗೆ ಪತ್ರಮುಖೇನ ಕಳುಹಿಸಬಹುದು. ಅಥವಾ ನಿಮ್ಮ ಆಯ್ಕೆಯನ್ನು ಕೆಫೆ ಕಾಫಿಡೇದ ಕಪ್ಪಾ, ಫುಡ್‌ವರ್ಲ್ಡ್ ಮತ್ತು ಅಮ್ಮೀಸ್ ಬಿರ್ಯಾನಿಯಲ್ಲಿ ಇರಿಸಲಾದ ಡಬ್ಬಿಗಳಲ್ಲಿ ಚೀಟಿ ಬರೆದು ಹಾಕಬಹುದು. ಇನ್ನು nba@n​a​m​ma-​ben‌g​al‌u‌r‌u.‌o‌r‌g  ಗೆ ಮಿಂಚಂಚೆ ಕಳುಹಿಸಿ ಸಾಧಕರ ಹೆಸರನ್ನು ಸೂಚಿಸಬಹುದು.ಕೊನೆಯ ದಿನಾಂಕ ಡಿಸೆಂಬರ್ 15. ಇನ್ನೇಕೆ ತಡ!
ನಮ್ಮ ಬೆಂಗಳೂರು ಫೌಂಡೇಷನ್ ಮಾಡುತ್ತಿರುವ ಕೆಲಸವನ್ನು ದೇಶದ ಪ್ರತಿನಗರವೂ ಅಳವಡಿಸಿಕೊಳ್ಳಬೇಕಿದೆ. ನಿಜವಾದ ಹೀರೋಗಳಿಗೆ ಆಗ ಮಾತ್ರ ಗೌರವ ಮತ್ತು ಗುರುತು ಸಿಗಲು ಸಾಧ್ಯ.
ಕೊನೆಯ ಗುಟುಕು: ನಾಳೆ ಟಿ.ವಿ.ಗೆ ಅಂಟಿಕೊಂಡು ಕುಳಿತುಕೊಳ್ಳಿ! ಏಕೆಂದರೆ, ಡಿ. 8ರಂದು ಕಾಂಗ್ರೆಸ್, ಬಿಜೆಪಿ ಮತ್ತು ಹೊಸ ಪಕ್ಷವಾದ ಆಮ್ ಆದ್ಮಿ ಪಕ್ಷದ ಹಣೆಬರಹ ನಿರ್ಧಾರವಾಗಲಿರುವ ದಿನ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಹೊರಬೀಳಲಿದೆ. ಸಮೀಕ್ಷೆಗಳು ಹೇಳುವಂತೆ, ಕಾಂಗ್ರೆಸ್ ನೆಲಕ್ಕೆ ಬೀಳಲಿದೆಯೇ? ಬಿಜೆಪಿ ಮತ್ತೆ ಅಧಿಕಾರಕ್ಕೆ ಜಿಗಿಯಲಿದೆಯೇ? ಅಥವಾ ಆಮ್ ಆದ್ಮಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆಘಾತವುಂಟುಮಾಡಲಿದೆಯೇ? ಈ ಜನಮತ ಸಂಗ್ರಹ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಕನ್ನಡಿಯಾಗಲಿದೆಯೇ? ನಿಜಕ್ಕೂ ನಾಳೆ ಟಿ.ವಿ.ಗೆ ಅಂಟಿಕೊಂಡು ಕೂಡಲೇಬೇಕು!

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com