ನಮಗೂ ಬರುವುದೇ ದೆಹಲಿ ಮತದಾರರ ಗುಣ?

ದೆಹಲಿಯಲ್ಲಿ ಸರ್ಕಾರ ರಚಿಸುವಷ್ಟು ಸ್ಥಾನಗಳು ಆಮ್ ಆದ್ಮಿ ಪಕ್ಷಕ್ಕೆ ಲಭಿಸಬೇಕಿತ್ತೆಂದು...
ನಮಗೂ ಬರುವುದೇ ದೆಹಲಿ ಮತದಾರರ ಗುಣ?
Updated on: 

ದೆಹಲಿಯಲ್ಲಿ ಸರ್ಕಾರ ರಚಿಸುವಷ್ಟು ಸ್ಥಾನಗಳು ಆಮ್ ಆದ್ಮಿ ಪಕ್ಷಕ್ಕೆ ಲಭಿಸಬೇಕಿತ್ತೆಂದು ನಮಗೀಗ ಅನಿಸುತ್ತಿದೆಯಲ್ಲವೇ? ಈಗ ಎಲ್ಲರ ಬಾಯಲ್ಲೂ ಇದೇ ಮಾತು. ಯಾವ ರಾಜಕೀಯ ಅನುಭವವೂ ಇಲ್ಲದ, ಕೇವಲ 13 ತಿಂಗಳ ಪಕ್ಷವೊಂದು ಇಡೀ ದೇಶದ ಸಮೂಹ ಪ್ರಜ್ಞೆಯನ್ನು ಯಾವ ರೀತಿಯಲ್ಲಿ ಆಕರ್ಷಿಸಿದೆಯೋ ನೋಡಿ. ಆಮ್ ಆದ್ಮಿ ಪಕ್ಷ ಮತ್ತು ಅದರ ಸ್ಥಾಪಕ ಅರವಿಂದ್ ಕೇಜ್ರಿವಾಲ್ ಈಗ ಮನೆಮಾತಾಗಿದ್ದಾರೆ. ಆ ಪಕ್ಷದ ಹೆಸರು ಕೇಳಿದರೇ ಸಾಕು ಬಿಜೆಪಿ ಮತ್ತು ಕಾಂಗ್ರೆಸ್ ನಡುಗುತ್ತಿವೆ. ಶ್ರೇಯಸ್ಸು ಸಲ್ಲಬೇಕಾದದ್ದು ದೆಹಲಿಗರಿಗೆ. ಎರಡು ಹಿರಿಯ ಪಕ್ಷಗಳನ್ನು ಕಡೆಗಣಿಸಿ ಬಹುತೇಕರು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಿದರಲ್ಲ, ಆ ಕಾರಣಕ್ಕೆ.
ಇಂಥ ಕೆಲಸ ದೆಹಲಿಗರಿಗೆ ಸಾಧ್ಯವಾಗುತ್ತದೆಂದರೆ, ನಮ್ಮಿಂದೇಕೆ ಆಗದು? ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಎಲ್ಲರ ಮನಸ್ಸಿನಲ್ಲಿಯೂ ಇದೇ ವಿಷಯ ಗುಂಯ್‌ಗುಡುತ್ತಿದೆ.
ಕೇವಲ 10 ಸ್ಥಾನಗಳ ಕೊರತೆಯಿಂದ ಸರ್ಕಾರ ರಚಿಸುವ ಅವಕಾಶವನ್ನು ಆ ಪಕ್ಷ ಕಳೆದುಕೊಂಡಿತು ಎನ್ನುವ ಸಂಗತಿ ನಿಜಕ್ಕೂ ಬೇಸರ ತರಿಸುತ್ತಿದೆ. ಒಂದು ವೇಳೆ ಬಹುಮತ ಪಡೆದು ಕುರ್ಚಿಯಲ್ಲಿ ಕೂರಲು ಅದಕ್ಕೆ ಸಾಧ್ಯವಾಗಿತ್ತೆಂದರೆ, ಅದರ ಕೆಲಸವನ್ನು ನೋಡುವ ಅವಕಾಶ ನಮಗೆ ಸಿಗುತ್ತಿತ್ತು. ಅದು ನುಡಿದಂತೆ ನಡೆದು ತೋರಿಸುವ ಪಕ್ಷವೇ? ವ್ಯವಸ್ಥೆಯನ್ನು ಬದಲಾಯಿಸುವ ಸಾಮರ್ಥ್ಯ ಅದಕ್ಕಿದೆಯೇ? ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಅದು ನಿಲ್ಲಿಸುವುದೇ? ಆಡಳಿತದಲ್ಲಿ ಅತ್ಯವಶ್ಯಕವಿರುವ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಅದು ಅನುಷ್ಠಾನಕ್ಕೆ ತರುವುದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಆಗ ಉತ್ತರ ದೊರಕುತ್ತಿತ್ತು. ಇದರಿಂದಾಗಿ ಲೋಕಸಭಾ ಚುನಾವಣೆಗಳಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವುದಾದರೂ ನಮಗೆ ಸ್ಪಷ್ಟವಾಗುತ್ತಿತ್ತು. "ಕಾಂಗ್ರೆಸ್‌ನ ಬೆಂಬಲ ತನಗೆ ಬೇಕಿಲ್ಲ, ಅಲ್ಲದೆ ಬಿಜೆಪಿಯ ಜೊತೆಗೂ ತಾನು ಕೈಜೋಡಿಸುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿ, ತಾನು ಅಧಿಕಾರದಾಹಿಯಲ್ಲ ಎನ್ನುವುದನ್ನು ಆಮ್ ಆದ್ಮಿ ಪಕ್ಷ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಆ ಪಕ್ಷ ಭಾವಿಸುತ್ತದೆ. ಮರುಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತ ಪಡೆದು ಅಧಿಕಾರಕ್ಕೇರುವ ಭರವಸೆಯೂ ಅದಕ್ಕಿದೆ.
ಹಣ ಬಲವಿಲ್ಲದೆ, ಅಧಿಕಾರ ಬಲವಿಲ್ಲದೆ, ಕೇವಲ ಕಸಬರಿಗೆಯ ಚಿನ್ಹೆ ಮತ್ತು ಭ್ರಷ್ಟಾಚಾರ ವಿರೋಧಿ ಗುರಿಯೊಂದಿಗೆ ಮುನ್ನುಗ್ಗಿ ಎರಡು ಪ್ರಮುಖ ಪಕ್ಷಗಳಿಗೆ ಟಾಂಗ್ ಕೊಡುವ ಸಾಮರ್ಥ್ಯ ಅದಕ್ಕಿದೆ. ನರೇಂದ್ರ ಮೋದಿಯವರ ಅಲೆ ಅಥವಾ ಮೂರು ಅವಧಿಗೆ ಅಧಿಕಾರ ನಡೆಸಿದ ಶೀಲಾ ದೀಕ್ಷಿತ್‌ರ ಪ್ರಭಾವಕ್ಕೆ ಕೂಡ ಆಮ್ ಆದ್ಮಿ ಪಕ್ಷವನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಇನ್ನು, ಕೆಲವು ಮತದಾರರಂತೂ ಚಾಣಾಕ್ಷತನ ಮೆರೆದರು! ಬಿಜೆಪಿ ಮತ್ತು ಕಾಂಗ್ರೆಸ್ ಕೊಟ್ಟ ಹಣವನ್ನೆಲ್ಲ ಕಿಸೆಗಿಳಿಸಿ, ಯಾವ ಆಮಿಷವನ್ನೂ ಒಡ್ಡದ, ಆದರೆ ಪ್ರಾಮಾಣಿಕ ಸರ್ಕಾರವನ್ನು ನಡೆಸುವ ಭರವಸೆ ಕೊಟ್ಟ ಕೇಜ್ರಿವಾಲರ ಪಕ್ಷಕ್ಕೆ ಮತ ನೀಡಿದರು. ಶೀಲಾ ದೀಕ್ಷಿತ್‌ರ ಅಖಾಡದಲ್ಲೇ ಅವರನ್ನು ಸೋಲಿಸಿದರು ಕೇಜ್ರಿವಾಲ್. ಅದೂ ಬೃಹತ್ ಅಂತರದಿಂದ!
ಆದಾಗ್ಯೂ ಆಮ್ ಆದ್ಮಿ ಪಕ್ಷ ಹುಟ್ಟಿಕೊಂಡದ್ದು ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದಲೇ ಆದರೂ, ಅಣ್ಣಾರ ಬೆಂಬಲ ಮಾತ್ರ ಕೇಜ್ರಿವಾಲರಿಗೆ ಸಿಗಲಿಲ್ಲ. ಆಂದೋಲನವೊಂದು ರಾಜಕೀಯ ಪಕ್ಷದ ರೂಪ ಪಡೆಯುವುದು ಅಣ್ಣಾರಿಗೆ ಇಷ್ಟವಿರಲಿಲ್ಲ. ಆದರೆ ಸಂಸತ್ತನ್ನು ಪ್ರವೇಶಿಸಿದರೆ ಅಲ್ಲಿಂದಲೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಸುಲಭವಾಗುತ್ತದೆ ಎನ್ನುವುದು ಕೇಜ್ರಿವಾಲರ ನಂಬಿಕೆಯಾಗಿತ್ತು.
ಹೊರಗಿನಿಂದ ಹೋರಾಡುವುದಕ್ಕಿಂತ ಒಳಗಿದ್ದುಕೊಂಡು ಹೋರಾಡುವುದೇ ಒಳ್ಳೆಯದೆಂಬ ಕೇಜ್ರಿವಾಲರ ವಾದ ಅಣ್ಣಾರ ನಂಬಿಕೆಗೆ ವಿರುದ್ಧವಾಗಿತ್ತು. ಹಾಗಾಗೇ ಇಬ್ಬರೂ ದೂರವಾದರು. ಒಂದು ವೇಳೆ ಅಣ್ಣಾ ಹಜಾರೆಯೇನಾದರೂ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಿದ್ದರೆಂದರೆ, ಕೇಜ್ರಿವಾಲರು ವಿಜಯದ ಕೇಕೆ ಹಾಕುತ್ತಿದ್ದರೋ ಏನೋ? ಅಣ್ಣಾರ ಬೆಂಬಲವಿಲ್ಲದೇ ಏಕಾಂಗಿಯಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪಾಠ ಕಲಿಸಿದ ಕೇಜ್ರಿವಾಲರ ಶ್ರಮಕ್ಕೆ ಹ್ಯಾಟ್ಸ್‌ಆಫ್ ಹೇಳಲೇಬೇಕು.
ಆದರೆ ಆ ಪಕ್ಷದ ಮುಂದಿನ ದಾರಿ ಅಷ್ಟೊಂದು ಸುಗಮವಾಗಿಲ್ಲ. ದೆಹಲಿ 'ಮಾದರಿ'ಯನ್ನು ಇಡೀ ದೇಶಕ್ಕೆ ಅನ್ವಯಿಸುವುದು ಸುಲಭವಲ್ಲ. ದೆಹಲಿಯಲ್ಲಿನ ಸಾಧನೆಯ ನಂತರ ಆಮ್ ಆದ್ಮಿ ಪಕ್ಷದ ಮೇಲಿನ ನಿರೀಕ್ಷೆಯಂತೂ ಹೆಚ್ಚಾಗಿದೆ. ಅದರ ಹವಾ ದೇಶಾದ್ಯಂತ ಬೀಸಿದರೂ ಅಚ್ಚರಿಪಡಬೇಕಿಲ್ಲ. 2014ರ ಲೋಕಸಭಾ ಚುನಾವಣೆಗಳಿಗಾಗಿ ಪ್ರತಿಯೊಂದು ಕ್ಷೇತ್ರದಿಂದಲೂ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಜನಸಮೂಹವನ್ನು ಹಿಡಿದಿಡುವುದೂ ಅಷ್ಟೇ ಕಷ್ಟದ ಕೆಲಸ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನ ಬೆಂಗಳೂರಿನಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದರಿಂದ, ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ದೊಡ್ಡ ಸಮೂಹವೇ ಇಲ್ಲಿದೆ. ಇದರಂತೆಯೇ ಇನ್ನೂ ಎರಡು-ಮೂರು ನಗರಗಳಲ್ಲಿ ಒಳ್ಳೆಯ ಅಭ್ಯರ್ಥಿಗಳು ಆ ಪಕ್ಷಕ್ಕೆ ಸಿಗಬಹುದು. ಆದರೆ ಗ್ರಾಮೀಣ ಭಾಗಗಳು ಮಾತ್ರ ಕೇಜ್ರಿವಾಲರಿಗೆ ಸವಾಲೊಡ್ಡುವುದು ನಿಶ್ಚಿತ.  ಭಾರತ ಈಗ ಎಚ್ಚೆತ್ತುಕೊಂಡಿದೆ. ಧರ್ಮ, ಪ್ರದೇಶ, ಜಾತಿ, ಮತಗಳು ಚುನಾವಣೆಯಲ್ಲಿ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದನ್ನು ದೆಹಲಿ ಸಾಬೀತುಪಡಿಸಿದೆ. ಉತ್ತಮ ಆಡಳಿತ ಮತ್ತು ತ್ವರಿತ ಅಭಿವೃದ್ಧಿಯನ್ನು ನೀಡಬಲ್ಲ ಸಮರ್ಥ ಮತ್ತು ನಿಷ್ಠಾವಂತ ನಾಯಕರು ನಮಗೆ ಬೇಕು. ತನ್ನದೇ ಮನಸ್ಥಿತಿಯ ಪಕ್ಷಗಳಾದ ಲೋಕಸತ್ತಾ ಪಕ್ಷ ಮತ್ತು ನವ-ಭಾರತ ಪಕ್ಷದೊಂದಿಗೆ ಕೈಜೋಡಿಸಲು ಆಮ್ ಆದ್ಮಿ ಪಕ್ಷ ಪ್ರಯತ್ನಿಸಬಹುದು. ಆ ಪಕ್ಷಗಳು ಮಾನವಸಂಪನ್ಮೂಲ ಒದಗಿಸಬಲ್ಲವು. ಅಲ್ಲದೆ, ಎನ್‌ಆರ್‌ಐಗಳಿಂದಲೂ ಹಣ ಹರಿದು ಬರುವುದು ನಿಶ್ಚಿತ. ಇದನ್ನು ನಾವು ದೆಹಲಿ ಚುನಾವಣೆಯಲ್ಲಿ ನೋಡಿದ್ದೇವೆ. ಆದರೆ ಟೀಂ ಕೇಜ್ರಿವಾಲ್ ಮಾತ್ರ ಶಾಂತ ಮತ್ತು ಸ್ಥಿರವಾಗಿ ನಿಲ್ಲಬೇಕು.

ಕೊನೆಯ ಗುಟುಕು: ಸಂದರ್ಶನವೊಂದರಲ್ಲಿ ಕೇಜ್ರಿವಾಲ್ ಹೇಳಿದ್ದು: "ಆಮ್ ಆದ್ಮಿ ಪಕ್ಷದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಇದರಿಂದಾಗಿ ನಮ್ಮ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಕೆಲವೊಮ್ಮೆ ಹೆದರಿಕೆಯಾಗುತ್ತದೆ. ತಿಳಿಯದೇ ತಪ್ಪು ಮಾಡಿಬಿಟ್ಟರೆ ಹೇಗಪ್ಪಾ ಎಂದು. ಹಾಗೇನಾದರೂ ಆದರೆ ಇತಿಹಾಸ ನಮ್ಮನ್ನು ಖಂಡಿತವಾಗಿಯೂ ಕ್ಷಮಿಸದು."

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com