

ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ಸೃಷ್ಟಿಸಿದ ಗೊಂದಲ, ಇನ್ನುಳಿದ ಮೂರು ರಾಜ್ಯಗಳಲ್ಲಿ ಬಿಜೆಪಿಯ ಜಯಭೇರಿ, ಕಾಲಿಟ್ಟ ಕಡೆಯಲ್ಲೆಲ್ಲ ಧೂಳಾದ ಕಾಂಗ್ರೆಸ್ನ ಅವನತಿಯ ಸಂಕೇತಗಳ ನಡುವೆಯೇ ಸಣ್ಣದೊಂದು ಸುದ್ದಿ ಹೀಗೆ ಬಂದು ಹಾಗೆ ಹೋಯಿತು. ರಾಜಕೀಯವಾಗಿ ಅದು ಯಾವುದೇ ಸದ್ದು ಮಾಡಲಿಲ್ಲ. ಯಾರೂ ಸಮಜಾಯಿಷಿ ಕೊಡಲಿಲ್ಲ, ಯಾರೂ ಬೆನ್ನು ತಟ್ಟಿಕೊಳ್ಳಲಿಲ್ಲ. ಅಧಿಕಾರಸ್ಥರ ಮರ್ಜಿಯಲ್ಲಿ ಪಂಜರದ ಗಿಳಿಯಂತಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ದೇಶದ ರಕ್ಷಣಾ ವಲಯದಲ್ಲಿ ನಡೆದ ಭಾರೀ ಪ್ರಮಾದ, ಅಕ್ರಮ ಎಂದೇ ಬಿಂಬಿತವಾಗಿದ್ದ ಪ್ರಕರಣದಲ್ಲಿ ಯಾವುದೇ ಅಕ್ರಮ ಸಾಬೀತಾಗಿಲ್ಲ. ಯಾರನ್ನೂ ದೋಷಿ ಮಾಡಲಾಗಿಲ್ಲ ಎಂದು ಸ್ವತಃ ಸಿಬಿಐ ಬಾಯ್ಬಿಟ್ಟಿತು. ಅಲ್ಲಿಗೆ ಆ ಹಗರಣ ಮಣ್ಣಾಯಿತು.
ಅದು ಬರಾಕ್ ಕ್ಷಿಪಣಿ ವ್ಯವಸ್ಥೆ ಮತ್ತು ಕ್ಷಿಪಣಿ ಖರೀದಿ ಹಗರಣ. ಅಮೆರಿಕದಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ದಾಳಿ ಹಾಗೂ ಅದರ ಬೆನ್ನಿಗೆ ನಮ್ಮ ಸಂಸತ್ತಿನ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಎನ್ಡಿಎ ಸರ್ಕಾರ ದೇಶದ ರಕ್ಷಣಾ ವ್ಯವಸ್ಥೆಗೆ ಅಗತ್ಯ ಕಾಯಕಲ್ಪ ನೀಡಲು ಮುಂದಾಯಿತು. ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಸೇನಾ ಪಡೆಗಳಿಗೆ ಬಲ ತುಂಬುವುದು, ಅವುಗಳಿಗೆ ತುರ್ತಾಗಿ ಬೇಕಿದ್ದ ಆಧುನಿಕ ಉಪಕರಣಗಳನ್ನು ಪೂರೈಸುವುದು ಇದರ ಭಾಗವಾಗಿತ್ತು. ಒಂದು ಆಧುನಿಕ ಕ್ಷಿಪಣಿ ಉಡಾವಣಾ ವ್ಯವಸ್ಥೆ ಹಾಗೂ ಸಮರ್ಥ ಕ್ಷಿಪಣಿಗಳಿಗಾಗಿ ಭಾರತೀಯ ನೌಕಾಪಡೆ 1993ರಿಂದಲೇ ಭಾರತ ಸರ್ಕಾರದ ಬೆನ್ನು ಬಿದ್ದಿತ್ತು. ಆದರೆ, ಅದರ ಕೂಗು ರಾಜಕಾರಣದ ವಿಷ ವರ್ತುಲದಲ್ಲಿ ಯಾರ ಕಿವಿಗೂ ಬಿದ್ದಿರಲಿಲ್ಲ. ಕೊನೆಗೂ ತನ್ನ ಬೇಡಿಕೆಗೆ ಅಸ್ತು ಸಿಗಬಹುದು ಎಂಬುದು ಮನವರಿಕೆಯಾದಾಗ ನೌಕಾಪಡೆ ತನ್ನ ಆಯ್ಕೆಯನ್ನು ಸರ್ಕಾರದ ಮುಂದಿಟ್ಟಿತು. ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆಯ ನಡುವೆಯೂ ನೆಲದಿಂದ ನೆಲಕ್ಕೆ ಮತ್ತು ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಬರಾಕ್ ಕ್ಷಿಪಣಿ ಉಡಾವಕ ಮತ್ತು ಅದೇ ಕ್ಷಿಪಣಿಗಳು ತನ್ನ ಪ್ರಶಸ್ತ ಆಯ್ಕೆ ಎಂದು ನೌಕಾಪಡೆ ಸರ್ಕಾರಕ್ಕೆ ತಿಳಿಸಿತು. ಇದೇ ವೇಳೆ ದೇಶೀಯ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಯ ಹೊಣೆ ಹೊತ್ತಿರುವ ಡಿಆರ್ಡಿಒ ಇಂತಹುದೇ ಉದ್ದೇಶದ ಕ್ಷಿಪಣಿ ತಯಾರಿಕೆಯ ಆರಂಭಿಕ ಹಂತದಲ್ಲಿತ್ತು. ಹಾಗಾಗಿ ಸಹಜವಾಗಿಯೇ ಅದು ಬರಾಕ್ ಕ್ಷಿಪಣಿ ಖರೀದಿ ವಿರುದ್ಧ ನಿಲುವು ತಾಳಿತು. ಆದರೆ, ಆಗ ನೌಕಾಪಡೆಯ ಮುಖ್ಯಸ್ಥರಾಗಿದ್ದ ಸುಶೀಲ್ಕುಮಾರ್ ಡಿಆರ್ ಡಿಒದ ವಾದವನ್ನು ತಳ್ಳಿ ಹಾಕಿ ಬರಾಕ್ ಪರ ಬೋಪರಾಕ್ ಹೇಳಿದರು. ಇದಕ್ಕೆ ಮಣಿದ ಸರ್ಕಾರ 2001ರಲ್ಲಿ ಏಳು ಬರಾಕ್ ಕ್ಷಿಪಣಿ ಉಡಾವಕ ಮತ್ತು 200 ಬಿಡಿ ಕ್ಷಿಪಣಿಗಳ ಖರೀದಿಗೆ ಇಸ್ರೇಲ್ ಏರ್ಕ್ರಾಫ್ಟ್ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಂಡಿತು. ಡಿಆರ್ಡಿಒ ಹೊರತುಪಡಿಸಿ ಈ ಒಪ್ಪಂದದ ಬಗ್ಗೆ ಯಾರಿಗೂ ತಕರಾರಿರಲಿಲ್ಲ. ಅಲ್ಲದೆ ಯಾರ ಮೂಗಿಗೂ ಇದರಲ್ಲಿ ಅಕ್ರಮದ ವಾಸನೆ ಬಡಿಯಲಿಲ್ಲ. ಆದರೆ, ತನ್ನ ಸ್ನೇಹಿತನ ಮಗಳು ಮತ್ತು ಮಗಳ ಸ್ನೇಹಿತೆಯ ಮೇಲೆಯೇ ಕಾಮಚೇಷ್ಟೆ ನಡೆಸಿ ಇಂದು ಗೋವಾದ ಜೈಲಿನಲ್ಲಿರುವ ತರುಣ್ ತೇಜಪಾಲ್ ಮತ್ತು ಅವರ ಬಳಗದ ಪತ್ರಕರ್ತರಿಗೆ ಮಾತ್ರ ಇದರಲ್ಲಿ ಏನೋ ಅಕ್ರಮದ ಸುಳಿವು ಸಿಕ್ಕಿರಬೇಕು. ಕೂಡಲೇ ತಮ್ಮ ಕುಟುಕು ಪ್ರೀತಿಗೆ ಚಾಲನೆ ನೀಡಿದರು. ಆರು ತಿಂಗಳ ಘನಂದಾರಿ ಕುಟುಕಿನ ನಂತರ ಬರಾಕ್ ಸೇರಿದಂತೆ ಎನ್ಡಿಎ ಸರ್ಕಾರದಲ್ಲಿ ಮಾಡಿಕೊಂಡ ಸುಮಾರು 23 ರಕ್ಷಣಾ ಸಾಮಗ್ರಿ ಖರೀದಿ ಒಪ್ಪಂದಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಬೊಬ್ಬಿಟ್ಟಿತು. ಅಸಲು ಈ ಕುಟುಕಿನ ಟಾರ್ಗೆಟ್ ಸರ್ಕಾರವಾಗಲಿ ಅಥವಾ ಅದು ಮಾಡಿಕೊಂಡ ಒಪ್ಪಂದಗಳಾಗಲಿ ಆಗಿರಲಿಲ್ಲ. ಅಂದು ತೇಜಪಾಲ್ ಮತ್ತವರ ಗ್ಯಾಂಗ್ನ ಟಾರ್ಗೆಟ್ ಆಗಿದ್ದವರೆಂದರೆ ಜಾರ್ಜ್ ಫರ್ನಾಂಡಿಸ್!
180 ಚಿಲ್ಲರೆ ಸೀಟು ಗೆದ್ದು ಸರ್ಕಾರ ನಡೆಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅಥವಾ ಅವರ ಪಕ್ಷ ಬಿಜೆಪಿಯನ್ನು ಟಾರ್ಗೆಟ್ ಮಾಡುವ ಬದಲು ಏಳು ಸೀಟು ಗೆದ್ದು ಎನ್ಡಿಎ ಮೈತ್ರಿಕೂಟದ ಜೂನಿಯರ್ ಪಾರ್ಟ್ನರ್ ಆಗಿದ್ದ ಸಮತಾ ಪಕ್ಷದ ಅಧ್ಯಕ್ಷ ಹಾಗೂ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಕುಟುಕಿನ ಟಾರ್ಗೆಟ್ ಆಗಿಸಿದ್ದೇ ಒಂದು ವಿಪರ್ಯಾಸ. ಪ್ರಧಾನ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಕಾಂಗ್ರೆಸ್ಗೆ ಬಾಯಲ್ಲಿ ಲಡ್ಡು ಬಿದ್ದಂತಾಯಿತು. ಜಾರ್ಜ್ ಸಂಕಟದಲ್ಲೇ ಸಂತಸ ಕಾಣುವ ಕಾಂಗ್ರೆಸ್ ಹಿರಿ ಹಿರಿ ಹಿಗ್ಗಿತು. ಅದಕ್ಕೂ ಕಾರಣ ಇತ್ತು. ಅಂದಿಗೂ ಇಂದಿಗೂ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿ ನಿಂತು, ಅದರ ಸೋಂಕೂ ತನ್ನ ಕೂದಲು ತಾಗದಂತೆ ಪ್ರಖರ ಕಾಂಗ್ರೆಸ್ ವಿರೋಧಿಯಾಗಿರುವ ಗಂಡಸೆಂದರೆ ಅದು ಜಾರ್ಜ್ ಫರ್ನಾಂಡಿಸ್. ಯಾವ ವಿಚಾರದಲ್ಲಿ ಯಾರೊಂದಿಗಾದರೂ ಜಾರ್ಜ್ ರಾಜಿಯಾಗುತ್ತಾರೆ, ಆದರೆ ಕಾಂಗ್ರೆಸ್ ಹೆಸರೆತ್ತಿದರೆ ನಖಶಿಖಾಂತ ಉರಿದು ಬೀಳುತ್ತಾರೆ. ಇಂದು ಕಾಂಗ್ರೆಸ್ ವಿರುದ್ಧ ಮಾತನಾಡುವ ಹಲವಾರು ವಿರೋಧಿ ನಾಯಕರು ಒಂದಿಲ್ಲೊಂದು ಬಾರಿ ಅದರ ಕಾಲು ನೆಕ್ಕಿದವರೇ ಆಗಿದ್ದಾರೆ. ಆದರೆ, ಜಾರ್ಜ್ ಎಂದೂ ಮುಲಾಜಿಗೆ ಒಳಗಾಗಲಿಲ್ಲ. 37ರ ಎಳೆ ಪ್ರಾಯದಲ್ಲೇ (ರಾಜಕಾರಣಕ್ಕೆ ಸೀಮಿತವಾಗಿ) ದಕ್ಷಿಣ ಮುಂಬಯಿನ ಪ್ರತಿಷ್ಠಿತ ಕ್ಷೇತ್ರದಲ್ಲಿ 1967ರ ಸಂಸದೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿನ ದಿಗ್ಗಜ ಎಸ್.ಕೆ. ಪಾಟೀಲ್ರನ್ನು ಮಣ್ಣು ಮುಕ್ಕಿಸಿದಾಗ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗುರುತು, ಪರಿಚಯ ಇಲ್ಲದ ಮುಜಾಫರ್ಪುರದಿಂದ ಜೈಲಿನಲ್ಲಿದ್ದುಕೊಂಡೇ ಸ್ಪರ್ಧಿಸಿ ಅಂದಿನ ಕಾಲಕ್ಕೆ ದಾಖಲೆಯ ಮೂರು ಲಕ್ಷ ಮತಗಳಿಂದ ಜಯಶಾಲಿಯಾದಾಗಲೂ ಜಾರ್ಜ್ಗೆ ಇದ್ದದ್ದು ಇದೇ ಕಾಂಗ್ರೆಸ್ ವಿರೋಧಿ ಪ್ರೇರಣೆಯೇ. ತನ್ನ ಯಾವುದೇ ದಬ್ಬಾಳಿಕೆ, ಬೆದರಿಕೆ, ಓಲೈಕೆಗಳಿಗೆ ಬಗ್ಗದ ಈ ಧೀಮಂತ ನಾಯಕನನ್ನು ಹಣಿಯಲು ಕಾಂಗ್ರೆಸ್ಗೆ ತೇಜಪಾಲ್ ಅ್ಯಂಡ್ ಗ್ಯಾಂಗ್ ಒಂದು ರಾಜಕೀಯ ಅಸ್ತ್ರ ನೀಡಿತ್ತು. ಜಾರ್ಜ್ಗೆ ಕಾಂಗ್ರೆಸ್ ದೇಶದ್ರೋಹಿ ಪಟ್ಟ ಕಟ್ಟಿತು. ಸಂಸತ್ತಿನಲ್ಲಿ ಅವರನ್ನು ಬಹಿಷ್ಕರಿಸಿತು. ಅವರಿಗೆ ಮಾತಾಡಲು ಅವಕಾಶ ನೀಡಲಿಲ್ಲ. ಒತ್ತಡಕ್ಕೆ ಮಣಿದ ವಾಜಪೇಯಿ ಒಲ್ಲದ ಮನಸ್ಸಿನಿಂದಲೇ ಅವರನ್ನು ಸಂಪುಟದಿಂದ ಕೈಬಿಟ್ಟರು. ಆದರೆ, ಸೇನಾ ಪಡೆಗಳು ಜಾರ್ಜ್ ಮೇಲಿಟ್ಟಿದ್ದ ಗೌರವಕ್ಕೆ ಇದಾವುದೂ ಚ್ಯುತಿ ತರಲಿಲ್ಲ.
ಇವತ್ತು ಅತಿ ದೀರ್ಘ ಕಾಲದ ರಕ್ಷಣಾ ಸಚಿವರಾಗಿ ವಿರಾಜಮಾನರಾಗಿರುವ ಎ.ಕೆ. ಆ್ಯಂಟನಿ ಅದೆಷ್ಟು ಬಾರಿ ದೇಶದ ಅತಿ ದುರ್ಗಮ ಸೇನಾ ನೆಲೆಯಾಗಿರುವ ಸಿಯಾಚಿನ್ಗೆ ಭೇಟಿ ಕೊಟ್ಟಿದ್ದಾರೆ ಹೇಳಿ? ಹೆಚ್ಚೆಂದರೆ ಒಂದೆರಡು ಬಾರಿ ಹೋಗಿರಬಹುದಷ್ಟೆ. ಆದರೆ, ಐದು ವರ್ಷಗಳಲ್ಲಿ ಜಾರ್ಜ್ 18 ಬಾರಿ ಸಿಯಾಚಿನ್ಗೆ ಭೇಟಿ ಕೊಟ್ಟಿದ್ದೇ ಅಲ್ಲದೆ ಸಚಿವನ ಹೆಸಿಯತ್ ಮರೆತು ಅಲ್ಲಿನ ಯೋಧರೊಂದಿಗೆ ಕಲೆತು ಬೆರೆತಿದ್ದಾರೆ. ಇರಲಿ, ಜಾರ್ಜ್ ಮೇಲಿನ ಆರೋಪ ತನಿಖೆಗೆ ನ್ಯಾಯಮೂರ್ತಿ ಫುಕಾನ್ ನೇತೃತ್ವದ ಸಮಿತಿ ರಚನೆಯಾಗಿ ಅದು 2004ರ ಫೆಬ್ರವರಿಯಲ್ಲಿ ಕ್ಷಿಪಣಿ ಖರೀದಿಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಹೇಳಿದ ಮೇಲಾದರೂ ಜಾರ್ಜ್ ನಿರಾಳರಾಗಿರಲು ಬಿಡಬೇಕಿತ್ತು. ಆದರೆ, ಅದೇ ವರ್ಷ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತೆ ಜಾರ್ಜ್ ಬೇಟೆಯಲ್ಲಿ ನಿರತವಾಯಿತು. ಬರಾಕ್ ಸೇರಿದಂತೆ ತೆಹಲ್ಕಾ ಬಹಿರಂಗಪಡಿಸಿದ ಎಲ್ಲ ರಕ್ಷಣಾ ಖರೀದಿ ಒಪ್ಪಂದಗಳನ್ನೂ ಸಿಬಿಐ ತನಿಖೆಗೆ ಒಪ್ಪಿಸಿತು. ಕಾಕತಾಳೀಯವೆಂದರೆ 2005ರ ಏಪ್ರಿಲ್ 5 ರಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕಾರ್ಗಿಲ್ ಕದನ ಸಂದರ್ಭ ಆದ ರಕ್ಷಣಾ ಸಾಮಗ್ರಿ ಖರೀದಿಗಳ ವಿಚಾರವಾಗಿ ಜಾರ್ಜ್ ವಿರುದ್ಧ ತನಿಖೆ ಅಗತ್ಯವಿಲ್ಲ ಎಂದು ಹೇಳಿದ ಮನಮೋಹನ್ ಸಿಂಗ್ ಸರ್ಕಾರ ಒಂದೇ ವಾರದಲ್ಲಿ ಅಂದರೆ 2005ರ ಏಪ್ರಿಲ್ 13 ರಂದು ಎಲ್ಲ ಖರೀದಿ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುತ್ತಿರುವುದಾಗಿ ಹೇಳಿತ್ತು. ಒಂದೇ ವಾರದಲ್ಲಿ ನಿಲುವು ಬದಲಾಗಿತ್ತು. ಅದಕ್ಕೆ ಕುಮ್ಮಕ್ಕು ನೇರವಾಗಿ ಕಾಂಗ್ರೆಸ್ ಸೂತ್ರ ಹಿಡಿದವರಿಂದಲೇ ಬಂದಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಮ್ಮನೆ ಬಿಟ್ಟರೆ ಎಲ್ಲಿ ಜಾರ್ಜ್ ಸಂಸತ್ತಿನಲ್ಲಿ ತಮ್ಮ ವಿರುದ್ಧ ಹರಿಹಾಯುತ್ತಾರೋ ಎಂಬ ಭಯದಿಂದಲೇ ಕಾಂಗ್ರೆಸ್ ಸಿಬಿಐಯನ್ನು ಅವರ ವಿರುದ್ಧ ಛೂ ಬಿಟ್ಟಿತು. ದುರಂತವೆಂದರೆ ಎನ್ಡಿಎ ಎಂಬ ಜೇನುಗೂಡು ಸದೃಢವಾಗಿರಲು ವಾಜಪೇಯಿ ಅವರಷ್ಟೇ ಪ್ರಧಾನ ಪಾತ್ರಧಾರಿ ಆಗಿದ್ದ ಜಾರ್ಜ್ ಪರ ಅಂದು ಬಿಜೆಪಿಯ ಯಾರೂ ದನಿ ಎತ್ತಲಿಲ್ಲ. ಸರ್ಕಾರದ ನಿರ್ಧಾರ ತಿಳಿದ ಬಳಿಕ ಜಾರ್ಜ್ ಸ್ವತಃ ಆಡ್ವಾಣಿ ಮನೆಗೆ ತೆರಳಿ ಚರ್ಚಿಸಿ ಬಂದದ್ದೇ ಬಂತು. ಆಡ್ವಾಣಿ ಸಹ ಜಾರ್ಜ್ ಪರ ಮಾತನಾಡಲಿಲ್ಲ. ಪ್ರಾಯಶಃ ಅಂದು ಜಾರ್ಜ್ ತಾವು ತೀರಾ ಏಕಾಂಗಿ ಎಂದು ಭಾವಿಸಿದ್ದಿರಬಹುದು. ಬರಾಕ್ ಕ್ಷಿಪಣಿ ಮತ್ತು ಉಡಾವಕ ಖರೀದಿ 393 ಕೋಟಿ ರೂ.ಗಳ ಅವ್ಯವಹಾರವಾಗಿದ್ದು ಆ ಕಂಪನಿಗೆ ಗುತ್ತಿಗೆ ನೀಡಲು ಜಾರ್ಜ್ ಎರಡು ಕೋಟಿ ರೂ.ಗಳ ರುಷುವತ್ತು ಪಡೆದಿದ್ದಾರೆ. ಅಲ್ಲದೆ ಈ ಅಕ್ರಮದಲ್ಲಿ ಸಾಕಷ್ಟು ಕಿಕ್ಬ್ಯಾಕ್ ಒಳಗೊಂಡಿದೆ ಎಂದು ಸಿಬಿಐ ಗಂಭೀರ ಆರೋಪ ಹೊರಿಸಿತು. ಇದಾದ ಕೆಲವೇ ದಿನಗಳಲ್ಲಿ ಕಾರ್ಗಿಲ್ ಯುದ್ಧದ ವೇಳೆ ಮೃತ ಯೋಧರ ಶವವನ್ನು ತರಲು ಬೇಕಾಗುವ ವಿಶೇಷ ಶವಪೆಟ್ಟಿಗೆಗಳನ್ನು ಒಂದಕ್ಕೆರಡು ದರ ನೀಡಿ ಖರೀದಿಸಲಾಗಿದೆ. ಇದರಲ್ಲೂ ಅಕ್ರಮದ ವಾಸನೆ ಇದೆ ಎಂದು ಮತ್ತೊಂದು ಆರೋಪವನ್ನು ಜಾರ್ಜ್ ಮೇಲೆ ಹೊರಿಸಲಾಯಿತು.
ಧಾಂಧೂಂ ಎಂದು ಸಿಬಿಐ ಹಗರಣದಲ್ಲಿ ಆರೋಪಿಗಳಾಗಿದ್ದವರ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಿತು. ಶವ ಪೆಟ್ಟಿಗೆ ಹಗರಣ ಸಂಬಂಧ ಜಾರ್ಜ್ ಫರ್ನಾಂಡಿಸ್ರನ್ನು ವಿಚಾರಣೆಗೆ ಒಳಪಡಿಸಿ ನಂತರ 2009ರಲ್ಲಿ ಅವರನ್ನು ಆರೋಪ ಪಟ್ಟಿಯಿಂದ ಕೈಬಿಟ್ಟಿತು. ಆಗಲೂ ಅದು ಕೊಟ್ಟ ಕಾರಣ ಜಾರ್ಜ್ಗೆ ಹಿಂದಿನದ್ದನ್ನು ನೆನಪಿಸಿಕೊಳ್ಳಲು ಆಗುತ್ತಿಲ್ಲ ಎಂದೇ ಹೊರತು ಅವರು ನಿರ್ದೋಷಿ ಎಂದು ಹೇಳಲಿಲ್ಲ. ನಾಲ್ವರು ಅಧಿಕಾರಿಗಳ ಮೇಲೆ ಆರೋಪ ಹೊರಿಸಲಾಯಿತು. ಎರಡು ತಿಂಗಳ ಹಿಂದಷ್ಟೇ ಕೋರ್ಟ್ ಆ ನಾಲ್ವರನ್ನೂ ಆರೋಪ ಮುಕ್ತಗೊಳಿಸಿತು. ಅಂದರೆ ಇದೊಂದು ಖೊಟ್ಟಿ ಪ್ರಕರಣ ಎಂದಾಯಿತು. ಈಗ ಬರಾಕ್ ಹಗರಣದ ವಿಷಯವಾಗಿ ಸಹ ಜಾರ್ಜ್ ಮೇಲೆ ಯಾವುದೇ ಆರೋಪ ಸಾಬೀತುಪಡಿಸಲು ಅದು ವಿಫಲವಾಗಿದೆ. ಅಷ್ಟೇ ಅಲ್ಲ, ಯಾವ ಜಾರ್ಜ್ ಮೇಲೆ ತನ್ನ ಕುಟುಕು ಮಿತ್ರರ ಸಹಾಯದಿಂದ ಕಾಂಗ್ರೆಸ್ ಕಳಂಕ ಹಚ್ಚಿ ಅವರನ್ನು ವಿಚಾರಣೆಗೆ ಒಳಪಡಿಸಿತೊ, ಅದೇ ಸರ್ಕಾರ ಈಗ ಇನ್ನೊಂದು ಕಂತಿನ ಕ್ಷಿಪಣಿ ಖರೀದಿಗೆ ಅದೇ ಬರಾಕ್ ಕಂಪನಿಯ ಮೊರೆ ಹೋಗಿದೆ. ಅಲ್ಲಿಗೆ ಕಾಂಗ್ರೆಸ್ ಕುಟುಂಬ ಮತ್ತು ಸರ್ಕಾರದ ಕಪಟ ಬುದ್ಧಿ ಬಯಲಾಗಿದೆ.
ಯಾರೋ ಅತೃಪ್ತರು ನಡೆಸಿದ ಕುಟುಕು ಕಾರ್ಯಾಚರಣೆಯನ್ನೇ ಆಧಾರವಾಗಿಟ್ಟುಕೊಂಡು ಜಾರ್ಜ್ ವಿರುದ್ಧ ಕಲ್ಪಿತ ಆರೋಪ ಹೊರಿಸಿ ದಶಕದ ಕಾಲ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹೇಸಿಗೆ ಕೆಲಸಕ್ಕೆ ಮುಂದಾದ ಕಾಂಗ್ರೆಸ್ ಈಗ ಕೈತೊಳೆದುಕೊಂಡು ಸುಮ್ಮನಾಗಿದೆ. ಬಿಜೆಪಿಯ ಯಾರೇ ಆಗಲಿ, ಈಗಲಾದರೂ ಜಾರ್ಜ್ರನ್ನು ಡಿಫೆಂಡ್ ಮಾಡಿಕೊಳ್ಳಲು, ಸರ್ಕಾರವನ್ನು ಟೀಕಿಸಲು ಮುಂದಾಗಿಲ್ಲ. ಇನ್ನು ಸ್ವತಃ ಸರ್ಕಾರದ ಕಪಟ ಬಯಲು ಮಾಡಲು, ಅದರ ಕುತ್ಸಿತ ಬುದ್ಧಿಯ ಬಗ್ಗೆ ಬೆಂಕಿಯುಂಡೆ ಉಗುಳಲು ಕೈಲಾಗದ ಸ್ಥಿತಿಯಲ್ಲಿ ಜಾರ್ಜ್ ಇದ್ದಾರೆ. ವ್ಯವಸ್ಥೆ ಎಷ್ಟೇ ದೊಡ್ಡದಿದ್ದರೂ, ಬಲಿಷ್ಠವಾಗಿದ್ದರೂ, ನಂಬಿದ ನಿಲುವು ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟ ಅದಕ್ಕಿಂತಲೂ ದೊಡ್ಡದು ಮತ್ತು ಬಲಿಷ್ಠ ಎಂಬುದನ್ನು ಜಾರ್ಜ್ ನಿರೂಪಿಸಿದ್ದಾರೆ. ಆದರೆ, ಅದನ್ನು ಎದೆ ತಟ್ಟಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಜಾರ್ಜ್ ಇಲ್ಲ. ಛೆ...
- ಕೆ.ಎಸ್. ಜಗನ್ನಾಥ್
jagannath.kudinoor@gmail.com