ನೆನಪಿನ ಅಲೆಯಲ್ಲಿ ಹೀಗೊಂದು ಮಾತುಕತೆ

ಜಿ.ಎಸ್. ಶಿವರುದ್ರಪ್ಪನವರು ಪ್ರವಾಸಪ್ರಿಯರು. ಪ್ರವಾಸವೆಂದರೆ ಅವರಿಗೆ ಇನ್ನಿಲ್ಲದ ಉತ್ಸಾಹ. ದೇಹದಲ್ಲಿ ಶಕ್ತಿ ಇರುವವರೆಗೆ ಅವರು ಸಭೆ ಸಮಾರಂಭಗಳ ನೆಪದಲ್ಲಿ ನಾಡಿನಾದ್ಯಂತ ಸಂಚರಿಸುತ್ತಿದ್ದರು. ಕಡೆಕಡೆಯಲ್ಲಿ ಮನೆಯಿಂದ ಹೊರಹೋಗುವುದೇ ಕಷ್ಟವೆನಿಸಿದಾಗ ಮನೆಗೆ ಬಂದ ಆಪ್ತರೊಡನೆ ಮಾತುಕತೆಯಾಡುವುದು ಅವರಿಗೆ ಪ್ರಿಯವಾಗಿತ್ತು. ನಾನು ಎಚ್ಚೆಸ್ವಿ, ಲಕ್ಷ್ಮಣರಾವ್, ಶಿವಮೊಗ್ಗ ಸುಬ್ಬಣ್ಣ, ಶೂದ್ರ ಶ್ರೀನಿವಾಸ್ ಹಾಗೆ ಅನೇಕ ಸಲ ಅವರೊಟ್ಟಿಗೆ ಮಾತನಾಡಿದ್ದುಂಟು. ಹಾಗೆ ನೋಡಿದರೆ ಜಿಎಸ್ಎಸ್ ವಾಚಾಳಿಯಲ್ಲ. ನಿರರ್ಗಳವಾಗಿ ಮಾತನಾಡುವುದು ಅವರ ಸ್ವಭಾವಕ್ಕೆ ಒಗ್ಗದ ಸಂಗತಿ. ಆಡುವ ಮಾತನ್ನು ತೂಗಿ ತೂಗಿ ಆಡುತ್ತಿದ್ದರು. ವೇದಿಕೆಯ ಮೇಲೆ ನಿಂತಾಗಲೂ ಅಷ್ಟೆ- ಆಕರ್ಷಕವಾಗಿ ಮಾತನಾಡಿ ಗಮನ ಸೆಳೆಯುವುದು ಅವರ ರೀತಿಯಾಗಿರಲಿಲ್ಲ. ತಾವು ಹೇಳಬೇಕಾದುದನ್ನು ಔಚಿತ್ಯವರಿತು, ಹದಗೆಡದಂತೆ ಗಂಭೀರವಾಗಿ ಹೇಳುವುದು ಅವರ ಕ್ರಮ. ಸಿದ್ಧವಾಗದೇ ಅವರು ಮಾತನಾಡಿದ್ದೇ ಇಲ್ಲ. ಯಾವ ಸಭೆ ಸಮಾರಂಭವಾದರೂ ಅವರ ಕೈಯಲ್ಲಿ ಸಿದ್ಧಪಡಿಸಿ ತಂದ ಟಿಪ್ಪಣಿಯ ಹಾಳೆಗಳಿರುತ್ತಿದ್ದವು.
ಇಂಥ ಒಂದು ದಿನ ನಾನು ಎಚ್ಚೆಸ್ವಿ ಮೇಸ್ಟ್ರ ಮನೆಗೆ ಹೋದಾಗ ಹೊರಗೆ ಹಿತವಾದ ಬಿಸಿಲು, ಒಳಗೆ ಜಿಎಸ್ಎಸ್ ಅವರ ಪ್ರೀತಿಯ ಮಾತುಕತೆ. ಮಾತುಕತೆಯೆಂದರೆ ಯಥಾಪ್ರಕಾರ ಬದುಕು ಸಾಹಿತ್ಯ ಕುರಿತ ಗಂಭೀರ ಚರ್ಚೆಯೇ. ಸುಮ್ಮನೆ ಹರಟುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ಈಗ ಅವರು ತಡೆತಡೆದು ಮಾತನಾಡುತ್ತಿದ್ದರು. ಹೆಚ್ಚು ಮಾತನಾಡಿದರೆ ಅವರಿಗೆ ಆಯಾಸವಾಗುತ್ತಿತ್ತು. ದೇಹ ಕುಗ್ಗಿತ್ತು. ಸಹಜವಾಗಿಯೇ ನಮ್ಮ ಮಾತು ದೇಹ-ಮನಸ್ಸುಗಳ ಸಂಬಂಧದತ್ತ ಹರಿಯಿತು.
ಜಿಎಸ್ಎಸ್ ಹೇಳಿದರು: ದೇಹ ಮತ್ತು ಮನಸ್ಸು ಪರಸ್ಪರ ಅವಲಂಬಿತವಾಗಿವೆ. ದೇಹ ಆಯಾಸಗೊಂಡಾಗ ಮನಸ್ಸೂ ಸಹಜವಾಗಿಯೇ ಕುಗ್ಗುತ್ತದೆ. ಈಗಂತೂ ಅನಾರೋಗ್ಯದ ಪರಿಣಾಮವಾಗಿ ದೇಹ ಬಳಲಿದೆ. ಸೃಜನಶೀಲ ಶಕ್ತಿಗೆ ಯಾರೋ ಬೀಗ ಜಡಿದು ಹೋದಂತೆ ಭಾಸವಾಗುತ್ತಿದೆ. ಕೀ ಇಲ್ಲದ ಸ್ಥಿತಿ. ದೇಹದ ಬಳಲಿಕೆಯ ಭಾರಕ್ಕೆ ಮನಸ್ಸು ಕುಸಿಯುವ ಹಾಗೆ ನೋಡಿಕೊಳ್ಳುವುದೇ ಬಹುಮುಖ್ಯ ಸವಾಲು. ಇಂತಹ ಹೊತ್ತಿನಲ್ಲಿ ಒಳ್ಳೆಯ ಪುಸ್ತಕಗಳು ನಮ್ಮನ್ನು ರಕ್ಷಿಸುತ್ತವೆ. ಅತ್ಯುತ್ತಮ ಕೃತಿಗಳನ್ನು ಓದಿದಾಗ ಮನಸ್ಸು ಉಲ್ಲಾಸ ತಾಳುತ್ತದೆ, ಹೊಸ ಬಗೆಯ ಚೈತನ್ಯ ಮೂಡುತ್ತದೆ. ಪ್ರಿಯರಾದವರ ಜೊತೆ ಮಾತನಾಡಿದರೆ ದೇಹ ಹಗುರವಾಗುತ್ತದೆ. ಸುತ್ತಮುತ್ತಲಿನ ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿನ ಕುಸಿತವನ್ನು ತಡೆಯಲು ನೆರವಾಗುತ್ತದೆ. ಬರೆಯುವುದು ಕಷ್ಟ, ಆದರೆ ಓದಲು ತೊಂದರೆಯಿಲ್ಲ.
ನಾನು ಕೇಳಿದೆ- ಇಷ್ಟು ದೀರ್ಘಕಾಲದ ಬದುಕಿನ ನಂತರ ಹಿಂತಿರುಗಿ ನೋಡಿದಾಗ ಏನನ್ನಿಸುತ್ತದೆ?
ಜಿಎಸ್ಎಸ್ ಹೇಳಿದರು: ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಯಿತಲ್ಲ ಎಂಬ ಸಮಾಧಾನ; ಹೀಗೆ ಸಾಧಿಸಿದೆ ಎಂಬ ಬೆರಗು. ಅನೇಕ ಸವಾಲುಗಳನ್ನು ಕಾಲಕಾಲಕ್ಕೆ ಸ್ವೀಕರಿಸುತ್ತಲೇ ನನ್ನ ಬದುಕು ರೂಪುಗೊಂಡಿದೆ. ಎಂದೂ ಗೆರೆದಾಟದ ನಾನು ಸವಾಲುಗಳನ್ನೆಲ್ಲ ಸ್ವೀಕರಿಸಿಯೇ ಮಾಡಬೇಕಾದ ಕರ್ತವ್ಯ ವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದೇನೆ.
ಎಂಭತ್ತಾದರೇನು ಎಂಟುನೂರಾದರೇನು
ಇದ್ದಲ್ಲೇ ಬಿದ್ದು ಕೊನರದ ಕೊರಡಿಗೆ?
ನಿಜವಾಗಿಯೂ ನಾವು ಸೃಜನಶೀಲವಾಗಿ
ಬದುಕಿದ್ದೆಷ್ಟು? ಅಂಥ ಘಳಿಗೆಗಳ ಮೊತ್ತವೇ
ಕವಿ-ಕಲಾವಿದರ ಸಾರ್ಥಕವಾದ ಆಯುಷ್ಯ.
ಯಾವತ್ತೂ ಬೆನ್ನಟ್ಟಿ ಹೋದವನಲ್ಲ
ನಾನು, ಬಂಗಾರದ ಚಿಂಕೆಯ ಹಿಂದೆ
ನಾನು ನನ್ನದೇ ಅದೊಂದಿಷ್ಟು ನೆಲವ-
ನ್ನುತ್ತು ಬಿತ್ತಿ ಫಸಲು ತೆಗೆದಿದ್ದೇನೆ.
ಕತ್ತಲೆಯ ಓಣಿಗಳಲ್ಲಿ ಹಣತೆ ಹಚ್ಚಿದ್ದೇನೆ.
ಜಿಎಸ್ಎಸ್ 'ಅವಲೋಕನ' ಎಂಬ ತಮ್ಮ ಈ ಕವಿತೆಯನ್ನು ಓದಿ ಹೇಳಿದರು. ಮೀಮಾಂಸೆ, ವಿಮರ್ಶೆಯ ಕ್ಷೇತ್ರದಲ್ಲಿ ಶಿವರುದ್ರಪ್ಪನವರು ಮಹತ್ವದ ಕೆಲಸ ಮಾಡಿದ್ದರೂ ಮೂಲತಃ ಅವರು ಕವಿ. ಕಾವ್ಯದ ಮೂಲಕ ಮಾತನಾಡುವುದೇ ಅವರಿಗೆ ಪ್ರಿಯವಾದ ರೀತಿ. ಎಚ್ಚೆಸ್ವಿ ಕೇಳಿದರು-ನಿಮ್ಮ ಕೃತಿಗಳಲ್ಲಿ ನಿಮಗೆ ಯಾವುದು ಪ್ರಿಯ? ಜಿಎಸ್ಎಸ್ ತಕ್ಷಣ ಉತ್ತರಿಸಲಿಲ್ಲ. ಮೌನಿಯಾದರು. ಎಚ್ಚೆಸ್ವಿ ಮತ್ತೆ ಕೇಳಿದರು- ನಿಮ್ಮ ಯಾವ ಸಂಕಲನ ನಿಮಗೆ ಇಷ್ಟ? ಜಿಎಸ್ಎಸ್ ನಿಧಾನ ವಾಗಿ ತಲೆಯೆತ್ತಿ 'ದೀಪದ ಹೆಜ್ಜೆ' ಮತ್ತು 'ವ್ಯಕ್ತಮಧ್ಯೆ'. ಆಧುನಿಕ ಕನ್ನಡ ಕಾವ್ಯದಲ್ಲಿ ಬೇಂದ್ರೆಯವರ 'ಜೋಗಿ', ಕುವೆಂಪು ಅವರ 'ದೇವರು ರುಜು ಮಾಡಿದನು', ಪುತಿನ ಅವರ 'ಚಿಕುಹೂ'-ನನ್ನನ್ನು ಕಾಡುವ ಕವಿತೆಗಳು ಎಂದರು. ಅಷ್ಟರಲ್ಲಿ ಮಾತು ಬೇರೆಡೆಗೆ ಹೊರಳಿತು.
ದೇವರ ಬಗೆಗಿನ ಪರಿಕಲ್ಪನೆಯ ಬಗ್ಗೆ ಪ್ರಸ್ತಾಪಿಸಿದಾಗ ಜಿಎಸ್ಎಸ್ ಹೇಳಿದರು: ದೇವರ ಬಗೆಗಿನ ಪರಂಪರಾಗತ ರೂಢಿಯ ಪರಿಕಲ್ಪನೆ ಬಗ್ಗೆ ನನಗೆ ಆಸಕ್ತಿ ಇಲ್ಲ, ಆ ಬಗೆಯ ದೇವರು ಇದ್ದರೂ ಇರಬಹುದು. ಇದ್ದುಕೊಳ್ಳಲಿ ಬಿಡಿ. ಅದನ್ನು ಬೇಕಾದರೆ 'ಚೈತನ್ಯ' ಎಂದು ಕರೆಯಬಹುದು. ಯಾವ ಶಕ್ತಿಯೂ ಇಲ್ಲದೆ ಇರುವುದು ಹೇಗೆ ಸಾಧ್ಯ? ವಚನ ಚಳವಳಿಯಲ್ಲಿಯೂ ನನಗೆ ಅವರ ಭಕ್ತಿಯ ನೆಲೆಗಿಂತ ವೈಚಾರಿಕ ನೆಲೆಯೇ ಮುಖ್ಯ. 'ಉಳ್ಳವರು ಶಿವಾಲಯವ ಮಾಡುವರು...' ಎಂತಹ ಅದ್ಭುತ ಪರಿಕಲ್ಪನೆ! ಭಕ್ತ ಭಂಡಾರಿ ಬಸವಣ್ಣನಿಗಿಂತ ಸಮಾಜ ಸುಧಾರಕ ಬಸವಣ್ಣನ ಬಗ್ಗೆಯೇ ನನಗೆ ಹೆಚ್ಚು ಆಸಕ್ತಿ.
ರಾಜಕೀಯದ ಬಗ್ಗೆ ಮಾತು ಹೊರಳಿದಾಗ ಶಿವರುದ್ರಪ್ಪನವರು ರಾಜಕೀಯ ಮತ್ತು ಸಾಹಿತ್ಯದ ಸಂಬಂಧಕ್ಕೆ ಈಗಲೂ ನನಗೆ ಪಂಪನೇ ಮಾದರಿ ಎಂದರು. ರಾಜಕೀಯ ಒಂದು ಅಧಿಕಾರ ಕೇಂದ್ರ. ಆ ಅಧಿಕಾರ ಕೇಂದ್ರದ ಜೊತೆ ಸ್ನೇಹ ಸಂಬಂಧ ಇರಲೇಬೇಕು ಹೊರತು ಅಧೀನವಾಗಬಾರದು. ಸ್ವಾಭಿಮಾನವನ್ನು ಒತ್ತೆಯಿಟ್ಟು ಅಧಿಕಾರ ಕೇಂದ್ರವನ್ನು ಕನ್ನಡ ಮನಸ್ಸು ಎಂದೂ ಓಲೈಸಿಲ್ಲ. ಈಗಲೂ ಈ ಬಗೆಯ ಸಂಬಂಧವೇ ಅರ್ಥಪೂರ್ಣವೆನಿಸುತ್ತದೆ.
ಈಗ ನಿಮ್ಮನ್ನು ಗಾಢವಾಗಿ ಕಾಡುತ್ತಿರುವ ಸಂಗತಿ?
ಜಿಎಸ್ಎಸ್ ಹೇಳಿದರು: ಮೌಲ್ಯಗಳ ಅಧಃಪತನ. ನಮ್ಮ ಯುವ ಮನಸ್ಸುಗಳಿಗೆ ಮಾರ್ಗದರ್ಶನ ಮಾಡಬಲ್ಲ ಚೇತನಗಳೇ ಕಾಣುತ್ತಿಲ್ಲ. ನಮ್ಮ ರಾಜಕೀಯ ಪರಿಸರದ ಭ್ರಷ್ಟತೆ ಎಲ್ಲ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಈ ಕಾಲವು ಹಲವು ಸಮುದಾಯಗಳ ಪಾಲಿಗೆ 'ಮುಂಬೆಳಗೂ ಹೌದು', ಒಟ್ಟು ಜನಪದಕ್ಕೆ ಅಸಹನೀಯವಾದ ಕಾಳರಾತ್ರಿಯೂ ಹೌದು.
ಹಾಗಾದರೆ ನಮ್ಮ ಮುಂದಿನ ಹಾದಿ?
ಇಂದಿನ ಸಂದರ್ಭದಲ್ಲಿ ನಮ್ಮ ಮಣ್ಣು, ನೀರು, ಗುಡ್ಡ, ಬೆಟ್ಟಗಳು, ಕೆರೆ ಕಾಲುವೆಗಳು, ಕಾಡು ಕಣಿವೆಗಳು ಇವೆಲ್ಲವನ್ನೂ ನಾವು ಹೊಸಬೆಳಕಿನಲ್ಲಿ ನೋಡಬೇಕಿದೆ. ನಮ್ಮ ಸಕಲಚೈತನ್ಯದ ಮೂಲಸೆಲೆಗಳಾದ ಇವುಗಳನ್ನು ಹೊಸ ನೆಲೆಗಳಿಂದ ಪರಿಭಾವಿಸಬೇಕಾಗಿದೆ. ನಮ್ಮ ಜನಪದ, ಸ್ಥಳೀಯ ಸತ್ವದ ಸಕಲ ವಿದ್ಯೆಗಳು, ಕಲೆ, ಸಂಸ್ಕೃತಿ ಎಲ್ಲವನ್ನೂ ಅಪಾರ ಕಾಳಜಿಯಿಂದ ರಕ್ಷಿಸಬೇಕಿದೆ. ಹೀಗಾದಾಗ ಮಾತ್ರ ನಮ್ಮ ನಿಜವಾದ ಸತ್ವ ಪೂರ್ಣಪ್ರಮಾಣದಲ್ಲಿ ಪ್ರಕಟಗೊಳ್ಳಲು ಸಾಧ್ಯ. ಕನ್ನಡನಾಡಿನ ಸಂಪನ್ಮೂಲಗಳು ದುರುಪಯೋಗವಾಗದ ಹಾಗೆ ನಾವು ತಡೆಯಬೇಕಿದೆ. ಕನ್ನಡ ಜನಪದದ ಒಟ್ಟು ಬದುಕು ಚೈತನ್ಯಶಾಲಿಯಾಗಬೇಕಾದ ಸಾಧ್ಯತೆಗಳತ್ತ ನಾವು ಚಿಂತಿಸಬೇಕಿದೆ.
ಜಿಎಸ್ಎಸ್ ಕಡೆಯ ಗಳಿಗೆಯವರೆಗೂ ಹಾಗೆ ನಾಡು-ನುಡಿ-ಜನಪದದ ಬಗೆಗೆ ಚಿಂತಿಸುತ್ತಿದ್ದರು. ನಮ್ಮ ಬದುಕು ಹಸನಾಗಬೇಕಾದ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದರು; ಇತರರನ್ನು ಯೋಚನೆಗೆ ಹಚ್ಚುತ್ತಿದ್ದರು. ನಮ್ಮ ನಡುವೆ ಇದ್ದ ಚಿಂತನಶೀಲ ಧೀಮಂತ ಚೇತನ ಡಾ. ಜಿಎಸ್ಎಸ್.
- ನರಹಳ್ಳಿ ಬಾಲಸುಬ್ರಹ್ಮಣ್ಯ
ವಿಮರ್ಶಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


