ಅಡುಗೆ ಅನಿಲ ಸೃಷ್ಟಿಸಿರುವ ಅವಾಂತರ
ಇತ್ತೀಚೆಗೆ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ, ಸಬ್ಸಿಡಿ ಅಡುಗೆ ಅನಿಲವನ್ನು ವಿತರಿಸುವಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿ, ಅದು ಅರ್ಹರಿಗೆ ಮಾತ್ರ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳ ಹೊರಟಿರುವುದು ಶ್ಲಾಘನೀಯ. ಆದರೂ ಸಹ, ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುವೆವು ಎಂಬ ಮನೋಭಾವದ ಈ ಸಮಾಜ, ಈ ಮೇಲಿನ ಕ್ರಮದ ಮೂಲ ಆಶಯಗಳನ್ನೇ ಬುಡ ಮೇಲು ಮಾಡಿದೆ. ನಿಯಮದ ಪ್ರಕಾರ ಒಂದು ಅನಿಲ ಸಂಪರ್ಕದ ಹೆಸರಿನಲ್ಲಿ, ಸರ್ಕಾರ ನೀಡುವ ಸಬ್ಸಿಡಿ, ವಿತರಕರ ಅಥವಾ ಅನ್ಯರ ಪಾಲಾಗದಿರಲಿ ಎಂಬ ಸದುದ್ದೇಶದಿಂದ, ಇಲಾಖೆ ಆನ್ ಲೈನ್ ಬುಕ್ಕಿಂಗ್ ಆರಂಭಿಸಿತು. ಆದರೆ ಅದೆಷ್ಟೋ ವಿತರಕರು, ಇಂದಿಗೂ ಕೂಡಾ ಆನ್ಲೈನ್ ಬುಕ್ಕಿಂಗ್ ಅನ್ನು ಅನುಷ್ಠಾನಕ್ಕೇ ತಂದಿಲ್ಲ.
ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಪ್ರಸಕ್ತ ಸನ್ನಿವೇಶದಲ್ಲಿ, ಅನಿಲ ಸಂಪರ್ಕವೊಂದರ ಹೆಸರಿನಲ್ಲಿ ಸರ್ಕಾರದ ನಿಯಮಾನುಸಾರ ವ್ಯಕ್ತಿಯೊಬ್ಬ ವರ್ಷವೊಂದಕ್ಕೆ ಹೆಚ್ಚೆಂದರೆ 9 ಸಿಲಿಂಡರ್ಗಳನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ. ಆದರೆ ಬಳಕೆದಾರನ ಕುಟುಂಬದ ಗಾತ್ರ ತೀರಾ ಚಿಕ್ಕದಾಗಿದ್ದು, ಆತನ ವಾರ್ಷಿಕ ಅಗತ್ಯ ಕೇವಲ 2-4 ಸಿಲಿಂಡರ್ಗಳಿಗೇ ಸೀಮಿತವಾಗಿ ಬಿಡಬಹುದು. ಇಂಥಹ ಸಂದರ್ಭದಲ್ಲಿ ಈ ಅವಕಾಶವಾದಿ ವಿತರಕರು ಹಾಗೂ ಈ ಡೆಲಿವೆರಿ ಬಾಯ್ಗಳ ನಡುವೆ ಅಪವಿತ್ರ ಮೈತ್ರಿ ಒಳ ಒಪ್ಪಂದವೇನಾದರೂ ಏರ್ಪಟ್ಟರೆ, ಅಲ್ಲಿಗೆ ತೀರಿತು. ಆ ವಿತರಕನು ಈ ಮೇಲೆ ತಿಳಿಸಿದಂಥಹ ಬಳಕೆದಾರನ ಹೆಸರಿನಲ್ಲಿ, ಆ ಗ್ರಾಹಕನು ತನ್ನ ಕೋಟಾದಲ್ಲಿದ್ದೂ ಸಹಾ, ಬುಕ್ ಮಾಡದೆ ಇರುವ, ಸಿಲಿಂಡರ್ಗಳ ಜಾಡನ್ನು ಅನುಸರಿಸಿ ಗುರುತಿಸಿಕೊಂಡರೆ, ಇವನ ಕೋಟಾದಲ್ಲಿ ಬಳಸದೆಯೆ ಉಳಿದಿರುವ ಬಾಕಿ ಸಿಲಿಂಡರ್ಗಳನ್ನು, ಅರ್ಹ ಬಳಕೆದಾರನೇ ಬುಕ್ ಮಾಡಿರುವಂತೆ ಸುಳ್ಳು ದಾಖಲೆ ಸೃಷ್ಟಿಸಿ, ಅದನ್ನು ಮತ್ತೊಬ್ಬರಿಗೆ ಮಾರಿಕೊಂಡರೆ, ಮೂಲ ಅನಿಲ ಸಂಪರ್ಕ ಗ್ರಾಹಕನಿಗೆ, ಯಾವುದೇ ಗ್ಯಾಸ್ ಬುಕ್ ಮಾಡದೆಯೆ ಅನಾಯಾಸವಾಗಿ, ಸಬ್ಸಿಡಿ ಹಣ ಅವನ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ. ಇದರಿಂದ ಈತನೂ ಸಹಾ ಖುಷಿಯಾಗುವನು. ಹಾಗೆಯೇ ಅತ್ತ ಕಮರ್ಶಿಯಲ್ ಸಿಲಿಂಡರ್ನಷ್ಟು ದುಬಾರಿ ಹಣ ತೆರದೆ, ಸ್ವಲ್ಪವೇ ಹೆಚ್ಚಿನ ಬೆಲೆ ತೆತ್ತು, ಈ ಸಿಲಿಂಡರ್ ಕೊಳ್ಳುವ ಗಿರಾಕಿಯೂ ಖುಷಿಯಾಗುತ್ತಾನೆ! ಈ ಸಬ್ಸಿಡಿ ಸೋರಿಕೆ ಸರ್ಕಾರಕ್ಕೆ ಮಾತ್ರ ನಷ್ಟವನ್ನು ಉಂಟುಮಾಡುತ್ತಿದೆ. ಆದರೆ ಇಂಥ ಸರಳ ಸತ್ಯಗಳು, ಇಲಾಖೆಯ ಗಮನಕ್ಕೆ ಬಂದಿಲ್ಲವೇ? ಇವರ ಬಳಿ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಹೋದ ಯಾವುದೇ ಶಿಕ್ಷಿತ ಸಮುದಾಯದ ಗ್ರಾಹಕನನ್ನೂ ಸಹಾ ಇವರು ಓರ್ವ ಹೆಬ್ಬೆಟ್ಟಿನವನನ್ನಾಗಿ ಮಾಡಿ, ಸಂಪರ್ಕ ಪಡೆಯುತ್ತಿರುವ ಮುಲಾಜಿಗೆ, ವಿತರಕ ಹೇಳಿದ್ದಕ್ಕೆಲ್ಲಾ ಕೋಲೇ ಬಸವನಂತೆ ತಲೆಯಾಡಿಸಿ, ಅವನು ಹೇಳಿದಷ್ಟು ದುಬಾರಿ ಬೆಲೆ ತೆತ್ತು, ಇನ್ನಿತರೆ ಪರಿಕರಗಳನ್ನು ಕೊಂಡು, ಗಿರಾಕಿಯು ಅನಿಲ ಸಂಪರ್ಕ ತನ್ನದಾಗಿರಿಸಿಕೊಳ್ಳುತ್ತಾನೆ. ಇಲ್ಲಿ ಯಾವುದೇ ಗ್ರಾಹಕ ಪ್ರಜ್ಞೆ ಇದನ್ನು ಕೊಳ್ಳುವವನಲ್ಲಿ ಜಾಗೃತವಾಗುವುದೇ ಇಲ್ಲ. ಈ ಹೊಸ ಸಂಪರ್ಕ ಪಡೆಯುವಾಗ, ಗ್ಯಾಸ್ ಸ್ಟೌವ್, ರಬ್ಬರ್ ಹೋಸ್ ಹಾಗೂ ರೆಗ್ಯುಲೇಟರ್ಗಳನ್ನು ಬಲವಂತದಿಂದ ಗಿರಾಕಿಯ ಮೇಲೆ ಹೇರದಂತೆ ಸಂಬಂಧಿಸಿದ ಇಲಾಖೆ, ಗ್ರಾಹಕನ ಹಿತ ರಕ್ಷಣೆ ಮಾಡದೆಯೆ, ಅತ್ತ ಈ ಬಲವಂತದ ಹೇರಿಕೆಯ ಪ್ರಕ್ರಿಯೆ, ಸಂಬಂಧ ಪಟ್ಟ ಇಲಾಖೆಯ ಮೂಗಿನ ಕೆಳಗೆಯೇ ನಡೆದರೂ ಸಹಿತ, ಇಲಾಖೆಯವರು ಕಣ್ಣುಮುಚ್ಚಿ ಕೊಂಡು ಕುಳಿತಿರುವುದು ಆಶ್ಚರ್ಯದ ವಿಷಯ.
ಹಾಗೆಯೇ ಮತ್ತೊಂದೆಡೆ ವಿತರಕರು ಕಂಪೆನಿ ನಿಯಮದ ಪ್ರಕಾರ ಸಿಲಿಂಡರ್ಗಳನ್ನು, ಗ್ರಾಹಕರ ಮನೆ ಬಾಗಿಲಿಗೇ ಉಚಿತವಾಗಿ ತಲುಪಿಸಬೇಕಾಗಿದೆ. ಆದರೆ ಮನೆ ಬಾಗಿಲಿಗೆ ತಲುಪಿಸುವ ಡೆಲಿವರಿ ಬಾಯ್ಗಳು ಗ್ರಾಹಕರಿಂದ ಅನಗತ್ಯವಾಗಿ ಹೆಚ್ಚುವರಿ ಹಣ ಸುಲಿದು ಶೋಷಿಸುತ್ತಿದ್ದಾರೆ. ಈ ದಂಧೆಗೆ ಕಡಿವಾಣ ಹಾಕಲು, ಇಲಾಖೆ ಸರ್ಪ್ರೈಸ್ ಚೆಕ್ಗಳನ್ನು ಮಾಡಿ, ಈ ಡೆಲಿವರಿ ಬಾಯ್ಗಳ ಮೇಲೆ ನಿಗಾ ಇಟ್ಟು, ಅವರು ಯಾವ ಕಾರಣಕ್ಕೂ, ಡ್ಯೂಟಿ ವೇಳೆಯಲ್ಲಿ, ಅವರೊಟ್ಟಿಗೆ, ಗ್ರಾಹಕರು ಪಾವತಿಸಿರುವ ಹಣದ ವಿನಹ, ನಯಾ ಪೈಸೆಯೂ ಅವರ ಜೇಬಿನಲ್ಲಿ ಇರಬಾರದು ಎಂಬ ಕಾಯಿದೆ ತರಬೇಕು. ಇಲಾಖೆ ಯಾವಾಗ ಮಧ್ಯ ಪ್ರವೇಶಿಸಿ, ಗ್ರಾಹಕನ ಹಿತ ಕಾಯುವುದೋ ಕಾದು ನೋಡ ಬೇಕು.
- ನಾಗಮಂಗಲ ನರಸಿಂಹಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

