ಮಂಗಳಮುಖಿಯರನ್ನು ದೂರಮಾಡುವುದು ಬೇಡ

ನಮ್ಮೆದುರೇ, ನಮಗರಿವಿಲ್ಲದೆಯೇ, ನಮ್ಮ ಮಧ್ಯೆಯೇ, ತಿರಸ್ಕಾರ, ಬಹಿಷ್ಕಾರ, ಅಪಮಾನಕ್ಕೊಳಗಾಗುವವರು ಈ ಮಂಗಳಮುಖಿಯರು. ಸಮುದಾಯಗಳ ಪರವಾಗಿ, ಶೋಷಿತರ ಪರವಾಗಿ, ಮಹಿಳೆಯರ ಪರವಾಗಿ ಧ್ವನಿ ಎತ್ತುವ ಹೋರಾಟಗಾರರಿಗೆ ಈ ದೇಶದ ಜಾತಿಯತೆ, ಅಸ್ಪೃಶ್ಯತೆ ಬಹುದೊಡ್ಡ ಸಮಸ್ಯೆಯಾಗಿ ಕಾಣುತ್ತಿರುವುದು ನಿಜಸಂಗತಿ. ನಾನುಕೂಡ ಅನೇಕ ಸಂದರ್ಭಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗಿಂತ ಅಸ್ಪೃಶ್ಯತೆ ಬಹುದೊಡ್ಡ ಸಮಸ್ಯೆ ಎಂದು ಹೇಳಿದ್ದೇನೆ.
ಆದರೆ ನಮ್ಮ ಮಧ್ಯೆಯೇ ಬೆರಳೆಣಿಕೆಯಷ್ಟು ಕಂಡುಬರುವ ಗಂಡಿನಂತೆ ಕಾಣುವ ಪುರುಷರೊಂದಿಗೆ ಬೆರೆಯದ, ಹೆಣ್ಣಿನಂತೆ ಹೊಲುವ ಸ್ತ್ರೀಯರೊಂದಿಗೆ ಗುರುತಿಸಿಕೊಳ್ಳದ ಈ ಮಂಗಳಮುಖಿಯರ ಬದುಕು ಮತ್ತು ಜೀವನದ ಬಗ್ಗೆ ಅಷ್ಟಾಗಿ ನಾವ್ಯಾರೂ ಗಮನ ಹರಿಸುವುದಿಲ್ಲ. ಹೆಣ್ಣೆಂದರೆ ರೈಲ್ವೆ ಸ್ಟೇಷನ್ನಲ್ಲೋ, ಬಸ್ನಿಲ್ದಾಣದಲ್ಲೋ, ಫೀ ಸಂಗ್ರಹಿಸುವ ಟೋಲ್ಗಳಲ್ಲೋ, ಟ್ರಾಫಿಕ್ ಸಿಗ್ನಲ್ ಬಿದ್ದ ವೇಳೆ ನಮ್ಮ ವಾಹನಗಳ ಬಳಿ ಬಂದರೆ ಜೇಬಿನಲ್ಲಿದ್ದಷ್ಟು ಚಿಲ್ಲರೆ ಕಾಸು ಕೊಟ್ಟು ಸಾಗುಹಾಕುತ್ತೇವೆ. ಕೆಲವರು ಅವರಿಂದ ತಪ್ಪಿಸಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಾರೆ ಮತ್ತು ಕೆಲವರು ಅವರನ್ನು ನೋಡುವ ದೃಷ್ಟಿಯೇ ಬೇರೆ. ಇವರ ಜೀವನವೇ ಹೀಗೆ. ಭಿಕ್ಷಾಟನೆ ಅಥವಾ ಲೈಂಗಿಕ ಕಾರ್ಯಕರ್ತೆಯರಾಗಲಷ್ಟೇ ಇವರು ಬದುಕು ಎಂದು ಭಾವಿಸುವುದು ಸಹಜವಾಗಿದೆ. ಇವರ ಬದುಕಿನ ಬಗ್ಗೆ ಸಮಾಜದಲ್ಲಿ ಚಿಂತಿಸುವ ಯಾರೇ ಆದರೂ ಸೂಕ್ಷ್ಮ ಮನಸ್ಸಿನಿಂದ ಯೋಚಿಸಿದ್ದಲ್ಲಿ ನಮ್ಮಂತೆ ಮಂಗಳಮುಖಿಯರೂ ಕೂಡ ಸುಮುದಾಯದ ಒಂದು ಭಾಗವಾಗಿ ಕಾಣಬಹುದು. ಪುರುಷ ಮತ್ತು ಸ್ತ್ರೀಯರು ದಾಖಲೆಗಳಲ್ಲಿ ಸ್ತ್ರೀಲಿಂಗ-ಪುಲ್ಲಿಂಗ ಎಂದು ನಮೂದಿಸಲು ಎಲ್ಲಾ ಅವಕಾಶಗಳಿವೆ. ಆದರೆ ಮಂಗಳ ಮುಖಿಯರು ಈ ಎರಡು ಲಿಂಗಗಳಿಂದ ಬೇರ್ಪಟ್ಟ ಮೂರನೇ ಲಿಂಗ. ಆ ಕಾರಣಕ್ಕಾಗಿಯೇ ಇವರು ಮೇಲಿನ ಯಾವ ಲಿಂಗದ ಪಟ್ಟಿಯಲ್ಲಿ ಸೇರದೇ ಅತಂತ್ರರಾಗಿರುವುದಕ್ಕೆ ಮೂಲ ಕಾರಣ. ಪ್ರೌಢಾವಸ್ಥೆಯ ಬೆಳವಣಿಗೆಯ ಸಂದರ್ಭದಲ್ಲಿ ಕೆಲವೊಬ್ಬರಿಗೆ ಮಾತ್ರ ಸಂಭವಿಸುವ ಹಾರ್ಮೋನ್ಗಳ ವೈಪರಿತ್ಯದ ಸ್ಥಿತಿಯೇ ಹೆಣ್ಣಾದವರು ಗಂಡಿನಂತೆ ವರ್ತಿಸಲು, ಗಂಡು ಹೆಣ್ಣಿನಂತೆ ನಾಚಿಕೆ ಪಡುವ ಸ್ವಭಾವ ಪ್ರಾರಂಭವಾಗಿ ಕ್ರಮೇಣ ಹೆಣ್ಣು ಅಲ್ಲ ಗಂಡು ಅಲ್ಲ ಅನ್ನುವ ಸ್ಥಿತಿ ಅವರದಾಗುತ್ತದೆ.
ಹಾಗೆ ಕಾಣುವ ಮತ್ತು ವರ್ತಿಸುವ ಮಾತ್ರಕ್ಕೇ ಅವರು ಅಸಮರ್ಥರಲ್ಲ. ಮಾನಸಿಕವಾಗಿ, ಬೌದ್ಧಿಕವಾಗಿ ಯಾರಿಗೇನು ಕಮ್ಮಿಯಿಲ್ಲ. ಅವರಲ್ಲೂ ವ್ಯವಹಾರಿಕ ಜ್ಞಾನವಿದೆ. ಸೌಂದರ್ಯ ಪ್ರಜ್ಞೆಯಿದೆ. ಅಂಜಿಕೆಯೂ ಇದೆ. ಇದೆಲ್ಲದರ ಮಧ್ಯೆ ಸ್ವಾವಲಂಬಿಯಾಗಿ ಬದುಕಬೇಕು ಎಂದು ಮಹದಾಕಾಂಕ್ಷೆಯೂ ಇದೆ. ಆದರೆ ಅದಕ್ಕೆ ಪ್ರಜ್ಞಾವಂತ ಸಮುದಾಯ ಬೆಂಬಲಿಸಬೇಕಷ್ಟೆ. ದಿನ ಪತ್ರಿಕೆಯೊಂದರಲ್ಲಿ ಬಂದಿದ್ದ, ರಸ್ತೆ ಬದಿಯಲ್ಲಿ ಢಾಬಾ ನಡೆಸುವ ಮೂಲಕ ಸ್ವಾವಲಂಬಿ ಬದುಕು ನಡೆಸುವ ಮಂಗಳ ಮುಖಿಯರ ಕುರಿತ ವರದಿ ನೋಡಿದ ನಂತರವಷ್ಟೇ ನನಗಾದರೂ ಅವರ ಬದುಕಿನ ಬಗ್ಗೆ ತಿಳಿಯುವ ಆಸಕ್ತಿ ಹುಟ್ಟಿದ್ದು. ಹಾಗೆ ನೋಡಿದರೆ ಈ ಸಮಾಜದಲ್ಲಿ ಶೋಷಿತರು, ಅಸ್ಪೃಶ್ಯರು ದೌರ್ಜನ್ಯಕ್ಕೊಳಗಾಗುತ್ತಾರೆ. ಮತ್ತು ಬಹಿಷ್ಕಾರಕ್ಕೊಳಗಾಗುತ್ತಾರೆ. ನಿಜ ಇವರೆಲ್ಲರಿಗೂ ನ್ಯಾಯಕೊಡಿಸುವ ಕಾನೂನುಗಳಿವೆ. ಹೊರಾಡುವ ಸಂಘಟನೆಗಳಿವೆ. ಧ್ವನಿ ಎತ್ತುವ ಅವಕಾಶವಂತೂ ಇದ್ದೆ ಇದೆ. ಆದರೆ ಮಂಗಳಮುಖಿಯರಿಗೆ ಮಾಡುವ ಅವಮಾನ, ತಿರಸ್ಕಾರ, ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾನೂನಿನ ನೆರವು ಬಿಡಿ, ಇವರ ಬಗ್ಗೆ ಧ್ವನಿ ಎತ್ತುವ ಸಂದರ್ಭವೇ ಸೃಷ್ಟಿಯಾಗುವುದಿಲ್ಲ. ಯಾಕೆಂದರೆ ಮಂಗಳಮುಖಿಯರನ್ನು ಯಾರೂ ಕೂಡ ಸಮುದಾಯದ ಒಂದು ಭಾಗವೆಂದು ತಿಳಿಯುವುದೂ ಇಲ್ಲ.
ಹಾಗೆ ನೋಡಿದರೆ, ಬೀದಿಬದಿಯಲ್ಲಿ ಭಿಕ್ಷಾಟನೆ ಮಾಡುವಂಥ ಬದುಕು ಇವರದಲ್ಲ. ಇವರ ಭಿಕ್ಷಾಟನೆಯ ಹಣ ದಿನಕ್ಕೆ ಸಾವಿರಾರು ರುಪಾಯಿಗಳು ದಾಟಬಹುದು. ಉಡುಗೆತೊಡುಗೆಗಳು ಸೌಂದರ್ಯ ಸಾಧನಗಳ ಬಳಕೆಯಿಂದ ತುಸು ಹೆಚ್ಚು ಇರುತ್ತದೆ. ಆದರೂ ಕೂಡ ಇವರ ಬಳಿ ಸಾಕಷ್ಟು ಹಣವಿದೆ ಎಂದ ಮಾತ್ರಕ್ಕೆ ವೋಲ್ವೋ ಬಸ್ಸಿನಲ್ಲೊ ಅಥವಾ ಎ.ಸಿ.ರೈಲಿನಲ್ಲೋ ಪ್ರಯಾಣಿಸಲು ಸಾಧ್ಯವಿಲ್ಲ. ಬಸ್ಸಿನಲ್ಲಿ ಸೀಟು ಕಾಯ್ದಿರಿಸಿದರೆ ಮಂಗಳ ಮುಖಿಯರು ಪುರುಷರ ಪಕ್ಕದಲ್ಲೇ ಕೂರಬೇಕೋ ಅಥವಾ ಸ್ತ್ರೀಯರ ಪಕ್ಕದ ಸೀಟಿನಲ್ಲಿ ಕೂರಬೇಕೊ? ಇದು ಪ್ರಶ್ನೆ. ಪುರುಷರ ಪಕ್ಕ ಕುಳಿತರೆ ಅವರು ಸೇರುವುದಿಲ್ಲ, ಸ್ತ್ರೀಯರ ಪಕ್ಕ ಕುಳಿತರೆ ಗಾಬರಿಗೊಳ್ಳುತ್ತಾರೆ. ಅಕಸ್ಮಾತ್ ಗಂಡಸರ ಪಕ್ಕ ಕುಳಿತರೆ, ಮಂಗಳ ಮುಖಿಯೊಂದಿಗೆ ಕುಳಿತ ವ್ಯಕ್ತಿಯನ್ನೇ ಸಂಶಯದಿಂದ ನೋಡುವ ಸಂದರ್ಭ ಇವತ್ತಿನದು. ಆ ಕಾರಣಕ್ಕೂ ಯಾವುದೇ ವ್ಯಕ್ತಿ ಇವರೊಂದಿಗೆ ಕೂರಲು ಅಂಜುತ್ತಾನೆ. ಇನ್ನು ರೈಲಿನಲ್ಲಂತೂ ಟಿಕೇಟ್ ಪಡೆದರೂ ಅವರು ಬಾಗಿಲಿನಲ್ಲಿಯೇ ಕುಳಿತು ಪ್ರಯಾಣಿಸಬೇಕು. ಇನ್ನು ಸಾರ್ವಜನಿಕ ಸ್ಥಳದಲ್ಲಿರುವ ಶೌಚಾಲಯಗಳು ಇವರಿಗೆ ಸ್ವಯಂ ಬಹಿಷ್ಕಾರ. ಪುರುಷರಿಗೋಸ್ಕರ ಮತ್ತು ಮಹಿಳೆಯರಿಗೋಸ್ಕರ ಎಂಬ ಎರಡೂ ಬೋರ್ಡ್ಗಳಲ್ಲಿ, ಕೊಠಡಿಗಳಲ್ಲಿ ಇಬ್ಬರಿಗೂ ಸಂಬಂಧಿಸಿದ ಮಂಗಳ ಮುಖಿಯರು ಯಾವ ಕೊಠಡಿಗೆ ಹೋಗಬೇಕು? ಹಣ ಕೊಟ್ಟು ಒಳ್ಳೆಯ ಹೋಟೆಲ್ಗೆ ಹೋಗಬೇಕೆಂದರೂ ಎಲ್ಲರಂತೆ ಅವರಿಗೆ ಪ್ರವೇಶ ನೀಡುವುದಿಲ್ಲ. ರಸ್ತೆಯ ಬದಿಯಲ್ಲಿಯೇ ಅವರು ಊಟ ಮಾಡಬೇಕು. ಪ್ರಯಾಣಿಸಬೇಕೆಂದರೆ ಲಾರಿಗಳೇ ಗತಿ. ಇವರಿಂದ ಯಾರಿಗೂ ತೊಂದರೆ ಇಲ್ಲವೆಂದು ಗೊತ್ತಿದ್ದರೂ ಇವರನ್ನು ಈ ಸಮಾಜ ಪ್ರತ್ಯೇಕವಾಗಿಸಿದೆ.
ಈ ಎಲ್ಲದರ ಮಧ್ಯೆಯೂ ಮಂಗಳಮುಖಿಯರು ಭಿಕ್ಷಾಟನೆಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸಬಹುದು. ಇತರರಂತೆ ತಾವೂ ದುಡಿಯಬಲ್ಲೆವು ಎಂಬುದನ್ನು ಚಿತ್ರದುರ್ಗದ ಬಳಿ ಢಾಬಾ ನಡೆಸುತ್ತಿರುವ ನಾಲ್ವರು ಮಂಗಳಮುಖಿಯರು ಇತರರಿಗೆ ಮಾದರಿಯಾಗಿದ್ದಾರೆ. ಇವರ ತಂಡದ ಮುಖ್ಯಸ್ಥೆ ಭಾವನಾ ಢಾಬಾ ಹೋಟೆಲ್ ಪ್ರಾರಂಭಕ್ಕೆ ಹೆಚ್ಚಿನ ಬಂಡವಾಳ ಹೂಡಿದ್ದಾರೆ. ದುಡಿಮೆಯಲ್ಲಿ ಬಂದ ಲಾಭದ ಹಣದಲ್ಲಿ ಸ್ಕೂಟಿಯನ್ನು ಖರೀದಿಸಿದ್ದಾರೆ. ಅವರು ಹೋಟೆಲ್ ವ್ಯವಹಾರ ವೃದ್ಧಿಯಾದರೆ ಮುಂದೆ ಕಾರಿನಲ್ಲಿ ಓಡಾಡುವ ಹಂಬಲ ಅವರಿಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ತಾವೂ ಸಹ ಇತರರಂತೆ ಬದುಕಬೇಕೆಂಬ ಹಂಬಲ ಮಂಗಳ ಮುಖಿಯರಿಗಿದ್ದರೂ, ವ್ಯವಸ್ಥೆಯಲ್ಲಿ ಅದಕ್ಕೆ ಪೂರಕ ವಾತಾವರಣವಿಲ್ಲ. ಪ್ರತಿಯೊಬ್ಬರೂ ಬದುಕುವ ಸ್ವಾತಂತ್ರದ ಜೊತೆಗೆ ಕಾನೂನಿನ ಬೆಂಬಲವೂ ಇದೆ. ಇದಾವುದರ ಬೆಂಬಲವಿಲ್ಲದ ಸೌಲಭ್ಯಗಳಿಂದ ವಂಚಿತವಾಗಿ ಸಮುದಾಯದಿಂದ ತಿರಸ್ಕಾರಕ್ಕೊಳಪಟ್ಟಿರುವ ಮಂಗಳ ಮುಖಿಯರಿಗೆ ಅನುಕಂಪದ ಬದಲಾಗಿ ಸ್ವಾಭಿಮಾನದ ಬದುಕಿಗೆ ನೇರವಾಗಬೇಕಿದೆ. ಭಾವನಾ ನಂತರ ಮಂಗಳ ಮುಖಿಯರಿಗೆ ಅವಕಾಶ, ಪ್ರೋತ್ಸಾಹ ಸಿಕ್ಕರೆ ಹೋಟೆಲ್ ಉದ್ಯಮವಷ್ಟೇ ಅಲ್ಲ, ಇತರೆ ವ್ಯವಹಾರಗಳಲ್ಲೂ ಸೈ ಎನಿಸಿಕೊಂಡು ಜೀವನ ಸಾಗಿಸಬಲ್ಲರು. ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಮಂಗಳ ಮುಖಿಯರ ಕ್ಷೇಮಾಭಿವೃದ್ಧಿ ಗೋಸ್ಕರವೇ 'ಸಂಗಮ' ಎಂಬ ಸಂಘಟನೆ ಕಾರ್ಯೋನ್ಮುಖವಾಗಿದೆ. ಹಿಂದಿನ ಮುಖ್ಯಮಂತ್ರಿ ಸದಾನಂದಗೌಡರು ಒಮ್ಮೆ ಬೆಂಗಳೂರಿನಲ್ಲಿ ಮಂಗಳ ಮುಖಿಯರ ಸಮಾವೇಶಕ್ಕೆ ಪ್ರೋತ್ಸಾಹಿಸಿ, ಒಂದಿಷ್ಟು ಬೇಡಿಕೆಗಳ ಈಡೇರಿಕೆಗೆ ಮುಂದಾಗಿದ್ದರು. ಆದರೆ ಕಾರ್ಯಗತವಾಗಲಿಲ್ಲ. ರಾಜ್ಯಸಭಾ ಸದಸ್ಯೆ ಜಯಶ್ರೀಯವರು ಮಂಗಳ ಮುಖಿಗೆ ತಮ್ಮ ವ್ಯಾಪ್ತಿಯಲ್ಲಿ ಉದ್ಯೋಗ ನೀಡಿರುವುದು ಮತ್ತು ನ್ಯಾಯಾಧೀಶರಾದ ಮಂಜುಳ ಚೆಲ್ಲೂರ್ ತಮ್ಮ ಅಧಿಕಾರ ಬಳಸಿ ಒಬ್ಬರಿಗೆ ಉದ್ದೋಗ ನೀಡಿರುವುದು ಆಶಾದಾಯಕ ಬೆಳವಣಿಗೆ. ಈ ನಡುವೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಳ್ಳಾರಿಯ ನಗರಪಾಲಿಕೆಗೆ ಓರ್ವ ಮಂಗಳ ಮುಖಿಯನ್ನು ಆಯ್ಕೆ ಮಾಡಿದ ಜನರನ್ನು ಅಭಿನಂದಿಸಬೇಕು. ಈಗಿರುವ ಸರ್ಕಾರದಲ್ಲಿ ಓರ್ವ ಕಲಾವಿದೆಯಾಗಿ ಜನಪರ ಕಾಳಜಿಯೊಂದಿಗೆ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವ ಉಮಾಶ್ರೀಯವರು ಮತ್ತು ಸಹದ್ಯೋಗಿಗಳು ಮಂಗಳ ಮುಖಿಯರ ಅಭಿವೃದ್ಧಿಗೆ ಆದ್ಯತೆ ನೀಡಿದರೆ ಗಂಡು ಹೆಣ್ಣುಗಳ ಜೊತೆಗೆ ಇವರ ಬದುಕು ಹಸನಾಗಬಹುದು.
- ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


