ಸಹಾಯ ಮಾಡಿದವರ ಹೆಸರು ಕೇಳಲು ಮರೆತೆ

ನಾಲ್ಕು ವರ್ಷಗಳ ಹಿಂದಿನ ಮಾತು. ನಾನು ಆಗ ತಾನೆ ಬೆಂಗಳೂರಿಗೆ ಬಂದಿದ್ದೆ. ಡಿಗ್ರಿ ಮುಗಿದಿತ್ತು. ಆದರೆ ನೌಕರಿ ಸಿಕ್ಕಿರಲಿಲ್ಲ.
Updated on: 

ನಾಲ್ಕು ವರ್ಷಗಳ ಹಿಂದಿನ ಮಾತು. ನಾನು ಆಗ ತಾನೆ ಬೆಂಗಳೂರಿಗೆ ಬಂದಿದ್ದೆ. ಡಿಗ್ರಿ ಮುಗಿದಿತ್ತು. ಆದರೆ ನೌಕರಿ ಸಿಕ್ಕಿರಲಿಲ್ಲ. ಹತ್ತಾರು ಕಂಪನಿಗಳಿಗೆ ಸರ್ಟಿಫಿಕೇಟ್‌ಗಳ ಒಂದೊಂದು ಕಂತೆಯನ್ನೇ ಅಂಚೆಯಲ್ಲಿ ಕಳಿಸಿದ್ದೆ. ಅದರೊಂದಿಗೆ- 'ಯಾವುದಾದರೂ ಒಂದು ಕೆಲಸ ಕೊಡಬೇಕೆಂದು' ವಿನಂತಿಸಿ ಒಂದು ಪತ್ರವನ್ನು ಇರಿಸಿದ್ದೆ. ಬೆಂಗಳೂರಿನಲ್ಲಿದ್ದ ಸಂಬಂಧಿಕರ ಮನೆಯ ವಿಳಾಸವನ್ನೇ ಕೇರಾಫ್ ಅಡ್ರೆಸ್ ಎಂದು ಬಳಸಿಕೊಂಡಿದ್ದೆ. ಅಪ್ಪ-ಅಮ್ಮನಿಗೆ ಸಮಾಧಾನ ಹೇಳಿ ಪುಟ್ಟ ಲಗೇಜ್‌ನೊಂದಿಗೆ ಒಂದು ದಿನ ಬೆಂಗಳೂರಿಗೆ ಬಂದೇ ಬಿಟ್ಟೆ.
ಒಂದು ವಾರದ ನಂತರ ಸಂದರ್ಶನವೊಂದಕ್ಕೆ ಕರೆ ಬಂತು. ಉತ್ಸಾಹದಿಂದಲೇ ನಡೆದು ಹೋದೆ. ಸಂದರ್ಶಕರ ಕುರ್ಚಿಯಲಿದ್ದ ಹಿರಿಯರೊಬ್ಬರು-'ಯಾವುದಾದ್ರೂ ಒಂದು ಕೆಲಸ ಕೊಡಿ' ಅಂತ ಬರೆದ್ರೆ ಏನಮ್ಮಾ ಅರ್ಥ?  ಕಸ ಗುಡಿಸುವ ಕೆಲಸ ಖಾಲಿ ಇದೆ. ಅದನ್ನು ಮಾಡಲಿಕ್ಕೆ ರೆಡಿ ಇದ್ದೀರಾ? ಕೆಲಸಕ್ಕೆ ಅರ್ಜಿ ಹಾಕುವಾಗ ನನಗೆ ಇಂಥದೇ ಕೆಲಸ ಬೇಕು ಅಂತ ನಿರ್ಧಾರಕ್ಕೆ ಬನ್ನಿ. ಆನಂತರವೇ ಅರ್ಜಿ ಹಾಕಿ' ಎಂದು ಬುದ್ಧಿ ಹೇಳಿದರು. ಇಷ್ಟಾದ ಮೇಲೆ ಐದಾರು ಕಡೆಗಳಿಂದ ಸಂದರ್ಶನಕ್ಕೆ ಆಹ್ವಾನವೇನೋ ಬಂತು. ಒಂದೆರಡು ಕಚೇರಿ ಮತ್ತು ಅಲ್ಲಿನ ವಾತಾವರಣ ನನಗೆ ಇಷ್ಟವಾಗಲಿಲ್ಲ. ಮತ್ತೊಂದೆರಡು ಕಡೆಗಳಲ್ಲಿ ನನಗಿಂತ ಹೆಚ್ಚಿನ ಬುದ್ಧಿವಂತರು ಬಂದಿದ್ದ ಕಾರಣದಿಂದ ಕೆಲಸ ಸಿಗಲಿಲ್ಲ.
ಅದೊಂದಿನ ಚುಟುಕು ಸಂದರ್ಶನ ಮುಗಿಸಿಕೊಂಡು ಇಷ್ಟುಬೇಗ ಮನೆ ಸೇರಿದರೆ ಸಂಬಂಧಿಕರ ನಾನಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಗುರುತಿಲ್ಲದ ಹಾದಿಯಲ್ಲಿ ಸುಮ್ಮನೇ ನಡೆಯುತ್ತಾ ಹೋದೆ. ಹತ್ತು ಹೆಜ್ಜೆ ನಡೆದಿರಲಿಲ್ಲ. ಆಗಲೇ ಅನಾಹುತ ನಡೆದು ಹೋಯಿತು. ರಸ್ತೆ ಬದಿಯ ಕಲ್ಲಿಗೆ ಎಡವಿದ್ದರಿಂದ ಬಲಗಾಲಿನ ಚಪ್ಪಲಿ ಕಿತ್ತು ಹೋಯಿತು.
ಈಗ ಮಾಡುವುದೇನು ಎಂಬ ಯೋಚನೆಯಲ್ಲಿಯೇ ಕುಂಟುವವಳಂತೆ ನಡೆಯುತ್ತಿದ್ದೆ. ಆಗಲೇ ಬಳಿ ಬಂದ ಹೆಂಗಸೊಬ್ಬಳು, ಅಯ್ಯೋ ಚಪ್ಪಲಿ ಕಿತ್ತು ಹೋಯ್ತಾ? ಬನ್ನಿ, ಐದು ನಿಮಿಷ ಮುಂದೆ ಹೋದ್ರೆ ದೇವಸ್ಥಾನ ಸಿಗುತ್ತೆ. ಅಲ್ಲಿ ಚಪ್ಪಲಿ ಸ್ಟ್ಯಾಂಡ್ ಇದೆ. ಅಲ್ಲಿ ಕಟ್ಟಿಸಿದ್ರಾಯ್ತು ಎಂದಳು. ಕಾಲನ್ನು ಎಳೆದೆಳೆದು ಹಾಕುತ್ತಿದ್ದರಿಂದ ಪ್ರತಿ ಬಾರಿಯೂ ಪರ್ರ ಪರ್ರ ಎಂದು ಸದ್ದಾಗುತ್ತಿತ್ತು. ಈ ಸಂದರ್ಭದಲ್ಲಿ ನನ್ನತ್ತ ಕರುಣೆಯ ದೃಷ್ಟಿ ಬೀರಿದ ಆ ಹೆಂಗಸು, ಬ್ಯಾಗ್‌ನ ನನಗೆ ಕೊಡಿ. ಹಿಡ್ಕೊಂಡು ಬರ್ತೇನೆ ಅಂದಳು. ಆತ್ಮೀಯವಾಗಿ ನಡೆದುಕೊಂಡ ಅವಳ ಜತೆ ಮೊದಲು ದೇವಸ್ಥಾನಕ್ಕೆ ಹೋಗಿ ನಂತರ ಚಪ್ಪಲಿ ರಿಪೇರಿ ಎಂದುಕೊಂಡೆ. ನಂತರದ ಹತ್ತು ನಿಮಿಷದಲ್ಲಿ ದೇವರ ದರ್ಶನವಾಯಿತು. ಕಿತ್ತು ಹೋದ ಚಪ್ಪಲಿಯನ್ನು ಹಾಕಿಕೊಂಡೇ ಒಂದೂವರೆ ಕಿಲೋಮೀಟರ್ ದೂರವಿರುವ ಬಸ್‌ಸ್ಟ್ಯಾಂಡ್ ತಲುಪುವುದು ಹೇಗೆ ಎಂದು ಯೋಚಿಸುತ್ತಲೇ ಹೊರಗೆ ಬಂದೆ. ಜೊತೆಗಿದ್ದ ಹೆಂಗಸು, ನಾನು ಬರ್ತೇನಮ್ಮ, ಮನೆಗೆ ಹೋಗಬೇಕು, ಟೈಂ ಆಯ್ತು. ಮತ್ತೆ ಸಿಕ್ಕೋಣ ಎಂದವಳೇ ಸರಸರನೆ ಹೋಗಿಬಿಟ್ಟಳು. ಚಪ್ಪಲಿಯನ್ನು ಹಿಡಿದುಕೊಂಡೇ ನಡೆಯುವುದೋ ಅಥವಾ ಪರ್ರಾ ಪರ್ರಾ ಅನ್ನಿಸುತ್ತಾ ನಡೆದು ಹೋಗುವುದೋ ಗೊತ್ತಾಗದೆ ನಾನು ನಿಂತೇ ಇದ್ದೆ. ನೆಂಟರಿಗಾದರೂ ವಿಷಯ ತಿಳಿಸೋಣ ಎಂದುಕೊಂಡು ಮೊಬೈಲ್ ತೆಗೆಯಲು ಬ್ಯಾಗ್‌ನ ಒಳಗೆ ಕೈ ಹಾಕಿದವಳೇ ಬೆಚ್ಚಿ ಬಿದ್ದೆ. ಕಾರಣ, ಬ್ಯಾಗ್‌ನೊಳಗೆ ಹಣವಿದ್ದ ಪರ್ಸ್ ಹಾಗೂ ಮೊಬೈಲ್ ಕಣ್ಮರೆಯಾಗಿದ್ದವು. ಸಹಾಯ ಮಾಡುವ ನೆಪದಲ್ಲಿ ಬಂದ ಹೆಂಗಸು ಸರಿಯಾಗಿಯೇ ಕತ್ತರಿ ಹಾಕಿದ್ದಳು.
ಬಸ್‌ಚಾರ್ಜ್‌ಗೆ ಹಣವಿಲ್ಲ, ಫೋನ್ ಮಾಡಲು ಮೊಬೈಲ್ ಇಲ್ಲ. ಈಗ ಮಾಡುವುದೇನು ಎಂದು ಯೋಚಿಸಿದೆ. ನಾಚಿಕೆ ಬಿಟ್ಟು ಯಾರಲ್ಲಾದರೂ ದುಡ್ಡು ಕೇಳುವುದೇ ವಾಸಿ ಅನ್ನಿಸಿತು. ಐದು ನಿಮಿಷದ ನಂತರ ಪ್ರಸಾದದೊಂದಿಗೆ ಹೊರಬಂದ ಆಂಟಿಯೊಬ್ಬರನ್ನು ಗಟ್ಟಿಮನಸ್ಸು ಮಾಡಿ ಕೇಳಿಯೇ ಬಿಟ್ಟೆ: 'ಆಂಟಿ, ಯಾರೋ ಪರ್ಸ್ ಕದ್ದು ಬಿಟ್ರು. ಬಸ್ ಚಾರ್ಜ್‌ಗೆ ಕಾಸಿಲ್ಲ. ಚಪ್ಪಲಿ ಬೇರೆ ಕಿತ್ತು ಹೋಗಿದೆ. ಮೂವತ್ತು ರುಪಾಯಿ ಕೊಡ್ತೀರಾ ಪ್ಲೀಸ್?'
ಆಕೆ ನನ್ನನ್ನೇ ಕೆಕ್ಕರಿಸಿ ನೋಡುತ್ತಾ -ಶೋಕಿಗೆ ಬಿದ್ದ ಹೆಣ್ಣು ಮಕ್ಕಳು ಹೀಗೆಲ್ಲಾ ಹಾಳಾಗಬಾರ್ದು. ಮ್ಯಾಟನಿ ಶೋಗೆ ಹೋಗಲು ದುಡ್ಡು ಬೇಕು ಅಂತ ಸತ್ಯ ಹೇಳು. ಇಂಥಾ ನಾಟಕ ಯಾಕೆ!? ಮೈ ಬಗ್ಗಿಸಿ ದುಡಿಯೋದು ಬಿಟ್ಟು, ನಾಟಕ ಆಡ್ತಾ ಭಿಕ್ಷೆಗೆ ನಿಲ್ತೀಯಲ್ಲ, ನಾಚಿಕೆ ಆಗಲ್ವಾ ಅಂದವರೇ, ಸರಸರನೆ ಹೋಗಿ ಬಿಟ್ಟರು. ಛೆ, ಹೇಗೆಲ್ಲ ಬೈದರಲ್ಲ ಎಂದುಕೊಂಡು ಪರ್ರಪರ್ರ ಎಂದು ಚಪ್ಪಲಿ ಎಳೆಯುತ್ತಾ ಹೋಗುತ್ತಿದ್ದಾಗಲೇ ಹಿಂದಿನಿಂದ ಬೈಕ್‌ನಲ್ಲಿ ಬಂದವರಿಬ್ಬರು- ಕಲಿತ್ತ, ಹುಡುಗಿ ಕುದುರೆ ನಡಿಗೆ ನಡೆಯುತ ಬರತಿತ್ತ... ಎಂದು ರಾಗವಾಗಿ ಹಾಡಿದರು. ಹಿಂದೆಯೇ-ಹಾಯ್ ಬುಲ್ ಬುಲ್, ಡ್ರಾಪ್ ಬೇಕಾ? ಕರ್ಕೋಂಡು ಹೋಗ್ತೇವೆ ಬರ್ತೀಯಾ ಎಂದೂ ಹೇಳಿಬಿಟ್ಟರು.
ಅಷ್ಟೆ: ಅವತ್ತಿನ ನನ್ನ ಪರಿಸ್ಥಿತಿ ಕಂಡು ದುಃಖ ಉಮ್ಮಳಿಸಿ ಬಂತು. ಒಂದು ಕಡೆಯಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದೆ. ಹತ್ತಿಪ್ಪತ್ತು ನಿಮಿಷದ ನಂತರ ಅಲ್ಲಿಗೆ ಬಂದ ಅಪರಿಚಿತ ದಂಪತಿ, ಏನಾಯ್ತಮ್ಮಾ? ಯಾಕೆ ಅಳ್ತಿದೀಯ ಎಂದರು. ಅದುವರೆಗೆ ನಡೆದುದನ್ನೆಲ್ಲಾ ವಿವರಿಸಿದೆ. ಅವರು, ತಕ್ಷಣವೇ 50 ರು. ಕೊಟ್ಟು, ಆಟೋದಲ್ಲಿ ಮನೆ ತಲುಪಿಕೋ. ಒಳ್ಳೆಯದಾಗುತ್ತೆ, ಎಂದರು. ಅವಮಾನ, ಸಂಕಟ, ನಾಚಿಕೆ, ಹಸಿವು ಮತ್ತು ಅಸಹಾಯಕತೆಯ ಮಧ್ಯೆ ಅವರ ಹೆಸರು ಕೇಳುವುದನ್ನೇ ಮರೆತು ಬಿಟ್ಟೆ.
ವಾರದ ಹಿಂದೆ, ರಥಸಪ್ತಮಿಯ ಕಾರಣಕ್ಕೆ ಅದೇ ದೇವಸ್ಥಾನಕ್ಕೆ ಹೋದಾಗ, ಹಳೆಯದೆಲ್ಲ ನೆನಪಾಯಿತು...

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com