ಕುಂಭ ಮೇಳ! ಎಂಥ ಸೋಜಿಗದ ಸೆಳೆತವದು. ಈಗದರ ಝಲಕು ಅಲಹಾಬಾದ್ನಲ್ಲಿ. ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ, ಹನ್ನೆರಡು ವರ್ಷಗಳಿಗೊಮ್ಮೆ ಪ್ರಯಾಗದಲ್ಲಿ ಪೂರ್ಣಕುಂಭ ಮೇಳ, 144 ವರ್ಷಗಳಿಗೆ ಒಮ್ಮೆ ಮಹಾ ಕುಂಭಮೇಳ. ಭಾರತದ ನಾಗರಿಕತೆಯ ಅಂತಸ್ಸತ್ವ ಸಾಬೀತುಗೊಳಿಸುವ ನಿಟ್ಟಿನಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿವೆ. ಆ ಸಮಯಕ್ಕೆ ಸರಿಯಾಗಿ ಅದೆಲ್ಲಿಂದ ಹರಿದುಬರುವುದೋ ಇಂಥ ಜನಸಾಗರ. ಯಾವ ಕಾರ್ಪೋರೇಟ್ ಕಂಪನಿಯೂ ಪ್ರಾಯೋಜಿಸಿಲ್ಲ ಇದನ್ನು. ದುಡ್ಡಿದ್ದವರ ಬಲ ಪ್ರದರ್ಶನದ ವೇದಿಕೆ ಅಲ್ಲವೇ ಅಲ್ಲ ಇದು. ಆದರೂ ಪ್ರತಿ ಅವಧಿಯಲ್ಲೂ ರಂಗೇರಿಸಿಕೊಳ್ಳುತ್ತದೆ ಈ ಮಹಾಜಾತ್ರೆ. ದಿನಂಪ್ರತಿ ಸುದ್ದಿಯಲ್ಲಿರುವವರು ಪ್ರಜ್ವಲಿತ ಭಾರತದ ಒಂದು ಸಮೂಹ ಮಾತ್ರ. ಓದಿಕೊಂಡ, ಆಗು ಹೋಗುಗಳ ವಿಶ್ಲೇಷಮೆಯಲ್ಲಿರುವ ಸಮೂಹದ ಮೇಲೆ ಮಾತ್ರ ಚೆಲ್ಲಿಕೊಂಡಿರುತ್ತದೆ ಬೆಳಕು. ಆದರೆ ನಿಜ ಭಾರತವನ್ನು ಪ್ರತಿನಿಧಿಸುವ ಎಲ್ಲ ಬಣ್ಣಗಳನ್ನು ಒಂದು ಬಟ್ಟಲಲ್ಲಿ ಕಲಸಿಟ್ಟು ನೋಡುವ ಬಯಕೆಯಾದರೆ ಬಹುಶಃ ಕುಂಭಮೇಳವೇ ಅದಕ್ಕೆ ಉತ್ತರ. ಸಾಧುಗಳು, ಮಕ್ಕಳು, ಮಹಿಳೆಯರು, ಹಳ್ಳಿಗಾಡಿನವರು, ಪಟ್ಟಣದ ಮೆರುಗಿನವರು, ಪಂಚೆ-ಮುಂಡಾಸು-ನಗ್ನತೆ-ಜೀನ್ಸ್ ಎಲ್ಲವುಗಳನ್ನು ಕರೆದು ಮೋಹಿಸುತ್ತಾಳೆ ಗಂಗೆ. ಇದಲ್ಲವೇ ಅಚ್ಚರಿ?
---
ಮಾರ್ಚ್ 10ರ ವರೆಗೂ ನಡೆಯಲಿರುವ ಪ್ರಪಂಚದ 'ಅತಿದೊಡ್ಡ' ಧಾರ್ಮಿಕ ಮೇಳವಾದ ಅಲಹಾಬಾದ್ನ ಕುಂಭಮೇಳಕ್ಕೆ ಲಕ್ಷಾಂತರ ಭಕ್ತಾದಿಗಳು ಬಂದು ಪವಿತ್ರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಮಿಂದೆದ್ದು ಪಾವನರಾಗುತ್ತಿದ್ದಾರೆ.
ಬಿಬಿಸಿಯ ವರದಿಗಾರ್ತಿ ಗೀತಾ ಪಾಂಡೆ ಸೋಮವಾರದಂದು ಅಲಹಾಬಾದಿನಲ್ಲಿ ತಾವು ಕಂಡ ಚಿತ್ರಣಗಳನ್ನೆಲ್ಲ ಪೋಣಿಸಿಟ್ಟಿದ್ದಾರೆ...
---
ಸಂಜೆಯ ಹೊತ್ತಿಗೆ ಸೂರ್ಯ ಮೆಲ್ಲಗೆ ನದಿಯಲ್ಲಿ ಮುಳುಗುಹಾಕುತ್ತಿದ್ದಂತೆಯೇ, ನದಿಯಲ್ಲಿ ಮಿಂದೆದ್ದು ಬಂದ ಮೋನಿಕಾ ವೈಶ್ ಎನ್ನುವ ವಕೀಲರೊಬ್ಬರು ನನಗೆದುರಾದರು.
'ಈ ಮಹಾಕುಂಭ 144 ವರ್ಷದ ನಂತರ ಬರುತ್ತಿದೆ. ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳುವುದು ಬೇಡ ಎಂದು ನನ್ನ ತಾಯಿ ಹೇಳಿದ್ದರಿಂದ ಇಲ್ಲಿ ಬಂದಿದ್ದೇನೆ' ಎಂದರು. ಆದರೆ ಮೋನಿಕಾಗೆ ನದಿ ಸ್ವಚ್ಛವಾಗಿಲ್ಲವೆಂಬ ಅಸಮಾಧಾನ. 'ಇಲ್ಲಿಂದ ಹೋದ ಮೇಲೆ ಮತ್ತೊಮ್ಮೆ ಸ್ನಾನ ಮಾಡುತ್ತೇನೆ. ನದಿ ನಿಜಕ್ಕೂ ಕೊಳಕಾಗಿದೆ' ಎಂದು ನಗುತ್ತಾ ನಡೆದರು.
ನಾನಿಲ್ಲಿ ಬರುವುದಕ್ಕೂ ಮುನ್ನ ನನ್ನ ಮನೆಗೆಲಸಕ್ಕಿರುವ ಪೂರ್ಣಿಮಾ, ತನಗೆ ಗಂಗಾನದಿಯ ನೀರು ತಂದುಕೊಡಬೇಕೆಂದು ಕೇಳಿದ್ದಳು. ನದಿಯ ನೀರು ಬಹಳ ಕಲ್ಮಶಗೊಂಡಿತ್ತಾದ್ದರಿಂದ ಚಿಕ್ಕ ದೋಣಿಯನ್ನು ಬಾಡಿಗೆಗೆ ಕೊಂಡು ನದಿಯ ಮಧ್ಯ ಭಾಗಕ್ಕೆ ತೆರಳಿ, ನೀರು ತುಂಬಿಕೊಂಡೆ. ಗಂಗಾ ಎಷ್ಟೇ ಮಲಿನಗೊಂಡಿರಲಿ, ಆದರೂ ಆಕೆ ಭಾರತೀಯರಿಗೆ ಪವಿತ್ರಳೇ ಎನ್ನುವುದಕ್ಕೆ, ಆ ನೀರಿನಲ್ಲೇ ಭಕ್ತಿಯಿಂದ ಮುಳುಗೇಳುತ್ತಿದ್ದ ಜನರೇ ಸಾಕ್ಷಿ.
---
ಅಲಹಾಬಾದಿನಲ್ಲಿ ರಾಜಾ ರಾಮ್ ತಿವಾರಿ ಸ್ಥಾಪಿಸಿರುವ ಖೋಯಾ ಪಾಯಾ(ತಪ್ಪಿಸಿಕೊಂಡವರು ಮತ್ತು ಸಿಕ್ಕವರು) ಶಿಬಿರವಿದೆ. 1946ರಲ್ಲಿ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದುವರೆಗೂ ಕುಂಭಮೇಳದಲ್ಲಿ ತಪ್ಪಿಸಿಕೊಂಡಿದ್ದ ಸುಮಾರು 10 ಲಕ್ಷ ವಯಸ್ಕರನ್ನು ಮತ್ತು 20 ಸಾವಿರ ಮಕ್ಕಳನ್ನು ಖೋಯಾಪಾಯಾ ಸಂಸ್ಥೆ ಹುಡುಕಿಕೊಟ್ಟಿದೆ. ಈ ಸೋಮವಾರದಂದು ಈ ಸಂಸ್ಥೆಯ ಸುಮಾರು 50 ಸ್ವಯಂಸೇವಕರು ಹಾದಿತಪ್ಪಿಸಿಕೊಂಡವರನ್ನು ಶಿಬಿರಕ್ಕೆ ಕರೆತಂದು ಅವರ ಗುರುತನ್ನು ಮೈಕಿನಲ್ಲಿ ಘೋಷಿಸುವುದರಲ್ಲಿ ನಿರತರಾಗಿದ್ದರು.
'ಇವತ್ತು ತಪ್ಪಿಸಿಕೊಂಡ ಬಹಳಷ್ಟು ಜನರಿಗೆ ಅವರ ಕುಟುಂಬದೊಡನೆ ಸಂಪರ್ಕ ಕಲ್ಪಿಸಿದೆವಾದರೂ, ನಮ್ಮ ಶಿಬಿರದಲ್ಲಿ ಇನ್ನೂ 150 ಜನ ತಮ್ಮವರಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಹೆಚ್ಚಾಗಿ ಮಕ್ಕಳು ಮತ್ತು ವೃದ್ಧರೇ ಗದ್ದಲದಲ್ಲಿ ತಪ್ಪಿಸಿಕೊಂಡು ಬಿಡುತ್ತಾರೆ ಅಂಥವರನ್ನೆಲ್ಲ ಹುಡುಕಿ ನಮ್ಮ ಶಿಬಿರಕ್ಕೆ ಕರೆತರುತ್ತೇವೆ' ಎನ್ನುತ್ತಾರೆ ತಿವಾರಿ ಅವರ ಮಗ ಉಮೇಶ್ ತಿವಾರಿ.
ಆ ಶಿಬಿರದಲ್ಲಿ ರಾಮ್ಲಾಲ್ ಎನ್ನುವಾತ ಅತ್ತಿತ್ತ ಚಿಂತೆಯಿಂದ ಓಡಾಡುತ್ತಿದ್ದ. ಆತನನ್ನು ಮಾತನಾಡಿಸಿದಾಗ 'ನನ್ನ ಹೆಂಡತಿಯೊಡನೆ ನದಿಯತ್ತ ಹೊರಟಿದ್ದೆ, ಗದ್ದಲದಲ್ಲಿ ಆಕೆ ಎಲ್ಲಿ ಹೋದಳೋ ತಿಳಿಯುತ್ತಿಲ್ಲ' ಎಂದು ಚಿಂತಿತನಾಗಿ ಹೇಳಿದ.
ನದಿಯ ದಡಕ್ಕಿಂತ ತುಸು ದೂರದ ಹಾದಿಯಲ್ಲಿ, ದೇವರ ಚಿತ್ರಗಳನ್ನು ಮಾರುವವರು ಮತ್ತು ಚಹಾದಂಗಡಿಗಳು ಕಾಣಿಸಿದವು. ಅಲ್ಲಿಗೆ ಹೋದಾಗ, ರಸ್ತೆಯ ಬದಿಯಲ್ಲಿ ಹಿಂದೂ ದೇವತೆಗಳ ವೇಷ ಧರಿಸಿದ ಪುಟ್ಟ ಮಕ್ಕಳು ಸಾಲುಗಟ್ಟಿ ಕುಳಿತಿದ್ದರು. ಈ ಮುದ್ದು ಕಂದಮ್ಮಗಳನ್ನು ನೋಡುತ್ತಾ ನಿಂತಿದ್ದಾಗ ಪಕ್ಕದಲ್ಲಿ ಬಂದು ನಿಂತ ವೃದ್ಧರು ನಗುತ್ತಾ ನನಗೆ ಹೇಳಿದ- 'ಥೇಟ್ ದೇವರ ಹಾಗೇ ಕಾಣುವ ಈ ಮಕ್ಕಳನ್ನು ನೋಡಿ, ಯಾರಾದರೂ ದುಡ್ಡು ಕೊಟ್ಟೇ ಕೊಡುತ್ತಾರೆ ಎನ್ನುವುದು ಇವರ ತಂದೆ ತಾಯಿಯರಿಗೆ ಗೊತ್ತಿದೆ' ಎಂದು, ದೇವರ ವೇಷಧಾರಿ ಮಗುವಿನ ಕೈಯಲ್ಲಿ ನಾಣ್ಯವಿಟ್ಟು ಮುನ್ನಡೆದ.
---
ತುಸು ಹೊತ್ತಿನಲ್ಲೇ ಜೋರು ಗದ್ದಲವೆಬ್ಬಿಸುತ್ತಾ, ಸಾಗರೋಪಾದಿಯಲ್ಲಿ ಓಡುತ್ತಾ ಬಂದ ವಿಭೂತಿಧಾರಿ ಬೆತ್ತಲೆ ಸಾಧುಗಳು ನದಿಯಲ್ಲಿ ಧುಮುಕತೊಡಗಿದರು. ಇವರ ಚಿತ್ರತೆಗೆಯಲು ಮುಗಿಬಿದ್ದ ಫೋಟೋಗ್ರಾಫರ್ಗಳ ಮುಂದೆ ಒಬ್ಬ ಸಾಧುವಂತೂ ಕೇಕೆ ಹಾಕುತ್ತಾ ವಿಭಿನ್ನ ಪೋಸು ನೀಡಿದ!
ಅಲ್ಲದೆ ನದಿಯಲ್ಲಿ ಕೇಸರಿ ಬಣ್ಣದ ಸೀರೆಯುಟ್ಟ ನೂರಾರು ಮಹಿಳೆಯರೂ ಆ ನದಿಗೆ ಬೇರೆಯದ್ದೇ ರಂಗು ತಂದಿದ್ದರು. ಅವರ ನಗು, ಗಲಾಟೆ ನದಿಯ ಸದ್ದಿನೊಂದಿಗೆ ಬೆರೆತು ವಾತಾವರಣಕ್ಕೆ ವಿಶಿಷ್ಟ ಕಳೆ ತಂದುಕೊಟ್ಟಿತ್ತು.
---
ನಿರಂಜನ ಅಖಾಡಾದ ನೂರಾರು ಸಾಧುಗಳು ನದಿಯತ್ತ ಹೆಜ್ಜೆ ಹಾಕುತ್ತಾ ಬಂದರು. ಈ ಬೆತ್ತಲೆ ಬಾಬಾಗಳು ಸ್ವಲ್ಪ ಗಡುಸು ಸ್ವಭಾವದವರಾದ್ದರಿಂದ, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನ ಕಮಾಂಡೋಗಳು ಇವರನ್ನು ಸುತ್ತುವರಿದಿದ್ದರು. ಅವರ ಫೋಟೋ ತೆಗೆಯಲು ಹೋದ ಪತ್ರಕರ್ತನೊಬ್ಬನಿಗೆ ಪೊಲೀಸ್ ಹೇಳಿದ, 'ನಿನ್ನ ಸುರಕ್ಷತೆಗಾಗೇ ಹೇಳ್ತಿದ್ದೇನೆ...ಸ್ವಲ್ಪ ದೂರ ಇರು'!
45 ನಿಮಿಷದ ಸ್ನಾನದ ನಂತರ ಆರ್ಎಎಫ್ ಮೈಗಾವಲಾಗಿ ಇವರನ್ನು ದೂರಕ್ಕೆ ಕರೆದುಕೊಂಡು ಹೋಯಿತು.
---
ಕತ್ತಲಾಗುತ್ತಾ ಬಂದರೂ ಬೆಳಕಿಗೇನು ಅಭಾವವಿರಲಿಲ್ಲ. ಸಾವಿರಾರು ವಿದ್ಯುತ್ ಬಲ್ಬುಗಳು ಭಕ್ತಾದಿಗಳಿಗೆ ಹಾದಿ ತೋರಿಸುತ್ತಿದ್ದವು. ಚಳಿಯನ್ನು ದೂರವಿಡಲು ದಡದ ಮೇಲೆಲ್ಲ ಜನ ಉರಿ ಹಾಕಿದ್ದರಿಂದ, ಸುತ್ತಲಿನ ಗಾಳಿಯಲ್ಲೆಲ್ಲ ಸುಟ್ಟ ಕಟ್ಟಿಗೆಯ ವಾಸನೆ ತುಂಬಿಕೊಂಡಿತ್ತು. ನಸು ಮುಂಜಾನೆಯ ಚಳಿಯಲ್ಲಿಯೇ ನದಿಯಲ್ಲಿ ಮುಳುಗೆದ್ದ ನೆಪಾಳದ ಮಣಿದತ್ ಪಾಂಡಾನನ್ನು ಮಾತನಾಡಿಸಿದಾಗ ಆತ ನಗುತ್ತಾ ಹೇಳಿದ- 'ಇಂದಿಗೆ ನನ್ನ ಪಾಪಗಳೆಲ್ಲ ಪರಿಹಾರವಾದವು'!