ಇದು ವಿವಾದಕ್ಕೆಂದೇ ಪ್ರಸ್ತಾಪಿಸಿದ ವಿಷಯವೇ?

Updated on: 

ನಿಜವಾಗಿಯೂ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸುವುದು ಕಷ್ಟವೇನಲ್ಲ. ಯಾಕೆಂದರೆ ಯಾವುದಕ್ಕೆ ಪರಿಹಾರವಿರುವುದಿಲ್ಲವೋ ಅದು ಸಮಸ್ಯೆ ಎನಿಸಿಕೊಳ್ಳುವುದಿಲ್ಲ. ಈಗ ಎದ್ದಿರುವ ಟಿಪ್ಪು ವಿವಿ ವಿವಾದ ಕೂಡಾ ಇಂಥ ಪರಿಧಿಯೊಳಗೆ ಬಂದು ನಿಂತಿದೆ. ಸತ್ಯವಾಗಿಯೂ ಟಿಪ್ಪು ವಿವಿ ವಿವಾದ ಬಗೆಹರಿಸುವ ಮನಸ್ಸು ಆಳುವ ಮತ್ತು ಪ್ರತಿಪಕ್ಷಗಳಿಗೆ ಇದ್ದರೆ, ಅಷ್ಟೇ ಅಲ್ಲ ವಿವಿ ಬೇಕು, ಬೇಡ ಎಂದು ತಮ್ಮದೇ ಆದ ತರ್ಕವನ್ನು ಇತಿಹಾಸದ ಪುಟಗಳಿಂದ ಎತ್ತಿ ತೋರಿಸುತ್ತಿರುವ ಸಾಹಿತಿ, ವಿದ್ವಾಂಸರಿಗೂ ದೊಡ್ಡ ಕೆಲಸವೇನಲ್ಲ. ಆದರೆ ಯಾರಿಗೂ ಈ ಸಮಸ್ಯೆ ಅಷ್ಟು ಬೇಗ ಮುಗಿಯೋದು ಬೇಡವಾಗಿದೆ!
ರಾಜ್ಯದಲ್ಲೀಗ ಚುನಾವಣೆ ಗಾಳಿ. ಇದೇ ಗಾಳಿಯನ್ನು ಬಳಸಿಕೊಂಡು ತೂರಿಕೊಳ್ಳುವ ಜಾಣ್ಮೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಿವೆ. ಅದಕ್ಕೆ ಪೂರಕವಾಗಿ ಟಿಪ್ಪು ವಿವಿ ಅವರ ಕೈಗೆ ಸಿಕ್ಕಿದೆ.  ಟಿಪ್ಪು ವಿವಿ ಸ್ಥಾಪಿಸಿದ ತಕ್ಷಣ ಅಲ್ಪಸಂಖ್ಯಾತರು ಉದ್ಧಾರವಾಗಿ ಬಿಡುತ್ತಾರೆ ಅಥವಾ ಅದನ್ನು ವಿರೋಧಿಸಿದ ತಕ್ಷಣ ಒಂದು ವರ್ಗದ ಜನ ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಹುಚ್ಚು ಹವಣಿಕೆಯಲ್ಲಿದ್ದಾರೆ ರಾಜಕಾರಣಿಗಳು.
ಶ್ರೀರಂಗಪಟ್ಟದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಈ ಅಲ್ಪಸಂಖ್ಯಾತ ವಿವಿಗೆ ಟಿಪ್ಪು ಸುಲ್ತಾನ್ ಹೆಸರಿಡುವುದನ್ನು ಬಿಜೆಪಿಯ ಕೆಲ ನಾಯಕರು ಸೇರಿದಂತೆ, ಒಂದು ವರ್ಗದ ಸಾಹಿತಿಗಳು ವಿರೋಧಿಸುತ್ತಿದ್ದಾರೆ. ಕೇವಲ ಹೆಸರಿಗೆ ಮಾತ್ರ ವಿರೋಧ ಎನ್ನುವುದಾದರೆ, ಇಷ್ಟೊಂದು ದೊಡ್ಡ ವಿವಾದ ಭುಗಿಲೇಳುವ ಅಗತ್ಯವೇ ಇರಲಿಲ್ಲ. ಯಾಕೆಂದರೆ, ರಾಜ್ಯದಲ್ಲಿ ಇಂಥ ವಿವಾದಗಳು ಹೊಸದೇನಲ್ಲ. ಈ ಹಿಂದೆ ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಹೆಸರಿಡಬೇಕು ಎಂದ ನಿರ್ಧರಿಸಿದಾಗಲೂ ಇದೇ ತರಹ ವಿವಾದ ಎದ್ದಿತು. ನಂತರ ಆ ಮಹಿಳಾ ವಿಶ್ವವಿದ್ಯಾಲಯಕ್ಕೆ ಬಿಜಾಪುರ ವಿವಿ ಎಂದು ಕರೆಯುತ್ತಿರುವುದರಿಂದ ಅದಕ್ಕೆ ಯಾರದ್ದೂ ತಕರಾರು ಇಲ್ಲ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಾಮಕರಣ ವಿಷಯದಲ್ಲೂ ಇಂಥದ್ದೇ ವಿವಾದವಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ.
'ಶ್ರೀರಂಗಪಟ್ಟಣ ಕೇಂದ್ರೀಯ ವಿಶ್ವವಿದ್ಯಾಲಯ' ಎಂದರೆ ಸಾಕು. ಅಲ್ಲಿಗೆ ಸಮಸ್ಯೆ ಬಗೆಹರಿದಿತು. ಇದು ಬೇಡವಾ..? ಇನ್ನೂ ಕೆಲವು ಆಯ್ಕೆಗಳಿವೆ. ಕೇಂದ್ರ ಸರ್ಕಾರ ಸ್ಥಾಪಿಸಲು ಹೊರಟಿರುವುದು ಅಲ್ಪಸಂಖ್ಯಾತ ವಿವಿ,  ಹೊರತು ಮುಸ್ಲಿಂ ವಿವಿಯಲ್ಲ. ಅಂದ ಮೇಲೆ, ಟಿಪ್ಪು ಸುಲ್ತಾನ್ ಬದಲಿಗೆ ಬೇರೆ ಯಾರದ್ದಾದರೂ ದಾರ್ಶನಿಕರ ಹೆಸರಿಡಬಹುದು. ಅದು ಬೇಡ ಎಂದರೆ, ಸೌಹಾರ್ದತೆಯನ್ನು ಸಾರಿದ ಸಂತ ಶಿಶುನಾಳ ಷರೀಫ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರ ಹೆಸರು ನಾಮಕರಣ ಮಾಡಬಹುದು. ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಅಲ್ಪಸಂಖ್ಯಾತರಿಗೆ ಉನ್ನತ ಶಿಕ್ಷಣ ನೀಡುವ ಕಳಕಳಿ ಇದ್ದರೆ ಹೆಸರು ಬದಲಿಸುವುದರಿಂದ ಅವರ ಉದ್ದೇಶ ಸಾಧನೆಗೇನೂ ಭಂಗವಿರುವುದಿಲ್ಲ. ಆದರೆ, ಅಲ್ಪಸಂಖ್ಯಾತ ಕಳಕಳಿ ಜತೆ ಅದಕ್ಕೂ ಮತಗಳ ಮೇಲೆ ಹವಣಿಕೆಯೂ ಇದೆ. ಹಾಗಾಗಿ, ಅಷ್ಟು ಸರಳವಾಗಿ ಕೇಂದ್ರ ಸರ್ಕಾರ ಬೇರೆ ಆಯ್ಕೆಯಗಳತ್ತ ಚಿತ್ತ ಹರಿಸಲಾರದು. ಇನ್ನು ಬಿಜೆಪಿ ಕೂಡಾ ಇದನ್ನು ದೊಡ್ಡದಾಗಿ ಬಿತ್ತರಿಸುತ್ತಾ ಒಂದು ಸಮುದಾಯದ ಜನರನ್ನು ತನ್ನತ್ತ ಸೆಳೆದುಕೊಳ್ಳಲು ಹೆಣಗಾಡುತ್ತಿದೆ.
ಸಮಸ್ಯೆಯನ್ನು ಬಗೆಹರಿಸಲೇಬೇಕು ಎಂದು ಪಟ್ಟು ಹಿಡಿದು ಕುಳಿತರೆ ನೂರಾರ ದಾರಿಗಳು ತೆರೆದುಕೊಳ್ಳುತ್ತೇವೆ. ಆದರೆ, ಎದುರಾಗುವ ಸಮಸ್ಯೆ, ವಿವಾದಗಳನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುಲು ಹದ್ದು ಕಾದಂತೆ ಕಾದು ಕುಳಿತಿರುವಾಗ ಪರಿಹಾರ ಹೇಗೆ ಸಿಗಲು ಸಾಧ್ಯ? ಇದು ನಾಮಕರಣದ ವಿಷಯವಾಯಿತು.
ಇನ್ನು ಇಡೀ ಅಲ್ಪ ಸಂಖ್ಯಾತ ವಿಶ್ವವಿದ್ಯಾಲಯ ಸ್ಥಾಪನೆಗೇ ವಿರೋಧ ವ್ಯಕ್ತಪಡಿಸುವುದಾದರೆ ಅದು ಅರ್ಥವಿಲ್ಲದ್ದು. ಶಿಕ್ಷಣ ಯಾರೊಬ್ಬರ ಸೊತ್ತು ಅಲ್ಲ. ಅದು ಎಲ್ಲರಿಗೂ ಸೇರಬೇಕಾದ್ದು. ಕೇಂದ್ರ ಸರ್ಕಾರಕ್ಕೆ ಈ ಉದ್ದೇಶ ನಿಜವಾಗಿಯೂ ಇದ್ದರೆ ಅದನ್ನು ಬೇರೆ ಯಾರೂ ವಿರೋಧಿಸುವುದು ತರವಲ್ಲ. ಗತಿಸಿ ಹೋದ ಇತಿಹಾಸದ ಘಟನೆಗಳನ್ನು ವರ್ತಮಾನಕ್ಕೆ ತಳಕು ಹಾಕಿ ನಮ್ಮನ್ನು ನಾವು ಸಾಯಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹಿಂದೆ ಆ ರಾಜ ಹಾಗೆ ಮಾಡಿದ, ಈ ರಾಜ ಹೀಗೆ ಮಾಡಿದ ಅಂತ ವಿಶ್ಲೇಷಣೆಗಳಿಂದ ಲಾಭವಿಲ್ಲ. ನಾವೀಗ ವರ್ತಮಾನದ ಬಗ್ಗೆ ಯೋಚಿಸಿ, ಯೋಜಿಸಿ ಮುಂದಡಿ ಇಡಬೇಕು.

- ಮಲ್ಲಿಕಾರ್ಜುನ ತಿಪ್ಪಾರ
ಕನ್ನಡಪ್ರಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com