ಅಂಕಣಗಳು

ಮೋದಿ ವಿರೋಧದ ಸೆಕ್ಯುಲರ್ ತೌಡು!

Published On :

ಚುನಾವಣೆಗಳು ಹತ್ತಿರವಾಗುತ್ತಿರುವ ಸಮಯದಲ್ಲಿ ಎಂದಿನಂತೆ ನರೇಂದ್ರ ಮೋದಿಯವರ ಮೇಲೆ ಎಗ್ಗಿಲ್ಲದ ದಾಳಿಗಳು ಶುರುವಾಗಿವೆ. ಮಾಧ್ಯಮಗಳು, ರಾಜಕಾರಣಿಗಳು ಎಂದಿನಂತೆ ಅವರ ಮೇಲೆ ಕತ್ತಿ ಮಸೆಯತೊಡಗಿವೆ. ಈ ಸಮಯದಲ್ಲೇ ಫೇಸ್‌ಬುಕ್‌ನಲ್ಲಿ - ಸುಯಶ್ ಭಾರದ್ವಾಜ್  ಎನ್ನುವವರು ಬರೆದ ಲೇಖನವೊಂದು ಭಾರಿ ಸುದ್ದಿ ಮಾಡುತ್ತಿದೆ. ಹೇಗೆ ಮಾಧ್ಯಮಗಳು ಮತ್ತು ಎಡಪಂಥೀಯ ವಿಚಾರಧಾರೆ ಸತ್ಯವನ್ನು ಮುಚ್ಚಿಡುತ್ತಿವೆ ಎನ್ನುವುದನ್ನು ವ್ಯಂಗ್ಯವಾಗಿ ಅದರಲ್ಲಿ ಅನಾವರಣ ಮಾಡಲಾಗಿದೆ. ಲೇಖನದ ಆಯ್ದ ಭಾಗ...

  • ಕಸಬ್ ಸುಂದರ ಬಾಲಕನಾಗಿದ್ದ ಮತ್ತು ಇಶ್ರತ್ ಜಹಾನ್ ಏನೂ ಅರಿಯದ ಮುಗ್ಧ ಬಾಲಕಿಯಾಗಿದ್ದಳು. ಅವರು ಉಗ್ರರಲ್ಲ ಬದಲಾಗಿ, ಲಷ್ಕರ್ ಬಗ್ಗೆ ಆಸಕ್ತಿಯಿಟ್ಟುಕೊಂಡವರಾಗಿದ್ದರಷ್ಟೆ.
  • ಕಾಂಗ್ರೆಸ್ ನಾಯಕ ಮತ್ತು ಹಿಮಾಚಲ ಪ್ರದೇಶದ ಸಿಎಂ ವೀರಭದ್ರ ಸಿಂಗ್ ಅವರ ಪುತ್ರಿ ಅಭಿಲಾಶಾ ಕುಮಾರಿಯೇ ಇಶ್ರತ್ ಜಹಾನ್ ಪ್ರಕರಣದ ನ್ಯಾಯಾಧೀಶರು. ಹಾಗಂತ ಇದಕ್ಕೂ ಕಾಂಗ್ರೆಸ್‌ಗೂ ಸಂಬಂಧವಿದೆ, ಸ್ವಹಿತಾಸಕ್ತಿಗಾಗಿ ಅವರನ್ನು ಕಾಂಗ್ರೆಸ್ ಆ ಸ್ಥಾನದಲ್ಲಿ ಕೂರಿಸಿದೆ ಎಂದೇನೂ ಭಾವಿಸಬೇಕಿಲ್ಲ.
  • ಸಿಬಿಐ ಅಂತೂ ನಿಷ್ಪಕ್ಷಪಾತದ ಇನ್ನೊಂದು ಹೆಸರು. ಅದನ್ನು ಪಂಜರದ ಗಿಳಿ ಎಂದು ಕರೆದ ಸುಪ್ರೀಂ ಕೋರ್ಟ್ ಅಭಿಪ್ರಾಯವೇ ತಪ್ಪು. ಹಾಗಾಗೇ ಈಗ ನಡೆಯುತ್ತಿರುವ ತನಿಖೆ ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಸಿಬಿಐ ಅನ್ನು ಕಾಂಗ್ರೆಸ್‌ನ ಸೇವಕ ಎಂದು ಕರೆಯುವುದರ ಹಿಂದೆ ನರೇಂದ್ರ ಮೋದಿಯವರ ಪಿಆರ್‌ಒಗಳ ಕೈವಾಡವಿದೆ. ನಮ್ಮ ಗುಪ್ತಚರ ದಳ ಹೇಳುತ್ತಿರುವುದು ಸುಳ್ಳು. ಡೇವಿಡ್ ಹೆಡ್ಲಿ ಸುಳ್ಳು ಹೇಳುತ್ತಿದ್ದಾನೆ. ಜಮಾತ್-ಉದ್ ದಾವಾ ಸುಳ್ಳು ಹೇಳುತ್ತಿದೆ. ಮಾಜಿ ಗೃಹಮಂತ್ರಿಗಳು ಮತ್ತವರ ಕಾರ್ಯದರ್ಶಿಗಳು ಸುಳ್ಳು ಹೇಳುತ್ತಿದ್ದಾರೆ. ಇದೆಲ್ಲ ಸಿಬಿಐನ ತೇಜೋವಧೆಗಾಗಿ ಮಾಡಲಾಗಿರುವ ಹುನ್ನಾರವಷ್ಟೆ. ಕಾಂಗ್ರೆಸ್ ಮತ್ತು ಸಿಬಿಐ ನಡುವೆ ಕಾಲ್ಪನಿಕ ನಂಟನ್ನು ಹೆಣೆಯಲಾಗುತ್ತಿದೆ.
  • ಇಶ್ರತ್ ಜಹಾನ್ ರಾತ್ರಿ 2 ಗಂಟೆಗೆ, ಅದೂ ತನ್ನ ಮನೆಯಿಂದ ನೂರಾರು ಕಿಲೋಮೀಟರ್ ದೂರವಿರುವ ಸ್ಥಳದಲ್ಲಿ, ಭಯಾನಕ ಉಗ್ರರಿಗೆ(ಅದರಲ್ಲೂ ಇಬ್ಬರು ಪಾಕಿಸ್ತಾನಿಗಳಿದ್ದರು) ಗಾಂಧಿಗಿರಿಯ ಪಾಠ ಹೇಳಿ ಕೊಡುತ್ತಿದ್ದಳು. ಪಾಪ ಆಕೆ ಏನೂ ಅರಿಯದ ಕಂದಮ್ಮ.
  • ಎನ್‌ಡಿಟಿವಿಯಲ್ಲಿ ಕಾಂಗ್ರೆಸ್ ಸಚಿವ ನವೀನ್ ಜಿಂದಾಲ್ 15 ಪ್ರತಿಶತ ಪಾಲು ಹೊಂದಿಲ್ಲ. ಹಿಂದುಸ್ಥಾನ್ ಟೈಮ್ಸ್‌ನ ಮೀಡಿಯಾ ಗ್ರೂಪ್‌ನ ಮುಖ್ಯಸ್ಥ, ರಾಜ್ಯಸಭೆಯ ಕಾಂಗ್ರೆಸ್ ಸಚಿವನಲ್ಲ. ಪತ್ರಕರ್ತರು ಮತ್ತು ಕಾಂಗ್ರೆಸ್ ನಡುವೆ ಇರುವ ಸಂಬಂಧವನ್ನು ಹೊರಗೆಡವಿದ ರಾಡಿಯಾ ಟೇಪ್ಸ್ ಮತ್ತು ವೀರ್ ಸಾಂಘ್ವಿ ಪ್ರಕರಣಗಳೆಲ್ಲ ಸುಳ್ಳು. ಇದರ ಹಿಂದೆ ಕೂಡ ಮೋದಿಯವರ ಕೈವಾಡವಿದೆ.
  • ಮಾಧ್ಯಮಗಳು ಎಂದಿಗೂ 2002ರ ಗೋಧ್ರಾ ಹತ್ಯಾಕಾಂಡದ ಬಗ್ಗೆ ಪ್ರಸ್ತಾಪ ಮಾಡುವುದೇ ಇಲ್ಲ. ಅವೇನಿದ್ದರೂ 1984ರ ಸಿಖ್ಖರ ಮಾರಣಹೋಮ ಮತ್ತು ಕೇವಲ 2 ಗಂಟೆಯೊಳಗೆ 3000 ಮುಸಲ್ಮಾನರನ್ನು ಬಲಿತೆಗೆದುಕೊಂಡ ನೆಲೀಲೆ ಅಸ್ಸಾಂ ಹತ್ಯಾಕಾಂಡದ ಬಗ್ಗೆಯಷ್ಟೇ ಮಾತನಾಡುತ್ತವೆ! ಇನ್ನು 1947, 1969, 1992 ಮತ್ತು 2012ರ ಕೋಮುಗಲಭೆಗಳ ಬಗ್ಗೆಯಂತೂ ನ್ಯೂಸ್ ಚಾನೆಲ್‌ಗಳಲ್ಲಿ ಆಗಾಗ ಸುದ್ದಿ ಪ್ರಸಾರವಾಗುತ್ತಲೇ ಇರುತ್ತದೆ. ಹೇಗೆ ಅಪರಾಧಿಗಳು ತಪ್ಪಿಸಿಕೊಂಡರು, ಅವರು ತಪ್ಪಿಸಿಕೊಂಡಾಗ ಯಾವ ಪಕ್ಷ ಅಧಿಕಾರದಲ್ಲಿತ್ತು ಎಂದು ತೋರಿಸುವ ಮಾಧ್ಯಮಗಳು ಎಂದಿಗೂ ಕೂಡ 2002ರ ಘಟನೆಯ (ಇದರಲ್ಲಿ 250 ಜನರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ, ಗುಜರಾತ್‌ನ ಕ್ಯಾಬಿನೆಟ್ ಸಚಿವರೂ ಕೂಡ ಈ ಪಟ್ಟಿಯಲ್ಲಿದ್ದಾರೆ) ಬಗ್ಗೆ ವರದಿ ಮಾಡುವುದಿಲ್ಲ. ನರೇಂದ್ರ ಮೋದಿಯವರು ಹಿಂಸಾಚಾರವನ್ನು ತಹಬಂದಿಗೆ ತರಲು ಕೇವಲ 24 ಗಂಟೆ ತೆಗೆದುಕೊಂಡಿದ್ದು ಚಿಕ್ಕ ತಪ್ಪೇ?
  • ಗುಜರಾತ್ ಗಲಭೆಯನ್ನು ನಿಲ್ಲಿಸಲು ಮುನ್ನೆಚ್ಚರಿಕೆಯಾಗಿ 5000 ಜನರನ್ನು ಮುಂಚಿತವಾಗಿಯೇ ಬಂಧಿಸಿದ ಸುದ್ದಿ. ಇದರಿಂದಾಗಿ ಸಾವಿರಾರು ಮುಸಲ್ಮಾನರ ಪ್ರಾಣ ಉಳಿಯಿತು, ನರೋಡಾ ಪಾಟಿಯಾದಂಥ ಘಟನೆಗಳು ಮರುಕಳಿಸುವುದು ತಪ್ಪಿತು ಎನ್ನುವುದು ಬೇರೆ ವಿಷಯ. ಬಹುಶಃ ಮೋದಿ ಬೆಂಬಲಿಗರಿಗೆ ತಲೆ ಕೆಟ್ಟಿರಬಹುದು ಅಥವಾ ಅವರಿಗೆ ಇಂಗ್ಲಿಷ್ ಬರುವುದಿಲ್ಲ ಎಂದೆನಿಸುತ್ತದೆ. ಏಕೆಂದರೆ ದಿನನಿತ್ಯವೂ ಈ ವಿಷಯವನ್ನು ನಮ್ಮ ಆಂಗ್ಲ ಮಾಧ್ಯಮಗಳು ತೋರಿಸುತ್ತಲೇ ಇವೆಯಲ್ಲ! ಮಾಧ್ಯಮಗಳಂತೂ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವ ನಕಲಿ ಎನ್ಕೌಂಟರ್ ಬಗ್ಗೆ ಪ್ರತಿದಿನವೂ ವರದಿ ಮಾಡುತ್ತವಲ್ಲವೇ?
  • ಗುಜರಾತ್ ಮುಸಲ್ಮಾನರ ಬಗ್ಗೆ ಮೋದಿಗೆ ಕಾಳಜಿಯಿಲ್ಲ. ಹಾಗಾಗೇ ಆ ಜನರು ಭಾರತದ ಅತ್ಯಂತ ಶ್ರೀಮಂತ ಮುಸಲ್ಮಾನರಾಗಿ ಬದಲಾಗಿದ್ದಾರೆ. ಇದು ತಪ್ಪಲ್ಲವೇ? ಗುಜರಾತ್ ಮುಸಲ್ಮಾನರ ಶ್ರೇಯೋಭಿವೃದ್ಧಿಗಾಗಿ ಮೋದಿ ನಿಜಕ್ಕೂ ದುಡಿದಿದ್ದರೆ, ಅವರೆಲ್ಲ ಇಷ್ಟರಲ್ಲಾಗಲೇ ಅರಬ್ ರಾಷ್ಟ್ರದ ಮುಸಲ್ಮಾನರಿಗಿಂತ ಹೆಚ್ಚು ಶ್ರೀಮಂತರಾಗಿರಬೇಕಿತ್ತಲ್ಲವೇ?
  • ಮೋದಿ ಗುಜರಾತ್‌ನಲ್ಲಿ ಅನೇಕ ರಸ್ತೆಗಳನ್ನು ನಿರ್ಮಾಣ ಮಾಡಿದರು. ಗುಜರಾತ್ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿದರು. (ಈ ಕಾರಣಕ್ಕಾಗಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಅವರಿಗೆ ಬಂದವು). ಆದರೆ ಇದೇ ಸಮಯದಲ್ಲಿ ಬೆರಳೆಣಿಕೆಯಷ್ಟು ಮುಸಲ್ಮಾನ ಟ್ಯಾಕ್ಸಿ ಚಾಲಕರ ಕೆಲಸವೂ ಹೋಯಿತಲ್ಲ . ಇದೇನೂ ಸಣ್ಣ ತಪ್ಪೇ? ಎಷ್ಟೊಂದು ಕೋಮುವಾದ!
  • ಗುಜರಾತ್ ಬಿಜೆಪಿಗೆ ಅನೇಕ ಮುಸಲ್ಮಾನರು ಸೇರ್ಪಡೆಯಾದರು. ಬಹುಸಂಖ್ಯಾತ ಮುಸ್ಲಿಂ ಪ್ರದೇಶಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತು. ಆದರೇನಂತೆ ವಿಧಾನಸಭಾ ಚುನಾವಣೆಗಳಲ್ಲಿ ಒಬ್ಬ ಮುಸಲ್ಮಾನನಿಗೂ ಅವರು ಟಿಕೆಟ್ ಕೊಡಲಿಲ್ಲವಲ್ಲ, ಇದಕ್ಕಿಂತ ದೊಡ್ಡ ಅಪರಾಧವಿದೆಯೇ?
  • ಕಳೆದ ಚುನಾವಣೆಯಲ್ಲಿ 25-35 ಪ್ರತಿಶತ ಮುಸ್ಲಿಂ ಮತಗಳು ಮೋದಿ ಜೋಳಿಗೆಗೆ ಹೋಗಿವೆ. ನಿಸ್ಸಂಶಯವಾಗಿಯೂ ಮೋದಿ, ಎಲ್ಲಾ ಮತೆಗಟ್ಟೆಗಳಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಮುಸಲ್ಮಾನರ ಮೇಲೆ ಹದ್ದಿನಕಣ್ಣು ಇಟ್ಟಿದ್ದಾರೆ. ಈ ಕಾರಣದಿಂದಲೇ ಹೆದರಿದ ಮುಸಲ್ಮಾನರು ಅವರಿಗೆ ಮತ ಹಾಕಿದ್ದಾರೆ.
  • ಅಭಿವೃದ್ಧಿಯ ಪಥದಲ್ಲಿ ಎದುರಾದ ಅನೇಕ ಮಂದಿರಗಳನ್ನು ಮೋದಿ ಕೆಡವಿದ್ದರೇನಂತೆ, ಅವರು ಹಿಂದುತ್ವವಾದಿ ಎನ್ನುವುದಂತೂ ಸುಳ್ಳಲ್ಲವಲ್ಲ!
  • ಉತ್ತರಾಖಂಡ ಪ್ರಕೋಪದ ವೇಳೆ ಮೋದಿ ತಮ್ಮ ರಾಜ್ಯದಿಂದ 24 ಹೆಲಿಕಾಪ್ಟರ್‌ಗಳನ್ನು ಅಲ್ಲಿಗೆ ಕಳುಹಿಸಿದರು. ಇದೆಲ್ಲಾ ಪಬ್ಲಿಸಿಟಿ ಗಿಮಿಕ್ ಅಲ್ಲದೇ ಮತ್ತೇನು? ಸಾವಿರಾರು ಜನರ ಪ್ರಾಣ ಉಳಿಸಬಹುದಾಗಿದ್ದರೂ ರಾಹುಲ್ ಗಾಂಧಿ ಇಂಥ ಕೆಲಸ ಮಾಡಲಿಲ್ಲ. ಕೋಮುವಾದಿಗಳ ಕೈಯಲ್ಲಿ ಬದುಕುವುದಕ್ಕಿಂತ, ಜಾತ್ಯತೀತ ಸಾವು ಮೇಲಲ್ಲವೇ? ಅಲ್ಲಿ ನೂರಾರು ಜನ ಸಹಾಯ ದೊರಕದೆ ಸತ್ತಿದ್ದನ್ನು ಈ ದೃಷ್ಟಿಯಲ್ಲೇ ನೋಡೋಣ.
  • 15000 ಸಾವಿರ ಜನರನ್ನು ಮೋದಿ ಕಾಪಾಡಿದರಂತೆ.. (ಅವರು ಹಾಗೆ ಹೇಳಿಕೊಂಡಿಲ್ಲ ಎನ್ನುವುದು ಬೇರೆ ವಿಷಯ). ಆದರೂ ಇದರ ಹಿಂದೆ ಅವರ ಪಿಆರ್‌ಒಗಳ ಕೈವಾಡವಿದೆ. 5000 ಜನರನ್ನು ಬಚಾವು ಮಾಡಿ, 15000 ಎಂದು ಹೇಳುವುದು ಎಂಥ ಅಸಹ್ಯ. ಅದು ಬಿಡಿ, ಈ ಘಟನೆಯ ಬಳಿಕ ಎಲ್ಲರೂ ಅವರನ್ನು ಖಛಟಛ್ಟಿ ಎಂದು ಕರೆಯತೊಡಗಿದರು. ಇದು ನಿಜಕ್ಕೂ ಕೋಮುವಾದಿ ಹೆಸರು. ಏಕೆಂದರೆ ಖಛಟಛ್ಟಿ ದ ಮೊದಲ ಮೂರು ಅಕ್ಷರ ಶ್ರೀರಾಮನ ಹೆಸರನ್ನು ಸೂಚಿಸುತ್ತವೆ.
  • ಮೋದಿಗೆ ಜಪಾನ್‌ನೊಂದಿಗೆ ಉತ್ತಮ ಸಂಬಂಧವಿದೆ. ಯುರೋಪ್ ಒಕ್ಕೂಟ ಅವರನ್ನು ಆತ್ಮೀಯವಾಗಿ ನೋಡುತ್ತದೆ. ಅಮೆರಿಕದ ಕಾಂಗ್ರೆಸ್ ಓಡಿಬಂದು ಅವರನ್ನು ಭೇಟಿಯಾಗುತ್ತದೆ. ಆದರೂ ಅವರನ್ನು ಜಾಗತಿಕ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. 10 ವರ್ಷದ ಹಿಂದೆ ಅಮೆರಿಕ ಅವರಿಗೆ ವೀಸಾ ನೀಡಲು ನಿರಾಕರಿಸಿದ ನಡೆ ಸರಿಯಾಗಿಯೇ ಇದೆ. ಇಂಥ ಮಾನವ ದ್ವೇಷಿಗೆ ವೀಸಾ ಕೊಡುವುದೇ ಅಮೆರಿಕ ಗ್ವಾಂಟನಾಮೋ, ಇರಾಕ್ ಮತ್ತು ಅಫ್ಘಾನಿಸ್ತಾನಗಳ ಮೇಲೆ ದಾಳಿ ಮಾಡಿ ಸಾವಿರಾರು ಅಮಾಯಕರ ಹತ್ಯೆ ಮಾಡಿದ್ದರೇನಂತೆ, ಅದು ನರೇಂದ್ರ ಮೋದಿಯವರಿಗೆ ವೀಸಾ ನೀಡುತ್ತಿಲ್ಲವಲ್ಲ... ಇದಕ್ಕಿಂತ ಮಾನವೀಯ ನಡೆ ಇನ್ನೊಂದಿದೆಯೇ? ಹಾಗಾಗೇ ನಾವು ಅಮೆರಿಕದ ನೀತಿಗಳನ್ನು ಬೆಂಬಲಿಸಬೇಕು.
  • ಅವರು ಗುಜರಾತ್ ಅಭಿವೃದ್ಧಿಯ ಹರಿಕಾರರಾದರೇನಂತೆ, ಅವರಲ್ಲಿ ಜಾತ್ಯತೀತ ಗುಣಗಳಿಲ್ಲ. ಹಾಗಾಗೇ ದಯವಿಟ್ಟು ಮೋದಿ ಅವರಿಗೆ ಮತ ನೀಡಬೇಡಿ. ಭ್ರಷ್ಟಾಚಾರದ ಉಚ್ಛ್ರಾಯ ಸ್ಥಿತಿ ತಲುಪಿರುವ ಕಾಂಗ್ರೆಸ್‌ಗೆ ಮತ ನೀಡಿ. ಸ್ವಹಿತಾಸಕ್ತಿಗಾಗಿ ದೇಶವನ್ನು ಮಾರುತ್ತಿರುವ ಕರುಣಾನಿಧಿ, ಮಾಯಾ, ಮಮತಾ, ಮುಲಾಯಂರಂಥರಿಗೆ ಮಾತ್ರ ಈ ದೇಶವನ್ನು ಮುನ್ನಡೆಸುವ ಅರ್ಹತೆಯಿದೆ. ಅವರುಗಳಿಗೆ ಮತ ನೀಡಿ. ಬಿಜೆಪಿಯ ಏಕೈಕ ಆಯ್ಕೆ ಮೋದಿ ಎಂದಾದರೆ ಮತದಾನವೇ ಮಾಡಬೇಡಿ. ಮತದಾನ ಮಾಡದೇ ಇರುವುದರಿಂದ ಗ್ರಾಮೀಣ ಭಾಗಗಳಿಗೆ ಹಾನಿಯಾಗುತ್ತದೆ ಎನ್ನುವ ವಿಷಯವನ್ನು ಕಡೆಗಣಿಸಿ.
  • ಕೊನೆಯದಾಗಿ ಎಲ್ಲರಲ್ಲೂ, ಎಲ್ಲದರಲ್ಲೂ  ಹುಳುಕು ಹುಡುಕಲು ಶುರುಮಾಡಿ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡರಾಗಿ. ಮೋದಿ ನರಹಂತಕ ಎಂದು ಜೋರಾಗಿ ಕೂಗುತ್ತಾ ಅಡ್ಡಾಡಿ. ಆಗ ಎಲ್ಲರೂ ನಿಮ್ಮನ್ನು ಗುರುತಿಸುತ್ತಾರೆ. ನೀವು ಎಲ್ಲರಿಗಿಂತ ಭಿನ್ನ ಎಂದು ಕರೆಸಿಕೊಳ್ಳುತ್ತೀರಿ. ಏನೇ ಆದರೂ ನಿಮ್ಮ ಪೂರ್ವಗ್ರಹವನ್ನು ಮಾತ್ರ ಬಿಡದಿರಿ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.