ಅಂಕಣಗಳು

ಈ ಬದಲಾವಣೆ ಕೆಲವರಿಗೆ ಬೇಡವಾಗಿದೆ

Published On :

ಇತ್ತೀಚೆಗೆ ಚಲನಚಿತ್ರ ಸಂಭಾಷಣೆಗಾರ ಸಲೀಂ ಖಾನ್ ಪತ್ರಕರ್ತರೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತೊಂದು ಕುತೂಹಲಕರವಾಗಿತ್ತು. "ಗುಜರಾತ್ ದಂಗೆಗಳಂತೆಯೇ ಭೀಕರವಾಗಿದ್ದ ಮುಂಬೈ ಹಿಂಸಾಚಾರ ನಡೆದಾಗ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗಿದ್ದರು? ಮಲಿಯಾನಾ ಅಥವಾ ಮೀರತ್ ದಂಗೆಗಳ ವೇಳೆ ಯಾರು ಉತ್ತರ ಪ್ರದೇಶದ ಸಿಎಂ ಆಗಿದ್ದರು ಎನ್ನುವುದು ಯಾರಿಗಾದರೂ ನೆನಪಿದೆಯೇ? ಭಾಗಲ್‌ಪುರ್ ಮತ್ತು ಜೆಮ್‌ಶೆಡ್‌ಪುರದಲ್ಲಿ ಹಿಂಸಾಚಾರ ನಡೆದಾಗ ಬಿಹಾರದ ಮುಖ್ಯಮಂತ್ರಿ ಆಗಿದ್ದವರು ಯಾರು? ಸ್ವಾತಂತ್ರ್ಯಾ ನಂತರ ಗುಜರಾತ್‌ನಲ್ಲಿ ನೂರಾರು ಕೋಮು ಸಂಘರ್ಷಗಳು ನಡೆದವು , ಆಗೆಲ್ಲ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರಿದ್ದರು? 1984ರಲ್ಲಿ ಸಿಖ್ಖರ ಮಾರಣಹೋಮ ನಡೆದಾಗ ದೆಹಲಿಯ ಚುಕ್ಕಾಣಿ ಹಿಡಿದಿದ್ದ ವ್ಯಕ್ತಿ ಯಾರೆಂದು ನೆನಪಿದೆಯೇ?" ಎಂದು ಅವರು ಕೇಳುತ್ತಾರೆ.
ಹಿಂದಿನ ವಿಷಯ ಬಿಡಿ. ಜುಲೈ 2012ರಂದು ಅಸ್ಸಾಂನಲ್ಲಿ ನಿರಾಶ್ರಿತರಾದ, ಹಿಂಸಾಚಾರಕ್ಕೆ ಬಲಿಯಾದ ನೂರಾರು ಬೋಡೋಗಳು ಮತ್ತು ಮುಸಲ್ಮಾನರ ವಿಷಯ? ಅಲ್ಲಿ ಆಗಸ್ಟ್ 2012ರ ವೇಳೆಗೆ 400 ಹಳ್ಳಿಗಳ ಸುಮಾರು 4 ಲಕ್ಷಜನ, 270 ನಿರಾಶ್ರಿತ ಶಿಬಿರಗಳಲ್ಲಿ ಆಸರೆ ಪಡೆಯುವಂತಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತೀಯ ಸೇನೆ ಅಸ್ಸಾಂನಲ್ಲಿ ಠಿಕಾಣಿ ಹೂಡಿದರೂ ಸಹ ಅವರನ್ನು ನಿಯೋಜಿಸಲು ಅಸ್ಸಾಂನ ಮುಖ್ಯಮಂತ್ರಿ ನಾಲ್ಕು ದಿನ ತಡಮಾಡಿದರು.  ಈ ದಂಗೆಯನ್ನು ನಾವೇಕೆ ಮರೆತುಬಿಟ್ಟಿದ್ದೇವೆ?
ಭಾರತೀಯ ರಾಜಕೀಯ ಹೇಗೆ ಬದಲಾಗಿದೆಯೆಂದರೆ, ಒಂದು ವೇಳೆ ನೀವೇನಾದರೂ ಗುಜರಾತ್‌ನ ಅತ್ಯುನ್ನತ ಗುಣಮಟ್ಟದ ರಸ್ತೆಗಳ ಬಗ್ಗೆ ಅಥವಾ ಅಲ್ಲಿನ ಹಳ್ಳಿಗಳಿಗೆ ಪ್ರತಿದಿನವೂ 24 ಗಂಟೆ ವಿದ್ಯುತ್ ಸರಬರಾಜಾಗುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ನಿಮಗೆ ಕೂಡಲೇ 'ನಿರಂಕುಶ ಆಡಳಿತದ ಬೆಂಬಲಿಗ' ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ.
ನನಗೆ ಈಗಲೂ ಗೊಂದಲ ಹುಟ್ಟಿಸುವ ಸಂಗತಿಯೆಂದರೆ ಮೋದಿಯವರ ಮೇಲೆ ದಾಳಿ ನಡೆಸುವವರೆಲ್ಲರೂ ಹೊರಗಿನವರೇ ಎಂಬುದು. ಅವರು ಅತ್ತ ಮುಸಲ್ಮಾನರೂ ಅಲ್ಲ, ಇತ್ತ ಗುಜರಾತಿಗಳೂ ಅಲ್ಲ. ಇನ್ನು ಗುಜರಾತ್‌ನಲ್ಲಿನ ಮೋದಿ ವಿರೋಧಿ ಪಾಳಯದ ಹೆಸರಾಂತ ವ್ಯಕ್ತಿಗಳೂ ಮುಸಲ್ಮಾನರಲ್ಲ. ಇನ್ನು ಕೆಲವು ಮುಸಲ್ಮಾನರಂತೂ ಎಂದಿಗೂ ಗುಜರಾತ್ ಅನ್ನು ನೋಡಿದವರಲ್ಲ. ಆದರೆ ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಮೋದಿಯವರನ್ನು ಮತ್ತು ಅವರೊಂದಿಗೆ ಉತ್ತಮ ಸಂಬಂಧ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಮುಸಲ್ಮಾನರನ್ನು ಬೈಯ್ಯುವ ಅವಕಾಶವನ್ನು ಮಾತ್ರ ಅವರು ಕಳೆದುಕೊಳ್ಳುವುದಿಲ್ಲ.
ಇನ್ನೂ ಕೆಲವು ಮೋದಿ ವಿರೋಧಿ ಮುಸಲ್ಮಾನರಿದ್ದಾರೆ. ಅವರೆಂದಿಗೂ ಭಾರತಕ್ಕೆ ಬಂದವರಲ್ಲ. ಅಮೆರಿಕ ಅಥವಾ ಇಂಗ್ಲೆಂಡ್‌ನಲ್ಲಿ ಕುಳಿತು ದ್ವೇಷದ ಉದ್ಯಮ ನಡೆಸುವವರಿವರು. ಇವರು ಗುಜರಾತ್‌ನ ಮುಸಲ್ಮಾನರಿಗಿರಲಿ, ಪ್ರಪಂಚದ ಯಾವುದೇ ಭಾಗದ ಮುಸಲ್ಮಾನರಿಗೂ ಸಹಾಯ ಮಾಡಿದವರಲ್ಲ.
ಎಂದಾದರೂ, ಎಲ್ಲಾದರೂ ಗುಜರಾತಿ ಮುಸಲ್ಮಾನನೊಬ್ಬ ವಿಭಿನ್ನ ಸ್ವರದಲ್ಲಿ ಮಾತನಾಡಿದರೆ ಆತನನ್ನು ಯಾವ ಪರಿ ಹೆದರಿಸಲಾಗುತ್ತದೆಂದರೆ, 'ಇದೆಲ್ಲ ಬೇಡವೇ ಬೇಡ' ಎಂದು ಆತ ಸುಮ್ಮನಾಗಿಬಿಡುತ್ತಾನೆ. ದಿಯೋಬಂದ್‌ನ ಉಪಕುಲಪತಿಯಾಗಿದ್ದ, ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ವಸ್ತಾನ್ವಿ, 'ಗುಜರಾತ್‌ನ ಅಭಿವೃದ್ಧಿ ಯೋಜನೆಗಳಿಂದಾಗಿ ಮುಸಲ್ಮಾನರಿಗೆ ಲಾಭವಾಗಿದೆ' ಎಂದು ಹೇಳಿಕೆ ನೀಡಿದ್ದರು. ಇದೊಂದೇ ಕಾರಣಕ್ಕೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು! ಉರ್ದು ಪತ್ರಿಕೆಯ ಸಂಪಾದಕ ಶಾಹಿದ್ ಸಿದ್ದಿಕಿ ಮೇಲೆ ನರೇಂದ್ರ ಮೋದಿಯವರ ಸಂದರ್ಶನ ಪ್ರಕಟಿಸಿದ ಕಾರಣಕ್ಕಾಗಿ ನಿರಂತರವಾಗಿ ದಾಳಿ ಮಾಡಲಾಯಿತು, ನಿಂದಿಸಲಾಯಿತು. ಈಗ ಮುಸ್ಲಿಂ ವಿದ್ವಾಂಸ ಜಫರ್ ಮೆಹಮೂದ್‌ರ ಸರದಿ! ಯುವ ಸಮಾವೇಶವೊಂದಕ್ಕೆ ಭಾಷಣಕಾರರಾಗಿ ಮೆಹಮೂದ್ ಗುಜರಾತ್‌ನ ಗಾಂಧಿನಗರಕ್ಕೆ ಆಗಮಿಸಿದ್ದರು. ಸಮಾವೇಶದ ಅತಿಥಿಗಳಲ್ಲಿ ಡಾ. ಅಬ್ದುಲ್ ಕಲಾಂ, ಹೆಸರಾಂತ ಬ್ಯಾಂಕರ್ ದೀಪಕ್ ಪ್ರಕಾಶ್, ನರೇಂದ್ರ ಮೋದಿ ಮತ್ತಿತರರು ಇದ್ದರು.
ತಮ್ಮ ಭಾಷಣದುದ್ದಕ್ಕೂ ಮೆಹಮೂದ್, ಬಿಜೆಪಿಯ ನೀತಿಗಳ ಬಗ್ಗೆ, ಗುಜರಾತ್ ಹಿಂಸೆಯಲ್ಲಿ ಹಾನಿಗೊಳಗಾದ ಮುಸಲ್ಮಾನರ ಬಗ್ಗೆಯೇ ಮಾತನಾಡಿದರಾದರೂ, ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡರು ಎನ್ನುವ ಕಾರಣಕ್ಕೆ ಈಗ ಅವರ ಮೇಲೆ ಪ್ರಹಾರ ನಡೆದಿದೆ.
ಆ ಸಮಾವೇಶದಲ್ಲಿ ಭಾಗವಹಿಸಲು ಹೈದ್ರಾಬಾದ್‌ನಿಂದ ಬಂದಿದ್ದ ಯುವ ಮೌಲಾನಾಗಳೂ ಟೀಕೆಗೆ ಗುರಿಯಾದರು. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ, ಹೆದರಿದ ಆ ಹುಡುಗರು, 'ಮೋದಿಯನ್ನು ಭೇಟಿಯಾಗಿ ದೊಡ್ಡ ಪಾಪ ಮಾಡಿದ್ದೇವೆ' ಎಂದು ಮಾಧ್ಯಮಗಳ ಮುಂದೆ ಹೇಳಿ ಬಚಾವಾಗಬೇಕಾಯಿತು. ಮೋದಿಯವರಿದ್ದ ಸಮಾವೇಶದಲ್ಲಿ ಇಷ್ಟೊಂದು ಮಂದಿ ಯುವ ಮುಸಲ್ಮಾನರು ಭಾಗವಹಿಸಿದ್ದು ಇದೇ ಮೊದಲ ಬಾರಿಗೆ. ನಿಜಕ್ಕೂ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಕ್ಕೆ, ಸಮಯಕ್ಕೆ ಇದು ನಿದರ್ಶನ. ಹಾಗೆ ನೋಡಿದರೆ ಮೋದಿ ಅಂದು ಅಲ್ಲಿ ಮಾತನಾಡಿದ್ದು ಬಹಳ ಕಡಿಮೆ. ಎಲ್ಲರೂ ಹೇಳಿದ್ದನ್ನು ಸಂಯಮದಿಂದ ಕೇಳಿಸಿಕೊಂಡ ಅವರು, ಕೊನೆಗೆ ಒಂದೆರಡು ಮಾತನಾಡಿದರಷ್ಟೆ.
2003ರಿಂದ ಕಾಲಕಾಲಕ್ಕೆ ಮೋದಿ-ಮುಸ್ಲಿಮರ ಮಧ್ಯೆ ಮಾತುಕತೆಗಳು ನಡೆಯುತ್ತಿವೆ. ತಮ್ಮ ನಿಷ್ಪಕ್ಷಪಾತ ಯೋಜನೆಗಳ ನಡುವೆಯೂ ಮೋದಿ ಮುಸಲ್ಮಾನರತ್ತ ಗಮನ ಹರಿಸುತ್ತಿದ್ದಾರೆ. ಇದುವರೆಗೂ ಸುಮಾರು 178 ವಿವಿಧ ಮುಸ್ಲಿಂ ಗುಂಪುಗಳು ತಮ್ಮ ಶಾಲೆ, ಕಾಲೇಜು, ಮದರಸಾ, ಉದ್ಯೋಗ, ವಸತಿಯ ಕುರಿತಾದ ಅನೇಕ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿವೆ.   
ಅವರ ಸಮಸ್ಯೆಗಳನ್ನು ಬಗೆಹರಿಸಲು ಮೋದಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ತಮ್ಮನ್ನು ಭೇಟಿಯಾದ ಒಂದು ಗುಂಪಿಗಂತೂ ಅವರು 2002ರ ಘಟನೆಯ ಬಗ್ಗೆ ಮಾತನಾಡುತ್ತಾ "ಇದು ನನ್ನ ಪಾಲಿಗೆ ಅಂಟಿದ ಕಳಂಕ, ಇದನ್ನು ತೊಳೆದುಕೊಳ್ಳಬೇಕು" ಎಂದು ಹೇಳಿದ್ದರು. ಇನ್ನು ಡಿಸೆಂಬರ್ 2012ರಂದು ಚುನಾವಣೆ ಗೆದ್ದ ನಂತರ ಅವರು "ನನ್ನಿಂದ ಯಾರಿಗಾದರೂ ತೊಂದರೆಯಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ" ಎಂದೂ ಹೇಳಿದ್ದರು. ಇತ್ತೀಚೆಗೆ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲೂ ಅವರು ಇದೇ ಧ್ವನಿಯಲ್ಲಿ ಮಾತನಾಡಿದ್ದಾರೆ. ಆದರೆ ಎಂದಿನಂತೆ ಅವರ ಮಾತನ್ನು ತಿರುಚುವ, ಇಲ್ಲದ ಅರ್ಥಗಳನ್ನು ಹುಡುಕುವ ಕೆಲಸಗಳಾದವು.
'ಮೋದಿ ದ್ವೇಷ' ಮುಗಿಯುತ್ತಿಲ್ಲವೇಕೆ ಎಂಬ ಬಗ್ಗೆ 2012ರಲ್ಲಿ ಮಹೇಶ್ ಭಟ್ ಅವರು ಹೇಳಿದ ಮಾತೊಂದು ಇಲ್ಲಿ  ಪ್ರಸ್ತುತವೆನಿಸುತ್ತದೆ: 'ದುರ್ದೈವವಶಾತ್, ದ್ವೇಷದಿಂದ ಲಾಭ ಮಾಡಿಕೊಳ್ಳುವ ಹಲವಾರು ಉದ್ಯಮಿಗಳು ಎಲ್ಲೆಡೆಯೂ ಇದ್ದಾರೆ. ಮನುಷ್ಯ ಹೊಡೆದಾಟ ನಿಲ್ಲಿಸಿದರೆ ಹೇಗೆ ಯುದ್ಧ ಉದ್ಯಮಗಳಿಗೆ ಲುಕ್ಸಾನಾಗುತ್ತದೋ ಇದೂ ಅದೇ ರೀತಿಯೇ! ಈ ದ್ವೇಷ ಉದ್ಯಮದಲ್ಲಿ ಅವರು ಅತಿ ಹೆಚ್ಚಿನ ಹೂಡಿಕೆ ಮಾಡಿರುತ್ತಾರೆ. ಅವರಿಗೆ ಲಾಭವಾಗಬೇಕೆಂದರೆ, ದ್ವೇಷ ಹೆಚ್ಚಾಗುತ್ತಲೇ ಇರಬೇಕು. ಇದರಲ್ಲೇ ಅವರ ಉಳಿವಿದೆ. ಜಾತ್ಯತೀತ ಮೌಲ್ಯಗಳ ಬಗ್ಗೆ ಮಾತನಾಡುವವರು ಒಮ್ಮೆ ಗಾಂಧೀಜಿಯವರ ಪುಸ್ತಕಗಳನ್ನು ಓದುವುದೊಳಿತು; ಏಕೆಂದರೆ ಮಹಾತ್ಮರ ಪುಸ್ತಕಗಳ ಪುಟಗಳಲ್ಲಿ 'ಶತ್ರು' ಎಂಬ ಪದಕ್ಕೆ ಸ್ಥಳವೇ ಇಲ್ಲ."

 ಜಫರ್ ಸರೇಶ್‌ವಾಲಾ
ಗುಜರಾತ್ ಉದ್ಯಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.