ಬಲೂಚಿಸ್ತಾನದಲ್ಲೊಂದು ನಾನಿ ಮಂದಿರ...
ಬಲೂಚಿಸ್ತಾನದ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುವ ಹೊತ್ತಿನಲ್ಲೇ ಅಲ್ಲಿನ ಪ್ರವಾಸದ ಬಗೆಗಿನ ನನ್ನ ಪುಸ್ತಕ ಮುಕ್ತಾಯದ ಹಂತಕ್ಕೆ ತಲುಪಿದೆ. ಬಲೂಚಿ ಜನರಿಗೆ ಭಾರತೀಯರೆಂದರೆ ಅದೇನೋ ಪ್ರೀತಿ. ಮೂರು ವರ್ಷಗಳ ಹಿಂದೆ ನಾನು ಕ್ಷತ್ರಿಯರ ಕುಲದೇವಿಯಾದ ಮಾತಾ ಹಿಂಗ್ಲಜ್ಳ ದರ್ಶನಕ್ಕಾಗಿ ಅಲ್ಲಿಗೆ ಹೋಗಿದ್ದೆ. ಬಲೂಚ್ ಪರ್ವತಶ್ರೇಣಿಗಳ ನಡುವೆ ಹಿಂಗ್ಲಜ್ ಮಂದಿರವಿದೆ. ಆ ಯಾತ್ರೆ ಸಫಲವಾಗಲು, ಅಂದಿನ ಕೇಂದ್ರ ಸಚಿವ ಮತ್ತು ದೇವಿಯ ಪರಮ ಭಕ್ತ ಜಸ್ವಂತ್ ಸಿಂಗ್ ಅವರೇ ಕಾರಣ. ನಾವು ರಸ್ತೆ ಮಾರ್ಗವಾಗಿ ಅಲ್ಲಿಗೆ ತಲುಪಿದ್ದೆವು. ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ರಸ್ತೆ ಮಾರ್ಗವನ್ನು ಅಲ್ಲಿ ತೆರೆಯಲಾಗಿತ್ತು. ಅಮರ್ಕೋಟ್(ಅಕ್ಬರ್ ಜನಿಸಿದ ಸ್ಥಳ, ಇದನ್ನೀಗ ಉಮರ್ಕೋಟ್ ಎಂದು ಕರೆಯಲಾಗುತ್ತದೆ). ಮಿರ್ಪುರ್ಖಾಸ್ ಮತ್ತು ಕರಾಚಿಯನ್ನು ದಾಟಿ ಮುನಾಬಾವೋ ಮತ್ತು ಥಾರ್ ಪಾರ್ಕರ್ ಮೂಲಕ ಆ ಸ್ಥಳಕ್ಕೆ ತಲುಪಿದೆವು. ನಾನು ಯಾತ್ರೆಗೆ ಹೊರಟವರ ತಂಡದಲ್ಲಿ ಸೇರಿಕೊಂಡಿದ್ದೇ ಒಂದು ಪವಾಡ. ಯಾತ್ರೆಯ ಕೊನೆಯ ದಿನದ, ಕೊನೆಯ ಯಾತ್ರಿಯ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿತ್ತು! ಇದಕ್ಕಾಗಿ ಪಾಕಿಸ್ತಾನದ ಹೈ ಕಮೀಷನರ್ ಅಜೀಜ್ ಅಹಮದ್ ಖಾನ್ಗೆ ನಾನು ಧನ್ಯವಾದ ಅರ್ಪಿಸುತ್ತೇನೆ.
ಜನರನ್ನು ಧೈರ್ಯಶಾಲಿಯಾಗಿ ಮತ್ತು ಪರಾಕ್ರಮಿಗಳನ್ನಾಗಿ ಮಾಡುವ ಎಲ್ಲಾ ಸಂಭಾವ್ಯತೆಗಳೂ ಆ ಸ್ಥಳದಲ್ಲಿವೆ. ಸಮುದ್ರ ತೀರ, ಅದ್ಭುತ ಪರ್ವತ ಶ್ರೇಣಿಗಳು (ಗ್ವಾದಾರ್ ಈ ಸ್ಥಳಕ್ಕೆ ತುಂಬಾ ಹತ್ತಿರದಲ್ಲಿಯೇ ಇದೆ. ಈ ಸ್ಥಳವನ್ನು ತಲುಪಲು ನಾವು ಗ್ವಾದಾರ್ ಹೈವೆಯನ್ನೇ ಬಳಸಿದೆವು). ಹಿಂಗೋಲ್ ನದಿ (ಪಾರ್ವತಿ ದೇವಿಯ ಸಿಂಧೂರದ ಹೆಸರು), ಮರಳುಗಲ್ಲುಗಳ ಸಾಲು... ಇಂಥ ಸ್ಥಳದಲ್ಲಿ ಬದುಕಲು ಬಲಿಷ್ಟ ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಹಿಂಗ್ಲಜ್ಗೆ ಹೋಗುವ ಹಾದಿ ಜಗತ್ತಿನ ಅತ್ಯಂತ ಕಠಿಣ ಯಾತ್ರಾ ಮಾರ್ಗವಾಗಿತ್ತು ಎನ್ನುತ್ತವೆ ಪ್ರವಾಸ ಕಥನಗಳು. ಶುಷ್ಕ ನೆಲ, ಬಿಸಿ ಗಾಳಿ ಮತ್ತು ಡಕಾಯಿತರು ತುಂಬಿದ ಈ ಪ್ರದೇಶಕ್ಕೆ ಒಂಟೆಯ ಮೇಲೆ ಕರಾಚಿಯಿಂದ ತೆರಳಲು 45 ದಿನಗಳಾಗುತ್ತಿದ್ದವು. ಈ ಯಾತ್ರೆಯ ಗುರಿ 'ಸಾವು' ಇಲ್ಲವೇ 'ದರ್ಶನ' ಎನ್ನುವಷ್ಟು ಕಠಿಣವಾಗಿತ್ತು. ಹಿಂಗ್ಲಜ್ ಯಾತ್ರೆಯ ಮೇಲೆ ನಿರ್ಮಾಣವಾದ ಪ್ರಖ್ಯಾತ ಬಂಗಾಲಿ ಚಿತ್ರವೊಂದು ಈ ಯಾತ್ರೆಯನ್ನು 'ಲೈಫ್ಟೈಮ್' ಇವೆಂಟ್ ಎಂದು ಬಣ್ಣಿಸುತ್ತದೆ. ಆದರೆ ಚೀನಿಯರು ಗ್ವಾದಾರ್ ಬಂದರಿಗೆ ತಲುಪಲು ನಿರ್ಮಾಣ ಮಾಡಿದ ಕರಾವಳಿ ಹೆದ್ದಾರಿ ಈಗ ಪರಿಸ್ಥಿತಿಯನ್ನು ಬದಲಿಸಿದೆ. ಅಘೋರ್ವರೆಗೆ ಆ ಹೆದ್ದಾರಿಯಲ್ಲಿ ಪಯಣಿಸಿ ಬಲಕ್ಕೆ ಹೊರಳಿದರೆ ಅಲ್ಲಿಂದ ಹಿಂಗ್ಲಜ್ಗೆ ತುಂಬಾ ಹತ್ತಿರದ ಪಯಣ. ಈಗ ಒಂಟೆಗಳ ಜಾಗದಲ್ಲಿ ಏರ್ಕಂಡಿಷನ್ಡ್ ಟೊಯೋಟಾ ವ್ಯಾನ್ಗಳು ಬಂದಿರುವುದರಿಂದ ಹೆಚ್ಚೇನೂ ತೊಂದರೆಯಾಗದು.
ಆದರೂ ಕರಾಚಿಯಿಂದ ಶುರುವಾದ ಪ್ರಯಾಣ ನಮ್ಮನ್ನೆಲ್ಲ ಎಷ್ಟು ಹೈರಾಣಾಗಿಸಿತ್ತೆಂದರೆ, ಹಿಂದಿನ ಯಾತ್ರಾರ್ಥಿಗಳು ಎಷ್ಟು ತ್ರಾಸ ಪಟ್ಟಿರಬಹುದು ಎನ್ನುವುದನ್ನು ಸುಲಭವಾಗಿ ನಾವು ಊಹಿಸಬಹುದಾಗಿತ್ತು. ಆದರೆ ಬಲೂಚ್ನ ಮಾಜಿ ಮುಖ್ಯಮಂತ್ರಿ ಮತ್ತು ಲಾಸ್ಬೆಲ್ಲಾದ ನವಾಬ 'ಜಮ್ ಯೂಸುಫ್ ಮೀರ್ ಮೊಹಮ್ಮದ್' ಅವರ ಸರ್ಕಾರ ನಿರ್ಮಿಸಿರುವ 22 ಕಿಲೋಮೀಟರ್ಗಳ ರಸ್ತೆ ಸುಲಭವಾಗಿ ನಾನಿ ಮಂದಿರಕ್ಕೆ(ಹಿಂಗ್ಲಜ್ ಮಂದಿರಕ್ಕೆ) ಕರೆದೊಯ್ಯುತ್ತದೆ. ಅದು ನಿಜಕ್ಕೂ ಪ್ರಾಮುಖ್ಯತೆಯುಳ್ಳ ಶ್ರದ್ಧಾ ಕೇಂದ್ರ. ದೇವಿ ಪಾರ್ವತಿ ತನ್ನ ತಂದೆಯ ಯಜ್ಞದಲ್ಲಿ ಅಗ್ನಿ ಪ್ರವೇಶ ಮಾಡಿದಾಗ, ಉಗ್ರಗೊಂಡ ಶಿವ ದೇವಿಯ ವಿವಿಧ ಅಂಗಗಳು ಬಿದ್ದಿದ್ದ ಸುಮಾರು 52 ಜಾಗಗಳಿಗೆ ಪ್ರಯಾಣ ಮಾಡಿದ್ದನಂತೆ. ಅಂಥ ಸ್ಥಳಗಳಿಗೆ ಶಕ್ತಿಪೀಠ ಎಂದು ಕರೆಯುತ್ತಾರೆ. ಅಂಥ ಒಂದು ಪೀಠ ಹಿಂಗ್ಲಜ್. ಸಾವಿರಾರು ವರ್ಷಗಳಿಂದ ಈ ಶಕ್ತಿಪೀಠ ನಮ್ಮ ಯಾತ್ರೆಯ ಪ್ರಮುಖ ಸ್ಥಾನವಾಗಿತ್ತು. ಹಿಮಾಲಯದಿಂದ ಈ ಜಾಗಕ್ಕೆ ಶಿವ ಬಂದಾಗ ಮರಳಿನ ಅನಂತ ರಾಶಿ, ಅರಬ್ಬೀ ಸಮುದ್ರದ ನೀಲಿ ಅಲೆಗಳಲ್ಲಿ ಒಂದಾಗಿ ಅದ್ಭುತಲೋಕವೇ ಸೃಷ್ಟಿಯಾಗಿರುತ್ತದೆ. ಈಗಲೂ ಅದು ನಮ್ಮ ನಾಗರಿಕತೆಯ ಹರಿವಿನ ಪ್ರತಿಬಿಂಬದಂತೆ ಗೋಚರವಾಗುತ್ತದೆ.
ಬಲೂಚಿಗಳು ಅತಿಥಿ ಸತ್ಕಾರದಲ್ಲಿ ಮತ್ತು ಸ್ವಾಭಿಮಾನದಲ್ಲಿ ಮುಂದಿರುವ ಜನ. 'ಆತ್ಮಾಭಿಮಾನ'ವೇ ಅವರಿಗೆ ಸರ್ವ ಶ್ರೇಷ್ಠವಾದದ್ದು. ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಖಾನ್ಗಳು ಸಾಯುವುದಕ್ಕೂ/ಸಾಯಿಸುವುದಕ್ಕೂ ಸಿದ್ಧರಾಗುತ್ತಾರೆ. ವಿಭಜನೆಯ ನಂತರದಿಂದ ಪಾಕಿಸ್ತಾನಿಗಳು ಬಲೂಚಿಸ್ತಾನದ ಆತ್ಮಾಭಿಮಾನಕ್ಕೆ ಹಾನಿ ಮಾಡುತ್ತಲೇ ಬಂದಿದ್ದಾರೆ. ಬಲೂಚಿಸ್ತಾನದ ದೊರೆ ಮೀರ್ ಅಹಮದ್ ಯಾರ್ ಖಾನ್ 1947ರಂದು ಆ ಪ್ರದೇಶವನ್ನು ಸ್ವತಂತ್ರವೆಂದು ಘೋಷಿಸಿದರಾದರೂ, ಸಾಂಪ್ರದಾಯಿಕ ಬಲೂಚಿ ಸಂವಿಧಾನವಾದ 'ರವಾಜ್' ಅನ್ನು ಮುಂದಿಟ್ಟುಕೊಂಡು ದಬ್ಬಾಳಿಕೆಗಿಳಿದ ಮೊಹಮ್ಮದ್ ಅಲಿ ಜಿನ್ನಾ, ಬಲೂಚಿಸ್ತಾನ ತಮ್ಮ ಅಧೀನದಲ್ಲೇ ಇರುವಂತೆ ನೋಡಿಕೊಂಡರು. ಆದರೆ ಬಲೂಚ್ನ ರಾಷ್ಟ್ರೀಯವಾದಿಗಳು ಪಾಕಿಸ್ತಾನದ ಆಡಳಿತವನ್ನು ಒಪ್ಪಿಕೊಳ್ಳಲಿಲ್ಲ. ಹಾಗಾಗೇ ಕಾಲಕಾಲಕ್ಕೆ ಪಾಕಿಸ್ತಾನ ವಿರೋಧಿ ಹೋರಾಟಗಳು ಅಲ್ಲಿ ಹುಟ್ಟಿಕೊಂಡವು. ಗಾಂಧೀಜಿಯವರ ಕಾಂಗ್ರೆಸ್ನ ಪ್ರಬಲ ಬೆಂಬಲಿಗನಾಗಿದ್ದ ಮತ್ತು ಬಹುತೇಕ ಬಲೂಚಿಗಳ ಬೆಂಬಲ ಪಡೆದಿದ್ದ ಏಕೈಕ ಸಂಘಟನೆ 'ಅಂಜುಮಾನ್-ಐ-ವತನ್' ಪಕ್ಷವನ್ನು ಪಾಕಿಸ್ತಾನದ ಸೇನೆ ನಿಷೇಧಿಸಿಬಿಟ್ಟಿತು. ನಂತರ ಆ ಭಾಗದ ಸಂಪೂರ್ಣ ಹಿಡಿತ ಅದರ ಕೈಗೆ ಸೇರಿತು. ಆಗ ಶುರುವಾಯಿತು ಅದರ ದಬ್ಬಾಳಿಕೆ! ಎಷ್ಟೋ ಘೋರ ಹತ್ಯೆಗಳು ನಡೆದುಹೋದವು, ಆ ಪ್ರದೇಶ ಹಿಂದುಳಿಯುತ್ತಾ ಹೋಯಿತು. ಯಾವಾಗ ಬಲೂಚಿಸ್ತಾನದ ಸುಯಿ ಪ್ರದೇಶದಲ್ಲಿ 'ಅನಿಲ' ಪತ್ತೆಯಾಯಿತೋ, ಅಂದೇ ಶ್ರೀಮಂತ ಪಾಕಿಸ್ತಾನಿಗಳ ಕಣ್ಣು ಇತ್ತ ಹೊರಳಿತು. ಇಸ್ಲಾಮಾಬಾದ್ನ ಪಂಜಾಬಿ ಆಡಳಿತಗಾರರು, ಕೋಟ್ಯಧಿಪತಿಗಳು ಆ ಜಾಗಕ್ಕೆ ಬಂದು ಕುಳಿತರು. ಗ್ವಾದಾರ್ ಸಮೀಪದಲ್ಲೇ ಇದ್ದುದ್ದರಿಂದ ಪಾಕಿಸ್ತಾನಿ ಸೇನಾ ಅಧಿಕಾರಿಗಳಿಗೆ ಲಾಭ ಮಾಡಿಕೊಳ್ಳಲು ಮತ್ತು ಬೃಹತ್ ಜಾಗಗಳನ್ನು ಕಬ್ಜಾ ಮಾಡಿಕೊಳ್ಳಲು ಅನುಕೂಲವಾಯಿತು. ತಮ್ಮ ನೆಲ ಮತ್ತು ಸಂಪತ್ತು ತಮ್ಮವರಲ್ಲದ ಜನರು ಬಳಸಿಕೊಳ್ಳುತ್ತಿರುವುದನ್ನು ಬಲೂಚಿಸ್ತಾನದ ಜನರು ನೋಡಿದರು. ಹಾಗಾಗೇ ಅವರು ಬಂಡಾಯವೆದ್ದದ್ದು.
1958ರಲ್ಲಿ ಬಲೂಚ್ ಜನರ ನಾಯಕ, ನವಾಬ್ ನೌರೋಜ್ ಖಾನ್, ಪಾಕಿಸ್ತಾನಿಗಳ ವಿರುದ್ಧ ಸಶಸ್ತ್ರ ಯುದ್ಧ ಶುರುಮಾಡಿದರು. ಆಗ ಬೆದರಿದ ಪಾಕಿಸ್ತಾನಿ ಸೇನೆಯ ಲೆಫ್ಟಿನೆಂಟ್ ಕರ್ನಲ್ ಟಿಕ್ಕಾ ಖಾನ್, ನವಾಬ್ ಮತ್ತು ಅವರ ಮಕ್ಕಳನ್ನು ಮಾತುಕತೆಗೆ ಆಹ್ವಾನಿಸಿದರು. ಆದರೆ ಆಗಿದ್ದೇ ಬೇರೆ! ಪಾಕಿಸ್ತಾನಿ ಸೇನೆ ನವಾಬರನ್ನು ಬಂಧಿಸಿ ಅವರೊಂದಿಗೆ ಬಂದಿದ್ದವರನ್ನೆಲ್ಲ ಭೀಕರವಾಗಿ ಹತ್ಯೆ ಮಾಡಿತು. ಕೆಲ ವರ್ಷಗಳ ನಂತರ ನವಾಬ್ ನೌರೋಜ್ ಖಾನ್ ಜೈಲಿನಲ್ಲಿಯೇ ಮೃತಪಟ್ಟರು.
1963ರಿಂದ 1969ರವರೆಗೆ ನಡೆದ ಹೋರಾಟ 'ಬಲೂಚ್ ನಾಗರಿಕ ಯುದ್ಧ'ವೆಂದೇ ಪ್ರಸಿದ್ಧಿ ಪಡೆದಿದೆ. ಇನ್ನು ಅದೇ ಸಮಯದಲ್ಲಿ ಶೇಖ್ ಮುಜಿಬುರ್ ರೆಹಮಾನ್ ಪ್ರತ್ಯೇಕ ಬಾಂಗ್ಲಾದೇಶಕ್ಕಾಗಿ ಧ್ವನಿ ಎತ್ತಿದ್ದರಿಂದ ಬಲೂಚಿಗಳಿಗೆ ಇನ್ನಷ್ಟು ಶಕ್ತಿ ಬಂದಂತಾಯಿತು. ಗೌಸ್ ಬಕ್ಸ್, ಸರ್ದಾರ್ ಅತಾಉಲ್ಲಾಹ್ ಮೆಂಗಲ್, ಖಾರ್ಯ್ ಬಕ್ಸ್ ಮತ್ತು ನವಾಬ್ ಅಕ್ಬರ್ ಖಾನ್ ಬಗ್ತಿಯಂಥ ಪ್ರಭಾವಿ ನಾಯಕರಿಂದ ಈ ಹೋರಾಟಕ್ಕೆ ಇನ್ನಷ್ಟು ಶಕ್ತಿ ಬಂದಿತಾದರೂ, ಪಾಕಿಸ್ತಾನಿ ಸೇನೆಯ ಕ್ರೌರ್ಯವೇ ಕೊನೆಗೆ ಜಯಗಳಿಸಿತು. ಸಾವಿರಾರು ಜನರನ್ನು ವಿಚಾರಣೆ ನಡೆಸದೆಯೇ ಬಂಧಿಸಲಾಯಿತು. ಕೊಲ್ಲಲಾಯಿತು. ಇದರಿಂದಾಗಿ ಬಲೂಚಿ ಜನರ ನೋವು, ಆಕ್ರೋಶ ಹೆಚ್ಚಾಗುತ್ತಲೇ ಹೋಯಿತು.
ಇನ್ನು 2005ರಲ್ಲಿ ಮತ್ತೊಮ್ಮೆ ಬಲೂಚ್ ರಾಷ್ಟ್ರೀಯವಾದಿಗಳು, ತಮ್ಮ ಜನರನ್ನು ಮತ್ತು ಬಲೂಚ್ನ ಸಾಂಸ್ಕೃತಿಯ ಗುರುತುಗಳನ್ನು ಕಸಿಯುವ ಕೆಲಸ ಮಾಡಬಾರದು ಎಂದು ಪಾಕಿಸ್ತಾನದ ವಿರುದ್ಧ ದಂಗೆಯೆದ್ದರು. ಆದರೆ ಪಾಕಿಸ್ತಾನ 2006ರಲ್ಲಿ ಅವರ 79 ವರ್ಷದ ನಾಯಕ ನವಾಬ್ ಅಕ್ಬರ್ ಖಾನ್ ಬಗ್ತಿ ಅವರನ್ನು ಕೊಂದುಹಾಕಿತು.
ಪಾಕಿಸ್ತಾನದ 43 ಪ್ರತಿಶತದಷ್ಟು ಭೂಭಾಗವನ್ನು ಮತ್ತು 6.5 ಮಿಲಿಯನ್ ಜನಸಂಖ್ಯೆ ಹೊಂದಿರುವ ಬಲೂಚಿಸ್ತಾನ ಇಂದಿಗೂ ಪಾಕಿಸ್ತಾನದ ದುರ್ಬಲ ಅಂಶಗಳಲ್ಲಿ ಪ್ರಮುಖವಾದದ್ದು. ನೈಜ ಸನ್ನಿವೇಶವನ್ನು ಅರ್ಥಮಾಡಿಕೊಳ್ಳದೇ, ಜನರ ಬೇಕು ಬೇಡಗಳಿಗೆ ಕಿವಿಯಾಗದ ವ್ಯಕ್ತಿಗಳೇ ಆ ಭಾಗವನ್ನು ಮೊದಲಿನಿಂದಲೂ ಆಳುತ್ತಿದ್ದಾರೆ.
1941ರಲ್ಲಿ ಅಲ್ಲಿನ ಹಿಂದುಗಳ ಸಂಖ್ಯೆ 54,000ದಷ್ಟಿತ್ತು. ಸ್ಥಳೀಯ ಬಲೂಚ್ ಖಾನ್ ಜನಾಂಗ್ ಹಿಂದುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು, ಈಗಲೂ ಹೊಂದಿದೆ. ಕಟ್ಟುಮಸ್ತು ದೇಹದ ಬಲೂಚ್ ಹಿಂದುಗಳು 1947ರ ವರೆಗೆ ವ್ಯಾಪಾರ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ನಿಯಂತ್ರಣ ಹೊಂದಿದ್ದರು. ಪಾಕಿಸ್ತಾನ ಸೇನೆ ಆ ಭಾಗವನ್ನು ಆಕ್ರಮಿಸಿದ ನಂತರದಿಂದ ಅವರ ಸಂಖ್ಯೆ ಮೊದಲಿಗಿಂತ ಅರ್ಧಕ್ಕೆ ಇಳಿದಿದೆ. ಲಾಸ್ ಬೆಲಾ, ಉಥೇಲೋ, ಮಿಠಿಮತ್ತು ಚಮನ್ ಪ್ರದೇಶಗಳಲ್ಲಷ್ಟೇ ಹೆಚ್ಚಾಗಿ ಅವರು ಇರುತ್ತಾರಂತೆ. ಅವರಲ್ಲಿ ಬಹುಸಂಖ್ಯೆಯಲ್ಲಿರುವವರು ಹಿಂದುಳಿದ ವಾಲ್ಮಿಕಿ ಜನಾಂಗಕ್ಕೆ ಸೇರಿದವರು. ಈಗ ಅವರೆಲ್ಲ ಗುಲಾಮಗಿರಿಗೆ ದೂಡಲ್ಪಟ್ಟಿದ್ದಾರೆ. ದುರ್ದೈವವಶಾತ್, ಈ ಭಾಗದಲ್ಲಿ ಆಗಿದೆಯೆಂದು ಹೇಳಲಾಗುತ್ತಿರುವ ಸುಧಾರಣೆ ಎಂದಿಗೂ ಹಿಂದುಗಳನ್ನು ತಲುಪಿಲ್ಲ. ಎಲ್ಲರಿಗಿಂತಲೂ ಹೀನಾಯ ಪರಿಸ್ಥಿತಿಯಲ್ಲಿ ಅವರು ಬದುಕುತ್ತಿದ್ದಾರೆ. ಅವರಲ್ಲಿ ಎಷ್ಟು ಮಂದಿ ಬದುಕಿದ್ದಾರೆ, ಇರುವವರ ಸಂಖ್ಯೆಯೆಷ್ಟು ಎನ್ನುವ ಬಗ್ಗೆ ಯಾರ ಬಳಿಯೂ ನಿಖರ ದಾಖಲೆಗಳಿಲ್ಲ.
ಆದರೆ ನಮಗೆ ಮಂದಿರದಲ್ಲಿ ಭೇಟಿಯಾದ ಹಿಂದುಗಳು ಮೇಲ್ವರ್ಗಕ್ಕೆ ಸೇರಿದವರೆಂಬುದು ನೋಡಿದ ಕೂಡಲೇ ಅರ್ಥವಾಗಿ ಹೋಯಿತು. ಅವರಲ್ಲಿ ವೈದ್ಯರು, ವ್ಯಾಪಾರಿಗಳು, ಇಂಜಿನಿಯರ್ಗಳೂ ಇದ್ದರು. ಬಹುತೇಕರು ಜಮಾತೆ ಇಸ್ಲಾಮಿ ಅಥವಾ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬೆಂಬಲಿಗರೆಂಬುದು ತಿಳಿಯಿತು. ಅಂದರೆ ಅವರೆಲ್ಲ ಪ್ರತೀಕೂಲ ಪರಿಸರದಲ್ಲಿ ಬದುಕುಳಿಯುವುದನ್ನು ಕಲಿತಿದ್ದಾರೆ. ತಮ್ಮ ಪೊಟರೆಗಳಲ್ಲಿ ಯಾರ ದೃಷ್ಟಿಗೂ ಬೀಳದಂತೆ ಬಚ್ಚಿಟ್ಟುಕೊಳ್ಳುವುದು ಅವರಿಗೆ ಅನಿವಾರ್ಯ. ಯಾವುದಾದರೊಂದು ಮುಸ್ಲಿಂ ಪಾರ್ಟಿಯನ್ನು ಸೇರುವುದರಿಂದ ತೊಂದರೆಗಳು ಕಡಿಮೆಯಾಗುತ್ತವೆ ಎನ್ನುವುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ.
ಹಿಂದು ಹೆಣ್ಣುಮಕ್ಕಳೂ ಕೂಡ ತಮ್ಮನ್ನು ತಾವು ಹಿಂದುಗಳೆಂದು ಕರೆದುಕೊಳ್ಳದೆ, ಹಣೆಗೆ ತಿಲಕವಿಟ್ಟುಕೊಳ್ಳದೆ ಅಡ್ಡಾಡುತ್ತಾರೆ. 'ಹೊರಗೆ ಹೋಗುವಾಗ ನಾವು ಹಿಂದುಗಳೆಂದು ಯಾರಿಗೂ ತಿಳಿಯದೆ ಹಾಗೆ ವರ್ತಿಸುವುದೇ ಒಳಿತು' ಎಂದು ಒಬ್ಬರು ನನಗೆ ಹೇಳಿದರು.
ಹಿಂಗ್ಲಜ್ ದೇವಿಯ ಬಗೆಗಿನ ಸುಂದರ ಮಂತ್ರಗಳನ್ನು ಜಪಿಸಿದ, ಗೀತೆಗಳನ್ನು ಹಾಡಿದ ಕೆಲವು ಗಾಯಕರು ನನಗೆ ಪರಿಚಯವಾದರು. ಅವರೆಲ್ಲರ ಮಾತಿನಲ್ಲಿನ ಒಂದು ಸಾಮ್ಯತೆ ನನಗೆ ಕಂಡಿತು. ಬಲೂಚ್ ಮುಸಲ್ಮಾನರನ್ನು ಮಾತ್ರ ಅವರೆಲ್ಲ ಮನಸಾರೆ ಕೊಂಡಾಡುತ್ತಿದ್ದರು. ಇನ್ನು ಅಲ್ಲಿನ ಮುಸಲ್ಮಾನರೂ ಕೂಡ ಈ ಪವಿತ್ರ ಮಂದಿರವನ್ನು ನಾನಿ ಮಂದಿರ(ಹಿರಿಯರ ಮಂದಿರ) ಎಂದು ಕರೆಯುತ್ತಾರೆ!
ಹಿಂಗ್ಲಜ್ ದೇವಿ ಇತಿಹಾಸದ ಘೋರ ರಕ್ತಚರಿತ್ರೆಗಳಿಗೆ ಸಾಕ್ಷಿಯಾಗಿದ್ದಾಳೆ. ಆ ಭಾಗದಲ್ಲಿ ಮತ್ತೆ ಶಾಂತಿ ನೆಲೆಸಲಿ, ಆ ಪವಿತ್ರ ಕ್ಷೇತ್ರಕ್ಕೆ ಎಂದಿಗೂ ತೊಂದರೆಗಳು ಎದುರಾಗದಿರಲಿ ಎಂದು ನಾನು ಹಾರೈಸಬಲ್ಲೆನಷ್ಟೆ.
ತರುಣ್ ವಿಜಯ್
ರಾಜ್ಯಸಭಾ ಸದಸ್ಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

