ವಾರಗಳ ಹಿಂದೆ ಒಂದು ರಾತ್ರಿ ಬೆಂಗಳೂರಿನಲ್ಲಿ ಭಾರಿ ಗಾಳಿಮಳೆ. ತಡರಾತ್ರಿಯವರೆಗೂ ಸುರಿಯುತ್ತಲೇ ಇತ್ತು, ಆವರೆಗಿನ ಎಲ್ಲ ಧಗೆಯನ್ನೂ ಕೊಚ್ಚಿಕೊಂಡು ಹೋಗಲು ಬಂದಿದೆಯೋ ಎಂಬಂತೆ. ಯಾವೆಲ್ಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ ಎಂಬ ಬ್ರೇಕಿಂಗ್‌ನ್ಯೂಸ್ ನೋಡೋಣವೆಂದರೆ ಬಹುಭಾಗಗಳಲ್ಲಿ ಕರೆಂಟ್ ಕೂಡ ಹೋಗಿತ್ತು.
ಪರಿಸ್ಥಿತಿ ಹೀಗಿರಲಾಗಿ.... ಮಲೆನಾಡ ಸೆರಗಿನ ತನ್ನೂರಿಗೆ ಹೋಗಿ ಪುನಃ ಬೆಂಗಳೂರಿನ ಪೊಟರೆಗೆ ಸೇರಿಕೊಳ್ಳಲೆಂದು ಕಾರು ಚಲಾಯಿಸಿಕೊಂಡು ಬರುತ್ತಿದ್ದ ಶ್ರೀಮಾನ್, ಬೆಂಗಳೂರು ಪ್ರವೇಶಿಸುವ ರಸ್ತೆ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ. ಕಾರು ಕೆಟ್ಟುಹೋಗಿತ್ತು, ಮಳೆ ಜೋರಾಗಿತ್ತು. ಕತ್ತಲು-ಕತ್ತಲು, ನಾಳೆ ಆಫೀಸಿಗೆ ಹೋಗಿ ಪೂರೈಸಬೇಕಿರುವ ದಂಡಿಯಾದ ಕೆಲಸಗಳ ನೆನಪೆಲ್ಲ ಆಗಲೇ ಒತ್ತರಿಸುತ್ತಿತ್ತು, ಆಗೀಗ ರೊಯ್ಯೆಂದು ನೀರು ಪಿಚಕ್ ಎನ್ನಿಸುತ್ತ ಹೋಗುತ್ತಿದ್ದ ವಾಹನಗಳಾವವೂ ಅನುಕಂಪ ಸೂಸುವುದಕ್ಕೂ ನಿಲ್ಲುತ್ತಿರಲಿಲ್ಲ. ತನ್ನ ಸುತ್ತಲೂ ತನಗೆ ಅರಿವಾಗದಂತೆ ಗಿರ್ಕಿ ಹೊಡೆಯುತ್ತಿರುವ ಜಗತ್ತು ಇಡಿ ಇಡಿಯಾಗಿ ಹತಾಶೆಯ ಚೆಂಡಾಗಿರುವಂತೆ ಭಾಸವಾಗುತ್ತಿತ್ತು. ಅಷ್ಟು ದುಬಾರಿ ಕಾರನ್ನು ರಸ್ತೆಯಲ್ಲಿ ಬಿಟ್ಟು ಯಾವುದೋ ವಾಹನ ಹಿಡಿದು ನಗರ ಪ್ರವೇಶಿಸಿ ಮೆಕಾನಿಕ್‌ನನ್ನು ಕರೆತರುವುದು ಒಳ್ಳೆಯ ಐಡಿಯಾ ಅನ್ನಿಸಲಿಲ್ಲ. ಅಲ್ಲದೇ ಬೇರೆ ವಾಹನಗಳೂ ಆ ಮಳೆಯಲ್ಲಿ ನಗರ ತಲುಪು ವುದಕ್ಕೆ ಎಷ್ಟು ಹೊತ್ತು ತೆಗೆದುಕೊಳ್ಳಲಿದೆಯೋ ತಿಳಿಯುತ್ತಿರಲಿಲ್ಲ. ಹೀಗಾಗಿ ಗೆಳೆಯನಿಗೆ ಫೋನಾಯಿಸಿ ಮೆಕಾನಿಕ್‌ನನ್ನು ಕರೆದುಕೊಂಡು ಬರಲು ಹೇಳಿದ್ದಾಯಿತು. ತಾನಿರುವಲ್ಲೂ ಭಾರಿ ಗಾಳಿಮಳೆಯಾದ್ದರಿಂದ ಎಷ್ಟು ಹೊತ್ತಾದರೂ ಆಗಬಹುದು ಎಂದು ಸಮಾಧಾನದಲ್ಲೇ ಆತಂಕವನ್ನೂ ಬೆರೆಸಿ ಹೇಳಿದ್ದ ಆ ಗೆಳೆಯ.
ರಸ್ತೆಬದಿಯಲ್ಲಿ ನಿಲ್ಲಿಸಿದ ಕಾರಿನಲ್ಲಿ ಒಬ್ಬನೇ ಕುಳಿತು ಕಾಯಲೇಬೇಕು. ಹೊರಗೆ ಕಾಲಿಡಲೂ ಆಗದ ಜಡಿಮಳೆ. ಬೃಹತ್ ಮರವೊಂದು ಹತ್ತಿರದಲ್ಲೇ ಇದ್ದಿದ್ದರಿಂದ ದೃಷ್ಟಿಗೆ ತಾಗುತ್ತಿತ್ತು. ಉಳಿದಂತೆ ಮಳೆಶಬ್ದ. ತಮಗೇನೂ ಗಮನಿಸಲಿಕ್ಕೆ ಆಗುತ್ತಿಲ್ಲ ಎಂಬಂತೆ ಆಗೀಗ ಪಕ್ಕದಲ್ಲಿ ಹಾದುಹೋಗುವ ವಾಹನಗಳು. ದರಿದ್ರ ಎಂದು ತುಸು ಸಮಯದವರೆಗೆ ಹಣೆಬರಹವನ್ನು ಹಳಿದುಕೊಂಡ ಶ್ರೀಮಾನ್, ನಂತರ ಕಾಯುವಿಕೆಯ ವಾಸ್ತವವನ್ನು ಮನಗಂಡು ಮೌನವಾದ. ಈ ಕತ್ತಲೆಯಲ್ಲಿ ಕತೆ ಹೇಳುತ್ತ ಕುಳಿತುಕೊಳ್ಳುವುದಕ್ಕಾದರೂ ಜತೆಗೊಬ್ಬರು ಇರಬೇಕಿತ್ತು ಅಂತ ಆತನಿಗೆ ತೀವ್ರವಾಗಿ ಅನಿಸಿತು. ಅದೂ ಫಾಯಿದೆಯಿಲ್ಲದ ಆಸೆ ಅಂತ ಅರಿವಾಯಿತು. ಆ ಮಳೆಯಲ್ಲಿ ಯಾವ ನರಹುಳುವೂ ಅತ್ತ ಸುಳಿಯುವ ಸಾಧ್ಯತೆ ಇರಲಿಲ್ಲ. ಅಸಹನೆಗೆ ಬಿದ್ದ ಮನಸ್ಸನ್ನು ಶಾಂತತೆಯ ತೀರಕ್ಕೆ ಎಳೆ ತರುವ ಮನೋವ್ಯಾಪಾರದಲ್ಲಿ ಆತ ಅವನಿಗರಿವಿಲ್ಲದಂತೆಯೇ ಸುಮಾರು ಸಮಯ ಕಳೆದಿದ್ದ.
ಅಂಥ ಏಕಾಂಗಿ ಸನ್ನಿವೇಶದಲ್ಲಿ ಮನಸ್ಸು ಖಾಸಗಿಯಾಗಿಯೇ ಆಟಗಳನ್ನು ಕಟ್ಟುತ್ತದೆ. ಲೆಕ್ಕವಿಲ್ಲದಷ್ಟು ಬಾರಿ ಆತ ಒಬ್ಬನೇ ಕಾರು ಡ್ರೈವ್ ಮಾಡಿಕೊಂಡು ಊರಿಗೆ ಹೋಗಿ ಬಂದಿದ್ದನಾದರೂ ಕಥಾಕಾಲಕ್ಷೇಪಕ್ಕೆ ಯಾರಾದರೂ ಇರಬೇಕಾಗಿತ್ತು ಅಂತ ಇಷ್ಟು ತೀವ್ರವಾಗಿ ಅವನಿಗೆ ಯಾವತ್ತೂ ಅನ್ನಿಸಿರಲಿಲ್ಲ. ಕತೆ ಹೇಳುವುದಕ್ಕೆ ಯಾರೂ ಇರದಿದ್ದಾಗ ಖುದ್ದು ಕತೆ ಹುಟ್ಟಿಸಬೇಕಾಗುತ್ತದೆ. ತಾನೇ ಹಡೆದ ಕತೆಯನ್ನು ತುಸು ದೂರವಿಟ್ಟು ಕಣ್ತುಂಬಿಸಿಕೊಳ್ಳುವ ಪುಳಕಕ್ಕೆ ಒಳಗಾಗಬೇಕಾಗುತ್ತದೆ. ಕಲ್ಪನೆಯೆಂಬುದು ವಾಸ್ತವದ ಜತೆ ಸಂಧಾನಕ್ಕೊಂದು ಪರಿಕರ. ಆದರೆ ಇದೀಗ ಕೆಟ್ಟುನಿಂತ ಕಾರಲ್ಲಿ ಕುಳಿತಿರುವ ನಮ್ಮ ಕತಾನಾಯಕನನ್ನು ಕತೆಕಟ್ಟೆಯಲ್ಲಿ ಕೂರಿಸುವವರು ಯಾರು? ಅವನೆದುರು ಧೋ ಎನ್ನುತ್ತಿರುವ ಮಳೆಯಿದೆ, ಅದಕ್ಕೆ ಮುಖಗೊಟ್ಟು ನಿಂತಂತಿರುವ ಮರವಿದೆ ಹಾಗೂ ಎಲ್ಲವನ್ನೂ ಗೋಜಲಿಗೆ ನೂಕಿದಂತಿರುವ ಕತ್ತಲಿದೆ....
***
ಫಳಾರೆಂದು ನಭದಂಚಲ್ಲಿ ಒಂದು ಮಿಂಚು. ಇವನ ಮಿದುಳಿನಲ್ಲೂ ಚಿತ್ರವೊಂದು ಸ್ಫುರಿಸಿತು. ಶಾಲೆಗೆ ಹೋಗುತ್ತಿದ್ದ ದಿನಗಳು. ಮಳೆಗಾಲದಲ್ಲಿ ರಾತ್ರಿ ಹಗಲುಗಳೇ ಗೊತ್ತಾಗುತ್ತಿರಲಿಲ್ಲ ಆ ಊರಿನಲ್ಲಿ. ಕರೆಂಟಂತೂ ಬುಡ್ಡಿದೀಪಕ್ಕೊಂದು ಕಣ್ಣುಮಿಟುಕಿಸಿ ಹೆಚ್ಚು- ಕಡಿಮೆ ಮಳೆಗಾಲದ ಅಷ್ಟೂ ದಿನಗಳಲ್ಲೂ ರಜೆ ತೆಗೆದುಕೊಳ್ಳುತ್ತಿತ್ತು. ತೋಟದ ಕಾಲುವೆಗಳಲ್ಲಿ, ಬೆಟ್ಟದ ಜರಿಗಳಲ್ಲಿ ಭರ್ರೆಂದು ತೂರುವ ನೀರು. ಸಂಕದ ಸರ್ಕಸ್ಸು, ಗಾಳಿಗೆ ಹೇಗೆಲ್ಲ ಮಡಚಿಕೊಳ್ಳುವ ಕೊಡೆ, ಒಂದು ಕೈಯಲ್ಲಿ ಕೊಡೆ ಹಿಡಿದು ಇನ್ನೊಂದರಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ಮುನ್ನುಗ್ಗುವವರ ಹೀರೋಗಿರಿ, ಬೇಕೆಂದೇ ನೆನೆಯುವ, ಕೆಸರಲ್ಲಿ ಆಡುವ ಮೋಜುಗಳು...
ಅಂಥ ಮಳೆ ಊರಿನಲ್ಲೂ ವಿಚಿತ್ರವೊಂದಿತ್ತು. ಚಳಿಗಾಲ ದಾಟುತ್ತಿದ್ದಂತೆ ನೀರು ಆರಲು ಶುರುವಾಗುತ್ತಿತ್ತು. ಬೇಸಿಗೆಯ ದಿನಗಳೆಂದರೆ ದುಃಸ್ವಪ್ನ. ತೋಟದ ಯಾವುದೋ ತುದಿಯಲ್ಲಿರುವ ಹೊಂಡದಿಂದ ನೀರು ತರಬೇಕು. ಕೆರೆಕಟ್ಟೆಗಳನ್ನೆಲ್ಲ ಸರಿಮಾಡಿಸುವ ಆರ್ಥಿಕ ಚೈತನ್ಯ- ಉಮೇದುಗಳು ಯಾರಲ್ಲೂ ಇರಲಿಲ್ಲ. ಹೀಗಾಗಿಯೇ ಊರಿನ ಎಲ್ಲ ಸಂತೋಷಗಳ ಹೊರತಾಗಿ ಅದು ಸ್ವರ್ಗವಲ್ಲ ಎಂದೇ ಈತನಿಗೆ ಅನ್ನಿಸುತ್ತಿತ್ತು. ಬೇಸಿಗೆಯಲ್ಲಿ ಕಟ್ಟಿಗೆ ಹೊತ್ತುಕೊಂಡು ಧೂಳೆಬ್ಬಿಸುತ್ತ ಹೋಗುವ ಸಾಲು ಸಾಲು ಚಕ್ಕಡಿ ಗಾಡಿಗಳು ಬಾಯಾರಿಕೆ ತಣಿಸಿಕೊಳ್ಳಲು ತನ್ನ ಮನೆ ಮುಂದೆ ನಿಲ್ಲುತ್ತಿದ್ದ ನೆನಪು. 'ಈ ಕೆಟ್ಟ ಜನ ಈ ಪ್ರಮಾಣದಲ್ಲಿ ಕಾಡು ಕಡಿದರೆ ನಾಳೆಗೆ ಲಾಂಟಾನಾ ಪೊದೆಗಳಲ್ಲದೇ ಇನ್ನೇನು ಉಳಿದಾವು' ಎಂಬ ಹಿಡಿಶಾಪ ಹೊತ್ತ ಆತಂಕ ತನ್ನ ಕೇರಿಯಲ್ಲೆಲ್ಲ ಗುಪ್ತಗಾಮಿನಿಯಂತೆ ಹರಿದುಕೊಂಡಿತ್ತಾದರೂ ಕಟ್ಟಿಗೆ- ನಾಟ ಕಡಿದು ಕಾಡು ನಾಶ ಮಾಡುತ್ತಿರುವವರಿಗೆ ಯಾರೂ ನೀರು ನಿರಾಕರಿಸಿದ್ದು ಈತನಿಗೆ ನೆನಪಿಲ್ಲ. 'ಕೆಟ್ಟವರೋ, ಒಳ್ಳೆಯವರೋ ಅವರವರ ಕರ್ಮ ಅವರು ಉಣ್ಣುತ್ತಾರೆ. ಆದರೆ ನೀರು ಕೇಳಿದವರಿಗೆ ಇಲ್ಲ ಎನ್ನಬಾರದು' ಎಂಬುದು ಅಲ್ಲೊಂದು ಅಲಿಖಿತ ಕಾನೂನಿನಂತೆ ಕೆಲಸ ಮಾಡುತ್ತಿತ್ತು.
***
ಮಳೆ ತನ್ನ ಅಬ್ಬರವನ್ನು ತುಸು ಕಡಿಮೆಗೊಳಿಸಿದಂತಿತ್ತು. ಇವನ ಲಹರಿಯ ತೀವ್ರತೆಯೂ ಕುಂದಿ ಎದುರಿನ ಮರವನ್ನೇ ದಿಟ್ಟಿಸಿದ. ನಾಳೆ ಪೇಪರ್ ತೆಗೆದರೆ ಕಾರು-ಬೈಕುಗಳ ಮೇಲೆ ಮರ ಬಿದ್ದಿದ್ದು, ಮನೆಯ ಮೇಲೆ ಮರ ಉರುಳಿದ್ದು, ಮೋರಿಯಲ್ಲಿ ಮಗು ಕೊಚ್ಚಿಕೊಂಡು ಹೋಗಿದ್ದು ಇಂಥದೇ ಸುದ್ದಿಗಳಿರುತ್ತವೆ ಎಂದುಕೊಂಡ. ಎಷ್ಟು ಮಳೆ ಸುರಿದರೂ ತನಗೆ ಸಂತೋಷವೇ ಎಂದು ಕಿಚಾಯಿಸುವಂತೆ ಸನಿಹದ ಆ ವಿಶಾಲ ಮರ ಘನಗಂಭೀರ ಮುದ್ರೆ ಹೊತ್ತು ನಿಂತಿತ್ತು. ಅದನ್ನು ನೋಡುತ್ತಲೇ ಶ್ರೀಮಾನ್‌ಗೆ ಆಗತಾನೇ ತಾನು ನೆನಪಿಸಿಕೊಂಡಿದ್ದ, ಬೆಂಗಳೂರಿನ ಬಿರುಮಳೆಗೆ ಮರಗಳು ಉದುರಿಬಿದ್ದು ಹಾನಿಯಾಗುವ ಚಿತ್ರ ಮತ್ತೆ ಕಣ್ಮುಂದೆ ಬಂತು. ಮಹಾನಗರದ ಮರಗಳಿಗೆ ತಮ್ಮ ಕತೆ ಹೇಳುವ ಭಾಗ್ಯವಿದ್ದಿದ್ದರೆ ಎಂಬ ತಮಾಷೆಯ ವಿಚಾರವೊಂದು ಆತನ ತಲೆಯಲ್ಲಿ ಸುಳಿದಾಡಿತು.
***
ಮಹಾನಗರದ ರಸ್ತೆಗಡ್ಡ ಬಿದ್ದ ನನ್ನನ್ನೇಕೆ ಶಪಿಸುವಿರಿ? ನನಗೆ ನೀವು ಬೇರುಗಳನ್ನೇ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಬದುಕು ದೊಡ್ಡದಾಗಿರುವುದರಿಂದ ಫುಟ್‌ಪಾತ್‌ಗಳು ಚಿಕ್ಕದಾಗಿವೆ. ಒತ್ತುವರಿಗೊಂಡ ಪಾದಚಾರಿ ಮಾರ್ಗದಲ್ಲೇ ಸ್ವಲ್ಪ ಜಾಗ ಮಾಡಿ ಪ್ರತಿಷ್ಠಾಪಿಸಿದ್ದೀರಿ ನಮ್ಮೀ ಹಸಿರು ಕುಟುಂಬವನ್ನು. ಬಿಸಿಲದಾರಿಯಲ್ಲಿ ಹಸಿರಿರಬೇಕಿತ್ತು ಎಂದು ಮೇಲೆ ನೋಡುವ ನಿಮಗೆ ಕೆಳಗಿನ ನರಕ ಗೊತ್ತಿಲ್ಲ. ಅಲ್ಲಿ ಕಟ್ಟಿಕೊಂಡ ಗಟಾರಗಳಿವೆ. ಆಧುನಿಕ ಸೌಕರ್ಯಗಳ ಸುಖವಾದ ಹರಿವಿಗೆಂದೇ ಹಾದುಹೋಗಿರುವ ಹತ್ತೆಂಟು ಬಗೆಯ ವೈರುಗಳು ನಮ್ಮ ಬೇರುಗಳನ್ನೆಲ್ಲ ಮೂಲದಲ್ಲೇ ಕೊರೆದಿವೆ. ಅವೆಲ್ಲದರ ನಡುವೆಯೇ ನುಸುಳಿ ಇನ್ನೆಲ್ಲಾದರೂ ದೃಢವಾಗಿ ಬೇರೂರಲು ಜಾಗ ಮಾಡಿಕೊಳ್ಳೋಣ ಎಂದರೆ ಕಲ್ಲಿನ ಕೋಟೆ. ಓಹ್.. ಅವು ರಸ್ತೆಗೆ ತಾಗಿಕೊಂಡಂತೆ ನಿರ್ಮಾಣವಾಗಿರುವ ಕಟ್ಟಡ, ಮನೆಗಳ ಅಡಿಪಾಯಗಳು. ಇಂಥ ಸಕಲ ಸಂಕಷ್ಟಗಳ ನಡುವೆ ಹೇಗೋ ನಿಂತುಕೊಂಡುಬಿಡೋಣ ಎಂದು ಪ್ರಯತ್ನಿಸುತ್ತಿರುವಾಗಲೇ ನನ್ನ ಕಾಂಡದ ಮೇಲೆ ಯಾರೋ ಮೊಳೆ ಹೊಡೆದು ದಪ್ಪ ದಪ್ಪ ಜಾಹಿರಾತುಗಳನ್ನು ಸಿಲುಕಿಸಿ ಹೋಗಿದ್ದಾರೆ. ಅಯ್ಯೋ ಬಾಯಾರಿದೆ. ಅದೋ... ಹಸಿರೆಲೆಗಳ ಮೇಲೆ ಮಳೆ ಮಗುಚಿಕೊಂಡ ಆಹ್ಲಾದ! ಆ ನೀರೆಲ್ಲ ಬಸಿದು ಬರಲಿ ಬೇರಿಗೆ... ಆದರೆ, ಅದಾಗದಲ್ಲ. ಕಾಂಕ್ರೀಟು ಹೊದಿಕೆಯನ್ನು ದಾಟಿ ನೀರು ಕೆಳಗಿಳಿಯುವುದೆಂತು? ಬೇರಿಗೆಲ್ಲಿಯ ಜೀವ? ಕ್ಷಮಿಸಿ... ಇನ್ನೂ ನಿಂತಿರಲು ಆಗುತ್ತಿಲ್ಲ. ಲಟ್‌ಲಟ್..ದಭಾರ್...
***
ಶ್ರೀಮಾನ್ ತಲೆ ಕೊಡವಿಕೊಂಡ. ಹೀಗೇ ಕುಳಿತಿದ್ದರೆ ಎದುರಿಗೆ ಕಂಡ ಪದಾರ್ಥಗಳೆಲ್ಲ ಕತೆ ಹೇಳುವುದಕ್ಕೆ ಶುರು ಮಾಡಿದರೆ ಅರಗಿಸಿಕೊಳ್ಳೋದು ಹೇಗೆ ಎಂಬ ಆತಂಕ ಕಾಡಿತು. ಮತ್ತೆ ಊರ ನೆನಪುಗಳಿಗೆ ಹೊರಳಿಕೊಂಡ. ಇತ್ತೀಚೆಗೆ ಆಗಾಗ ಊರಿಗೆ ಹೋಗಿಬರುತ್ತಿದ್ದವನ ಗಮನವನ್ನು ಬಹುಮುಖ್ಯವಾಗಿ ಸೆಳೆದ ಸಂಗತಿ ಎಂದರೆ ತನ್ನೂರಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಅದಕ್ಕೆ ಅಪ್ಪಯ್ಯ ನೀಡಿದ ವಿವರಣೆಯೂ ಸೋಜಿಗದ್ದು. 'ಹದಿನೈದು ವರ್ಷಗಳ ಹಿಂದೆ ಕಟ್ಟಿಗೆ- ನಾಟಾ ಕಡಿದು ಮಾರುವುದನ್ನೇ ಕಳ್ಳ ಕಸುಬಾಗಿಸಿಕೊಂಡಿದ್ದವರ ದೇಹದಲ್ಲೀಗ ಕಸುವಿಲ್ಲ. ನೀವೆಲ್ಲ ಬಿಳಿ ಕಾಲರಿನ ಉದ್ಯೋಗಗಳನ್ನು ಹುಡುಕಿಕೊಂಡು ಹೇಗೆ ಬೆಂಗಳೂರಿಗೆ ಹೋದಿರೋ ಹಾಗೆಯೇ ಇವರೆಲ್ಲರ ಮಕ್ಕಳೂ ಅತ್ತ ಹೋಗಿ ಹೊಟೇಲ್- ಬಾರ್-ಮೆಕಾನಿಕ್ ಅಂಗಡಿಗಳಲ್ಲಿ ಕೆಲಸ ಹುಡುಕಿಕೊಂಡಿದ್ದಾರೆ. ಈಗ ಊರಿಗೆ ತಾಗಿಕೊಂಡಿರುವ ಸಣ್ಣ ಪಟ್ಟಣಗಳ ಬಳಿಯ ಹೊಲಗಳನ್ನೆಲ್ಲ ಸೈಟ್‌ಗಳನ್ನಾಗಿ ಮಾಡುವ ಉದ್ಯೋಗ ಹಲವರದ್ದಾದರೂ ಕಾಡಲ್ಲಿ ಉಳಿದಿರುವ ಅಲ್ಪ ಸ್ವಲ್ಪ ಸಂಪತ್ತು ದೋಚುವ ಸಹನೆ-ಶ್ರಮ ಇರುವವರು ಕಡಿಮೆಯಾಗಿದ್ದಾರೆ. ದಶಕಗಳ ಹಿಂದೆ ಮರದ ದಿಮ್ಮಿಗಳನ್ನು ಅಡಗಿಸಿಡಲು ಬೆಟ್ಟಗಳ ಎಡೆಯಲ್ಲಿ ತೋಡಿದ್ದ ಗುಂಡಿಗಳೆಲ್ಲ ಹಾಗೆಯೇ ಉಳಿದು ಇಂಗುಗುಂಡಿ ಥರ ಆಗಿವೆ' ಎಂಬ ವಿಚಿತ್ರ ಸೂತ್ರವೊಂದನ್ನು ಅಪ್ಪ ಹರವಿಟ್ಟಿದ್ದ. ಜತೆಯಲ್ಲೇ, 'ಮಳೆಗಾಲವೆಂಬುದು ನಮ್ಮನ್ನೂ ಈಗಿತ್ತಲಾಗಿ ಬಹಳ ಹೆದರಿಸುತ್ತೆ. ಏಕೆಂದರೆ ಇಲ್ಲಿ ಕೆಲಸಕ್ಕೆ ಜನಗಳೇ ಸಿಗದಿರುವುದರಿಂದ ಗೊಬ್ಬರ ಹಾಕುವುದು, ತೋಟಕ್ಕೆ ಮುಚ್ಚಿಗೆ ಮಾಡುವುದು ಹೀಗೆ ಮಳೆಗಾಲಕ್ಕೆ ಬೇಕಾದ ಯಾವ ಸಿದ್ಧತೆಗಳೂ ಆಗಿರುವುದಿಲ್ಲ' ಎಂದಿದ್ದ. ಅಮ್ಮ ಮಾತ್ರ ಇಂಥ ಭಾರಿ ವಿವರಣೆಗಳ ಗೊಡವೆಗೇ ಹೋಗದೆ, 'ನಾವು ನೀರು ಕೇಳಿದ ಯಾರಿಗೂ ಇಲ್ಲ ಎಂದಿದ್ದಿಲ್ಲ. ಅದಕ್ಕೇ ದೇವರು ಇಂಥ ಸಮೃದ್ಧಿ ಕರುಣಿಸಿದ್ದಾನೆ' ಎಂದುಬಿಟ್ಟಿದ್ದಳು. ಆದರೆ ಈಗ ತಮ್ಮ ಮನೆ ಮುಂದೆ ನಿಂತು ನೀರು ಕೇಳುವುದಕ್ಕೆ ಯಾವ ಕಟ್ಟಿಗೆ ಗಾಡಿಯವರೂ ಇಲ್ಲ. ಹಾಗೆ ನೋಡಿದರೆ ಊರು ಹಿಂದಿಗಿಂತ ಸಮೃದ್ಧಿಯಾಗಿದೆ. ಟಾರು ರಸ್ತೆ- ಮನೆಗೊಂದು ಬೈಕು ಎಲ್ಲ ಬಂದಿವೆ. ಆದರೂ ಊರಿಗೆ ನೀರು ಬಂದ ಕಾಲಕ್ಕೆ ಕುಡಿಯುವ ಉಮೇದಿರುವವರೆಲ್ಲ ಬೆಂಗಳೂರಿಗೆ ಜಮೆಯಾಗಿ ಇನ್ನೊಂಚೂರು ನೀರು ಬಿಡಿ ಎಂದು ಮನೆ ಮಾಲೀಕನೊಂದಿಗೆ ಜಗಳಕ್ಕೆ ನಿಂತಿರುವ ಸ್ಥಿತಿ ಶ್ರೀಮಾನ್‌ಗೆ ತುಂಬ ಕುಶಾಲಿನದ್ದಾಗಿ ಕಂಡಿತು.
***
ತಾನು ತುಂಬ ಯೋಚಿಸಿ ಸಿನಿಕತೆಗೆ ಜಾರುತ್ತಿದ್ದೇನೆ ಅಂತ ಶ್ರೀಮಾನ್‌ಗೆ ಭಯವಾಯಿತು. ನಗರೀಕರಣ ಎಂಬುದು ಆಗಲೇಬೇಕಿರುವ ಪ್ರಕ್ರಿಯೆ. ಈ ಬಗ್ಗೆ ಭಾವುಕವಾಗಿ ಯೋಚಿಸುವುದು ವ್ಯರ್ಥ ಎನಿಸಿತು. ಆದರೆ ನಗರೀಕರಣವನ್ನಾದರೂ ಯೋಜನಾಬದ್ಧವಾಗಿ ಮಾಡಬಹುದಿತ್ತಲ್ಲ? ಇಷ್ಟು ವಿಶಾಲ ಕರ್ನಾಟಕದಲ್ಲಿ ಅನ್ನ ಹುಡುಕಿಕೊಳ್ಳಬೇಕಾದ ಹೆಚ್ಚಿನವರೆಲ್ಲ ಬೆಂಗಳೂರಿಗೆ ಮಾತ್ರವೇ ಬರಬೇಕಿರುವ ಸ್ಥಿತಿಗೆ ಕಾರಣರು ಯಾರು ಎಂದು ಶ್ರೀಮಾನ್ ಕುಳಿತಲ್ಲೇ ಅಸಹನೆಗೊಂಡ. ತನ್ನ ಕಾರನ್ನು ರಿಪೇರಿ ಮಾಡಲು ಬರುವ ಮೆಕಾನಿಕ್, ತಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದವನ ಮಗನೇ ಆಗಿರಬಹುದೇ ಎಂಬ ಯೋಚನೆ ಸುಳಿದಾಡಿದೊಡನೆ ಶ್ರೀಮಾನ್‌ಗೆ ಉದ್ವೇಗದ ಅಲೆಯೊಂದು ಬಡಿದಂತಾಯಿತು.
***
ಬೆಂಗಳೂರಿನ ಎದೆಯ ಮೇಲೆ ಬಿತ್ತು ಒಂದು ಬಿರುಮಳೆ
ಜನರು ನಿಂತರು, ಜಲವು ನಿಂತಿತು, ಏನು ಎತ್ತ ತಿಳಿಯದೇ...
ಇಂಗಲಾರದೆ, ತಂಗಲಾರದೆ, ತೊರೆಯಲಾರದೆ, ಕಂಗಾಲಾಗಿದೆ
ಮೈಯ ತೋಯಿಸೋ ಮಳೆಯು ಏಕೆ ಕೊಡುತಲಿಲ್ಲ ಖುಷಿಯ ಕೇಕೆ?
ನೀರು ಅಲ್ಲಿಗೆ ತಲುಪದೆ ಬೇರು ದಾಹದಿ ಚೀರಿದೆ
ಮಣ್ಣಿನ ಘಮ ಏಳದಲ್ಲ, ಜಾರಿ ಬೀಳಲು ಜಾಗವಿಲ್ಲ
ಜನತೆ ನಿಂತಿದೆ, ಜಲವು ನಿಂತಿದೆ, ರಸ್ತೆಯಲಿ ಮರ ಬಿದ್ದಿದೆ
ಕೊಳವೆಯಲಿ ಕಟ್ಟಿರುವ ಕಸವನು ತೆಗೆವ ಬಗೆ ಎಂತು?
ಸಂಚಾರ ಸಾಗಲಿನ್ನೆಷ್ಟು ಹೊತ್ತು, ಒಮ್ಮೆ ಮಳೆ ನಿಂತು?
-ಚೈತನ್ಯ ಹೆಗಡೆ
cchegde@gmail.com