ಲಾಲ್‌ಕೃಷ್ಣ ಆಡ್ವಾಣಿ, ಏಕೀ ಅಡ್ಡವಾಣಿ?

ಒಬ್ಬ ಸಾಮಾನ್ಯ Knight (ಸೈನಿಕ) ಆಗಿದ್ದ ಜೂಲಿಯಸ್ ಸೀಸರ್ ರೋಮನ್...
Updated on: 

ಒಬ್ಬ ಸಾಮಾನ್ಯ Knight (ಸೈನಿಕ) ಆಗಿದ್ದ ಜೂಲಿಯಸ್ ಸೀಸರ್ ರೋಮನ್ ಗಣರಾಜ್ಯದ ಜನರಲ್ ಆದ ಬಗೆಯೇ ಒಂದು ರೋಮಾಂಚನಕಾರಿ ಕಥಾನಕ. ಇಡೀ ಯುರೋಪನ್ನೇ ಜಯಿಸಿದ, ಅರ್ಧ ಆಫ್ರಿಕಾವನ್ನೂ ವಶಪಡಿಸಿಕೊಂಡ, ಶತ್ರುಗಳ ಆಕ್ರಮಣದ ಭೀತಿಯಿಂದ ರೋಮನ್ನು ಮುಕ್ತಗೊಳಿಸಿ ಜನರ ಮೆಚ್ಚುಗೆಗೆ ಪಾತ್ರನಾದ. ಆದರೇನಂತೆ, ವೀರಸೇನಾನಿಯಾದ ಅವನು ತನ್ನ ಕರ್ತವ್ಯ ಎಷ್ಟಕ್ಕೆ ಸೀಮಿತ ಎನ್ನುವುದನ್ನು ಮರೆತು ಇಡೀ ರೋಮನ್ ಗಣರಾಜ್ಯವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡು ಸರ್ವಾಧಿಕಾರಿಯಾಗಿಬಿಟ್ಟ, ಮತ್ತೆಂದೂ ಪ್ರಜಾತಂತ್ರಕ್ಕೆ ಅಧಿಕಾರ ವರ್ಗಾಯಿಸಲಿಲ್ಲ. ಅವನದ್ದೇ ದರ್ಬಾರು ಆರಂಭವಾಯಿತು. ಅಧಿಕಾರದ ದಾಹ ಅವನನ್ನು ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿತು. ರೋಮನ್ ಸಾಮ್ರಾಜ್ಯ, ಸೀಸರನ ಖಾಸಗಿ ಸಾಮ್ರಾಜ್ಯವಾಯಿತು. ಒಬ್ಬ ಮಹಾನ್ ಪರಾಕ್ರಮಿ ಎನಿಸಿಕೊಂಡಿದ್ದವನು, ಸರ್ವಾಧಿಕಾರಿ ಎನಿಸಿಕೊಳ್ಳಲಾರಂಭಿಸಿದ, ಕೊನೆಗೆ ಅವನನ್ನು ಕೊಲೆಗೈಯ್ಯಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು.
Not that I loved Caesar less, but that I loved Rome more!
ಅತ್ಯಾಪ್ತ ಸ್ನೇಹಿತ ಜೂಲಿಯಸ್ ಸೀಸರ್‌ನನ್ನು ಎಲ್ಲರ ಸಮ್ಮುಖದಲ್ಲೇ ಕೊಂದ ನಂತರ ಮಾರ್ಕಸ್ ಬ್ರೂಟಸ್ ಹೀಗೆ ಹೇಳುತ್ತಾನೆ. ಜೂಲಿಯಸ್‌ನ ವೀರಗಾಥೆಯಲ್ಲಿ ಅವನ ಸಾವು ಮಿತ್ರದ್ರೋಹದಂತೆ ಕಂಡರೂ ಬ್ರೂಟಸ್ ಮತ್ಸರದಿಂದ, ದ್ವೇಷದಿಂದ, ದುರಾಸೆಯಿಂದ ಜೂಲಿಯಸ್‌ನನ್ನು ಕೊಲ್ಲಲಿಲ್ಲ, ಬದಲಿಗೆ ರೋಮನ್ ಸಾಮ್ರಾಜ್ಯದ ಒಳಿತಿಗಾಗಿ ಹಾಗೆ ಮಾಡಿದ ಎಂದು ಜನರಿಗೂ ಮನವರಿಕೆಯಾಗುತ್ತದೆ. ಆ ಘಟನೆ ಬಗ್ಗೆ ಹುಟ್ಟಿಕೊಂಡ ಮಾತೇ- "You either die a hero, or [like Caesar] live to see yourself become a villain.' ಒಂದು ವೇಳೆ ರಣರಂಗದಲ್ಲಿ ಹೋರಾಡುತ್ತಿದ್ದಾಗ, ಇಡೀ ಯುರೋಪನ್ನೇ ಜಯಿಸಿದಾಗ ಅಥವಾ ಆಫ್ರಿಕಾಕ್ಕೆ ಲಗ್ಗೆ ಇಟ್ಟಾಗ ವೀರ ಮರಣವನ್ನಪ್ಪಿದ್ದರೆ ಸೀಸರ್ ಇತಿಹಾಸದ ಪುಟಗಳಲ್ಲಿ ದೌರ್ಬಲ್ಯರಹಿತ ವೀರ ಸೇನಾನಿಯಾಗಿ ದಾಖಲಾಗಿ ಬಿಡುತ್ತಿದ್ದ. 2008ರಲ್ಲಿ ಬಿಡುಗಡೆಯಾದ "The Dark Knight' ಚಿತ್ರದಲ್ಲೂ ಜೂಲಿಯಸ್ ಸೀಸರ್‌ನಂತೆ ಕೊನೆಗೆ ಖಳನಾಗಿ ಬಿಟ್ಟ ಹಾರ್ವೆ ಡೆಂಟ್ ಬಗ್ಗೆಯೂ You either die a hero or live long enough to see yourself become a villian ಎಂಬ ಮಾತು ಕೇಳಿಬರುತ್ತದೆ.
ದುರದೃಷ್ಟವಶಾತ್ ಲಾಲ್‌ಕೃಷ್ಣ ಆಡ್ವಾಣಿಯವರ ಬಗ್ಗೆಯೂ ಜನ ಹೀಗೇ ಹೇಳುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ!
ಭಾರತದ ರಾಜಕೀಯ ಇತಿಹಾಸದಲ್ಲಿ ಬಹುಶಃ ಆಡ್ವಾಣಿಯವರಂಥ ಛಲಗಾರನನ್ನು ಕಾಣುವುದು ಕಷ್ಟ. ಇಂದಿರಾ ಗಾಂಧಿಯವರ ಹತ್ಯೆಯ ನಂತರ 1984ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳೆಲ್ಲ ಧೂಳೀಪಟವಾಗಿದ್ದವು. ಅತಿರಥ ಮಹಾರಥರು ಮಣ್ಣುಮುಕ್ಕಿದ್ದರು. ಯುವ ಮಾಧವಾರಾವ್ ಸಿಂಧಿಯಾ ಎದುರು ಸೋಲುಂಡಿದ್ದ ವಾಜಪೇಯಿ 'ಮಾಧವನ ಸೌಂದರ್ಯಕ್ಕೆ ಮಹಿಳೆಯರು ವೋಟು ಕೊಟ್ಟು ಮುದುಕನಿಗೆ ಕೈಕೊಟ್ಟರು' ಎಂಬ ಕವಿತೆ ಬರೆದು ಪಲಾಯನವಾದಿಯಾಗಿ ಬಿಟ್ಟಿದ್ದರು. ಹೀಗೆ ಅಟಲ್ ಸೋಲಿನೊಂದಿಗೆ ಬಿಜೆಪಿ ಎಂಬ ಪಕ್ಷವೇ ಆತ್ಮಸ್ಥೈರ್ಯ ಕಳೆದುಕೊಂಡಿದ್ದ ಸಂದರ್ಭವದು. ಆಗ, ಅಂದರೆ 1986ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ವ್ಯಕ್ತಿ ಲಾಲ್‌ಕೃಷ್ಣ ಆಡ್ವಾಣಿ. ಅಟಲ್ ಮಾದರಿಯ ನೆಹರು-ಗಾಂಧಿ ಪ್ರಣೀತ ಸಮಾಜವಾದವನ್ನು ಇಟ್ಟುಕೊಂಡು ಹೋದರೆ ಜನ ಮೂಸುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರು. ಪಕ್ಷವನ್ನು ಜನರ ಬಳಿಗೆ ಕೊಂಡೊಯ್ಯುವಂಥ ಸೈದ್ಧಾಂತಿಕ ತಳಹದಿಯೊಂದು ಬೇಕೆಂದು ಅರಿತರು. ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೈದ್ಧಾಂತಿಕವಾಗಿ ಒಂದು ಮಾಡಿದರು. ಹಾಗಾಗಿಯೇ ಅಯೋಧ್ಯೆ ವಿವಾದವನ್ನು ಪಕ್ಷದ ಬಲವೃದ್ಧಿಗೆ ಬಳಸಿಕೊಳ್ಳಬಹುದೆಂಬ ಸತ್ಯ ಅರಿವಾಯಿತು. ಜನರ ಹೃದಯದ ಕದ ತಟ್ಟಲು ಅಯೋಧ್ಯೆಯಂಥ ಭಾವನಾತ್ಮಕ ವಿಷಯದಿಂದ ಮಾತ್ರ ಸಾಧ್ಯ ಎಂಬುದು ಆಡ್ವಾಣಿಯವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಅದೇ ಸಂದರ್ಭದಲ್ಲಿ ಹೊರಬಿದ್ದ ಶಾಬಾನು ಪ್ರಕರಣದ ಮೇಲಿನ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿ ಮಾಡುವ ಬದಲು ಸಂವಿಧಾನಕ್ಕೇ ತಿದ್ದುಪಡಿ ತರಲು, ಮುಸ್ಲಿಮರನ್ನು ಓಲೈಸಲು ರಾಜೀವ್ ಗಾಂಧಿ ಮುಂದಾದರು. ಇತ್ತ ಆಡ್ವಾಣಿಯವರು ಬಿಜೆಪಿಯನ್ನು ಹಿಂದುತ್ವದೊಂದಿಗೆ ಗುರುತಿಸಿಕೊಳ್ಳುವ ದೂರದೃಷ್ಟಿ ತೋರಿದರು. 1984ರಲ್ಲಿ ಎರಡಿದ್ದ ಸಂಸದರ ಸಂಖ್ಯೆ 1989ರಲ್ಲಿ ಎಂಬತ್ತೊಂಬತ್ತಾಯಿತು! 1990ರಲ್ಲಿ ಅಯೋಧ್ಯಾ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಮತ್ತೆ ಜಾಣ್ಮೆ ತೋರಿದರು. 1991ರಲ್ಲಿ ಸಂಸದರ ಸಂಖ್ಯೆ 116ಕ್ಕೇರಿತು. ಆದರೂ 1991ರಿಂದ 1993ರವರೆಗೂ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಕುಶಾಗ್ರಮತಿ ಆಡ್ವಾಣಿಯವರು ಅಯೋಧ್ಯೆಯಂಥ ಭಾವನಾತ್ಮಕ ವಿಚಾರವೊಂದೇ ಪಕ್ಷವನ್ನು ಅಧಿಕಾರಕ್ಕೆ ತರುವುದಿಲ್ಲ ಎಂಬುದನ್ನು ಮನಗಂಡರು. ಸಮಾಜದ ಎಲ್ಲ ವರ್ಗ, ಸಮುದಾಯಗಳಿಗೂ ಅಪೀಲ್ ಆಗುವಂಥ ನಾಯಕನೊಬ್ಬನು ಬೇಕು, ಆದರೆ ಆ ನಾಯಕ ನಾನಲ್ಲ ಎಂಬುದನ್ನೂ ಕಂಡುಕೊಂಡರು.
ಅಂದು....
ಅಟಲ್ ಬಿಹಾರಿ ವಾಜಪೇಯಿಯವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಆಡ್ವಾಣಿಯವರು ಏಕಾಏಕಿ ಘೋಷಿಸುವಾಗ ಯಾರ ಅನುಮತಿಯನ್ನೂ ಕೇಳಿರಲಿಲ್ಲ, ಯಾರ ಜತೆ ಚರ್ಚಿಸಿಯೂ ಇರಲಿಲ್ಲ, ಯಾರು ಏನೆಂದುಕೊಳ್ಳುತ್ತಾರೆಂಬ ಬಗ್ಗೆಯೂ ತಲೆಕೆಡಿಸಿಕೊಂಡಿರಲಿಲ್ಲ. ಅದಕ್ಕೇ ದೇಶವಾಸಿಗಳ ಮುಂದೆ ಹೀರೋ ಆಗಿದ್ದರು. ಅಟಲ್ ಬಗ್ಗೆ ಎಲ್ಲರಿಗೂ ಗೌರವವಿದ್ದರೂ ಬಿಜೆಪಿಯೊಳಗೆ, ಕಾರ್ಯಕರ್ತರ ಮಟ್ಟದಲ್ಲಿ ಅಪಾರ ಅಭಿಮಾನವಿದ್ದಿದ್ದು ಆಡ್ವಾಣಿಯವರ ಬಗ್ಗೆ. ಇಂದಿಗೂ ಬಿಜೆಪಿಯವರಲ್ಲಿ ಯಾವುದೇ ಪ್ರಮುಖ ನಾಯಕನನ್ನು ತೆಗೆದುಕೊಂಡರೂ ಅವರನ್ನೆಲ್ಲ ಬೆಳಕಿಗೆ ತಂದವರು, ಪ್ರೋತ್ಸಾಹಿಸಿ ಬೆಳೆಸಿದವರು ಆಡ್ವಾಣಿಯವರೇ. ಅಟಲ್ ಕೇವಲ 'ಮುಖವಾಡ'ವಷ್ಟೇ, ಆಡ್ವಾಣಿಯೇ 'ನಿಜವಾದ' ನಾಯಕ ಎಂದು ಕೆ.ಎನ್. ಗೋವಿಂದಾಚಾರ್ಯ ಹೇಳಿದ್ದು ವಾಸ್ತವಕ್ಕೆ ದೂರವಾಗಿರಲಿಲ್ಲ. 1998ರಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. 1999ರಲ್ಲಿ ಎನ್‌ಡಿಎ ಒಕ್ಕೂಟ ನಿಚ್ಚಳ ಬಹುಮತ ಪಡೆದು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾದಾಗ ಆಡ್ವಾಣಿ ಗೃಹ ಸಚಿವ ಸ್ಥಾನಕ್ಕೇ ತೃಪ್ತಿಪಟ್ಟುಕೊಂಡರು. 2000ದಲ್ಲಿ ಉಪಪ್ರಧಾನಿಯಾಗಿಯಾಗಿ ಬಡ್ತಿ ಪಡೆದುಕೊಂಡರು. ಆ ನಂತರ ಅವರಲ್ಲಿ ತಾನೂ ಪ್ರಧಾನಿಯಾಗಬೇಕೆಂಬ ತುಡಿತವೂ ಆರಂಭವಾಯಿತು. ಅವರೇನು ಸನ್ಯಾಸಿಯಲ್ಲ. ರಾಜಕೀಯ ಎಂದರೆ ಮಹತ್ವಾಕಾಂಕ್ಷೆ ಇರಲೇಬೇಕು. ಆಡ್ವಾಣಿಯವರ ಆಸೆಯಲ್ಲೂ ಯಾವುದೇ ತಪ್ಪಿರಲಿಲ್ಲ. ಅದಕ್ಕಾಗಿ ತಮ್ಮನ್ನು ಮತ್ತೊಬ್ಬ ಸರ್ದಾರ್ ಪಟೇಲರಂತೆ ಆಡ್ವಾಣಿ ಬಿಂಬಿಸಿಕೊಳ್ಳಲಾರಂಭಿಸಿದರು. 2003ರಲ್ಲಿ ಆಡ್ವಾಣಿಯವರ ಮಹತ್ವಾಕಾಂಕ್ಷೆ ಹೊರಜಗತ್ತಿಗೂ ಗೋಚರಿಸತೊಡಗಿತು. ಮುಂದಿನ ಚುನಾವಣೆಯನ್ನು ವಿಕಾಸ ಪುರುಷ (ಅಟಲ್) ಹಾಗೂ ಉಕ್ಕಿನ ಮನುಷ್ಯ (ಆಡ್ವಾಣಿ) ಘೋಷವಾಕ್ಯದೊಂದಿಗೆ ಎದುರಿಸಲಾಗುವುದು ಎಂದು ತಮ್ಮ ಚೇಲಾ ಹಾಗೂ ಅಂದಿನ ಪಕ್ಷಾಧ್ಯಕ್ಷ ವೆಂಕಯ್ಯ ನಾಯ್ಡು ಮೂಲಕ ಹೇಳಿಸಿದರು.
ಆಗ ನಿಜವಾಗಲೂ ಸಣ್ಣತನ ತೋರಿದವರು ಅಟಲ್ ಬಿಹಾರಿ ವಾಜಪೇಯಿಯವರೇ!
ಬಹಿರಂಗವಾಗಿಯೇ ಪಕ್ಷಾಧ್ಯಕ್ಷರ ಹೇಳಿಕೆ ಬಗ್ಗೆ ಅಟಲ್ ಅಸಮಾಧಾನ ವ್ಯಕ್ತಪಡಿಸಿದರು. ಎಂದಿನಂತೆ ರಾಜಕೀಯ ನಿವೃತ್ತಿಯ ಬಾಂಬು ಹಾಕಿದರು. ಕೊನೆಗೆ ವೆಂಕಯ್ಯ ನಾಯ್ಡು ಮುಂದಿನ ಚುನಾವಣೆಯನ್ನು 'ಅಟಲ್ ಕೆಲಸ, ಅಟಲ್ ಹೆಸರಿ'ನಲ್ಲೇ (ಅಟಲ್ ಕಾ ನಾಮ್, ಅಟಲ್ ಕಾ ಕಾಮ್) ಎದುರಿಸಲಾಗುವುದು ಹಾಗೂ ಅಟಲ್ ನಮ್ಮ ನಂಬರ್-1 ನಾಯಕ ಎಂದು ಹೇಳಬೇಕಾಗಿ ಬಂತು. ಈ ಸಂದರ್ಭಗಳಲ್ಲೆಲ್ಲ ಆಡ್ವಾಣಿಯವರಿಗೆ ಅನ್ಯಾಯವಾಗಿದ್ದು ನಿಜ. ಹಾಗಂತ ಅವರ ಸರದಿ ಬರಲೇ ಇಲ್ಲ ಎಂದಲ್ಲ. 2009ರ ಚುನಾವಣೆಯನ್ನು ಅವರ ಪ್ರಧಾನಿ ಉಮೇದುವಾರಿಕೆಯಲ್ಲೇ ಎದುರಿಸಿದ್ದಾಯಿತು. ಕೆಲವೊಮ್ಮೆ ಪರಿಸ್ಥಿತಿ, ಅದೃಷ್ಟ ಎಲ್ಲವೂ ಹಣೆಬರಹ ಬರೆಯುತ್ತವೆ. ಬಹುಶಃ ಆಡ್ವಾಣಿಯವರ ಅದೃಷ್ಟದಲ್ಲಿ ಪ್ರಧಾನಿಯಾಗುವ ಯೋಗ ಇಲ್ಲವೇನೋ?
ಅದನ್ನು ಗೌರವದಿಂದ, ವಾಸ್ತವದ ಅರಿವಿನಿಂದ ಒಪ್ಪಿಕೊಂಡು ತಮ್ಮ ಸ್ಥಾನಮಾನದ ಘನತೆಯನ್ನು ಉಳಿಸಿಕೊಳ್ಳುವ ಬದಲು ಆಡ್ವಾಣಿಯವರು ಮಾಡುತ್ತಿರುವುದೇನು?
ಪ್ರಧಾನಿ ಸ್ಥಾನ ಏರುವುದೇ ಜೀವನದ ಅತ್ಯುನ್ನತ ಗೌರವವೇ? ಈ ದೇಶ, ಕೇವಲ ಎರಡೂ ಚಿಲ್ಲರೆ ವರ್ಷ ಉಪಪ್ರಧಾನಿಯಾಗಿದ್ದ ಸರ್ದಾರ್ ಪಟೇಲರನ್ನು ಧನ್ಯತೆಯಿಂದ ನೆನಪಿಸಿಕೊಳ್ಳುತ್ತದೋ, 17 ವರ್ಷಗಳ ಕಾಲ ದೇಶವನ್ನಾಳಿದ ಪ್ರಧಾನಿ ನೆಹರು ಅವರನ್ನೋ? ಗುಲ್ಜಾರಿ ಲಾಲ್‌ನಂದ, ಗುಜ್ರಾಲ್, ಗೌಡ, ಚರಣ್‌ಸಿಂಗ್, ಚಂದ್ರಶೇಖರ್ ಕೂಡಾ ಪ್ರಧಾನಿಯಾಗಿದ್ದರು. ಪ್ರಧಾನಿಯಾಗಿದ್ದೊಂದೇ ಇವರ ಸಾಧನೆ. ಇನ್ನೇನು 10 ವರ್ಷಗಳು ಪ್ರಧಾನಿಯಾಗಿ ಅಧಿಕಾರ ಪೂರೈಸಲಿರುವ ಮನಮೋಹನ್ ಸಿಂಗ್ ಅವರ ಸ್ಥಿತಿ ಏನಾಗಿದೆ? ಮುಂದೊಂದು ದಿನ, ಪಿ.ವಿ. ನರಸಿಂಹರಾವ್ ಅಡಿ ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್ ಮಾಡಿದ ಸಾಧನೆಯನ್ನು ದೇಶ ನೆನಪಿಸಿಕೊಳ್ಳುತ್ತದೆಯೇ ಹೊರತು ಪ್ರಧಾನಿಯೆಂಬ ಪಪ್ಪೆಟ್ ಆಗಿದ್ದ ಪರ್ವವನ್ನಲ್ಲ. ಇಂಥ ಸತ್ಯಾಸತ್ಯತೆಗಳು, ಕಟು ವಾಸ್ತವ ಕಣ್ಣಮುಂದಿದ್ದರೂ ಆಡ್ವಾಣಿಯವರು ನಡೆದುಕೊಳ್ಳುತ್ತಿರುವ ರೀತಿ ಹೇಗಿದೆ? ನರೇಂದ್ರ ಮೋದಿಯವರ ಮೇಲೆ ಏಕಿಂಥ ದ್ವೇಷ, ಮತ್ಸರ ಆಡ್ವಾಣಿಯವರೇ? ಮಧ್ಯಪ್ರದೇಶಕ್ಕೆ ಹೋದಾಗ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಚವಾಣ್‌ರನ್ನು ಹೊಗಳಿ, ಬೇಡ ಅಂತ ಯಾರೂ ಹೇಳುವುದಿಲ್ಲ. ಆದರೆ ಅವರನ್ನು ಹೊಗಳುವಾಗ ನರೇಂದ್ರ ಮೋದಿಯವರನ್ನು ಕುಟುಕುವುದೇಕೆ? ಗುಜರಾತಿನ ನರೇಂದ್ರ ಭಾಯಿ ಆರೋಗ್ಯವಂತ ರಾಜ್ಯವನ್ನೂ ಇನ್ನೂ ಸಧೃಡಗೊಳಿಸಿದ್ದಾರೆ. ಆದರೆ ಶಿವರಾಜ್ ಸಿಂಗ್ ರೋಗಿಷ್ಠ ರಾಜ್ಯವನ್ನು ಆರೋಗ್ಯವಂತ ರಾಜ್ಯವಾಗಿಸಿದ್ದಾರೆ. ಅದು ಗುಜರಾತ್‌ಗಿಂತಲೂ ದೊಡ್ಡ ಸಾಧನೆ ಎನ್ನುತ್ತಿರುವ ನಿಮ್ಮ ತರ್ಕವನ್ನು ಸ್ವಲ್ಪ ಬಿಡಿಸಿ ಹೇಳುತ್ತೀರಾ? ಶಿವರಾಜ್ ಸಿಂಗ್ ಸಾಧನೆಯನ್ನು ಎಲ್ಲರೂ ಮೆಚ್ಚಲೇಬೇಕು. ಆದರೆ ಗುಜರಾತ್‌ನಂಥ ಅಭಿವೃದ್ಧಿ ಹೊಂದಿದ ರಾಜ್ಯದ ಅಭಿವೃದ್ಧಿ ದರವನ್ನು ಸತತ ಹತ್ತು ವರ್ಷಗಳಿಂದ ಶೇ.10ಕ್ಕಿಂತ ಹೆಚ್ಚಿಟ್ಟಿರುವುದು ಎಲ್ಲಕ್ಕಿಂತಲೂ ದೊಡ್ಡ ಸಾಧನೆಯಲ್ಲವೆ? ಆಡ್ವಾಣಿಯವರೇ, ಅಭಿವೃದ್ಧಿ ಹೊಂದುತ್ತಿರುವ ಭಾರತದ ಜಿಡಿಪಿ 10 ಪರ್ಸೆಂಟ್‌ಗೆ ಏರುವುದಕ್ಕಿಂತ ಈಗಾಗಲೇ ಅಭಿವೃದ್ಧಿ ಹೊಂದಿರುವ ಅಮೆರಿಕದ ಜಿಡಿಪಿ 3 ಪರ್ಸೆಂಟ್ ಪ್ರಗತಿ ತೋರಿದರೆ ಅದು ಬಹುದೊಡ್ಡ ಸಾಧನೆ. ಅದೇ ರೀತಿ, ನದಿ, ಪರ್ವತಗಳಿಂದ ಕೂಡಿರುವ ಮಧ್ಯಪ್ರದೇಶದ ಕೃಷಿ ಕ್ಷೇತ್ರ 18 ಪರ್ಸೆಟ್ ಪ್ರಗತಿ ದರ ತೋರಿರುವುದು ಗಮನಾರ್ಹ ಅಂಶವಾದರೂ ಗುಜರಾತ್‌ನಂಥ ಒಣ ಭೂಮಿಯಲ್ಲಿ ಶೇ.10.5ರಷ್ಟು ಕೃಷಿ ಅಭಿವೃದ್ಧಿ ತೋರುತ್ತಿರುವುದು ಹುಬ್ಬೇರುವಂಥ ಸಾಧನೆಯಲ್ಲವೇ ಸ್ವಾಮಿ. 'ಇಷ್ಟೆಲ್ಲಾ ಸಾಧನೆ ಮಾಡಿರುವ ಶಿವರಾಜ್‌ಸಿಂಗ್ ದುರಂಹಕಾರಿಯಲ್ಲ' ಎಂದಿರುವ ನಿಮ್ಮ ಮಾತಿನ ಗುರಿ ಯಾರು? ನರೇಂದ್ರ ಮೋದಿಯವರು ದುರಂಹಕಾರಿಯಾಗಿದ್ದರೆ, ಇಷ್ಟೊಂದು ದೊಡ್ಡ ನೇತಾರನಾಗುತ್ತಲೇ ಇರಲಿಲ್ಲ. ಅದಿರಲಿ, ಸುಷ್ಮಾ ಭಾಷಣ ಕೇಳಿದರೆ ನಿಮಗೆ ವಾಜಪೇಯಿ ನೆನಪಾಗುತ್ತಾರಂತೆ, ಶಿವರಾಜ್ ಸಿಂಗ್ ವ್ಯಕ್ತಿತ್ವ ವಾಜಪೇಯಿಯ ಪ್ರತಿಬಿಂಬವಂತೆ. ಹಾಗಾದರೆ ಮೋದಿಯವರಲ್ಲಿ ವಾಜಪೇಯಿಯವರ ಯಾವ ಅಂಶಗಳೂ ಕಾಣುವುದಿಲ್ಲವೆ? ಸುಷ್ಮಾ ಸ್ವರಾಜ್ ಒಬ್ಬ ಅದ್ಭುತ ವಾಗ್ಮಿ ಎನ್ನುವುದಾದರೆ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರಾಂದೋಲನ ಸಂದರ್ಭದಲ್ಲಿ ಅವರ ಭಾಷಣ ಕೇಳಲು ಬರುತ್ತಿದ್ದ ಜನರ ಸಂಖ್ಯೆ ಎರಡು-ಮೂರು ಸಾವಿರ ಮೀರುತ್ತಿರಲಿಲ್ಲ ಏಕೆ? ವಾಜಪೇಯಿಯವರಂತೆ Witty ಯಾಗಿ, ಅದ್ಭುತವಾದ Presence of Mind ನೊಂದಿಗೆ ಮಾತನಾಡುವ ಸಾಮರ್ಥ್ಯ ಬಿಜೆಪಿಯೊಳಗೆ ಮಾತ್ರವಲ್ಲ, ಇಡೀ ದೇಶದಲ್ಲೇ ಯಾರಿಗಾದರೂ ಇದ್ದರೆ ಅದು ನರೇಂದ್ರ ಮೋದಿ ಅವರಿಗೆ ಮಾತ್ರ. ನಿಮಗೆ ಮೋದಿ ಮಾತು ಕೇಳಿದಾಗ ವಾಜಪೇಯಿ ನೆನಪಾಗದೇ ಆ ಸುಷ್ಮಾ ಸ್ವರಾಜ್ ಅದ್ಹೇಗೆ ವಾಜಪೇಯಿಯವರನ್ನು ನೆನಪು ಮಾಡಿಕೊಡುತ್ತಿದ್ದಾರೋ? ಮೋದಿಯವರನ್ನು ಹಣಿಯಬೇಕೆಂದು ನೀವೇ ಕೆಳಗಿಳಿಸಿದ ನಿತಿನ್ ಗಡ್ಕರಿಯನ್ನು ಪ್ರಚಾರಾಂದೋಲನ ಸಮಿತಿ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುತ್ತೀರಲ್ಲಾ ನಿಮಗೇನಾಗಿದೆ? ನಾಗಪುರದ ಈ ಮನುಷ್ಯ ಜೀವನದಲ್ಲಿ ಒಮ್ಮೆಯೂ ಜನರಿಂದ ನೇರವಾಗಿ ಆಯ್ಕೆಯಾದವರಲ್ಲ, ಅವರನ್ನು ಬಹುಮುಖ್ಯವಾದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವ ನೀವು ಸ್ಥಿಮಿತ ಕಳೆದುಕೊಂಡಿಲ್ಲ ತಾನೇ?
ಖಂಡಿತ ನರೇಂದ್ರ ಮೋದಿಯೊಬ್ಬರೇ ಮೂರು ಬಾರಿ ಚುನಾವಣೆ ಗೆದ್ದವರಲ್ಲ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್, ಒರಿಸ್ಸಾದ ನವೀನ್ ಪಟ್ನಾಯಕ್ ಮೂರು ಮೂರು ಬಾರಿ ಗೆದ್ದಿದ್ದರೆ ನಿಮ್ಮದೇ ಪಕ್ಷದ ರಮಣ್ ಸಿಂಗ್, ಶಿವರಾಜ್‌ಸಿಂಗ್ ಮೂರನೇ ಸಲ ಮತ್ತೆ ಪುನರಾಯ್ಕೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಶೀಲಾ ದೀಕ್ಷಿತ್, ಪಟ್ನಾಯಕ್ ಅವರು ಚುನಾವಣಾ ರಾಜಕಾರಣದಲ್ಲಿ ಗೆಲುವು ಸಾಧಿಸಿದ್ದರೂ ಅಭಿವೃದ್ಧಿಯ ಹರಿಕಾರರು ಖಂಡಿತ ಅಲ್ಲ. ರಮಣ್ ಹಾಗೂ ಶಿವರಾಜ್ ಸಿಂಗ್ ಅಭಿವೃದ್ಧಿ ಜತೆ ಗುರುತಿಸುವಂಥ ಸಾಧನೆ ಮಾಡಿರುವುದು ಖಂಡಿತ ಹೌದು.
ಆದರೆ...
ನರೇಂದ್ರ ಮೋದಿಯವರಿಗೂ ಉಳಿದವರಿಗೂ ಯಾವ ವ್ಯತ್ಯಾಸವೂ ಇಲ್ಲವೆ? ಅಭಿವೃದ್ಧಿಯೊಂದೇ ಮೋದಿಯವರಿಗೆ ಈ ಮಟ್ಟದ ಜನಪ್ರಿಯತೆ ತಂದುಕೊಟ್ಟಿದೆಯೇ ಆಡ್ವಾಣಿಯವರೇ? ಹಾಗಿದ್ದರೆ ಜನ ಮೋದಿ ಬದಲು ಉಳಿದ ಯಾರನ್ನೂ ಪ್ರಧಾನಿ ಅಭ್ಯರ್ಥಿ ಮಾಡಿ ಎಂದು ಒತ್ತಾಯಿಸುತ್ತಿಲ್ಲವೇಕೆ? ನರೇಂದ್ರ ಮೋದಿಯವರು ಅಭಿವೃದ್ಧಿ ಹರಿಕಾರ ಮಾತ್ರವಲ್ಲ, ಬಿಜೆಪಿ ಮೂಲ ಸಿದ್ಧಾಂತ ಹಾಗೂ ವಿವೇಕಾನಂದರು ಪ್ರತಿಪಾದಿಸಿದ 'ಸಾಂಸ್ಕೃತಿಕ ರಾಷ್ಟ್ರೀಯವಾದ'ದ (Cultural Nationalism) ಪ್ರತೀಕ ಹಾಗೂ ಸಂಕೇತದಂತೆ ಜನ ಅವರನ್ನು ನೋಡುತ್ತಿದ್ದಾರೆ. ಭಾರತೀಯ ಮೌಲ್ಯಗಳು (Indian Ethos) ಮಾತ್ರವಲ್ಲ, ಭಾರತ ನೆಲ-ಜಲವನ್ನು, ಗಡಿ-ಸಾರ್ವಭೌಮತೆಯನ್ನು ರಕ್ಷಿಸುವ ಸಾಮರ್ಥ್ಯವಿರುವ ವ್ಯಕ್ತಿಯೆಂಬಂತೆ ಅವರನ್ನು ಕಾಣುತ್ತಿದ್ದಾರೆ. ಅವರೊಬ್ಬ ಪ್ರಾಮಾಣಿಕ ಮಾತ್ರವಲ್ಲ, ಚಾಣಕ್ಯ-ಚಂದ್ರಗುಪ್ತ(ತಂತ್ರ-ಕ್ಷಾತ್ರ) ಇಬ್ಬರೂ ಒಬ್ಬರಲ್ಲೇ ಇರುವ ಪ್ರಚಂಡ ಕೂಡಾ ಹೌದು. ಇದನ್ನು ನಿಮ್ಮ ಶಿವರಾಜ್, ರಮಣ್‌ಸಿಂಗ್, ಸೋಗಲಾಡಿ ಸುಷ್ಮಾ ಸ್ವರಾಜ್ ಅವರಲ್ಲಿ ಕಾಣಲು ಸಾಧ್ಯವೇ? ಅಥವಾ ಇವರನ್ನೆಲ್ಲ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ನಿಮ್ಮಲ್ಲಿ ಕಾಣುವುದಕ್ಕೆ ಸಾಧ್ಯವೆ? ಏಕಾಗಿ ಯಾವ ಚಾನೆಲ್, ಪೇಪರ್‌ಗಳು ಸಮೀಕ್ಷೆ ಮಾಡಿದರೂ ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ಜನರಲ್ಲಿರುವುದು ವ್ಯಕ್ತವಾಗುತ್ತಿದೆ?
ದಯವಿಟ್ಟು ಯೋಚಿಸಿ, ಇಲ್ಲವಾದರೆ  You either die a hero or live long enough to see yourself become a villian  ಎಂದು ನಿಮ್ಮ ಬಗ್ಗೆ ಹೇಳುವಂತ ಪರಿಸ್ಥಿತಿ ಸೃಷ್ಟಿಯಾಗಬಹುದು, ಅಲ್ಲವೇ?

- ಪ್ರತಾಪ್ ಸಿಂಹ
mepratap@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com