ಇದು ಆಡ್ವಾಣಿಯೇ ರೂಪಿಸಿಕೊಂಡ ಶರಶಯ್ಯೆ!
ಉತ್ಸಾಹಕ್ಕೆ ಬಿದ್ದಿರುವ ಟಿವಿ ವರದಿಗಾರರು, ನಿರೂಪಕರು ಹಾಗೂ ಸ್ಟುಡಿಯೋದಲ್ಲಿ ಕುಳಿತಿರುವ ವಿಶ್ಲೇಷಕರು ವ್ಯಾಖ್ಯಾನಿಸುತ್ತಿರುವಂತೆ ಆಡ್ವಾಣಿ ನಿರ್ಗಮನ ಎಂಬುದು ನಿಜಕ್ಕೂ ಬಿಜೆಪಿಯ ಅತಿ ಕೆಟ್ಟ ಗಳಿಗೆಯೇ? ಏಕಾಏಕಿ ಆಡ್ವಾಣಿಯವರ ಬಗ್ಗೆ ಅನುಕಂಪವನ್ನು ಸೂಸುತ್ತ ಅವರ ಹಿತಚಿಂತಕರಾಗಿ ಹೊರಹೊಮ್ಮಿಬಿಟ್ಟಿದ್ದಾರೆ ಮಾಧ್ಯಮ ವಿಶ್ಲೇಷಕರು ಹಾಗೂ ಕಾಂಗ್ರೆಸ್ ರಾಜಕಾರಣಿಗಳು. ಇವರೆಲ್ಲ ಯಾವತ್ತೂ ಆಡ್ವಾಣಿಯವರ ಪಕ್ಷಕ್ಕೆ ಮತ ಹಾಕಿದವರೇನಲ್ಲ. ಆದರೆ ಈ ಕ್ಷಣದಲ್ಲಿ ಅವರ ಮಾತು ಹೇಗಿದೆ ಎಂದರೆ ಆಡ್ವಾಣಿ ನಿರ್ಗಮನದಿಂದ ಬಿಜೆಪಿ ಸರಿಯಾಗಿ ಅರ್ಧ ಹೋಳಾಗಲಿದೆ ಎಂಬ ಧಾಟಿ. ಇವೆಲ್ಲ ಆಗುವ ಹೋಗುವ ಮಾತುಗಳೇ?
ಆಡ್ವಾಣಿ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ ಕ್ಷಣದಿಂದ ಮಧ್ಯಾಹ್ನವಿಡಿ ಹಲವು ಅಂಶಗಳು ಚರ್ಚೆಗೆ ಒಳಗಾದವು. ನೋವು ಮತ್ತು ದುಃಖ, ವಂಚನೆ ಹೊಂದಿದ ಮನೋಭಾವ ಹಾಗೂ ತನ್ನದೇ ಎಂಬ ಅಹಂಕಾರ, ವ್ಯಕ್ತಿ ವೈಭವ ಮತ್ತು ಸೈದ್ಧಾಂತಿಕ ನಂಬಿಕೆ ಇಂಥ ಪರಿಕಲ್ಪನೆಗಳ ಕುರಿತೆಲ್ಲ ಭಾರೀ ಚರ್ಚೆಗಳಾದವು. ನೀವು ಯಾವ ಪಾಳಯವನ್ನು ಬೆಂಬಲಿಸುತ್ತಿದ್ದೀರಿ ಎಂಬ ಆಧಾರದ ಮೇಲೆ ಈ ಮೇಲಿನ ಅಂಶಗಳನ್ನು ಆಡ್ವಾಣಿ ಮತ್ತು ನರೇಂದ್ರ ಮೋದಿಯವರಿಗೆ ಆರೋಪಿಸಬಹುದಾಗಿದೆ.
ಟಿವಿಯ ಸಮಯವನ್ನು ಹಾಗೂ ನ್ಯೂಸ್ಪ್ರಿಂಟ್ನ ಒಡಲನ್ನು ತುಂಬಿಸುವುದಕ್ಕೆ ಈ ಕರುಣಾಜನಕ ವಿಶ್ಲೇಷಣೆಗಳೆಲ್ಲ ತುಂಬ ಚೆನ್ನಾಗಿರುತ್ತವೆ. ಆದರೆ ರಾಜಕೀಯ ಎಂಬುದು ಇದಕ್ಕೆ ಭಿನ್ನವಾದ ತರ್ಕವನ್ನು ಅನುಸರಿಸುತ್ತದೆ. ಈ ತರ್ಕ ತಣ್ಣಗಿನ, ಕಾರುಣ್ಯ ರಹಿತ ಕೂಟ. ತಮ್ಮ ಬುದ್ಧಿಮತ್ತೆಗೆ ಅನುಸಾರವಾಗಿ ಬಿಜೆಪಿಯ ದೊಡ್ಡದೊಂದು ವರ್ಗ, ಅದರ ಕಾರ್ಯಕರ್ತರು, ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಪಕ್ಷದ ಹುದ್ದೆಗಳನ್ನು ನಿರ್ವಹಿಸುತ್ತಿರುವವರು, ಅದರ ರಾಷ್ಟ್ರೀಯ ಕಾರ್ಯಕಾರಿಣಿ ಇವೆಲ್ಲ ಸೇರಿ ಪಕ್ಷದ ಚುನಾವಣಾ ಸಮಿತಿಯ ಅಧ್ಯಕ್ಷಗಿರಿಗೆ ನರೇಂದ್ರ ಮೋದಿಯವರನ್ನು ಏರಿಸುವ ನಿರ್ಧಾರ ಕೈಗೊಂಡವು. ಪರೋಕ್ಷವಾಗಿ ಈ ನಡೆ ಮೋದಿಯವರನ್ನು 2014ರ ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ನಾಯಕನನ್ನಾಗಿ ಹಾಗೂ ಸೂಕ್ಷ್ಮವಾಗಿ ಪಕ್ಷದ ಪ್ರಧಾನಿ ಉಮೇದುವಾರರನ್ನಾಗಿ ಬಿಂಬಿಸುತ್ತದೆ.
ಈ ನಿರ್ಧಾರ ಸರಿಯಾಗಿರಬಹುದು ಇಲ್ಲವೇ ತಪ್ಪಿದ್ದಿರಬಹುದು. ಅದಿಲ್ಲಿ ಚರ್ಚೆಯಾಗಬೇಕಾದ ಸಂಗತಿಯೇ ಅಲ್ಲ. ಆದರೆ ಬಿಜೆಪಿಯ ಬಹುದೊಡ್ಡ ವರ್ಗವು ಮೋದಿಯವರಂತೆ ಜನಪ್ರಿಯರಾದ, ಕುತೂಹಲ ಹುಟ್ಟಿಸುವ ಗುಣಗಳ ನಾಯಕ ಇನ್ನೊಬ್ಬನಿಲ್ಲ ಎಂದು ಬಹುಮತದಿಂದ ಒಪ್ಪಿಕಂಡಿದೆ. ಬಿಜೆಪಿಯೊಳಗೆ ಪದೋನ್ನತಿಗೆ ನರೇಂದ್ರ ಮೋದಿ ಗಳಿಸಬಹುದಾದ ಮತಗಳು, ಸಮೀಕ್ಷೆಗಳ ವಿಶ್ವಾಸಾರ್ಹತೆಯ ಚರ್ಚೆ ಏನೇ ಇದ್ದಿರಲಿ- ಅಂಥ ಎಲ್ಲ ಸಮೀಕ್ಷೆಗಳಲ್ಲಿ ಪ್ರಧಾನಿ ಹುದ್ದೆ ನಿರ್ವಹಣೆಗೆ ಮೋದಿಯೇ ನಂಬಿಕಸ್ಥ ಎಂದು ಬಂದಿರುವ ತೀರ್ಪು, ಜನಸಮೂಹದಲ್ಲಿ ಮೋದಿ ಅಲೆ ಕೆರಳಿಸುತ್ತಿರುವ ಕಾತುರ ಇವೆಲ್ಲವೂ ಅವರನ್ನು ಆ ಸ್ಥಾನದಲ್ಲಿ ಕೂರಿಸಿವೆ. ಇದು ಆಡ್ವಾಣಿಯವರ ದೃಷ್ಟಿಗೆ ಸರಿ ಹೊಂದದೇ ಇದ್ದಿರಬಹುದು. ಆದರೆ ಬಹುಮತದ ದೃಷ್ಟಿಕೋನ ಇದೇ ಆಗಿದೆ. ಅದೇನೇ ಇದ್ದರೂ ಒಟ್ಟಾರೆ ಪ್ರಕರಣದಲ್ಲಿ ತಮ್ಮ ಮಾತೇ ನಡೆಯಬೇಕು ಎಂದು ಆಡ್ವಾಣಿಯವರು ನಡೆದುಕೊಂಡಿರುವ ರೀತಿ, ಅವರೇ ತಮ್ಮ ಪತ್ರದಲ್ಲಿ ಕೆಲ 'ನಾಯಕರ' ಮೇಲೆ ಹೊರಿಸಿರುವ 'ವೈಯಕ್ತಿಕ ಹಿತಾಸಕ್ತಿ' ಆರೋಪ ವಾಸ್ತವದಲ್ಲಿ ಅವರಿಗೇ ಅನ್ವಯಿಸುವಂಥದ್ದು ಎಂದೆನಿಸುವುದಿಲ್ಲವೇ?
ಹೋಗಲಿ, ಇವೆಲ್ಲ ಎತ್ತ ಕರೆದುಕೊಂಡು ಹೋಗುತ್ತವೆ? ಆಡ್ವಾಣಿಯವರು ತಮ್ಮ ರಾಜಿನಾಮೆ ಹಿಂತೆಗೆದುಕೊಳ್ಳುತ್ತಾರೆಯೇ ಅಥವಾ ಮೋದಿಯವರಿಗೆ ನೀಡಿದ ಸ್ಥಾನವನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದೇ? ಎರಡನೇ ಯೋಚನೆ ಬಿಜೆಪಿಗೆ ಆತ್ಮಘಾತುಕವಾದದ್ದು! ಏಕೆಂದರೆ ಮೋದಿ ಪದೋನ್ನತಿ ನಿರ್ಧಾರವು ಪಕ್ಷದ ಕಾರ್ಯಕರ್ತರ ಆಶಯ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಒಲವನ್ನು ಆಧರಿಸಿ ತೆಗೆದುಕೊಂಡಿದ್ದು ಎಂದು ಅದರ ವಕ್ತಾರರು ಈಗಾಗಲೇ ಹೇಳಿಬಿಟ್ಟಿದ್ದಾರೆ. ಈ ಆಧಾರದಲ್ಲಿ ಕೊಟ್ಟ ಸ್ಥಾನವನ್ನು ಹಿಂದಕ್ಕೆ ಪಡೆಯುವುದು ಎಂದರೆ ಬಿಜೆಪಿಯನ್ನು ನಗೆಪಾಟಲಿನ ವಸ್ತುವಾಗಿಸಿದಂತೆಯೇ ಸರಿ.
ಇದು ತಳಮಟ್ಟದಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಹಾಗೂ ಇದರ ಹಿತೈಷಿಗಳನ್ನು ಸಂಪೂರ್ಣ ಗೊಂದಲಕ್ಕೆ ತಳ್ಳುತ್ತದೆ. ಸಾಮಾನ್ಯ ಮತದಾರರು, ಮುಂದೆ ಒದಗಿಬರಬಹುದಾದ ಮಿತ್ರರು ಹಾಗೂ ಬಹಳ ಮುಖ್ಯವಾಗಿ ಪಕ್ಷದ ನಿಷ್ಠಾವಂತ ಬೆಂಬಲಿಗರು ಬಿಜೆಪಿ ಮೇಲೆ ಇಟ್ಟ ವಿಶ್ವಾಸಾರ್ಹತೆಯೇ ಇಲ್ಲದಂತಾಗಿಬಿಡುತ್ತದೆ.
ಇಲ್ಲೊಂದು ಸಾಮ್ಯತೆ ಇದೆ. ಇದು ಪರಿಪೂರ್ಣ ಸಾಮ್ಯತೆ ಅಲ್ಲದಿರಬಹುದು. ಆದರೆ ಇವತ್ತು ಬಿಜೆಪಿ ಎದುರಿಸುತ್ತಿರುವ ಡೈಲೆಮಾವನ್ನೇ 1999ರಲ್ಲಿ ಶರದ್ ಪವಾರ್ ಅವರು ಕಾಂಗ್ರೆಸ್ನ ಮೇಲೆ ಹೇರಿದ್ದರು. ಸೋನಿಯಾ ಗಾಂಧಿ ಅವರು ಪ್ರಧಾನಿ ಉಮೇದುವಾರಿಕೆ ಬಿಟ್ಟು ಪಕ್ಷದ ಚುಕ್ಕಾಣಿಯನ್ನು ಇತರರಿಗೆ ವಹಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದರು. ಸೋನಿಯಾ ಅವರ ವಿದೇಶಿ ಮೂಲವೇ ಪವಾರ್ ಅವರು ಈ ನಿಲುವು ತಳೆಯುವುದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯನ್ನು ಸ್ವಲ್ಪ ಬದಿಗಿರಿಸಿ ನೋಡಿದರೆ, ಆಡ್ವಾಣಿ ಭಿನ್ನರಾಗದಿಂದ ಬಿಜೆಪಿ ಈಗ ಎದುರಿಸುತ್ತಿರುವ ಸವಾಲನ್ನೇ ಆಗ ಕಾಂಗ್ರೆಸ್ ಎದುರಿಸಿತ್ತು. ಆಗ ಸೋನಿಯಾ ಗಾಂಧಿ ಮತ್ತವರ ಕುಟುಂಬ ಇದರಿಂದ ಮುಜುಗರಗೊಂಡು ಹಿನ್ನಡೆ ಇಟ್ಟಿದ್ದೇ ಆಗಿದ್ದಲ್ಲಿ ಕಾಂಗ್ರೆಸ್ ತನ್ನ ಆಧಾರಸ್ತಂಭವನ್ನೇ ಕಳೆದುಕೊಳ್ಳುತ್ತಿತ್ತು. ಅದರ ಸಂಘಟನೆ ತತ್ವವೇ ಬೇರೆಯಾಗಿಬಿಡುತ್ತಿತ್ತು.
ಬಿಜೆಪಿ ಸಹ ಈಗ ಅಂಥದೇ ಸತ್ಯವನ್ನು ಎದುರಿಸುತ್ತಿದೆ. ಪಕ್ಷದಲ್ಲಿ ತಮಗಿರುವ ಅನುಕಂಪದ ಪ್ರಮಾಣವನ್ನು ಆಡ್ವಾಣಿ ತಪ್ಪು ಲೆಕ್ಕಾಚಾರ ಹಾಕಿ ಮುಂದಡಿ ಇಟ್ಟಿರುವಂತಿದೆ. ಇದು 2005 ಅಲ್ಲ. ಆಗ ಅವರು ಜಿನ್ನಾ ಕುರಿತು ಪಕ್ಷಕ್ಕೆ ಒಪ್ಪಿತವಲ್ಲದ ಮಾತನಾಡಿದ್ದರೂ ಬಿಜೆಪಿಯ ಎರಡನೇ ಪೀಳಿಗೆ ಅವರ ಮೇಲಿಟ್ಟಿದ್ದ ಪ್ರೀತಿಯನ್ನು ಮುಸುಕಾಗಿಸುವಷ್ಟರಮಟ್ಟಿಗೆ ಆ ಪ್ರಕರಣ ಪ್ರಭಾವ ಬೀರಿರಲಿಲ್ಲ. ಆಗ ಆಡ್ವಾಣಿ ಪರ ಮಾತನಾಡುವುದಕ್ಕೆ ಮೋದಿಯೇ ಮುಂದಾಗಿದ್ದರು. ಅದರರ್ಥ ಜಿನ್ನಾ ಕುರಿತ ಆಡ್ವಾಣಿ ವ್ಯಾಖ್ಯಾನವನ್ನು ಮೋದಿ ಒಪ್ಪಿದ್ದರು ಎಂದಲ್ಲ. ಆಡ್ವಾಣಿ ಏಕಾಏಕಿ ನಿರ್ಗಮಿಸಿದರೆ ಉಂಟಾಗುವ ನಿರ್ವಾತವನ್ನು ಆರೆಸ್ಸೆಸ್ ಆವರಿಸಿಬಿಡುತ್ತದೆ ಎಂಬ ಎಚ್ಚರಿಕೆ ಅವರದ್ದಾಗಿತ್ತು.
ಆದರೆ 2013ರಲ್ಲಿ ಎಲ್ಲವೂ ಬದಲಾಗಿವೆ. ಆಡ್ವಾಣಿ ಪರವಾಗಿದ್ದ ಅನುಕಂಪದ ಸೀಮೆಗಳನ್ನು ಅವರು ದಾಟಿದ್ದಾರೆ. ಇದು ಭೀಷ್ಮ ಪಿತಾಮಹ ತಾನಾಗಿಯೇ ನಿರ್ಮಿಸಿಕೊಂಡಿರುವ ಶರಶಯ್ಯೆ. ಅವರೇ ಅದರ ಮೇಲೆ ಮಲಗಬೇಕು.
- ಅಶೋಕ್ ಮಲ್ಲಿಕ್
ರಾಜಕೀಯ ವಿಶ್ಲೇಷಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

