ಅಂಕಣಗಳು

ಇಷ್ಟಕ್ಕೂ ಇಶ್ರತ್ ಜಹಾನ್ ಭಯೋತ್ಪಾದಕಿ ಆಗಿರಲಿಲ್ಲವೆ?

ಇಷ್ಟಕ್ಕೂ ಇಶ್ರತ್ ಜಹಾನ್ ಭಯೋತ್ಪಾದಕಿ ಆಗಿರಲಿಲ್ಲವೆ?
ಇಶ್ರತ್ ಜಹಾನ್
Published On :

2004ರಲ್ಲಿ ಲಷ್ಕರ್-ಎ-ತಯ್ಬಾದ ಪ್ರಮುಖ ನಾಯಕ ಝಕಿ-ಉರ್-ರೆಹಮಾನ್ ಲಖ್ವಿ, ಉಗ್ರ ಡೇವಿಡ್ ಹೆಡ್ಲಿಯೊಂದಿಗೆ ತನ್ನ ಸಂಘಟನೆಯ ಮೊದಲ ಸಭೆಯನ್ನು ನಡೆಸಿದ್ದ. ಆ ರೂಮಿನಲ್ಲಿದ್ದ 6.4 ಅಡಿ ಎತ್ತರದ ದೈತ್ಯ ಮುಜಮಿಲ್ ಭಟ್‌ನನ್ನು ತೋರಿಸುತ್ತಾ 'ನೀನು ಇವನೊಂದಿಗೆ ಕೆಲಸ ಮಾಡಲಿರುವೆ' ಎಂದು ಹೆಡ್ಲಿಗೆ ಹೇಳಿದ್ದ. ಮುಂದೆ ಹೆಡ್ಲಿ ಎಫ್‌ಬಿಐನಿಂದ ವಿಚಾರಣೆಗೊಳಗಾದಾಗ 'ಭಟ್‌ನ ಕೆಲಸ ಕಾಶ್ಮೀರದಲ್ಲಿ ಮುಷ್ಕರಗಳನ್ನು ಹೂಡುವುದು ಮತ್ತು ಉಗ್ರರಿಗೆ ತರಬೇತಿ ನೀಡುವುದಾಗಿತ್ತು. ಅಲ್ಲದೇ ಇಶ್ರತ್ ಜಹಾನ್ ಎಂಬ 'ಮಹಿಳಾ ಆತ್ಮಹತ್ಯಾ ಬಾಂಬರ್‌'ಗೂ ಆತ ತರಬೇತಿ ಕೊಟ್ಟಿದ್ದಾನೆ' ಎಂದು ಹೇಳಿದ್ದಾನೆ.  
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪ್ರತೀಕಾರವಾಗಿ ಅಕ್ಷರ್‌ಧಾಮ ಮಂದಿರ, ಸೋಮನಾಥ ಮಂದಿರ ಮತ್ತು ಸಿದ್ಧಿ ಮಂದಿರದ ಮೇಲೆ ದಾಳಿ ಮಾಡಲು ಮುಜಮಿಲ್ ಯೋಜನೆ ರೂಪಿಸಿರುವುದರ ಬಗ್ಗೆಯೂ ಹೆಡ್ಲಿಗೆ ತಿಳಿದಿತ್ತಂತೆ.
ಇಶ್ರತ್ ಜಹಾನ್ ಮತ್ತು ಆಕೆಯೊಂದಿಗಿದ್ದ ಮೂವರು ವ್ಯಕ್ತಿಗಳ ದೇಹಗಳು ಗುಂಡಿನ ದಾಳಿಗೆ ಛಿದ್ರವಾಗಿ ಆಗಲೇ 9 ವರ್ಷ ಕಳೆದಿವೆ. ಅವರು ಉಗ್ರರಾಗಿದ್ದರೋ ಅಥವಾ ಅಮಾಯಕರೋ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಿಬಿಐ ಇನ್ನೂ ಹೆಣಗುತ್ತಲೇ ಇದೆ. ಆದರೆ ಇಶ್ರತ್ ಜಹಾನ್‌ಳ ಬದುಕು ಮತ್ತು ಸಾವಿನ ಬಗ್ಗೆ ಬಹಳಷ್ಟು ಮಾಹಿತಿ ಯುಪಿಎ ಸರ್ಕಾರದ ಬಳಿ ಇದ್ದರೂ ಅದು ಆ ವಿಷಯದ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎನ್ನುವ ಬಗ್ಗೆಯಂತೂ ಸ್ಪಷ್ಟ ಪುರಾವೆಗಳಿವೆ.
ಕಳೆದ ವರ್ಷ ರಾಷ್ಟ್ರೀಯ ತನಿಖಾ ದಳ, 'ಇಶ್ರತ್‌ಳ ಬಗ್ಗೆ ತಮಗೆ ಮಾಹಿತಿ ಇಲ್ಲ. ಇರುವುದೆಲ್ಲವೂ ಗಾಳಿ ಸುದ್ದಿಯಷ್ಟೇ' ಎಂದು ಗುಜರಾತ್‌ನ ಮುಖ್ಯ ನ್ಯಾಯಾಧೀಶರುಗಳಾದ ಜಯಂತ್ ಪಟೇಲ್ ಮತ್ತು ಅಭಿಲಾಶಾ ಕುಮಾರಿ ಎದುರು ಹೇಳಿತ್ತು. ಆದರೆ 'ಫಸ್ಟ್‌ಪೋಸ್ಟ್‌' ಜಾಲತಾಣಕ್ಕೆ ದೊರೆತಿರುವ 'ಎಫ್‌ಬಿಐನ ದಾಖಲೆಗಳನ್ನು' ಗಮನಿಸಿದಾಗ, ಜಹಾನ್ ಉಗ್ರಳೆಂಬ ಬಗ್ಗೆ ಸ್ಪಷ್ಟ ಮಾಹಿತಿಯಿದ್ದರೂ ಕೇಂದ್ರ ಸರ್ಕಾರ ಸುಮ್ಮನಿದೆ ಎನ್ನುವ ಸತ್ಯ ಅನಾವರಣವಾಗಿದೆ. ಹಾಗೆ ನೋಡಿದರೆ ಅದು ಬಾಯಿಮುಚ್ಚಿಕೊಂಡು ಕುಳಿತಿರುವುದು ಕೇವಲ ಇದೊಂದು ವಿಷಯದಲ್ಲಷ್ಟೇ ಅಲ್ಲ!
ಜೂನ್ 15, 2004 ರ ಮುಂಜಾವು, ಇಶ್ರತ್ ಜಹಾನ್, ಜಾವೇದ್ ಶೇಖ್, ಜೀಶಾನ್ ಜೋಹರ್ ಮತ್ತು ಅಮ್ಜದ್ ಅಲಿ ರಾಣಾನನ್ನು ಅಹಮದಾಬಾದ್‌ನ ಹೊರವಲಯದಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಆಗ ಗುಪ್ತಚರ ದಳದ ನಿರ್ದೇಶಕರಾಗಿದ್ದವರು ಕೆ.ಪಿ. ಸಿಂಗ್. ಉಗ್ರ ನಿಗ್ರಹ ದಳದ ಕಾರ್ಯಾಚರಣೆಗಳ ನೇತೃತ್ವ ವಹಿಸಿಕೊಂಡಿದ್ದವರು ನೇಹ್ಚಲ್ ಸಂಧು ಮತ್ತು ಪಶ್ಚಿಮ ಬಂಗಾಳದ ವರ್ತಮಾನ ರಾಜ್ಯಪಾಲರಾಗಿರುವ ಎಮ್.ಕೆ. ನಾರಾಯಣ್, ಅಂದು ಆಂತರಿಕ ಭದ್ರತಾ ಸಲಹೆಗಾರರಾಗಿದ್ದರು. ಇನ್ನು ಪ್ರಧಾನಿ ಹುದ್ದೆಯಲ್ಲಿದ್ದವರು ಮನಮೋಹನ್ ಸಿಂಗ್.
 22 ಏಪ್ರಿಲ್ 2004ರಂದು ಗುಪ್ತಚರ ದಳದಿಂದ ಎಲ್ಲಾ ರಾಜ್ಯಗಳಿಗೂ ಹೋದ ಎಚ್ಚರಿಕೆಯ ಬಗ್ಗೆ(ಆಡ್ವಾಣಿ ಅವರನ್ನೊಳಗೊಂಡಂತೆ ಪ್ರಮುಖ ರಾಜಕಾರಣಿಗಳ ಹತ್ಯೆಯ ಸಂಚು) ಮೇಲಿನ ಮೊದಲ ಮೂರು ವ್ಯಕ್ತಿಗಳಿಗೂ ಸ್ಪಷ್ಟವಾಗಿ ಮಾಹಿತಿಯಿತ್ತು.
ಮುಂದೆ ಗುಪ್ತಚರ ದಳದ ಗುಜರಾತ್ ಘಟಕದಿಂದ ಗುಜರಾತ್ ಪೊಲೀಸರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ರವಾನೆಯಾಯಿತು. ಪಂಜಾಬಿ ಮಾತನಾಡುವ ಇಬ್ಬರು ಉಗ್ರರು ಸ್ಥಳೀಯರ ನೆರವು ಪಡೆದು ಪ್ರಮುಖ ರಾಜಕಾರಣಿಗಳ ಮತ್ತು ಸ್ಥಳಗಳ ಮೇಲೆ ದಾಳಿ ಮಾಡಲು ಸಿದ್ಧರಾಗಿದ್ದಾರೆ ಎಂಬುದು ಆ ಮಾಹಿತಿಯಾಗಿತ್ತು.
ಮೂರು ಪ್ರತ್ಯೇಕ ಗುಪ್ತಚರ ಮೂಲಗಳಿಂದ 'ಫಸ್ಟ್‌ಪೋಸ್ಟ್‌ಗೆ' ಬಂದ ಮಾಹಿತಿಯ ಪ್ರಕಾರ, ಗುಪ್ತಚರ ದಳಕ್ಕೆ ಗುಜರಾತ್‌ನಲ್ಲಿ ನಡೆಯುತ್ತಿರುವ ಸಂಚಿನ ಬಗ್ಗೆ ತಿಳಿದದ್ದು ಫೆಬ್ರವರಿ 2004ರಲ್ಲಿ. ಈ ಮಾಹಿತಿಯ ಮೂಲವಿದ್ದದ್ದು  ಜಮ್ಮು ಕಾಶ್ಮೀರ ಪೊಲೀಸರಿಂದ ಹತ್ಯೆಯಾದ ಲಷ್ಕರ್‌ನ ಉಗ್ರ 'ಎಹ್ಸಾನ್ ಇಲಾಹಿ'ಯ ಬಳಿ! ಸತ್ತ ಎಹ್ಸಾನ್ ಇಲಾಹಿಯ ಜೇಬಿನಲ್ಲಿದ್ದ ಪತ್ರ ಹಿಡಿದು ಹೊರಟ ಪೊಲೀಸರಿಗೆ ಈ ಸಂಚಿನ ಸುಳುಹು ಸಿಕ್ಕಿತ್ತು.
ಉಗ್ರರ ಹತ್ಯೆಯಾದ ನಂತರ ಅಹಮದಾಬಾದ್ ಪೊಲೀಸ್ ಕ್ರೈಂ ಬ್ರ್ಯಾಂಚ್ ತಯಾರಿಸಿದ ಮೊದಲನೇ ವರದಿಯನ್ನು ನೋಡಿದಾಗ ಗುಪ್ತಚರ ದಳಕ್ಕೆ ಯಾರೋ ಪ್ರಮುಖ 'ಒಳ'ಮಾಹಿತಿದಾರರಿದ್ದರು ಎಂಬುದು ಸ್ಪಷ್ಟವಾಗುತ್ತದೆ. 'ನಾಲ್ಕು ಉಗ್ರರು ಎಮ್‌ಎಚ್ 02 ಜೆಎ 4786 ಎಂಬ ನಂಬರಿನ ನೀಲಿ ಬಣ್ಣದ ಟಾಟಾ ಇಂಡಿಕಾ ಕಾರಿನಲ್ಲಿ ಅಹಮದಾಬಾದ್‌ನ ಹೊರವಲಯಕ್ಕೆ ಬರಲಿದ್ದಾರೆ' ಎನ್ನುವ ಮಾಹಿತಿ ಅಧಿಕಾರ ವರ್ಗಕ್ಕೆ ಮೊದಲೇ ಸಿಕ್ಕಿತ್ತು ಎನ್ನುತ್ತದೆ ಆ ವರದಿ.
'ಗುಪ್ತಚರ ದಳದಿಂದ ಮಾಹಿತಿ ಸಿಕ್ಕಿದೆ ಎಂದಾಕ್ಷಣ ಒಬ್ಬರನ್ನು ಕೊಂದುಬಿಡಬೇಕು ಎಂದು ಅರ್ಥವಲ್ಲ?' ಎಂದು 2009ರಲ್ಲಿ ಅಂದಿನ ಕೇಂದ್ರ ಸಚಿವ ಪಿ. ಚಿದಂಬರಂ ಪೊಲೀಸರ ಮೇಲೆ ಕಿಡಿ ಕಾರಿದ್ದರು. ಅದೂ ಸತ್ಯ. ಆದರೆ ತಮ್ಮ ಗುಪ್ತಚರ ದಳ ಬೆನ್ನತ್ತಿದ್ದ ಜನರು ಹೆಣವಾಗಿ ಹೋಗುವಾಗ ಯುಪಿಎ ಸರ್ಕಾರವೇನು ಮಾಡುತ್ತಿತ್ತು? ಸಿಬಿಐ ಈ ಪ್ರಶ್ನೆಗೆ ಉತ್ತರಿಸಬಲ್ಲ ಯಾರೊಬ್ಬರನ್ನೂ ಇದುವರೆಗೂ ವಿಚಾರಣೆಗೊಳಪಡಿಸಿಲ್ಲವೇಕೆ?
ಇನ್ನು ಜಾವೇದ್ ಶೇಖ್‌ನ ವಿಚಾರಕ್ಕೆ ಬಂದರೆ....
ಕೇರಳದ ಅಳಪುರಂ ಜಿಲ್ಲೆಯ ಪ್ರಾಣೇಶ್‌ಕುಮಾರ್ ಪಿಳ್ಳೈ 1986ರಲ್ಲಿ ಸಾಜೀದಾ ಶೇಖ್ ಎನ್ನುವ ಮುಸ್ಲಿಂ ಯುವತಿಯ ಪ್ರೇಮದಲ್ಲಿ ಸಿಲುಕಿದ. ತಮ್ಮ ಮನೆಯವರು ಮದುವೆಗೆ ಒಪ್ಪಲಿಲ್ಲ ಎನ್ನುವ ಕಾರಣದಿಂದ  ಮತಾಂತರವಾಗಿ ಜಾವೇದ್ ಶೇಖ್ ಆಗಿ ಬದಲಾದ. 1995ರ ವೇಳೆಗೆ ಹೆಂಡತಿಯನ್ನು ಕರೆದುಕೊಂಡು ಬದುಕನ್ನರಸುತ್ತಾ ಆತ ಮುಂಬೈಗೆ ಹೆಜ್ಜೆಯಿಟ್ಟ. ಹಾಗೆ ನೋಡಿದರೆ ಜಾವೇದ್‌ನ ಜೀವನ ಮೊದಲಿನಿಂದಲೂ ಪ್ರಕ್ಷುಬ್ಧವಾಗಿಯೇ ಇತ್ತು. ಮುಂಬೈ ಪೊಲೀಸರು 1997ರಲ್ಲಿ (ಅದೊಂದು ವರ್ಷದಲ್ಲೇ) ಜಾವೇದ್‌ನ ವಿರುದ್ಧ ನಾಲ್ಕು ಕೇಸುಗಳನ್ನು ಜಡಿದಿದ್ದರು.
2003ರಲ್ಲಿ ನಕಲಿ ಪಾಸ್‌ಪೋರ್ಟ್‌ನ ಮೇಲೆ ದುಬೈಗೆ ಹೋದ ಶೇಖ್, ಗುಜರಾತ್‌ನಲ್ಲಿ ಮುಸ್ಲಿಂ ವಿರೋಧಿ ಅಲೆಯೆದ್ದಿರುವುದನ್ನು ಅರಿತು ವಾಪಸ್ ಮುಂಬೈಗೆ ಬಂದ. 2004ರಲ್ಲಿ ಪ್ರಾಣೇಶ್‌ಕುಮಾರ್. ಎಂ. ಪಿಳ್ಳೈ ಎನ್ನುವ ಹೆಸರಿನಲ್ಲಿ ಮತ್ತೊಂದು ಪಾಸ್‌ಪೋರ್ಟ್ ಪಡೆದು ಓಮನ್ ರಾಷ್ಟ್ರಕ್ಕೆ ಹೊರಟ. ಅಲ್ಲಿಂದ ತಿರುಗಿ ಬಂದಾಗ ತನ್ನ ಬಳಿ ಇದ್ದ ದುಡ್ಡಿನಿಂದ ಇಂಡಿಕಾ ಕಾರೊಂದನ್ನು ಖರೀದಿಸಿದ (ಇದೇ ಕಾರಿನಲ್ಲೇ ಆತ ಸತ್ತದ್ದು).
'ಜಾವೇದ್ ಶೇಖ್ ಲಷ್ಕರ್ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ, ಅದರಲ್ಲೂ ಮುಖ್ಯವಾಗಿ ಮುಜಮಿಲ್ ಭಟ್‌ನೊಂದಿಗೆ' ಎಂದು ಸರ್ಕಾರ 2004ರಲ್ಲಿ ಹಾಕಿದ ಅಫಿಡವಿಟ್‌ನಲ್ಲಿ ಹೇಳುತ್ತದೆ. ಆದರೆ ಇದುವರೆಗೂ ಈ ವಿಷಯವನ್ನು ಬಹಿರಂಗಮಾಡಲು ಮಾತ್ರ ಯುಪಿಎ ಮುಂದಾಗಿಲ್ಲ. ಇನ್ನು ಸಿಬಿಐ ತನಗೆ ಪುರಾವೆಗಳೇ ದೊರೆತಿಲ್ಲ ಎನ್ನುವಂತೆ ವರ್ತಿಸುತ್ತಿದೆ!
ಈ ಜಾವೇದ್ ಶೇಖ್, ಇಶ್ರತ್ ಜಹಾನ್‌ಳನ್ನು ಮೇ 1 ರಂದು ಮುಂಬೈನಲ್ಲಿ ಭೇಟಿಯಾದ. ತಾನು ಪರ್ಫ್ಯೂಮ್ ಅಂಗಡಿಯನ್ನು ನಡೆಸುತ್ತಿರುವುದಾಗಿ, ಅದರಲ್ಲಿ ಇಶ್ರತ್‌ಳಿಗೆ ಕೆಲಸ ಕೊಡುವುದಾಗಿ ಆಕೆಯ ತಾಯಿಗೆ ಸುಳ್ಳು ಹೇಳಿ, ಇಶ್ರತ್‌ಳನ್ನು ಜೊತೆಗೆ ಕರೆದೊಯ್ದ. ಅಲ್ಲಿಂದ ಅವರು ನೇರವಾಗಿ ಹೋಗಿ ತಲುಪಿದ್ದು ಗುಜರಾತ್‌ನ ಸೂರತ್‌ಗೆ. ಅವರಿಬ್ಬರೂ ಅಲ್ಲಿ ಕೆಲವು ದಿನ ತಂಗಿದ್ದರು ಎಂಬುದಕ್ಕೆ ದಾಖಲೆಗಳಿವೆ. ಅವರು ತಮ್ಮಲ್ಲೇ ಉಳಿದುಕೊಂಡಿದ್ದರು ಎಂದು 'ತುಳಸಿ ಗೆಸ್ಟ್‌' ಹೌಸ್‌ನ ನೌಕರರು ಹೇಳುತ್ತಾರೆ. ಅಹಮದಾಬಾದ್‌ನ ಹೊರವಲಯದಲ್ಲಿರುವ 'ಶಕ್ತಿ ಮೋಟಾರ್ ಗ್ಯಾರೇಜಿ'ನಲ್ಲಿ ಜಾವೇದ್ ತನ್ನ ಇಂಡಿಕಾ ಕಾರ್‌ನ ರಿಪೇರಿಯನ್ನೂ ಮಾಡಿಸಿದ್ದರ ಬಗ್ಗೆ ದಾಖಲೆಗಳಿವೆ.
ಈ ತಿಂಗಳ ಮೊದಲಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಜೈ ಸಿಂಗ್ ಅವರು ಸುಪ್ರೀಂಕೊರ್ಟಿನಲ್ಲಿ ಮಾತನಾಡುತ್ತಾ, 'ಇಶ್ರತ್ ಜಹಾನ್ ಸೇರಿದಂತೆ ಇನ್ನುಳಿದ ಮೂವರನ್ನು ಪಿ. ಪಾಂಡೆಯವರ ಆದೇಶದ ಮೇರೆಗೆ ಒಂದು ದಿನ ಮುಂತಚಿತವಾಗಿಯೇ ಕಿಡ್ನ್ಯಾಪ್ ಮಾಡಲಾಗಿತ್ತು. ಮರುದಿನ ಅವರನ್ನು ಕೊಲ್ಲಲಾಯಿತು ಎನ್ನುವ ಬಗ್ಗೆ ಸಿಬಿಐನ ಬಳಿ ಎವಿಡೆನ್ಸ್ ಇದೆ' ಎಂದು ಹೇಳಿದ್ದರು.
ವ್ಯಂಗ್ಯವೆಂದರೆ ಉಗ್ರರು ಅಪಹರಣಕ್ಕೊಳಗಾಗಿ ನಂತರ ಕೊಲೆಯಾದಾಗ, ಸ್ಥಳದಲ್ಲಿದ್ದರೆಂದು ಹೇಳಲಾಗುವ 5 ಪೊಲೀಸ್ ಆಫಿಸರುಗಳಿಗೆ ಈಗ ಜಾಮೀನು ಮಂಜೂರಾಗಿದೆ. ಕಾರಣವೇನು ಗೊತ್ತೇ? 90 ದಿನಗಳಾದರೂ ಸಿಬಿಐಗೆ ಅವರ ವಿರುದ್ಧ ಸಾಕ್ಷ್ಯ ಒದಗಿಸಲು ಆಗಲಿಲ್ಲ! ಆಗಲಿಲ್ಲ ಎನ್ನುವ ಬದಲು ಅದರ ಬಳಿ ಪುರಾವೆಯೇ ಇಲ್ಲ ಎನ್ನುವುದು ಸತ್ಯ. ಈ ಕಥೆಗೆ ಇನ್ನಷ್ಟು ಆಯಾಮಾಗಳನ್ನು ನೀಡಬಲ್ಲ ಜನರೊಂದಿಗೆ ಸಿಬಿಐ ಅದೇಕೆ ಮಾತನಾಡುತ್ತಿಲ್ಲವೋ?
ಜಾವೇದ್ ಶೇಖ್‌ಗೆ ಫೈಜಾಬಾದ್‌ನ ನಿವಾಸಿ ಮೊಹಮ್ಮದ್ ಮೊಹ್ರಾಜುದ್ದೀನ್‌ನೊಂದಿಗೆ ನಿಕಟ ಸ್ನೇಹವಿತ್ತು ಎನ್ನಲಾಗುತ್ತದೆ. ಆದರೆ ಇದುವರೆಗೂ ಮೊಹಮ್ಮದ್‌ನನ್ನು ಪತ್ತೆಹಚ್ಚಲು ಸಿಬಿಐಗೆ ಆಗಿಲ್ಲ. ಇನ್ನು ಅಬ್ದುಲ್ ರಜಾಕ್ ಎನ್ನುವ ಉಗ್ರ, ಜಾವೇದ್‌ನನ್ನು ಉಗ್ರ ತರಬೇತಿ ಕೇಂದ್ರಕ್ಕೆ ಕಳುಹಿಸಿದ್ದು ತಾನೇ ಎಂದು ದೆಹಲಿ ಪೊಲೀಸರೆದುರು 2005ರಲ್ಲೇ ಒಪ್ಪಿಕೊಂಡಿದ್ದಾನೆ. ಆದರೆ ಇದುವರೆಗೂ ಸಿಬಿಐ ಅವನ ವಿಚಾರಣೆಗೆ ಮುಂದಾಗಿಲ್ಲ!
ಇನ್ನು ಅಮ್ಜದ್ ಅಲಿ ರಾಣಾಗೆ ಗಡಿ ದಾಟಲು ಸಹಾಯ ಮಾಡಿದ ಮಾಜಿದ್ ಕಾದ್ರಿ, ಅಹಮದ್ ಖಾನ್,ಅಜೀಜ್ ಶಾಹ್ ಎಂಬ ಕಾಶ್ಮೀರಿ ಮುಸಲ್ಮಾನರತ್ತಲೂ ಸಿಬಿಐ ಇದುವರೆಗೂ ತಿರುಗಿ ನೋಡಿಲ್ಲ. ಇನ್ನು ಹೆಡ್ಲಿಯ ತಪ್ಪೊಪ್ಪಿಗೆಯ ವಿಚಾರಕ್ಕೆ ಬಂದರೆ, ಈ ವಿಷಯವನ್ನಂತೂ ನಮ್ಮಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎನ್ನುವುದು ಸ್ಪಷ್ಟ.
ಕಳೆದ ಕೆಲವು ವರ್ಷಗಳಿಂದ ಈ ಪ್ರಕರಣದ ಬಗ್ಗೆ ನಮ್ಮಲ್ಲಿ ಹಲವಾರು ಸುದ್ದಿಗಳು ರಾರಾಜಿಸಿವೆ. ಆದರೆ ಸತ್ಯಕ್ಕೆ ಹತ್ತಿರವಾದಂಥವೂ ಮಾತ್ರ ಒಂದೂ ಇಲ್ಲ.
2009ರಲ್ಲಿ ಕೆ.ಎಸ್. ತಮಾಂಗ್ ಎನ್ನುವ ನ್ಯಾಯಾಧೀಶರು, ಪೊಲೀಸರು ನಕಲಿ ಎನ್ಕೌಂಟರ್ ನಡೆಸಿದರು ಎಂದು ವರದಿಯೊಂದನ್ನು ಸಿದ್ಧಪಡಿಸಿದ್ದರು. ಆದರೆ ಅದರಲ್ಲಿನ ಅಂಶಗಳೆಲ್ಲ ತೀರಾ ಹಾಸ್ಯಾಸ್ಪದವಾಗಿವೆ. ಅವರು ಹೇಳುತ್ತಾರೆ-'ಯಾವ ಹೆಣ್ಣುಮಕ್ಕಳೂ ಕೂಡ ಪ್ರಯಾಣದ ವೇಳೆ ತಮ್ಮ ಐಡೆಂಟಿಟಿ ಕಾರ್ಡನ್ನು (ಇಶ್ರತ್‌ಳಂತೆ) ಧರಿಸುವುದಿಲ್ಲ', 'ಒಬ್ಬ ಮಹಿಳೆ ಮುಂಬೈನಿಂದ ಅಹಮದಾಬಾದ್‌ಗೆ ಪ್ರಯಾಣ ಮಾಡುತ್ತಾಳೆಂದರೆ ಆಕೆ ತನ್ನ ಪರ್ಸನ್ನು ಮತ್ತು ಕರ್ಚೀಫನ್ನು ಕೈಯಲ್ಲಿ ಹಿಡಿದುಕೊಂಡಿರಲೇಬೇಕು'. ಹೀಗಿದೆ ಅವರ ವಾದ!
-----
ಸಿಬಿಐ ಅಂತೂ ಭಯೋತ್ಪಾದನೆಯ ವಿರುದ್ಧದ ತನ್ನ ಹೊರಾಟವನ್ನು ವೃದ್ಧಿಸಿಕೊಳ್ಳಬಹುದು ಎನ್ನುವ ಯಾವ ಕುರುಹನ್ನೂ ತೋರಿಸುತ್ತಿಲ್ಲ. ಒಟ್ಟಿನಲ್ಲಿ ಇಶ್ರತ್ ಜಹಾನ್‌ಳ ಬದುಕು ಮತ್ತು ಸಾವು ಪ್ರಮುಖ ಪ್ರಶ್ನೆಯೊಂದನ್ನೆತ್ತಿದೆ. ಅದು ನಮ್ಮ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೊರಾಟವನ್ನು ಅಣುಕಿಸುತ್ತಿದೆ.

- ಪ್ರವೀಣ್ ಸ್ವಾಮಿ
ರಾಜಕೀಯ ವಿಶ್ಲೇಷಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.