ಕಳಪೆ ಆಡಳಿತ, ಭ್ರಷ್ಟಾಚಾರ, ಒಳಜಗಳ ಮತ್ತು ಅಸ್ಥಿರ ಸರ್ಕಾರದ ಗೂಡಾಗಿದ್ದ ಬಿಜೆಪಿಯನ್ನು ಮೇ 2013ರ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೆಸೆಯಬೇಕು ಎನ್ನುವ ಸ್ಪಷ್ಟ ಗುರಿ ಕರ್ನಾಟಕದ ಮತದಾರರಿಗಿತ್ತು. ಕಾಂಗ್ರೆಸ್ ಅಥವಾ ಜೆಡಿಎಸ್ ಕೂಡ ಬಿಜೆಪಿಯ ಜಾಗದಲ್ಲಿದ್ದರೆ ಆ ಪಕ್ಷಗಳೂ ಕೂಡ ಅಂಥದ್ದೇ ಹೊಡೆತ ತಿನ್ನುತ್ತಿದ್ದವು. ಆಡಳಿತ ನಡೆಸುವವರು ತಮ್ಮ ಆಕಾಂಕ್ಷೆಗಳ ಬಗ್ಗೆ ತೋರಿಸುತ್ತಿರುವ ಅಸಡ್ಡೆಯಿಂದ ಮತದಾರರಿಗೆ ರೇಜಿಗೆ ಹುಟ್ಟಿತ್ತು. ದಕ್ಷಿಣ ಭಾರತದಲ್ಲಿ ಕೇಸರಿ ಪಕ್ಷಕ್ಕೆ ಮೊದಲ ದೊಡ್ಡ ಹೊಡೆತವದು. ಮತದಾರರು ಅಷ್ಟಕ್ಕೇ ಸುಮ್ಮನಾಗಲಿಲ್ಲ, ಅವರು ಕಾಂಗ್ರೆಸ್ ಅನ್ನು ಅಧಿಕಾರದಲ್ಲಿ ತಂದು ಕೂರಿಸಿದರು(ಕೇಂದ್ರ ಕಾಂಗ್ರೆಸ್‌ನ ಹಗರಣಗಳ ನೆರಳನ್ನು ಲೆಕ್ಕಿಸದೆ). ಇನ್ನು ಜೆಡಿಎಸ್ ಮೇಲಿನ ಅವರ ಅಪನಂಬಿಕೆಯಂತೂ ಮುಂದುವರಿಯಿತು.
2014ರ ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದ ಮತದಾರರು ವಿಭಿನ್ನವಾಗಿ ಯೋಚಿಸಲಿದ್ದಾರೆಯೇ? ಅವರ ನಿರ್ಣಯವೇನಿದ್ದರೂ ರಾಷ್ಟ್ರೀಯ ಸಮಸ್ಯೆಗಳ ಮೇಲೆಯೇ ಅಭಿವ್ಯಕ್ತಿಗೊಳ್ಳಲಿವೆಯೇ? ಲೋಕಸಭಾ ಚುನಾವಣೆ ವಿಧಾನಸಭಾ ಚುನಾವಣೆಗಳಲ್ಲಿನ ತೀರ್ಪಿನ ಮುಂದುವರಿದ ಭಾಗವಾಗಲಿದೆಯೇ? ಈ ಪ್ರಶ್ನೆಗಳೀಗ ಎಲ್ಲೆಡೆಯೂ ಹರಿದಾಡತೊಡಗಿವೆ. ಅಧಿಕ ಸ್ಥಾನಗಳನ್ನು ಪಡೆದು ತಾನು ಅಧಿಕಾರಕ್ಕೆ ನೆಗೆಯುತ್ತೇನೆಂಬುದು ಬಿಜೆಪಿಯ ಲೆಕ್ಕಾಚಾರ. ಜನತೆ ಮತ್ತೆ ತನಗೇ ಮಣೆ ಹಾಕುತ್ತಾರೆ ಎನ್ನುವುದು ಕಾಂಗ್ರೆಸ್‌ನ ನಂಬಿಕೆ. ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಅಲೆ ಎದ್ದಿರುವುದರಿಂದ ತನಗೇ ಲಾಭವಾಗುತ್ತದೆಂಬುದು ಜೆಡಿಎಸ್ ಅಂಬೋಣ. ಆದರೆ ಮತದಾರರ ಮನಸ್ಸನ್ನು ಮಾತ್ರ ಯಾರೂ ಅರಿಯರು. ಮತದಾರರು ತಮ್ಮ ಕಾರ್ಡ್‌ಗಳನ್ನು ಎದೆಗವಚಿಕೊಂಡು ನಿಂತಿದ್ದಾರೆ. ಹಾಗಾಗೆ ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಕರ್ನಾಟಕದ ಮತದಾರರ ಮೇಲೆ ಹೆಚ್ಚು ಪ್ರಭಾವ ಬೀರಲಿರುವ ಅಂಶಗಳ್ಯಾವುವು ಎನ್ನುವುದನ್ನು ನೋಡುತ್ತಾ ಹೋದಾಗ...
ನರೇಂದ್ರ ಮೋದಿ Vs ರಾಹುಲ್ ಗಾಂಧಿ: ಇದುವರೆಗೂ ಬಿಜೆಪಿ ಮತ್ತು ಕಾಂಗ್ರೆಸ್ ಇವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲವಾದರೂ, ಆಗಸ್ಟ್ ತಿಂಗಳ ಯುದ್ಧ ಇವರಿಬ್ಬರ ನಡುವೆಯೇ ನಡೆಯಲಿದೆ ಎಂಬ ಸ್ಪಷ್ಟ ಸಂಕೇತಗಳು ಹೊರಹೊಮ್ಮತೊಡಗಿವೆ. ಒಂದು ವೇಳೆ ಇಬ್ಬರಲ್ಲಿ ಯಾರಾದರೊಬ್ಬರು ಹಿಂದೆ ಸರಿದರೆ ಆ ವಿಷಯ ಬೇರೆ. ಸ್ವತಂತ್ರ ಭಾರತದಲ್ಲಿ ಇದುವರೆಗೂ ಮತದಾರರು ಪಕ್ಷವನ್ನು ಬಿಟ್ಟು ಅಭ್ಯರ್ಥಿಗಳನ್ನು ನೋಡಿದವರಲ್ಲ. ಈಗ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಜವಾಬ್ದಾರಿ ಅವರ ಮೇಲಿದೆ. ಮೋದಿಗೆ ಮಣೆ ಹಾಕಿದರೆ ಕೇಂದ್ರದಲ್ಲಿ ಕಮಲ ಅರಳುತ್ತದೆ, ರಾಹುಲ್‌ಗೆ ಜೈ ಅಂದರೆ ಕಾಂಗ್ರೆಸ್ ಮೂರನೇ ಅವಧಿಗೂ ಕುರ್ಚಿಯಲ್ಲಿ ಕೂಡುತ್ತದೆ.
ಅಧಿಕಾರ ವಿರೋಧಿ ಅಲೆಯ ಲಕ್ಷಣಗಳು: ಕಾಂಗ್ರೆಸ್ ನೇತೃತ್ವದ ಯುಪಿಎ, ಹಗರಣಗಳಿಂದ ರೋಗಗ್ರಸ್ಥವಾಗಿದೆ. ಭ್ರಷ್ಟಾಚಾರ ಮತ್ತು ಹಣದ ದುರ್ಬಳಕೆಯ ಆರೋಪಗಳು ಅದರ ಬಹಳಷ್ಟು ಸಚಿವರ ಹೆಗಲೇರಿ ಕುಳಿತಿವೆ. ಬಿಜೆಪಿ ಕರ್ನಾಟಕದಲ್ಲಿ ಎದುರಿಸಿದಂಥ ಪರಿಸ್ಥಿತಿಯೇ ಈಗ ಕೇಂದ್ರ ಕಾಂಗ್ರೆಸ್‌ಗೆ ಎದುರಾಗಿದೆ.
ಕಾಂಗ್ರೆಸ್ ವಿರೋಧಿ ಮತ್ತು ಬಿಜೆಪಿ ವಿರೋಧಿ ರಂಗ: ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಒಂದೇ ನಾಣ್ಯದ ಎರಡುಮುಖಗಳಿದ್ದಂತೆ, ಹಾಗಾಗೇ ತೃತೀಯ ರಂಗದ ಅವಶ್ಯಕತೆಯಿದೆ ಎನ್ನುವ ಭಾವನೆಯಿದೆ. ಇದರಿಂದಾಗಿಯೇ ಮಿತ್ರಪಕ್ಷಗಳೆಲ್ಲ ತೃತೀಯ ರಂಗದ ಕನಸು ಕಾಣತೊಡಗಿವೆ. ಆದರೆ ಇಂಥ ಪ್ರಯತ್ನಗಳು ಹಿಂದೆಲ್ಲ ವಿಫಲವಾಗಿವೆ. ಅಧಿಕಾರ ಹಂಚಿಕೆಯಲ್ಲುಂಟಾದ ಜಗಳ, ಪ್ರಧಾನಿ ಅಭ್ಯರ್ಥಿ ಆಯ್ಕೆ, ಲಾಭದಾಯಕ ಮಂತ್ರಿಗಿರಿಗಾಗಿ ಹೊಡೆದಾಟಗಳಿಂದ ಅವಸಾನ ಹಾದಿ ಹಿಡಿದದ್ದೇ ಹೆಚ್ಚು. ಈ ಬಾರಿ ಆ ಪ್ರಯತ್ನ ಸಫಲವಾಗುವುದೇ? ಜೆಡಿಎಸ್ ಅಂತಹ ಪರ್ಯಾಯದ ಭಾಗವಾಗಲಿದೆಯೇ? ಅಥವಾ ಕೆಜೆಪಿ ಈ ಕೆಲಸಕ್ಕೆ ಮುಂದಾಗಬಹುದೆ? ಕೆಲವು ಅರ್ಹ ಪ್ರಧಾನಿ ಹುದ್ದೆ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ನಿತೀಶ್ ಕುಮಾರ್ ಕೂಡ ಒಬ್ಬರು. ಏನಾಗಲಿದೆಯೆಂದು ಮತದಾರರು ಕಾದು ನೋಡಲಿದ್ದಾರೆ.
ಅಭ್ಯರ್ಥಿಗಳ ಮೇಲೆ ಗಮನ: ಅಸೆಂಬ್ಲಿ ಚುನಾವಣೆಗಳಲ್ಲಿ ಬೆಂಗಳೂರು, ರಾಜ್ಯದ ಉಳಿದಭಾಗಗಳಿಗಿಂತ ತುಸು ಭಿನ್ನವಾಗಿ ಮತದಾನ ಮಾಡಿತ್ತು. ಪಕ್ಷದ ಮುಖವನ್ನು ನೋಡದೆ, ಅಭ್ಯರ್ಥಿಗಳಿಗೇ ಅದು ಒತ್ತುಕೊಟ್ಟಿತು. ಸಂಸದೀಯ ಚುನಾವಣೆಗಳಲ್ಲಿ ಇಂಥದ್ದೇ ನಡೆಯನ್ನು ಅನುಸರಿಸಬೇಕೋ, ಬೇಡವೋ ಎನ್ನುವುದನ್ನು ರಾಜ್ಯದ ಉಳಿದ ಭಾಗದ ಜನರು ನಿರ್ಧರಿಸಬೇಕು. ಹಾಗೆ ಮಾಡಿದರೆ ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರದತ್ತ ಹೆಚ್ಚು ಗಮನಹರಿಸುತ್ತಾರೆ ಎನ್ನುವುದು ಕೆಲವು ಬೆಂಗಳೂರಿಗರ ಅಭಿಪ್ರಾಯ.
***
ಮುಂದಿನ ವರ್ಷದ ಸಂಸತ್ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ಅಗ್ನಿ ಪರೀಕ್ಷೆ ಆಗಲಿದೆ. ಬಿಜೆಪಿ ವಿರೋಧಿ ಮತಗಳಿಂದಾಗಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಿತು ಎನ್ನುವುದು ಅವರಿಗೆ ಗೊತ್ತಿದೆ. ಪಕ್ಷವನ್ನು ಅವರು ಮುಂಚೂಣಿಯಲ್ಲಿ ನಿಂತು ನಡೆಸಿ, ಸಾಧ್ಯವಾದಷ್ಟೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಷ್ಟ್ರೀಯ ಜೋಳಿಗೆಗೆ ತಮ್ಮ ದಾನ ನೀಡಬೇಕಿದೆ. ಹಾಗೆ ಆದರೆ ಹೈಕಮಾಂಡ್ ದೃಷ್ಟಿಯಲ್ಲಿ ಅವರ ವರ್ಚಸ್ಸೂ ಬೆಳೆಯುತ್ತದೆ. ಅದಾಗಲೇ ಪಕ್ಷದಲ್ಲಿ ಅನೇಕರು ಸಿದ್ದರಾಮಯ್ಯ ಅವರ ವಿರುದ್ಧ ಕತ್ತಿಮಸೆಯುತ್ತಿದ್ದಾರೆ. ಅವರೆಲ್ಲ ದಾಳಿ ನಡೆಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರಷ್ಟೆ. ಹಾಗಾಗೆ ಮುಂದಿನ ಚುನಾವಣೆಗಳಲ್ಲಿ ಕರ್ನಾಟಕ ಕಾಂಗ್ರೆಸ್‌ನ ಗೆಲುವು ಸಿದ್ದರಾಮಯ್ಯ ಅವರಿಗೆ ಅವಶ್ಯಕವಾಗಿದೆ.
ಇನ್ನು ರಾಜ್ಯ ಬಿಜೆಪಿ ಈಗ ಗೊಂದಲದ ಗೂಡು. ವರ್ಚಸ್ವೀ ನಾಯಕನ ಅಭಾವ ಅದನ್ನೀಗ ಕಾಡುತ್ತಿದೆ. ಅದು ಎಷ್ಟು ಸಂಕಷ್ಟಕ್ಕೆ ಸಿಲುಕಿದೆಯೆಂದರೆ ಪಕ್ಷದ ನಾಯಕತ್ವ, ಹಲವಾರು ಕೇಸುಗಳನ್ನು ಎದುರಿಸುತ್ತಿರುವ ಯಡಿಯೂರಪ್ಪನವರನ್ನು ಮರಳಿ ತರಲು ಶತಪ್ರಯತ್ನ ನಡೆಸಿದೆ. ಕರ್ನಾಟಕ ಬಿಜೆಪಿಯ ಬೆಳವಣಿಗೆಗೆ ಅವರ ಕೊಡುಗೆ ಅಪಾರವಿದೆ ಎನ್ನುವ ಸತ್ಯವನ್ನು ಯಾರೂ ತಳ್ಳಿಹಾಕಲಾರರು ಎನ್ನುವುದೂ ಸತ್ಯವೇ. ರಾಜ್ಯದ ಇನ್ನುಳಿದ ಬಿಜೆಪಿ ನಾಯಕರ್ಯಾರೂ ಅವರಿಗೆ ಸಮಾನರಾಗಿ ನಿಲ್ಲರಾರರು. ಆದರೆ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿ ಅವರೇ ತಮ್ಮ ಕಾಲಿಗೆ ಗುಂಡು ಹಾರಿಸಿಕೊಂಡದ್ದು. ಅವರು ವಾಪಸ್ ಬಂದರೆ ಬಿಜೆಪಿ ಜಿಗಿದು ನಿಲ್ಲಬಹುದೇ? ಈ ಪ್ರಶ್ನೆಗೆ ಉತ್ತರಿಸಲೂ ಯಾರೂ ತಯಾರಾಗಿಲ್ಲ.
ಒಟ್ಟಿನಲ್ಲಿ ಚೆಂಡು ಜನರ ಅಂಗಳಕ್ಕೆ ಬಂದು ಬಿದ್ದಿದೆ. ತಮ್ಮ ಬಲ ಪ್ರದರ್ಶಿಸಲು ಅವರಿಗೆ ಇನ್ನೊಂದು ಅವಕಾಶ ಎದುರಾಗಿದೆ. ಇದು ಕೇವಲ 10 ತಿಂಗಳ ಮಾತಷ್ಟೆ ಅಥವಾ ಅವಧಿಗೆ ಮುನ್ನವೇ ಚುನಾವಣೆಗಳು ಎದುರಾದರೂ ಆಗಬಹುದು.
ಕೊನೆಯ ಗುಟುಕು: ನಮ್ಮ ವಾಯುಸೇನೆ ಮತ್ತು ಭೂ ಸೇನೆ ಉತ್ತರಾಖಂಡ್‌ನಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಜೀವದ ಹಂಗು ತೊರೆದು ಪ್ರಯತ್ನಿಸುತ್ತಿರುವ ಸಮಯದಲ್ಲಿ, ನಮ್ಮ ರಾಜಕಾರಣಿಗಳೇನು ಮಾಡುತ್ತಿದ್ದಾರೋ ಊಹಿಸಿಕೊಳ್ಳಿ? ರಾಜಕೀಯ ನಡೆಸಿದ್ದಾರೆ! ಡೆಹ್ರಾಡೂನ್ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮತ್ತು ಟಿಡಿಪಿಯ ಶಾಸಕರು, 'ಯಾರ ವಿಮಾನ, ಉತ್ತರಾಖಂಡ್‌ನಲ್ಲಿ ಸಿಕ್ಕಿಬಿದ್ದ ಆಂಧ್ರದ ಯಾತ್ರಾರ್ಥಿಗಳನ್ನು ರಕ್ಷಿಸಬೇಕು' ಎನ್ನುವ ವಿಷಯದಲ್ಲಿ ಜಗಳಕ್ಕೆ ನಿಂತರು. ಈ ಹೊಲಸು ಜಗಳವನ್ನು ಹಲವಾರು ಜನ ನಿಂತು ನೋಡಿದರು, ಮಾಧ್ಯಮಗಳು ಬಂದು ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಹೋದವು. ಆಗಲೇ ದಣಿದುಹೋಗಿದ್ದ ಯಾತ್ರಾರ್ಥಿಗಳು ಈ ನಾಯಕರುಗಳ ಸ್ವಾರ್ಥದಿಂದಾಗಿ ಇನ್ನಷ್ಟು ಹೈರಾಣಾದರು. ಕೊನೆಗೂ ಎರಡೂ ಪಕ್ಷಗಳ ಶಾಸಕರು ಒಪ್ಪಂದವೊಂದಕ್ಕೆ ಬಂದರು. ಕಾಂಗ್ರೆಸ್‌ನ ವಿಮಾನ 168 ಯಾತ್ರಾರ್ಥಿಗಳನ್ನು ಕೂರಿಸಿಕೊಂಡು ಬಂದರೆ, ಟಿಡಿಪಿಯ ವಿಮಾನ 75 ಜನರನ್ನು ಕರೆತಂದಿತು!
- ಎಚ್.ಎಸ್. ಬಲರಾಮ್
hsbalram@gmail.com