ಗಲ್ಲಾಪೆಟ್ಟಿಗೆಗಿಂತ ಗಲ್ಲ ಸವರುವ ಅಮ್ಮನೇ ಮುಖ್ಯ...

ಅವನ ಹೆಸರು ಪ್ರಕಾಶ್. ವೃತ್ತಿಯಿಂದ ಬಿಲ್ಡಿಂಗ್ ಕಂಟ್ರಾಕ್ಟರ್. ಮನುಷ್ಯ ಹೃದಯವಂತ...
ಗಲ್ಲಾಪೆಟ್ಟಿಗೆಗಿಂತ ಗಲ್ಲ ಸವರುವ ಅಮ್ಮನೇ ಮುಖ್ಯ...
Updated on: 

ಅವನ ಹೆಸರು ಪ್ರಕಾಶ್. ವೃತ್ತಿಯಿಂದ ಬಿಲ್ಡಿಂಗ್ ಕಂಟ್ರಾಕ್ಟರ್. ಮನುಷ್ಯ ಹೃದಯವಂತ. ಜಾಲಿಫೆಲೋ. ಅವನದು 'ಅತೀ' ಎಂಬಂಥ ತುಂಟ ಮನಸ್ಸು. ಐದೇ ನಿಮಿಷದ ಅವಧಿಯಲ್ಲಿ ಎಂಥವರನ್ನೂ ಮೋಡಿ ಮಾಡುವಂಥ ಮಾತುಗಾರಿಕೆ ಅವನಿಗೆ ಒಲಿದಿತ್ತು. ಈ ಕಾರಣದಿಂದಲೇ ಆತನಿಗೆ ಗೆಳೆಯರು ಜಾಸ್ತಿ. ಕಿರಿಯರ ಪಾಲಿಗೆ ಆತ ಪ್ರಕಾಶಣ್ಣ. ಗೆಳೆಯರ ಪಾಲಿಗೆ ಪ್ರಕಾಶು. ಹುಡುಗಿಯರ ಪಾಲಿಗೆ ಪ್ರಕಾಶ್ ಮಾಮ! ಮದುವೆಯ ವಾರ್ಷಿಕೋತ್ಸವದ ನೆಪದಲ್ಲಿ, ಬರ್ತ್‌ಡೇ ಹೆಸರಲ್ಲಿ ಆತ ಕಲರ್ ಕಲರ್ ಬಟ್ಟೆ ಧರಿಸಿ ಬಂದರೆ ಗೆಳೆಯರೆಲ್ಲಾ-'ಏನ್ರೀ ಪ್ರಕಾಶ್ ರೈ, ಶೂಟಿಂಗ್‌ಗೆ ಹೋಗ್ತಿದೀರೇನ್ರೀ ಎಂದು ಕಿಚಾಯಿಸುತ್ತಿದ್ದರು. ಆಗೆಲ್ಲ ಆತ ತುಂಬಾ ಗಂಭೀರವಾಗಿ-ಹೌದು ಸರ್, ಇವತ್ತು ಮೂರು ಶಿಫ್ಟಲ್ಲಿ ಕೆಲಸ ಮಾಡ್ತಾ ಇದೀನಿ. ಬೆಳಿಗ್ಗೆ ರಜನಿಕಾಂತ್ ಫಿಲಂಲಿ ಕೋ ಡ್ಯಾನ್ಸರ್. ಈ ಶೂಟಿಂಗ್ ಎಂ.ಎಸ್. ರಾಮಯ್ಯ ಕಾಲೇಜಲ್ಲಿ ನಡೆಯುತ್ತೆ. ಮಧ್ಯಾಹ್ನ ಪುನೀತ್ ಹೀರೋ ಆಗಿರೋ ಫಿಲಂಲಿ ಫೈಟಿಂಗ್ ಸೀನ್. ಅದರ ಚಿತ್ರೀಕರಣ ಎಂ.ಜಿ. ರೋಡ್‌ಲಿ. ಸಂಜೆ ಯು.ಬಿ. ಸಿಟೀಲಿ ಕತ್ರೀನಾ ಕೈಫ್ ಜೊತೆ ಫ್ಯಾಷನ್ ಶೋ. ಈ ಶೋಗೆ ಸಲ್ಮಾನ್‌ಖಾನ್‌ನ ರಿಜೆಕ್ಟ್ ಮಾಡಿ ನನ್ನನ್ನು ತಗೊಂಡಿದಾರೆ ಗೊತ್ತಾ ಎಂದು ಹೇಳಿ ತುಟಿಯಂಚಿನಲ್ಲೇ ನಗುತ್ತಿದ್ದ.

ಪ್ರಕಾಶ್‌ಗೆ ಒಬ್ಬ ಜೀವದ ಗೆಳೆಯನಿದ್ದ. ಆತನ ಹೆಸರು ಸತ್ಯ. ಬೆಂಗಳೂರಲ್ಲಿ ಭೂಮಿಯ ಬೆಲೆ ಹೆಚ್ಚುತ್ತಾ ಹೋಗಿ, ನಗರದ ಎಲ್ಲಾ ಕಡೆಯೂ ಅಪಾರ್ಟ್‌ಮೆಂಟ್‌ಗಳು ಎದ್ದು ನಿಲ್ಲುವುದನ್ನು ಕಂಡಾಗ, ಬಿಜಿನೆಸ್ ಮಾಡುತ್ತಿದ್ದ ಸತ್ಯನಿಗೆ ಒಂದು ಐಡಿಯಾ ಬಂತು. ಆತ ತಕ್ಷಣವೇ ನಗರದ ಹೊರವಲಯದಲ್ಲಿ ಭೂಮಿ ಖರೀದಿಸಿದ್ದ. ನಂತರ ಗೆಳೆಯನಿಗೆ ಫೋನ್ ಮಾಡಿ ಹೇಳಿದ್ದ: 'ಪ್ರಕಾಶು, ಒಂದು ಮೆಗಾ ಪ್ರಾಜೆಕ್ಟ್ ಶುರು ಮಾಡೋಣ. ನಾನೀಗ ಜಮೀನು ತಗೊಂಡಿದೀನಿ. ಅಲ್ಲಿ ಅಪಾರ್ಟ್‌ಮೆಂಟ್ ಕಟ್ಟಿಸೋಣ. ಹೇಗಿದ್ರೂ ನಿಂಗೆ ಫ್ರೆಂಡ್ಸ್ ಜಾಸ್ತಿ ಇದಾರೆ. ಎಲ್ರಿಗೂ ಒಮ್ಮೆ ವಿಷಯ ತಿಳಿಸು. ಫೇಸ್‌ಬುಕ್‌ಗೂ ಡೀಟೈಲಾಗಿ ಈ ಸುದ್ದಿ ಹಾಕು. ಪೇಪರ್‌ಗಳಿಗೂ ಜಾಹೀರಾತು ಕೊಡೋಣ. ಫೇಮಸ್ ಕಂಪನಿಗಳು ಕೊಡ್ತಾವಲ್ಲ, ಅದಕ್ಕಿಂತ 4 ಲಕ್ಷ ರೂ. ಕಡಿಮೆಗೇ ನಾವು ಫ್ಲಾಟ್ ಕೊಡೋಣ. ಈ ಕೆಲಸದಲ್ಲಿ ಕ್ಲಿಕ್ ಆಗಿ ಬಿಟ್ರೆ ಜೀವನಪೂರ್ತಿ ಹಾಯಾಗಿರಬಹುದು. ಪಾರ್ಟ್‌ನರ್ಸ್ ಅಂತಿರೋದು ನಾವಿಬ್ರೇ. ಒಂದಿಷ್ಟು ಬ್ಯಾಂಕ್ ಲೋನ್ ತಗೋಬೇಕು. ಹಾಗಾಗಿ, ಇವತ್ತಿಂದ 1 ತಿಂಗಳ ಕಾಲ ನೀನು ಜೊತೇಲಿ ಇರಬೇಕು. ಪೇಪರ್ಸ್ ಚೆಕ್ ಮಾಡೋದು, ಮೀಟಿಂಗು, ವರ್ಕರ್ಸ್ ಹುಡುಕೋದು... ಇಂಥವೇ ಕೆಲಸಗಳಿರ್ತವೆ. ಎಲ್ಲವನ್ನೂ ಡೀಟೈಲಾಗಿ ಮಾತಾಡೋಣ. ಇವತ್ತೇ ಆಫೀಸಿಗೆ ಬಂದು ಹೋಗು...'
ಪ್ರಕಾಶ್‌ಗೆ ತನ್ನ ಜೀವದಷ್ಟೇ ಮುಖ್ಯವಾದ ಮತ್ತೊಬ್ಬರಿದ್ದರು. ಅವರ ಹೆಸರು ಸೀತಮ್ಮ. ಆಕೆ ಪ್ರಕಾಶನ ತಾಯಿ. ಅಮ್ಮನನ್ನು ಸದಾ ತನ್ನೊಂದಿಗೇ ಇಟ್ಟುಕೊಳ್ಳಬೇಕೆಂಬುದು ಆತನ ಹಂಬಲವಾಗಿತ್ತು. ಆದರೆ ಈ ಬೆಂಗಳೂರಿನ ಗಜಿಬಿಜಿ ಸೀತಮ್ಮನವರಿಗೆ ಇಷ್ಟವಾಗುತ್ತಿರಲಿಲ್ಲ. 'ಪ್ರಕಾಶೂ, ಈ ಬೆಂಗ್ಳೂರ ಹವಾ ನನಗೆ ಒಗ್ಗೋದಿಲ್ಲ. ನಾನು ಬೆಂಗ್ಳೂರಿಗಿಂತ ನಮ್ಮೂರು ಶಿರಸೀಲಿ ಆರಾಮಾಗಿ ಇರ್ತೀನಿ. ನೀನು ಸಂಸಾರದೊಂದಿಗೆ ತಿಂಗಳಿಗೊಮ್ಮೆ ಬಂದು ಹೋದ್ರೆ ನನಗೆ ಅಷ್ಟೇ ಸಾಕು' ಎಂದಿದ್ದರು. ಅಮ್ಮನ ಮಾತುಗಳಿಗೆ ಪ್ರಕಾಶನೂ ಒಪ್ಪಿಕೊಂಡಿದ್ದ. ಆದರೆ ಕೆಲಸದ ಒತ್ತಡ, ಹತ್ತನೆ ತರಗತಿಯಲ್ಲಿದ್ದ ಮಗನಿಗೆ ಪ್ರತಿ ತಿಂಗಳೂ ನಡೆಯುತ್ತಿದ್ದ ಟೆಸ್ಟ್‌ಗಳ ಕಾರಣದಿಂದ ತಿಂಗಳಿಗೊಮ್ಮೆ ಊರಿಗೆ ಹೋಗಿ ಬರಲು ಸಾಧ್ಯವಾಗುತ್ತಲೇ ಇರಲಿಲ್ಲ.
ಅವತ್ತು ಸೋಮವಾರ. ಏನಾದರಾಗಲಿ, ಈ ಗುರುವಾರ ಊರಲ್ಲಿರಬೇಕು. ಕಾರಣ, ಅವತ್ತು ಅಮ್ಮನ ಹುಟ್ಟುಹಬ್ಬ. ದಶಕಗಳ ಹಿಂದೆಯೇ ಅಪ್ಪ ತೀರಿಹೋದ ನಂತರ ಸಂಕಟವನ್ನು ಒಡಲಲ್ಲಿಟ್ಟುಕೊಂಡೇ ಬದುಕುತ್ತಿರುವಾಕೆ ಅಮ್ಮ. ಬರ್ತ್‌ಡೇ ನೆಪದಲ್ಲಿ ಅಮ್ಮನಿಗೆ ಗೌರವ ಸೂಚಿಸಬೇಕು. ಹೊಸ ಸೀರೆ ಕೊಡಿಸಿ ಖುಷಿಪಡಿಸಬೇಕು. ಎರಡು ದಿನ ಊರಲ್ಲಿಯೇ ಇದ್ದು ಅಮ್ಮನ ಖುಷಿ ಹೆಚ್ಚಿಸಬೇಕು... ಪ್ರಕಾಶ್ ಹೀಗೆಲ್ಲ ಯೋಚಿಸುತ್ತಿದ್ದಾಗಲೇ ಮೊಬೈಲ್ ರಿಂಗಣಿಸಿತು. ಆ ತುದಿಯಲ್ಲಿ ಗೆಳೆಯ ಸತ್ಯ ಇದ್ದ. ಅವನಿಗಿಂತ ಮೊದಲೇ ಮಾತಾಡಿದ ಪ್ರಕಾಶ್, ಅಮ್ಮನ ಬರ್ತ್‌ಡೇ ನಿಮಿತ್ತ ಈ ವಾರ ಊರಿಗೆ ಹೋಗುತ್ತಿರುವ ವಿಷಯ ತಿಳಿಸಿ - 'ಬೇಜಾರಾಗಬೇಡ. ಪ್ಲೀಸ್ ಹೇಗಾದ್ರೂ ಮ್ಯಾನೇಜ್ ಮಾಡು' ಎಂದ. ಅರೆ ನಿಮಿಷ ಸುಮ್ಮನಿದ್ದ ಸತ್ಯ, ನಂತರ ಹೇಳಿದ: 'ಪ್ರಕಾಶು, ನಿಂಗೆ ಹೇಗೆ ಹೇಳಬೇಕೋ ಗೊತ್ತಾಗ್ತಿಲ್ಲ. ಬ್ಯಾಂಕ್‌ನಲ್ಲಿ ಮ್ಯಾನೇಜರ್‌ಗಳ ಮೂಡ್ ನೋಡಿ ಮಾತು ಶುರು ಮಾಡಬೇಕು. ವರ್ಕರ್ಸ್‌ನ ಮೊದಲೇ ಬುಕ್ ಮಾಡ್ಕೋಬೇಕು. ಕೆಲ್ಸ ನಡೀತಿದೆ ಅಂತ ಗೊತ್ತಾದ್ರೆ ಮಾತ್ರ ಫ್ಲಾಟ್ ಖರೀದಿಗೆ ಜನ ಬರೋದು. ಇವತ್ತಿಂದ ಒಂದು ತಿಂಗಳು ನಿನ್ನ ಅಗತ್ಯ ತುಂಬಾ ಇದೆ. ಒಂದು ಕೆಲ್ಸ ಮಾಡು. ಅಮ್ಮನಿಗೆ ಬರ್ತ್‌ಡೇಗೆ ಗ್ರೀಟಿಂಗ್ಸ್ ಕಳಿಸು. ಮುಂದಿನ ತಿಂಗಳು ಮೊದಲ ವಾರ ಫ್ಯಾಮಿಲಿ ಸಮೇತ ಹೋಗಿ ಬಾ. ಯಾಕೆ ಹೇಳ್ತಿದೀನಿ ಅಂದ್ರೆ ಇದು 2 ಕೋಟಿಯ ಪ್ರಾಜೆಕ್ಟು.
ನಾನೊಬ್ಬನೇ ಹ್ಯಾಂಡಲ್ ಮಾಡೋದು ಕಷ್ಟ...'
ಹತ್ತು ನಿಮಿಷ ಯೋಚಿಸಿದ ನಂತರ ಗೆಳೆಯನ ಮಾತಲ್ಲೂ ಸತ್ಯವಿದೆ ಅನ್ನಿಸಿತು. ದುಡ್ಡು ಮಾಡುವ ಅವಕಾಶ ಎಲ್ಲರಿಗೂ ಎಲ್ಲಾ ಟೈಮಲ್ಲೂ ಬರಲ್ಲ. ಸಿಕ್ಕ ಅವಕಾಶವನ್ನು ಛಕ್ಕಂತ ಬಳಸ್ಕೋಬೇಕು. ಇಷ್ಟಕ್ಕೂ ಊರಿಗೆ ಹೋಗಿ ನಾನಾದ್ರೂ ಏನು ಮಾಡ್ತಿದ್ದೆ? ಅಮ್ಮನ ಜೊತೆ ಸ್ವಲ್ಪ ಹೊತ್ತು ಮಾತಾಡ್ತಿದ್ದೆ. ಕಷ್ಟ-ಸುಖ ವಿಚಾರಿಸ್ತಿದ್ದೆ. ಅಷ್ಟೆ. ಅದನ್ನೆಲ್ಲ ಫೋನ್ ಮೂಲಕವೇ ಮಾಡಬಹುದು. ಮೊದಲು ಬದುಕು. ಸೆಂಟಿಮೆಂಟ್ ಏನಿದ್ರೂ ಆಮೇಲೆ. ಅಮ್ಮನಿಗೆ ಒಂದು ಬೊಕೆ, ಸೀರೆಯನ್ನು ಪ್ರೊಫೇಷನಲ್ ಕೊರಿಯರ್‌ಲಿ ಇವತ್ತೇ ಕಳಿಸೋಣ. ಮಲ್ಲೇಶ್ವರಂನ ಫ್ಲವರ್ ಮಾರ್ಕೆಟ್‌ಗೆ ಈಗಲೇ ಹೊರಟರೆ ತಾಜಾ ತಾಜಾ ಬೊಕೆ ಸಿಗ್ತವೆ... ಪ್ರಕಾಶ ಹೀಗೆಲ್ಲ ಯೋಚಿಸಿದಾಗ ಬೆಳಗಿನ ಜಾವ 7 ಗಂಟೆ. ನಂತರದ ಹತ್ತು ನಿಮಿಷದಲ್ಲಿ ಹೆಂಡತಿಗೂ, ಗೆಳಯನಿಗೂ ತನ್ನ ಪ್ಲಾನ್ ವಿವರಿಸಿ ಅವಸರದಿಂದಲೇ ಕಾರು ಹತ್ತಿದ ಆತ, ಏಳೂ ಮುಕ್ಕಾಲರ ಹೊತ್ತಿಗೆ ಮಲ್ಲೇಶ್ವರದ ಫ್ಲವರ್ ಮಾರ್ಕೆಟ್‌ನಲ್ಲಿದ್ದ. ಟ್ರಾಫಿಕ್‌ನ ಗಿಜಿಗಿಜಿ ಶುರುವಾಗುವ ಮೊದಲೇ ಕೊರಿಯರ್ ಕಳಿಸಿ ಸತ್ಯನ ಆಫೀಸ್ ತಲುಪಬೇಕೆಂಬುದು ಅವನ ಉದ್ದೇಶವಾಗಿತ್ತು.

ಬೊಕೆ ಖರೀದಿಸಿ, ಕಾರು ಹತ್ತಬೇಕು ಎನ್ನುವಷ್ಟರಲ್ಲಿಯೇ 'ಅಂಕಲ್‌' ಎಂಬ ಧ್ವನಿ ಕೇಳಿಸಿತು. ಅತ್ತ ತಿರುಗಿದವನಿಗೆ ಕಾಣಿಸಿದ್ದು ಐದಾರು ವರ್ಷದ ಪುಟ್ಟಮಗು. ಸಲುಗೆಯಿಂದಲೇ ಈತ 'ಏನ್ ಪುಟ್ಟಾ?' ಎಂದಾಗ ಆ ಮಗು- 'ಅಂಕಲ್, ನಂಗೆ ಎರಡು ರೋಸ್ ಕೊಡಿಸ್ತೀಯ? ಇವತ್ತು ಮಮ್ಮೀದು ಬರ್ತ್‌ಡೇ. ಎಲ್ಲರಿಗಿಂತ ಮೊದಲೇ ನಾನು ವಿಶ್ ಮಾಡ್ಬೇಕು' ಎಂದಿತು. ಮಗುವಿನ ಉತ್ಸಾಹ, ಆ ಮುದ್ದು ಮಾತಿಗೆ ಪ್ರಕಾಶ ತಕ್ಷಣವೇ ಮರುಳಾದ. ಆಕೆಗೂ ಒಂದು ಬೊಕೆ ಕೊಡಿಸಿದ. ಏಳೆಂಟು ಹೂಗಳಿದ್ದ ಬೊಕೆ ಕಂಡು ಆ ಮಗುವಿನ ಕಂಗಳು ಇಷ್ಟಗಲ ಅರಳಿದವು. ಅದು ಹೂಗಳನ್ನು ಎದೆಗೆ ಅವಚಿಕೊಳ್ಳುತ್ತಾ- ಥ್ಯಾಂಕ್ಸ್ ಅಂಕಲ್ ಎಂದಿತು. 'ನಿಮ್ಮ ಮನೆ ಎಲ್ಲಮ್ಮಾ, ನಿನ್ನ ಹೆಸರೇನು?' ಎಂದ ಪ್ರಕಾಶ. 'ನನ್ನೆಸ್ರು ಭೂಮಿಕಾ ಅಂತ. ಮನೆ ಇಲ್ಲೇ ಹತ್ರ ಅಂಕಲ್. ನಿನ್ ಜೊತೆ ಬರ್ಲಾ, ಬಿಟ್ಕೊಡ್ತೀಯಾ?' ಎಂದು ಕೇಳಿತು ಮಗು.
ಕೊರಿಯರ್ ಕಳಿಸುವುದು ಬಿಟ್ಟರೆ ಪ್ರಕಾಶನಿಗೆ ಅಂಥ ಅರ್ಜೆಂಟಿನ ಕೆಲಸವೇನೂ ಇರಲಿಲ್ಲ. ಅದಕ್ಕಿಂತ ಮಿಗಿಲಾಗಿ ಈ ಮಗುವಿನ ಮುಗ್ಧತೆ ಹಾಗೂ ಮುದ್ದು ಮಾತುಗಳು ಅವನನ್ನು ಮರುಳು ಮಾಡಿದ್ದವು. ಬರ್ತ್‌ಡೇ ದಿನ ಉಳಿದೆಲ್ಲರಿಗಿಂತ ಮೊದಲೇ ಅಮ್ಮನಿಗೆ ವಿಶ್ ಮಾಡಬೇಕು ಎಂಬ ಮಗುವಿನ ಉತ್ಸಾಹ ಕಂಡು ಆತ ಬೆರಗಾಗಿದ್ದ. ಹೇಗಿದ್ರೂ ಈಗ ಟ್ರಾಫಿಕ್ ಇಲ್ಲ. ಹೆಚ್ಚೆಂದರೆ ಹತ್ತು ನಿಮಿಷದಲ್ಲಿ ಈ ಮಗುವಿನ ಮನೆ ತಲುಪಬಹುದು ಎಂದುಕೊಂಡೇ ಕಾರು ಸ್ಟಾರ್ಟ್ ಮಾಡಿದೆ. ಹೀಗೆ ಸ್ಟ್ರೈಟ್ ಹೋಗಿ ಮೊದಲು ಲೆಫ್ಟ್ ತಿರುಗಬೇಕು. ಆಮೇಲೆ ರೈಟ್ ಟರ್ನ್ ತಗೋಬೇಕು... ಎಂದ ಆ ಮಗು, ಎರಡು ನಿಮಿಷ ಸುಮ್ಮನಿದ್ದು ನಂತರ ಹೇಳಿದಳು: 'ಅಂಕಲ್, ಏನ್ ಗೊತ್ತಾ? ಮಮ್ಮಿ ನಮ್ಮ ಮನೇಲಿಲ್ಲ. ಬೇರೆ ಕಡೆ ಇದ್ದಾರೆ. ನಮ್ಮ ಮನೆಯಿಂದ ಹೋಗಿ ಆಗಲೇ ತುಂಬಾ ದಿನ ಆಯ್ತು. ಬರ್ತ್‌ಡೇ ದಿನ ಬೇಗ ವಿಶ್ ಮಾಡೋಣ ಅಂತ ಪಪ್ಪಂಗೆ ರಾತ್ರೀನೇ ಹೇಳಿದೆ. ಬೆಳಗ್ಗೆ ಬೇಡ, ಮಧ್ಯಾಹ್ನ ಹೋಗೋಣ ಕಂದಾ ಅಂದುಬಿಟ್ರು. ನಾನೇ ಫಸ್ಟ್ ವಿಶ್ ಮಾಡಬೇಕು ಅನ್ನಿಸ್ತು ಅಂಕಲ್. ಅದಕ್ಕೇ ಪಪ್ಪ ವಾಕಿಂಗ್ ಹೋದ ತಕ್ಷಣ ರೋಸ್ ತಗೊಳ್ಳಲು ಬಂದೆ. ಕಾಸು ಕೇಳಿದ್ರೆ ಪಪ್ಪ ಮನೆಯಿಂದ ಹೊರಗೆ ಕಳಿಸಲ್ಲ ಅನ್ನಿಸ್ತು. ಹಾಗಾಗಿ ಅವರಲ್ಲಿ ದುಡ್ಡು ಕೇಳಲಿಲ್ಲ. ಈಗ ಮಮ್ಮಿಗೆ ವಿಶ್ ಮಾಡಿ ನಾನು ಹೋಗಿಬಿಡ್ತೀನಿ...'

ಓಹ್, ಗಂಡ-ಹೆಂಡ್ತಿ ಜಗಳ ಆಗಿರಬೇಕು. ಬಹುಶಃ ಆ ಹೆಂಗಸು ಮುನಿಸಿಕೊಂಡು ಅಣ್ಣ/ಅಕ್ಕನ ಮನೆಗೋ, ತವರು ಮನೆಗೋ ಬಂದಿರಬೇಕು. ಹಾಗಾಗಿ, ಈ ಮಗುವಿಗೆ ಅಮ್ಮ ಇರುವ ಜಾಗ ಗೊತ್ತಿರಬೇಕು. ಮಧ್ಯಾಹ್ನ ಬಂದು ಊಟ ಮುಗಿಸಿ, ರಾಜಿ ಮಾಡಿಕೊಂಡು ಹೆಂಡತಿ ಜೊತೆ ಹೋಗುವುದು ಈ ಮಗುವಿನ ತಂದೆಯ ಪ್ಲಾನ್ ಇರಬೇಕು ಎಂದೆಲ್ಲಾ ಅಂದಾಜು ಮಾಡಿಕೊಂಡ ಪ್ರಕಾಶ, ಆ ಮಗುವಿನ ಸಲಹೆಯಂತೆಯೇ, ಕಾರ್ ಓಡಿಸುತ್ತಿದ್ದ. ಐದು ನಿಮಿಷದ ನಂತರ, ಮೈದಾನದಂತಿದ್ದ ಏರಿಯಾ ಕಂಡಾಗ, ಅಂಕಲ್ ಇಲ್ಲೇ ನಿಲ್ಸಿ ಎಂದ ಮಗು, ಇನ್ನಿಲ್ಲದ ಅವಸರದಿಂದ ಆ ಬೊಕೆಯೊಂದಿಗೆ ಕೆಳಗಿಳಿದು, ಒಂದು ನಿರ್ದಿಷ್ಟ ಜಾಗದ ಕಡೆಗೆ ಸರಸರನೆ ನಡೆಯಿತು. ಕುತೂಹಲದಿಂದ ಆ ಮಗುವನ್ನು ಹಿಂಬಾಲಿಸಿದ ಪ್ರಕಾಶ, ಎರಡು ನಿಮಿಷದ ನಂತರ ಅಚೇತನನಾಗಿ ನಿಂತುಬಿಟ್ಟ.

ಕಾರಣ, ಆ ಮಗು ಕರೆ ತಂದಿದ್ದ ಜಾಗ ಒಂದು ಸ್ಮಶಾನವಾಗಿತ್ತು. ಬೆಳಗಿನ ಜಾವವಾದ್ದರಿಂದ ಅಲ್ಲಿ ಯಾರೂ ಇರಲಿಲ್ಲ. ಅದೇನನ್ನೂ ಗಮನಿಸದ ಆ ಮಗು, ಒಂದು ನಿರ್ದಿಷ್ಟ ಜಾಗದಲ್ಲಿ ಬೊಕೆ ಇಟ್ಟು ಹೇಳಿತು: 'ಮಮ್ಮೀ, ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ. ಏನ್ ಗೊತ್ತಾ? ಎಲ್ಲರಿಗಿಂತ ಮೊದಲೇ ವಿಶ್ ಮಾಡಬೇಕು ಅಂತ ಡ್ಯಾಡಿಗೆ ಹೇಳದೇ ಬಂದು ಬಿಟ್ಟೆ. ಹೊಸಾ ಅಂಕಲ್ ಜೊತೆ ಬಂದಿದೀನಿ. ಸ್ವಲ್ಪ ದಿನ ಆದ ಮೇಲೆ ಅಮ್ಮ ವಾಪಸ್ ಬರ್ತಾರೆ ಅಂತ ಡ್ಯಾಡಿ ಹೇಳಿದ್ದಾರೆ. ಹಾಗಾಗಿ ನಾನು ಕಾಯ್ತಾ ಇದೀನಿ. ಬೇಗ ಬಂದ್ಬಿಡು ಮಮ್ಮೀ... ಇನ್ನೊಂದ್ಸಲ ನಿಂಗೆ ಹ್ಯಾಪಿ ಬರ್ತ್‌ಡೇ...'

ಅಷ್ಟು ದೂರದಲ್ಲಿ, ಶಿಲೆಯಂತೆ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಪ್ರಕಾಶ. ಏನು ನಡೆದಿರಬಹುದೆಂದು ಈತ ಅಂದಾಜು ಮಾಡಿಕೊಳ್ಳುತ್ತಿರುವಾಗಲೇ ಆ ಮಗು ಬಂದು, ಅಂಕಲ್ ಹೋಗೋಣ್ವಾ ಎಂದಿತು. ಈತ ಏನು ಹೇಳಲೂ ತೋಚದೆ ಹೆಜ್ಜೆ ಮುಂದಿಟ್ಟ. ಅದೇ ವೇಳೆಗೆ ನಾಲ್ಕು ಮಂದಿ ತುಂಬ ಅವಸರದಿಂದ ಅತ್ತ ಬಂದರು. ಅವರನ್ನು ಕಂಡಾಕ್ಷಣ, 'ಡ್ಯಾಡೀ ಎನ್ನುತ್ತಾ ಓಡಿ ಹೋದ ಆ ಮಗು, ಒಬ್ಬ ವ್ಯಕ್ತಿಗೆ ಎರಡೇ ನಿಮಿಷದಲ್ಲಿ ನಡೆದಿದ್ದನ್ನೆಲ್ಲ ವರದಿ ಮಾಡಿತು. ಆತ ಬೇರೊಂದು ಕಡೆ ತಿರುಗಿ ಕಣ್ಣೊರೆಸಿಕೊಂಡ. ನಂತರ ಮಗುವಿನ ಕೆನ್ನೆ ತಟ್ಟಿ, ಆಕೆಯನ್ನು ಜತೆಗಾರರ ಬಳಿ ಬಿಟ್ಟು ಪ್ರಕಾಶನ ಬಳಿ ಬಂದು ಹೇಳಿಕೊಂಡ: 'ಸರ್, ಹತ್ತು ದಿನಗಳ ಹಿಂದೆ, ತೀರಾ ಸಡನ್ ಆಗಿ ಹಾರ್ಟ್ ಅಟ್ಯಾಕ್‌ನಿಂದ ನನ್ನ ಹೆಂಡ್ತಿ ತೀರಿಕೊಂಡ್ಳು. ಇವತ್ತು ಅವಳ ಬರ್ತ್‌ಡೇ. ಅಮ್ಮನಿಗೆ ಏನೂ ಆಗಿಲ್ಲ. ಆಕೆ ಸ್ವಲ್ಪ ದಿನ ಬೇರೆ ಕಡೇಲಿದ್ದು ಆಮೇಲೆ ವಾಪಸ್ ಬರ್ತಾಳೆ ಅಂತ ಮಗೂಗೆ ಸುಳ್ಳು ಹೇಳಿದೀನಿ. ಅಮ್ಮ ಸತ್ತು ಹೋಗಿದಾಳೆ ಅಂತ ಗೊತ್ತಾದ್ರೆ ಮಗೂಗೆ ಶಾಕ್ ಆಗುತ್ತೆ ಅಂತ ಡಾಕ್ಟರ್ ಹೇಳಿದ್ರು. ಹಾಗಾಗಿ ಅಮ್ಮ ಇಲ್ಲಿರ್ತಾಳೆ ಎಂದು ಗಾಡ್ ಪ್ರಾಮಿಸ್ ಮಾಡಿದೀನಿ. ಈ ಮಗು ಅದನ್ನೆಲ್ಲ ನಿಜ ಅಂತ ಭಾವಿಸಿದೆ. ಇವತ್ತು, ಬರ್ತ್‌ಡೇ ನೆಪದಲ್ಲಿ ಮಧ್ಯಾಹ್ನ ಬಂದು ಪೂಜೆ ಮಾಡಿದ ನಂತರ, ಇವಳಿಗೆ ಎಲ್ಲವನ್ನೂ ಹೇಳಿಬಿಡೋಣ ಅಂದ್ಕೊಂಡಿದ್ದೆ. ಆದರೆ, ನಾನು ವಾಕ್ ಹೊರಟಾಗಲೇ ಇವಳೂ ಮನೆಬಿಟ್ಳು ಅಂತ ಕೇಳಿ ಗಾಬರಿಯಾಯ್ತು. ತುಂಬಾ ಕಡೆ ಹುಡುಕಿ ಕೊನೇಗೆ ಇಲ್ಲಿಗೆ ಬಂದೆ. ಮಗೂನ ಜೋಪಾನ ಮಾಡಿದ್ದಕ್ಕೆ ಥ್ಯಾಂಕ್ಸ್. ಒಮ್ಮೆ ಮನೆಗೆ ಬನ್ನಿ ಸರ್...'
ಆನಂತರದಲ್ಲಿ ತಂದೆಯೊಂದಿಗೆ ಆ ಮಗುವೂ ಹೊರಟು ಹೋಯಿತು. ಹೋಗುವ ಮುನ್ನ -ಮಮ್ಮೀಗೆ ವಿಶ್ ಮಾಡಿದ್ದು ನಾನೇ ಫಸ್ಟು ಗೊತ್ತಾ ಎಂದು ಆ ಮಗು ತಂದೆಗೆ ಸಂಭ್ರಮದಿಂದ ಹೇಳಿತ್ತು. ಈವರೆಗೂ ನಡೆದುದೆಲ್ಲಾ ಕನಸಲ್ಲ ತಾನೆ ಎಂದು ಪ್ರಕಾಶ್ ಮತ್ತೆ ಮತ್ತೆ ಕೇಳಿಕೊಂಡ. ಆಗಲೇ ಅವನ ಒಳಮನಸ್ಸು ಪಿಸುಗುಟ್ಟಿತು: ಅಪ್ಪ ತೀರಿಕೊಂಡಾಗ ಅಮ್ಮನಿಗಿನ್ನೂ ಚಿಕ್ಕ ವಯಸ್ಸು. ಗಂಡ ಇನ್ನಿಲ್ಲ ಅಂದಾಗ ಆಕೆ ಎಂಟು ತಿಂಗಳ ತುಂಬು ಬಸುರಿ. ಎರಡು, ಮೂರು ವರ್ಷದ ಅಣ್ಣ, ಅಕ್ಕನೂ ಇದ್ದರು. ಹೀಗಿರುವಾಗ ಅಮ್ಮ ಎಲ್ಲರನ್ನೂ ಹೇಗೆ ಸಾಕಿದಳು? ಆಶ್ರಯ ತಪ್ಪಿದ ದಿನಗಳಲ್ಲಿ ಆಕೆ ಹರಿಸಿದ ಕಣ್ಣೀರೆಷ್ಟು? ಬದುಕಲ್ಲಿ ಯಾರೂ ಇಲ್ಲದಿದ್ದರೂ, ತಮ್ಮ ಸುಖ-ದುಃಖ ಹಂಚಿಕೊಳ್ಳಲು, ನೋವನ್ನು ತೋಡಿಕೊಳ್ಳಲು ಸಂಗಾತಿ ಬೇಕೇ ಬೇಕು. ಎಲ್ಲವನ್ನೂ ಮಕ್ಕಳ ಬಳಿ ಹೇಳಿಕೊಳ್ಳಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ, ಬದುಕು ಪೂರ್ತಿ ಒಂಟಿತನವನ್ನು ಅಮ್ಮ ಹೇಗೆ ಕಳೆದಳು? ಆಕೆ ದಿನವಿಡೀ ಏನಾದರೂ ಕೆಲಸ ಮಾಡುತ್ತ, ಆ ಕೆಲಸದ ಮಧ್ಯೆಯೇ ತನ್ನ ನೋವು ಮರೆಯಲು ಯತ್ನಿಸಿದವಳು. ಮಕ್ಕಳನ್ನು ಮುದ್ದು ಮಾಡುವುದು, ಅವರ ಸಂತೋಷ, ಏಳ್ಗೆ ಕಂಡು ಖುಷಿ ಪಡುವುದೇ ಆಕೆಯ ಬದುಕಾಯಿತು. ಅಂಥ ಅಮ್ಮನೊಂದಿಗೆ, ಅವಳ ಬರ್ತ್‌ಡೇ ದಿನ ಇರುವಷ್ಟು ಸಮಯವೂ ಇಲ್ಲವೆಂದರೆ ಹೇಗೆ? ಅಮ್ಮನ ನೆಮ್ಮದಿಗಿಂತ, ನಗುವಿಗಿಂತ ಮನೆ ಕಟ್ಟಿಸುವುದೇ ಮುಖ್ಯವಾಗಿ ಹೋಯ್ತೆ?

ಮನಸ್ಸಿನ ಮೂಲೆಯಿಂದ ಕೇಳಿ ಬಂದ ಈ ಪ್ರಶ್ನೆಗೆ ಪ್ರಕಾಶನ ಬಳಿ ಉತ್ತರವಿರಲಿಲ್ಲ. ಆತ ಮತ್ತೆ ಮತ್ತೆ ಅಮ್ಮನನ್ನು ನೆನಪಿಸಿಕೊಂಡು ಭಾವುಕನಾದ. ರಸ್ತೆಯ ಒಂದು ಬದಿಯಲ್ಲಿ ಕಾರ್ ನಿಲ್ಲಿಸಿ ಫೋನ್ ಮಾಡಿ ಹೇಳಿದ: ನಾಡಿದ್ದು ಊರಿಗೆ ಬರ್ತೀನಮ್ಮ. ನಿನ್ನ ಬರ್ತ್‌ಡೇ ಅಲ್ವಾ, ಅದಕ್ಕೆ...' ಇಷ್ಟು ಹೇಳುವುದರೊಳಗೆ ಅವನ ಧ್ವನಿ ಗದ್ಗದವಾಗಿತ್ತು. ಇದನ್ನು ಗಮನಿಸಿದ ತಾಯಿ ಕೇಳಿದಳು: 'ಮಾತು ಭಾರವಾಗಿದೆಯಲ್ಲ ಪ್ರಕಾಶೂ, ಯಾಕೆ ಹುಶಾರಿಲ್ವಾ?'
ಅಮ್ಮನ ಈ ಮಮತೆಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಪ್ರಕಾಶ ಬಿಕ್ಕಳಿಸ ತೊಡಗಿದ.
-----
ಈ ಕಥೆ- ಬ್ಯುಸಿ ಬದುಕಿನಲ್ಲಿ ಅಮ್ಮನನ್ನು ಮರೆತಿರುವ ಎಲ್ಲರಿಗೆ...

- ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com