ಅಂಕಣಗಳು

ಕನ್ನಡ ವಿಮರ್ಶಾ ಕ್ಷೇತ್ರದ ದುರಂತ

Published On :

'ಹೊಸ ವಿಮರ್ಶೆ ಎಂದರೆ ಬರೀ ಅನುವಾದವೇ?' ಎಂದು ಕೇಳುತ್ತ ಸಾಹಿತ್ಯಾಸಕ್ತರನ್ನು ಸಾಹಿತ್ಯ (ವಿಮರ್ಶಾ) ಚಿಂತನೆಗೆ ಹಚ್ಚಿರುವ ಡಾ. ಡಿ.ಎ. ಶಂಕರ್ ಅವರ ಲೇಖನಕ್ಕೆ (ಮಾರ್ಚ್ 2) ಪೂರಕವಾಗಿ ನನ್ನೊಂದು ಅವಲೋಕನ.
ಅನ್ಯ ಭಾಷಾ ವಿಮರ್ಶೆಗಳ ಆಕರ್ಷಕ ತುಣುಕುಗಳ ಉದ್ದೇಶಿತ ಅನುವಾದವೋ ಅಥವಾ ಅನುದ್ದೇಶಿತ ಪ್ರಭಾವವೋ ಕನ್ನಡದ ಪ್ರಸ್ತುತ ಸಾಹಿತ್ಯ ವಿಮರ್ಶೆಯು 'ಅನ್ಯಗ್ರಹ'ಚಾರಕ್ಕೀಡಾಗಿರುವುದರ ಜೊತೆಗೆ, ಇನ್ನೂ ಎರಡು ದೋಷಗಳಿಂದ ಕಂಗೊಳಿಸು(!) ತ್ತಿದೆ. ಅವೆಂದರೆ, ವಿಮರ್ಶಕನಿಗಿರುವ ಒಲವು ಮತ್ತು ಅವನ ಪೂರ್ವಗ್ರಹ (ಪೂರ್ವಾಗ್ರಹ ಅಲ್ಲ). ಬಹುಪಾಲು ತಥಾಕಥಿತ ವಿಮರ್ಶೆಗಳು, ವಿಮರ್ಶೆಗಿಂತ, ವಿಮರ್ಶಕನ ಒಲವಿನ ನಿವೇದನೆ ಮತ್ತು ಪೂರ್ವಗ್ರಹದ ಪ್ರತಿಪಾದನೆಗಳಿಂದಲೇ ತುಂಬಿರುತ್ತವೆ. ಈ ಒಲವು ಹಾಗೂ ಪೂರ್ವಗ್ರಹಗಳು, ಕೃತಿಕಾರನ ಬಗ್ಗೆ ಇರಬಹುದು. ಕೃತಿ ಪ್ರಕಾರದ ಬಗ್ಗೆ ಇರಬಹುದು ಅಥವಾ ಇವೆರಡೂ ವಿಷಯದಲ್ಲೂ ಇರಬಹುದು.
ಕೃತಿಕಾರನೆಡೆಗಿನ ಒಲವು ಅಥವಾ ತಿರಸ್ಕಾರವು, ಅನೇಕ ಸಲ, ಕೃತಿಗೆ ಸಂಬಂಧಿಸಿದಂತೆ ಇರದೆ, ಕೃತಿಕಾರನ ಮನೋಧರ್ಮ, ಸಿದ್ಧಾಂತಗಳಿಗೆ ಸಂಬಂಧಿಸಿದ್ದಾಗಿರುತ್ತದೆ! ಇಂಥ ಎಲ್ಲ ವಿಮರ್ಶೆಗಳೂ, ಕೃತಿಗೆ ಎಸಗಿರುವ ಅನ್ಯಾಯ ಮತ್ತು ಸಾಹಿತ್ಯಾಸಕ್ತರಿಗೆ ಮಾಡಿರುವ ಮೋಸ ಎಂದೇ ಹೇಳಬೇಕಾಗುತ್ತದೆ. ಹಾಸ್ಯ ಸಾಹಿತ್ಯವು ವಿಮರ್ಶೆಗೆ ಯೋಗ್ಯವೇ ಅಲ್ಲ ಎಂದು ಭಾವಿಸಿರುವ 'ದಡ್ಡ ಜಾಣ' ಅಥವಾ 'ಮೂರ್ಖ ಅಹಂಕಾರಿ' ವಿಮರ್ಶಕರು ನಮ್ಮಲ್ಲಿದ್ದಾರೆ!
ಇಂದಿನ ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದ ಇನ್ನೊಂದು ದೊಡ್ಡ ಚೋದ್ಯವೆಂದರೆ, ಸಾಹಿತ್ಯವನ್ನು -ಅದರಲ್ಲೂ ಮುಖ್ಯವಾಗಿ ಕಾವ್ಯವನ್ನು -(ಅದರ) ರಾಚನಿಕ ನೆಲೆಯಲ್ಲಿ, ಕಲೆಯಾಗಿ, ಶಾಸ್ತ್ರವಾಗಿ ಮತ್ತು ಸೌಂದರ್ಯವಾಗಿ ಕಂಡು ವಿಶ್ಲೇಷಿಸುವ ಅವಶ್ಯ ಗುಣದ ಕೊರತೆ. ಸಾಹಿತ್ಯ ವಿಮರ್ಶೆಯೆಂದು ಅದರಲ್ಲೂ, ಕಾವ್ಯ ವಿಮರ್ಶೆಯೆಂದು -ಇಂದು ಪ್ರಕಟಗೊಳ್ಳುತ್ತಿರುವ ಬರೆಹಗಳು, ಸಾಹಿತ್ಯವೆಂಬ- ಕಾವ್ಯವೆಂಬ ಕಲೆಯ ಸೃಷ್ಟಿಯ ಬಗ್ಗೆ, ಅರ್ಥಾತ್, ರಚನಾ ಕ್ರಮ, ಬಂಧ, ಛಂದ, ರಚನೆಯ ತಪ್ಪು-ಒಪ್ಪು, ರಚನಾ ಕೌಶಲ, ಸೃಷ್ಟಿ ಸೌಂದರ್ಯ ಇವುಗಳ ಬಗ್ಗೆ ಹೇಳುವ ಬದಲು, ಆ ಕೃತಿಯು ಬಳಸಿಕೊಂಡಿರುವ ವಿಷಯದ ಬಗ್ಗೆ-ವಸ್ತುವಿನ ಬಗ್ಗೆ ಹೇಳುತ್ತಿವೆ; ಕಲೆ-ಶಾಸ್ತ್ರ-ಸೌಂದರ್ಯಗಳ ಕಣ್ಣುಗಳಿಂದ ಕೃತಿಯನ್ನು ನೋಡುವ ಬದಲು ಸಮಾಜ-ವರ್ತಮಾನ- (ಸಾಮಾಜಿಕ) ನ್ಯಾಯಾನ್ಯಾಯ (!) ಈ ಕಣ್ಣುಗಳಿಂದ ನೋಡುತ್ತಿವೆ. ಇಂಥ ಬರೆಹಗಳೆಲ್ಲ ಸಂಬಂಧಗೇಡಿ ಪ್ರಲಾಪಗಳೇ ಹೊರತು ವಿಮರ್ಶೆಗಳಾಗಲಾರವು. ಕನ್ನಡ ವಿಮರ್ಶಾ ಕ್ಷೇತ್ರದ ದುರಂತವಿದು.
ಸಾಹಿತ್ಯವನ್ನು (ಕಾವ್ಯವನ್ನು) ಅದರ ರಾಚನಿಕ ನೆಲೆಯಲ್ಲಿ ವಿಶ್ಲೇಷಿಸಿ ಬರೆಯುವ ಬಗೆಯನ್ನು ಶತಾವಧಾನಿ ಗಣೇಶ್ ಅವರು ತಮ್ಮೊಂದು ಲೇಖನದಲ್ಲಿ ಸೋದಾಹರಣ ತಿಳಿಸಿಕೊಟ್ಟಿದ್ದಾರೆ. ಅಜಕ್ಕಳ ಗಿರೀಶ್ ಭಟ್ ದಂಪತಿ ಹೊರತಂದಿರುವ 'ಚಿಂತನ ಬಯಲು' ತ್ರೈಮಾಸಿಕದ ಪ್ರಥಮ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.  ಸಾಹಿತ್ಯಾಸಕ್ತರು, ವಿಮರ್ಶಕರು ಈರ್ವರೂ ಓದಿ ಮನನ ಮಾಡಬೇಕಾದ ಲೇಖನ ಇದು.

- ಎಚ್. ಆನಂದರಾಮಶಾಸ್ತ್ರೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.