ಗಾರ್ಡನ್ ಸಿಟಿಯೆಂಬ ಖ್ಯಾತಿ ಪಡೆದಿದ್ದ ಬೆಂಗಳೂರು ಈಗ ಗಾರ್ಬೇಜ್ ಸಿಟಿಯಾಗಿ ಕಳೆಗುಂದುತ್ತಿದೆ. ಐಟಿ ಕ್ಷೇತ್ರದ ಬೆಳವಣಿಗೆಯ ಪರಿಣಾಮವಾಗಿ ಜನಸಂಖ್ಯೆ ಮತ್ತು ವಾಹನ ದಟ್ಟಣಿ ಹೆಚ್ಚಾಗಿದೆ ಎಂಬ ಕಾರಣಕ್ಕಲ್ಲ, ಆದರೆ ನಗರ ನಿರ್ವಾಹಕರೆನಿಸಿಕೊಂಡವರು ಉತ್ತರದಾಯಿಯಾಗಿಲ್ಲದೇ ಇರುವ ಕಾರಣಕ್ಕೆ. ಇವರುಗಳಲ್ಲಿ 25 ಎಮ್ಎಲ್ಎಗಳು, 198 ಕಾರ್ಪೊರೇಟರ್ಗಳು ಮತ್ತು ಸಾರ್ವಜನಿಕ ಏಜೆನ್ಸಿಗಳ ನೇತೃತ್ವ ವಹಿಸಿರುವ ಲೆಕ್ಕಕ್ಕಿಲ್ಲದಷ್ಟು ಅಧಿಕಾರಿಗಳೂ ಇದ್ದಾರೆ. ಆಹ್ಲಾದಕರ ವಾತಾವರಣವಿಲ್ಲದೇ ಹೋಗಿದ್ದರೆ ಬೆಂಗಳೂರು ಬಹಳ ಹಿಂದೆಯೇ 'ಹ್ಯಾಪನಿಂಗ್ ಸಿಟಿ' ಎನ್ನುವ ಟ್ಯಾಗ್ ಕಳೆದುಕೊಂಡಿರುತ್ತಿತ್ತು.
ತ್ಯಾಜ್ಯ ವಿಲೇವಾರಿಯ ವಿಷಯವನ್ನೇ ತೆಗೆದುಕೊಳ್ಳಿ. ಬೆಂಗಳೂರು ಸುತ್ತಮುತ್ತಲಿನ ಹಳ್ಳಿಯ ಜನರು ಯಾವಾಗ ಕಸವನ್ನು ತಮ್ಮ ಊರಲ್ಲಿ ಎಸೆಯುವುದಕ್ಕೆ ವಿರೋಧಿಸಿದರೋ ಅಂದಿನಿಂದ ಬಿಬಿಎಂಪಿ ಬೆಂಗಳೂರಿನಲ್ಲೆಲ್ಲ ಕಂಗಾಲಾಗಿ ಗಿರಕಿ ಹೊಡೆಯುತ್ತಿದೆ. ಊರೆಲ್ಲ ಕಸಮಯ. ಜನರ ಆಕ್ರೋಶಕ್ಕೆ ಉತ್ತರಿಸುವ ಕೆಲಸವನ್ನು ಬಿಬಿಎಂಪಿ ಅಧಿಕಾರಿಗಳ ಮೇಲೆ ಹೇರಿ ಎಮ್ಎಲ್ಎಗಳು ಮತ್ತು ಕಾರ್ಪೊರೇಟರ್ಗಳು ತಣ್ಣಗೆ ನುಣುಚಿಕೊಂಡಿದ್ದಾರೆ. ಇನ್ನು ಪ್ರತಿಭಟನೆಗಳು ಹೆಚ್ಚಾದಂತೆಲ್ಲ ಕಾರ್ಪೊರೇಷನ್ ಕಮಿಷನರ್ರನ್ನು ಬದಲಿಸುವ ಕೆಲಸವನ್ನಷ್ಟೇ ಸರ್ಕಾರ ಮಾಡಿದೆ. ಮನೆಗಳಲ್ಲಿ ಕಸ ಪ್ರತ್ಯೇಕಗೊಳಿಸುವುದನ್ನು ಕಮಿಷನರ್ ಒಬ್ಬರು ಕಡ್ಡಾಯಗೊಳಿಸಿದ್ದರು. ಜನತೆ ಕೂಡ ಅವರ ಮಾತನ್ನು ಪಾಲಿಸಿತು. ಆದರೆ ಕಸ ವಿಲೇವಾರಿ ಮಾಡುವ ಸಮಸ್ಯೆ ಮಾತ್ರ ಹಾಗೆಯೇ ಉಳಿಯಿತು. ಹಾಗಾಗಿ ಅವರು ಇನ್ನೊಬ್ಬ ಕಮಿಷನರರಿಗೆ ತಮ್ಮ ಜಾಗ ಬಿಟ್ಟುಕೊಡಬೇಕಾಯಿತು. ಎನ್ಜಿಒಗಳು ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾದವಾದರೂ ಈ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅವುಗಳ ಪ್ರಯತ್ನವೂ ಕಸದಲ್ಲಿ ಕಳೆದುಹೋಯಿತು.
ಎಂದಿನಂತೆ ನ್ಯಾಯಾಲಯವೇ ಈ ವಿಷಯದಲ್ಲಿ ಮುತುವರ್ಜಿ ವಹಿಸಬೇಕಾಯಿತು. ಇದೇ ಮೊದಲ ಬಾರಿ ರಾಜ್ಯ ಹೈಕೊರ್ಟ್, ಜನತೆ ಕಾರ್ಪೊರೇಟರ್ಗಳ ಮತ್ತು ವಾರ್ಡ್ ಕಮಿಟಿಗಳ ನಿಷ್ಕ್ರಿಯತೆಯ ಬಗ್ಗೆ ನೇರವಾಗಿ ಅಫಿಡವಿಟ್ ಸಲ್ಲಿಸುವ ಮೂಲಕ ತನ್ನನ್ನು ಸಂಪರ್ಕಿಸುವಂತಹ ಆದೇಶ ನೀಡಿದೆ. ಹೈಕೋರ್ಟ್ ಏನು ಹೇಳಿದೆಯೋ ನೋಡೋಣ:
'ನಾಗರಿಕರು, ಮೊದಲು ವಾರ್ಡ್ ಕಮಿಟಿಯನ್ನು ಸಂಪರ್ಕಿಸಬೇಕು. ಒಂದು ವೇಳೆ ಸಮಸ್ಯೆಯನ್ನು ಬಗೆಹರಿಸಲು ಅದು ವಿಫಲವಾದರೆ ಅವರು ನೇರವಾಗಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ನಗರದಲ್ಲಿ ಉತ್ಪಾದನೆಯಾದ ತ್ಯಾಜ್ಯದ ಅಂದಾಜು ಪ್ರಮಾಣವನ್ನು ಆಧರಿಸಿ ಗುತ್ತಿಗೆದಾರರಿಗೆ ಪಾವತಿ ನೀಡುವ ಪ್ರಕ್ರಿಯೆಯ ಮೇಲೆ ಕೋರ್ಟ್ ಹದ್ದುಗಣ್ಣಿಡಲಿದೆ. ಕೇವಲ ಸಹಿಗಳಿಂದ ಅಥವಾ ನಿರ್ಣಯಗಳಿಂದ ಕಸದ ಸಮಸ್ಯೆ ಪರಿಹಾರವಾಗುವುದಿಲ್ಲ. ವಾರ್ಡ್ ಸಮಿತಿ ಮತ್ತು ಕಾರ್ಪೊರೇಟರ್ಗಳ ಮುಖ್ಯ ಧ್ಯೇಯ ಗಾರ್ಬೇಜ್ ಸಮಸ್ಯೆಯನ್ನು ಬಗೆಹರಿಸಲು ಸ್ಥಳದಲ್ಲಿದ್ದು ಮೇಲ್ವಿಚಾರಣೆ ನಡೆಸುವುದು. ಅವರು ಜನರಿಗೆ ಉತ್ತರದಾಯಿಯಾಗಿರುತ್ತಾರೆ, ಏಕೆಂದರೆ ಕಾನೂನು ಅವರ ಮೇಲೆ ನಂಬಿಕೆ ಇಟ್ಟು ಅಷ್ಟು ಜವಾಬ್ದಾರಿಯುತ ಕೆಲಸ ಕೊಟ್ಟಿರುತ್ತದೆ.
ವಾರ್ಡ್ ಸಮಿತಿಯ ಸದಸ್ಯರು ದಿನ ಬೆಳಗ್ಗೆ 6 ಗಂಟೆಗೆ ವಾಕಿಂಗ್ ಮಾಡಲು ಹೋಗಲಿ. ಏಕೆಂದರೆ ಅದೇ ಸಮಯದಲ್ಲೇ ಜನರು ಮನೆಯಿಂದ ಕಸತಂದು ಹೊರಗೆಸೆಯುವುದು. ಆ ಸಮಯದಲ್ಲಿ ವಾಕಿಂಗ್ ಮಾಡುವ ಮೂಲಕ ಸಮಿತಿಯ ಸದಸ್ಯರು ಕಸದ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ, ಆರೋಗ್ಯವನ್ನೂ ಕಾಪಾಡಿಕೊಂಡಂತಾಗುತ್ತದೆ.
ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ. ಒಂದು ಬಾರಿ ಆಯ್ಕೆಯಾಗುತ್ತಿದ್ದಂತೆ ಅವರು ಜನತೆಯಿಂದ ದೂರವಾಗಿ ಬಿಡುತ್ತಾರೆ. ಅವರನ್ನು ಸಂಪರ್ಕಿಸುವುದೇ ಅಸಾಧ್ಯ ಎನ್ನುವಂತಾಗುತ್ತದೆ. ಬೆಂಗಳೂರಿನಲ್ಲಿ ಸುಮಾರು 25 ಎಮ್ಎಲ್ಎಗಳು ಮತ್ತು 198 ಕಾರ್ಪೊರೇಟರ್ಗಳಿದ್ದಾರೆ. ನಗರಕ್ಕೆ ಅವರ ಕೊಡುಗೆಯೇನು? ಅವರು ಉತ್ತರದಾಯಿಯಾಗಿದ್ದಾರಾ? ಸಮಸ್ಯೆ ಉದ್ಭವವಾಗಿ, ಜನ ಬೀದಿಗಿಳಿದ ತಕ್ಷಣ ಪರಾರಿಯಾಗಿಬಿಡುವ ಅವರು, ಎಲ್ಲಾ ತಪ್ಪನ್ನೂ ಅಧಿಕಾರಿಗಳ ಮೇಲೆ ಹಾಕಿ ಸುಮ್ಮನೆ ಕೂತುಬಿಡುತ್ತಾರೆ. ಸಹಾಯ ಮಾಡುತ್ತೇವೆಂದು ಮುಂದೆ ಬರುವ ಎನ್ಜಿಒಗಳನ್ನು ಅಥವಾ ವಿಶೇಷಜ್ಞರನ್ನು ಅವರು ಬೆಂಬಲಿಸುತ್ತಾರಾ ಎಂದರೆ ಅದೂ ಇಲ್ಲ. ನಿಜ ಹೇಳಬೇಕೆಂದರೆ, ವಾರ್ಡ್ ಸಮಿತಿಗಳ ರಚನೆಯನ್ನೇ ಅವರು ವಿರೋಧಿಸಿದ್ದರು. ಆರ್ಡಬ್ಲೂಎ ತಮ್ಮ ನಡುವೆ ಇರುವುದು ಅವರಿಗೆ ಬೇಕಿರಲಿಲ್ಲ. ಈ ವಿಷಯದಲ್ಲೂ ನ್ಯಾಯಾಲಯವೇ ಮಧ್ಯೆ ಬಂದು ಆದೇಶ ನೀಡಬೇಕಾಯಿತು. ಇನ್ನು ಕಾರ್ಪೊರೇಟರ್ಗಳು ಈ ಸಮಿತಿಗಳಲ್ಲಿ ತಮ್ಮ ಜನರನ್ನು ನುಸುಳಿಸಲು ಪ್ರಯತ್ನಿಸಿದರು, ಆದರೆ ಜನರ ಆಕ್ರೋಶದಿಂದ ಬೆಚ್ಚಿ ಸುಮ್ಮನಾದರು.'
ತಪ್ಪೆಸಗುವ ಕಾರ್ಪೊರೇಟರ್ಗಳನ್ನು ಕಟಕಟೆಗೆ ತರಲು ಜನರು ತನ್ನನ್ನು ನೇರವಾಗಿ ಸಂಪರ್ಕಿಸಲು ಅನುವು ಮಾಡಿಕೊಟ್ಟ ನ್ಯಾಯಾಲಯ ಉತ್ತಮ ಕೆಲಸ ಮಾಡಿದೆ. ಈಗ ಅಧಿಕಾರದಲ್ಲಿರುವವರಿಗೆ ಬೇರೆ ದಾರಿಯೇ ಇಲ್ಲ. ಒಂದೋ ಅವರು ಸಮಸ್ಯೆಯನ್ನು ಬಗೆಹರಿಸಬೇಕು ಅಥವಾ ನ್ಯಾಯಾಲಯದಿಂದ ವಾಗ್ದಂಡನೆಗೆ ಗುರಿಯಾಗಬೇಕು.
ಅಸೆಂಬ್ಲಿ ಚುನಾವಣೆಗಳು ವೇಗವಾಗಿ ಹತ್ತಿರಾಗುತ್ತಿವೆ. ಬೆಂಗಳೂರಿನಲ್ಲಿ 25 ಕ್ಷೇತ್ರಗಳಿವೆ. ಈಗಿರುವವರೇ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರನ್ನು ಕಿತ್ತೆಸೆದು ಕೆಲಸ ಮಾಡಲು ಸಿದ್ಧರಿರುವ ಹೊಸಬರನ್ನು ತಂದು ಕೂರಿಸಬೇಕು. ಈಗ ಆ ಕೆಲಸ ಆಗಲಿಲ್ಲವೆಂದರೆ ಇನ್ನೂ 5 ವರ್ಷಗಳವರೆಗೆ ಇದೇ ಹಣೆಬರಹ ಮುಂದುವರಿಯಲಿದೆ. ಇನ್ನು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾರ್ಪೊರೇಟರ್ಗಳಿಗೆ ಇದೇ ರೀತಿಯ ಪಾಠ ಕಲಿಸಬೇಕು. ಸಮಸ್ಯೆಗಳನ್ನು ನೋಡಿ ಬರೀ ಹಲುಬುತ್ತಾ ಕುಳಿತರೆ ಅವು ಬಗೆಹರಿಯುವುದಿಲ್ಲ. ಜನತೆಗೆ ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡಬೇಕು ಮತ್ತು ಕೆಲಸ ಮಾಡದ ರಾಜಕಾರಣಿಗಳಿಗೆ ಹೊರಬಾಗಿಲು ತೋರಿಸಬೇಕು.
ಕೊನೆಯ ಗುಟುಕು: ಜಗದೀಶ್ ಶೆಟ್ಟರ್ ಅವರೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು ಸ್ಪಷ್ಟವಾಗಿದೆ. ಜೆಡಿಎಸ್ನ ಅಭ್ಯರ್ಥಿ ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಹೆಚ್.ಡಿ. ಕುಮಾರಸ್ವಾಮಿಯವರು. ಆದರೆ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ? ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು. ಈಗ ಯಾರಾದರೊಬ್ಬರ ಹೆಸರು ಹೇಳಿದರೆ ಇನ್ನೊಬ್ಬರು ಅವರ ವಿರುದ್ಧ ಕೆಲಸ ಮಾಡಲಿದ್ದಾರೆ ಎನ್ನುವುದು ಪಕ್ಷಕ್ಕೆ ಗೊತ್ತು. ಹಾಗಾಗೆ ಚುನಾವಣೆಗಳಾಗುವವರೆಗೂ ಸುಮ್ಮನಿರುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ. ಚುನಾವಣೆಯ ನಂತರ ಕಾಂಗ್ರೆಸ್ ಹೈಕಮಾಂಡ್, ರೂಡಿಯಂತೆ ಎನ್ವಲಪ್ ಒಂದರಲ್ಲಿ ಹೆಸರು ಬರೆದು ಪ್ರತಿನಿಧಿಯೊಬ್ಬರ ಮೂಲಕ ಕಳುಹಿಸಿಕೊಡಲಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಕ್ಯಾಂಪಿನಲ್ಲಿ ಸಸ್ಪೆನ್ಸ್ ಮುಂದುವರಿಯಲಿದೆ.
- ಎಚ್.ಎಸ್. ಬಲರಾಮ್
hsbalram@gmail.com