'ಮೂಲವ್ಯಾಧಿ'ಯಿಂದ ಹೊರ ಬರದ ಕಾಂಗ್ರೆಸ್ ಮುಖಂಡರು

ಯಾವುದೇ ವ್ಯಕ್ತಿಗಾದರೂ ಆತ್ಮವಿಶ್ವಾಸ ಬಹಳ ಮುಖ್ಯ. ಅದು ಸಾಧನೆಯ ಹಾದಿಯಲ್ಲಿ...
Updated on: 

ಯಾವುದೇ ವ್ಯಕ್ತಿಗಾದರೂ ಆತ್ಮವಿಶ್ವಾಸ ಬಹಳ ಮುಖ್ಯ. ಅದು ಸಾಧನೆಯ ಹಾದಿಯಲ್ಲಿ ಸಾಗಲು ಯಾರನ್ನೇ ಆಗಲಿ ಪ್ರೇರೇಪಿಸುತ್ತದೆ. ಆದರೆ ಅದೇ ಆತ್ಮವಿಶ್ವಾಸ ಅತಿಯಾದಾಗ ಫಲಿತಾಂಶ ತಿರುಗು-ಮುರುಗಾಗುತ್ತದೆ. ಚುನಾವಣೆಯ ಹೊಸ್ತಿಲಲ್ಲಿ ಪ್ರದೇಶ ಕಾಂಗ್ರೆಸ್ ಈಗ ಇಂಥದ್ದೇ ಪರಿಸ್ಥಿತಿಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದೆ...!
ಆಡಳಿತಾರೂಢ ಬಿಜೆಪಿ ವಿರೋಧಿ ಅಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸುತ್ತದೆ ಎಂಬ ಅತಿ ಆತ್ಮವಿಶ್ವಾಸದ ಭ್ರಮೆಯಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಮುಖಂಡರು ನಿರ್ಣಾಯಕ ಸಂದರ್ಭದಲ್ಲಿ ದಾಯಾದಿ ಕಲಹಕ್ಕೆ ನಿಂತಿದ್ದಾರೆ. ಶತಮಾನದಷ್ಟು ಹಳೆಯ ಪಕ್ಷದಲ್ಲಿ ಎಂದು ವಾಸಿಯಾಗದ ಬಣ ರಾಜಕಾರಣದ 'ಮೂಲವ್ಯಾಧಿ' ಮತ್ತೆ ಉಲ್ಬಣಿಸಿದೆ.
ಹೌದು. ಅಧಿಕಾರ ಗ್ರಹಣದ ಅತಿ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್‌ನ ಒಗ್ಗಟ್ಟನ್ನು ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆ ಬಿಕ್ಕಟ್ಟು ಛಿದ್ರಗೊಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತೆರೆಮರೆಯಲ್ಲಿದ್ದುಕೊಂಡೆ ಮುಖ್ಯಮಂತ್ರಿ ಗಾಧಿಯ ಮೇಲೆ ಟವೆಲ್ ಎಸೆಯಲು ಸಿದ್ದವಾಗಿರುವ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ನಡುವಿನ ಮುನಿಸಿನಿಂದ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು ಕೆಪಿಸಿಸಿ ಪಡಸಾಲೆಯಿಂದ ಜಾರಿ ದೆಹಲಿಯಲ್ಲಿರುವ ಹೈಕಮಾಂಡ್ ಅಂಗಳಕ್ಕೆ ಬಂದು ಕುಳಿತಿದೆ. ಇದು ಉಳಿದೆಲ್ಲ ಪಕ್ಷಗಳಿಗೆ ಲೇವಡಿಯ ಅಸ್ತ್ರವಾಗಿ ಪರಿಣಮಿಸಿದೆ. ಅಷ್ಟು ಮಾತ್ರವಲ್ಲ ಈ ಮೂಲವ್ಯಾಧಿಗೆ ಸೂಕ್ತ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗದೇ ಹೈಕಮಾಂಡ್ ಕೂಡಾ ಪೇಚಿಗೆ ಸಿಲುಕಿದೆ.
ಕಳೆದ ಒಂದು ವಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಈಗ ರಾಷ್ಟ್ರವ್ಯಾಪಿ ಚರ್ಚೆಗೆ ಗುರಿಯಾಗುತ್ತಿದೆ. ಆದರೆ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಮುಖಂಡರ ದುರಾಸೆ ಈಗ ಹಠದ ಸ್ವರೂಪ ಪಡೆದಿರುವುದರಿಂದ ತೇಪೆ ಹಾಕುವ ಕೆಲಸವನ್ನೂ ಹೈಕಮಾಂಡ್ ಅಳೆದು-ತೂಗಿ ನಿಭಾಯಿಸುವಂತಾಗಿದೆ. ಎಲ್ಲರಿಗೂ ತಿಳಿದಿರುವಂತೆ ಇಲ್ಲಿ ಪರಸ್ಪರ ತೊಡೆ ತಟ್ಟಿ ನಿಂತಿರುವುದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಚುನಾವಣೆ ಘೋಷಣೆಯಾಗುವುದಕ್ಕೆ ಆರು ತಿಂಗಳು ಮುಂಚಿತವಾಗಿಯೇ ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಮುಳುಗಿರುವ ಈ ಇಬ್ಬರು ನಾಯಕರಿಗೆ ಈಗ ತಮ್ಮ ಪರವಾಗಿ ಇರುವವರಿಗೆ ಹೆಚ್ಚು ಟಿಕೆಟ್ ಕೊಡಿಸಬೇಕೆಂಬ ಒಣ ಪ್ರತಿಷ್ಠೆ ತಲೆಗೆ ಅಡರಿದೆ. ಹೀಗಾಗಿ ಇವರಿಬ್ಬರ ನಡುವೆ ಹೊಂದಾಣಿಕೆ ಎಂಬ ಶಬ್ದ ಕನಸಿನಲ್ಲಿಯೂ ಸುಳಿಯದ ಹಂತ ತಲುಪಿದೆ.
ಕಾಂಗ್ರೆಸ್ಸೇ ಈ ಬಾರಿ ಬಹುಮತ ಪಡೆಯುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಈ ಇಬ್ಬರು ನಾಯಕರಿಗೆ ಈಗ ಜಗಳವಿಲ್ಲದೇ ಅಭ್ಯರ್ಥಿ ಆಯ್ಕೆ ಅಖೈರುಗೊಳಿಸುವುದು ಬೇಕಿಲ್ಲ. ಫಲಿತಾಂಶ ಬಂದ ನಂತರ ನಡೆಯುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಭೆ ಗುಂಗಿ ಹುಳದಂತೆ ಕೊರೆಯುತ್ತಿದೆ. ತಮ್ಮ ಪರ ಹೆಚ್ಚು ಶಾಸಕರು ಮತ ಹಾಕುವ ಸ್ಥಿತಿ ನಿರ್ಮಾಣವಾಗಬೇಕೆಂಬ ಮಹಾತ್ವಾಕಾಂಕ್ಷೆ ಕಟ್ಟಿಕೊಂಡಿರುವ ಇವರಿಬ್ಬರು ಟಿಕೆಟ್ ಹಂಚುವ ಸಂದರ್ಭದಲ್ಲೇ ಈ ಉದ್ದೇಶ ಸಾಧನೆಗೆ ಬೇಕಾದ ವಾತಾವರಣ ನಿರ್ಮಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಹಾಗೆ ನೋಡಿದರೆ ಸಾಮಾಜಿಕ ನ್ಯಾಯದ ಪರ ಮಾತನಾಡುವ ಕಾಂಗ್ರೆಸ್ ಯಾವ ನಾಯಕರೂ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಅದನ್ನು ಪಾಲನೆ ಮಾಡಲು ಮುಂದಾಗುತ್ತಿಲ್ಲ. ಪ್ರತಿಯೊಬ್ಬರ ಮನಸ್ಸನ್ನೂ ಸ್ವಾರ್ಥ, ಈರ್ಷೆ ಮತ್ತು ಅತಿ ಮಹಾತ್ವಾಕಾಂಕ್ಷೆ ಆವರಿಸಿಕೊಂಡಿರುವುದರಿಂದ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಹಣ, ಜಾತಿ ಹಾಗೂ ಪ್ರಾದೇಶಿಕ ಭಾವನೆಗಳೇ ಪ್ರಧಾನ ಮಾನದಂಡವಾಗಿ ನಿಂತಿದೆ. ' ಬದನೆ ಕಾಯಿ ನಂಜು. ತಿನ್ನಬೇಡಿ ಎಂಬುದು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು, ಮನೆಯಲ್ಲಿ ಪ್ರತಿಯೊಂದು ಪದಾರ್ಥಕ್ಕೂ ಬದನೆ ಕಾಯಿ ಅನಿವಾರ್ಯ' ಎಂಬ ಸ್ಥಿತಿಯನ್ನು ನಿರ್ಮಿಸಿಕೊಂಡಿದ್ದಾರೆ.
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲಿ ಗಟ್ಟಿ ಬೆಂಬಲಿಗರ ಪಡೆ ಅಗತ್ಯ ಎಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಚೆನ್ನಾಗಿ ಗೊತ್ತು. ಈ ಹಿಂದೆ ಜನತಾ ದಳದಲ್ಲಿ ಇದ್ದ ಸಿದ್ದರಾಮಯ್ಯನವರಿಗೆ ಒಮ್ಮೆ ಶಾಸಕಾಂಗ ಪಕ್ಷದಲ್ಲಿ ಹೆಚ್ಚು ಬೆಂಬಲ ವ್ಯಕ್ತವಾಗಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದು ಅವರಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಅಂಥಹ ಯಾವುದೇ ಅವಕಾಶವನ್ನು ಕೈ ಚೆಲ್ಲಬಾರದು ಎಂಬುದು ಅವರ ಎಣಿಕೆ. ಆದರೆ ವಲಸಿಗ ಸಿದ್ದರಾಮಯ್ಯನವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಮೂಲ ಕಾಂಗ್ರೆಸ್ ಮುಖಂಡರು ಪ್ರತಿ ತಂತ್ರ ಹೆಣೆಯುವ ಸಂದರ್ಭದಲ್ಲಿ ಹಿಡಿದ ಪಟ್ಟನ್ನು ಕಿಂಚಿತ್ತು ಸಡಿಲಿಸುತ್ತಿಲ್ಲ. ಸೋಲೋ- ಗೆಲುವೋ ಸಿದ್ದರಾಮಯ್ಯ ಪರವಾಗಿರುವವರಿಗೆ ಹೆಚ್ಚು ಟಿಕೆಟ್ ಲಭಿಸಕೂಡದು ಎಂದು ಲಾಬಿ ನಡೆಸುತ್ತಿದ್ದಾರೆ.
ತಾರಕಕ್ಕೆ ಏರಿದ ಈ ಜಗಳದಿಂದ ಬೇಸತ್ತಿರುವ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಮೇಲಿಟ್ಟಿದ್ದ ವಿಶ್ವಾಸವನ್ನು ನಿಧಾನವಾಗಿ ಕಳಚಿಕೊಳ್ಳುತ್ತಿದೆ. ಆದರೆ ಈ ಮಧ್ಯದಲ್ಲಿ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ರಾಜ್ಯದ ಎರಡನೇ ಪ್ರಬಲ ಸಮುದಾಯವಾದ ಒಕ್ಕಲಿಗ ನಾಯಕರ ಲಾಬಿ ದೆಹಲಿ ಮಟ್ಟದಲ್ಲಿ ಜೋರಾಗಿದೆ. ಒಕ್ಕಲಿಗ ಮುಖಂಡರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲೇಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಗುಟುರು ಹಾಕಿ ಬಂದ ಬೆನ್ನಲ್ಲೇ ವಿದೇಶಾಂಗ ಇಲಾಖೆ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ರಂಗಪ್ರವೇಶವೂ ಆಗಿದೆ. ಒಕ್ಕಲಿಗ ಮುಖಂಡರೂ ಸೇರಿದಂತೆ ತಮ್ಮ 54 ಬೆಂಬಲಿಗರ ಪಟ್ಟಿಯನ್ನು ಖುದ್ದು ಸೋನಿಯಾ ಗಾಂಧಿ ಅವರಿಗೆ ತಲುಪಿಸಿರುವ ಕೃಷ್ಣ ಮೊದಲ ಹಂತದಲ್ಲೇ 27 ಜನರಿಗೆ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ಬೇರೆಯದೇ ಆದ ಸಂದೇಶವನ್ನು ರವಾನಿಸುತ್ತಿದ್ದು, ಕಳೆದ ಕೆಲ ದಿನಗಳಿಂದ ನೇಪಥ್ಯಕ್ಕೆ ಸರಿದಿದ್ದ ಕೃಷ್ಣ ಅವರನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಿದೆ.  
ವಾಸ್ತವವಾಗಿ ಕಾಂಗ್ರೆಸ್‌ನ ಮತಬೇರುಗಳನ್ನು ಗಟ್ಟಿಗೊಳಿಸುವವರು ಆ ಪಕ್ಷದ ಬ್ಲಾಕ್ ಹಾಗೂ ಜಿಲ್ಲಾಮಟ್ಟದ ನಾಯಕರು. ಕ್ಷೇತ್ರದ ತುಂಬಾ ಓಡಾಡಿಕೊಂಡು, ಜನರ ಕಷ್ಟಕ್ಕೆ ಕೈಲಾದ ಮಟ್ಟಿಗೆ ಸ್ಪಂದಿಸುತ್ತಾ, ಮುಂದೊಮ್ಮೆ ಪಕ್ಷ ನಮ್ಮ ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿರುವ ಅದೆಷ್ಟೋ ಪಕ್ಷ ನಿಷ್ಠ ಸ್ಥಳೀಯ ಮುಖಂಡರನ್ನು ಸೌಜನ್ಯಕ್ಕೂ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮಾತನಾಡಿಸುವ ಗೋಜಿಗೆ ಮುಖಂಡರು ಹೋಗಿಲ್ಲ. ಈ ಬಾರಿ ಆರು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಗಳ ಪಟ್ಟಿ ಘೋಷಿಸುತ್ತೇವೆ ಎಂದು ಸಿಕ್ಕಸಿಕ್ಕಲ್ಲಿ ಹೇಳಿಕೆ ನೀಡಿದ್ದ ಡಾ.ಪರಮೇಶ್ವರ್, ಮಾತು ನಡೆಸಿಕೊಡುವ ವಿಚಾರದಲ್ಲಿ ಮಾತ್ರ ಎಡವಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರವನ್ನು ಸಂಪೂರ್ಣವಾಗಿ ಜಿಲ್ಲಾ ಮುಖಂಡರಿಗೆ ನೀಡುತ್ತೇವೆ ಎಂದು ತಲೆ ಮೇಲೆ 'ಕೈ' ಇಟ್ಟು ಕಳುಹಿಸಿದ್ದ ಅವರು ಕಾರ್ಯಕರ್ತರಲ್ಲಿ ನಂಬಿಕೆ ಬರುವ ರೀತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ ಇಬ್ಬರು ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ತರಿಸಿಕೊಂಡಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಹೆಸರು ಅಖೈರುಗೊಳಿಸುವ ಸಮಯ ಬಂದಾಗ ಈ ಪಟ್ಟಿಯನ್ನು ಕೆಪಿಸಿಸಿಯ ತಿಜೋರಿಯಲ್ಲಿ ಬಚ್ಚಿಟ್ಟು, ತಮ್ಮದೇ ಲೆಕ್ಕಾಚಾರದ ಚೀಟಿಯೊಂದಿಗೆ ದೆಹಲಿಗೆ ಹಾರಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರೂ ಹೊರತಲ್ಲ. ಹೀಗಾಗಿ ಹತ್ತಾರು ವರ್ಷಗಳಿಂದ ಪಕ್ಷದ ಬ್ಯಾನರ್ ಕಟ್ಟಿದ ಸ್ಥಳೀಯ ನಾಯಕರ ನಿಷ್ಠೆಯನ್ನು ನಿರ್ದಯವಾಗಿ ಹತ್ತಿಕ್ಕಲಾಗಿದೆ. ಅದಕ್ಕೆ ಬದಲಾಗಿ ವ್ಯಕ್ತಿನಿಷ್ಠೆಯ ಆರಾಧನೆ ನಡೆಯುತ್ತಿದೆ. ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಬೇಕೆಂಬ ಹಠದಿಂದ ದೃಷ್ಟಿ ದೋಷಕ್ಕೆ ತುತ್ತಾಗಿರುವ ಮುಖಂಡರಿಗೆ ಗೆಲ್ಲುವವರ್ಯಾರು, ಸೋಲುವವರ್ಯಾರು ? ಎಂಬ ಸತ್ಯ ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಕೋಟಿ ಮೌಲ್ಯದ ಸೂಟ್‌ಕೇಸ್‌ಗಳು ಮಾತನಾಡುತ್ತಿವೆ. ಕೆಲವು ಕ್ಷೇತ್ರಗಳ ಟಿಕೆಟ್ 5ರಿಂದ 8 ಕೋಟಿ ರು.ವರೆಗೆ ಬಿಕರಿಯಾಗಿವೆ ಎಂಬ ಆರೋಪಗಳೂ ಇವೆ. ಟಿಕೆಟ್ ಕೈ ತಪ್ಪಿದವರು ಇಂಥ ಆರೋಪಗಳನ್ನು ಹರಿಯ ಬಿಟ್ಟಿರಲೂಬಹುದು. ಆದರೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇದನ್ನು ಸುಳ್ಳು ಎಂದು ಪಕ್ಕಕ್ಕೆ ಇಡುವುದೂ ಅಸಾಧ್ಯ. ಏಕೆಂದರೆ ಕಳೆದ ವರ್ಷ ನಡೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ನಡೆದ ಅಡ್ಡಮತದಾನ ಆ ಪಕ್ಷದ ಮೊದಲನೇ ಅಭ್ಯರ್ಥಿಯನ್ನು ಸೋಲಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಡೆಸಿದ ಆಂತರಿಕ ತನಿಖೆ ಫಲಿತಾಂಶ ಈಗ ಅನಾವರಣಗೊಳ್ಳುತ್ತಿದೆ. ಅಡ್ಡಮತದಾನ ನಡೆಸಿದ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ. ಅದೇನೇ ಇರಲಿ ವಿಧಾನಸಭೆ ಚುನಾವಣೆ ಟಿಕೆಟ್‌ನ್ನು ದುಡ್ಡಿಗೆ ಮಾರಾಟ ಮಾಡಿದ್ದೇ ಆದರೆ ಅದು ಪ್ರಜಾತಂತ್ರಕ್ಕೆ ಮಾಡುವ ಬಲುದೊಡ್ಡ ಮೋಸ. ಕಳೆದ ಐದು ವರ್ಷದಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಬೊಬ್ಬೆಹಾಕುತ್ತಾ, ಅದರ ಆಶ್ರಯದಲ್ಲಿ ಅಧಿಕಾರದ ಕನಸು ಕಟ್ಟುತ್ತಿರುವ ಕಾಂಗ್ರೆಸ್ ಮುಖಂಡರು, ಚುನಾವಣೆಗೆ ಮುನ್ನ ಟಿಕೆಟ್ ಮಾರಿಕೊಂಡರೆ, ಮುಂದೆ ಆಯ್ಕೆಯಾಗಿ ಬರುವ ಶಾಸಕರಿಂದ ಇನ್ಯಾವ ಮಟ್ಟದ ಶಿಷ್ಟಾಚಾರ ನಿರೀಕ್ಷಿಸಲು ಸಾಧ್ಯ ? ಈಗ ಕಾಂಗ್ರೆಸ್ ಟಿಕೆಟ್ ಕೊಳ್ಳಲು ಲಾಬಿ ನಡೆಸುತ್ತಿರುವವರ ಪೈಕಿ ರಿಯಲ್ ಎಸ್ಟೇಟ್ ಕುಳಗಳೇ ಹೆಚ್ಚು. ಇಂಥ ವ್ಯಕ್ತಿಗಳು ಹಾಗೂ ಅವರು ಚೆಲ್ಲುವ ದುಡ್ಡನ್ನು ಆಧಾರವಾಗಿಟ್ಟುಕೊಂಡು ಒಂದೊಮ್ಮೆ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಭ್ರಷ್ಟಾಚಾರದ ಭೂತ ಬೃಹದಾಕಾರವಾಗಿ ರಾಜ್ಯವನ್ನು ಕಾಡಬಹುದೇ ಹೊರತು ಲಗಾಮು ತಪ್ಪಿಸಿಕೊಂಡು ಮನಬಂದಂತೆ ಓಡುತ್ತಿರುವ ದುರಾಡಳಿತದ ಕುದುರೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ.
ಆದರೆ ಕಾಂಗ್ರೆಸ್ ಮುಖಂಡರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆಪಿಸಿಸಿ ಪಟ್ಟಿ ಮೇಲೆ ಭರವಸೆ ಇಲ್ಲವೆಂದು, ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ, ಅದರ ಮೇಲೊಂದು ಚುನಾವಣಾ ಪರಿಶೀಲನಾ ಸಮಿತಿ, ಅದರ ಮೇಲೆ ನಿಗಾ ವಹಿಸುವುದಕ್ಕೆ ಕೇಂದ್ರೀಯ ಚುನಾವಣಾ ಸಮಿತಿ. ಅಲ್ಲೂ ಪರಿಹಾರ ಸಿಕ್ಕದೇ ಇರುವುದರಿಂದ ಈಗ ಖುದ್ದು ಸೋನಿಯಾ ಗಾಂಧಿಯವರಿಂದಲೇ ರಾಜಿ ಪಂಚಾಯಿತಿ ! ಇಷ್ಟಾದರೂ ಅಂತಿಮ ಪಟ್ಟಿ ಇನ್ನು ಸಿದ್ಧವಾಗಿಲ್ಲ. ಏಪ್ರಿಲ್ ಮೊದಲ ವಾರ ಪ್ರಕಟವಾಗುವ ಸಾಧ್ಯತೆ ಇದೆಯಾದರೂ, ಯಾವುದೇ ಕ್ಷಣದಲ್ಲಿ ಮತ್ತೊಂದು ಅಸಮಾಧಾನದ ಬಾಂಬ್ ಸ್ಫೋಟಗೊಳ್ಳಬಹುದು. ಸಾಮಾಜಿಕ ನ್ಯಾಯ, ಮಹಿಳಾ ಮೀಸಲು ವಲಸಿಗರು ಮತ್ತು ಮೂಲನಿವಾಸಿಗಳ ಸಮಸ್ಯೆ, ಹೊಸದಾಗಿ ಪಕ್ಷ ಸೇರುವವರಿಗೆ ಟಿಕೆಟ್ ನೀಡುವಿಕೆ ಸೇರಿದಂತೆ ಸಣ್ಣ ಸಣ್ಣ ವಿಚಾರಗಳಲ್ಲೂ ಗೊಂದಲ ಪರಿಹಾರವಾಗಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಕಾಂಗ್ರೆಸ್ ಬಿ ಫಾರ್ಮ್ ಹಂಚಿಕೆ ಕಾರ್ಯ ನಡೆದರೂ ಆಶ್ಚರ್ಯವಿಲ್ಲ. ಇದಕ್ಕೆಲ್ಲ ಕಾರಣ ಎಂಥ ದುರ್ಬರ ಪರಿಸ್ಥಿತಿ ಎದುರಾದರೂ ಜನರಿಗೆ ಕಾಂಗ್ರೆಸ್ ಆಯ್ಕೆ ಅನಿವಾರ್ಯ ಎಂಬ ಭ್ರಮೆ. ಇದು ಪ್ರತಿಯೊಬ್ಬ ಮುಖಂಡನನ್ನು ಅತಿ ಆತ್ಮವಿಶ್ವಾಸದ ಪರ್ವತದ ಮೇಲೆ ತಂದು ನಿಲ್ಲಿಸಿದೆ. ಆದರೆ ನೆನಪಿರಲಿ ಕೊಂಚ ಎಡವಿದರೆ ಬೀಳುವುದು ಅಷ್ಟೇ ಆಳದ ಪ್ರಪಾತದಲ್ಲಿ..!
ಲಗೋರಿ: ಉನ್ನತ ಶಿಖರದ ಪಕ್ಕದಲ್ಲಿ ಅಷ್ಟೇ ಆಳದ ಪ್ರಪಾತವೂ ಇರುತ್ತದೆ.

-ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com