ಇನ್ನಾದರೂ ತುಂಬೀತೆ ಇವರ ಆಸೆಯ ಮಡಕೆ...?

ಅಂತೂ ಇಂತೂ ಮತದಾನ ಮುಗಿಯಿತು. ಇದೇ 8 ರಂದು ಹೊರಬೀಳಲಿರುವ...
Updated on: 

ಅಂತೂ ಇಂತೂ ಮತದಾನ ಮುಗಿಯಿತು. ಇದೇ 8 ರಂದು ಹೊರಬೀಳಲಿರುವ ಫಲಿತಾಂಶ ನಾನಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ನಾಯಕರ ಎದೆಬಡಿತವನ್ನು ನಗಾರಿ ಮಾಡಿದೆ. ಎಲ್ಲರಿಗೂ ತಾವೇ ಅಧಿಕಾರಕ್ಕೆ ಬರುವ ವಿಶ್ವಾಸ.
ಹಾಗೆ ನೋಡಿದರೆ ಚುನಾವಣೆ ಕಣಕ್ಕೆ ಇಳಿಯುವ ಪ್ರತಿಯೊಬ್ಬರಿಗೂ ಗೆಲುವು ತಮ್ಮದೇ ಎಂಬ ವಿಶ್ವಾಸ ಇರುತ್ತದೆ. ಅವರು ಪ್ರಮುಖ ರಾಜಕೀಯ ಪಕ್ಷದ ಅಭ್ಯರ್ಥಿ ಇರಬಹುದು. ಪಕ್ಷೇತರ ಅಭ್ಯರ್ಥಿಯೂ ಆಗಿರಬಹುದು. ಆ ಬಯಕೆ ಮತ್ತು ವಿಶ್ವಾಸವೇ ಅವರನ್ನು ಕಣಕ್ಕೆ ಧುಮುಕಿಸಿರುತ್ತದೆ. ಅದರೆ ಗೆಲುವು ಮಾತ್ರ ಒಬ್ಬರದೇ ಎಂಬುದು ವಾಸ್ತವ.
ಚುನಾವಣೆ ಪ್ರಕ್ರಿಯೆ ಶುರುವಾದ ಕ್ಷಣದಿಂದ ಮತದಾನ ಮುಗಿಯುವವರೆಗೂ ನಾಯಕರು ಹಾಗೂ ಅಭ್ಯರ್ಥಿಗಳು ವಿರಮಿಸಿಲ್ಲ. ಅದು ಸಹಜ ಕೂಡ. ಅಭ್ಯರ್ಥಿಗಳು ತಮ್ಮ-ತಮ್ಮ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರೆ, ನಾಯಕರು ಊರೂರು ತಿರುಗಿ ಬೆವರು ಬಸಿದಿದ್ದಾರೆ. ನಾಯಕ ಮತ್ತು ಅಭ್ಯರ್ಥಿ ಎರಡೂ ಆದವರ ಕತೆ ಕೇಳುವುದೇ ಬೇಡ. ಚುನಾವಣೆ ಬೇರೆ ಒಂದೇ ಹಂತದಲ್ಲಿ ನಿಗದಿ ಆದ್ದರಿಂದ ಉಸಿರಾಡಲು ಲೆಕ್ಕಾಚಾರ ಹಾಕಬೇಕಾದ ಸ್ಥಿತಿ. ಇರುವ ಇತಿ-ಮಿತಿಯಲ್ಲೇ ತಮ್ಮ-ತಮ್ಮ ಪಕ್ಷ ದಡ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಅದರ ಪ್ರತಿಫಲ ಮತಬುಟ್ಟಿಯಲ್ಲಿದೆ. ಮೇ 8 ಕ್ಕೆ ತೆರೆದುಕೊಳ್ಳಲಿದೆ.
ಆ ವಿಷಯ ಪಕ್ಕಕ್ಕಿರಲಿ. ಈ ಚುನಾವಣೆ ಸಂದರ್ಭದಲ್ಲಿ ಹಿರಿಯ ರಾಜಕಾರಣಿಗಳು ಹೇಗೆ ವರ್ತಿಸಿದರು ಎಂಬುದರ ಬಗ್ಗೆ ಅವಲೋಕಿಸುವ ಸಂದರ್ಭ ದಿಟವಾಗಿಯೂ ಬಂದಿದೆ. ಪಕ್ಷ ಯಾವುದೇ ಇರಬಹುದು. ಅಧಿಕಾರ ರಾಜಕೀಯದಲ್ಲಿ ಒಂದು ಹಂತ ದಾಟಿದ ನಂತರ, ಉನ್ನತ ಹುದ್ದೆಗಳನ್ನು ಅಲಂಕರಿಸಿದ ನಂತರ, ರಾಜಕೀಯದಲ್ಲಿ ನಿಗದಿ ಆಗದ ವಯೋವುತಿಯನ್ನು ಆತ್ಮಸಾಕ್ಷಿಯಿಂದ ಅಳೆದುಕೊಳ್ಳುವ ಹಂತ ತಲುಪಿದ ನಂತರ ಆ ಹಿರಿಯರ ಅನುಭವ ತಾವು ಪ್ರತಿನಿಧಿಸುವ ಪಕ್ಷಕ್ಕೆ ಸೀಮಿತವಾಗದೆ, ರಾಜಕೀಯ ರಂಗದ ಉನ್ನತಿಗೆ ವಿನಿಯೋಗ ಆಗಬಾರದೇಕೆ ಎಂಬುದನ್ನು ಚಿಂತಿಸುವ ಸಕಾಲ ಇದಾಗಿದೆ.
ಮಾಜಿ ಪ್ರಧಾನಿ, ಜೆಡಿಎಸ್ ಮುಖಂಡ ದೇವೇಗೌಡರಾಗಿರಬಹುದು, ವಿದೇಶಾಂಗ ವ್ಯವಹಾರಗಳ ಸಚಿವ, ರಾಜ್ಯಪಾಲ, ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ ಕಾಂಗ್ರೆಸ್ ನಾಯಕ ಎಸ್.ಎಂ. ಕೃಷ್ಣ ಇರಬಹುದು, ಒಂದು ಕಾಲದಲ್ಲಿ ಮುಖ್ಯಮಂತ್ರಿ ಪದವಿ ಬಾಗಿಲಲ್ಲಿ ಮುಗ್ಗರಿಸಿ ಬಿದ್ದು, ಇದೀಗ ವಿಧಾನ ಪರಿಷತ್ ಸದಸ್ಯರಾಗಲು ತೋಬಾ-ತೋಬಾ ಎಂದ ಬಿಜೆಪಿ ನಾಯಕ ಬಿ.ಬಿ. ಶಿವಪ್ಪ ಆಗಿರಬಹುದು, ಜಾತಿ ಆಧಾರದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬಯಸಿ ನಿರಾಶರಾದ ಶ್ಯಾಮನೂರು ಶಿವಶಂಕರಪ್ಪ ಇರಬಹುದು - ಇವರೆಲ್ಲರೂ ರಾಜಕೀಯ ರಂಗದ ಹಿರಿಯ ಚೇತನಗಳು ಹಾಗೂ ಹಿರಿತನದ ಪ್ರತೀಕಗಳು. ಇವರೆಲ್ಲರೂ ವಯಸ್ಸಿನಲ್ಲಿ ಎಂಬತ್ತು ದಾಟಿದ್ದಾರೆ. ರಾಜಕೀಯ ಅನುಭವದಲ್ಲಿ ಅವರಿಗೆ ಅವರೇ ಸಾಟಿ. ಎಲ್ಲರಲ್ಲೂ ಪಕ್ಷಾತೀತವಾಗಿ ಶ್ಲಾಘಿಸುವ ಗುಣಗಳಿವೆ. ಅದೇ ರೀತಿ ದ್ವೇಷಾಸೂಯೆಗೆ ಕಾರಣವಾಗುವ ಅವಗುಣಗಳೂ ಇವೆ. ರಾಜಕೀಯದಿಂದ ಅಪಾರ ಅನುಭವ ಪಡೆದಿದ್ದಾರೆ. ರಾಜಕೀಯ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಆದರೆ ಇವರ ಅನುಭವ, ಆಸೆ-ಆಕಾಂಕ್ಷೆ ಇನ್ನೂ ಪಕ್ಷಾತೀತವಾಗಿಲ್ಲ. ಇವರಿನ್ನೂ ಪಕ್ಷಾತೀತ ನಾಯಕರಾಗಿ ಬೆಳೆದಿಲ್ಲ. ತಾವು, ತಮ್ಮವರು, ತಮ್ಮ ಪಕ್ಷ ಎಂಬ ಮಿತಿ ದಾಟಿಲ್ಲ. ಅವರ ಪರಿಪಕ್ವತನ ರಾಜಕೀಯ ರಂಗದ ಉನ್ನತೀಕರಣಕ್ಕೆ ವಿಸ್ತರಣೆ ಆಗಿಲ್ಲ. ಅವರವರ ಪಕ್ಷದೊಳಗೇ ಗಿರಕಿ ಹೊಡೆಯುತ್ತಿರುವ ಹಿರಿತನವನ್ನು ಬಳಸಿಕೊಳ್ಳಲು ರಾಜಕೀಯ ಪ್ರಪಂಚ ಎದುರು ನೋಡುತ್ತಿದೆ. ಆದರೆ ಇದು ಅವರ ಕಣ್ಣಿಗೆ ಬಿದ್ದಿಲ್ಲ. ಇದೇ ಇವತ್ತು ಇವರ ಹಿರಿತನಕ್ಕೆ ಎದಾರಾಗಿರುವ ಸವಾಲು.
ಆಸೆ ಮನುಷ್ಯನ ಸಹಜ ಗುಣ. ಹುಟ್ಟಿದಂದಿನಿಂದ ಸಾಯುವ ತನಕ ವೈಭವದ ನಿರೀಕ್ಷೆ ಇಟ್ಟುಕೊಂಡಿರುತ್ತಾನೆ. ಆ ನಿರೀಕ್ಷೆಯೇ ಅವನನ್ನು ಜೀವನಪ್ರೀತಿಯ ಜತೆಗೆ ಮುನ್ನಡೆಸುತ್ತಿರುತ್ತದೆ. ಆದರೆ ಎಲ್ಲರ ಜೀವನದಲ್ಲೂ ಒಂದು ಪರ್ವಕಾಲ ಎಂಬುದು ಇರುತ್ತದೆ. ಆದರೆ ಇಡೀ ಜೀವನದುದ್ದಕ್ಕೂ ಆ ಪರ್ವಕಾಲದ ನಿರೀಕ್ಷೆ ಕಷ್ಟ ಸಾಧ್ಯ. ಕೊನೆಯವರೆಗೂ ಬೆಳಗಬೇಕು, ಮಿಂಚಬೇಕು ಎನ್ನುವುದು ಆಸೆಯ ಗಡಿ ದಾಟಿದಂತೆ ಗೋಚರಿಸುತ್ತದೆ. ಹೀಗಾಗಿ ದೇವೇಗೌಡರಿರಲಿ, ಎಸ್.ಎಂ.ಕೃಷ್ಣ ಅವರಾಗಲಿ, ಶಿವಪ್ಪ ಅವರಾಗಲಿ, ಶಿವಶಂಕರಪ್ಪನವರಿರಲಿ ತಮ್ಮ ಹಿರಿತನವನ್ನು ಅಧಿಕಾರ ರಾಜಕಾರಣದ ಬಯಕೆಯಿಂದ ನವೀಕರಿಸಿಕೊಳ್ಳದೇ ಪಕ್ಷಾತೀತ ರಾಜಕೀಯ ರಂಗದ ಬೆಳಗುವಿಕೆಗೆ ಬಳಸಬೇಕು ಎಂಬುದು ಜನರ ಅಭೀಪ್ಸೆ. ನಾಯಕರ ಮನಸ್ಸುಗಳು ಈ ದಿಕ್ಕಿನಲ್ಲೂ ಮಾಗಬೇಕು.
ದೇವೇಗೌಡರಿಗೆ ಇನ್ನೊಮ್ಮೆ ಪ್ರಧಾನಿ ಆಗಬೇಕು ಎಂಬ ಮಹದಾಸೆ ಇದೆ. ಅದೇ ರೀತಿ ಕೃಷ್ಣ ಅವರಿಗೂ ತಮ್ಮ ಮುತ್ಸದ್ದಿತನಕ್ಕೆ ಅನುಗುಣವಾದ ಇನ್ನೂ ಹಿರಿಯ ಹುದ್ದೆ ಸಿಗಬೇಕು ಎಂಬ ಹಂಬಲ ಇದೆ. ಶಿವಪ್ಪ ಮುಖ್ಯಮಂತ್ರಿ ಪದವಿ ಜಪಿಸಿದವರು. ಶಿವಶಂಕರಪ್ಪ ಜಪಿಸುತ್ತಿರುವವರು. ಇರಲಿ, ಆಸೆ ಪಡುವುದು ತಪ್ಪಲ್ಲ. ಆದರೆ ಆ ಆಸೆಯೊಳಗೇ ಹಿರಿತನ ಕರಗಿ ಪೋಲಾಗಬಾರದು. ವಾಸ್ತವವನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಮನಸ್ಥಿತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು.
ಕೇಂದ್ರ ಸಚಿವ ಸ್ಥಾನದಿಂದ ನಿಸ್ತೇಜ ಮುಖಭಾವದೊಂದಿಗೆ ಕರ್ನಾಟಕಕ್ಕೆ ವಾಪಸಾದ ಎಸ್.ಎಂ. ಕೃಷ್ಣ ಅವರು ಚುನಾವಣೆ ಕ್ಷಣದಲ್ಲಿ ತಮ್ಮ ಅನುಭವನ್ನು ಪ್ರದೇಶ ಕಾಂಗ್ರೆಸ್‌ಗೆ ಸುರಿಯಲು ಬಯಸಿದರು. ಅದಕ್ಕೆ ತಕ್ಕ ಹುದ್ದೆಯೂ ಸಿಗಬಹುದೆಂದು ನಿರೀಕ್ಷಿಸಿದರು. ಆದರೆ ಅವರೇ ಬೆಳೆಸಿದ ಒಂದಷ್ಟು ನಾಯಕರೇ ಅಡ್ಡಗಾಲಾದರು. ಇಷ್ಟಕ್ಕೇ ನಿಲ್ಲಲಿಲ್ಲ, ಕೃಷ್ಣ ಅವರ ಸಂಕಷ್ಟ. ತಮ್ಮ ತವರು ಜಿಲ್ಲೆ ಮಂಡ್ಯದಲ್ಲಿ ಒಬ್ಬರೇ ಒಬ್ಬ ಬೆಂಬಲಿಗರಿಗೂ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸಲು ಆಗಲಿಲ್ಲ. ಇಲ್ಲಿ ಅಡ್ಡಗಾಲಾದದ್ದು 'ನಟ, ನಾಯಕ' ಅಂಬರೀಷ್. ಆ ಮೂಲಕ ಕೃಷ್ಣ ಮತ್ತು ಅಂಬರೀಷ್ ನಡುವಣ ಪ್ರತಿಷ್ಠೆ ಸಂಘರ್ಷ ಆಂತರಿಕ ಹಂತ ದಾಟಿ ಬಹಿರಂಗಕ್ಕೂ ಬಂತು. ಸದಾ ಮೌನವೇ ಮಾತು ಎಂಬಂತಿದ್ದ ಕೃಷ್ಣ ಪತ್ರಿಕಾಗೋಷ್ಠಿಯಲ್ಲೇ ಅಂಬರೀಷ್ ವಿರುದ್ಧ ಪರೋಕ್ಷ ಕಿಡಿ ಕಾರಿದರು. ಪಕ್ಷದ ವರಿಷ್ಠ ರಾಹುಲ್‌ಗಾಂಧಿ ಸಮ್ಮುಖದಲ್ಲೂ ಇವರಿಬ್ಬರ ಜಗಳ ಜಗಜ್ಜಾಹಿರಾಯಿತು.
ಎಂತೆಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ, ನಿಸ್ಪೃಹ, ಸಂಸ್ಕಾರವಂತ, ಘನತೆಯುಕ್ತ ರಾಜಕಾರಣಿ ಎನಿಸಿಕೊಂಡಿದ್ದಕೃಷ್ಣ ಅವರಿಗೆ ಇದೆಲ್ಲ ಬೇಕಿತ್ತೇ? ಅವರ ಅನುಭವ ಏನು? ಪ್ರತಿಪಾದಿಸಿದ ವಿಚಾರ ಏನು? 'ನೊಣ ತಿಂದು ಜಾತಿ ಕೆಡಿಸಿಕೊಂಡಂತೆ' ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಸಲ್ಲದ, ಅನಪೇಕ್ಷಿತ ಅಪಾದನೆಗೆ ಗುರಿಯಾದರು. ಮಂಡ್ಯದಲ್ಲಿ ಅಂಬರೀಷ್ ಪಡೆ ಸೋಲಿಸಲು ಕೃಷ್ಣ ಬೆಂಬಲಿಗರ ಸಂಚು ಂಬುದೇ ಈ ಆಪಾದನೆಯ ತಿರುಳು. ಕೇಂದ್ರದಿಂದ ಮರಳಿದ ನಂತರ ವಾಸ್ತವ ಒಪ್ಪಿಕೊಂಡು, ತಾವು ಅತಿಯಾಗಿ ಪ್ರೀತಿಸುನ ಮೌನಕ್ಕೆ ಶರಣಾಗಿದ್ದರೆ, ಚುನಾವಣೆ ನಂತರ ತಮ್ಮ ಅನುಭವವನ್ನು ಪಕ್ಷವನ್ನು ಮೀರಿ, ರಾಜಕೀಯ ರಂಗದ ಬೆಳವಣಿಗೆಗೆ ಮುಡಿಪಾಗಿಟ್ಟಿದ್ದರೆ ಕೃಷ್ಣ ಅವರು ಮತ್ತಷ್ಟು ದೊಡ್ಡವರಾಗುತ್ತಿರಲಿಲ್ಲವೇ?
ಇನ್ನು ತಂತ್ರ-ಪ್ರತಿತಂತ್ರ ಹೆಣೆಯುವುದರಲ್ಲಿ ನಿಸ್ಸೀಮರಾದ ದೇವೇಗೌಡರು ಸವಾಲು ಮತ್ತು ಸೇಡಿನ ರಾಜಕಾರಣಕ್ಕೆ ಹೆಸರಾದವರು. ವಿಧಾನ ಸಭೆ ಪ್ರತಿಪಕ್ಷ ನಾಯಕನ ಸ್ಥಾನದಿಂದ ಪ್ರಧಾನಿ ಹುದ್ದೆ ಸೇರಿದಂತೆ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದವರು. ತಮ್ಮ ರಾಜಕೀಯ ಜೀವನದಲ್ಲಿ ಅವರು ಸಾಕಷ್ಟು ಜನರನ್ನು ಬೆಳೆಸಿದ್ದಾರೆ. ಅದೇ ರೀತಿ ಸಾಕಷ್ಟು ಜನರನ್ನು ಮಲಗಿಸಿದ್ದಾರೆ. ರಾಜಕಾರಣದ ಎಲ್ಲ ತಂತ್ರಗಳನ್ನು ಕರಗತ ಮಾಡಿಕೊಂಡಿರುವುದಷ್ಟೇ ಅಲ್ಲ ತಾವೇ ಒಂದಷ್ಟು ಪಟ್ಟುಗಳನ್ನು ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ನಿಂದ ಹಿಡಿದು ಬಿಜೆಪಿವರೆಗಿನ ಎಲ್ಲ ಪಕ್ಷಗಳನ್ನು ಅಪ್ಪಿಕೊಳ್ಳಬಲ್ಲರು. ತತ್ವ- ಸಿದ್ಧಾಂತಗಳಿಗಿಂತ ಅಧಿಕಾರ ರಾಜಕಾರಣ ಮಿಗಿಲೆಂದು ಭಾವಿಸಿದವರು. ಇದೆಲ್ಲ ರಾಜಕಾರಣದಲ್ಲಿ ಇದ್ದದ್ದೆ. ಏಕೆಂದರೆ ಇಲ್ಲಿ ಯಾರೂ ಶೇಂಗಾ ತಿನ್ನುವುದಕ್ಕೆ ರಾಜಕಾರಣ ಮಾಡುವುದಿಲ್ಲ. ಅಧಿಕಾರದ ಎಲ್ಲ ಮಜಲುಗಳನ್ನು ಉಂಡು, ಅನುಭವದಲ್ಲಿ ಪರಿಪಕ್ವತೆ ಪಡೆದು ರಾಜಕೀಯ ಮಹರ್ಷಿ ಸ್ಥಾನದಲ್ಲಿರುವ ಅವರ ಅನುಭವ ಪಕ್ಷ, ಕುಟುಂಬ, ಸ್ವಜನಪಕ್ಷಪಾತಕ್ಕೆ ಸೀಮಿತಆಗಬಾರದು. ಅದೆಲ್ಲವನ್ನು ದಾಟಿ ರಾಜಕೀಯ ಕ್ಷೇತ್ರದ ಶ್ರೋಯೋಭಿವೃದ್ಧಿಗೆ ತಮ್ಮ ಅನುಭವವನ್ನು ಧಾರೆ ಎರೆಯಬೇಕಾದ ಸಮಯ ಬಂದಿದೆ.
ಇನ್ನು ಕಾಂಗ್ರೆಸ್ ಮುಖಂಡ ಶ್ಯಾಮನೂರು ಶಿವಶಂಕರಪ್ಪ, ಕಾಂಗ್ರೆಸ್‌ನ ಖಾಯಂ ಕೋಶಾಧಿಕಾರಿಯಂತಿದ್ದವರು. ಪ್ರಯತ್ನ ಮಾಡಬೇಕಾದ ಕಾಲದಲ್ಲಿ ಶ್ರಮಿಸಿದ್ದರೆ ಅವರು ಏನು ಬೇಕಾದರೂ ಸಾಧಿಸಬಹುದಿತ್ತು. ಆದರೆ ರಾಜಕೀಯ ಜೀವನದ 'ಇಳಿ ಸಂಜೆ'ಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾತಿ ಆಧಾರದ ಮೇಲೆ ಲಾಬಿ ನಡೆಸಿದರು.ಈ ಬಿಸಿಯ ಶಮನಕ್ಕೆ ದೆಹಲಿ ನಾಯಕರು ತಿಂಗಳುಗಟ್ಟಲೆ ಒದ್ದಾಡಿದರು. ಟಿಕೆಟ್ ಹಂಚಿಕೆ ಸಂದರ್ಭದಲ್ಲೂ ಈ ಗೊಂದಲ ಮುಂದುವರಿದಿತ್ತು. ಶ್ಯಾಮನೂರರಿಗೆ ಅನ್ಯಾಯವಾದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಮಾಜದ ಮುಖಂಡರೊಬ್ಬರ ಮೂಲಕ ಬ್ಲಾಕ್‌ಮೇಲ್ ಮಾಡಿಸಿ ತಮಗೆ ಹಾಗೂ ತಮ್ಮ ಮಗನಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಮಟ್ಟಕ್ಕೆ ಶ್ಯಾಮನೂರು ಇಳಿದರು.
ಒಂದು ಕಾಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ವ್ಯಕ್ತಿತ್ವ ಬೆಳೆಸಿಕೊಂಡಿದ್ದ ಬಿ.ಬಿ.ಶಿವಪ್ಪ, ತಮ್ಮ ಪಕ್ಷದವರೇ ತೋಡಿದ ಖೆಡ್ಡಾದಲ್ಲಿ ಬಿದ್ದು, ನೇಪಥ್ಯಕ್ಕೆ ಸರಿದರು. ಅಷ್ಟು ಮಾತ್ರವಲ್ಲ ಬಿಜೆಪಿಯಲ್ಲೇ ಹಿರಿಯರ ವೇದಿಕೆ ಎಂಬ ಅನಧಿಕೃತ ರಂಗಮಂಚ ನಿರ್ಮಿಸಿಕೊಂಡು, ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರ ವಿರುದ್ಧ ಊರು-ಕೇರಿ ತುಂಬಾ ಬಯ್ದಾಡಿದರು. ಆದರೆ ಕೊನೆಗೆ ತಾವು ಯಾವ ಪಕ್ಷದ ವಿರುದ್ಧ ವಾಚಾಮಗೋಚರ ಹೇಳಿಕೆ ನೀಡಿದ್ದರೋ ಅದೇ ಪಕ್ಷದ ಬಾಗಿಲು ಬಡಿದು ವಿಧಾನ ಪರಿಷತ್ ಸದಸ್ಯರಾದದ್ದು ವಿಪರ್ಯಾಸ.
ಅದಕ್ಕೇ ಹೇಳುವುದು, ಈ ರಾಜಕೀಯ ಎಂಬುದು ಎಂದೂ ಭರ್ತಿಯಾಗದ ಆಸೆಯ ಮಡಕೆ. ಇಲ್ಲಿ ಎಷ್ಟು ಸಿಕ್ಕಿದರೂ ಸಾಕು ಎನಿಸುವುದಿಲ್ಲ. ಬಯಕೆ ಎಂಬ ಮೃಗಜಲದ ಮೋಡಿ ಅಂತ್ಯವಿಲ್ಲದ್ದು. ಇದು ರಾಜಕಾರಣಿಗಳ ಪಾಲಿಗಂತೂ ಅಕ್ಷರಶಃ ಸತ್ಯ. ಆದರೆ ತ್ಯಾಗ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದೆಡೆ ವ್ಯಕ್ತಿಗತವಾಗಿ ಎತ್ತರಕ್ಕೆ ಏರಿದರೆ ಇನ್ನೊಂದೆಡೆ ತಮ್ಮ ವಿರೋಧಿಗಳನ್ನು ಒಂದೇ ಅಸ್ತ್ರದಲ್ಲಿ ಸದೆಬಡಿದರು.
ಭಾರತೀಯ ಕೌಟುಂಬಿಕ ಪರಂಪರೆಯಲ್ಲಿ ಹಿಂದೆ 60 ವರ್ಷ ದಾಟಿದ ನಂತರ ಹಿರಿಯರು ಕಾಶಿಯಾತ್ರೆಗೆ ಹೊರಡುತ್ತಿದ್ದರು. ಈಗಲೂ ಕೆಲವರು ಹೋಗುತ್ತಾರೆ. ಇದರರ್ಥ ಜವಾಬ್ದಾರಿಗೆ ಅಂಜಿ ದೂರ ಸರಿಯುವುದಲ್ಲ. ಕುಟುಂಬದಲ್ಲಿ ಮಕ್ಕಳು, ಮೊಮ್ಮಕ್ಕಳು ದೊಡ್ಡವರಾಗಿ ತಮ್ಮದೇ ಆದ ನಿರ್ಧಾರಗಳನ್ನು ಬೆಳೆಸಿಕೊಳ್ಳುತ್ತಾರೆ. ಅವರ ಮೇಲೆ ತಮ್ಮ ಅಂಕುಶ ಅತಿಯಾಗಬಾರದು ಎಂಬುದು ಒಂದೆಡೆಯಾದರೆ, ಕಿರಿಯರು ಬೆಳೆಯಲಿ ಎಂಬ ತ್ಯಾಗವೂ ಇರುತ್ತಿತ್ತು. ರಾಜ-ಮಹಾರಾಜರು ವಾನಪ್ರಸ್ಥ ಬಯಸುತ್ತಿದ್ದದ್ದೂ ಇದೇ ಕಾರಣಕ್ಕೆ. ಹಳೆ ನೀರು ಜಾರಿ, ಹೊಸ ನೀರು ಸೇರಲಿ ಎಂಬ ಸದುದ್ದೇಶಕ್ಕಾಗಿ. ಇದು ಪರಂಪರೆ. ದೇಶವನ್ನಾಳುವ ರಾಜಕಾರಣಿಗಳು ಈ ತತ್ವ ಗ್ರಹಿಸಿ ರಾಜಕಾರಣದ ಬೇರನ್ನು ಗಟ್ಟಿಗೊಳಿಸುವ ಕಾಲ ಈಗ ಸನ್ನಿಹಿತವಾಗಿದೆ. ಶತಾಯುಷಿ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಈ ಹಿಂದೆ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರಧ್ಯಾಪಕರಾಗಿದ್ದರು. ಅವರು ತಮ್ಮ ಜ್ಞಾನ ಹಾಗೂ ಅನುಭವವನ್ನು ವಿಜಯಾ ಕಾಲೇಜಿನಲ್ಲಿ ಪಾಠ ಮಾಡುವುದಕ್ಕೆ ಮಾತ್ರ ಬಳಸಿಕೊಂಡಿದ್ದರೆ, ಕನ್ನಡ ನಾಡಿಗೆ ಮೇಸ್ಟ್ರಾಗುವ ಅವಕಾಶ ಲಭಿಸುತ್ತಿರಲಿಲ್ಲ. ಅವರ ಅನುಭವ ಮತ್ತು ಜ್ಞಾನ ಕನ್ನಡ ನಾಡನ್ನು ಬೆಳಗುತ್ತಿರಲಿಲ್ಲ. ವೈಯಕ್ತಿಕ ಆಸೆ ತ್ಯಾಗ ಮಾಡಿದ ಅವರು ನಾಡಿಗಾಗಿ ಅಧ್ಯಯನ ನಡೆಸಿದರು. ಇಂಥ ವಿಸ್ತರಣೆ ರಾಜಕಾರಣಕ್ಕೂ ಅನ್ವಯವಾಗುತ್ತದೆ. ರಾಜಕಾರಣಿಗಳು ಎಂದೂ ತುಂಬದ ತಮ್ಮ ಆಸೆಯ ಮಡಕೆ ಎಷ್ಟು ತುಂಬಿದೆಯೋ ಅಷ್ಟಕ್ಕೆ ತೃಪ್ತಿಪಟ್ಟಿಕೊಂಡರೇ ರಾಜಕೀಯಕ್ಕೂ ಶ್ರೇಯಸ್ಸು ಸಮಾಜಕ್ಕೂ ಕ್ಷೇಮ.
ಲಗೋರಿ : ವಯೋಮಾಪನ ಏರಿದಂತೆ ಬಯಕೆಯ ಮಾಪನ ತಗ್ಗಬೇಕು.


ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com