ಮದುವೆಯೆಂಬ ಅಗಣಿತ ಚುಕ್ಕಿಗಳಲ್ಲಿ ರಂಗೋಲಿ ಅರಳುವುದು ಹೇಗೆ?

ಇಷ್ಟಿಷ್ಟು ದೊಡ್ಡ ಮಂಗಳಪತ್ರ. ಎದುರಲ್ಲೇ ಗಣಪತಿ ಚಿತ್ರ ಬೇರೆ ಅಚ್ಚು ಹಾಕಿಸಿಬಿಡ್ತಾರೆ...
Updated on: 

ಇಷ್ಟಿಷ್ಟು ದೊಡ್ಡ ಮಂಗಳಪತ್ರ. ಎದುರಲ್ಲೇ ಗಣಪತಿ ಚಿತ್ರ ಬೇರೆ ಅಚ್ಚು ಹಾಕಿಸಿಬಿಡ್ತಾರೆ. ತಿಂಗಳಿಗೆಲ್ಲ ಕಾರ್ಯಕ್ರಮ ಮುಗಿದಿರುತ್ತೆ. ಇವನ್ನು ಕಸ ಅಂತ ಬಿಸಾಡೋಕೂ ಮನಸ್ಸು ಬರಲ್ಲ. ರದ್ದಿ ಪೇಪರ್ ಸಂಗಡವೂ ಸರಿಯಾಗಿ ಕುಳಿತುಕೊಳ್ಳಲ್ಲ- ಇದು ಹಿರಿಜೀವವೊಂದರ ತಕರಾರು. ಆಕೆ ಹೇಳುತ್ತಿರುವುದು ಈ ಸಮಯದಲ್ಲಿ ಅಂದರೆ ಏಪ್ರಿಲ್ದಿಂದ ಆರಂಭಿಸಿ ಜುಲೈವರೆಗಿನ ಮದುವೆ ಸೀಸನ್ನಲ್ಲಿ ಬಂದು ಬೀಳುತ್ತಿರುವ ಚಿತ್ರ-ವಿಚಿತ್ರ ಡಿಸೈನುಗಳ ಮದುವೆಯ ಮಮತೆಯ ಕರೆಯೋಲೆಗಳ ಬಗ್ಗೆ. ಅವಳು ಆ ಕ್ಷಣಕ್ಕೆ ಕಸ ವಿಲೇವಾರಿ ಸಮಸ್ಯೆಯೊಂದನ್ನು ತೋಡಿಕೊಳ್ಳುತ್ತಿರುವಂತೆ ಕಂಡು ಬಂದರೂ ಅವಳ ಅಭಿವ್ಯಕ್ತಿಯಲ್ಲಿ ಆಡದೇ ಉಳಿದ ಮಾತುಗಳು ಬಹಳಷ್ಟಿವೆ. ಮದುವೆಗಳನ್ನು ಆಡಂಬರವನ್ನಾಗಿಸುವುದರಲ್ಲಿ, ಅದನ್ನು ತಮ್ಮ ಸ್ಥಾನಮಾನ ಪ್ರದರ್ಶನದ ವೇದಿಕೆಯಾಗಿಸುವುದರಲ್ಲಿ ಇರುವ ಆಸಕ್ತಿ, ದಾಂಪತ್ಯದ ಆಕರ್ಷಣೆಯನ್ನು ಕೊನೆತನಕ ಕಾಪಿಟ್ಟುಕೊಳ್ಳುವ ವಿಷಯದಲ್ಲಿಲ್ಲ ಎಂಬರ್ಥದ ಲಹರಿಯೊಂದು ಅವಳ ತಲೆಯಲ್ಲಿದೆ. ಇಷ್ಟು ವಿಷದವಾಗಿ ಅಭಿವ್ಯಕ್ತಿಸುವುದಕ್ಕೆ ಪದಜೋಡಣೆ ಆಗುತ್ತಿಲ್ಲವಾದ್ದರಿಂದ ಆಕೆ ಮದುವೆಯ ಕರೆಯೋಲೆಯನ್ನು ಒಗೆಯಲಾಗದ, ಇಡಲೂ ಆಗದ ಹೊರೆಯನ್ನಾಗಿ ಆರೋಪಿಸುತ್ತ ತನಗರಿವಿಲ್ಲದಂತೆಯೇ ಇಡೀ ವಿವಾಹ ವ್ಯವಸ್ಥೆಗೊಂದು ರೂಪಕವನ್ನು ಹೊಸೆದುಬಿಟ್ಟಿದ್ದಾಳೆ.
----
ಹಳ್ಳಿಮೂಲದ ಆ ದಂಪತಿ ಪಟ್ಟಣದಲ್ಲಿರುವ ಮಗನ ಮನೆಗೆ ಶಾಶ್ವತ ವಾಸ್ತವ್ಯಕ್ಕಾಗಿ ಬಂದಿದ್ದರು. ಜೀವನಸಂಧ್ಯೆಯಲ್ಲಿ ಕೊನೆಯ ಸ್ಟಾಪು ಅದೇ ಆಗಿರಲಿ ಎಂಬಂತೆ. ತಮ್ಮೊಂದಿಗೆ ಉಳಿಯುವಂತೆ ಮಗ- ಸೊಸೆಯ ಒತ್ತಾಯ ಜೋರಿದ್ದಿದ್ದರಿಂದ ಅದವರನ್ನು ಅಲ್ಲಿಗೆ ಕರೆತಂದಿತ್ತು. ಸಹಜವಾಗಿಯೇ ಊರಿನವರಿಗೆ ದಿನಗಳೆದಂತೆ ಪೇಟೆ ಪ್ರಪಂಚದಲ್ಲಿರುವುದು 'ಔಟ್ ಆಫ್ ಸ್ಪೇಸ್' ಅನ್ನಿಸತೊಡಗುತ್ತದೆ. ಶಹರಗಳಲ್ಲಿರುವ ಮಕ್ಕಳ ವೈಭೋಗವನ್ನು ದೂರದಲ್ಲಿದ್ದುಕೊಂಡು ಹೊಗಳುವಾಗಿನ ಆಕರ್ಷಣೆ ಅವರೊಂದಿಗಿರುವುದರಲ್ಲಿ ಸಿಗುವುದು ವಿರಳ.
ಈ ಬೇರ್ಪಡಿಕೆಯ ಭಾವ ತುಸು ಹೆಚ್ಚಾಗಿಯೇ ಈ ದಂಪತಿಯನ್ನು ಕಾಡುತ್ತಿತ್ತು. ಅದಕ್ಕೇನು ಕಾರಣ ಅಂತ ಅವರಿಗೆ ಬಹಳ ದಿನಗಳವರೆಗೂ ತೋಚುತ್ತಿರಲಿಲ್ಲ. ಕೊನೆಗೊಮ್ಮೆ ತಿಳಿಯಿತು, ತಮ್ಮ ಕಣ್ಣೆದುರಿಗಿನ ಅವರ ಸಂಸಾರದ ದೈನಂದಿನ ವಿವರಗಳು ತಾವು ಪಾಲಿಸಿಕೊಂಡು ಬಂದ ದಾಂಪತ್ಯದ ವ್ಯಾಖ್ಯಾನಗಳಿಗೆ ಬದ್ಧವಾಗಿಲ್ಲ ಎಂಬುದೇ ಇವರಿಗೆ ಭಿನ್ನತೆಯ ಸನ್ನಿವೇಶ ಕಟ್ಟಿಕೊಡುತ್ತಿತ್ತು. ತಾಯಿಗೆ ತನ್ನ ಮಗನನ್ನು ಸೊಸೆ ಏಕವಚನದಲ್ಲಿ ಕರೆಯುತ್ತಾಳೆ ಎಂಬುದೇ ಕಳವಳದ ವಿಷಯವಾಗಿತ್ತು. ಗಂಡ ಅಕ್ಕಿ ತರುವುದು ಮತ್ತು ಹೆಂಡತಿ ಅಡುಗೆ ಮಾಡುವುದು ಎಂಬ ನಿಯಮಕ್ಕೆ ಅವರು ಒಳಗಾಗಿರಲಿಲ್ಲ. ಲಹರಿಗೆ ಬಿದ್ದವರಂತೆ ದಿನಚರಿಯ ಪಾತ್ರಗಳನ್ನು ಆಗಾಗ ಅದಲು ಬದಲು ಮಾಡಿಕೊಂಡಿದ್ದರು.
ಅದೊಂದು ದಿನ ಮಗ-ಸೊಸೆ ಇವರಿಬ್ಬರಿಗೆ 'ನೀವೇಕೆ ಒಂದು ಟೂರ್ ಹೋಗಿಬರಬಾರದು. ಯಾತ್ರೆ ಅಂದರೆ ದೇವಸ್ಥಾನಗಳೇ ಆಗಬೇಕಿಲ್ಲ. ಭಾರತದಲ್ಲಿ ಅದ್ಭುತ ಎಂಬಂಥ ಪ್ರದೇಶಗಳಿವೆ. ಅವುಗಳಿಗೆ ಬೆಸೆಯುವ ಆಕರ್ಷಕ ಪ್ರವಾಸ ಪ್ಯಾಕೇಜ್ಗಳೂ ಇವೆ' ಎಂದು ಪುಸಲಾಯಿಸಿದರು. ಪ್ರವಾಸದ ಉಮೇದೇನೂ ಇಬ್ಬರಿಗೂ ಇಲ್ಲವಾಗಿದ್ದರೂ ಎಲ್ಲ ಖುಷಿಗಳ ನಡುವೆಯೂ ಆ ಮನೆಯಲ್ಲಿ ಕಾಡುತ್ತಿದ್ದ ಇರಿಸುಮುರಿಸಿನ ಭಾವದಿಂದ ಹೊರಗಡೆ ಬರುವುದಕ್ಕೆಂದು ಈ ದಂಪತಿ ಯಾತ್ರೆಗೆ ತಯಾರಾದರು. ಯಾತ್ರೆಯಲ್ಲಿ ಸಹಪ್ರಯಾಣಿಕರೇನೂ ಮೊದಲಿನಿಂದಲೇ ಪರಿಚಯವಿರುವವರು ಅಲ್ಲವಾದ್ದರಿಂದ ಇವರಿಗಿವರೇ ಅನನ್ಯ ಸ್ನೇಹಿತರು. ಆ ಯಾನ ಅವರಿಬ್ಬರ ಅಂತರಂಗದೊಳಗಿನ ಪರಸ್ಪರ ಪ್ರಯಾಣವೂ ಆಗಿಹೋಯಿತು. ತಿಂಗಳುಗಳ ಕಾಲದ ಆ ಪ್ರವಾಸ ಕಾಲದಲ್ಲಿ ಮಗ-ಸೊಸೆಯ ದಾಂಪತ್ಯ ಮಾದರಿಯ ಎಲ್ಲ ಪ್ರಯೋಗಗಳನ್ನು ಇವರೂ ಮಾಡಿದರು. ಆ ದಾಂಪತ್ಯದಲ್ಲಿ ಪ್ರೀತಿಗೆ ಬರ ಇರಲಿಲ್ಲವಾದರೂ ಅದರ ಅಭಿವ್ಯಕ್ತಿ ತರವಲ್ಲ ಎಂಬ ಹಳೆಕಾಲದ ಬಿಗುಮಾನವೊಂದು ಇಬ್ಬರಲ್ಲೂ ಇತ್ತು. ಮಗನ ಸಂಸಾರದಲ್ಲಿ ಇವರಿಗಿಂತ ಹೆಚ್ಚಿದ್ದಿದ್ದೆಂದರೆ ಪ್ರೀತಿಯ ಅಭಿವ್ಯಕ್ತಿಯ ವಿಧಾನ ಎಂಬುದು ನಿಧಾನಕ್ಕೆ ಅರಿವಾಯಿತು. ಸಂಗಾತಿಯ ಬಗ್ಗೆ ಏನೋ ತೀವ್ರವಾಗಿ ಅನ್ನಿಸಿ ತಮ್ಮ ಪರಿಸರಕ್ಕೆ ತಕ್ಕದಾಗಿಲ್ಲ ಎಂಬ ಕಾರಣಕ್ಕೆ ಬಚ್ಚಿಟ್ಟಿದ್ದ ಮಾತುಗಳು- ಭಾವಗಳು ಅವರ ನಡುವೆ ನೂರಿದ್ದವು. ಆದೇಶಿಸುವ ಪಾತ್ರ ಒಬ್ಬರದ್ದು, ಶರಣಾಗತಿಯ ಪಾತ್ರ ಇನ್ನೊಬ್ಬರದ್ದು ಎಂಬ ಸಾಂಪ್ರದಾಯಿಕ ನಂಬುಗೆಗಳಿಂದ ಹೊರಬಂದ ಅವರು, ಅವೆಷ್ಟೋ ವರ್ಷಗಳಲ್ಲಿ ಆಗದಿದ್ದ ಪರಸ್ಪರರ ಭಾವತೋಟಿಗಳ ಅನ್ವೇಷಣೆಯನ್ನು ಆ ಒಂದು ತಿಂಗಳಲ್ಲಿ ಮಾಡಿದರು.
ಸಂದರ್ಶಿಸಬೇಕಾದ ಜಾಗಗಳೆಲ್ಲ ಮುಗಿದು ಇನ್ನೇನು ಮರಳಬೇಕು ಎಂಬ ದಿನದ ಮುಂಜಾನೆಯಂದು ಇವರಿಬ್ಬರೂ ಏಳಲೇ ಇಲ್ಲ. ಯಾನದಲ್ಲಿ ಭೇಟಿ ಮಾಡಬೇಕಾಗಿರುವುದು ಇನ್ನೇನೂ ಉಳಿದಿಲ್ಲ ಎಂಬ ಸಂತೃಪ್ತಭಾವ ಜೀವಹೋದ ಆ ಮುಖಗಳಲ್ಲಿತ್ತು.
----
'ನಾವು ಫ್ರೆಂಡ್ಸ್ ಆಗಿಯೇ ಇರ್ತೀವಲ್ಲ' ಹಾಗೆಂದು ಒಂದು ನೀರವ ಮಧ್ಯರಾತ್ರಿ ಹಳೆ ಗೆಳತಿ ಕರೆ ಮಾಡಿ ಮೆಲ್ಲ ಧ್ವನಿಯಲ್ಲಿ ಕೇಳುತ್ತಾಳೆ. 'ಅದಕ್ಕೇನಂತೆ ಹೌದ್ಹೌದು' ಎಂದವನ ಮನಸ್ಸಿನಲ್ಲಿ ವಿಷಾದದ ನಗೆ. ಗೆಳತಿಯ ಕತೆ ಹಾಗಿರಲಿ, ಮದುವೆಯ ನಂತರ ಕೊರಳ ಗೆಳೆಯಂದಿರೇ ಕಾಣೆಯಾಗುತ್ತಾರೆ ಎಂಬುದು ಅನುಭವದ ಸತ್ಯ. ತುಂಬ ಬುದ್ಧಿವಂತರು ಅಂತ ಅಂದುಕೊಂಡಿದ್ದ ಗೆಳೆಯರೆಲ್ಲ ಸಿಲ್ಲಿ ಸಂಗಾತಿಗಳ ಜತೆ ಪೋಸು ಕೊಡುತ್ತಾರೆ ಅಥವಾ ನಮಗೆ ಹಾಗನ್ನಿಸುತ್ತದೆ. ನನ್ನ ಹುಡುಗಿ ತುಂಬ ಅಚ್ಚುಕಟ್ಟು ಅಂತ ಗೆಳೆಯ ಹೊಗಳಿಕೊಳ್ಳುತ್ತಾನೆ. ನಮಗೆ ಮಾತ್ರ ಆಕೆ ಮುಖಕ್ಕೆ ಮೂರು ಪದರಗಳಲ್ಲಿ ಬಡಿದುಕೊಂಡಿರುವ ಪೌಡರು ಹಾಗೂ ನಿರ್ಲಕ್ಷಿತವಾಗಿ ಬ್ಲೌಸಿನಿಂದ ಹೊರಚಾಚಿರುವ ಬ್ರಾಪಟ್ಟಿಯೇ ಕಣ್ಣಿಗೆ ರಾಚಿ, ಮುಜುಗರ ಮರೆಮಾಚುತ್ತ ಕಷ್ಟಪಟ್ಟು ಹಲ್ಲು ಕಿರಿಯುತ್ತೇವೆ. ನನ್ನ ಹುಡುಗ ತುಂಬ ಒಳ್ಳೆಯವನು, ಬುದ್ಧಿವಂತ ಅಂತ ಹೇಳಿಯೇ ತನ್ನ ಸಂಗಾತಿಯನ್ನು ಗೆಳೆಯರ ಗುಂಪಿನೆದುರು ತಂದು ನಿಲ್ಲಿಸುತ್ತಾಳೆ ಸ್ನೇಹಿತೆ. ಅವನೋ ವಾಚಾಳಿತನವೇ ಬುದ್ಧಿವಂತಿಕೆಯ ಪ್ರದರ್ಶನ ಎಂದುಕೊಂಡು ಜಗತ್ತಿನ ಸಮಸ್ತ ಸಂಗತಿಗಳು ತನಗೆ ಗೊತ್ತೆಂಬಂತೆ ಮಾತಿನ ಮಳೆ ಸುರಿಸಿ ನಮ್ಮನ್ನು ಸುಸ್ತು ಬಡಿಸುತ್ತಾನೆ. ಇಲ್ಲದಿದ್ದರೆ ಒಳ್ಳೆಯತನ ಎಂದರೆ ಧಾರ್ಮಿಕ ಕ್ಷೇತ್ರಗಳನ್ನು ಸುತ್ತುವುದು ಎಂಬ ನಂಬಿಕೆಯನ್ನು ಸಾರುತ್ತ ಬರೀ ಪೂಜೆ -ಪುಣ್ಯ ಸಂಚಯಗಳದ್ದೇ ಕತೆ ಹೇಳಿ ಆಕಳಿಕೆ ಬರಿಸುತ್ತಾನೆ. ಈ ಎಲ್ಲ ವಿರಾಟ್ ರೂಪಗಳನ್ನು ನೋಡುತ್ತ ನಮಗೆ ನಮ್ಮ ಸ್ನೇಹಿತರು ಗೊಂಡಾರಣ್ಯದಲ್ಲಿ ಕಳೆದು ಹೋದರು ಎಂಬ ಭಯ ಕಾಡತೊಡಗುತ್ತದೆ. ಅವರನ್ನು ಮತ್ತೆ ಪಡೆದುಕೊಳ್ಳುವುದಕ್ಕಿರುವ ಕೊನೆಯ ಪ್ರಯತ್ನ ಎಂಬಂತೆ 'ನಾವಷ್ಟೇ ಹಳೆಯ ಸ್ನೇಹಿತರು ಪಾರ್ಟಿ ಮಾಡೋಣವಾ' ಅಂತ ಆಮಿಷ ಒಡ್ಡುತ್ತೇವೆ. ಅವರಿಗೆ ಆ ಮಾತಿನ ಅರ್ಥ ಮನದಟ್ಟಾಗುತ್ತದೆಯಾದರೂ ಕೊನೆಕ್ಷಣದಲ್ಲಿ ಅಸಹಾಯಕರಾಗಿ ದಂಪತಿ ಸಮೇತರಾಗಿ ಆಗಮಿಸುತ್ತಾರೆ. ಇಷ್ಟು ದಿನಗಳಲ್ಲೇ ನಾವು ಪರಸ್ಪರರನ್ನು ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ನಿರೂಪಿಸುವ ತವಕದಲ್ಲಿ ಅವರೆಲ್ಲ ಮಾತಿಗಿಳಿಯುತ್ತಾರೆ. ನಮಗೆ ಹೇಳಬೇಕು ಅನ್ನಿಸುವ ಮಾತು- 'ನೀನು ಅವನನ್ನು ಮದುವೆಯಾಗಿರಬಹುದು ಮಹಾತಾಯಿ. ಆದರೆ ಆತ ನಮ್ಮ ಬಾಲ್ಯದ ಗೆಳೆಯ. ಆತ ಗುಟ್ಟುಗಳನ್ನು ಬಚ್ಚಿಟ್ಟಿರುವುದು ನಿನ್ನ ಏಕಾಂತದಲ್ಲಲ್ಲ, ನನ್ನ ಮನಸ್ಸಿನ ಗೂಡುಗಳಲ್ಲಿ. ನೀನು ಇನ್ನಷ್ಟೇ ಅರಿತುಕೊಳ್ಳಬೇಕಿರುವ ಆತನ ಖುಷಿ-ಕುಶಾಲು-ಕಳವಳಗಳೆಲ್ಲ ನನಗೆ ತುಂಬಾ ಚೆನ್ನಾಗಿ ಗೊತ್ತು. ನಿನ್ನ ತುಟಿಗಳಿಗೆ ಚುಂಬಿಸುವಾಗ ಅವನಿಗಿದ್ದ ಭಾವತೀವ್ರತೆಗಿಂತ ಹಿರಿದಾದ ಕಂಪನವೊಂದು ಹತಾಶೆಯ ಕ್ಷಣಗಳಲ್ಲಿ ನನ್ನ ಹೆಗಲು ಒತ್ತಿದಾಗ ಇತ್ತು ಎಂಬುದನ್ನು ನೀನು ನಂಬುವುದಿಲ್ಲ. ನೀವಿಬ್ಬರೂ ಜತೆಗೂಡಿ ಮಕ್ಕಳನ್ನು ಬೆಳೆಸುವುದರವರೆಗಿನ ರೋಮ್ಯಾಂಟಿಕ್ ಕನಸು ಹೆಣೆದಿದ್ದಿರಬಹುದು. ಆದರೆ ನಮ್ಮ ದೋಸ್ತಿಯಲ್ಲಿ ಕೊನೆ ಉಸಿರು ಚೆಲ್ಲುವುದರವರೆಗಿನ ಫಿಲಾಸಫಿಕಲ್ ಕನಸುಗಳನ್ನೆಲ್ಲ ವಿವರವಾಗಿ ಹರವಿಟ್ಟು ಬೆರಗು ನೋಡಿದ್ದಾಗಿದೆ...'
ಬಹುತೇಕ ಸ್ನೇಹಿತರು ಮದುವೆಯೊಂದಿಗೆ ಕಳೆದುಹೋಗುತ್ತಾರೆ. ಕೆಲವೇ ಪುಣ್ಯವಂತರಿಗೆ ಮಾತ್ರ ಗೆಳೆಯನ ಮದುವೆಯಾದಾಗ ಅದ್ಭುತ ಅತ್ತಿಗೆಯೊಬ್ಬಳು ಸಿಗುತ್ತಾಳೆ. ಗೆಳತಿಯ ಮದುವೆಯಾದಾಗ ಅಣ್ಣನೋ-ತಮ್ಮನೋ ಸಿಕ್ಕಿ ಬಿಡುವುದಿದೆ. ಹಾಗೆ ಸ್ನೇಹಿತರ ಸಂಗಾತಿಯಾಗಿ ಬಂದವರು ಶತಮಾನಗಳಿಂದ ಪರಿಚಯವಿದ್ದವರ ಹಾಗೆ ನಮ್ಮೊಂದಿಗೆ ಮಾತಿಗೆ ಕೂರುತ್ತಾರೆ. ಅದೊಂದು ಅದೃಷ್ಟದ ಪುಳಕ!
----
ಧಗೆ ನೀರಿಳಿಸುತ್ತಿರುವಾಗ ಬಂದಿರುವ ಮದುವೆ ಸೀಜನ್ನು ಮಳೆ ಬೀಳುವವರೆಗೂ, ಆಷಾಡ ಕಾಲಿಡುವವರೆಗೂ ಮುಂದುವರಿಯಲಿದೆ. ಹೆಣ್ಣು ಸಿಗದ ಊರುಗಳಲ್ಲಿ ಕಾದು-ಕಾದು ಬೇಸತ್ತ ಗಂಡುಗಳು ದೂರದ ಊರುಗಳಲ್ಲಿ ಹೆಣ್ಣು ಹೊಂದಿಸಲೆಂದೇ ಇರುವ ಏಜೆಂಟರ ಬೆನ್ನು ಹತ್ತಿ ಮದುವೆಯಾಗಿ ಬಂದಿದ್ದಾರೆ. ಲಕ್ಷ ರುಪಾಯಿ ಕೊಟ್ಟು ತಂದರಂತೆ. ಐವತ್ತು ಸಾವಿರವಂತೆ ಎಂಬೆಲ್ಲ ಮಾತುಗಳು ಊರ ತುಂಬೆಲ್ಲ ಹರಿದಾಡುತ್ತ ವಿಕ್ಷಿಪ್ತ ವಾತಾವರಣವೊಂದು ತಲೆ ಎತ್ತಿದೆ. ಈಗ ಹುಡುಗ-ಹುಡುಗಿಯರ ಮದುವೆ ಮಾಡುವುದೇ ದೊಡ್ಡ ಕತೆಯಾಗಿದೆ ಎಂದು ಜಗುಲಿಯಲ್ಲಿ ಕುಳಿತು ಹರಟುತ್ತಿದ್ದವರು, ಪೇಟೆಯಲ್ಲಿರುವ ತಮ್ಮ ಮಗಳು ಅವಳದೇ ವಾರಿಗೆಯವನನ್ನು ಇಷ್ಟಪಟ್ಟಿರುವ ಸುದ್ದಿ ಕೇಳುತ್ತಲೇ ತಮ್ಮ ಅಹಮಿಕೆಗೆ ವಿಪರೀತ ಪೆಟ್ಟು ತಿಂದವರಂತೆ, 'ಅದ್ಹೆಂಗಾಗ್ತದೆ' ಎಂದು ಬುಸುಗುಟ್ಟಿದ್ದಾರೆ.
    ಮದುವೆಯಾಗಿ ಕೆಲಸದ ನಿಮಿತ್ತ ಬೇರೆ -ಬೇರೆ ಊರುಗಳಲ್ಲಿ ಬಿಡಾರ ಹೂಡಿ ವಾರಾಂತ್ಯಕ್ಕೆ ಜತೆಗಿರುವುದು ಕೆಲ ಜೋಡಿಗಳ ಜರೂರತ್ತು. ಅವರೇನೋ ಕಳೆದುಕೊಂಡಿದ್ದಾರೆ ಎಂಬಂತೆ ಮಿಕ್ಕವರೆಲ್ಲ ಅವರತ್ತ ಅನುಕಂಪದಿಂದ ನೋಡುವ ಹೊತ್ತಿಗೆ ಅವರು ತುಂಬ ಆನಂದಿತರಾಗಿದ್ದಾರೆ. ಇಬ್ಬರಿಗೂ ವಾರದ ಇತರ ದಿನಗಳಲ್ಲಿ ಖಾಸಗಿತನವೊಂದು ಲಭಿಸಿದೆ. ಪ್ರತಿದಿನದ ಸಾಂಗತ್ಯದಲ್ಲಿ ಕ್ರಮೇಣ ಹಳಸಲಾಗುವ ಸಂಗತಿಗಳೆಲ್ಲ ಅವರಿಗೆ ಹೊಸದಾಗಿಯೇ ಉಳಿದಿವೆ.
----
ಇಸ್ವಿ 2043.
ತಮ್ಮ ಐವತ್ತೆಂಟನೇ ವಯಸ್ಸಿನಲ್ಲಿ ಮದುವೆಯಾದ ಖ್ಯಾತ ನಿರ್ದೇಶಕ ಹಾಗೂ ಖ್ಯಾತ ಕಲಾವಿದೆ ಸಂದರ್ಶನಕ್ಕೆಂದು ಪ್ರಸಿದ್ಧ ವೆಬ್ ಜರ್ನಲ್ ಒಂದರ ಪತ್ರಕರ್ತೆ ಬಂದಿದ್ದಾಳೆ. ಆ ಕಲಾವಿದೆ ಇಪ್ಪತ್ತೆಂಟರ ಪ್ರಾಯದಲ್ಲಿ ಮದುವೆಯಾಗಿ ಗಂಡನನ್ನು ಕೆಲ ವರ್ಷಗಳಲ್ಲೇ ಕಳೆದುಕೊಂಡ ಮೇಲೆ ಒಂಟಿಯಾಗಿ ತನ್ನ ವೃತ್ತಿಯಲ್ಲಿ ಮುಳುಗಿದ್ದಳು. ಈತ ವೃತ್ತಿ ಬದುಕಲ್ಲಿ ಸಾಧನೆಯ ಶಿಖರವನ್ನೇ ಏರುತ್ತ ವಿವಾಹಕ್ಕೆ ಪುರುಸೊತ್ತಿಲ್ಲದವರಂತೆ ಸುಮ್ಮನಿದ್ದ. ಇಬ್ಬರೂ ಪ್ರವರ್ಧಮಾನಕ್ಕೆ ಬಂದಿರದ ದಿನಗಳಲ್ಲಿ ಪರಸ್ಪರ ಆಕರ್ಷಿತರಾಗಿ ನಂತರ ಅದು ಹೇಗೋ ಬಂಧ ತುಂಡಾಗಿತ್ತು. ಈಗ ಇಬ್ಬರೂ ದಂಪತಿಯಾಗಿರುವ ವಿದ್ಯಮಾನಕ್ಕೆ ಆಕೆ ವಿವರಣೆ ಒದಗಿಸುತ್ತಿದ್ದಳು. 'ನನಗಾಗ ಮನೆಯವರ ಒತ್ತಡ. ಕಲಾವಿದೆಯಾಗುವ ತುಡಿತ. ನಿಭಾಯಿಸಲು ಪ್ರೀತಿಸುವವರಿಗೆ ಸಮಯ ಎತ್ತಿಡುವಿಕೆ ಇವೆಲ್ಲವೂ ಒಟ್ಟಿಗೇ ಸಾಧ್ಯವಾಗಲಿಲ್ಲ. ಹಾಗೆಂದೇ ಬೇರೆಯಾಗಬೇಕಾಯಿತು. ಬದುಕು ಭಿನ್ನ ಪಥ ಹಿಡಿಯಿತು. ವೃತ್ತಿಯಲ್ಲೂ ಈಗ ಸಾಧಿಸಿದ ನಿರಾಳತೆ. ಸಾಂಗತ್ಯ ಬೇಕಿರುವುದು ಹಾಗೂ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುವುದು ಈ ವಯಸ್ಸಿನಲ್ಲೇ....' ಎಂದಳಾಕೆ.
ಆತ ಮುಂದುವರಿಸುತ್ತ, 'ಮೂರು ದಶಕಗಳ ಹಿಂದೆ ಮದುವೆ ಎಂಬ ಪದದ ಜತೆಯಲ್ಲೇ ವಿಚ್ಛೇದನ ಎಂಬ ಶಬ್ದವೂ ಗಾಢವಾಗಿ ಬೆರೆತು ಸಾಗಿತು. ಶಿಕ್ಷಣದ ಹೆಸರಲ್ಲಿ ಮಕ್ಕಳ ಮೇಲೆ ಲಕ್ಷಗಟ್ಟಲೇ ಬಂಡವಾಳ ಹಾಕಿದ್ದರಿಂದ ಅವರು ಓದು ಮುಗಿಯುತ್ತಲೇ ಆ ಬಂಡವಾಳಕ್ಕೆ ನ್ಯಾಯ ಒದಗಿಸುವ ಅತಿದುಡಿತದಲ್ಲಿ ಬಿದ್ದರು. ಹೀಗಾಗಿ ಮಕ್ಕಳನ್ನು ಸಾಕುವುದು, ನಂತರ ಅವರು ನಮ್ಮನ್ನು ನೋಡಿಕೊಳ್ಳುವುದು ಎಂಬ ಪರಿಕಲ್ಪನೆ ಅಪ್ರಸ್ತುತವಾಗಿದೆ. ಹೀಗೆಂದೇ ವಿವಾಹ ಎಂಬುದು ಯೌವನದಲ್ಲಿ ಭಯಕ್ಕೆ ಬೀಳಿಸುವ ಆದರೆ ವಯಸ್ಸು ಕಳೆದಂತೆ ನೆಮ್ಮದಿಯ ಏಕೈಕ ತಂಗುದಾಣದಂತೆ ಕಾಣುವ ವ್ಯವಸ್ಥೆಯಾಗಿಯೂ ಬದಲಾಗಿದೆ. ಹಾಗೆಂದೇ ನಾವು ಇಳಿ ವಯಸ್ಸಿನಲ್ಲಿ ಸಂಗಾತಿ ಹೊಂದುವ ಉತ್ಸುಕತೆಯ ಸಮಾಜವನ್ನು ಕಾಣುತ್ತಿದ್ದೇವೆ. ಕೆಲವರಿಗೆ ಇದು ಅಸಹಜವೆನ್ನಿಸಬಹುದು. ವಾಸ್ತವದಲ್ಲಿ ಎಲ್ಲವೂ ಕಾಲದ ಅನಿವಾರ್ಯತೆಗಳು. ಈ ಅನಿವಾರ್ಯತೆಗಳಲ್ಲಿ ಸಂತೋಷದ ಹೊಸ ಮೇರೆಗಳನ್ನು ಕಾಣುತ್ತಿದ್ದೇವೆ. ಇಷ್ಟರ ನಡುವೆಯೂ ಇದು ಸರಿಯಿಲ್ಲ ಎಂದು ಸಮಾಜಕ್ಕೆ ತೀವ್ರವಾಗಿ ಅನ್ನಿಸಿದಾಗ, ಒಂದು ಕಾಲದಲ್ಲಿ ಮೂರ್ನಾಲ್ಕು ದಿನ ಚಪ್ಪರ ಹಾಕಿ ನಡೆಸುತ್ತಿದ್ದ ಮದುವೆಗಳು ಮತ್ತೆ ಆರಂಭವಾಗುತ್ತವೆ. ಕೊನೆಗೂ ಅರ್ಥ ಮಾಡಿಕೊಳ್ಳಬೇಕಿರುವುದು ಮದುವೆ ಎಂಬುದು ಅಗಣಿತ ಚುಕ್ಕಿಗಳಂತೆ. ಅದನ್ನು ಸಹನೆಯಿಂದ ಕುಳಿತು ಕೂಡಿಸಿದಾಗಲಷ್ಟೇ ರಂಗೋಲಿ. ಸೂಪರ್ಹಿಟ್ ಸಿನಿಮಾ ಆಗುವುದಕ್ಕೆ ಸಿದ್ಧ ಸೂತ್ರಗಳಿಲ್ಲ. ಪ್ರಾಮಾಣಿಕ ತುಡಿತ-ಶ್ರಮಗಳೇ ಹಾಗೊಂದು ಸೃಷ್ಟಿಗೆ ಕಾರಣವಾಗುತ್ತೇವೆ. ಮದುವೆಯೂ ಹೀಗೆಯೇ' ಮಾತು ಮುಗಿದಿತ್ತು.

- ಚೈತನ್ಯ ಹೆಗಡೆ
cchegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com