ಟಿಟ್ವೆಂಟಿ ಹಗರಣ, ನಮ್ಮೆಲ್ಲರ ಫೋರ್‌ಟ್ವೆಂಟಿ ಮನದ ಪ್ರತಿಫಲನ!

ಐಪಿಎಲ್ ಅನ್ನೋದು ಎಂಟರ್‌ಟೇನ್‌ಮೆಂಟ್ ಎಂಬುದು ಶುರುವಾದ ದಿನವೇ ಗೊತ್ತಿದ್ದ ಸತ್ಯ.
Updated on: 

ತಮಾಷೆ, ತಮಾಷೆ ಮತ್ತು ತುಂಬ ತಮಾಷೆ. ಐಪಿಎಲ್ ಎಂಬ ಕ್ರಿಕೆಟ್ ವೈಭೋಗ ಮತ್ತು ಅದರ ಹಗರಣದ ಆಯಾಮಕ್ಕೆ ಮಾತ್ರವಲ್ಲ, ಆ ಕುರಿತು ಜನರ ಪ್ರತಿಕ್ರಿಯೆಗಳನ್ನೂ ಹೀಗಲ್ಲದೆ ಮತ್ಯಾವ ಬಗೆಯಲ್ಲೂ ವರ್ಣಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಐಪಿಎಲ್ ಅನ್ನೋದು ಶುದ್ಧ ಎಂಟರ್‌ಟೇನ್‌ಮೆಂಟ್ ಎಂಬುದು ಶುರುವಾದ ದಿನವೇ ಗೊತ್ತಿದ್ದ ಸತ್ಯ. ಆದರೆ ಈಗ ಸ್ಪಾಟ್ ಫಿಕ್ಸಿಂಗ್‌ನ ಅನಾವರಣವಾಗುತ್ತಲೇ ಆ ಬಗ್ಗೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಪೊಳ್ಳು ಆಕ್ರೋಶವೊಂದನ್ನು ಆವಿರ್ಭವಿಸಿಕೊಳ್ಳುತ್ತಿರುವ ಜನಸಮೂಹವನ್ನು ನೋಡುತ್ತಿದ್ದರೆ 'ಅರೆ, ಇದೂ ಒಂಥರದ ತಮಾಷೆ ಹಾಗೂ ಮನರಂಜನೆ' ಎಂದು ಭಾಸವಾಗುತ್ತಿದೆ.
ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಹಾಕಿಕೊಂಡ ಶ್ರೀಶಾಂತ್ ಮತ್ತು ಇನ್ನಿಬ್ಬರು ಆಟಗಾರರನ್ನು ಎದುರಿಟ್ಟುಕೊಂಡು, 'ಅಯ್ಯೋ, ಇವರು ನಮ್ಮ ನಂಬಿಕೆಗಳಿಗೆ ಮೋಸ ಮಾಡಿಬಿಟ್ಟರು' ಎಂದು ಅಲವತ್ತುಕೊಳ್ಳುತ್ತಿರುವ ನಮ್ಮ ಸ್ಥಿತಿಯನ್ನು ನಾವೇ ಪ್ರಾಮಾಣಿಕವಾಗಿ ಮರುಪರಿಶೀಲಿಸಿಕೊಂಡಿದ್ದೇ ಆದರೆ, ಇದೂ ನಮ್ಮ ಬೂಟಾಟಿಕೆ ಮನಸ್ಸಿನ ತಮಾಷೆಯೇ ಎಂಬುದು ಸ್ಪಷ್ಟವಾಗುತ್ತದೆ. ಯಾವ ನಂಬಿಕೆ? ಯಾವ ಸ್ಫೂರ್ತಿ? ಎಂಥ ನಿಷ್ಠೆ? ಇದಕ್ಕೂ ಐಪಿಎಲ್ ಎಂಬ ಮನರಂಜನೆಗೂ ಏನು ಸಂಬಂಧ? ಶ್ರೀಶಾಂತ್ ವೇಶ್ಯೆಯರೊಂದಿಗೆ ಇದ್ದ, ಬುಕ್ಕಿಗಳಿಂದ ಹಲವು ಲಕ್ಷ ರುಪಾಯಿ ಪಡೆದುಕೊಂಡ ಎಂಬ ವಿವರಗಳೆಲ್ಲ ನಮಗೆ ನಿಜಕ್ಕೂ ಅಚ್ಚರಿ- ಆಘಾತಗಳನ್ನು ತಂದಿವೆಯೇ? ಇಲ್ಲ, ಆದರೆ ನಮ್ಮ ಮೂರ್ಖತನವನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ಏನೋ ಆಘಾತವಾದವರಂತೆ ಸುಳ್ಳೇ ಚಡಪಡಿಸುತ್ತಿದ್ದೇವೆ ಅಷ್ಟೆ. ಐಪಿಎಲ್ ಎಂಬ ಹಣ ಮತ್ತು ತಾರಾಮೆರುಗಿನ ಅವತರಣಿಕೆಯನ್ನು ಗಮನಿಸಿದ ಯಾರಿಗೇ ಆದರೂ ಇದರಲ್ಲಿ ಸಿದ್ಧಾಂತ ಅಥವಾ ನಮ್ಮದೆನ್ನುವ ಭಾವಗಳೇನೂ ಇಲ್ಲ ಎಂಬುದು ನಿಚ್ಚಳವಾಗಿಯೇ ತಿಳಿಯುತ್ತಿತ್ತು. ಬಾಲಿವುಡ್ ಮತ್ತು ಉದ್ಯಮ ಜಗತ್ತುಗಳಲ್ಲಿ ಪ್ರಚಾರಮೌಲ್ಯವನ್ನು ಇಳಿಸಿಕೊಂಡ ಹೆಚ್ಚಿನವರು, ಏನಕೇನ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರಬೇಕೆಂಬ ತಮ್ಮ ಹಪಾಹಪಿಯನ್ನು ಪೊರೆದುಕೊಳ್ಳುವುದಕ್ಕೆ ರೂಪಿಸಿಕೊಂಡ ವ್ಯವಸ್ಥೆ ಇಂಥದೊಂದು ಕ್ಲಬ್ ಕ್ರಿಕೆಟ್. ದೇಶ-ಪ್ರಾಂತಗಳ ಭಾವನೆಗಳೇ ಇಲ್ಲಿಲ್ಲ ಎಂಬ ಅಳಲು ಅಳುಮೋರೆಯವರ ಮಾತಿನಂತೆ ಕಾಣಬಹುದು. ಆದರೆ ಅಂತಹ ಸ್ಫೂರ್ತಿನೆಲೆಗಳ ಮಾತು ಹಾಗಿರಲಿ, ಈ ಹಿಂದೆ ಒಂದು ತಂಡದಲ್ಲಿದ್ದವರು ಮತ್ತೊಮ್ಮೆ ಇನ್ಯಾರಿಗೋ ಹರಾಜಾಗುವ ಇಲ್ಲಿ, ಹಣ ಮತ್ತು ಥಳಕು ಬಳುಕಿನ ಥ್ರಿಲ್‌ನ ಹೊರತಾದ ಏನನ್ನೂ ಅರಸುವಂತಿಲ್ಲ.
ಇವೆಲ್ಲದರ ಹೊರತಾಗಿ ಜನಸಾಮಾನ್ಯರು ಆ ವೈಭೋಗಕ್ಕೆ ಶರಣಾದರು. ಹೀಗಾಗಿ ಐಪಿಎಲ್ ಹಗರಣಗಳು ಹೊರಬರುತ್ತಿರುವ ಈ ಸಂದರ್ಭದಲ್ಲಿ ವಿಶ್ಲೇಷಣೆಯಾಗಬೇಕಿರುವುದು ಐಪಿಎಲ್‌ಗೆ ಘನವಂತಿಕೆ ತರುವುದು ಹೇಗೆ ಎಂಬುದರ ಬಗ್ಗೆ ಅಲ್ಲ. ಸಿರಿವಂತಿಕೆಯ ಪ್ರದರ್ಶನಕ್ಕೆಂದೇ ಅವತರಿಸಿದ ಆ ಮನರಂಜನಾ ಅವತರಣಿಕೆ ಯಾವ ದೇಶದ ಮಾನ- ಸಮ್ಮಾನಗಳ ಪ್ರತೀಕವೂ ಅಲ್ಲವಾದ್ದರಿಂದ ಅದಕ್ಕೆ ಆರೋಗ್ಯ ತುಂಬುವ ಬಗ್ಗೆ ಚರ್ಚೆ ಆಗಲೂಬೇಕಿಲ್ಲ. ಆದರೆ...
ಹೀಗೊಂದು ಮನರಂಜನಾ ಅವತರಣಿಕೆಯನ್ನು ಅಪ್ಪಿಕೊಂಡಿರುವ ಸಮಾಜದ ಆಂತರ್ಯವನ್ನು ತುಸು ಕೆದಕಲೇಬೇಕಿದೆ. ಶ್ರೀಶಾಂತನ ದಿಗ್ಭ್ರಾಂತ ಮುಖದಲ್ಲಿ ನಮ್ಮೆಲ್ಲರ ಸಮೂಹದ ಪ್ರತಿಬಿಂಬ ಇಣುಕಬೇಕಿದೆ. ಅಷ್ಟೆಲ್ಲ ಹಣ ಗಳಿಸಿಯೂ ಬೆಟ್ಟಿಂಗ್ ದಂಧೆಯಲ್ಲಿ ಕಾಸು ಮಾಡಿಕೊಳ್ಳಲು ಹೊರಟವರಿಗೆ ನಾಚಿಕೆಯಿಲ್ಲವಾ ಎಂದು ಪ್ರಶ್ನಿಸುವ ಭರದಲ್ಲಿ ನಮ್ಮ ಸಮಾಜದ ಮರ್ಯಾದೆಯ ಪ್ರಮಾಣ ಎಷ್ಟು ಎಂಬುದನ್ನು ಅಳೆಯದೇ ಹೋಗುವುದು ಅನ್ಯಾಯವಾದೀತು. ಟಿವಿಯಲ್ಲಿ ಐಪಿಎಲ್ ಪಂದ್ಯ ನೋಡುವಾಗ ಸಾಮಾನ್ಯರಾದ ನಮ್ಮ ವರ್ತನೆ ಹೇಗಿರುತ್ತದೆ ಎಂಬುದನ್ನು ಗಮನಿಸಿದರೆ ಸೋಜಿಗವಾಗುತ್ತದೆ. 'ಈ ಬಾಲ್‌ಗೆ ಫೋರ್ ಬಂದೇ ಬರುತ್ತೆ, ಎಷ್ಟು ಬೆಟ್ಸ್‌'- ಹತ್ತು ಜನ ಕುಳಿತು ಐಪಿಎಲ್ ಪಂದ್ಯ ವೀಕ್ಷಿಸುವ ವೇಳೆ ಈ ಮಾತು ಧ್ವನಿಸದಿರಲು ಸಾಧ್ಯವೇ ಇಲ್ಲ. 'ಥತ್.. ಮಳೆ ಬಂದುಬಿಡ್ತು. ಐಪಿಎಲ್ ಮ್ಯಾಚ್ ದಿನವೇ ಮಳೆ ಬರಬೇಕೇ' ಎಂಬುದೊಂದು ಉದ್ಗಾರ. ಅರೇ.. ನಮ್ಮ ಸಂವೇದನೆಯ ಹಳಿಯನ್ನೇ ಹೇಗೆ ಬುಡಮೇಲು ಮಾಡುತ್ತಿದೆ ಈ ಇಪ್ಪತ್ತು - ಇಪ್ಪತ್ತು ಓವರ್‌ಗಳ ಕ್ಷುಲ್ಲಕ ಪಂದ್ಯ? ಮಳೆ ವಿಳಂಬವಾದಷ್ಟೂ ಬೆಂಗಳೂರಿಗೆ ನೀರಿನ ಬವಣೆ ಹೆಚ್ಚಲಿದೆ ಎಂಬ ವರದಿಗಳು ನಮ್ಮನ್ನು ಆತಂಕಿತಗೊಳಿಸುವುದಿಲ್ಲ. ಕಾಂಕ್ರೀಟ್ ಪದರಗಳನ್ನೇ ಹೊತ್ತು ಈ ನಗರವು ಬಿಸಿ ಏರಿಸಿಕೊಳ್ಳುತ್ತಿರುವಾಗ, ತೆರೆದುಕೊಂಡಿರುವ ನಾಲ್ಕು ಪಾರ್ಕುಗಳಲ್ಲಾದರೂ ಮಳೆಯ ಸಿಂಚನವು ತಂಪು ಉಣಿಸಿ ಆಹಾ ಎನ್ನುವಂತಾಗಲಿ ಎಂದು ಯೋಚಿಸಲಾರೆವು. ಮಲ್ಯ- ಅಂಬಾನಿಯರ ಮೆರವಣಿಗೆಗೆ ಮಳೆ ಅಡ್ಡಿಯಾಗದಿದ್ದರೆ ಸಾಕು ಎಂದು ಹಾರೈಸುವ ಮಟ್ಟಕ್ಕೆ ವಿವೇಚನೆ ಬರಿದಾಗಿಹೋಯಿತೇ?
ಐಪಿಎಲ್ ಅಂತಲ್ಲ, ಸಿನಿಮಾ- ಕತೆ- ನಾಟಕ ಮುಂತಾದ ಅಭಿರುಚಿಯ ಎಲ್ಲ ಶಾಖೆಗಳೂ ತಮ್ಮೊಳಗೆ ಮನೋರಂಜನೆಯೊಂದನ್ನು ತುಂಬಿಕೊಂಡಿದ್ದರೆ ಸಾಕು ಎಂಬ ಪ್ರತಿಪಾದನೆಗೆ ಈಗ ಬಹುಮತ. ಫಿಲಾಸಫಿ ಕೇಳೋದಕ್ಕೆ ಅದೇನು ಕ್ಲಾಸ್‌ರೂಮಾ, ಯಾವುದೇ ಕಲೆಯಲ್ಲಿ ತತ್ವ- ಮೌಲ್ಯ ಎಂಬುದೆಲ್ಲ ಇರಬೇಕೆಂದು ಏಕಾದರೂ ಬಯಸಬೇಕು?, ಆ ಕ್ಷಣಕ್ಕೆ ನರಗಳನ್ನು ಉತ್ತೇಜಿಸುವ ಸಾಮರ್ಥ್ಯ ಅದಕ್ಕಿದ್ದರೆ ಸಾಕು ಎಂಬುದು ಇಂದಿನ ಜನಪ್ರಿಯ ತುಡಿತ. ಹೌದು, ಒತ್ತಡವೇ ದಿನಚರಿಯಾಗಿರುವ ಈ ಜಮಾನಾದಲ್ಲಿ ಪಾಠ ಹೇಳಿಸಿಕೊಳ್ಳುವ, ಉಪದೇಶ ಕೇಳುವ ಮನಸ್ಥಿತಿ ಯಾರಲ್ಲೂ ಇರದು. ಹಾಗೆಂದು 'ಎಂಟರ್‌ಟೇನ್‌ಮೆಂಟ್, ಎಂಟರ್‌ಟೇನ್‌ಮೆಂಟ್, ಎಂಟರ್‌ಟೇನ್‌ಮೆಂಟ್‌' ಎಂಬುದನ್ನಷ್ಟೇ ಮಂತ್ರವಾಗಿರಿಸಿಕೊಂಡರೆ ಅದು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದಕ್ಕೆ ಐಪಿಎಲ್‌ನ ಅಪಸವ್ಯಗಳು ಸಾಕ್ಷಿ ಹೇಳುವುದಕ್ಕೆ ನಿಂತಂತಿವೆ. ಈಗ ಅದೆಂಥ ಸಂದಿಗ್ಧಕ್ಕೆ ಬಿದ್ದಿದ್ದೇವೆ ಎಂದರೆ ಇನ್ನು ಮುಂದೆ ಸಿಕ್ಸ್-ಫೋರ್‌ಗಳಿಗೆ ಸಿಳ್ಳೆ ಹೊಡೆಯುತ್ತ ಆಟವನ್ನು ಆನಂದಿಸುವುದೋ ಅಥವಾ ಆಟಗಾರನ ದಿರಸು, ಕೈಗೆ ಕಟ್ಟಿದ ದಾರ, ಟವೆಲ್ಲುಗಳನ್ನೆಲ್ಲ ಗಮನಿಸುತ್ತ ಈತ ಹೇಗೆ ಫಿಕ್ಸ್ ಆಗಿರಬಹುದು ಎಂದು ಯೋಚಿಸುವುದೋ ತಿಳಿಯದಾಗಿದೆ.  
ಐಪಿಎಲ್ ಎಂಬ ಥಳುಕಿನ ಲೋಕದಲ್ಲಿ ಹೊರಬಂದಿರುವ ಹಗರಣಗಳು ಹಾಗೂ ಇನ್ನು ಮುಂದೆಯೂ ತೆರೆದುಕೊಳ್ಳಬಹುದಾದ ಅಡ್ನಾಡಿ ವ್ಯವಹಾರಗಳು ಖಂಡಿತ ದಿಗಿಲಿಗೆ ದೂಡುವ ವಿದ್ಯಮಾನಗಳೆನಿಸಿಕೊಳ್ಳಲಾರವು. ಸಿರಿವಂತರ ಅಡ್ಡೆಯ ತವಕ-ತಲ್ಲಣಗಳ ಬಗ್ಗೆ ಸಾಮಾನ್ಯರು ಅಷ್ಟಾಗಿ ತಲೆಕೆಡಿಸಿಕೊಳ್ಳಬೇಕಿರುವುದು ಎಂಥದೂ ಇಲ್ಲ. ಆದರೆ ನಿಜಕ್ಕೂ ಕಳವಳಗೊಳ್ಳಬೇಕಿರುವುದು ಸಮಾಜದ ಅಭಿರುಚಿ ಅದ್ಯಾವ ದಿಕ್ಕು ಹಿಡಿದಿದೆ ಎಂಬ ಬಗ್ಗೆ. ನಾವು ಶ್ರೀಮಂತರ ಅತಿರೇಕಗಳ ಬಗ್ಗೆ ಬಾಯ್ತುಂಬ ಬಯ್ದುಕೊಳ್ಳುತ್ತೇವೆ. ಹಾಗೆ ಬಯ್ಯುವುದರಲ್ಲಿ ಯಾವ ರಿಸ್ಕೂ ಇಲ್ಲ, ಏಕೆಂದರೆ ನಾವು ಶ್ರೀಮಂತರಲ್ಲ! ರಾಜಕಾರಣಿಗಳೆಲ್ಲ ಹಾಳಾಗಿ ಹೋಗಿದ್ದಾರೆ ಎಂದು ಮನಸಾರೆ ಶಾಪ ಹಾಕುವಾಗ, ಅವರಿಗೆ ಸಿಕ್ಕ ಅವಕಾಶ ನಮ್ಮೆದುರೂ ತೆರೆದುಕೊಂಡರೆ ಎಷ್ಟರಮಟ್ಟಿಗೆ ಸಾಚಾತನ ಉಳಿಸಿಕೊಂಡಿರುತ್ತೇವೆ ಎಂದು ವಿಶ್ಲೇಷಿಸಿಕೊಳ್ಳುವುದಿಲ್ಲ. ಐಪಿಎಲ್‌ನ ಟ್ವೆಂಟಿ-ಟ್ವೆಂಟಿ ಮನರಂಜನೆಯನ್ನು ಸಮಾಜವು ಅಪ್ಪಿಕೊಂಡು ಪ್ರೋತ್ಸಾಹಿಸಿದ ರೀತಿ ಅದರದ್ದೇ ಒಡಲಾಳದ ಫೋರ್‌ಟ್ವೆಂಟಿ ಭಾವಗಳನ್ನು ಹಿಡಿದಿಟ್ಟಿದೆ ಎಂದೆನಿಸದೇನು? ಕೆಲವೇ ತಾಸುಗಳಲ್ಲಿ ಎಲ್ಲವೂ ಸಂಪನ್ನವಾಗುವ, ಆರಂಭದಲ್ಲೇ ಅಬ್ಬರ ಶುರುವಾಗಿ ಯಾವ ಏಕತಾನತೆಗೂ ಅವಕಾಶವಿಲ್ಲದೇ ಝಗಮಗದಲ್ಲೇ ಮುಕ್ತಾಯಕ್ಕೆ ಎಳಸುವ, ಲೆಕ್ಕವಿಡಲಾಗದ ಅಂಕಿಗಳ ಪ್ರಮಾಣದಲ್ಲಿ ದುಡ್ಡಿನ ಡೌಲು ಮೆರೆಯುವ, ಸ್ತ್ರೀ ಸೌಂದರ್ಯವೂ ನಡು ನಡುವೆ ತಿದಿ ಒತ್ತುವ... ಅಸಂಖ್ಯ ಕಣ್ಕುಕ್ಕುವಿಕೆಗಳ ಸಂಗಮವೇ ಐಪಿಎಲ್. ಅದನ್ನು ಆತುಕೊಂಡು ನೋಡುವ ಕಣ್ಣುಗಳಲ್ಲಿರುವುದು ಅಂಥ ಜೀವನ ಪದ್ಧತಿಗೊಂದು ಅನುಮೋದನೆ! ಕ್ರಿಕೆಟ್ ಮನರಂಜನಾಕಾರರನ್ನೂ ಅವರ ಮಾಲೀಕರನ್ನೂ ಹೀರೋಗಳನ್ನಾಗಿಸಿರುವವರು ನಾವೇ ಆದ್ದರಿಂದ ಬೂಟಾಟಿಕೆ ಇರೋದು ಐಪಿಎಲ್‌ನಲ್ಲಲ್ಲ, ಸಮಾಜದ ಅಭಿರುಚಿಯಲ್ಲಿ ಹಾಗೂ ಅದು ನಿರ್ಮಿಸಿರುವ 'ಪ್ರೋತ್ಸಾಹಕ ಪರಿಸರ'ದಲ್ಲಿ.
ಐಪಿಎಲ್ ಮನರಂಜನೆಯ ಕುರಿತು ಸಾಮಾನ್ಯರ ಕಡುವ್ಯಾಮೋಹ ಎಲ್ಲರ ಅಂತರಂಗದಲ್ಲೂ ಆಟವಾಡುತ್ತಿರುವ ಅಭೀಪ್ಸೆಗಳನ್ನು ಸೂಚಿಸುತ್ತದೆ. ಸಾಂಪ್ರದಾಯಿಕ ಕ್ರಿಕೆಟ್‌ಗೆ ಹೋಲಿಸಿದಾಗ ಐಪಿಎಲ್‌ನಲ್ಲಿ ಸೆಲಿಬ್ರಿಟಿ ಎನ್ನಿಸಿಕೊಳ್ಳುವುದಕ್ಕೆ ಹೆಚ್ಚಿನ ಅವಧಿ ಬೇಕಿಲ್ಲ. ಸಹನೆಯ ಪಥದಲ್ಲಿ ಸಾಗಬೇಕಿಲ್ಲ. ಶ್ರಮಕ್ಕೂ ಪ್ರತಿಫಲಕ್ಕೂ ನಡುವೆ ಅಜಗಜಾಂತರವಾದಾಗ ಸಾಧನೆಯ ಬಗ್ಗೆ ಸಾರ್ಥಕ್ಯ- ಗೌರವ ಮೂಡುವುದಾದರೂ ಹೇಗೆ? ದುಡ್ಡು ಬಂದು ಬೀಳುತ್ತಿದೆ ಬಿಡು ಎಂಬ ತಾತ್ಸಾರ. ಹಣ ಗಳಿಸುವ ಥ್ರಿಲ್ ಅಷ್ಟುಬೇಗ ಕೈಗೂಡಿದಮೇಲೆ ಅದಕ್ಕೂ ಮಿಗಿಲಾದ ರೋಚಕತೆಗಳ ಬೆನ್ನು ಹತ್ತುವ ಪ್ರಲೋಭನೆ ಶುರುವಾಗುತ್ತದೆ. ಹೆಣ್ಣು, ಡ್ರಗ್ಸ್, ಮಾಫಿಯಾ... ಹೀಗೆ ಪಟ್ಟಿ ತೆರೆದುಕೊಳ್ಳುತ್ತದೆ. ಇನ್ನು ಇದ್ದಿದ್ದರಲ್ಲೇ ಸಂಭಾವಿತರಾಗಿ ಉಳಿಯುವವರು ತಮ್ಮ ವರ್ಚಸ್ಸನ್ನು ಬ್ರಾಂಡ್‌ಗಳಲ್ಲಿ ಪರಿವರ್ತಿಸುವ ಓಟದಲ್ಲಿ ಥ್ರಿಲ್ ಪಡೆಯುತ್ತಾರೆ. ನಾಲ್ಕು ರುಪಾಯಿ ಮೌಲ್ಯಕ್ಕೆ ಸರಿ ಹೊಂದಬಹುದಾದ ಬಣ್ಣದ ಪಾನೀಯಗಳನ್ನು ಮೂರ್ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಅವರು ಮಾರುತ್ತಾರೆ ಹಾಗೂ ನಾವದನ್ನು ಕೊಂಡುಕೊಳ್ಳುತ್ತೇವೆ! ಕೇವಲ 'ಬ್ರಾಂಡ್‌'ಗಳಾಗಿರುವ ಆಟಗಾರರಿಗೆ 'ಲೆಜೆಂಡ್‌'ಗಳು ಎಂಬ ಬಿರುದು ನೀಡುತ್ತೇವೆ. ಇವೆಲ್ಲವೂ ಏಕೆಂದರೆ ನಾವೆಲ್ಲರೂ ನಮ್ಮ ಬದುಕನ್ನು ಟಿಟ್ವೆಂಟಿ ಮಾದರಿಯಲ್ಲೇ ಪರಿಭಾವಿಸಿಕೊಳ್ಳುವುದಕ್ಕೆ ಪ್ರಾರಂಭಿಸಿ ಬಹಳವೇ ಸಮಯವಾಗಿದೆ. ಬೇಗ ನೌಕರಿ, ಸಿಕ್ಕಾಪಟ್ಟೆ ದುಡ್ಡು, ಕಾರು-ಮನೆ, ಐಷಾರಾಮಿ ಇವೆಲ್ಲವೂ ಈಗೆಂದರೆ ಈಗ ಸಿಕ್ಕಿಬಿಡಬೇಕು. ನೈತಿಕತೆ, ಸರಿದಾರಿ, ಮೌಲ್ಯಗಳ ಮನೆ ಹಾಳಾಗ!
ಈಗ ಐಪಿಎಲ್ ಅನ್ನು ಬಯ್ಯುವುದಕ್ಕೆ ಹೊರಟವರೇ ಹುಷಾರು! ಇದು ದಾರಿ ತಪ್ಪಿದ ಶ್ರೀಶಾಂತ್ ಮತ್ತು ಕಂಪನಿಯ ಕತೆ ಮಾತ್ರವಲ್ಲ, ನಮ್ಮದೇ ಸಮಾಜದ ಪ್ರತಿಬಿಂಬ. ಇಲ್ಲದಿದ್ದರೆ ಕಿಂಗ್‌ಫಿಶರ್ ವಾಯುಯಾನವನ್ನು ಬೇಕಾಬಿಟ್ಟಿ ನಿರ್ವಹಿಸಿ, ಆ ವೃತ್ತಿಯ ಎಷ್ಟೋ ಕುಟುಂಬಗಳನ್ನು ನಡುನೀರಿನಲ್ಲಿ ಕೈಬಿಟ್ಟ ವಿಜಯ್ ಮಲ್ಯರಂಥ ಉದ್ಯಮಿ ಏನೂ ಆಗಿಲ್ಲವೆಂಬಂತೆ ಈ ಮೋಜಿನಾಟದಲ್ಲಿ ಮಿಂದೇಳುವಾಗ ನಮಗೆ ಅಸಹಜ ಎನ್ನಿಸದೇ ಇರುತ್ತಿರಲಿಲ್ಲ. ಪುಣೆ ವಾರಿಯರ್ಸ್ ಮಾಲೀಕತ್ವ ವಹಿಸಿದ್ದ ಸಹಾರಾ ಸಮೂಹದ ಮೇಲೆ ಆದಾಯ ತೆರಿಗೆ ದಾಳಿಯಾಗಿ ಕಪ್ಪುಹಣದ ಆರೋಪಗಳು ಕೇಳಿಬಂದವು. ಕೋಲ್ಕತಾ ನೈಟ್ ರೈಡರ್ಸ್‌ನ ಪ್ರಮುಖ ಪ್ರಾಯೋಜಿತ ಅಂಗ ರೋಸ್ ವ್ಯಾಲಿ ಎಂಬ ಕಂಪನಿಯ ಚರಿತ್ರೆಯಲ್ಲಿ ಚಿಟ್‌ಫಂಡ್ ಹಗರಣದ ಕಲೆ ಇದೆ. 2010ರಲ್ಲಿ ಯಾವಾಗ ಇದು 'ಸೆಬಿ'ಯ ನಿಗಾಕ್ಕೆ ಬಂತೋ ಆಗ ಆ ಸ್ಕೀಮ್ ರದ್ದುಗೊಳಿಸಿ ಐಪಿಎಲ್ ಮಂಚಕ್ಕೆ ಇಳಿಯಿತು. ಬಿಸಿಸಿಐ ಅಧ್ಯಕ್ಷನಾಗಿದ್ದುಕೊಂಡೂ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲೀಕರಾಗಿರುವ ಎನ್. ಶ್ರೀನಿವಾಸನ್ 'ಇಂಡಿಯಾ ಸಿಮೆಂಟ್ಸ್‌'ನ ಒಡೆಯರೂ ಹೌದು. ಇವರು ಜಗನ್‌ಮೋಹನ್ ರೆಡ್ಡಿಯವರ ಉದ್ಯಮದಲ್ಲಿ ಹೂಡಿಕೆ ಮಾಡಿ ಪ್ರತಿಯಾಗಿ ಆಂಧ್ರ ಪ್ರದೇಶ ಸರ್ಕಾರದಿಂದ ಹಲವು ಲಾಭಗಳನ್ನು ಪಡೆದುಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಇಂಥವರೆಲ್ಲ ಸೇರಿಕೊಂಡು ರೂಪಿಸಿದ ಐಪಿಎಲ್ ಅನ್ನು ಅಪ್ಪಿಕೊಂಡವರು ನಾವು.
ಹೇಳಿ, ನಾಚಿಕೆ ಪಡಬೇಕಾಗಿರುವವರು ಯಾರೆಲ್ಲ?

-ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com