ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ನಾವು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅವು ಬರೀ ಮುಗ್ಧ ಮತದಾರರನ್ನು ಸೆಳೆಯುವ ಪೊಳ್ಳು ಭರವಸೆಗಳಾಗಿರುತ್ತವಷ್ಟೇ ಎನ್ನುವುದು ನಮಗೆ ಗೊತ್ತು. ಆದರೆ ಬಿಜೆಪಿ ವಿರೋಧಿ ಅಲೆಯಿಂದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ಬಾರಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಾಗಿ ಹೇಳುತ್ತಿದೆ. 'ಇದಕ್ಕೆ (ಪ್ರಣಾಳಿಕೆಗೆ) ನಾವು ಬದ್ಧರಾಗಿದ್ದೇವೆ. ಇದು ಹುಸಿ ಭರವಸೆಗಳ ಕರಪತ್ರವಲ್ಲ. ಅಸಾಧ್ಯವಾದುದರ ಅಥವಾ ಅನುಷ್ಠಾನಕ್ಕೆ ತರಲಾಗದ ಕೆಲಸದ ಬಗ್ಗೆ ಇದು ಮಾತನಾಡುವುದಿಲ್ಲ. ಪ್ರಣಾಳಿಕೆಯಲ್ಲಿ ನೀಡಲಾಗಿರುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವ ಕುರಿತು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುತ್ತೇವೆ' ಎಂದು ಕಾಂಗ್ರೆಸ್ ಹೇಳುತ್ತಿದೆ. ಅದು ಮಾತು ತಪ್ಪುವುದಿಲ್ಲ ಎಂದು ಆಶಿಸೋಣ.
ಬೆಂಗಳೂರಿಗಾಗಿ ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಏನಿದೆ ಎನ್ನುವುದರತ್ತ ಕಣ್ಣುಹಾಯಿಸಿದಾಗ...
ಮೂಲಭೂತ ವ್ಯವಸ್ಥೆಗಳು
ಮೆಟ್ರೋ: ಮೆಟ್ರೋದ ಮೊದಲ ಮತ್ತು ಎರಡನೆಯ ಹಂತದ ನಿರ್ಮಾಣ ಕಾರ್ಯದ ವೇಗವನ್ನು ಹೆಚ್ಚಿಸಲಾಗುವುದು ಮತ್ತು ಹೊರವಲಯದ ಉಪನಗರಗಳಿಗೂ ಇದನ್ನು ವಿಸ್ತರಿಸಲಾಗುವುದು.
ಸಾರ್ವಜನಿಕ ಸಾರಿಗೆ: ಬಿಎಮ್ಟಿಸಿ ಮತ್ತು ಮೆಟ್ರೋ ಸೇವೆಗಳನ್ನು ಸಂಘಟಿಸುವುದು. ಸಮರ್ಪಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಬಸ್ ಸೇವೆಯನ್ನು(ಸಮಯವನ್ನು) ಮರುರಚನೆ ಮಾಡುವುದು. ನಗರವನ್ನು ಎಂಟು ವಲಯಗಳಾಗಿ ವಿಂಗಡಿಸಲಾಗುವುದು ಮತ್ತು ಕೇವಲ ಎಂಟು ರೀತಿಯ ಟಿಕೆಟ್ಗಳನ್ನಷ್ಟೆ ಚಾಲನೆಯಲ್ಲಿಟ್ಟು, ಮೆಟ್ರೋ ಮತ್ತು ಬಿಎಮ್ಟಿಸಿ ಬಸ್ಗಳಿಗೂ ಸಮಾನವಾಗಿರುವಂತೆ ಮಾಡುವುದು.
ಸ್ಯಾಟಲೈಟ್ ಟೌನ್: ಮೂಲಸೌಕರ್ಯಾಭಿವೃದ್ಧಿಯ ಮೂಲಕ ಗ್ರೇಟರ್ ಬೆಂಗಳೂರು ಪ್ರದೇಶ ಸ್ಥಾಪಿಸಿ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಕನಕಪುರ ಮತ್ತು ಇನ್ನಿತರ ನಗರಗಳೊಂದಿಗೆ ಹೆಚ್ಚಿನ ಸಂಪರ್ಕ ಕಲ್ಪಿಸುವುದು.
ಆಡಳಿತ ಸುಧಾರಣೆಗಳು
ಘನ ತ್ಯಾಜ್ಯ ವಿಲೇವಾರಿ: ಗಾರ್ಬೇಜ್ ಸ್ವಚ್ಛತಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು
ಬಿಬಿಎಂಪಿ: ನೀರು ಸರಬರಾಜು, ಸಾರಿಗೆ, ವಸತಿ, ವಿದ್ಯುತ್ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಒಂದೇ ಏಜೆನ್ಸಿಯಡಿ ತರುವ ನಿಟ್ಟಿನಲ್ಲಿ ಬಿಬಿಎಂಪಿಯಲ್ಲಿ ಹೊಸ ಕಾನೂನನ್ನು ಜಾರಿಗೆ ತರುವುದು.
ಪಾರದರ್ಶಕತೆ ಮತ್ತು ಉತ್ತರದಾಯಿತ್ವ: ಸ್ವಚ್ಛ, ಸುಭದ್ರ, ಪಾರದರ್ಶಕ, ಜನತಾ ಸ್ನೇಹಿ, ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡುವುದು
ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ: ಕೆರೆ ಮತ್ತು ಉದ್ಯಾನಗಳ ನಿರ್ವಹಣೆಯಲ್ಲಿ ನಿವಾಸಿ ಸಂಘಗಳು ಪಾಲ್ಗೊಳ್ಳುವಂತೆ ಮಾಡುವುದು
ಮಹಿಳಾ ಸುರಕ್ಷೆ: ಲಿಂಗ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಾಲೆ, ಕಾಲೇಜು ಮತ್ತು ಉದ್ಯಮಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಇದರಲ್ಲಿ ಎನ್ಜಿಒಗಳು ಪಾಲ್ಗೊಂಡಿರುತ್ತವೆ.
ಪರಿಸರ ಕಾಳಜಿ: ಎಲ್ಲಾ ಸಾರಿಗೆ ವಾಹನಗಳಲ್ಲೂ ಸಿಎನ್ಜಿಯನ್ನು ಕಡ್ಡಾಯಗೊಳಿಸುವುದು.
ಮರ ಬೆಳೆಸುವುದು: ಬೃಹತ್ ಪ್ರಮಾಣದಲ್ಲಿ ಮರಗಳನ್ನು ಬೆಳೆಸುವ ಮೂಲಕ ಉದ್ಯಾನ ನಗರಿ ಎಂಬ ಹೆಸರನ್ನು ಉಳಿಸಿಕೊಳ್ಳುವುದು.
ನೀರಿನ ಅಭಾವ: 100 ಪ್ರತಿಶತ ತ್ಯಾಜ್ಯಜಲ ಪರಿಷ್ಕರಣೆ ಮಾಡುವುದು. ಮತ್ತು ನೀರಿನ ಮರುಬಳಕೆಯನ್ನು ಪ್ರೋತ್ಸಾಹಿಸುವುದು.
ಗೃಹ ನಿರ್ಮಾಣ
- ಅಪಾರ್ಟ್ಮೆಂಟ್ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರನ್ನು ಮುಂದಿನ ಐದು ವರ್ಷಗಳಲ್ಲಿ ಸ್ಲಂ ಮುಕ್ತ ನಗರವನ್ನಾಗಿಸುವುದು. ಸ್ಲಂ ವಾಸಿಗಳಿಗೆ ಇನ್ನಿತರ ಸ್ಥಳಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವುದು.
ಸಂಚಾರ ದಟ್ಟಣೆ
- ಹೆಚ್ಚು ಪಾರ್ಕಿಂಗ್ ಸ್ಥಳಗಳ ನಿರ್ಮಾಣ ಮತ್ತು ಖಾಸಗಿ ವ್ಯಕ್ತಿಗಳು ನಿರ್ಮಾಣಕ್ಕೆ ಮುಂದಾದರೆ ಪ್ರೋತ್ಸಾಹಿಸುವುದು.
- ಪ್ರಸ್ತುತ ರಸ್ತೆಗಳ ಸುಧಾರಣೆ ಮತ್ತು ದಟ್ಟ ಸಂಚಾರವಿರುವ ಕಾರಿಡಾರ್ಗಳ ಗಾತ್ರವನ್ನು ವಿಸ್ತರಿಸುವುದು.
ಕಾಂಗ್ರೆಸ್ ತನ್ನ ಭರವಸೆಗಳನ್ನು ಅನುಷ್ಠಾನಕ್ಕೆ ತರುವುದೇ? ಬೆಂಗಳೂರಿನ ವಿವಿಧ ಪಕ್ಷಕ್ಕೆ ಸೇರಿದ 28 ಶಾಸಕರ ಜೊತೆಗೆ ಮಾತನಾಡಿ ಎಲ್ಲರನ್ನೂ ಒಗ್ಗೂಡಿಸಿ ಹೇಳಿದ ಸಮಯಕ್ಕೆ ತಕ್ಕಂತೆ ಕೆಲಸ ಮಾಡಲಿದೆಯೇ? ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ತನ್ನ ಭರವಸೆಗಳು ನಿಸ್ಸಂಶಯವಾಗಿಯೂ ಜಾರಿಯಾಗುವಂತೆ ಅದು ಮಾಡಬಲ್ಲದೇ? ಕಾದು ನೋಡಲೇಬೇಕು. ತನ್ನ ಗೆಲುವು ಅಚಾನಕ್ಕಾಗಿ ಆಗಿದ್ದಲ್ಲ, ಬದಲಾಗಿ ಹಳಿ ತಪ್ಪಿದ ರಾಜ್ಯವನ್ನು ಮತ್ತೆ ಸರಿದಾರಿಗೆ ತರಲು ದಕ್ಕಿದ್ದು ಎನ್ನುವುದನ್ನು ಕಾಂಗ್ರೆಸ್ ರುಜುವಾತು ಮಾಡಿ ತೋರಿಸಬೇಕು.
ಬೆಂಗಳೂರಿನ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಪಕ್ಷಭೇದವನ್ನು ಮರೆತು ಕಾಂಗ್ರೆಸ್ನೊಂದಿಗೆ ಕೈಜೋಡಿಸಿ ಬೆಂಗಳೂರನ್ನು ಸಂಕಟದಿಂದ ಪಾರುಮಾಡಬೇಕು. ಬೆಂಗಳೂರಿಗರು ಈ ಬಾರಿ ಪಕ್ಷಕ್ಕಲ್ಲದೆ ಅಭ್ಯರ್ಥಿಗಳ ಮುಖ ನೋಡಿ ಮತ ನೀಡಿದ್ದಾರೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಹಾಗಾಗೇ ಮತದಾರರು ತಾವು ಆರಿಸಿ ಕಳುಹಿಸಿದ ಅಭ್ಯರ್ಥಿಗಳ ಪ್ರತಿ ಹೆಜ್ಜೆಯ ಮೇಲೂ ಕಣ್ಣಿಟ್ಟಿರುತ್ತಾರೆ. ಅವರು ಕೊಟ್ಟ ಭರವಸೆಗಳ ಬಗ್ಗೆ ಅನವರತ ಪ್ರಶ್ನಿಸುತ್ತಿರುತ್ತಾರೆ. ಪ್ರತಿ ಅಭ್ಯರ್ಥಿ, ಆತ ಯಾವುದೇ ಪಕ್ಷದವನಾಗಿರಲಿ, ತಮ್ಮ ಕ್ಷೇತ್ರದ ಜನತೆಯನ್ನು ಒಲಿಸಬೇಕಾದರೆ ಕಷ್ಟಪಟ್ಟು ಕೆಲಸ ಮಾಡಲೇಬೇಕು.
ಗೆಲುವೊಂದೇ ಎಲ್ಲವೂ ಅಲ್ಲ. ಕಾಂಗ್ರೆಸ್ ತಾನು ನೀಡಿದ ಭರವಸೆಗಳನ್ನು ಈಡೇರಿಸುವುದಷ್ಟೇ ಅಲ್ಲದೆ ಉತ್ತಮ ಮತ್ತು ಸುಭದ್ರ ಆಡಳಿತವನ್ನೂ ಕೊಡಬೇಕು. ಬಿಜೆಪಿ ಈ ಪರಿ ಮುಜುಗರಕ್ಕೊಳಗಾಗಲು ಕಾರಣ ಅದು ಈ ಎರಡೂ ವಿಷಯಗಳಲ್ಲೂ ಸೋತಿತು ಎಂಬುದಕ್ಕೆ. ಅದಾಗ್ಯೂ ಜನತೆಗೆ ತಮ್ಮದೇ ಆದ ಬೇಡಿಕೆಗಳಿರುತ್ತವೆ.
ಹಾಗಾಗೇ ಅವರು ಎಮ್ಎಲ್ಎಗಳ ಕೆಲಸಗಳನ್ನು ಕೂಲಂಕಷವಾಗಿ ಗಮನಿಸುತ್ತಲೇ ಇರುತ್ತಾರೆ.
ಕೊನೆಯ ಗುಟುಕು: ಬೆಂಗಳೂರಿನ ಶಾಸಕರಿಗಾಗಿ ನಾಗರಿಕರ ಪ್ರಣಾಳಿಕೆ: ನಮ್ಮ ಬೆಂಗಳೂರು ಫೌಂಡೇಷನ್(ಎನ್ಬಿಎಫ್) ಹಲವಾರು ನಿವಾಸಿ ಸಂಘಗಳೊಂದಿಗೆ ಸೇರಿ ನಾಗರಿಕ ಪ್ರಣಾಳಿಕೆಯನ್ನು ತಯಾರಿಸಿದೆ. ಜೂನ್ 7 ರಂದು ನಗರದ 28 ಎಮ್ಎಲ್ಎಗಳಿಗೆ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅದನ್ನು ತಲುಪಿಸಲಿದೆ. ನಾಗರಿಕರಿಗೆ ಹಲವು ಸಮಸ್ಯೆಗಳ ಬಗ್ಗೆ ಆಗಿರುವ ನಿರಾಸೆಯನ್ನು ಮತ್ತು ಅದೇ ಸಮಯದಲ್ಲಿ ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನೂ ಒದಗಿಸುವುದಕ್ಕಾಗಿ ಈ ನಡೆಗೆ ಮುಂದಾಗಿದ್ದೇವೆ ಎನ್ನುತ್ತದೆ ನಮ್ಮ ಬೆಂಗಳೂರು ಫೌಂಡೇಷನ್. 'ನಮ್ಮ ಹೋರಾಟ ವರದಿಯನ್ನು ತಲುಪಿಸುವ ಮೂಲಕ ಮುಗಿಯುವುದಿಲ್ಲ, ಅದರಲ್ಲಿರುವ ಅಂಶಗಳೆಲ್ಲ ಜಾರಿಯಾಗುವವರೆಗೂ ಇರುತ್ತದೆ' ಎನ್ನುವುದು ಅದರ ನಿಖರ ಮಾತು. ಬೆಂಗಳೂರಿನ ಶಾಸಕರೇ, ಸವಾಲು ಎದುರಿಸಲು ಸಿದ್ಧರಾಗಿ!
-ಎಚ್.ಎಸ್. ಬಲರಾಮ್
hsbalram@gmail.com