ಅಂಕಣಗಳು

ಸಾರಿಗೆ ವ್ಯವಸ್ಥೆಯೇ ನಿಜವಾದ ಜವರಾಯ!

Published On :

ಬೆಂಗಳೂರಿನಿಂದ ಹೈದರಾಬಾದಿಗೆ ಹೊರಟಿದ್ದ ಜಬ್ಬಾರ್ ಟ್ರಾವೆಲ್ಸ್‌ನ ಬಸ್ಸು ನಿನ್ನೆ ಬೆಳಿಗ್ಗೆ ಸುಟ್ಟು ಕರಕಲಾಗಿ ಅದರಲ್ಲಿದ್ದ 47 ಪ್ರಯಾಣಿಕರ ಪ್ರಾಣದ ಆಹುತಿಯಾಗಿಸಿದ ಸುದ್ದಿ ಮನನೋಯಿಸಿತು. ಆ ಬಸ್ಸಿನಲ್ಲಿದ್ದ ಅದೆಷ್ಟೋ ಜನ ತಿಂಗಳುಗಳ ನಂತರ ಹೆತ್ತ ತಾಯಿಯನ್ನು ನೋಡಲು, ತಂದೆಯೊಂದಿಗೆ ದೀಪಾವಳಿಯ ಬೆಳಕು ಕಾಣಲುಹೊರಟಿದ್ದರು. ಇನ್ನೆಷ್ಟೋ ಜನ ದೂರವಿದ್ದ ಹೆಂಡತಿ ಮಕ್ಕಳನ್ನು ನೋಡಲು, ಕೆಲವರು ಜೀವನೋಪಾಯಕ್ಕಾಗಿ ಕೆಲಸ ಹುಡುಕಿ ಹೊರಟಿದ್ದರು. ಆದರೆ ಆ ಹೆದ್ದಾರಿಯಲ್ಲಿ ಕಾಯುತ್ತ ಕುಳಿತ ಜವರಾಯ ಆ ಎಲ್ಲರನ್ನು ಒಟ್ಟಿಗೆ ಬಲಿತೆಗೆದುಕೊಂಡ. ಹಬ್ಬದ ಸವಿಯುಣ್ಣಲು ಹೊರಟವರು ಶವವಾಗಿ ಹೋದರು. ಯಾರ ತಪ್ಪಿಗೆ ದೇವರು ಅದ್ಯಾರಿಗೆ ಶಿಕ್ಷೆ ನೀಡಿದನೋ ಅರಿವಾಗಲಿಲ್ಲ.
ಹೇಳಿ ಕೇಳಿ ಅದು ವೋಲ್ವೋ ಬಸ್, ಸುರಕ್ಷಿತ  ಹಾಗೂ ಕಡಿಮೆ ಅವಧಿಯ ಪ್ರಯಾಣವೆಂಬ ಕಾರಣಕ್ಕೆ ನಾಲ್ಕು ಕಾಸು ಹೆಚ್ಚು ತೆತ್ತಾದರೂ ನಾವು ವೋಲ್ವೊ ಬಸ್ಸಿನಲ್ಲಿ ಓಡಾಡುತ್ತೇವೆ. ಯಾವ ಕಡೆಯಿಂದ ಅಪಘಾತ ಸಂಭವಿಸಿದರೂ ಅತಿ ಕಡಿಮೆ ಪರಿಣಾಮವಾಗುವಂತಹ ಸಂಯೋಜನೆ ಅದರದು. 44 ಜನ ಪ್ರಯಾಣಿಕರು , ಒಬ್ಬ ನಿರ್ವಾಹಕ ಹಾಗೂ ಒಬ್ಬ ಚಾಲಕನನ್ನು ಹೊತ್ತೊಯ್ಯಬಲ್ಲ ಆ ಬಸ್ಸಿನಲ್ಲಿ ಪರಿಮಿತಿಗೂ ಮೀರಿ ಹೆಚ್ಚುವರಿ 5 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅತ್ತ್ಯುತ್ತಮ ನಿರ್ವಹಣೆ ಹಾಗೂ ಅತಿ ಸುರಕ್ಷಿತ ಬಸ್ಸಿನ ಗತಿಯೇ ಹೀಗಾದರೆ ಸಾಮಾನ್ಯ ಬಸ್ಸುಗಳು ಅಥವಾ ಸಾಮಾನ್ಯ ಸಾರಿಗೆ ವಾಹನಗಳ ಗತಿ ಏನು? ತಾಂತ್ರಿಕ ವಿಷಯಗಳೇನೇ ಇರಲಿ, ಇಂದು ಈ ಅವಘಡ ಸಂಭವಿಸಿರುವುದಕ್ಕೆ ನೇರ ಹೊಣೆ ಯಾರು?
ಮೊದಲಾಗಿ, ಜಬ್ಬಾರ್ ಟ್ರಾವೆಲ್ಸ್‌ಗೆ ಸೇರಿದ ಆ ಬಸ್ಸು ಟಿಕೆಟ್ ನೀಡಿ ಪ್ರಯಾಣಿಕರನ್ನು ಸಾಗಿಸಲು ಅನುಮತಿ ಹೊಂದಿರಲಿಲ್ಲ. ಆ ಬಸ್ಸಿನಲ್ಲಿ ಪರಿಮಿತಿಗೂ ಮೀರಿದ ಪ್ರಯಾಣಿಕರಿದ್ದರು (ಆ ಪ್ರಯಾಣಿಕರು ಎಲ್ಲಿ ಕೂತು ಪ್ರಯಾಣಿಸುತ್ತಿದ್ದಿರಬಹುದೆಂದು ಊಹಿಸಿ. ಹೆಚ್ಚಾದ ಪ್ರಯಾಣಿಕರು ಸಾಮಾನ್ಯವಾಗಿ ಕೂರುವುದು ಕ್ಯಾಬಿನ್‌ನಲ್ಲೆ ). ಇನ್ನು ಬಸ್ಸು ಗಂಟೆಗೆ 110 ಕಿ.ಮೀ ಗೂ ಅಧಿಕ ವೇಗದಲ್ಲಿ ಸಂಚರಿಸುತ್ತಿತ್ತಂತೆ. ಬಸ್ಸಿನಲ್ಲಿ ಸುಮಾರು 4 ಕ್ವಿಂಟಾಲ್‌ಗೂ ಅಧಿಕ ಬಟ್ಟೆ ಸಾಗಿಸಲಾಗುತ್ತಿತ್ತು. (ಅದು ಪ್ರಯಾಣಿಕರದ್ದಲ್ಲ). ಮೂಟೆಗಟ್ಟಲೆ ಕೂದಲನ್ನು ಲೋಡ್ ಮಾಡಲಾಗಿತ್ತು. ಹೀಗಿರುವಾಗ ಬೆಂಕಿ ಬಿದ್ದರೆ ಇಷ್ಟು ದೊಡ್ಡ ಅವಘಡವಾಗದೆ ಇದ್ದೀತೆ? ಹಾಗಾದರೆ ಈ ಎಲ್ಲ ಬೇಜವಾಬ್ದಾರಿ ವಿಷಯಗಳಿಗೆ ಯಾರು ಹೊಣೆ? ಈ ವಿಷಯವಾಗಿ ಬರಿ ಒಂದು ಸಾರಿಗೆ ಏಜನ್ಸಿಯನ್ನಷ್ಟೇ ದೂರಬೇಕೆ? ಇಲ್ಲ ಪೂರ್ತಿ ವ್ಯವಸ್ಥೆಯೇ ಇದಕ್ಕೆ ಹೊಣೆಯೇ?
ಪರವಾನಗಿ ಇಲ್ಲದ ಬಸ್ಸು, ಹೆಚ್ಚಿನ ಪ್ರಯಾಣಿಕರು, ಅನಾವಶ್ಯಕ ವಸ್ತುಗಳ ಸಾಗಾಟ, ಇಷ್ಟೆಲ್ಲಾ ಎಡವಟ್ಟುಗಳಿದ್ದರೂ ಅದನ್ನೆಲ್ಲ ಪ್ರಶ್ನಿಸದ ಇಲಾಖೆಯವರು, ಸಂಜೆ ಹೊತ್ತಲ್ಲಿ ಪ್ರತಿ ಒಂದು ಟ್ರಾವೆಲ್ ಏಜನ್ಸಿಯಿಂದ ಜೇಬಿಗೆ ಹತ್ತೋ ಇಪ್ಪತ್ತೋ ಸೇರಿಸಿ ಮನೆ ಸೇರಿಕೊಳ್ಳೋ ಪೊಲೀಸರು, ಸಮಯಕ್ಕೆ ಸರಿಯಾಗಿ ಪ್ರಶ್ನಿಸದ ಸಾರಿಗೆ ಇಲಾಖೆಯ ಅಧಿಕಾರಿಗಳು, ಕಟ್ಟು ನಿಟ್ಟಿನ ಕ್ರಮ ನೀಡದ ಸರ್ಕಾರ ಹಾಗು ಸಾರಿಗೆ ಮಂತ್ರಿಗಳು, ಆತುರದಿಂದ ವಾಹನ ಓಡಿಸೋ ಅವಿವೇಕಿ ಚಾಲಕರು.... ಹೀಗೆ ಅವೆಷ್ಟೋ ಲೋಪಗಳು ಸೇರಿ ಆ ಅಮಾಯಕರನ್ನು ಬಲಿ ಪಡೆದವು.
ಅದಲ್ಲದೆ ಅಪಘಾತದ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಪ್ರಯಾಣಿಸುತ್ತಿದ್ದ 55 ಜನರ ಪೈಕಿ 33 ಜನರ ಹೆಸರು ಮಾತ್ರ ನೋಂದಾಯಿಸಲ್ಪಟ್ಟಿದೆ. ಇನ್ನುಳಿದವರು ಯಾರು, ಅವರ ಬಳಿ ಇದ್ದ ವಸ್ತುಗಳು ಯಾವುವು? ಇದು ಅಪಘಾತವೇ ಅಥವಾ ಪ್ರಯಾಣಿಕರ ಬಳಿಯೇ ಸ್ಫೋಟಗೊಳ್ಳಬಲ್ಲ ಸಾಮಗ್ರಿಗಳಿದ್ದವೇ ಅನ್ನುವುದು ತಿಳಿಯಬೇಕಾಗಿದೆ. ಬಸ್ಸಿನಲ್ಲಿ ತುಂಬಿಸಿದ್ದ ಪ್ರಯಾಣಿಕದಲ್ಲದ ವಸ್ತುಗಳ ಬಗ್ಗೆ ನಿಖರವಾದ ಮಾಹಿತಿಯು ಜಬ್ಬಾರ್ ಟ್ರಾವೆಲ್ಸ್ ಬಳಿ ಇಲ್ಲ ಎಂಬುವುದು ಇನ್ನೊಂದು ಆಘಾತಕಾರಿ ಸುದ್ದಿಯೇ.
ಜಬ್ಬಾರ್ ಟ್ರಾವೆಲ್ಸ್ ಒಂದು ಉದಾಹರಣೆಯಷ್ಟೆ. ಇಂತಹ ಅವೆಷ್ಟೋ ಸಾರಿಗೆ ಏಜನ್ಸಿಗಳು ದಿನ ನಿತ್ಯ ಅಮಾಯಕರ ಬದುಕಿನಲ್ಲಿ ಆಟವಾಡುತ್ತವೆ ಎಂಬುದನ್ನು ನಾವು ಗಮನಿಸಿಯೇ ಇಲ್ಲ. ಇಂದು ಇಷ್ಟು ದೊಡ್ಡ ಅನಾಹುತ ಸಂಭವಿಸಿದ ಮೇಲೆ ಆ ಅಪಾಯದ ಅರಿವಾಗಿದೆ ಅಷ್ಟೆ.
ಇಂದಿಗೂ ಪ್ರತಿ ದಿನ ರಾಣಿಬೆನ್ನೂರಿನಿಂದ ಖಾಸಗಿ ಸಾರಿಗೆ ಬಸ್ಸು ಬೆಂಗಳೂರಿಗೆ ಬರುತ್ತದೆ. ಆ ಬಸ್ಸಿನಲ್ಲಿ 40 ಕ್ಕೂ ಅಧಿಕ ಜನ ಪ್ರಯಾಣಿಸಬಹುದು. ಆದರೆ ಪ್ರಯಾಣಿಕರಷ್ಟೇ ಅಲ್ಲದೆ ಆ ಬಸ್ಸು ಪ್ರತಿನಿತ್ಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಲಗೇಜ್ ತುಂಬಿಕೊಂಡು ರಾತ್ರಿ 11.30ಕ್ಕೆ ರಾಣೆಬೆನ್ನೂರಿನಿಂದ ಹೊರಟು ಬೆಳಿಗ್ಗೆ ಸುಮಾರು 5 ಗಂಟೆಗೆ ಯಶವಂತಪುರ ತಲುಪುತ್ತದೆ. ಅಂದರೆ ಕೇವಲ 5 ಗಂಟೆ 30 ನಿಮಿಷಕ್ಕೆ ಸುಮಾರು 300 ಕಿ.ಮೀ ಕ್ರಮಿಸುತ್ತದೆ. ಅಲ್ಲದೆ ಆಗಿಂದಾಗಲೇ ಅಂದರೆ ಸುಮಾರು ಬೆಳಿಗಿನ 6 ಗಂಟೆಗೆ ಮತ್ತೆ ರಾಣೆಬೆನ್ನೂರಿಗೆ ವಾಪಸು ಪ್ರಯಾಣ ಆರಂಭಿಸುತ್ತದೆ. ಹಗಲು ರಾತ್ರಿ ಎಡಬಿಡದೇ ವಾಹನ ಚಲಾಯಿಸಿದರೆ ಚಾಲಕನ ಪರಿಸ್ಥಿತಿ ಏನು?  ಆತ ಬಸ್ಸು ಓಡಿಸುವಾಗಲೇ ನಿದ್ದೆ ಮಾಡಿದರೆ ಪ್ರಯಾಣಿಕರ ಗತಿ ಏನು?
ಇನ್ನು ಮಂಗಳೂರು- ಉಡುಪಿ ಮಧ್ಯೆ ಓಡಾಡುವ ಬಸ್ಸುಗಳ ಆರ್ಭಟ ತಿಳಿಯದವರ್ಯಾರಿದ್ದಾರೆ? 3-4 ರುಪಾಯಿಗಳಿಗೆ ಒಬ್ಬ ಪ್ರಯಾಣಿಕನನ್ನು ಹಿಡಿಯಲು ಆ ಬಸ್ಸುಗಳ ಚಾಲಕರು ನಡೆಸುವ ಪೈಪೋಟಿ ದೇವರಿಗೆ ಪ್ರೀತಿ. ಬೆಳಗಾವಿಯಿಂದ ಬಿಜಾಪುರ, ಬಾಗಲಕೋಟೆ, ಚಿಕ್ಕೋಡಿ, ಹುಬ್ಬಳ್ಳಿಗೆ ಓಡುವ ಉತ್ತರ ಕರ್ನಾಟಕದ ಖಾಸಗಿ ಬಸ್ಸುಗಳು, ಬೆಂಗಳೂರಿನಲ್ಲೇ ಕಲಾಸಿಪಾಳ್ಯದಿಂದ ಹೊಸೂರು ನೆಲಮಂಗಲಕ್ಕೆ ಹೋಗುವ ಪುಡಾರಿ ಬಸ್ಸುಗಳು ಒಂದೋ ಎರಡೋ? ಇವುಗಳನ್ನೆಲ್ಲ ಕಂಡು ಕಾಣದಂತಿದ್ದು, ಇಂದು ಅವಘಡವಾದ ಮೇಲೆ ಸುದ್ದಿ ವಾಹಿನಿಗಳ ಮುಂದೆ ಬಂದು ಕಣ್ಣೀರು ಸುರಿಸುವ ನಮ್ಮ ಮಂತ್ರಿಗಳು ಯಾಕೆ ಸ್ವಯಂಪ್ರೇರಿತವಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳುವುದಿಲ್ಲ?
ಇಂಥ ನಿರ್ಲಕ್ಷ್ಯದಿಂದಲೇ ಅಲ್ಲವೇ ಕರಾರಸಾಸಂ ನ ವೋಲ್ವೋ ಬಸ್ಸು ಬೆಳಗಾವಿಯ ಬಳಿ ಉರುಳಿ ಬಿದ್ದು ಇನ್ಫೋಸಿಸ್‌ನ 5 ಇಂಜಿನಿಯರ್‌ಗಳ ಬಲಿ ಪಡೆದದ್ದು? ಇನ್ನೊಂದು ಬಸ್ಸು ಗುಂಡ್ಯ ಚೆಕ್ ಬಳಿ ಮರದ ದಿಮ್ಮಿ ಹೊತ್ತೊಯ್ಯುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದದ್ದು? ಇಂತಹ ನಿಷ್ಕಾಳಜಿತನದಿಂದಲೇ ಅಲ್ಲವೇ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ನಿರ್ವಾಹಕ ಚಲಾಯಿಸಿ ರಾಯಚೂರಿನ ಬಳಿ ನದಿ ಕಾಲುವೆಗೆ ಇಳಿಸಿ 40ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು?
ಇನ್ನೂ ಅವೆಷ್ಟು ಈ ತರಹದ ಮಾರಣಹೋಮಗಳು ನಡೆದ ಮೇಲೆ ನಮ್ಮ ಅಧಿಕಾರಿಗಳು, ಸಾರಿಗೆ ಸಚಿವರು, ಸರ್ಕಾರ ಎಚ್ಚೆತ್ತುಕೊಳ್ಳುವುದೋ ಗೊತ್ತಿಲ್ಲ.
ಹಣಕಾಸಿನ ವಿಷಯಕ್ಕೆ ಬರುವುದಾದರೆ ನಮ್ಮ ಸರ್ಕಾರಕ್ಕೆ ಯಾವುದರ ಮೇಲೂ ನಿಗಾ ಇಲ್ಲ ಎಂಬುವುದು ಜಗಜ್ಜಾಹಿರಾಗಿದೆ. ಈ ಹಬ್ಬ ಹರಿದಿನಗಳು ಬರೋದೆ ತಡ. ಎಲ್ಲ ಬಸ್ಸುಗಳ ಪ್ರಯಾಣ ದರ 3 ಪಟ್ಟು ಹೆಚ್ಚಾಗುತ್ತವೆ. ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯ ದಿನಗಳಲ್ಲಿ ಪ್ರಯಾಣ ದರ ಐನೂರು ರುಪಾಯಿ ಆದರೆ ಇಂತಹ ಸಂದರ್ಭಗಳಲ್ಲಿ ಅದು ಹೆಚ್ಚು ಕಮ್ಮಿ 2 ಸಾವಿರ ರುಪಾಯಿಗಳಿಗೆ ಏರುತ್ತದೆ! ಅದನ್ನು ಯಾಕೆ ಎಂದು ಸರ್ಕಾರ ಪ್ರಶ್ನಿಸುವುದೇ ಇಲ್ಲ. ನಗರ ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ಹರಿಯದೇ ಕಾಸುಕಿತ್ತುಕೊಳ್ಳೋ ನಿರ್ವಾಹಕರು, ಟಿಕೆಟ್ ಕೊಟ್ಟು ಚಿಲ್ಲರೆ ಮರಳಿಸದ ಅವರ ಆಟಗಳು, ರಾಜಾಜಿ ನಗರದಲ್ಲಿ ಟಿಕೆಟ್ ಕಾಯ್ದಿರಿಸಿದರೆ ಮಲ್ಲೇಶ್ವರಂ ಮುಖಾಂತರ ಬಸ್ ಓಡಿಸಿ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳೋ ಸಾರಿಗೆ ಬಸ್ಸುಗಳು... ಹೀಗೆ ಹತ್ತು ಹಲವಾರು ಹುಳುಕುಗಳು ಜನರನ್ನು ಕಾಡುವ ಪರಿಯ ಬಗ್ಗೆ ನಮ್ಮ ಸರ್ಕಾರ ನಿಜಕ್ಕೂ ಎಚ್ಚೆತ್ತುಕೊಳ್ಳಬೇಕಿದೆ.
ಸಾರಿಗೆಯಲ್ಲಿ ಶಿಸ್ತು ತರದಿದ್ದರೆ ಒಂದಿನ ನಾವು ನಮ್ಮ ಪ್ರೀತಿಪಾತ್ರರನ್ನೋ ಅಥವಾ ನಮ್ಮ ಪ್ರಾಣವನ್ನೇ ಕಳೆದುಕೊಳ್ಳಬಹುದು. ಆ ದುರ್ಗತಿ ಕಾಸು ತಿಂದು ತೆಪ್ಪಗೆ ಕೂರೋ ಪೊಲೀಸಪ್ಪನ ಮಕ್ಕಳಿಗೋ, ಪುಡಿಗಾಸಿಗಾಗಿ ಪರವಾನಗಿ ಪರಿಮಿತಿ ಪರೀಕ್ಷಿಸದ ಸಾರಿಗೆ ಇಲಾಖೆಯ ಅಧಿಕಾರಿಗೋ ಅಥವಾ ಎಲ್ಲ ಕಂಡು ಕಾಣದಹಾಗೆ ಕೂತಿರುವ ಸರ್ಕಾರದ ಮಂತ್ರಿಗಳಿಗೋ ಬರಬಹುದು ಅನ್ನೋದನ್ನ ಅರಿಯಬೇಕಿದೆ.

- ಮಹಾಂತೇಶ ವಕ್ಕುಂದ
ಹವ್ಯಾಸಿ ಬರಹಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.