

ಬಿಜೆಪಿ- ಕಾಂಗ್ರೆಸ್ ಅಥವಾ ರಾಹುಲ್-ಮೋದಿ ಎಂಬ ಚರ್ಚೆಯಲ್ಲೇ ನಾವು ಹೆಚ್ಚು ತಲೆಕೆಡಿಸಿಕೊಂಡಿದ್ದೇವಾದರೂ ಈ ಸಮಯದಲ್ಲಿ ಆಮ್ ಆದ್ಮಿ ಪಕ್ಷವನ್ನು ಮರೆಯುವುದು ಬೇಡ. ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಅದಾಗಲೇ ದೆಹಲಿಗರ ಮನಸ್ಸನ್ನು ಸೂರೆಗೊಂಡಿದೆ. ಒಂದು ವೇಳೆ ವಿಧಾನಸಭಾ ಚುನಾವಣೆಗಳಲ್ಲಿ ಆ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಸಫಲವಾದರೂ ಸಾಕು, ಕಾಂಗ್ರೆಸ್ ಮತ್ತು ಬಿಜೆಪಿಗೆ ಹೊಡೆತ ಬೀಳಲಿದೆ.
ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಇನ್ನು ಕೆಲವೇ ವಾರಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು 2014ರ ಲೋಕಸಭಾ ಚುನಾವಣೆಗಳಿಗೆ ಸೆಮಿಫೈನಲ್ ಎಂದಾದರೂ ಕರೆಯಿರಿ ಅಥವಾ ರಿಹರ್ಸಲ್ಸ್ ಎಂದರೂ ಅಡ್ಡಿಯಿಲ್ಲ. ಗಾಳಿ ಯಾವ ಕಡೆ ಬೀಸುತ್ತಿದೆ ಎನ್ನುವುದನ್ನು ಈ ಫಲಿತಾಂಶಗಳು ನಮಗೆ ತೋರಿಸಲಿವೆ. ಇದರಿಂದಾಗಿ ದೇಶದಲ್ಲಿ ಗಿರಕಿ ಹೊಡೆಯುತ್ತಿರುವ ಮೂರು ಪ್ರಮುಖ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ:
1.ನರೇಂದ್ರ ಮೋದಿ ಅಲೆ ದೇಶವೆಲ್ಲವನ್ನೂ ವ್ಯಾಪಿಸಿದೆಯೇ?
2. ಜನರು ರಾಹುಲ್ ಗಾಂಧಿಯವರನ್ನು ಪ್ರಧಾನಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಭಾವಿಸುತ್ತಾರಾ?
3. ಆಮ್ ಆದ್ಮಿ ಪಕ್ಷ ರಾಜಕೀಯ ವೇದಿಕೆಗೆ ನಿಜಕ್ಕೂ ಆಗಮಿಸಿದೆಯೇ?
ನರೇಂದ್ರ ಮೋದಿ: ನರೇಂದ್ರ ಮೋದಿ ಈಗ ಭಾರತದ ಕೇಂದ್ರ ಬಿಂದು. ನಿಮಗವರು ಇಷ್ಟವಿರಬಹುದು ಅಥವಾ ನೀವು ಅವರನ್ನು ದ್ವೇಷಿಸಲೂಬಹುದು. ಆದರೆ ಅವರನ್ನು ಕಡೆಗಣಿಸಲು ಮಾತ್ರ ನಿಮಗೆ ಸಾಧ್ಯವಿಲ್ಲ. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಯವರು ಹೋದಲ್ಲೆಲ್ಲ ಬೃಹತ್ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದಾರೆ. ಅವರ ಮಾತು ಕೇಳಲು ಜನರು ಮುಗಿಬೀಳುತ್ತಿದ್ದಾರೆ(ಪ್ರವೇಶ ದರ ಪಾವತಿ ಮಾಡಿಯಾದರೂ ಸರಿ). ಅವರ ಭಾಷಣ ಎಲ್ಲಾ ರಾಷ್ಟ್ರೀಯ ಚಾನೆಲ್ಗಳಲ್ಲೂ ಪ್ರಸಾರವಾಗುತ್ತಿದೆ. ಜನತೆ ಮನೆಯಲ್ಲಿ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ. ಕೇಳುಗರನ್ನು ಹಿಡಿದು ಕೂಡಿಸುವಂಥ ವಾಕ್ಚಾತುರ್ಯ ಅವರಲ್ಲಿದೆ. ಅದರಲ್ಲೂ ಯುವಕರಿಗಂತೂ ಅವರ ಹೇಳಿಕೆಗಳು ಇಷ್ಟವಾಗುತ್ತಿವೆ. ಅಭಿವೃದ್ಧಿ, ತಮ್ಮ ರಾಜ್ಯ ಗುಜರಾತ್ನಲ್ಲಿ ಅನುಷ್ಠಾನಕ್ಕೆ ಬಂದಿರುವ ಸೃಜನಾತ್ಮಕ ಯೋಜನೆಗಳು, ತಮಗೆ ದೇಶದ ಬಗ್ಗೆ ಇರುವ ದೃಷ್ಟಿಯಷ್ಟೇ ಅಲ್ಲದೆ, ಇನ್ನೂ ಹಲವಾರು ವಿಷಯಗಳ ಬಗ್ಗೆ ಮೋದಿ ಮಾತನಾಡುತ್ತಾರೆ. ಬಹು ಎಚ್ಚರಿಕೆಯಿಂದಲೇ ಅವರು ಬಿಜೆಪಿಯ ಹಿಂದುತ್ವ ಪ್ಲ್ಯಾನನ್ನು ಹಿಂದಕ್ಕೆ ಸರಿಸಿಟ್ಟಿದ್ದಾರೆ. ಒಂದು ಸಾರ್ವಜನಿಕ ವೇದಿಕೆಯಲ್ಲಂತೂ ಅವರು, ದೇವಾಲಯಗಳಿಗಿಂತ ಶೌಚಾಲಯಗಳ ನಿರ್ಮಾಣವೇ ಹೆಚ್ಚು ಮಹತ್ವದ್ದೆಂದು ತಾವು ಭಾವಿಸುವುದಾಗಿ ಹೇಳಿದರು.
ಅವರು ಆಡುವ ಪ್ರತೀ ಮಾತಿಗೂ ತಿರುಗೇಟು ನೀಡಲು/ ತಿರುಚಲು ರಾಜಕೀಯ ವಿರೋಧಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ತಾವು ಹೀಗೆ ಮಾಡಿದಾಗೆಲ್ಲ ಮೋದಿ ಇನ್ನಷ್ಟು ಗಟ್ಟಿಯಾಗುತ್ತಾ ಹೋಗುತ್ತಿದ್ದಾರೆ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ.
ಅಷ್ಟೇ ಅಲ್ಲ, ಜನತೆಯ ದೃಷ್ಟಿಗೆ ಈ ರಾಜಕೀಯ ವಿರೋಧಿಗಳು, ಮೋದಿಯವರಿಂದ ತತ್ತರಿಸಿಹೋಗಿರುವ ಮತ್ತು ಹೆಚ್ಚುತ್ತಿರುವ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳದೇ ಒದ್ದಾಡುತ್ತಿರುವವರ ಹಾಗೆ ಕಾಣಿಸುತ್ತಿದ್ದಾರೆ. ಹಾಗಿದ್ದರೆ, ಮೋದಿಯವರ ರ್ಯಾಲಿಗಳಿಗೆ ಸಿಗುತ್ತಿರುವ ಬೆಂಬಲ ಮತಗಳಾಗಿ ಪರಿವರ್ತನೆಯಾಗಲಿದೆಯೇ? ಅವರ ಹೆಗಲ ಮೇಲೆ ಕುಳಿತ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಲಗ್ಗೆಯಿಡಲಿದೆಯೇ?
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಣ್ಣು ಮುಕ್ಕುವಂತೆ ಅವರು ಮಾಡಲಿದ್ದಾರೆಯೇ? ಕಾದು ನೋಡೋಣ.
ರಾಹುಲ್ ಗಾಂಧಿ: ರಾಹುಲ್ ಕಾಂಗ್ರೆಸ್ನ ಹೊಸ ಚಹರೆಯಾಗಿ ಹೊರಹೊಮ್ಮಿದ್ದಾರೆ. ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿಲ್ಲವಾದರೂ, ಅವರಿಗೆ ಕೊಡುತ್ತಿರುವ ಮಹತ್ವ, ಅವರಿಗಾಗಿ ಆಯೋಜಿಸುತ್ತಿರುವ ರ್ಯಾಲಿಗಳೆಲ್ಲವನ್ನೂ ನೋಡಿದಾಗ, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಧಾನಮಂತ್ರಿ ಪೀಠದಲ್ಲಿ ರಾಹುಲ್ ಖಂಡಿತವಾಗಿಯೂ ಆಸೀನರಾಗಲಿದ್ದಾರೆ ಎಂದು ಅನ್ನಿಸದಿರದು. ಈಗ ಅವರಿಗೆ ದೊರಕಿರುವ ಒಂದು ಪ್ಲಸ್ ಪಾಯಿಂಟ್ ಎಂದರೆ ಶಿಕ್ಷಗೊಳಗಾದ ಶಾಸಕರನ್ನು ರಕ್ಷಿಸಲು ತಯಾರಾಗಿದ್ದ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳಲು ಪರೋಕ್ಷವಾಗಿ ಅವರು ಕಾರಣವಾಗಿದ್ದು. ಇದೊಂದು ಲೆಕ್ಕಾಚಾರದ ನಡೆಯಾಗಿತ್ತು. ಸುಗ್ರೀವಾಜ್ಞೆಯನ್ನು ಹರಿದುಹಾಕಬೇಕು ಎನ್ನುವ ಮೂಲಕ ತಮ್ಮ ಪಕ್ಷದ ಹಲವು ನಾಯಕರ ಕೆಂಗಣ್ಣಿಗೆ ಅವರು ಗುರಿಯಾದರಾದರೂ, ಜನತೆಗಂತೂ ಅವರ ಮಾತು ಬಹಳ ಹಿಡಿಸಿತು. ಆದರೆ ಈ ಯೂ ಟರ್ನ್ ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇದರಿಂದಾಗಿ ಅವರ ವರ್ಚಸ್ಸು ಹೆಚ್ಚಾಯಿತೋ ಇಲ್ಲವೋ ಎನ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ ಬಿಡಿ.
ಭ್ರಷ್ಟಾಚಾರದಿಂದ ರಂಗು ಕಳೆದುಕೊಂಡಿರುವ ಕಾಂಗ್ರೆಸ್ಗೆ ರಾಹುಲ್ ಮತ್ತೆ ಬಣ್ಣ ತುಂಬಬಲ್ಲರೇ? ಮೋದಿಯವರಿಗೆ ಸಿಗುತ್ತಿರುವ ಬೆಂಬಲ, ರಾಹುಲ್ಗೂ ಸಿಗಬಹುದೇ? ಪಕ್ಷದಲ್ಲಿನ ನಿರರ್ಥಕ ತಲೆಗಳನ್ನು ತೆಗೆದುಹಾಕಿ ಪಾರದರ್ಶಕ ವ್ಯಕ್ತಿತ್ವದ ಯುವಕರಿಗೆ ಅವರು ಜಾಗ ಕಲ್ಪಿಸಿಕೊಡುವರೇ? ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಿಸ್ಸಂಶಯವಾಗಿಯೂ ಅವರು ರಾಹುಲ್ ಮತ್ತು ಮೋದಿಯನ್ನು ಹೋಲಿಸಿ ನೋಡಲಿದ್ದಾರೆ. ಅವರ ಶಕ್ತಿ ಮತ್ತು ದೌರ್ಬಲ್ಯಗಳ ತುಲನೆ ಮಾಡಲಿದ್ದಾರೆ. ಕಳಪೆ ಆಡಳಿತ, ಹೆಚ್ಚುತ್ತಿರುವ ಭ್ರಷ್ಟಾಚಾರ, ಕುಂಟುತ್ತಿರುವ ಅಭಿವೃದ್ಧಿಯನ್ನು ಮತದಾರನಿಗೆ ಈಗ ಸಹಿಸಲಾಗುತ್ತಿಲ್ಲ. ಹಾಗಿದ್ದರೆ ಅವರು ಯಾರನ್ನು ನಂಬಲಿದ್ದಾರೆ ಮೋದಿಯವರನ್ನೋ ಅಥವಾ ರಾಹುಲ್ರನ್ನೋ?
ಬಿಜೆಪಿ- ಕಾಂಗ್ರೆಸ್ ಅಥವಾ ರಾಹುಲ್-ಮೋದಿ ಎಂಬ ಚರ್ಚೆಯಲ್ಲೇ ನಾವು ಹೆಚ್ಚು ತಲೆಕೆಡಿಸಿಕೊಂಡಿದ್ದೇವಾದರೂ ಈ ಸಮಯದಲ್ಲಿ ಆಮ್ ಆದ್ಮಿ ಪಕ್ಷವನ್ನು ಮರೆಯುವುದು ಬೇಡ. ಅರವಿಂದ್ ಕೇಜ್ರಿವಾಲ್ರ ಆಮ್ ಆದ್ಮಿ ಪಕ್ಷ ಅದಾಗಲೇ ದೆಹಲಿಗರ ಮನಸ್ಸನ್ನು ಸೂರೆಗೊಂಡಿದೆ. ಒಂದು ವೇಳೆ ವಿಧಾನಸಭಾ ಚುನಾವಣೆಗಳಲ್ಲಿ ಆ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಸಫಲವಾದರೂ ಸಾಕು, ಕಾಂಗ್ರೆಸ್ ಮತ್ತು ಬಿಜೆಪಿಗೆ ಹೊಡೆತ ಬೀಳಲಿದೆ. ಅದು ಸಂಸತ್ತಿಗೆ ಅಡಿಯಿಟ್ಟಿತೆಂದರೆ, ಕೇಜ್ರಿವಾಲರ ಪಕ್ಷ ಸರ್ಕಾರದ ಖರ್ಚು-ವೆಚ್ಚಗಳನ್ನು ಪ್ರಶ್ನಿಸುತ್ತಲೇ ಇರುತ್ತದೆ. ಹೊರಗಿದ್ದುಕೊಂಡು ಹೋರಾಟ ನಡೆಸುವುದಕ್ಕಿಂತ, ಒಳಗಿನಿಂದಲೇ ಹೋರಾಡುವುದು ಪರಿಣಾಮಕಾರಿಯಾಗಬಲ್ಲದು ಎಂದು ಭಾವಿಸುತ್ತದೆ ಆಮ್ ಆದ್ಮಿ ಪಕ್ಷ. ಆ ಪಕ್ಷಕ್ಕೆ ದೆಹಲಿಯಿಂದ ದೊರೆಯುತ್ತಿರುವ ಬೆಂಬಲ ಮತಗಳಾಗಿ ಬದಲಾಗಲಿದೆಯೇ? ಒಂದು ವೇಳೆ ಈ ಚುನಾವಣೆಗಳಲ್ಲಿ ಅದು ಗೆಲುವು ಸಾಧಿಸಿತೆಂದರೆ ಲೋಕಸಭಾ ಚುನಾವಣೆಗಳಲ್ಲಿ ಅದು ದೊಡ್ಡದಾಗಿಯೇ ಗರ್ಜಿಸಲಿದೆ!
ಕೊನೆಯ ಗುಟುಕು: ನಮ್ಮ ಬೆಂಗಳೂರು ಅವಾರ್ಡ್ಸ್ ಮತ್ತೊಮ್ಮೆ ಬಂದಿದೆ. ಬೆಂಗಳೂರಿನ ನಿಜವಾದ ಹೀರೋಗಳಿಗೆ ಸನ್ಮಾನ ಮಾಡುವ ಸಮಯವಿದು! ಖ್ಯಾತಿಗೆ ಆಸೆ ಪಡದೆ ಜನತೆಗಾಗಿ ದುಡಿಯುತ್ತಿರುವ ವೀರರ ನಾಮನಿರ್ದೇಶನ ಮಾಡಿ, ಅವರನ್ನು ಗೌರವಿಸೋಣ. ಹೆಚ್ಚಿನ ಮಾಹಿತಿಗಾಗಿ: www.nammabengaluruawards.org
- ಎಚ್.ಎಸ್. ಬಲರಾಮ್
hsbalram@gmail.com