ತಾರೀಖ್ ಪೇ ತಾರೀಖ್, ತಾರೀಖ್ ಪೇ ತಾರೀಖ್! ಬಾಲಿವುಡ್ ನಟ ಸನ್ನಿ ಡಿಯೋಲ್ರ ಈ ಡೈಲಾಗ್ ಹಿಂದಿ ಸಿನೆಮಾ ಪ್ರಿಯರಲ್ಲಿ ಬಹುತೇಕರಿಗೆ ಗೊತ್ತಿರುತ್ತದೆ. "ದಾಮಿನಿ" ಸಿನೆಮಾದಲ್ಲಿ, ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಹೀರೋ ಹೇಳುವ ಮಾತಿದು. ಈಗ ಇದೇ ಡೈಲಾಗ್ ರೊಚ್ಚಿಗೆದ್ದಿರುವ ಬೆಂಗಳೂರಿಗರ ಬಾಯಲ್ಲೂ ತಾಂಡವವಾಡುತ್ತಿದೆ. ಬೆಂಗಳೂರಿನ ರಸ್ತೆಯಲ್ಲಿ ಬಾಯಿ ತೆರೆದುಕೊಂಡಿರುವ ಗುಂಡಿಗಳನ್ನು ಮುಚ್ಚುವುದಕ್ಕೆ ಅಧಿಕಾರದಲ್ಲಿರುವವರು ಒಂದು ತಾರೀಖಿನಿಂದ ಇನ್ನೊಂದು ತಾರೀಖಿಗೆ ಗಡುವು ವಿಸ್ತರಿಸುತ್ತಿರುವುದನ್ನು ನೋಡಿ ಬೆಂಗಳೂರಿಗರು ವ್ಯಗ್ರವಾಗಿದ್ದಾರೆ. ಈ ಗುಂಡಿಗಳ ರಸ್ತೆಯಲ್ಲಿ ಗಾಡಿ ಓಡಿಸಲು ಗುಂಡಿಯಂತೂ ಬೇಕು. ಏಕೆಂದರೆ ಅದಾಗಲೇ ಬಹಳಷ್ಟು ಜನರು ಇಂಥ ರಸ್ತೆಗಳಲ್ಲಿ ಸಂಚರಿಸುವಾಗ ಬಿದ್ದು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ರಸ್ತೆಗಳಲ್ಲಿ ಓಡಾಡುವ ಪ್ರತಿಯೊಂದು ವಾಹನವೂ ಮೆಕ್ಯಾನಿಕ್ ಅಂಗಡಿಗೆ ಒಂದಲ್ಲ ಒಂದು ಬಾರಿ ಅಡ್ಮಿಟ್ ಆಗಿಯೇ ಬಂದಿರುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ರಸ್ತೆಗಳನ್ನು ಸರಿಪಡಿಸಲು ಜೂನ್ 28ಕ್ಕೆ ಮೊದಲ ಗಡುವು ವಿಧಿಸಿದ್ದರು. ಆದರೆ ಬಿಬಿಎಂಪಿಯ ಇಂಜಿನಿಯರ್ಗಳು ಕಮೀಷನರರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನಂತರ ರಂಗಕ್ಕೆ ಧುಮುಕಿದ ಬೆಂಗಳೂರಿನ ಸಚಿವರು ಜುಲೈ 21ರ ಒಳಗೆ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಬೇಕು ಎಂದು ಮತ್ತೊಂದು ಗಡುವು ವಿಧಿಸಿದರು. ಪ್ರಯೋಜನವಾಗಲಿಲ್ಲ. ಆಗಸ್ಟ್ 22ರಂದು ಮತ್ತೊಮ್ಮೆ ಇಂಜಿನಿಯರುಗಳಿಗೆ ಎಚ್ಚರಿಕೆ ಕೊಟ್ಟ ಸಚಿವರು, 10 ದಿನದಲ್ಲಿ ಕೆಲಸ ಮುಗಿಯಬೇಕು ಎಂದು ಆಜ್ಞೆ ನೀಡಿದರು. ಅದಕ್ಕೂ ಇವರು ತಲೆಕೆಡಿಸಿಕೊಳ್ಳಲಿಲ್ಲ. ಆಗಸ್ಟ್ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ದಸರಾ ಹಬ್ಬಕ್ಕೂ ಮುನ್ನ ಕೆಲಸ ಆಗಬೇಕು ಎಂದು ತುಸು ಕಣ್ಣು ಕೆಂಪುಮಾಡಿಕೊಂಡೇ ಎಚ್ಚರಿಕೆ ಕೊಟ್ಟರು. ಆಕ್ಟೋಬರ್ 5ರೊಳಗೆ ಎಲ್ಲಾ ರಸ್ತೆಗಳನ್ನೂ ಸರಿಪಡಿಸುತ್ತೇವೆ ಎಂದು ಕಾಗೆ ಹಾರಿಸಿ ಕಣ್ಣುಮುಚ್ಚಿಕೊಂಡಿತು ಬಿಬಿಎಂಪಿ! ದೀಪಾವಳಿಯೊಳಗಾದರೂ ಮುಗಿಸಿ ಎಂದು ಮತ್ತೆ ಹೊಸ ಗಡುವು ನೀಡಿದರು ಸಚಿವರು. ಬಿಬಿಎಂಪಿ ಅಲುಗಾಡಲಿಲ್ಲ. ಜನವರಿ 2014ರ ವೇಳೆಯೊಳಗೆ ಮುಗಿಸಿ ಎಂದು ಮತ್ತೊಂದು ಗಡುವು ನೀಡಿದರು ಸಚಿವರು. 'ಸಾರಿ ಸರ್, ಈಗ ಮಳೆಗಾಲ. ಜನವರಿ ವೇಳೆಗೆ ಮುಗಿಸುವುದು ಅಸಾಧ್ಯ' ಎಂದಿತು ಬಿಬಿಎಂಪಿ. ಈಗ ಫೆಬ್ರವರಿಯೊಳಗೆ ರಸ್ತೆಗಳನ್ನು ಸರಿಪಡಿಸಬೇಕೆಂದು ಹೇಳಿದ್ದಾರೆ ಸಚಿವರು. ಆದರೆ ಇದೇ ಕೊನೆಯೇ? ಮತ್ತೆ ಈ ಕೆಲಸವನ್ನು ಬಿಬಿಎಂಪಿ ಮುಂದೂಡುವುದಿಲ್ಲ ಎನ್ನುವುದಾದರೂ ಹೇಗೆ? ಇದನ್ನೆಲ್ಲ ನೋಡುತ್ತಿರುವ ಜನತೆ ನಿಜಕ್ಕೂ ಕುಪಿತರಾಗಿದ್ದಾರೆ. ಈ ವಿಳಂಬಕ್ಕೆ ಬಿಬಿಎಂಪಿ ಕೊಟ್ಟ ನೆಪಗಳೇನು ಗೊತ್ತೇ?
ನೆಪ 1: ಈ ವರ್ಷದ ಮಳೆಗಾಲ ಸುದೀರ್ಘವಾಗಿದೆ. ಹಾಗಾಗಿ ಮಳೆಯಾಗುತ್ತಿರುವ ಸಮಯದಲ್ಲಿ ಡಾಂಬರು ಹಾಕುವುದು ಕಷ್ಟ ಎಂದು ಹೇಳುತ್ತಾರೆ ಬಿಬಿಎಂಪಿ ಇಂಜಿನಿಯರುಗಳು. ಆಯಿತು. ಆದರೆ ರಸ್ತೆಗಳು ಅಷ್ಟು ಬೇಗ ಹಾಳಾದದ್ದೇಕೆ? ಒಂದೇ ಒಂದು ಮಳೆಗೆ ಬಿರುಕು ಬೀಳುವಷ್ಟು ಅವು ದುರ್ಬಲವಾಗಿದ್ದೇಕೆ? ಹಾಗಿದ್ದರೆ ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಿಲ್ಲವೇ? ಆ ಗುತ್ತಿಗೆದಾರರ ಕೆಲಸದ ಮೇಲೆ ಬಿಬಿಎಂಪಿಯ ಇಂಜಿನಿಯರುಗಳು ಲಕ್ಷ್ಯವಿಡಲಿಲ್ಲವೇ? ಒಂದು ಬಾರಿ ಡಾಂಬರು ಹಾಕಿದ ಮೇಲೆ, ನಿಗದಿತ ಸಮಯದವರೆಗೂ ರಸ್ತೆಗಳನ್ನು ನಿರ್ವಹಿಸುವುದು ಗುತ್ತಿಗೆದಾರರ ಕೆಲಸವಲ್ಲವೇ? ರಸ್ತೆಗಳು ಬೇಗ ಹಾಳಾದರೆ, ಮತ್ತೆ ರಿಪೇರಿಗೆ ಗುತ್ತಿಗೆ ಸಿಗುತ್ತದೆ ಎನ್ನುವ ಅತಿಯಾಸೆಗೆ ಬಿದ್ದು ಅವರು ಹೀಗೆ ಮಾಡುತ್ತಿದ್ದಾರೆಯೇ? ರಸ್ತೆಗಳ ಅಭಿವೃದ್ಧಿಗಾಗಿ ಮೀಸಲಾದ ತೆರಿಗೆದಾರರ ಹಣ, ಈ ಭ್ರಷ್ಟರ ಜೇಬು ಸೇರುತ್ತಿರುವುದು ವಿಪರ್ಯಾಸ.
ನೆಪ 2: ತನ್ನ ಬಳಿ ಹಣವಿಲ್ಲ ಎಂದು ಬಿಬಿಎಂಪಿ ಹೇಳುತ್ತಿದೆ! ಹಾಗಿದ್ದರೆ ಬಿಬಿಎಂಪಿಗೆ ಜನತೆ ಕೊಡುತ್ತಿರುವ ತೆರಿಗೆ ಹಣ ಏನಾಗುತ್ತಿದೆ? ಅದು ಸರಿಯಾಗಿ ಬಳಕೆಯಾಗುತ್ತಿದೆಯೇ? ಇದುವರೆಗೂ ಕೆಲವು ಪ್ರದೇಶಗಳು ಅದೇಕೆ ಬಿಬಿಎಂಪಿಯ ತೆರಿಗೆ ವ್ಯಾಪ್ತಿಯಿಂದ ಹೊರಗೇ ಉಳಿದಿವೆ? ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ರಸ್ತೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವ ಸರ್ಕಾರ, ಬಿಬಿಎಂಪಿಗೇಕೆ ಹಣ ಕೊಡುತ್ತಿಲ್ಲ? ನಗರದಲ್ಲಿನ 25 ಶಾಸಕರು ಏನು ಮಾಡುತ್ತಿದ್ದಾರೆ? ಬಿಬಿಎಂಪಿಯ ಮಹತ್ವಾಕಾಂಕ್ಷಿ ಯೋಜನೆಯೊಂದರ ಅಡಿಯಲ್ಲಿ 7 ರಸ್ತೆಗಳ ಅಭಿವೃದ್ಧಿಯಾಗಬೇಕಿತ್ತು. 2011ರಲ್ಲಿ ಆ ಯೋಜನೆಯ ವೆಚ್ಚ 39 ಕೋಟಿ ರುಪಾಯಿಗಳಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಕಾಮಗಾರಿಯ ವಿಳಂಬದಿಂದಾಗಿ ಆ ಮೊತ್ತ ಈಗ 115 ಕೋಟಿ ರುಪಾಯಿಗೆ ಬಂದು ತಲುಪಿದೆ!
ನೆಪ 3: ಕಳಪೆ ರಸ್ತೆಗಳಿಗೆ ಬಿ.ಡಬ್ಲೂ.ಎಸ್.ಎಸ್.ಬಿ ಮತ್ತು ಬೆಸ್ಕಾಂ ಕಾರಣ ಎಂದು ಬಿಬಿಎಂಪಿ ಹೇಳುತ್ತಿದೆ. ಕೇಬಲ್ ಮತ್ತು ಪೈಪ್ಗಳನ್ನು ಅಳವಡಿಸಲು ಈ ಸಂಸ್ಥೆಗಳು ರಸ್ತೆಗಳನ್ನು ಅಗಿಯುತ್ತಿರುತ್ತವೆ, ಇದರಿಂದಾಗಿ ರಸ್ತೆಯ ನಿರ್ವಹಣೆ ಕಷ್ಟವಾಗುತ್ತಿದೆ ಎನ್ನುತ್ತದೆ ಅದು. ಹಾಗಿದ್ದರೆ, ತಮ್ಮ ಕೆಲಸ ಮುಗಿದ ಮೇಲೆ ರಸ್ತೆಯನ್ನು ಸರಿಪಡಿಸಬೇಕೆಂದು ಆ ಸಂಸ್ಥೆಗೆ ಬಿಬಿಎಂಪಿ ಏಕೆ ಹೇಳುತ್ತಿಲ್ಲ?
ನೆಪ 4: ಬೆಂಗಳೂರಿನ ಮೇಯರ್ ಹೇಳುವುದೇನು ಗೊತ್ತೆ? "ಐಟಿ ವಲಯಗಳು ನಗರಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಬಿಬಿಎಂಪಿ ಅವುಗಳಿಗಾಗಿ ಮೂಲಸೌಕರ್ಯಾಭಿವೃದ್ಧಿ ಮಾಡುತ್ತಿದೆ, ರಸ್ತೆಗಳನ್ನು ನಿರ್ಮಿಸುತ್ತಿದೆ" ಎಂದು! ಇವರು ಯಾವ ರಸ್ತೆಗಳ ಬಗ್ಗೆ ಮಾತನಾಡುತ್ತಿದ್ದಾರೆ? ತಗ್ಗು ಬಿದ್ದ ರಸ್ತೆಗಳ ಬಗ್ಗೆಯೇ?
"ಸರ್ಕಾರ ಮಾಡಬೇಕಿರುವ ಕೆಲಸವನ್ನು ಕಾರ್ಪೊರೇಟ್ ವಲಯ ಮಾಡಬೇಕು ಎಂದು ಆಶಿಸುವುದು ಎಷ್ಟು ಸರಿ? ಐಟಿ ಉದ್ಯಮಗಳು ಇಂದು ಸಾವಿರಾರು ಉದ್ಯೋಗಗಳನ್ನು ಜನತೆಗೆ ನೀಡಿಲ್ಲವೇ? ಅದರಿಂದ ಉತ್ಪತ್ತಿಯಾಗುತ್ತಿರುವ ತೆರಿಗೆ ಹಣ ಬೊಕ್ಕಸಕ್ಕೆ ಸೇರುತ್ತಿಲ್ಲವೇ? ನಾವು ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತೇವೆ. ಆದರೆ ಆಡಳಿತದ ಕಥೆಯೇನು?" ಎಂದು ಐಟಿ ಮಂದಿ ಪ್ರಶ್ನಿಸುತ್ತಿದ್ದಾರೆ. ಅವರು ಹೇಳುತ್ತಿರುವುದೂ ಸರಿಯಾಗಿದೆ. ಬೆಂಗಳೂರಿನ ಮೇಯರ್ ಮುಖ್ಯವಾಗಿ ಪ್ರಶ್ನಿಸಬೇಕಿರುವುದು ಗುತ್ತಿಗೆದಾರರನ್ನು ಮತ್ತು ಬಿಬಿಎಂಪಿಯ ಇಂಜಿನಿಯರುಗಳನ್ನು. ಅದು ಬಿಟ್ಟು, ಐಟಿ ವಲಯದ ಮೇಲೆ ಹರಿಹಾಯುತ್ತಿರುವುದೇಕೆ? ಬೆಂಗಳೂರಿನ ಹೆಸರು ಹೇಳಿಕೊಂಡು ಕುಣಿದಾಡುವ ರಾಜಕಾರಣಿಗಳು, ಇಷ್ಟು ವೇಗವಾಗಿ ಬೆಳೆಯುತ್ತಿರುವ ನಗರವನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದನ್ನೇ ಅರ್ಥಮಾಡಿಕೊಳ್ಳುತ್ತಿಲ್ಲ. ಬೆಂಗಳೂರಿನ ಕಥೆಯೇ ಹೀಗಿದ್ದರೆ, ಇನ್ನು ಚಿಕ್ಕ ನಗರಗಳ ಪಾಡೇನು? ಬೆಂಗಳೂರನ್ನು ಇನ್ನೊಂದು ಸಿಂಗಾಪುರ ಮಾಡುತ್ತೀವಿ ಎಂದು ಇವರುಗಳು ಬಾಯಿಮಾತಿನಲ್ಲಷ್ಟೇ ಹೇಳುತ್ತಿದ್ದಾರೆ. ರಾಜ್ಯಕ್ಕೆ ಇಷ್ಟು ಕೊಡುಗೆ ಕೊಟ್ಟಿರುವ ಬೆಂಗಳೂರಿಗೆ ಕೊನೆಗೆ ಸಿಗುತ್ತಿರುವುದೇನು?
ಕೊನೆಯ ಗುಟುಕು: ನಿಮ್ಮ ಧ್ವನಿ ಸಂಸತ್ತಿನಲ್ಲಿ ಪ್ರತಿಧ್ವನಿಸಬೇಕೇ? ಸರ್ಕಾರಕ್ಕೆ ನೀವು ಪ್ರಶ್ನೆ ಕೇಳಬೇಕು ಅಂದುಕೊಂಡಿದ್ದೀರಾ? ರಾಜ್ಯಸಭಾ ಎಂಪಿ ರಾಜೀವ್ ಚಂದ್ರಶೇಖರ್ ನಿಮಗೆ ಸಹಾಯ ಮಾಡಲು ಬಯಸಿದ್ದಾರೆ. ನಿಮ್ಮ ಪ್ರಶ್ನೆಯನ್ನು RC@rajeev.in ಗೆ ಮೇಲ್ ಮಾಡಿ. ಅವರು ಅದನ್ನು ಸಂಸತ್ತಿನಲ್ಲಿ ಕೇಳುವ ಆಶ್ವಾಸನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: www.rajeev.in
- ಎಚ್.ಎಸ್. ಬಲರಾಮ್
hsbalram@gmail.com