ಅಂಕಣಗಳು

ಏಜೆನ್ಸಿಗಳ ಅಸಡ್ಡೆಗೆ ಬಲಿಯಾಗುತ್ತಿರುವ ಪ್ರಯಾಣಿಕ

ಏಜೆನ್ಸಿಗಳ ಅಸಡ್ಡೆಗೆ ಬಲಿಯಾಗುತ್ತಿರುವ ಪ್ರಯಾಣಿಕ
Published On :

ಕಳೆದೊಂದು ತಿಂಗಳಲ್ಲಿ ನಡೆದ ಎರಡೆರಡು ಬಸ್ ಬೆಂಕಿ ಪ್ರಕರಣ ಗಮನಿಸಿದಾಗ ವೋಲ್ವೋದಂತಹ ಬಸ್‌ಗಳಿಗೆ ಕೇವಲ ಲಾಭಾಂಶವೇ ಗುರಿಯಾಗಿದೆ ಮತ್ತು ವೈಜ್ಞಾನಿಕವಾಗಿ ಬಸ್‌ಗಳನ್ನು ನಿರ್ವಹಿಸುವಲ್ಲಿ ಆಗುತ್ತಿರುವ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ.
ಅಸಲಿಗೆ ಎಷ್ಟು ಬಸ್‌ಗಳಿಗೆ ಪ್ರಯಾಣಿಕರ ಹೊರತಾಗಿ ಸರಕು - ಸಾಗಾಣೆಯ ಅನುಮತಿ ಇದೆ? ಬಹುಶಃ ಶೇ. 60 ರಷ್ಟು ವಾಹನಗಳು ಕೇವಲ ಪ್ರಯಾಣಿಕರನ್ನು ಕರೆದೊಯ್ಯುವ ಅನುಮತಿಯಷ್ಟೆ ಪಡೆದಿರುತ್ತವೆ. ಆದರೆ ಆ ವಾಹನಗಳ ಕೆಳ ಭಾಗದಲ್ಲಿ ಮಾಡಲಾದ ಅರೆ ಮತ್ತು ಬಸ್‌ನ ಮೇಲ್ಭಾಗದಲ್ಲಿ ತುಂಬಿಸುವ ಸರಕಿನ ಪ್ರಮಾಣ ಹಾಗೂ ವಹಿವಾಟನ್ನು ವಿವರಿಸಿದರೆ ನೀವು ಬೆಚ್ಚಿ ಬೀಳುತ್ತಿರಿ. ಬಸ್ ಒಂದರ ದಿನವಹಿ ಸಾಗಣೆಯ ದುಡ್ಡು ಪ್ರಯಾಣಿಕರ ಟಿಕೆಟ್‌ಗಿಂತಲೂ ಜಾಸ್ತಿ.
ಆಯಿತು, ಸರಕು ಸಾಗಿಸಲು ಅನುಕೂಲ ಹಾಗೂ ಸುಲಭದಲ್ಲಿ ವೇಗವಾಗಿ ತಲುಪುತ್ತದೆ ಎಂದರೂ ಯಾವ ವಸ್ತು ಸಾಗಿಸಬೇಕು, ಸಾಗಿಸಬಾರದು ಎನ್ನುವ ಕನಿಷ್ಠ ವಿವೇಚನೆ ವಾಹನ ಮಾಲಿಕರಿಗೆ ಬೇಡವೆ? ಡಿಸೇಲ್ ಟ್ಯಾಂಕ್ ಒಡೆದು ಬೆಂಕಿ ಬೀಳುತ್ತದೆ ಎನ್ನುವ ನೇರ ಆರೋಪಕ್ಕಿಂತ ಮೊದಲು ಅದು ಸಾಧ್ಯವೇ ಎಂದು ವೈಜ್ಞಾನಿಕವಾಗಿ ಯೋಚಿಸಿ. ಡಿಸೆಲ್ ಟ್ಯಾಂಕ್ ಒಡೆಯುತ್ತದೆ ಎನ್ನುವುದು ಮೇಲ್ನೋಟಕ್ಕೆ ದಕ್ಕುವ ಹೇಳಿಕೆ. ವಾಹನದ ಅತ್ಯಂತ ಸುರಕ್ಷಿತ, ಕೊಟ್ಟ ಕೊನೆಯಲ್ಲಿ ಅಘಾತಕ್ಕೀಡಾಗುವ ಭಾಗ ಇಂಧನ ತುಂಬಿಸುವ ಅರೆಯೇ ಆಗಿದೆ. ಅಲ್ಲದೆ ಹೀಗೆ ಬೇರಾವುದೇ ವಾಹನದ ಇಂಧನ ಟ್ಯಾಂಕು ಒಡೆದು ಅಘಾತವಾದ ಉದಾಹರಣೆಗಳಿದ್ದರೆ ಬಹುಶಃ ಅದು ಬೆರಳೆಣಿಕೆಯಲ್ಲಿ. ಹಾಗಾಗಿ ವೋಲ್ವೋ ವಿನ್ಯಾಸ ಅಭಿಯಂತರೂ ಕೂಡಾ ಈ ಆರೋಪವನ್ನು ತಳ್ಳಿ ಹಾಕುತ್ತಿದ್ದಾರೆ. ಕಾರಣ ಡೀಸೆಲ್ ಬೆಂಕಿಯನ್ನು ನೇರಾ ನೇರ ಅಹ್ವಾನಿಸುವ ಮಟ್ಟದಲ್ಲಿ ಉರಿಯುವ ದಹನಾನುಕೂಲಿ ತೈಲವಲ್ಲವೇ ಅಲ್ಲ. ಡೀಸೆಲ್ ಟ್ಯಾಂಕು ಒಡೆದರೂ ಪೂರ್ತಿ ಬಸ್ಸಿಗೆ ಐದೇ ನಿಮಿಷದಲ್ಲಿ ಎಲ್ಲಾ ಕಡೆಯಿಂದಲೂ ಬೆಂಕಿ ಆವರಿಸಿಕೊಳ್ಳುತ್ತದೆ ಎಂದಾದರೆ ಟ್ಯಾಂಕೇನು ಅಪಘಾತದಲ್ಲಿ ಸರ್ವದಿಕ್ಕಿನಿಂದಲೂ ಆವರಿಸಿಕೊಳ್ಳುತ್ತದಾ? ಅಸಲಿಗೆ ವೋಲ್ವೋ ವಿನ್ಯಾಸದಲ್ಲಿ ಡೀಸೆಲ್ ಟ್ಯಾಂಕು ಬೆಂಕಿಗೆ ಸಿಲುಕಿಕೊಳ್ಳುವ, ಅಘಾತಕ್ಕೀಡಾಗುವ ಸಾಧ್ಯತೆ ತೀರಾ ತೀರಾ ಕಮ್ಮಿ. (ಯಾವುದೇ ರಸ್ತೆ ಅಪಘಾತದಲ್ಲಿ ವಾಹನದಲ್ಲಿದ್ದವರೆಲ್ಲಾ ಸಾಯುವಷ್ಟು ತೀವ್ರವಾಗಿದ್ದರೂ ಅದರ ಇಂಧನದ ಪೆಟ್ಟಿಗೆ ಒಡೆದಿರುವ ಘಟನೆ ಬಹಳ ಕಡಿಮೆ)
ಆದರೆ ಆಕಸ್ಮಿಕವಾಗಿ ಒಡೆದರೂ ಅದರಿಂದ ಹಾರಿದ ಡಿಸೇಲ್ ಇತರ ದಹನಾನುಕೂಲಿ ವಸ್ತುಗಳ ಮೇಲೆ ಬಿದ್ದಾಗ ಸುಲಭಕ್ಕೆ ಬೆಂಕಿಗೆ ಆಹುತಿಯಾಗುತ್ತದೆ. ಇಲ್ಲದಿದ್ದರೆ ಐದೇ ನಿಮಿಷದಲ್ಲಿ ಅನಾಹುತವಾಗುವಷ್ಟು ವೇಗದಲ್ಲಿ ಬೆಂಕಿ ಅದ್ಹೇಗೆ ಹರಡಿಕೊಳ್ಳುತ್ತದೆ? ಅಂದರೆ ವಾಹನಗಳಲ್ಲಿ ದಹನಾನುಕೂಲಿ ವಸ್ತುಗಳ ಸಾಗಣೆ ನಡೆಯುತ್ತಿರುವುದು ಸುಳ್ಳಲ್ಲ. ಅದೂ ತೀರ ಪಟಾಕಿ, ಬಾಂಬು ಇಂಥವೇ ಆಗಬೇಕೆಂದೇನಿಲ್ಲ. ಸಿಂಥೇಟಿಕ್ ಬಣ್ಣಗಳು, ಕೂದಲು, ರಸಾಯನಿಕ ಪದಾರ್ಥಗಳು(ಇವುಗಳಲ್ಲಿ ಪ್ರತಿಯೊಂದು ವಸ್ತುವೂ ಅದರದ್ದೇ ಆದ ಶೈಲಿಯಲ್ಲಿ ದಹನಾನುಕೂಲಿ ಎನ್ನುವುದನ್ನು ಗಮನಿಸಬೇಕು) ಪಾಲಿಯೆಸ್ಟರ್ ಬಟ್ಟೆಗಳ ಬಾಕ್ಸುಗಳು, ಇನ್ನಿತರ ಒಣ ಪದಾರ್ಥಗಳ ರಟ್ಟಿನ ಪೆಟ್ಟಿಗೆಗಳು ಹೀಗೆ ಇವೆಲ್ಲಾ ಸುಲಭವಾಗಿ ಬೆಂಕಿಗೆ ತುಪ್ಪ ಸುರಿಯುವ ಪದಾರ್ಥಗಳೆ. ಇದರ ಜೊತೆಗೆ ಸರ್ಕಾರ ಇವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಾಗ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಮೂಲ ವಿನ್ಯಾಸವನ್ನು ಬದಲಾಯಿಸುವ ಅಭ್ಯಾಸ. ತಮ್ಮ ಅನುಕೂಲಕ್ಕೆ ತಕ್ಕಂತೆ ವಾಹನದ ಕೇಬಲ್ಲು, ಸಂಪರ್ಕ ವ್ಯವಸ್ಥೆಯ ಪ್ಯಾನೆಲ್ಲುಗಳ ಪಕ್ಕದಲ್ಲೇ ಇರುವ ಇಂಜಿನ್ ಆಯೀಲ್ ಸಾಗಾಣಿಕೆಯ ಹೋಸ್ ಪೈಪುಗಳು ಇತ್ಯಾದಿಗಳೆಲ್ಲಾ ಅದೆಷ್ಟು ಅಪಾಯಕಾರಿಯಾಗುತ್ತವೆ ಎಂದರೆ ಬೆಂಕಿಯ ಸುಪರ್ದಿಗೆ ಬರುತ್ತಲೇ ಉರಿಯಲಾರಂಭಿಸುತ್ತವೆ. ಕಾರಣ ವಾಹನ ಚಲಿಸಲಾರಂಭಿಸಿದ ಅರ್ಧ ಗಂಟೆಯಾಗುಷ್ಟರಲ್ಲಿ ವಾಹನದ ಇಂಜಿನ್ ಮತ್ತು ಅದರ ಆಸು ಪಾಸಿನ ಭಾಗ ಅಕ್ಷರಶಃ ಕುಲುಮೆಯಂತಾಗಿ ಹೋಗಿಸುತ್ತದೆ ಅತಿವೇಗದಿಂದಾಗಿ.
ಹೆಚ್ಚಿನ ಬಾರಿ ಇಬ್ಬರು ಡ್ರೈವರ್ ಇರುವುದೇ ಇಲ್ಲ. ಅಕಸ್ಮಾತ್ ಇದ್ದರೂ ಅಫಘಾತದಲ್ಲಿ ಮೊದಲ ಬಲಿ ಅವರೇ ಆಗುತ್ತಾರೆ, ಇಲ್ಲ ಎಲ್ಲರಿಗಿಂತಲೂ ಮೊದಲೆ ಓಡಿ ಹೋಗುತ್ತಾರೆ. ಆಗ ಬಾಗಿಲು ತೆರೆಯುವ ತಂತ್ರಜ್ಞಾನ ಕೂಡಾ ಕೈಕೊಟ್ಟಿರುತ್ತದೆ. ಅಪಘಾತದಲ್ಲಿ ಮುಂಭಾಗ ಗುಜ್ಜಾಗುತ್ತಿದ್ದಂತೆ ಆಟೋ ಲಾಕ್ ಆಗುವ ಬಾಗಿಲು ಜಾಮ್ ಆದಾಗ ಪ್ರಯಾಣಿಕರಿಗೆ ಉಳಿಯುವ ಏಕೈಕ ದಾರಿ ಗಾಜು ಒಡೆಯುವುದೇ. ಆದರೆ ಅದಕ್ಕೆ ಬೇಕಾದ ಹತ್ಯಾರುಗಳಿರುತ್ತವೆಯೇ? ಅದೂ ಇಲ್ಲ. ಇನ್ನು ಸ್ವತಃ ಕೈ ಅಥವಾ ತಲೆಯಿಂದ ಗಟ್ಟಿಸಿ ಒಡೆಯುವ ಸಾಧ್ಯತೆ ತುಂಬಾ ಕಮ್ಮಿ. (ಹಾಗೆ ಮೊನ್ನೆ ಹಾವೇರಿ ಬಳಿಯ ಅಪಘಾತದಲ್ಲಿ ಗಾಜು ಒಡೆದ ಹುಡುಗ ಗಂಭೀರವಾಗಿ ಗಾಯಗೊಂಡಿದ್ದಾನೆ)
ಇನ್ನು ಹೆಚ್ಚಿನ ವೋಲ್ವೋ ಗ್ಲಾಸುಗಳನ್ನು ಸಾಧಾರಣವಾಗಿ ಒಡೆಯಲು ಸಾಧ್ಯವಿಲ್ಲ. ಅಷ್ಟು ಗಟ್ಟಿಯಾದ ಗಾಜುಗಳ ಆವರಣ ಸುಲಭಕ್ಕೆ ಪುರುಷರಿಗೇ ಒಡೆಯಲು ಅಸಂಭವವಾಗುವಾಗ ಮಹಿಳೆಯರಿದ್ದರೆ ಯಮಸದನವೇ! ಇನ್ನು ಸೀಟುಗಳನ್ನು ಅರ್ಝ ಹಿಂಚಾಚಿರುವ ಸ್ಥಿತಿಯಲ್ಲಿ ಯಾರೊಬ್ಬರೂ ಎದ್ದು ಬರಲು ಸಾಧ್ಯವೇ ಇಲ್ಲ. ಅದರಿಂದಾಗೇ ಅರ್ಧ ಪ್ರಯಾಣಿಕರು ಸುಲಭದಲ್ಲಿ ತುತ್ತಾಗುತ್ತಾರೆ.
ಪ್ರತಿ ಬಸ್ಸುಗಳ ಗಾಜುಗಳು ಸಣ್ಣ ಅಘಾತದಲ್ಲೂ ತಾನಾಗೇ ಉದುರಿ ಹೋಗುವಂತಹ ಗಾಜನ್ನು ಹೊಂದಿರಬೇಕೆನ್ನುತ್ತದೆ ಹಿಂದೊಮ್ಮೆ ಸುಪ್ರಿಂ ಕೋರ್ಟು ನೀಡಿದ ತೀರ್ಪು. ಆದರೆ ತುಂಬ ಕಠಿಣ ಗಾಜುಗಳನ್ನು ಒಡೆದು ಹೊರಬರಲು ಕನಿಷ್ಠ ವ್ಯವಸ್ಥೆಯಾದರೂ ಇರಬೇಕು. ಆದರೆ ವೋಲ್ವೊದಲ್ಲಿ ಇರಿಸಿರುವ ಚಿಕ್ಕ ಎರಡು ಸುತ್ತಿಗೆಗಳಿಂದ ಗಡಿಗೆ ಒಡೆಯುವುದೂ ಕಷ್ಟ. ಬಹುಶಃ ಗಾಜು ಒಡೆಯಬಲ್ಲ ನೈಪುಣ್ಯತೆಗೆ ಅಷ್ಟು ಚಿಕ್ಕ ಹತ್ಯಾರು ಸಾಲುತ್ತದೇನೋ. ಆದರೆ ಅದ್ಯಾರಿಗೆ ಗೊತ್ತಿರುತ್ತದೆ? ಇನ್ನು ಫೈರ್ ಎಕ್ಸ್‌ಟಿಂಗ್ವಿಶರ್‌ಗಳ ಲಭ್ಯತೆಯಂತೂ ನಾನು ನೋಡಿಯೇ ಇಲ್ಲ.
ಇದರ ಜೊತೆಗೆ ರಾಜ್ಯದಲ್ಲಿ ಚಲಿಸುತ್ತಿರುವ ಶೇ.90 ರಷ್ಟು ಬಸ್ ಆಪರೇಟರ್‌ಗಳು ಹಣಕ್ಕಾಗಿ ಕಂಡು ಕೊಂಡಿರುವ ಇನ್ನೊಂದು ಮಾರ್ಗ ಆಯಾ ವಾರ ಮತ್ತು ರಜಾವಧಿಯಲ್ಲಿ ರೇಟನ್ನು ಬೇಕಾಬಿಟ್ಟಿ ಏರಿಸುವುದು. ಈಗಲೂ ಆನ್‌ಲೈನ್‌ನಲ್ಲಿ ತೆರೆದು ನೋಡಿ ವಾರಾಂತ್ಯದ ಟ್ರಿಪ್ಪುಗಳಿಗೆ ಬೇರೆಯದ್ದೇ ದರ ಇರುತ್ತದೆ. ಕೆಳಗೆ ಮತ್ತು ಒಬ್ಬೊಬ್ಬರೇ ಮಲಗುವ ಆಸನಕ್ಕೆ ಶೇ.20 ಜಾಸ್ತಿ. ಕೆಳಗಾದರೆ ಮತ್ತೇ ಶೇ10 ಜಾಸ್ತಿ. ಅರೆ ಇದೇನಿದು! ಒಂದೇ ಬಸ್ಸು ಒಂದೇ ದಾರಿ, ತರಹೇವಾರಿ ರೇಟು! ಮೈಯೆಲ್ಲಾ ಉರಿದುಕೊಳ್ಳುವ ಪ್ರಯಾಣಿಕ ಮತ್ರ ದವಡೆ ಕಚ್ಚಿಕೊಂಡು ಕುಳಿತಿರುತ್ತಾನೆ. ಅನಿವಾರ್ಯತೆ!
 ನಾನು ಪ್ರಯಾಣಿಸುತ್ತಿದ್ದ ಬೆಂಗಳೂರು-ಅಹಮದಾಬಾದ್ ಬಸ್ಸಿಗೆ ದೀಪಾವಳಿಯಂತಹ ಸೀಝನ್‌ನಲ್ಲಿ ದಿನವಹಿ ಬಸ್ಸಿಗೆ ಎರಡರಷ್ಟು ದರ ವಿಧಿಸಿದ್ದರೆ, ಹೆಚ್ಚುವರಿಯಾಗಿ ಪ್ರಯಣಿಕರ ದಟ್ಟತೆಯನ್ನು ಗಮನಿಸಿ ಓಡಿಸುವ ಬಸ್ಸಿಗೆ ವಿಧಿಸಿದ್ದ ದರ ನಾಲ್ಕು ಪಟ್ಟು. ಕೇಳಿದರೆ ಹಿಂದಿರುಗುವ ದಾರಿಯಲ್ಲಿ ಪ್ರಯಾಣಿಕರ ಅಲಭ್ಯತೆಯಿಂದ ಅದರ ಹೆಚ್ಚುವರಿ ಮೊತ್ತ ನಾವೇ ಭರಿಸಬೇಕಂತೆ. ಆದರೆ ಆನ್‌ಲೈನನಲ್ಲಿ ಆ ಬಸ್‌ಗಳ ವೇಳಾ ಪಟ್ಟಿಯನ್ನು ನೀಡುವ ಏಜೆನ್ಸಿ ಹಿಂದಿರುಗುವಾಗಲೂ ಪ್ರಯಣಿಕರನ್ನು ಭರ್ತಿ ಮಾಡುತ್ತದೆನ್ನುವುದು ಹಗಲು ದರೋಡೆ.
ಈ ಮಧ್ಯೆ ಪ್ರಯಾಣಿಕರಿಗೆ ಟೋಪಿ ಇಕ್ಕುವ ಇನ್ನೊಂದು ಪದ್ಧತಿಯೂ ಇದೆ. ಆನ್‌ಲೈನ್ ಬುಕಿಂಗ್ ಮಾಡಿ ನೀವಾಗಿ ಅದನ್ನು ಕ್ಯಾನ್ಸಲ್ ಮಾಡಿದರೆ ನಿಮಗೆ ಅಯಾ ಸಮಯಾವಧಿ ಕಡಿತ ಗೊಳಿಸಿಕೊಂಡು ಹಣ ಮರು ಪಾವತಿ ಇಲ್ಲವೇ ಇಲ್ಲ. ಅದರ ಬದಲಾಗಿ  ನಿಮ್ಮ ಇ-ಮೇಲ್ ಐಡಿಗೊಂದು ಕ್ಯಾಶ್ ಕೂಪನ್ ಕೊಟ್ಟು ಕೈತೊಳೆದುಕೊಂಡು ಬೀಡುತ್ತಾರೆ. ಇದರಿಂದ ಒಮ್ಮೆ ಟ್ರಾವೆಲ್ ಎಜೆನ್ಸಿ ಕೈಗೆ ಹೋಗುವ ಹಣ ಅವರ ಖಾತೆಗೆ ಸಂಪೂರ್ಣ ಜಮೆಯಾದ ಲೆಕ್ಕ.
ಅಕಸ್ಮಾತ ಹಣ ಹಿಂದಿರುಗಿಸಿ ಅಂತ ಆನ್‌ಲೈನ್ ಕ್ರೆಡಿಟ್ ಕೇಳಿದರೆ ಅದಕ್ಕೆ ಕ್ಯಾನ್ಸಲೇಷನ್ ಚಾರ್ಜ್ ದುಪ್ಪಟ್ಟು. ಹಣ ಮರಳುವ ಹೊತ್ತಿಗೆ ನಿಮ್ಮ ಇನ್ನೊಂದು ಪ್ರವಾಸ ಅವಧಿ ಬಂದಾಗಿರುತ್ತದೆ. ಅಲ್ಲಿಗೆ ಹ್ಯಾಗಿದ್ದರೂ ಮತ್ತೆ ಪ್ರಯಾಣಿಸುತ್ತೇವಲ್ಲ ಎನ್ನುವ ಪ್ರಯಾಣಿಕ ಕೂಪನ್ನಿಗೆ ಲೈಕು ಒತ್ತುವ ಅನಿವಾರ್ಯತೆ! ಜೊತೆಗೆ ಅದನ್ನು ಕೊಡುವಾಗ ಪೂರ್ತಿ ಹಣವಾದ್ರೂ ಕೊಡುತ್ತಾರಾ? ಅದೂ ಇಲ್ಲ. ಅದೆಷ್ಟೇ ಮುಂಗಡ ಕ್ಯಾನ್ಸಲ್ ಮಾಡಿದರೂ ಅದರಲ್ಲಿ ಹತ್ತಿರ ಹತ್ತಿರ ನೂರು ರುಪಾಯಿ ಕುಳಿತಲ್ಲೇ ಕತ್ತರಿಸಿಕೊಂಡು ಗಳಿಸುವ ಏಜೆನ್ಸಿಗಳು ಅನಿವಾರ್ಯವಾಗಿ ಮುಂದಿನ ಸಾರಿಯೂ ತಮ್ಮದೇ ಬಸ್ಸುಗಳಲ್ಲಿ ಪ್ರಯಾಣಿಸಲು ಒತ್ತಾಯಿಸುತ್ತವೆ. ಆಗ ಪುನಃ ಪೂರ್ತಿ ಹಣ ಕೊಡುವಾಗ ಹೆಚ್ಚಿನ ನೂರು ರುಪಾಯಿ ಹೋಗುತ್ತದೆ.
ಇದಿಲ್ಲಿಗೇ ಮುಗಿಯುವುದಿಲ್ಲ. ಸುಖಾ ಸುಮ್ಮನೆ ನಿಮ್ಮ ಬ್ಯಾಗನ್ನು ಕೆಳಗಿನ ಅರೆಯಲ್ಲಿಡಲು ಪ್ರತಿ ಬ್ಯಾಗಿಗೆ 10 ರುಪಾಯಿ ಕೊಡಬೇಕು. ನಾಲ್ಕಾರು ಬ್ಯಾಗಿದ್ದರೆ 40 ರುಪಾಯಿ. ಇಷ್ಟೆಲ್ಲಾ ಆದಮೇಲೂ ಕೆಲವು ಏಜೆನ್ಸಿ ಹೊರತು ಪಡಿಸಿದರೆ, ಉಳಿದೆಲ್ಲಾ ವೋಲ್ವೋ ಬಸ್ಸುಗಳು ಒಳಗಡೆ ಕೊಡುವ ಹೊದಿಕೆಗಳು ಕನಿಷ್ಟ ನಾಲ್ಕಾರು ಬಾರಿ ಉಪಯೋಗಿಸಿದ್ದನ್ನೇ ಒದಗಿಸುತ್ತವೆ. ಇನ್ನು ಕೆಲವರು ಸುಮ್ಮನೆ ಬಿಸಿಲಿಗೆ ಒಣಗಿಸಿಟ್ಟು ತಂದು ಕೊಡತ್ತಾರೆ. ಇಷ್ಟೆಲ್ಲಾ ಲಾಭದತ್ತಲೆ ದೃಷ್ಟಿ ನೆಡುವ ಟ್ರಾವೆಲ್ ಏಜೆನ್ಸಿಗಳು ಪ್ರಯಾಣಿಕರ ಸುರಕ್ಷತೆಯತ್ತ ಎಷ್ಟು ಗಮನ ನೀಡುತ್ತಿವೆ? ಉತ್ತರ ಸೊನ್ನೆ!

- ಸಂತೋಷಕುಮಾರ ಮೆಹೆಂದಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.