ನನ್ನವನೆನ್ನಲಾಗದ ಒಂದು ಕಾಲದ ಗೆಳೆಯ

ಪಾರ್ಸಾ (ಪಾರ್ಸಾ ವೆಂಕಟೇಶ್ವರ ರಾವ್ ಜೂನಿಯರ್), ತರುಣ್ ತೇಜ್ಪಾಲ್ ಮತ್ತು ನಾನು 'ಇಂಡಿಯಾ ಟುಡೆ' ನಿಯತಕಾಲಿಕದಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಅತಿ ದೊಡ್ಡದಾಗಿ ನಗುವುದರಲ್ಲಿ ನಾವು ಮೂವರೂ ಪೈಪೋಟಿಯಲ್ಲಿದ್ದೆವು. ತರುಣ್ ಅವರು ನಮ್ಮ ಸನಿಹದ ಬಾಸ್ ಆಗಿದ್ದರು. ಸಹಜವಾಗಿಯೇ ನಾವಿಬ್ಬರೂ ಅವರಿಂದ ಕಲಿತಿದ್ದು ಬಹಳ. ಅವರ ಬಗ್ಗೆ ಮೆಚ್ಚುಗೆ- ಪ್ರಶಂಸೆ ಇರಿಸಿಕೊಂಡಿದ್ದೆವು.
ತಮ್ಮ ಕಲ್ಪಿತ ಕಾದಂಬರಿಗಳಲ್ಲಿ ಬರೆದಿದ್ದನ್ನೇ ಬದುಕಿನಲ್ಲಿ ಪುನರಾವರ್ತಿಸಿ ಮಾದರಿಯಾಗಿಬಿಟ್ಟಿದ್ದಾರೆ ತರುಣ್. ತಮ್ಮದೇ ಕಾದಂಬರಿಯ ಸೃಷ್ಟಿಕೃತ ಪಾತ್ರದಂತೆ ತರುಣ್ ತಮ್ಮನ್ನು ರೂಪಿಸಿಕೊಂಡಿದ್ದರಿಂದ ಅವರು ಎಲ್ಲಿ ಹೋಗಿ ತಲುಪಲಿದ್ದಾರೆ ಎಂಬುದೂ ಅವರಿಗೆ ಗೊತ್ತಿತ್ತು. ಈಗ ಸುದ್ದಿಯಲ್ಲಿರುವ ಪ್ರಕರಣದ ಕುರಿತಾಗಲೀ, ಈ ಮೊದಲೇ ನನಗೆ ಗೊತ್ತಿದ್ದ ಹಲವು ಪ್ರಕರಣಗಳ ಬಗೆಗಾಗಲೀ ನಾನು ಇಲ್ಲಿ ಹೆಚ್ಚು ವಿವರಗಳನ್ನು ನೀಡಲಾರೆ.
ಯಾವಾಗ ತೆಹೆಲ್ಕಾ ನಿಯತಕಾಲಿಕವು ಒಂದು ಮುಸುಕಿನ ಉದ್ದಿಮೆಯಾಯಿತೋ ಅಂದೇ ತರುಣ್ ತೇಜ್ಪಾಲ್ ತಮ್ಮೊಳಗಿನ ಮನುಷ್ಯನನ್ನು ಕಳೆದುಕೊಂಡರು. ಭಾರತದ ಚಿಕನ್ ಕಿಂಗ್ ಎಂದು ಗುರುತಿಸಲಾಗುವ ತೃಣಮೂಲ ಕಾಂಗ್ರೆಸ್ನ ಸಂಸದ ತೆಹೆಲ್ಕಾಕ್ಕೆ ಹಣ ಹೂಡಿದವರು. ಥಿಂಕ್ ಫೆಸ್ಟಿವಲ್ ಎಂಬ ಅಬ್ಬರ ಶುರುವಾಗುತ್ತಲೇ ತರುಣ್ರ ವೈಯಕ್ತಿಕ ಅಧಃಪತನ ಹಾಗೂ ಪತ್ರಿಕೆಯ ಬೀಳುಗತಿ ಶುರುವಾಯಿತು. ಕಾರ್ಪೋರೇಟ್ ಪ್ರಪಂಚದಿಂದ ಹಣ ಪಡೆದುಕೊಳ್ಳುವುದಕ್ಕೆ ತರುಣ್ ಮತ್ತು ಅವರ ಸಹೋದರಿ ಮಾಡದ ಕೆಲಸವೇ ಇಲ್ಲ. ಹೀಗಾಗಿಯೇ ಹೆಮ್ಮೆಯ ಶಿಖರವನ್ನು ಏರಿ ಕುಳಿತಿದ್ದ ತೆಹೆಲ್ಕಾ ಪಾತಾಳಕ್ಕೂ ಇಳಿಯಿತು. ತೆಹೆಲ್ಕಾ ಮುಚ್ಚಿಕೊಳ್ಳುವ ಹಂತ ಅಲ್ಲಿಂದಲೇ ಚಿಗಿತುಕೊಂಡಿತು. ಕಾರ್ಪೋರೇಟ್ ವಲಯಕ್ಕೆ ಭುಜ ತಾಗಿಸುತ್ತಲೇ ತೆಹೆಲ್ಕಾ ಹಲವು ಸುದ್ದಿಸ್ಫೋಟಗಳನ್ನು ಹಾಗೆಯೇ ತಡೆಹಿಡಿಯಿತು ಹಾಗೂ ಅದಕ್ಕೆ ತಕ್ಕ 'ಬೆಲೆ'ಯನ್ನೂ ಪಡೆದುಕೊಂಡಿತು. ಥಿಂಕ್ಫೆಸ್ಟ್ನ ಎಲ್ಲ ಖರ್ಚುಗಳನ್ನು ಭರಿಸುತ್ತ ಬಂದಿದ್ದೇ ಉದ್ಯಮ ಪ್ರಪಂಚ. ಅಲ್ಲಿಯೇ ತರುಣ್ ತಮ್ಮೆಲ್ಲ ಬದ್ಧತೆ ಹಾಗೂ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದು.
ಸಾಧನೆಯ ಮೌಂಟ್ ಎವರೆಸ್ಟ್ ಏರಿದ್ದ ತರುಣ್ ತೇಜ್ಪಾಲ್ ಅಪರಾಧದ ತಗ್ಗಿಗೆ ಜಿಗಿದಿದ್ದು ಆಘಾತಕಾರಿ ಕತೆಯೇ ಸರಿ. ತೇಜ್ಪಾಲ್ ಜತೆ ಕುಳಿತು ಕುಡಿಯುವುದು ಹಾಗೂ ಹರಟೆ ಕೊಚ್ಚುವುದನ್ನೇ ಕಾಯಕ ಮಾಡಿಕೊಂಡಿದ್ದ ಅವರ ಹಳೆಯ ಸಹವರ್ತಿಗಳೂ ಈ ಪರಿಸ್ಥಿತಿಗೆ ತಮ್ಮ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ.
ಭಾರತದಲ್ಲಿ ತರುಣ್ ಮಾಡಿದ ಸಾಧನೆ ತಮ್ಮದಾಗಿಸಿಕೊಂಡವರು ಯಾರೂ ಇಲ್ಲ. ಸರ್ಕಾರವನ್ನು ಅಂಥ ತೀವ್ರತೆಯಿಂದ ತರಾಟೆಗೆ ತೆಗೆದುಕೊಂಡರೆಂದರೆ ಅದರ ಪರಿಣಾಮಗಳನ್ನು ತಾಳಿಕೊಳ್ಳುವುದಕ್ಕೆ ಅವರಿಗೆ ಮಾತ್ರವೇ ಸಾಧ್ಯವಿತ್ತು. ವ್ಯವಸ್ಥೆ ಮತ್ತು ಓದುಗರು ಉಪೇಕ್ಷಿಸಿದರು ಎಂಬುದು ಸತ್ಯವಾದರೂ ತರುಣ್ ಕಾದಂಬರಿ ಅತ್ಯುತ್ತಮ ಮಟ್ಟದ್ದು. ಭಾರತದ ಅತ್ಯುತ್ತಮ ನಿಯತಕಾಲಿಕವೊಂದನ್ನು ಹುಟ್ಟುಹಾಕಿದರು ತರುಣ್. ಈಗ ಎಲ್ಲವೂ ಕೊಚ್ಚಿ ಹೋಗಿದೆ. ಭಾರತೀಯ ಪತ್ರಿಕೋದ್ಯಮದ ಉತ್ತಮ ಪ್ರಬಂಧಗಳನ್ನು ಬರೆದಿದ್ದು ತೇಜ್ಪಾಲ್. ಅವನ್ನೆಲ್ಲ ಓದುತ್ತ ಹೋದರೆ ಈ ಮನುಷ್ಯ ತಾನು ತೀವ್ರವಾಗಿ ಟೀಕಿಸಿದ್ದನ್ನೇ ವಾಸ್ತವದಲ್ಲಿ ಎಷ್ಟು ಗಾಢವಾಗಿ ಒಪ್ಪಿಕೊಂಡುಬಿಟ್ಟಿದ್ದ ಎಂದು ಆಶ್ಚರ್ಯವಾಗುತ್ತದೆ. ತನ್ನ ಪಂಜಾಬಿ ಪ್ರಬಂಧವನ್ನು ಹೆಮ್ಮೆಯಿಂದ ನನಗೆ ತೋರಿಸಿದ್ದ ಗಳಿಗೆಯಿತ್ತು. ಅದರ ಮೇಲೆ ಅರುಣ್ ಪೂರಿ ಅವರು ಗುಂಡನೆಯ ಅಕ್ಷರಗಳಲ್ಲಿ 'ಪೋಸ್ಟ್ ಇಟ್' ಎಂದು ಬರೆದಿದ್ದರು. ಕೆಂಪು ಶಾಯಿಯಲ್ಲಿ 'ಬ್ರಿಲಿಯಂಟ್. ನನಗೆ ಅರ್ಥ ಮಾಡಿಕೊಳ್ಳಲಾಗುವ ಶಬ್ದಗಳನ್ನೂ ಬಳಸು' ಎಂದಿದ್ದರು.
ಅದು ತರುಣ್ ಅವರ ಪ್ರಾಥಮಿಕ ಹಂತ. ಬದುಕಿನುದ್ದಕ್ಕೂ ಆ ಮಾರ್ಗವನ್ನೇ ಅನುಸರಿಸಬಹುದಾಗಿತ್ತು. ಏಕೆಂದರೆ ಆಗ ಶೇಖರ್ ಗುಪ್ತ ಅವರು ತಮ್ಮದೆಂದು ಕಾಪಿಟ್ಟುಕೊಂಡು ಬಂದಿದ್ದ ಪ್ರಸಿದ್ದವಾದ ಪ್ರಬಂಧ ಮತ್ತು ಪುಸ್ತಕ ಪುಟವನ್ನು ತರುಣ್ ತಮ್ಮದಾಗಿಸಿಕೊಂಡರು. 'ನಿನ್ನ ಕಾರ್ಯಾಚರಣೆ ಬಹಳ ಮೃದು ಮಾರಾಯಾ' ಅಂತ ನಾನಾಗ ಹೇಳಿದ್ದೆ. ಪ್ರತಿಯಾಗಿ ತರುಣ್ ತುಂಟ ನಗೆ ಸೂಸಿದ್ದರು. ಆ ಪುಟವನ್ನು ತರುಣ್ ತೇಜ್ಪಾಲ್ ಬೇರೆಯದೇ ಹಂತವೊಂದಕ್ಕೆ ತೆಗೆದುಕೊಂಡುಹೋಗಿಬಿಟ್ಟರು. ಆನಂತರದಲ್ಲಿ ಆ ಪುಟದ ಉಸ್ತುವಾರಿ ತೆಗೆದುಕೊಂಡ ನನಗೆ ಆ ಗುಣಮಟ್ಟವನ್ನು ಕಾಪಾಡುವುದಕ್ಕೇ ಕಷ್ಟವಾಯಿತು. ತರುಣ್ ಪ್ರಕಟಿಸಿದ್ದ ಅರುಂಧತಿ ರಾಯ್ರ ಕಾದಂಬರಿಯ ಬಿಡುಗಡೆಗೆ ನಾವಿಬ್ಬರೂ ಕಲೆತು ಕೆಲಸ ಮಾಡಿದ್ದೆವು. ಆ ವೇಳೆಗಾಗಲೇ ತರುಣ್ ಇನ್ನೊಂದು ಹಂತವನ್ನು ತಲುಪಿಬಿಟ್ಟಿರುವುದು ನಿಚ್ಚಳವಾಗಿತ್ತು.
ನಂತರದಲ್ಲಿ ಅರುಂಧತಿ ರಾಯ್ರನ್ನು ಕೈಬಿಟ್ಟು ನೈಪಾಲ್ರನ್ನು ಸಮೀಪಿಸಿದರು. ಹತ್ತು ವರ್ಷಗಳ ನಂತರ ನಾನು ತರುಣ್ ಮನೆಯಲ್ಲಿ ನೈಪಾಲ್ರೊಟ್ಟಿಗೆ ಊಟಕ್ಕೆ ಕುಳಿತಿದ್ದೆ. ಅಲ್ಲಿನ ಗೋಡೆಗಳನ್ನೆಲ್ಲ ನೈಪಾಲ್ ಕೃತಿಗಳು ಅಲಂಕರಿಸಿರುವುದು ಸಾಕಾಗದೋ ಎಂಬಂತೆ ಖುದ್ದು ನೈಪಾಲರೇ ಅಲ್ಲಿಗೆ ಬಂದಂತೆ ಕಾಣುತ್ತಿತ್ತು. ತಾವು ಹೀರೋ ಎಂದು ಆರಾಧಿಸುತ್ತಿದ್ದ ವ್ಯಕ್ತಿಯನ್ನು ಮನೆಯವರೆಗೂ ಕರೆತರುವುದಕ್ಕೆ ತರುಣ್ ಯಶಸ್ವಿಯಾಗಿದ್ದರು. ತರುಣ್ ಎದುರಿಗಿದ್ದ ಆದರ್ಶ ಮತ್ತು ಹೀರೋ ಎಂದರೆ ನೈಪಾಲ್ ಮಾತ್ರವೇ. 'ಬಾಸ್, ನೈಪಾಲ್ರನ್ನು ಓದಿ ಬಾಸ್' ಅಂತ ನ್ಯೂಸ್ರೂಮ್ನಲ್ಲಿ ನಮ್ಮನ್ನೆಲ್ಲ ಹುರಿದುಂಬಿಸುತ್ತಿದ್ದರು. ಡೆಸ್ಕ್ ಮೇಲೆ ಕಾಲು ಚಾಚಿಕೊಂಡು ನೈಪಾಲ್ ಬಗ್ಗೆ ಹೇಳುತ್ತಿದ್ದರೆ, ಅರುಣ್ ಪೂರಿ ಪಕ್ಕದಲ್ಲೇ ಹಾದುಹೋದರೂ ಕ್ಯಾರೇ ಅನ್ನುತ್ತಿರಲಿಲ್ಲ. ಮನೆಯಲ್ಲಿ ನೈಪಾಲ್, ತರುಣ್ರಿಂದ ಕೈತುತ್ತು ತಿಂದಿದ್ದಕ್ಕೂ ನಾನು ಸಾಕ್ಷಿ. ಅಂದರೆ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಎದುರಿಗೂ ತರುಣ್ ಕಿಂಗ್ ಎನಿಸಿಯೇ ಇದ್ದರು.
ಇದೀಗ ಟಿವಿಯಲ್ಲಿ ಅಂಥ ತರುಣ್ ತೇಜ್ಪಾಲ್ರನ್ನು ಎಲ್ಲರೂ ಚರ್ಚೆಯಡಿ ಹಾಕಿ ತುಳಿಯುತ್ತಿರುವಾಗ ನನಗೆ ನನ್ನದೇ ಭಾಗವೊಂದು ಸತ್ತಂತೆ ಭಾಸವಾಗುತ್ತಿದೆ. ಹಲವರಿಗೆ ತರುಣ್ ಮೇಲೆ ಏರಿಹೋಗುವುದಕ್ಕೆ ಕಾರಣವಿದೆ. ಏಕೆಂದರೆ ತರುಣ್ ಇವರನ್ನೆಲ್ಲ ತುಳಿದು ನಾಶಕ್ಕೆ ತಳ್ಳಿದ್ದರು. ಅಂತೆಯೇ ತರುಣ್ ತನ್ನ ಕೊಳಕುತನವನ್ನು ಹಲವು ಮಹಿಳಾ ಸಹೋದ್ಯೋಗಿಗಳ ಮೇಲೆ ಪ್ರಯೋಗಿಸಲು ಯತ್ನಿಸಿದ್ದು ನನಗೆ ಗೊತ್ತು. ಅವರೆಲ್ಲರಿಗೂ ಈಗ ನ್ಯಾಯ ದೊರಕುತ್ತಿರುವಂತೆ ಅನ್ನಿಸಿರಬಹುದು.
ಉದಾರಿಯಾಗಿದ್ದ ತರುಣ್ ನಂತರ ಸುದ್ದಿಗಳನ್ನೂ, ವೃತ್ತಿಯನ್ನೂ ಕೊಲ್ಲುವುದಕ್ಕೆ ಶುರುಮಾಡಿದ್ದು ದುರಂತ. ಇವನ್ನೆಲ್ಲ ನನಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಈ ವರ್ಷದ ಆರಂಭದಲ್ಲೇ ನನಗೆ ತರುಣ್ ಕೊನೆಗಾಲ ಸಮೀಪಿಸಿದೆ ಎಂದು ಅರ್ಥವಾಗಿತ್ತು. ಏಕೆಂದರೆ ತರುಣ್ ನಿಯಂತ್ರಣ ರೇಖೆಯನ್ನು ದಾಟಿರುವುದು ಗಮನಕ್ಕೆ ಬಂದಿತ್ತು. ಲೋಲುಪತೆಯನ್ನು ಒಮ್ಮೆ ಮುತ್ತಿಕ್ಕಿದ ಮೇಲೆ ಅದು ಬಿಡುವುದಿಲ್ಲ. ಕ್ರೌರ್ಯ ಮತ್ತು ಏಕರಾತ್ರಿಯ ಕಾಮಕ್ಕೂ ಇದು ಲಗತ್ತಾಗುತ್ತದೆ.
ಈ ಕಲೆಯಲ್ಲಿ ತರುಣ್ ಫುಟ್ಬಾಲ್ನ ಮೆಸ್ಸಿ ಥರವೇ ಗೋಲು ಸಾಧಿಸುತ್ತಿದ್ದ. ಹೇಗೆ ವ್ಯೂಹ ಹೆಣೆಯಬೇಕು, ಬಲಿಯನ್ನು ಹೇಗೆ ಅಧೀರರನ್ನಾಗಿ ಮಾಡಿ, ಉದ್ಯೋಗರಹಿತರನ್ನಾಗಿ ಮಾಡಬೇಕು ಎಂಬುದೆಲ್ಲ ತರುಣ್ಗೆ ಕರಗತ. ಇಂಡಿಯಾ ಟುಡೆಯ ದಿನಗಳಿಂದಲೇ ತರುಣ್ ಔನ್ನತ್ಯದ ಏಣಿ ಏರುತ್ತಿದ್ದಂತೆಲ್ಲ ಪತ್ರಿಕಾಕಾರ್ಯದಲ್ಲಿ ಆಸಕ್ತಿ ಕಳೆದುಕೊಂಡಿದ್ದು ಸ್ಪಷ್ಟವಾಗಿತ್ತು. ಎಲ್ಲ ಉನ್ನತ ವ್ಯಕ್ತಿಗಳೂ ಕಾಲದಲ್ಲಿ ಮುಂದೆ ಸಾಗಿ ಭವಿಷ್ಯದಲ್ಲಿ ಜೀವಿಸುತ್ತಾರಂತೆ. ತರುಣ್ ಹೀಗೆಯೇ ಆದರೂ ಈ ಹಂತದಲ್ಲಿ ತನ್ನ ಬದುಕು ಮತ್ತು ವ್ಯಕ್ತಿತ್ವಗಳನ್ನು ದುರಾಸೆ ಮತ್ತು ಕ್ರೌರ್ಯಗಳು ಹರಿದು ತಿನ್ನುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲೇ ಇಲ್ಲ.
ಅದೊಂದು ರಾತ್ರಿ ನಾವು ಇಂಡಿಯಾ ಟುಡೆಯ ಸಂಚಿಕೆಯೊಂದನ್ನು ಮುಗಿಸಿ ತಡರಾತ್ರಿ ಹೊರಬಿದ್ದು ಹಳೆ ಸ್ಕೂಟರ್ ಚಾಲೂ ಮಾಡುವುದಕ್ಕೆ ಪ್ರಯಾಸ ಪಡುತ್ತಿದ್ದೆವು. ಆಗೊಬ್ಬ ಬಂದು ಅನಧಿಕೃತವಾಗಿ ನಮ್ಮ ಬಳಿ ಪಾರ್ಕಿಂಗ್ ಶುಲ್ಕ ಕೇಳಿದ. ತರುಣ್ ತಟ್ಟನೇ ತಮ್ಮ ಜೇಬಿನಲ್ಲಿದ್ದ 5 ರುಪಾಯಿ ತೆಗೆದುಕೊಟ್ಟರು. ನಾನದನ್ನು ಪ್ರತಿಭಟಿಸಿದಾಗ, 'ಇರ್ಲಿ ಬಾಸ್, ಅವನೂ ಬದುಕಲಿ' ಅಂದಿದ್ದರು.
ಈಗಾತ ಸತ್ತಂತೆಯೇ ಲೆಕ್ಕ.
- ಬಿನು ಕೆ. ಜಾನ್
ಐಬಿಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


