ಅಂಕಣಗಳು

ಕೆ.ಎಸ್.ಸಿ.ಎ.ಗೆ 'ಟೀಂ ಮಯ್ಯ' ಯಾಕೆ ಬೇಕು?

ಕೆ.ಎಸ್.ಸಿ.ಎ.ಗೆ 'ಟೀಂ ಮಯ್ಯ' ಯಾಕೆ ಬೇಕು?
Published On :

ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಸಂಸ್ಥೆಯ (ಕೆ.ಎಸ್.ಸಿ.ಎ) ಈ ಬಾರಿಯ ಚುನಾವಣೆ ಬಹಳ ಕುತೂಹಲಕಾರಿಯಾಗಿದೆ. ಕಾರಣ, ಆಟವನ್ನು ಪ್ರೀತಿಸುವ ಮತ್ತು ಕಾಳಜಿ ಮಾಡುವ ಬಣ ಒಂದೆಡೆಯಿದ್ದರೆ, ಇನ್ನೊಂದು ಬಣ ಆಡಳಿತದಲ್ಲಿದ್ದವರ ತಪ್ಪುಗಳನ್ನು ಹೆಕ್ಕಿ ತೆಗೆಯುವುದರಲ್ಲಿ ನಿರತವಾಗಿದೆ. ಈ ಎರಡೂ ಬಣಗಳ ನಡುವಿನ ಹಣಾಹಣಿಯಲ್ಲಿ ವಿಜಯಮಾಲೆ ಯಾರಿಗೆ ಎಂದು ಡಿಸೆಂಬರ್ ಒಂದನೇ ತಾರೀಖಿಗೆ ಗೊತ್ತಾಗಲಿದೆ.
ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಅನಿಲ್ ಕುಂಬ್ಳೆ ಮತ್ತು ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಚುನಾವಣೆಯಿಂದ ಹಿಂದೆ ಸರಿದು ಹೊಸ ತಂಡಕ್ಕೆ ಜಾಗ ಮಾಡಿಕೊಟ್ಟಿದ್ದಾರೆ. 'ಟೀಮ್ ಮಯ್ಯ' ಎಂಬ ತಂಡ ಹೆಸರಿಗೆ ಹೊಸ ಟೀಮ್ ಆದರೂ ಆ ತಂಡದಲ್ಲಿರುವ ಎಲ್ಲರೂ ಸಂಸ್ಥೆಯ ಎಲ್ಲ ಸದಸ್ಯರಿಗೂ ಚಿರಪರಿಚಿತರೇ. ಈ ತಂಡದಲ್ಲಿರುವ ಬಹುತೇಕರು ಎರಡೂವರೆ ದಶಕದಿಂದ ಕೆ.ಎಸ್.ಸಿ.ಎ.ದಲ್ಲಿ ಒಂದಲ್ಲ ಒಂದು ರೀತಿಯಿಂದ ಸಕ್ರಿಯರಾಗಿದ್ದವರು. ಇನ್ನೊಂದು ಬಣದ ಕೆಲಸದ ವೈಖರಿಯನ್ನು, ಆಡಳಿತದಲ್ಲಿ ಆಲಸ್ಯವನ್ನು ಕಂಡು ಏನೂ ಮಾಡಲು ತೋಚದೆ ಸುಮ್ಮನಿದ್ದವರು. ಆದರೆ ಯಾವಾಗ 2010ರ ಚುನಾವಣೆಯಲ್ಲಿ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಚುನಾವಣಾ ಕಣಕ್ಕಿಳಿದರೋ ಇವರೆಲ್ಲ ತಮ್ಮ ಪೂರ್ಣ ಶಕ್ತಿಯೊಂದಿಗೆ ಸಂಸ್ಥೆಗೆ ದುಡಿಯಲಾರಂಭಿಸಿದರು. ನೋಡ ನೋಡುತ್ತಿದ್ದಂತೆ ಕರ್ನಾಟಕದಲ್ಲಿ ಕ್ರಿಕೆಟ್‌ನ ಹೊಸ ಗಾಳಿ ಬೀಸಲಾರಂಭಿಸಿತು. ಕರ್ನಾಟಕದಲ್ಲಿ ಕ್ರಿಕೆಟ್ 2010ಕ್ಕಿಂತ ಪೂರ್ವದಲ್ಲಿ ರೇಡಿಯೋ, ಟಿವಿ ಮತ್ತು ಪೇಪರ್‌ಗಳಲ್ಲಿ ದೊರೆಯುವ ಮಾಹಿತಿಗೆ ಮಾತ್ರ ಸೀಮಿತವಾಗಿತ್ತು ಎಂದರೆ ತಪ್ಪಾಗಲಾರದು. ಆದರೆ ಯಾವಾಗ ಅನಿಲ್ ಕುಂಬ್ಳೆ-ಜಾವಗಲ್
ಶ್ರೀನಾಥ್‌ರ ಬಳಗ ಆಡಳಿತ ವಹಿಸಿಕೊಂಡಿತೋ, ಕೆ.ಎಸ್.ಸಿ.ಎ.ದಲ್ಲಿ ಬದಲಾವಣೆಗಳ ಸುನಾಮಿ ಎದ್ದಿತು. ಹತ್ತಾರು ವರ್ಷಗಳ ಕಾಲ ಸುಣ್ಣ ಬಣ್ಣ ಕಾಣದ ಕ್ರೀಡಾಂಗಣ ಹೊಸ ರೂಪದಲ್ಲಿ ಕಂಗೊಳಿಸತೊಡಗಿತು. ಕ್ರೀಡಾಂಗಣದಲ್ಲಿ ಸೌಕರ್ಯ-ಸೌಲಭ್ಯಗಳು ದ್ವಿಗುಣಗೊಂಡವು. ಹಳಬರಿಗೆ ಆದ್ಯತೆ ಮತ್ತು ಹೊಸಬರಿಗೆ ಅವಕಾಶ ದೊರೆಯಲಾರಂಭಿಸಿತು. ಜಗತ್ತಿನಾದ್ಯಂತ ಸುತ್ತಾಡಿ ಕ್ರಿಕೆಟ್ ಆಡಿ ಅನುಭವ ಪಡೆದ ಕುಂಬ್ಳೆ-ಜಾವಗಲ್ ಜೋಡಿ ತಮ್ಮ ಜೊತೆಯಾಟಗಾರರಾದ ರಾಹುಲ್ ದ್ರಾವಿಡ್, ವೆಂಕಟೇಶ ಪ್ರಸಾದ್, ಅಭಿರಾಮ, ಸುನೀಲ್ ಜೋಷಿ, ವಿಜಯ ಭಾರದ್ವಾಜರ ಸಹಕಾರ ಸಲಹೆಗಳನ್ನು ಪಡೆದದ್ದಷ್ಟೇ ಅಲ್ಲದೇ ಸಂಸ್ಥೆಯ ಆಡಳಿತದಲ್ಲಿ ಅನುಭವವಿರುವ ಸದಾನಂದ ಮಯ್ಯ, ತಲ್ಲಂ ವೆಂಕಟೇಶ, ರಾಮಧ್ಯಾನಿ ಮತ್ತಿತರ ಸಹಯೋಗದೊಂದಿಗೆ  ಕೆ.ಎಸ್.ಸಿ.ಎ. ಸಂಸ್ಥೆಯನ್ನು ಯಶದ ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕ್ರೀಡಾಂಗಣ ಸುಸಜ್ಜಿತವಾಗಿರಬೇಕು, ಕಾಲಕಾಲಕ್ಕೆ ಸುಣ್ಣ ಬಣ್ಣ ಕಾಣಬೇಕು ಎಂಬುದು ಸಣ್ಣ ವಿಚಾರವಾದರೂ ಹಿಂದಿನ ಅವಧಿಗಳಲ್ಲಿ ಆಡಳಿತದಲ್ಲಿದ್ದವರು ಅದನ್ನು ಯಾಕೆ ಮಾಡಲಿಲ್ಲ ಎಂಬುದು ಬಿಡಿಸಲಾರದ ಒಗಟು! ನಮಗೆ 'ಕ್ರಿಕೆಟ್ಟೇ ಆದಿ-ಕ್ರಿಕೆಟ್ಟೇ ಅಂತ್ಯ' ಎಂದು ಬಿಚ್ಚುಮನಸ್ಸಿನಿಂದ ಮಾತಾಡುವ ಜಾವಗಲ್ ಶ್ರೀನಾಥ್ ಮೊನ್ನೆ ಸದಸ್ಯರಿಗೆ ಹೇಳಿದ್ದೇನೆಂದರೆ "ಕೆ.ಎಸ್.ಸಿ.ಎ.ದಲ್ಲಿ ನೀವು ಎಲ್ಲ ಸೌಲಭ್ಯಗಳನ್ನು ಅನುಭವಿಸಿ, ಆದರೆ ಕ್ರಿಕೆಟ್ಟನ್ನು ಏಳಿಗೆ ಮಾಡುವುದೇ ನಮ್ಮ ಜವಾಬ್ದಾರಿ ಎಂಬುದು ಮರೆಯಬೇಡಿ". ಕೆ.ಎಸ್.ಸಿ.ಎ. ಮೋಜು ಮಸ್ತಿಗಾಗಿ ಮೀಸಲಾದ ಜಾಗವಲ್ಲ ಎಂಬ ಎಚ್ಚರಿಕೆಯ ಮಾತನ್ನು ಜಾವಗಲ್ ಹೇಳುತ್ತಿದ್ದಾರೆ ಎಂದು ಅರಿವಾಗುತ್ತದೆ.
ಹಿಂದೆ ಜಾವಗಲ್‌ರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಕರ್ನಾಟಕದಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸುವುದಾಗಿ ಒಂದು ಯೋಜನೆಯನ್ನು ತಯಾರಿಸಿ ಅಂದಿನ ಕಾರ್ಯದರ್ಶಿಗಳ ಮುಂದಿಟ್ಟಾಗ, "ದುಡ್ಡು ನೀವೇ ಹೊಂದಿಸಿ ಅಕಾಡೆಮಿ ಆರಂಭಿಸಿ" ಎಂಬ ಉತ್ತರ ಬಂತು. ಎಂಟು ತಿಂಗಳ ಕಾಲ ಸತತವಾಗಿ ಓಡಾಡಿದ ಶ್ರೀನಾಥ್ ಒಂದು ಕಂಪನಿಯಿಂದ 8 ಕೋಟಿ ರುಪಾಯಿ ಸ್ಪಾನ್ಸರ್‌ಶಿಪ್ ತಂದಾಗಲೂ ಅಂದಿನ  ಕೆ.ಎಸ್.ಸಿ.ಎ. ಕಾರ್ಯದರ್ಶಿಗಳ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿರಲಿಲ್ಲ. ಹಾಗಾಗಿ ಯೋಜನೆ ಕೈ ಬಿಡಬೇಕಾಯಿತು. ಮುಂದೆ 2010ರಲ್ಲಿ ಜಾವಗಲ್ ಶ್ರೀನಾಥರು ಕಾರ್ಯದರ್ಶಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಅವರ ಕನಸು ಸಾರ್ಥಕವಾಯಿತು. ಆಗ ಅವರು ಅನಿಲ್‌ರೊಂದಿಗೆ ಹೋಗಿ ಮಲ್ಯರನ್ನು ಒಲಿಸಿ ಹೆಚ್ಚಿನ ಸ್ಪಾನ್ಸರ್‌ಶಿಪ್ ಪಡೆದು ರಾಜ್ಯಾದ್ಯಂತ ಕ್ರಿಕೆಟ್ ಅಕಾಡೆಮಿ ಆರಂಭಿಸಿದ್ದಾರೆ. ವರ್ಷದ 365 ದಿನಗಳ ಕಾಲ, ವಾರಕ್ಕೆ ನಾಲ್ಕು ದಿನದಂತೆ ಮರಿ ಕ್ರಿಕೆಟ್ ಆಟಗಾರರಿಗೆ ಟ್ರೈನಿಂಗ್ ನೀಡುತ್ತಿದ್ದಾರೆ.
ಕನ್ನಡನಾಡಿನಲ್ಲಿ ಕ್ರಿಕೆಟ್‌ಗಾಗಿ ಟೊಂಕ ಕಟ್ಟಿ ದುಡಿದ ಅನಿಲ್ -ಜಾವಗಲ್ ಜೋಡಿ ಮತ್ತವರ ತಂಡ ತಮ್ಮಲ್ಲಿರುವ ಎಲ್ಲ ಅನುಭವ, ಸಂಪರ್ಕ ಮತ್ತು ಸಾಮರ್ಥ್ಯವನ್ನು ಬಳಸಿ ಪ್ರಯತ್ನಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. 1934ರಲ್ಲಿ ಆರಂಭವಾದ ಕೆ.ಎಸ್.ಸಿ.ಎ.ಗೆ ಅದರದ್ದೇ ಆದ ಇತಿಹಾಸವಿದೆ. ಇಂದು ಹೆಮ್ಮರವಾಗಿ ಬೆಳೆದು ನಿಂತ ಈ ಸಂಸ್ಥೆಯ ಸದಸ್ಯತ್ವಕ್ಕೆ ಎಲ್ಲರೂ ಮುಗಿಬೀಳುತ್ತಿದ್ದಾರೆ. ಆದರೆ ಆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಎಂ. ಚಿನ್ನಸ್ವಾಮಿಯವರ ಪ್ರತಿಮೆಯನ್ನು ಸ್ಥಾಪಿಸುವ ಪ್ರಯತ್ನ ಆಗ ಅಧಿಕಾರದಲ್ಲಿದ್ದವರು ಮಾಡಲಿಲ್ಲ. ಅದಕ್ಕೆ ನೋಡಿ ಕ್ರೀಡಾಂಗಣದ ಪ್ರಾಂಗಣದಲ್ಲಿ ಆ ಮಹಾನುಭಾವನ ಪ್ರತಿಮೆಯನ್ನು ಸ್ಥಾಪಿಸಿ ಅವರ ಸಾಧನೆಯನ್ನು ಅಳಿಸದಂತೆ ಕೆತ್ತಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅನಿಲ್. "ಒಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಹೇಗಿರಬೇಕು ಹಾಗೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು ನಾವು ಪರಿವರ್ತಿಸಿದ್ದೇವೆ. ಆದ್ದರಿಂದ ಹಲವಾರು ಅಂತಾರಾಷ್ಟ್ರೀಯ ಮ್ಯಾಚ್‌ಗಳನ್ನು ವರ್ಲ್ಡ್ ಕಪ್ ನಂತಹ ಟೂರ್ನಮೆಂಟ್‌ಗಳನ್ನು ಕನ್ನಡಿಗರು ನೋಡಲು ಸಾಧ್ಯವಾಯಿತು. ನಾವು ಆಯ್ಕೆಯಾಗಿ ಬಂದಾಗ ವರ್ಲ್ಡ್‌ಕಪ್ ಆ ಯೋಜನೆಗೆ ದೊರೆತದ್ದು ಕೇವಲ 45 ದಿನಗಳು ಮಾತ್ರ. ಆ 45 ದಿನಗಳಲ್ಲಿ ಈ ತಯಾರಿಗಳನ್ನು ಮಾಡಿಕೊಂಡಿದ್ದಾಗಿ ಕೊಲ್ಕತಾ ಕಳಕೊಂಡ ಭಾರತ-ಇಂಗ್ಲೆಂಡಿನ ಮ್ಯಾಚ್ ಕನ್ನಡದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸುವ ಅವಕಾಶ ಸಿಕ್ಕಿತು ಮತ್ತು ಆ ಮ್ಯಾಚ್‌ನಿಂದಲೇ ದಾಖಲೆ ಹಣ ನಮ್ಮ ಸಂಸ್ಥೆಗೆ ದೊರೆಯಿತು" ಎಂದು ಅನಿಲ್ ವಿವರಿಸುತ್ತಾರೆ.
 ಹೀಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾ ಬಿಸಿಸಿಐನಿಂದ ದೊರೆಯುವ ಅನುದಾನ ಮತ್ತು ಯೋಜನೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತ ಅನಿಲ್-ಜಾವಗಲ್ ಜೋಡಿ ಮತ್ತವರ ತಂಡ ಈ ಸಂಸ್ಥೆಯ 110 ಎಕರೆ ಭೂಮಿಯನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನಗಳನ್ನಾಗಿ ಪರಿವರ್ತಿಸಿದ್ದಾರೆ. ನಮ್ಮ ಹಿಂದಿನವರು ಸರ್ಕಾರ ಮತ್ತಿತರ ಸಂಸ್ಥೆಗಳಿಂದ ಭೂಮಿಯನ್ನೇನೋ ಲೀಸ್‌ನಲ್ಲಿ ಸಂಸ್ಥೆಗಾಗಿ ಪಡೆದಿದ್ದರು. ಪಡೆದು 8-10 ವರ್ಷಗಳಾದರೂ ಆ ಭೂಮಿಯಲ್ಲಿ ಏನೇನೂ ಆಗಿರಲಿಲ್ಲ. ಆದರೆ  2010ರ ನಂತರ ಕ್ಷಿಪ್ರಗತಿಯಲ್ಲಿ ಬೆಳವಣಿಗೆಗಳಾಗತೊಡಗಿದವು. ಒಂದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಹತ್ತಿರ ಆಲೂರಿನಲ್ಲಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ, ಹುಬ್ಬಳ್ಳಿಯ ರಾಜ್‌ನಗರದಲ್ಲಿ, ಬೆಳಗಾವಿ, ಹಾಸನ, ಮಂಗಳೂರು, ಚಿಕ್ಕಮಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹುಲ್ಲು ಹಾಸಿನ ಕ್ರಿಕೆಟ್ ಕ್ರೀಡಾಂಗಣ ತಯಾರಾದವು ಮತ್ತು ಅದೂ ಊರಿನಲ್ಲಿ ಆಕರ್ಷಕ ಪೆವಿಲಿಯನ್‌ಗಳು, ನೆಟ್ ಪ್ರಾಕ್ಟೀಸ್‌ಗಾಗಿ ವ್ಯವಸ್ಥೆಗಳು, ಟ್ರೈನಿಂಗ್ ನಡೆಸುವ ಕೋಚ್‌ಗಳು, ಅನುಭವ ಹಂಚಿಕೊಳ್ಳಲು ಕನ್ನಡದ ಕ್ರಿಕೆಟ್ ದಿಗ್ಗಜರು ಎಲ್ಲರೂ ಲಭ್ಯರಾದರು. ಕ್ರಿಕೆಟ್ ಆಟ ಕರ್ನಾಟಕದಲ್ಲಿ ಬೆಳೆಯಬೇಕು ಎಂಬ ತುಡಿತ ನಿಮ್ಮಲ್ಲಿ ಇರದಿದ್ದರೆ, ಇದೆಲ್ಲಾ ಹೇಗಾಗುತ್ತಿತ್ತು ಸ್ವಾಮಿ? ಎಂದು ಸಂಸ್ಥೆಯ ಹಿತೈಷಿಯೊಬ್ಬರು ಕೇಳುತ್ತಾರೆ. ಆ ಹಿತೈಷಿ ಪ್ರಶ್ನೆಯನ್ನು ಕಿವಿಗೆ ಹಾಕಿಕೊಳ್ಳದ ಇವರ ವಿರೋಧಿ ಬಣ 'ಅದು ಸರಿ ಇಲ್ಲ- ಇದು ಸರಿ ಇಲ್ಲ' ಎಂಬ ಹಾರಿಕೆ ಉತ್ತರ ನೀಡುತ್ತಿದೆಯೇ ಹೊರತು ಸರಿಯಾಗಿ ಏನೂ ಹೇಳುತ್ತಿಲ್ಲ. ಬನ್ನಿ ಮುಖಾಮುಖಿಯಾಗಿ ಚರ್ಚಿಸೋಣ, ನಾವು ಏನು ತಪ್ಪುಮಾಡಿದ್ದೇವೆ ತೋರಿಸಿ ಎಂದು ಬಹಿರಂಗ ಚರ್ಚಾ ಆಹ್ವಾನಕ್ಕೆ ಒಪ್ಪದ ವಿರೋಧಿಗಳು 'ಹಣದ ದುರ್ಬಳಕೆಯಾಗಿದೆ, ಇವರು ಸಾಕಷ್ಟು ಹಣ ಮಾಡಿಕೊಂಡಿದ್ದಾರೆ' ಎಂಬ ಸುಳ್ಳುಸುದ್ದಿ ಹಬ್ಬಿಸುತ್ತಿದೆ. ಆ ಸುದ್ದಿ ಯಾರು ನಂಬುತ್ತಾರೋ, ಗೊತ್ತಿಲ್ಲ. ಯಾಕೆಂದರೆ ಕಣ್ಣಿಗೆ ರಾಚುವ ಹಾಗೆ ಪ್ರಗತಿ ಸಾಧಿಸಿ ಅನಿಲ್-ಜಾವಗಲ್ ಜೋಡಿ ಮತ್ತು ಅವರ ತಂಡ 2010ರಲ್ಲಿ ಅಧಿಕಾರ ಸ್ವೀಕರಿಸಿ ಒಳ ಬಂದಾಗ ಸಂಸ್ಥೆಯಲ್ಲಿದ್ದದ್ದು 66 ಕೋಟಿ ರೂಪಾಯಿ. ಇಂದು ಮುಂದಿನ ಪದಾಧಿಕಾರಿಗಳಿಗೆ ಜಾಗ ಮಾಡಿಕೊಟ್ಟು ಆ ಜೋಡಿ ಹೊರನಡೆದಿದೆ. ಇಂದು ಸಂಸ್ಥೆ ಬಳಿಯಿರುವುದು 133 ಕೋಟಿ ರುಪಾಯಿ! ಈ ಸತ್ಯವನ್ನು ಮುಚ್ಚಿಡುವ ವಿರೋಧಿ ಬಣ, ಸದಸ್ಯರನ್ನು ತಪ್ಪು ದಾರಿಗೆ ಎಳೆಯುತ್ತಿದೆ.
 2010ರಲ್ಲಿ ಅನಿಲ್ ಕುಂಬ್ಳೆಯವರು ಅಧಿಕಾರಕ್ಕೆ ಬಾರದಂತೆ ಎಲ್ಲ ಕುತಂತ್ರಗಳನ್ನು ಮಾಡಿದ್ದು, ಈ ವಿರೋಧಿಗಳೇ. ಆಗ ಸಕಾಲಕ್ಕೆ ಕಾಗದ ಪತ್ರಗಳಿಗೆ ಸಹಿ ಹಾಕದೆ, ಸರಿಯಾದ ಸರ್ಕಾರಿ ಕಚೇರಿಗೆ ತಲುಪಿಸದೆ ಅನಿಲ್‌ಜಿಯ ಪ್ರಾಥಮಿಕ ಸದಸ್ಯತ್ವಕ್ಕೆ ಕುತ್ತು ತಂದಿದ್ದರು ಇವರು. ಆದರೆ ಸಕಾಲದಲ್ಲಿ ಅನಿಲ್ ಕಾರ್ಯಪ್ರವೃತ್ತರಾಗಿದ್ದರಿಂದ, 2010ರಲ್ಲಿ ಅಧಿಕಾರಕ್ಕೆ ಬಂದಿತು ಅನಿಲ್‌ಕುಂಬ್ಳೆ ಬಳಗ. ಆಗಲೂ "ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯುಸಿ ಆಗಿರುವ ಅನಿಲ್-ಜಾವಗಲ್ ಕನ್ನಡಕ್ಕಾಗಿ ಏನು ಮಾಡುತ್ತಾರೆ, ವರ್ಷದಲ್ಲಿ 200 ದಿನ ಟೂರ್ ಮಾಡುವ ಇವರಿಗೆ ಕನ್ನಡ ಕ್ರಿಕೆಟ್‌ಗಾಗಿ ಎಲ್ಲಿದೆ ಸಮಯ?" ಎಂದು ಕೊಂಕಾಡಿದರು ಈ ವಿರೋಧಿಗಳು. ಆದರೆ ಈ ಇಬ್ಬರು ವಿರೋಧಿಗಳ ಕೊಂಕಿಗೆ ಏನೂ ಉತ್ತರ ಕೊಡದೆ, ಮಯ್ಯ, ಧ್ಯಾನಿ, ತಲ್ಲಂ ಮತ್ತು ಉಳಿದ ಆಟಗಾರರ ಸಹಕಾರದಿಂದ ಇಷ್ಟೆಲ್ಲ ಕೆಲಸ ಮಾಡಿ ತೋರಿಸಿದರು.
2013-16 ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷ ಪದದ ಅಭ್ಯರ್ಥಿಯಾಗಿರುವ ಡಾ. ಪಿ. ಸದಾನಂದ ಮಯ್ಯ ಬಹಳ ಚೆನ್ನಾಗಿ ಹೇಳಿದರು. "ನಾನು ಆಹಾರ ಉದ್ಯಮದಲ್ಲಿದ್ದವನು. ನನಗೆ ಅಕ್ಕಿಯಿಂದ ಅನ್ನ ಮಾಡುವುದು ಹೇಗೆ ಎಂದು ಗೊತ್ತು. ನಾನು ಎಲ್ಲರೂ ಉಣ್ಣಬಹುದಾದ ಅನ್ನವನ್ನು ರುಚಿಯಾಗಿ ಮಾಡುತ್ತೇನಷ್ಟೇ ಅಲ್ಲದೆ ಆರೋಗ್ಯ ಕಾಪಾಡಿಕೊಳ್ಳುವ ಹಾಗೆ ಉಣಬಡಿಸುತ್ತೇನೆ. ಅನಿಲ್-ಜಾವಗಲ್ ಜೋಡಿ ಗದ್ದೆಯಲ್ಲಿದ್ದ ಕಸ ಗುಡಿಸಿ ಹಸನು ಮಾಡಿ ಉತ್ತಮವಾದ ಬತ್ತ ಬೆಳೆದು ನನ್ನ ಕೈಗೆ ಹೈ ಕ್ವಾಲಿಟಿ ಅಕ್ಕಿಯನ್ನು ಕೊಟ್ಟಿದೆ. ಅಂದರೆ ಕರ್ನಾಟಕದ ತುಂಬೆಲ್ಲ ಆಡಲು ಯೋಗ್ಯವಾದ ಮೈದಾನ ನಿರ್ಮಿಸಿದ್ದಾರೆ. ಅಕಾಡೆಮಿಯನ್ನು ಸಕ್ರಿಯವಾಗಿಸಿ ಚಿಣ್ಣರಿಗೆ ತರಬೇತಿ ನೀಡುತ್ತಿದ್ದಾರೆ. ರಾಷ್ಟ್ರೀಯ -ಅಂತಾರಾಷ್ಟ್ರೀಯ ಮಟ್ಟದ ಯೋಜನೆಗಳನ್ನು ಕೈಗೆಟಕುವಂತೆ ಸಂಪರ್ಕ ಬೆಳೆಸಿಕೊಟ್ಟಿದ್ದಾರೆ ಹಾಗೂ ಸಂಸ್ಥೆಯ ಸದಸ್ಯರಿಗಾಗಿ ವಿಶೇಷ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಆಟ ನೋಡಲು ಬರುವ ಕ್ರಿಕೆಟ್ ಪ್ರೇಮಿಯನ್ನು ಗಮನದಲ್ಲಿಟ್ಟುಕೊಂಡು ಆಶೋತ್ತರಗಳನ್ನು ಕಟ್ಟಿದ್ದಾರೆ. ಈ ಎಲ್ಲ ಅಕ್ಕಿಯಿಂದ ನಾನು ಮತ್ತು ನನ್ನ ತಂಡ ಉತ್ತಮ ಅನ್ನವನ್ನು ತಯಾರಿಸಿದ್ದೇವೆ, ಬರೀ ಅನ್ನವೇನು ಅದರಲ್ಲಿ ಬಿಸಿಬೇಳೆಭಾತ್, ವಾಂಗಿಭಾತ್, ಕೇಸರಿಭಾತ್, ಬೇಕಾದರೆ ಬಿರಿಯಾನಿಯನ್ನು ತಯಾರಿಸಿ ಕನ್ನಡಿಗರಿಗಾಗಿ ನೀಡಲಿದ್ದೇವೆ'.
ಹೌದು. ಮಯ್ಯ ಟೀಮ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಅನುಭವವಿದೆ. ಕಾರ್ಪೋರೇಟ್ ಸಂಸ್ಥೆಯ ಒಡನಾಟವಿದೆ. ಆಡಳಿತ ನಡೆಸುವ ಚಾಕಚಕ್ಯತೆಯಿದೆ. ಸಂಸ್ಥೆಗೆ ಹಿತ ಬಯಸುವ ಮತ್ತು ಕರ್ನಾಟಕ ಕ್ರಿಕೆಟ್ ಏಳಿಗೆ ಬಯಸುವ ಮನಸ್ಸು ಇದೆ. ಈ ಎಲ್ಲ ಕಾರಣಕ್ಕಾಗಿ 'ಟೀಮ್ ಮಯ್ಯ' ಈ ಅವಧಿಗೆ ಕೆ.ಎಸ್.ಸಿ.ಎ.ದಲ್ಲಿ ಅಧಿಕಾರಕ್ಕೆ ಬರಬೇಕು.
- ಜಯದೇವ ಹುಬ್ಳೀಕರ್,
ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.