ಪ್ರಧಾನಿ ಹುದ್ದೆಯ ಘನತೆ ಏನುಳಿಯಿತು?
ಶಿಕ್ಷೆಗೆ ಒಳಗಾದ ರಾಜಕಾರಣಿಗಳನ್ನು ರಕ್ಷಿಸಲಿದ್ದ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಮೂಲಕ ಸರ್ಕಾರದ ನಿಜವಾದ ಬಾಸ್ ಯಾರು ಎಂಬುದಕ್ಕೆ ಕೇಂದ್ರ ಸಂಪುಟವು ಉತ್ತರ ನೀಡಿದಂತಾಗಿದೆ. ತಮ್ಮ ಅಪರಿಮಿತ ಅಧಿಕಾರ ಹಾಗೂ ವೆಟೊ ಪವರ್ ಬಳಸಿಕೊಳ್ಳುತ್ತಾರೆಂಬ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ನ ಉಪಾಧ್ಯಕ್ಷರು ಮತ್ತೊಮ್ಮೆ ತಮ್ಮ ವರಸೆ ತೋರಿದ್ದಾರೆ.
ತಮ್ಮ ಅಗ್ರಗಣ್ಯತೆಯನ್ನು ತೋರಿಸಿಕೊಳ್ಳುವ ಉಮೇದಿನಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಹುದ್ದೆಗೆ ರಿಪೇರಿ ಮಾಡಲಾಗದ ಆಘಾತವನ್ನು ನೀಡಿದ್ದಾರೆ. ಪ್ರಧಾನಿಯವರನ್ನು ಯಕಶ್ಚಿತ್ ಎಂದೇ ನೋಡಿಕೊಂಡು ಬಂದಿರುವ ಪಕ್ಷವು ಕಾಂಗ್ರೆಸ್ ಸಿಂಹಾಸನದ ಉತ್ತರಾಧಿಕಾರಿಯಾಗಿರುವ ರಾಹುಲ್ ಗಾಂಧಿ ಪರ ಬಹುಪರಾಕು ಹಾಕುತ್ತಿದೆ.
ಕಳೆದ ಒಂಬತ್ತೂವರೆ ವರ್ಷಗಳಿಂದ ನೈಜ ಅಧಿಕಾರವೇನೂ ತಮ್ಮ ಬಳಿ ಇರದಿದ್ದರೂ ಪ್ರಧಾನಿಯಾಗಿರುವ ಮನಮೋಹನಸಿಂಗ್ ಅವರು ತಮ್ಮ ಹುದ್ದೆಯ ಘನತೆ ಹಾಗೂ ತಾವು ಬಿಟ್ಟುಹೋಗುವ ಮಾದರಿಯ ಬಗ್ಗೆ ಕಿಂಚಿತ್ತೂ ಕಳವಳಪಟ್ಟುಕೊಂಡಂತೆ ಕಾಣುತ್ತಿಲ್ಲ.
ಅಮೆರಿಕದಿಂದ ಹಿಂತಿರುಗುವಾಗ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಸಿಂಗ್ ಅವರು ರಾಹುಲ್ ಹೇಳಿಕೆಗೆ ಪ್ರಾಮುಖ್ಯ ತಗ್ಗಿಸುತ್ತ, ತಾವು ರಾಜಿನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಈ ಹೇಳಿಕೆಯೊಂದಿಗೆ ಪ್ರಧಾನಿ ಸಿಂಗ್ ಅವರು ಹಿಂದೆಂದಿಗಿಂತಲೂ ದುರ್ಬಲರಾಗಿ ಕಾಣುತ್ತಿದ್ದಾರೆ. ರಾಜಕೀಯ ವೀಕ್ಷಕ ಟಿ. ಶಿವಪ್ರಸಾದ ಶೆಟ್ಟಿ ಇದನ್ನು ಸೊಗಸಾಗಿ ವಿಶ್ಲೇಷಿಸುತ್ತಾರೆ. 'ಮನಮೋಹನ್ ಸಿಂಗ್ ಅಧಿಕಾರಿಗಳ ವಲಯದಿಂದ ಬಂದವರು.
ಈಗಲೂ ಹಾಗೆಯೇ ವರ್ತಿಸುತ್ತಿದ್ದಾರೆ. ಅಧಿಕಾರಿಗಳನ್ನು ರಾಜಕೀಯ ಮಾಸ್ಟರ್ಗಳು ಬಹಿರಂಗವಾಗಿಯೇ ಬಯ್ಯುವುದು ಹೊಸ ಸಂಗತಿಯೇನಲ್ಲ. ಅದನ್ನು ಹೆಚ್ಚಿನ ಯಾವ ಅಧಿಕಾರಿಗಳೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರಾಜಿನಾಮೆ ಕೊಡುವ ಮಾತಂತೂ ದೂರವೇ ಉಳಿಯಿತು. ಅಧಿಕಾರಿಗಳ ವಲಯದಿಂದ ರಾಜಕಾರಣಿಯಾಗಿ ತಿರುಗಿಕೊಂಡವರಿಂದ ಧೀರನಡೆಯನ್ನು ನಿರೀಕ್ಷಿಸುವುದು ನಮ್ಮ ಮೂರ್ಖತನವಷ್ಟೆ.'
ಕಳೆದ 20 ವರ್ಷಗಳಲ್ಲೇ ಅತಿ ಪ್ರಮುಖವೆನ್ನಬಹುದಾದ ಸಾರ್ವತ್ರಿಕ ಚುನಾವಣೆಯನ್ನು ಈ ದೇಶ ಸದ್ಯದಲ್ಲೇ ಕಾಣಲಿದೆ. ಹೀಗಾಗಿ ಸರ್ಕಾರಕ್ಕಿಂತ ಪಕ್ಷದ ಮಾತೇ ಮೇಲಾಗುವುದು ಕೆಲವೊಮ್ಮೆ ಸಹಜವಿದ್ದೀತು. ಆದರೆ ಮನಮೋಹನಸಿಂಗ್ ಅವರ ಯುಪಿಎ1 ಮತ್ತು ಯುಪಿಎ2ರ ದುರಂತವೆಂದರೆ ಇಲ್ಲಿ ಯಾವತ್ತೂ ಸರ್ಕಾರಕ್ಕಿಂತ ಪಕ್ಷವೇ ಪ್ರಮುಖ ಎನಿಸಿದೆ. ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಪ್ರಧಾನಿ ತನ್ನದೇ ಆದ ನಿಲವು ತೋರಿಸುವುದಕ್ಕೆ 10, ಜನಪಥವು ಬಿಡಲೇ ಇಲ್ಲ.
ಒಂದೊಮ್ಮೆ ಯುಪಿಎ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾದರೂ ಸಿಂಗ್ ಅವರಿಗೆ ಇಲ್ಲಿ ಯಾವ ಮಹತ್ವವೂ ಇರುವುದಿಲ್ಲ ಎಂಬುದನ್ನು ಕಾಂಗ್ರೆಸ್ ತನ್ನ ವರ್ತನೆಯಲ್ಲಿ ಸ್ಪಷ್ಟಪಡಿಸಿದೆ. ದೇಶಕ್ಕೆ ಯುವ ನಾಯಕರ ಅಗತ್ಯವಿದ್ದು, ರಾಹುಲ್ ಗಾಂಧಿಯಂಥವರು ಆ ಸ್ಥಾನವನ್ನು ತುಂಬುತ್ತಾರೆ ಎಂದಾದರೆ ಅದು ಸ್ವಾಗತಾರ್ಹವೇ. ಆದರೆ ಅವರು ಹೊಣೆಗಾರಿಕೆಯೊಂದಿಗೆ ಅಧಿಕಾರ ಚಲಾಯಿಸಲು ಬಯಸುತ್ತಾರೋ ಅಥವಾ ತಮ್ಮ 'ಹಿಟ್ ಆ್ಯಂಡ್ ರನ್' ರಾಜಕೀಯದಲ್ಲೇ ಮಗ್ನರಾಗಿರುತ್ತಾರೋ?
ಹಿರಿಯ ನಿವೃತ್ತ ಅಧಿಕಾರಿ ಸಿ. ಜಿ. ಸೋಮಯ್ಯ ಅವರು 'ದ ಆನೆಸ್ಟ್ ಆಲ್ವೇಸ್ ಸ್ಟ್ಯಾಂಡ್ ಅಲೋನ್' ಎಂಬ ಹೊತ್ತಗೆಯಲ್ಲಿ, ಮನಮೋಹನಸಿಂಗ್ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ದಿನಗಳನ್ನು ಉಲ್ಲೇಖಿಸಿದ್ದಾರೆ. 1980ರ ಕಾಲದಲ್ಲಿ ಸೋಮಯ್ಯ ಅವರು ಇದರ ಸದಸ್ಯರಾಗಿದ್ದರು. ಒಮ್ಮೆ ಪ್ರಧಾನಿ ರಾಜೀವ್ ಗಾಂಧಿಯವರು ಭಾರತದ ಆಧುನೀಕರಣದ ಕುರಿತ ವಿಚಾರಕ್ಕಾಗಿ ಯೋಜನಾಭವನಕ್ಕೆ ಬಂದಿದ್ದರು.
ಮನಮೋಹನಸಿಂಗ್ ಅವರ ವಿಚಾರಗಳನ್ನು ಒಪ್ಪದ ಅವರು ಯೋಜನಾ ಆಯೋಗದ ಸದಸ್ಯರ ಎದುರಲ್ಲಿಯೇ ಸಿಂಗ್ ವಿಚಾರಗಳು ಔಟ್ಡೇಟೆಡ್ ಎಂದು ತೆಗಳಿದರು. ಸೋಮಯ್ಯ ಹೇಳುವಂತೆ ಆಗ ಮನಮೋಹನಸಿಂಗ್ ಅವರಿಗೆ ಬಹಳ ನೋವಾಗಿತ್ತು. ರಾಜಿನಾಮೆಯ ಬಗ್ಗೆ ಯೋಚಿಸಿದ್ದರು. ಆದರೆ ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ ಹಾಗೂ ಮನಮೋಹನರಂಥ ಹಿರಿಯ ವ್ಯಕ್ತಿ ತಾರುಣ್ಯದ ಉತ್ಸಾಹದಲ್ಲಿರುವ ರಾಜೀವ್ ಗಾಂಧಿ ಮಾತುಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಸೋಮಯ್ಯ ಸಮಾಧಾನ ಹೇಳಿದರಂತೆ. ಉಳಿದಿದ್ದು ಎಲ್ಲರಿಗೂ ತಿಳಿದಿರುವ ಇತಿಹಾಸ.
ಅದಾಗಿ 25-26 ವರ್ಷಗಳೇ ಕಳೆದ ಬಳಿಕ ರಾಜೀವ್ ಗಾಂಧಿಯವರ ತಾಳ್ಮೆರಹಿತ ಮಗ ರಾಹುಲ್ ಗಾಂಧಿಯವರಿಂದ ಇತಿಹಾಸ ಪುನರಾವರ್ತನೆ ಆಗಿದೆ. ವಯಸ್ಸಾಗುತ್ತಿದ್ದಂತೆ ಪ್ರೌಢಿಮೆ ಹೆಚ್ಚಾಗುತ್ತದೆ ಎನ್ನುತ್ತಾರೆ. ಮನಮೋಹನಸಿಂಗ್ ವಿಚಾರದಲ್ಲಿ ಇದು ತುಂಬ ನಿಜವಾಗಿದೆ. ಇವರ ನೇತೃತ್ವದ ಸರ್ಕಾರವನ್ನು ರಾಹುಲ್ ಗಾಂಧಿ ಬಹಿರಂಗವಾಗಿಯೇ ಜನ್ಮ ಜಾಲಾಡಿದರು. ಆಗೇನಾದರೂ ತಾವು ಹುದ್ದೆಯಿಂದ ಕೆಳಗಿಳಿದುಬಿಡೋಣ ಎಂಬ ಯೋಚನೆ ಸಿಂಗ್ ಅವರಲ್ಲಿ ಸುಳಿಯಿತೋ ಗೊತ್ತಿಲ್ಲ. ಆದರೆ ಪ್ರಧಾನಿಯಾಗಿ ಅವರು ಇನ್ನೂ ಇಳಿಯಬಹುದಾದ ಯಾವ ಪ್ರಪಾತವನ್ನೂ ಉಳಿಸಿಲ್ಲ!
- ಡಿ. ಪಿ. ಸತೀಶ್
ಪತ್ರಕರ್ತ,
ಸಿಎನ್ಎನ್-ಐಬಿಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

