ರಾಹುಲ್‌ರ ಅಬ್ಬರದಿಂದ ಲಾಭವಂತೂ ಆಯಿತಲ್ಲ?

ಕಳಂಕಿತ ಚುನಾಯಿತ ಪ್ರತಿನಿಧಿಗಳನ್ನು ರಕ್ಷಿಸುವುದಕ್ಕಾಗಿ ತಯಾರಾದ ಸುಗ್ರೀವಾಜ್ಞೆಯನ್ನು ಹರಿದುಹಾಕಬೇಕು ಎಂದು ಅಬ್ಬರಿಸಿದ...
Updated on: 

ನಮ್ಮ ಆರ್ಥಿಕತೆಯನ್ನು ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿ ತಿಂದು ಹಾಕುತ್ತಲೇ ಸಾಗಿದೆ. ವಿದ್ಯಾವಂತ ಮಧ್ಯಮ ವರ್ಗ ಭ್ರಷ್ಟಾಚಾರದ ವಿರುದ್ಧ ಮೊದಲಿನಿಂದಲೂ ಕೂಗು ಹಾಕುತ್ತಲೇ ಇದೆ. ಆದರೆ ಅದರ ಧ್ವನಿ ಯಾರಿಗೂ ತಲುಪುತ್ತಿಲ್ಲ. ಹಾಗಾಗೇ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಆಂದೋಲನ ಶುರು ಮಾಡಿದಾಗ, ಅವರಿಗೆ ಭಾರೀ ಬೆಂಬಲ ಕೊಟ್ಟಿತು.

ಕಳಂಕಿತ ಚುನಾಯಿತ ಪ್ರತಿನಿಧಿಗಳನ್ನು ರಕ್ಷಿಸುವುದಕ್ಕಾಗಿ ತಯಾರಾದ ಸುಗ್ರೀವಾಜ್ಞೆಯನ್ನು ಹರಿದುಹಾಕಬೇಕು ಎಂದು ಅಬ್ಬರಿಸಿದ ರಾಹುಲ್ ಸ್ವಲ್ಪ ಜಾಸ್ತಿಯೇ ಮಾತನಾಡಿರಬಹುದು.  ಅಧಿಕಾರ ವಿರೋಧಿ ಅಲೆಯ ಹೊಡೆತಕ್ಕೆ ಕುಂಟುತ್ತಿದ್ದ ಕಾಂಗ್ರೆಸ್‌ಗೆ ಸುಗಮ ಹಾದಿಯನ್ನೇ ಅವರು ತೋರಿಸಿರಬಹುದು. ಕಾಂಗ್ರೆಸ್‌ನ ವಿರುದ್ಧ ತೋಳೇರಿಸಿಕೊಂಡು ನಿಂತಿದ್ದ ವಿರೋಧ ಪಕ್ಷಗಳನ್ನು ಸುಮ್ಮನೆ ಕೂರುವಂತೆ ಅವರು ಮಾಡಿರಬಹುದು. ಆ ಸುಗ್ರೀವಾಜ್ಞೆಯನ್ನು ನಾನ್‌ಸೆನ್ಸ್ ಎಂದು ಕರೆದದ್ದಕ್ಕಾಗಿ ಅವರು ಟೀಕೆ ಎದುರಿಸುತ್ತಿರಬಹುದು. ರಾಷ್ಟ್ರಪತಿಗಳು ಆ ಬಿಲ್‌ಗೆ ವಿರುದ್ಧವಾಗಿದ್ದಾರೆ ಎನ್ನುವ ಸುಳಿವು ಪಡೆದು ಅವರು 'ಲೆಕ್ಕಾಚಾರದ' ರಿಸ್ಕ್ ತೆಗೆದುಕೊಂಡಿರಬಹುದು. ಜೋರಾಗಿ ಗರ್ಜಿಸುವ ಮೂಲಕ, ಪ್ರಧಾನ ಮಂತ್ರಿ ಕುರ್ಚಿಯಲ್ಲಿ ಕೂರಲು ತಾವು ಸಿದ್ಧ ಎನ್ನುವ ತಮ್ಮ ಇಂಗಿತವನ್ನು ಸ್ಪಷ್ಟಪಡಿಸಿರಬಹುದು. ಈ ಘಟನೆಯ ನಂತರ ಅವರು ತಮ್ಮ ಮತ್ತು ಮಿತ್ರಪಕ್ಷಗಳ ನಾಯಕರ ವಿರೋಧ ಕಟ್ಟಿಕೊಂಡಿರಬಹುದು.
ರಾಹುಲ್ ಗಾಂಧಿಯವರ ಅಬ್ಬರದ ಹಿಂದಿನ ಕಾರಣಗಳೇನೇ ಇರಲಿ, ಇದರಿಂದ ಸಾರ್ವಜನಿಕರಿಗಂತೂ ಸಹಾಯಗಿದೆ. ವಿವಾದಾಸ್ಪದ ಆರ್ಡಿನೆನ್ಸ್ ಈಗ ಕಸದಬುಟ್ಟಿ ಸೇರಿದೆ. ಇನ್ನು ತಪ್ಪಿತಸ್ಥರೆಂದು ಸಾಬೀತಾದ ರಾಜಕಾರಣಿಗಳನ್ನು ಕೂಡಲೇ ಅನರ್ಹಗೊಳಿಸಬೇಕು ಎಂಬ ಸುಪ್ರೀಂಕೋರ್ಟ್‌ನ ತೀರ್ಪನ್ನು ತಿರಸ್ಕರಿಸಿದ್ದ ಬಿಲ್ ಅನ್ನೂ ಕೂಡ ಸಂಸತ್ತಿನಲ್ಲಿ ಹಿಂಪಡೆಯಲು ಕೇಂದ್ರ ಕ್ಯಾಬಿನೆಟ್ ನಿರ್ಧರಿಸಿದೆ. ಈಗ ರಾಜಕಾರಣಿಗಳು ಸುರಕ್ಷಿತ ತಳಿಗಳಲ್ಲ. ಕಾಂಗ್ರೆಸ್‌ನ ಮಿತ್ರ ಪಕ್ಷ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಈಗ ಲೋಕಸಭೆಯಿಂದ ತಮ್ಮ ಸ್ಥಾನ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. 900 ಕೋಟಿ ರುಪಾಯಿ ಮೊತ್ತದ ಮೇವು ಹಗರಣದಲ್ಲಿ ಅವರೀಗ ಜೈಲು ಸೇರಿದ್ದಾರೆ. ಇನ್ನು ಮೆಡಿಕಲ್ ಪ್ರವೇಶಾತಿ ಹಗರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್‌ನ ಇನ್ನೊಬ್ಬ ನಾಯಕ ರಶೀದ್ ಮಸೂದ್ ಕೂಡ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇಂಥ ಅನೇಕ ಭ್ರಷ್ಟ ರಾಜಕಾರಣಿಗಳಿಗೆ ಇಂದಲ್ಲ ನಾಳೆ ಇದೇ ಗತಿ ಕಾದಿದೆ. ಇದು ನಿಜಕ್ಕೂ ಭ್ರಷ್ಟಾಚಾರವನ್ನು ತಡೆಯುವಲ್ಲಿ ಪ್ರಬಲ ಅಸ್ತ್ರವಾಗಲಿದೆ.
ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕೈಯಲ್ಲಿ ನರಳುತ್ತಿರುವ ಆಮ್ ಆದ್ಮಿಗೆ ಇದೊಂದು ಬೃಹತ್ ಗೆಲುವು. ನಮ್ಮ ಆರ್ಥಿಕತೆಯನ್ನು ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿ ತಿಂದು ಹಾಕುತ್ತಲೇ ಸಾಗಿದೆ. ವಿದ್ಯಾವಂತ ಮಧ್ಯಮ ವರ್ಗ ಭ್ರಷ್ಟಾಚಾರದ ವಿರುದ್ಧ ಮೊದಲಿನಿಂದಲೂ ಕೂಗು ಹಾಕುತ್ತಲೇ ಇದೆ. ಆದರೆ ಅದರ ಧ್ವನಿ ಯಾರಿಗೂ ತಲುಪುತ್ತಿಲ್ಲ. ಹಾಗಾಗೇ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಆಂದೋಲನ ಶುರು ಮಾಡಿದಾಗ, ಆ ವರ್ಗ ಅವರಿಗೆ ಭಾರೀ ಬೆಂಬಲ ಕೊಟ್ಟಿತು, ಧರಣಿ ನಡೆಸಿತು, ರ್ಯಾಲಿಗಳಲ್ಲಿ ಭಾಗಿಯಾಯಿತು. ಜನಲೋಕಪಾಲ್ ಬಿಲ್ ಅನ್ನು ಜಾರಿಗೆ ತಂದು ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು ಎಂಬ ಪ್ರಬಲ ಸಂದೇಶವನ್ನು ರಾಜಕೀಯ ವರ್ಗಕ್ಕೆ ಅದು ಕಳುಹಿಸಿಕೊಟ್ಟಿತು. ಸ್ವತಂತ್ರ ಭಾರತ ಭ್ರಷ್ಟಾಚಾರದ ವಿರುದ್ಧ ಈ ಪರಿಯ ಹೋರಾಟಕ್ಕೆ ಹಿಂದೆಂದೂ ಸಾಕ್ಷಿಯಾಗಿರಲಿಲ್ಲ. ಸರ್ಕಾರಗಳ ಬುಡವೇ ಅಲುಗಾಡತೊಡಗಿತು. ಈಗ ಸಕ್ರೀಯ ನ್ಯಾಯಾಂಗ ತನ್ನ ಕೈಯನ್ನು ಇನ್ನಷ್ಟು ಬಿಗಿ ಮಾಡಿರುವುದರಿಂದ ಭ್ರಷ್ಟರು ಒದ್ದಾಡತೊಡಗಿದ್ದಾರೆ, ಸಾಮಾನ್ಯ ಜನತೆ ನಿಟ್ಟುಸಿರುಬಿಡುತ್ತಿದ್ದಾರೆ.
ಹಾಗಿದ್ದರೆ ಮುಂದೇನು? ಸಂಸದರು ಮತ್ತು ಶಾಸಕರನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ತರಬೇಕು. ರಾಜಕೀಯ ವರ್ಗ ಇದನ್ನು ವಿರೋಧಿಸುತ್ತಲೇ ಇದೆ. ಆ ಕಾಯ್ದೆ ತಮ್ಮ ಹಳವಂಡವನ್ನೆಲ್ಲ ಹೊರಗೆಡವುತ್ತದೆ ಎನ್ನುವುದು ಅವರಿಗೆ ಗೊತ್ತಿದೆ. ಈ ಕಾಯ್ದೆಯಲ್ಲಿ ತಿದ್ದುಪಡಿ ತರುವ ಮಸೂದೆ ಸಂಸತ್ತಿನ ಮುಂದಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಈ ಮಸೂದೆಗೆ ಬೆಂಬಲ ಸೂಚಿಸುತ್ತಿವೆ. ಆದರೆ ರಾಹುಲ್ ಗಾಂಧಿಗೆ ಈ ಮಸೂದೆ "ನಾನ್‌ಸೆನ್ಸ್‌" ಅನ್ನಿಸುತ್ತಿಲ್ಲವೇ? ಅದನ್ನೂ ಹರಿದುಹಾಕಿ ಎಂದು ತಮ್ಮ ಪಕ್ಷಕ್ಕೆ ಅವರು ಹೇಳಬಲ್ಲರಾ? ಒಂದು ವೇಳೆ ರಾಜಕಾರಣಿಗಳು ತಪ್ಪು ಮಾಡದೇ ಇದ್ದಿದ್ದರೆ ಅಷ್ಟೇಕೆ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ತಾವು ಬರುವುದನ್ನು ವಿರೋಧಿಸುತ್ತಿದ್ದರು? ಚುನಾಯಿತ ಪ್ರತಿನಿಧಿಗಳಿಗೊಂದು ಕಾನೂನು, ಸಾಮಾನ್ಯ ಜನತೆಗೊಂದು ಕಾನೂನೇಕೆ?
ರಾಜಕೀಯ ಅಭ್ಯರ್ಥಿಗಳು ಚುನಾವಣೆಗೆ ಮುನ್ನ ಸಲ್ಲಿಸಿದ ತಮ್ಮ ಆಸ್ತಿಯ ವಿವರಗಳನ್ನು ಒಮ್ಮೆ ನೋಡಿದರೆ ಸಾಕು, ರಾಜಕೀಯಕ್ಕೆ ಬಂದ ನಂತರ ಅವರು ಎಷ್ಟು ಗಳಿಸಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಕೆಲವೇ ವರ್ಷಗಳಲ್ಲಿ ಹಲವರ ಆಸ್ತಿ ಮೂರು-ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಹಾಗಾಗೆ ಅವರು ತಮ್ಮನ್ನು ರಕ್ಷಿಸುವಂಥ ಕಾನೂನೇ ಜಾರಿಯಾಗಬೇಕೆಂದು ಬಯಸುತ್ತಾರೆ. ಬಿಲ್/ ಸುಗ್ರೀವಾಜ್ಞೆಯನ್ನು ತಿರಸ್ಕರಿಸುವಂಥ ಹೆಜ್ಜೆಯನ್ನು ರಾಜಕೀಯ ವರ್ಗ ಇಟ್ಟಿದ್ದು ಇದೇ ಕಾರಣಕ್ಕಾಗಿಯೇ. ಇನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತಾವು ಬರಬಾರದು ಎಂದವರು ಒದ್ದಾಡುತ್ತಿರುವುದು ಇದೇ ಕಾರಣಕ್ಕಾಗಿಯೇ.
ಇಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ""None of the above'' (ನೋಟಾ) ಎನ್ನುವ ಆಯ್ಕೆಯನ್ನು ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಲಯದ ಈ ತೀರ್ಪನ್ನು ಜನತೆಯ ಗೆಲುವೆಂದೇ ಬಣ್ಣಿಸಬೇಕು. ನೋಟಾ ಆಯ್ಕೆಯನ್ನು ಒತ್ತಿದರೆ, ಮತದಾರ ಎಲ್ಲಾ ಅಭ್ಯರ್ಥಿಗಳನ್ನೂ ತಿರಸ್ಕರಿಸುತ್ತಿದ್ದಾನೆ ಎಂದರ್ಥ. ಹಾಗಾಗೆ ರಾಜಕೀಯ ಪಕ್ಷಗಳು ಮತದಾರರು ಮೆಚ್ಚುವಂಥ ಅಭ್ಯರ್ಥಿಗಳನ್ನೇ ಅಖಾಡದಲ್ಲಿ ಬಿಡಲು ಮುಂದಾಗುತ್ತವೆ. ಆದರೆ ನನಗೊಂದು ಅನುಮಾನವಿದೆ: ಒಂದು ವೇಳೆ ಕ್ಷೇತ್ರವೊಂದರಲ್ಲಿ ಅಭ್ಯರ್ಥಿಗಳಿಗಿಂತ ನೋಟಾ ಮತಗಳೇ ಹೆಚ್ಚಾದರೆ, ಮರು ಚುನಾವಣೆ ನಡೆಸಲಾಗುತ್ತದೆಯೇ? ಅಥವಾ ಸರಿಯಾದ ಅಭ್ಯರ್ಥಿಯಿಲ್ಲ ಎನ್ನುವ ಕಾರಣ ನೀಡಿ ಮನೆಯಲ್ಲೇ ಕುಳಿತುಕೊಳ್ಳುವವರಿಗಾಗಿ ಈ ಆಯ್ಕೆಯನ್ನು ನೀಡಲಾಗಿದೆಯೇ? ಚುನಾವಣಾ ಆಯೋಗ ಈ ವಿಷಯವನ್ನು ಸ್ಪಷ್ಟಪಡಿಸಬೇಕು.
ಜನರ ಅಧಿಕಾರ ಚುನಾವಣೆಯ ಜೊತೆಗೇ ಮುಗಿದುಹೋಗುತ್ತದೆ ಎನ್ನುವ ಭ್ರಮೆ ರಾಜಕಾರಣಿಗಳಿಂದ ದೂರವಾಗಬೇಕು. ಅವರ ಪ್ರತಿಯೊಂದು ಚಲನವಲನಗಳ ಮೇಲೂ ಮತದಾರ ನಜರು ಇಟ್ಟಿರುತ್ತಾನೆ. ರಾಜಕೀಯ ನಾಯಕತ್ವ ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ತಿರಸ್ಕರಿಸುವುದನ್ನು ಬಿಟ್ಟು, ಅದನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕಿದೆ.

ಕೊನೆಯ ಗುಟುಕು: ಹೀಗೊಂದು ಕುತೂಹಲಕರ ಟ್ವೀಟ್: " ಸಿರಿಯಾದ ಮೇಲೆ ಯುದ್ಧ ಮಾಡುವ ಮಾತನಾಡುವಾಗ ಅಮೆರಿಕದ ಬಳಿ ಹಣವಿರುತ್ತದೆ, ಆದರೆ ತನಗೆ ಸಂಕಷ್ಟ ಎದುರಾದಾಗಲಲ್ಲ". ಆದರೂ ಇವರ ಆದ್ಯತೆಗಳನ್ನು ನೋಡಿ!

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com