ವಸ್ತ್ರ ಸಂಹಿತೆ: ಪ್ರಗತಿಪರರ ಬೂಟಾಟಿಕೆ
ಗ್ರಾಮ ಸಮುದಾಯ ಪಂಚಾಯಿತಿಗಳು ಹೆಣ್ಣುಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಚೋನಾತ್ಮಕ ಪಾಶ್ಚಿಮಾತ್ಯ ಉಡುಗೆ ತೊಡುವುದನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವುದನ್ನು ಪ್ರಗತಿಪರರೆನಿಸಿಕೊಂಡವರು ಕಟುಮಾತುಗಳಿಂದ ವಿರೋಧಿಸುತ್ತಿದ್ದಾರೆ. ಇಂಥ 'ತಾಲಿಬಾನಿ ನಿಯಮ'ಗಳ ವಿರುದ್ಧ ಗಂಟೆಗಟ್ಟಲೇ ಮಾತನಾಡುತ್ತಾರೆ ಟಿ.ವಿ. ಆ್ಯಂಕರ್ಗಳು ಮತ್ತು ಅವರು ಆಯ್ಕೆ ಮಾಡಿ ಕರೆತಂದ ಕೆಲ 'ಮುಂದುವರಿದವರು'. ಡ್ರೆಸ್ ಕೋಡ್(ವಸ್ತ್ರಸಂಹಿತೆ)ನ ಯೋಚನೆಯೇ ಸ್ವಾತಂತ್ರ್ಯ ವಿರೋಧಿಯಾದದ್ದು ಮತ್ತು ಕ್ರೂರವಾದದ್ದು ಎಂದು ಅವರು ನಮಗೆ ಪಾಠ ಮಾಡುತ್ತಾರೆ. ಪ್ರತಿ ವ್ಯಕ್ತಿಗೂ ತಾನು ಯಾವ ಉಡುಪು ಧರಿಸಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯವಿರಬೇಕು ಎನ್ನುವ ಮಾತು ಮೇಲ್ನೋಟಕ್ಕೆ ಒಪ್ಪುವಂಥದ್ದೇ.
ಆದರೆ ವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ ವಾದ ಮಂಡಿಸುವವರಿದ್ದಾರಲ್ಲ, ಅವರು ಹೇಳುವ ಮಾತನ್ನೇ ಅವರಿಗೆ ಅನ್ವಯ ಮಾಡಲು ಪ್ರಯತ್ನಿಸಿದಾಗ ಮಾತ್ರ ತತ್ತರಿಸಿ ಚಡಪಡಿಸತೊಡಗುತ್ತಾರೆ.
ಉದಾಹರಣೆಗೆ ನಮ್ಮ ಮಾಧ್ಯಮಗಳಲ್ಲಿನ ಸುದ್ದಿ ವಾಚಕರನ್ನೇ ನೋಡಿ. ಎಲ್ಲರೂ ಕಪ್ಪು ಅಥವಾ ಗಾಢ ಕಂದು ಬಣ್ಣದ ಕೋಟ್ ಧರಿಸಿರುತ್ತಾರೆ. ಪೂರ್ತಿ ತೋಳಿನ ಶರ್ಟು, ಕುತ್ತಿಗೆಗೊಂದು ಟೈ, ಅದನ್ನು ಅರೆ ಮುಚ್ಚಿದ ಕೋಟು...'ಪಾಶ್ಚಿಮಾತ್ಯ ಸಾಹೇಬರೇ' ಬಂದು ಕೂತಿದ್ದಾರೇನೋ ಎನ್ನುವಂತೆ ಅವರು ಕಾಣಿಸುತ್ತಾರೆ. ಥರಗುಟ್ಟಿಸುವ ಚಳಿಗೆ ಸೂಕ್ತವಾದ ಆ ಯುರೋಪಿಯನ್ ಕೋಟುಗಳನ್ನು ನಮ್ಮ ಆ್ಯಂಕರ್ಗಳು ಏಕೆ ಧರಿಸುತ್ತಾರೆ? ಅದೂ ಇಷ್ಟೊಂದು ಶಖೆಯಲ್ಲಿ? ಅವರನ್ನು ನೋಡಿದಾಗ ಪ್ರೇಕ್ಷಕರೇ ಬೆವೆತುಬಿಡುತ್ತಾರೆ! ಅದಾಗ್ಯೂ, ಈ ಸುದ್ದಿ ವಾಚಕರ ಮೇಲೆ ಯಾರೂ "ತಾಲಿಬಾನಿ ನಿಯಮಗಳ"ನ್ನು ಹೇರಿರುವುದಿಲ್ಲ ಎನ್ನುವುದಂತೂ ಸತ್ಯ. ಹಾಗಿದ್ದರೆ ಅವರು ಧೋತಿ, ಕುರ್ತಾ-ಪೈಜಾಮಾ, ಟಿ-ಶರ್ಟ್ ಏಕೆ ಧರಿಸುವುದಿಲ್ಲ?
ಹಿಂದಾದರೆ ಮಹಿಳಾ ಸುದ್ದಿವಾಚಕರು ಸೀರೆ ಉಡುವುದು ಕಡ್ಡಾಯವಾಗಿತ್ತು. ಆದರೀಗ ಎಲ್ಲರೂ ಕಾರ್ಪೊರೇಟ್ ಸೂಟ್ಗಳಿಗೆ ಮೊರೆಹೋಗಿದ್ದಾರೆ. ಯಾರೂ ಕೂಡ ಟಾಪ್ಲೆಸ್ ಗೌನ್ಗಳನ್ನು, ಮಿನಿಸ್ಕರ್ಟ್ಗಳನ್ನು, ಡೀಪ್ನೆಕ್ ಡ್ರೆಸ್ಗಳನ್ನು ಧರಿಸುವುದಿಲ್ಲ. ಹಾಗೆ ಧರಿಸುವವರೇನಿದ್ದರೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವವರಷ್ಟೆ. ಮಹಿಳಾ ಆ್ಯಂಕರ್ ಒಬ್ಬಳು ಬ್ಯಾಕ್ಲೆಸ್ ಚೂಡಿದಾರ ಧರಿಸಿ ರಾತ್ರಿ ಪಾರ್ಟಿಗೆ ಹೋಗಬಲ್ಲಳು, ಆದರೆ ಅದನ್ನೇ ಧರಿಸಿ ಗಂಭೀರ ಕಾರ್ಯಕ್ರಮವೊಂದನ್ನು ನಡೆಸಲು ಆಕೆಗೆ ಅನುಮತಿ ಸಿಗುವುದಿಲ್ಲ. ಅದೇ ರೀತಿಯೇ ಉತ್ತರಭಾರತದಲ್ಲಿ ಸತ್ತವರ ಮನೆಗೆ ಯಾರೂ ಬಣ್ಣ ಬಣ್ಣದ ಸೀರೆಯಲ್ಲಿ ಹೋಗುವುದಿಲ್ಲ. ಬದಲಾಗಿ ಬಿಳಿ ಬಟ್ಟೆಯನ್ನೇ ಧರಿಸುತ್ತಾರೆ. ಇದೊಂದು ಅಲಿಖಿತ ನಿಯಮ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂಥ ಸಂದರ್ಭಗಳಲ್ಲಿ ಕಪ್ಪುವಸ್ತ್ರ ಧರಿಸುವುದು ರೂಢಿ.
ಇದರರ್ಥವಿಷ್ಟೆ. ಎಲ್ಲಾ ದೇಶಗಳಲ್ಲೂ, ಅಲ್ಲಿನ ಪ್ರತೀ ಸಂಸ್ಥೆ ಮತ್ತು ಪ್ರತೀ ಸಂದರ್ಭಗಳಲ್ಲೂ "ಏನು ಧರಿಸಬೇಕು/ಯಾವ ಬಟ್ಟೆ ಧರಿಸಬಾರದು" ಎನ್ನುವ ಅಲಿಖಿತ ನಿಯಮವಿರುತ್ತದೆ. ಆದರೆ ನಮ್ಮ ಸ್ವಯಂಘೋಷಿತ ಸುಧಾರಣಾವಾದಿಗಳು ಕೇವಲ ಆಯ್ದ ವಿಷಯಗಳ ವಿರುದ್ಧವಷ್ಟೇ ಹೋರಾಡುತ್ತಾರೆ. ನಾವಿಂದು ಬ್ರಿಟಿಷರು ಬಿಟ್ಟು ಹೋದ ಬಟ್ಟೆಗಳನ್ನೇ ಧರಿಸುತ್ತಿದ್ದೇವೆ! ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ, ಕಾನ್ವೆಂಟ್ಗಳಲ್ಲಿ ಹೆಣ್ಣುಮಕ್ಕಳು ಸ್ಕರ್ಟ್ ಧರಿಸುವುದು ಬ್ರಿಟಿಷ್ರ ಕಾಲದಲ್ಲಿ ಕಡ್ಡಾಯವಾಗಿತ್ತು. ಆದರೆ ಆ ನಿಯಮವನ್ನೇ ಈಗಿನ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಅಳವಡಿಸಿಕೊಂಡಿವೆ. ಹೆಣ್ಣುಮಕ್ಕಳು ಸ್ಕರ್ಟ್ ಧರಿಸುವುದು ಈಗ ಕಡ್ಡಾಯ!
ಇಂಥದ್ದೇ ವಸ್ತ್ರಸಂಹಿತೆಯಿರುವ ಶಾಲೆಯಲ್ಲಿ ಓದಿರುವ ನನಗೆ ಗೊತ್ತು ಅದರ ಕಷ್ಟವೇನೂ ಅಂತ. ಅದರಲ್ಲೂ ಬೆಳೆಯುತ್ತಿರುವ ಹೆಣ್ಣುಮಕ್ಕಳಿಗೆ ಸ್ಕರ್ಟ್ ಧರಿಸುವುದರಿಂದ ಆಗುವ ಕಿರಿಕಿರಿ, ಮುಜುಗರ ಅಷ್ಟಿಷ್ಟಲ್ಲ. ಈ ತೊಂದರೆ ಕೋ ಎಜುಕೇಶನ್(ಗಂಡುಮಕ್ಕಳು) ಇರುವ ಶಾಲೆಗಳಲ್ಲಿ ಇನ್ನೂ ಹೆಚ್ಚು. ಕೂಡುವಾಗ, ನಿಲ್ಲುವಾಗ ಒಟ್ಟಿನಲ್ಲಿ ಪ್ರತೀ ನಿಮಿಷವೂ ಹುಡುಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆಟ ಆಡುವಾಗ ಕೆಳಕ್ಕೆ ಬಿದ್ದರೆ ಪೆಟ್ಟಾಗುತ್ತದೆ ಎನ್ನುವ ಭಯಕ್ಕಿಂತ ಎಲ್ಲಿ ಸ್ಕರ್ಟ್ ಹಾರಿ ಅವಮಾನವಾಗುತ್ತದೋ ಎನ್ನುವ ಭಯವೇ ಹೆಚ್ಚು. ಮುಟ್ಟಿನ ಸಮಯದಲ್ಲಂತೂ ಪಾಪ ಹೆಣ್ಣುಮಕ್ಕಳಿಗೆ ಇಂಥ ವಸ್ತ್ರಗಳಿಂದ ಬಹಳ ತೊಂದರೆಯಾಗುತ್ತದೆ. ಇನ್ನು ಶಾಲೆಗಳಲ್ಲಿ ಪುಂಡ ಹುಡುಗರೂ ಇದ್ದೇ ಇರುತ್ತಾರೆ. ಅವರಿಗೆ ಎಂದಿಗೂ ಹುಡುಗಿಯರ ಸ್ಕರ್ಟ್ ಮೇಲೆಯೇ ಕಣ್ಣು. ಅದರಲ್ಲೂ ಚಳಿಗಾಲದ ಸಮಯದಲ್ಲಂತೂ ಸ್ಕರ್ಟ್ ಎನ್ನುವುದು ಅತ್ಯಂತ ಕಿರಿಕಿರಿಯ ವಸ್ತ್ರ. ಇತ್ತೀಚೆಗೆ ಕೆಲವು ಶಾಲೆಗಳು ಪ್ಯಾಂಟ್ ಧರಿಸುವುದನ್ನು ಕಡ್ಡಾಯಗೊಳಿಸಿವೆ. ಆದರೆ ಪ್ಯಾಂಟ್-ಶರ್ಟ್ ಬದಲು ಚೂಡಿದಾರ ಮಾತ್ರ ಧರಿಸುವಂತಿಲ್ಲ! ಈ ಬಗ್ಗೆ ಪ್ರಶ್ನಿಸಿದರೆ, ತಮ್ಮ ವಿದ್ಯಾರ್ಥಿನಿಯರು "ಹಳ್ಳಿಯ ಹುಡುಗಿ"ಯರಂತೆ ಉಡುಪು ಧರಿಸುವುದನ್ನು ತಾವು ಸಹಿಸುವುದಿಲ್ಲ ಎಂದು ಶಾಲಾ ಆಡಳಿತಗಳು ಹೇಳುತ್ತವೆ. ಇದೂ ಕೂಡ ಹೆಣ್ಣಿನ ಮೇಲಿನ ದಬ್ಬಾಳಿಕೆಯಲ್ಲವೇ? ಅವರಿಂದ ಸ್ವಾತಂತ್ರ್ಯ ಕಸಿದುಕೊಂಡಂತಲ್ಲವೇ?
ಇನ್ನು ನಮ್ಮ ನ್ಯಾಯಾಧೀಶರುಗಳ ಉಡುಪನ್ನು ನೋಡಿ! ಬ್ರಿಟಿಷ್ ಸರ್ವಾಧಿಕಾರಿಗಳು ಹೇರಿದ್ದ ನಿಯಮವನ್ನು ಆಚರಿಸುವುದಕ್ಕೆ ನಮ್ಮ ಕಾನೂನು ಬಳಗಕ್ಕೆ ಮುಜುಗರವಾಗುವುದಿಲ್ಲವೇ? ಇದು ಗುಲಾಮಗಿರಿಯ ಸಂಕೇತವೆಂದೆನಿಸುವುದಿಲ್ಲವೇ? ನಮ್ಮ ಭಾರತೀಯ ಉಡುಪುಗಳನ್ನೇಕೆ ವಕೀಲರು, ನ್ಯಾಯಾಧೀಶರು ಧರಿಸಬಾರದು? ಒಂದು ವೇಳೆ ಕುರ್ತಾ-ಪೈಜಾಮಾ ಧರಿಸಿದರೆ ವಕೀಲನೊಬ್ಬನ ಬುದ್ಧಿಮತ್ತೆ ಕಡಿಮೆಯಾಗುತ್ತದೆಯೇ? ನ್ಯಾಯಾಧೀಶನಿಗೆ ಮರೆವು ಆವರಿಸುತ್ತದೆಯೇ? ದಪ್ಪನೆಯ ಕಪ್ಪು ಗೌನು, ಟೈ ಧರಿಸುವುದು ಸೌಂದರ್ಯದ ಮೇಲಿನ ದಾಳಿಯಷ್ಟೇ ಅಲ್ಲ, ಇದು ಸಂಪೂರ್ಣ ಮೂರ್ಖತನವೂ ಹೌದು! ಮಹಿಳಾ ಪೊಲೀಸರಿಗೆ ವಸ್ತ್ರಸಂಹಿತೆಯಿಂದಾಗುವ ತೊಂದರೆ ಕಡಿಮೆಯೇನಿಲ್ಲ.ಬಿಗಿ ಬೆಲ್ಟಿನ ಖಾಕಿ ಪ್ಯಾಂಟ್ಗಳನ್ನು ಅವರು ಧರಿಸುತ್ತಾರೆ. ಗರ್ಭಿಣಿಯರಿಗೆ ಈ ಉಡುಪು ಎಷ್ಟು ಸೂಕ್ತವಾದದ್ದು ಎಂದು ಒಮ್ಮೆ ನೀವೇ ಯೋಚಿಸಿ? ಚೂಡಿದಾರ ಅವರಿಗೆ ಸೂಕ್ತ ಉಡುಪಲ್ಲವೇ?
ಇನ್ನು ಮೊಬೈಲ್ ಫೋನ್ಗಳ ಬಳಕೆಯನ್ನು ಹದ್ದುಬಸ್ತಿನಲ್ಲಿಡಲು ಪೋಷಕರು ಪ್ರಯತ್ನಿಸುವ ವಿಷಯಕ್ಕೆ ಬರೋಣ. ಅತೀ ಆಧುನಿಕ ಎಂದೆನಿಸಿಕೊಳ್ಳುವ ಕುಟುಂಬಗಳೂ ಇಂದು ತಮ್ಮ ಮಕ್ಕಳ ಅತಿಯಾದ ಮೊಬೈಲ್ ಫೋನ್ ಬಳಕೆಯ ಬಗ್ಗೆ ಚಿಂತಿತರಾಗಿದ್ದಾರೆ. ಅದನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದಾರೆ. ಈಗಿನ ಯುವಕರು ಮತ್ತು ಮಕ್ಕಳು ಈ ಆಧುನಿಕ ಯಂತ್ರಗಳಿಗೆ ಯಾವ ಪರಿ ದಾಸರಾಗಿದ್ದಾರೆಂದರೆ, ತರಗತಿಯ ವೇಳೆಯಲ್ಲಿ ಸಂದೇಶ ಕಳುಹಿಸುವುದು, ಅಶ್ಲೀಲ ಚಿತ್ರಗಳನ್ನು, ವೀಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು, ರಾತ್ರಿ ಹನ್ನೆರಡಾದರೂ ಟ್ವೀಟ್ ಮಾಡುತ್ತಾ ಕೂಡುವುದನ್ನು ಚಟವಾಗಿಸಿಕೊಂಡಿದ್ದಾರೆ. ಕೆಲವು ಯುವಕರಂತೂ ತಮ್ಮ ಗರ್ಲ್ಫ್ರೆಂಡ್ನ ಸಲಿಗೆಯ ಚಿತ್ರಗಳನ್ನು/ ವೀಡಿಯೋಗಳನ್ನು ತೆಗೆದು ಬ್ಲಾಕ್ಮೇಲ್ ಅಸ್ತ್ರಗಳನ್ನಾಗಿಸಿಕೊಳ್ಳುತ್ತಾರೆ. ಹಾಗಾಗೇ ನಗರದ ಸುಶಿಕ್ಷಿತ ಕುಟುಂಬಗಳೂ ಕೂಡ ತಮ್ಮ ಮಕ್ಕಳು ಮೊಬೈಲ್ ಫೋನ್ ಬಳಸುವುದನ್ನು, ಅಂತರ್ಜಾಲಕ್ಕೆ ಲಗ್ಗೆಯಿಡುವುದನ್ನು ನಿರ್ಬಂಧಿಸತೊಡಗಿವೆ. ಸಿಟಿಯಲ್ಲಿ ಹೀಗೆ ಮಾಡುವವರನ್ನು "ಬುದ್ಧಿವಂತರು" ಎಂದು ಕರೆದರೆ, ಹಳ್ಳಿಯ ಜನ ಮಾಡಿದರೆ "ತಾಲಿಬಾನಿ ನಿಯಮ"ಗಳು ಎನ್ನಲಾಗುತ್ತದೆ!
ಒಟ್ಟಿನಲ್ಲಿ ಸಂದೇಶವಂತೂ ಸ್ಪಷ್ಟವಾಗಿದೆ:
1) ಒಂದು ವೇಳೆ ಯಾರಾದರೂ ನಮ್ಮ ಮೇಲೆ ಪಾಶ್ಚಿಮಾತ್ಯ ವಸ್ತ್ರಸಂಹಿತೆಯನ್ನು ಹೇರಿದರೆ, ಅದೆಷ್ಟೇ ಮುಜುಗರವುಂಟು ಮಾಡಿದರೂ, ಅದೇ "ಸರಿಯಾದದ್ದು" ಎಂದು ಭಾವಿಸಿ ಧರಿಸಬೇಕು. ಒಂದು ವೇಳೆ ಯಾರಾದರೂ ಸಾಂಪ್ರದಾಯಿಕ ತೊಡುಗೆಗಳೇ ಉತ್ತಮ ಎಂದು ವಾದಿಸಿದರೆ ಅವರನ್ನು ಖಂಡಿಸಬೇಕು ಮತ್ತು ಅಂಥ ಹಿಂದುಳಿದ 'ತಾಲಿಬಾನಿ ಮನಸ್ಥಿತಿಗಳನ್ನು' ದೂಷಿಸಬೇಕು.
2) ವಸ್ತ್ರ ಸಂಹಿತೆ ಮತ್ತು ಸಾಮಾಜಿಕ ನೈತಿಕತೆಯ ವಿಷಯದಲ್ಲಿ ಪೋಷಕರು, ಶಿಕ್ಷಕರು, ಸಮುದಾಯದ ನಾಯಕರಿಗೆ ಮಾತನಾಡಲು ಹಕ್ಕಿಲ್ಲ! ಈ ಹಕ್ಕು ಏನಿದ್ದರೂ ಮೆಟ್ರೋ ಸಿಟಿಗಳಲ್ಲಿ ಐಷಾರಾಮಿ ಜೀವನ ನಡೆಸುವ ಸ್ವಯಂಘೋಷಿತ ಸುಧಾರಣಾವಾದಿಗಳು ಮತ್ತು ಅತಿ ಹುರುಪಿನ ಟಿ.ವಿ. ಆ್ಯಂಕರ್ಗಳಿಗಷ್ಟೇ ಇದೆ. ಬ್ರಿಟಿಷ್ ಸರ್ವಾಧಿಕಾರಿಗಳ ಅಪೂರ್ಣ ಉದ್ದೇಶವನ್ನು ಪೂರ್ಣಗೊಳಿಸುವ; ಅಂದರೆ, ಭಾರತೀಯರನ್ನು "ನಾಗರಿಕರನ್ನಾಗಿಸುವ" ಜವಾಬ್ದಾರಿಯನ್ನು ಇವರುಗಳು ತೆಗೆದುಕೊಂಡಿದ್ದಾರಾ?
ಉದಾರೀಕರಣದ ಈ ಸರ್ವಾಧಿಕಾರಿ ಪಾಠಗಳನ್ನೇ ನಾವು ಶ್ರದ್ಧೆಯಿಂದ ಕಂಠಪಾಠ ಮಾಡುತ್ತಿದ್ದೇವೆ, ಇದನ್ನೇ ಸುಧಾರಣೆ ಎನ್ನುತ್ತಿದ್ದೇವೆ!
ಮಧು ಪೂರ್ಣಿಮಾ ಕಿಶ್ವರ್
ಸಂಪಾದಕರುಮಾನುಷಿ ನಿಯತಕಾಲಿಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

