ಅಂಕಣಗಳು

ಹೈ.ಕ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ತಾರತಮ್ಯವಾಗದಿರಲಿ

ಹೈ.ಕ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ತಾರತಮ್ಯವಾಗದಿರಲಿ
Published On :

ಅಭಿವೃದ್ಧಿ ಸಮಿತಿ ತಾರತಮ್ಯ ಮಾಡದೆ ಬೀದರ್ ಜಿಲ್ಲೆಯ ಭಾಲ್ಕಿ, ಔರಾದ್ ತಾಲೂಕಿನಿಂದ ಹಿಡಿದು, ಹೈದರಾಬಾದ್ ಕರ್ನಾಟಕದ ಕೊನೆಯ ಭಾಗ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನವರೆಗೂ ಅನುದಾನ ಸಮರ್ಪಕವಾಗಿ ಹಂಚಿಕೆಯಾಗಬೇಕು

ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನದ ಎರಡು ದಶಕಗಳ ಹೋರಾಟ ರಾಷ್ಟ್ರಪತಿಗಳ ಅಂಕಿತದೊಂದಿಗೆ ಸಾಕಾರಗೊಂಡಿದೆ. ಎರಡು ದಶಕಗಳ ಹೋರಾಟದಲ್ಲಿ ಈ ಭಾಗದ ನಾಯಕರು, ಹೋರಾಟಗಾರರು, ಬರಹಗಾರರು ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಿದ್ದಾರೆ.
ಹೈ.ಕ. ವಿಶೇಷ ಸ್ಥಾನಮಾನದ 371 (ಜೆ) ತಿದ್ದುಪಡಿಯನ್ನು ಅನುಷ್ಠಾನಗೊಳಿಸುವಲ್ಲಿ ಕೇಂದ್ರದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ ಪ್ರಮುಖವಾಗಿದೆ. ಖರ್ಗೆಯವರು ಕೇಂದ್ರ ಸಂಪುಟದಲ್ಲಿರದಿದ್ದರೆ ಈ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಅವರು ಕೇಂದ್ರ ಸಂಪುಟದಲ್ಲಿ ತಮ್ಮ ಪ್ರಭಾವ ಬೀರಿ ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಹೈ.ಕ. ವಿಶೇಷ ಸ್ಥಾನಮಾನದ ಅನುಷ್ಠಾನದ ಕೀರ್ತಿ ಖರ್ಗೆಯವರಿಗೆ ಸಲ್ಲುತ್ತದೆ. ಆ ಕಾರಣಕ್ಕಾಗಿ ಈ ಭಾಗದ ಎಲ್ಲ ಜನತೆಯ ಪರವಾಗಿ ಖರ್ಗೆ ಅವರಿಗೆ ಧನ್ಯವಾದ.
ಖರ್ಗೆ ಅವರು ರಾಜ್ಯ ರಾಜಕಾರಣದಲ್ಲಿ ಉಳಿದಿದ್ದರೆ ಹಿರಿತನದ ಮೇಲೆ ಮುಖ್ಯಮಂತ್ರಿಯಾಗಬಹುದಿತ್ತು. ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡಿದ ಹೆಗ್ಗಳಿಕೆ ಆ ಪಕ್ಷಕ್ಕೆ ಹಾಗೂ ಈ ಭಾಗದ ಜನತೆಗೆ ಸಲ್ಲುತಿತ್ತು. ಆದರೆ, ಹಾಗಾಗಲಿಲ್ಲ. ಖರ್ಗೆಯವರು ಯಾವುದೆ ಅಪಸ್ವರ ತೋರದೆ ಪಕ್ಷ ನಿಷ್ಠರರಾಗಿದ್ದುದರಿಂದ ಅವರಿಗೆ ಕೇಂದ್ರದಲ್ಲಿ ಉನ್ನ್ನತ ಸ್ಥಾನವನ್ನು ಪಕ್ಷ ಕಲ್ಪಿಸಿತು. ಇದರ ಲಾಭ ಇಂದು ರಾಜ್ಯಕ್ಕಾಯಿತು. ರಾಜ್ಯದವರಾದ ಸಿ.ಕೆ. ಜಾಫರ್ ಷರೀಫ್ ಹಾಗೂ ಜಾರ್ಜ್ ಫರ್ನಾಂಡೀಸ್ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ರೇಲ್ವೆ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಬರುವ ರೇಲ್ವೆ ಮುಂಗಡ ಪತ್ರವನ್ನು ಖರ್ಗೆಯವರು ಮಂಡಿಸಲಿ, ಅದರಲ್ಲಿ ರಾಜ್ಯಕ್ಕೆ ಸಿಂಹಪಾಲು ಸಿಗಲಿ ಎಂಬುದು ನಮ್ಮ ನಿರೀಕ್ಷೆ.
ಹೈ-ಕ ಭಾಗಕ್ಕೆ ಸರ್ಕಾರದಿಂದ ಏನೇ ಅನುದಾನ ಬಂದರೂ ಅದೆಲ್ಲವನ್ನು ಗುಲ್ಬರ್ಗ ಜಿಲ್ಲೆಗೆ ಬಳಕೆ ಮಾಡುತ್ತಾರೆಂಬ ಆರೋಪ ಖರ್ಗೆ ಅವರ ಮೇಲಿದೆ. ಇಂತಹ ಆರೋಪಗಳು ರಾಜ್ಯದ ಬಹುತೇಕ ರಾಜಕಾರಣಿಗಳ ಮೇಲಿವೆ. ಇದು ಸಹಜವೂ ಕೂಡ. ತಮಗೆ ಅಧಿಕಾರ ಸಿಕ್ಕಾಗಲೆಲ್ಲ ಅಲ್ಲಲ್ಲೇ ಅಭಿವೃದ್ಧಿ ಮಾಡಿಕೊಂಡಿರುವುದು ವೇದ್ಯವಾಗಿದೆ. ಇದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿರುವುದು ಗೊತ್ತೇ ಇದೆ. ಇಲ್ಲಿ ಆಗಿರುವುದು ಅದೇ. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಇಂದಿನವರೆಗೂ ಗುಲ್ಬರ್ಗ ಶಕ್ತಿ ಕೇಂದ್ರವಾಗಿದೆ. ಹೈ.ಕ. ಪ್ರದೇಶಕ್ಕೆ ಬರುವ ಎಲ್ಲ ಅನುದಾನ ಮತ್ತು ಸೌಲಭ್ಯವನ್ನು ಗುಲ್ಬರ್ಗದಲ್ಲಿ ಬಳಸಲಾಗುತ್ತದೆ. ಇತರೆ ಜಿಲ್ಲೆಗಳಿಗೆ ಈ ಸೌಲಭ್ಯಗಳು ತಲುಪುವುದಿಲ್ಲವೆಂಬ ಗಂಭೀರ ಆರೋಪವಿದೆ. ಇದು ಸತ್ಯವೂ ಕೂಡ. ಈ ಹಿಂದೆ ಹೈ.ಕ. ಅಭಿವೃದ್ಧಿಗೆ ಪ್ರಾಧಿಕಾರಗಳು ಮತ್ತು ಆಯೋಗಗಳು ರಚನೆಯಾದವು. ಅವುಗಳು ಮಾಡಿದ್ದಾದರೂ ಏನು? ರಾಜ್ಯ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಹೈ.ಕ. ಅಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಹಾಗೂ ಪ್ರೊ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ರಚನೆ ಮಾಡಿ ಕೋಟ್ಯಂತರ ಹಣ ಬಿಡುಗಡೆಗೊಳಿಸಿದರೂ ಈ ಭಾಗದಲ್ಲಿ ಕನಿಷ್ಟ ಮೂಲ ಸೌಕರ್ಯ ಅನುಷ್ಠಾನಗೊಳಿಸಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ) ತೀರಾ ಕೆಳಮಟ್ಟದಲ್ಲಿದೆ. ಅನುದಾನ ಹಂಚಿಕೆ ತಾರತಮ್ಯದಿಂದಾಗಿ ಅಂತರ್ ತಾಲೂಕು, ಅಂತರ್ ಜಿಲ್ಲಾ ಅಸಮತೋಲನ ಎದ್ದು ಕಾಣುತ್ತದೆ.
ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳು ಇತರೆ ಮೂರು ಜಿಲ್ಲೆಗಳಿಗೆ ಹೋಲಿಸಿದರೆ ಹಿಂದುಳಿದ ಜಿಲ್ಲೆಗಳಾಗಿವೆ. ಇಂದಿಗೂ ರಾಯಚೂರು ಜಿಲ್ಲೆಯಲ್ಲಿ ಶಿಶು ಮರಣ ದರ ಹೆಚ್ಚಿದೆ. ಜಿಲ್ಲೆಯಲ್ಲಿ ಫ್ಲೋರೈಡ್‌ಯುಕ್ತ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಇಂದಿಗೂ ದೇವದುರ್ಗ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರ್ಕಾರ ಕೋಟ್ಯಂತರ ರುಪಾಯಿ ನೀರಿನಂತೆ ಸುರಿದರೂ ಯೋಜನೆ ಪೂರ್ಣವಾಗಿಲ್ಲ. ಈ ಯೋಜನೆಗೆ ಬಿಡುಗಡೆಯಾದ ಹಣವನ್ನು ನುಂಗಿ ನೀರು ಕುಡಿದರೂ ಕೇಳುವವರಿಲ್ಲ. ಜಿಲ್ಲೆಯ ಒಂದೊಂದು ಭಾಗದಲ್ಲಿ ಒಂದೊಂದು ಸಮಸ್ಯೆಗಳಿವೆ. ಇದಕ್ಕೆ ಕೊಪ್ಪಳ ಜಿಲ್ಲೆ ಹೊರತಾಗಿಲ್ಲ. ಕೊಪ್ಪಳ ಹಳೇ ರಾಯಚೂರು ಜಿಲ್ಲೆಯ ಕೊನೆಯ ಭಾಗ. ಜಿಲ್ಲೆ ರಚನೆಯಾಗಿ ಒಂದೂವರೆ ದಶಕ ಕಳೆದರೂ ಮೂಲಸೌಕರ್ಯಗಳಿಲ್ಲ. ಜಿಲ್ಲೆಯ ಗುಡಿ ಕೈಗಾರಿಕೆಗಳು ವಿನಾಶದಂಚಿನಲ್ಲಿವೆ. ಎರಡು ಜಿಲ್ಲೆಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದೆ. ಶಾಲಾ ಕೊಠಡಿಗಳ ಕೊರತೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಅನುಪಾತ ಹೆಚ್ಚಿದೆ. ವೈದ್ಯಕೀಯ ಸೌಕರ್ಯಗಳ ಕೊರತೆಯೂ ತೀವ್ರವಾಗಿದೆ.
ಇನ್ನು ಬಳ್ಳಾರಿ ಜಿಲ್ಲೆ ಕಳೆದ ಒಂದು ದಶಕದಿಂದ ಗಣಿಧೂಳಿನಿಂದ ತತ್ತರಿಸಿ ಹೋಗಿದೆ. ಜಿಲ್ಲೆಯ ಸಾಮಾನ್ಯ ಜನರ ಪಾಡು ಹೇಳತೀರದಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ಆಣೆಕಟ್ಟಿನಲ್ಲಿ ಹೂಳು ತುಂಬಿ ತುಳುಕುತ್ತಿದೆ. ಕೆರೆ ಒತ್ತುವರಿ, ಜಿಲ್ಲೆಯಲ್ಲಿ ದೇವದಾಸಿ ಪುನರ್ವಸತಿ, ಏತನೀರಾವರಿ ಸಮಸ್ಯೆಗಳು, ಕುಡಿಯುವ ನೀರು, ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತು ಹದಗೆಟ್ಟಿರುವ ರಸ್ತೆಗಳು ಜಿಲ್ಲೆಯ ಜನತೆಯನ್ನು ಕಾಡುವ ಪ್ರಮುಖ ಸಮಸ್ಯೆಗಳಾಗಿವೆ. ಇದರ ನಡುವೆ ಜನರ ಸಮಸ್ಯೆ ಆಲಿಸುವ ಮತ್ತು ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನ ತರುವ ಜನಪ್ರತಿನಿಧಿಗಳು ಜೈಲು ಪಾಲಾಗಿರುವುದು ಜಿಲ್ಲೆಯ ದುರಂತ.
ಹಲವು ದಶಕಗಳಿಂದ ಹೈ.ಕ. ಪ್ರದೇಶ ಹತ್ತಾರು ಸಮಸ್ಯೆಗಳ ಆಗರವಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಈ ಪ್ರದೇಶದ ಅಭಿವೃದ್ಧಿಗಾಗಿ  ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಲಿದೆ. ಅನುದಾನ ಹಂಚಿಕೆ ಮತ್ತು ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಹೈ.ಕ. ಅಭಿವೃದ್ಧಿ ಸಮಿತಿ ತಾರತಮ್ಯ ಮಾಡದೆ ಬೀದರ್ ಜಿಲ್ಲೆಯ ಭಾಲ್ಕಿ, ಔರಾದ್ ತಾಲೂಕಿನಿಂದ ಹಿಡಿದು, ಹೈದರಾಬಾದ್ ಕರ್ನಾಟಕದ ಕೊನೆಯ ಭಾಗ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನವರೆಗೂ ಅನುದಾನ ಸಮರ್ಪಕವಾಗಿ ಹಂಚಿಕೆಯಾಗಬೇಕು. ಅಭಿವೃದ್ಧಿ ವಿಷಯದಲ್ಲಿ ತಾರತಮ್ಯವಾಗಬಾರದು. ಈ ಕಾರ್ಯದಲ್ಲಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ. ಈ ಭಾಗದ ಆರು ಸಂಸದರು, 39 ಶಾಸಕರು, ರಾಜ್ಯಸಭಾ ಮತ್ತು ವಿಧಾನಪರಿಷತ್ ಸದಸ್ಯರು ಪಕ್ಷಬೇಧ ಮರೆತು ಪ್ರಾದೇಶಿಕ ಪೂರ್ವಗ್ರಹಪೀಡಿತರಾಗದೆ ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಬೇಕಿದೆ. ಅಭಿವೃದ್ಧಿ ಇವರ ಮೂಲಮಂತ್ರವಾಗಬೇಕು. ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಾಗೂ ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಭ್ರಷ್ಟರಾಗದೆ, ಜಿಲ್ಲಾಧಿಕಾರಿಗಳಿಂದ ಹಿಡಿದು ಕೆಳಹಂತದ ಅಧಿಕಾರಿಗಳವರೆಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಎಚ್ಚರಿಸುವಲ್ಲಿ ಮಾಧ್ಯಮಗಳು ಹಾಗೂ ಸಂಘ ಸಂಸ್ಥೆಗಳು ನಿರ್ಭಿಡೆಯಿಂದ ಕಾರ್ಯೋನ್ಮುಖವಾಗಬೇಕು. ಆಗ ಮಾತ್ರ ಹೈ.ಕ. ಹಿಂದುಳಿದ ಹಣೆಪಟ್ಟಿಯಿಂದ ಹೊರಬಂದು ಅಭಿವೃದ್ಧಿ ಕಾಣಲು ಸಾಧ್ಯ.
ಅಭಿವೃದ್ಧಿ ವಿಷಯದಲ್ಲಾಗುವ ತಾರತಮ್ಯ ಪ್ರಾದೇಶಿಕ ಒಳಮೀಸಲಾತಿಯೆಂಬ ಹೊಸ ಸ್ವರೂಪದ ಹೋರಾಟಕ್ಕೆ ನಾಂದಿಯಾಗಬಾರದು. ಆಂಧ್ರದ ತೆಲಂಗಾಣದಂತೆ ಪ್ರತ್ಯೇಕ ರಾಜ್ಯದ ಕೂಗು ಇಲ್ಲೂ ಉದ್ಭವಿಸಬಾರದು. ಅಖಂಡ ಕರ್ನಾಟಕ ಭಾಗ ವಾಗದಿರಲೆಂಬುದೆ ಹೈ.ಕ. ಜನತೆಯ ಆಶಯ.

- ಡಾ.ಎಸ್.ಎಸ್. ಪಾಟೀಲ್
ಅರ್ಥಶಾಸ್ತ್ರ ಪ್ರಾಧ್ಯಾಪಕರು
ಜಿಬಿಆರ್ ಕಾಲೇಜು, ಹೂವಿನಹಡಗಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.