ಅಂಕಣಗಳು

ಹೆಣ್ಣಿಗಾಗಿ ವೈಷ್ಣವ ದೀಕ್ಷೆ ಬೇಡ

Published On :

ಕನಕದಾಸರೆಂದೂ ವೈಷ್ಣವ ದೀಕ್ಷೆಗೆ ಅಪೇಕ್ಷೆ ಪಟ್ಟವರಲ್ಲ. ಅವರದನ್ನು ಪಡೆಯಲೂ ಇಲ್ಲ. ಅವರು ಭಕ್ತಿ ಚಳವಳಿಯ ದಿಗ್ಗಜರಾಗಿ ನಿರ್ಜಾತಿ ನೆಲೆಯಲ್ಲಿ ಮಾನವೀಯತೆಯ ಸಂದೇಶ ಸಾರಿದವರು. ಕನಕದಾಸರು ಅವೈಷ್ಣವರಾದ ಕಾರಣದಿಂದಲೇ ಅವರನ್ನು ಅಂದು ಹೊರಗೆ ನಿಲ್ಲಿಸಲಾಯಿತು. ಈಗ ಕನಕದಾಸ ಅನುಯಾಯಿಗಳಿಗೆ ಹಾಗೂ ದಲಿತರಿಗೆ ವೈಷ್ಣವ ದೀಕ್ಷೆ ನೀಡುವುದಾಗಿ ಪೇಜಾವರ ಶ್ರೀಗಳು ಹೇಳಿಕೆ ಹೊರಡಿಸಿದ್ದಾರೆ. ಈ ಹೇಳಿಕೆಯನ್ನು ಒಂದೆಡೆ ವ್ಯಾಪಕವಾಗಿ ಖಂಡಿಸುತ್ತಾ ಜಿ.ಕೆ.ಗೋವಿಂದರಾವ್, ಬಂಜಗೇರಿ ಜಯಪ್ರಕಾಶ ಮುಂತಾದವರು "ಕುರುಬರು ಹಾಗೂ ದಲಿತರಿಗೆ ಬ್ರಾಹ್ಮಣರ ಹೆಣ್ಣು ಕೊಟ್ಟು ಮದುವೆ ಮಾಡುವುದಾದರೆ ಈ ಎರಡು ಸಮುದಾಯದವರು ವೈಷ್ಣವ ದೀಕ್ಷೆ ಸ್ವೀಕರಿಸಲು ಸಿದ್ಧ" ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಉಡುಪಿ ಶ್ರೀಗಳ ಹೇಳಿಕೆ ಹಾಗೂ ಇದಕ್ಕೆ ಬಂದ ಪ್ರತಿ ಹೇಳಿಕೆಗಳು ಕೇವಲ ಒಣ ಹರಟೆ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಧರ್ಮವನ್ನು (ಕುಲಾಚಾರವನ್ನು) ಅನ್ಯರ ಮೇಲೆ ಹೇರಲು ಮುಂದಾದದ್ದು ಪೇಜಾವರ ಶ್ರೀಗಳು ಮಾಡಿದ ತಪ್ಪಾದರೆ, ಬ್ರಾಹ್ಮಣರ ಹೆಣ್ಣುಗಳಿಗಾಗಿ ತಮ್ಮ ಸಂಸ್ಕೃತಿಯನ್ನು ತಿರಸ್ಕರಿಸಿ ವೈಷ್ಣವರಾಗುವ ಹೇಳಿಕೆಗಳು ಅರ್ಥಹೀನವಾದವುಗಳು. ಈ ಪರ-ವಿರೋಧದ ಸಾಂಸ್ಕೃತಿಕ ಸಂಘರ್ಷ ಇಂದು ನಿನ್ನೆಯದಲ್ಲ. ಇದಕ್ಕೆ ಸುಧೀರ್ಘವಾದ ಇತಿಹಾಸವಿದೆ. ಆದರೆ, ವರ್ತಮಾನದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ವಿವಾದಗಳನ್ನು ಸೃಷ್ಟಿಸುವುದೇ ಆಳುವ ವರ್ಗದ ಸಂಚಿನ ರಾಜಕಾರಣವಾಗಿದೆ. ವಾದ-ವಿವಾದ ಮಾಡಬೇಕಾದ ವಿದ್ಯಾಮಾನಗಳು ರಾಜ್ಯದಲ್ಲಿ ಅನಾಥವಾಗಿ ಬಿದ್ದಿರುವಾಗ, ಉದ್ದೇಶಪೂರ್ವಕವಾಗಿ ಪೇಜಾವರ ಶ್ರೀ ಮೂಲಕ ಎಬ್ಬಿಸಲಾದ ವಿವಾದದ ಬೆನ್ನತ್ತಿ ವಾರಗಟ್ಟಲೇ ಚರ್ಚೆಗಿಳಿಯುವುದು ಜನತೆಯ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ.
ಪೇಜಾವರ ಶ್ರೀ ಹೇಳಿಕೆ ಒಂದು ಸಾಂಸ್ಕೃತಿಕ ದಾಳಿಯಾಗಿದೆ. ಅದಕ್ಕೆ ಪ್ರತಿದಾಳಿ ಮಾಡಬೇಕಾದ ಅನಿವಾರ್ಯತೆ ಇದೆ. ವೈಷ್ಣವ ದೀಕ್ಷೆ ಎಂಬುದು ಅಸಮಾನತೆಯ ಆಗರ. ಯಾರು ಇದನ್ನು ಇಲ್ಲಿಯವರೆಗೆ ಉಗ್ರವಾಗಿ ವಿರೋಧಿಸಿದರೋ ಅವರೇ ಸ್ವೀಕರಿಸುವಂತಾಗುವುದು ದುರಂತವೇ ಸರಿ, ಅಂತರ್ಜಾತಿ ವಿವಾಹದ ನಿಜಾರ್ಥ ನಿರ್ಜಾತಿ ವಿವಾಹವಾಗಿದೆ. ಹೆಣ್ಣಿನ ಕುಲಾಚಾರವನ್ನು ಒಪ್ಪಿಕೊಂಡ ಗಂಡು ಹೆಣ್ಣಿಗಾಗಿ ಮತಾಂತರವಾಗುತ್ತಾನೆ. ಗಂಡಿನ ಕುಲಾಚಾರ ಒಪ್ಪಿಕೊಳ್ಳದ ಹೆಣ್ಣು ಗಂಡನ್ನು ಸಾಂಪ್ರದಾಯಿಕವಾಗಿ ಮದುವೆಯಾಗಲು ಸಾಧ್ಯವಿಲ್ಲ. ಮೇಲ್ಜಾತಿತನ ಹಾಗೂ ಕೆಳಜಾತಿತನ ಎಂಬುದು ಒಂದೇ ಜಾತಿ ವ್ಯವಸ್ಥೆಯ ಎರಡು ಭಾಗಗಳೇ! ಮೇಲ್ಜಾತಿತನವನ್ನು ನಾಶ ಮಾಡಿ ಕೆಳ ಜಾತಿತನವನ್ನು ಸಂರಕ್ಷಿಸಿಕೊಂಡರೆ, ಇಂದಿನ ಕೆಳ ಜಾತಿಯೇ ಮುಂದಿನ ಮೇಲ್ಜಾತಿಯಾಗಲಿದೆ ಎಂಬ ಅಪಾಯವನ್ನು ಅರಿಯಬೇಕಾಗಿದೆ. ಕರ್ನಾಟಕದ ಶೂದ್ರ ಸಮುದಾಯಗಳಾದ ಒಕ್ಕಲಿಗ ಹಾಗೂ ಲಿಂಗಾಯತರಲ್ಲಾದದ್ದು ಇದುವೇ ಎಂಬುದನ್ನು ಮರೆಯಬಾರದು. ವಿವಾದ ಎಂಬುದು ನಕರಾತ್ಮಕವಾದದ್ದು. ಸೂತ್ರ ತಪ್ಪಿ ಚರ್ಚೆ ನಡೆಸಿದರೆ ಪ್ರತಿಫಲ ಅತ್ಯಂತ ಕೆಟ್ಟದ್ದಾಗಿರುತ್ತದೆ. ದುಡಿಮೆ ಅಥವಾ ಉತ್ಪತ್ತಿಯಲ್ಲಿ ಭಾಗಿಯಾಗದವರಿಗೆ ಬದುಕುವ ಹಕ್ಕಿಲ್ಲ ಎಂಬುದರ ಮೇಲೆ ಚರ್ಚೆ ನಡೆಸಿದವರೆ ಬ್ರಾಹ್ಮಣ, ಶೈವ, ಹಿಂದುಳಿದ ಹಾಗೂ ದಲಿತ ಮಠಾಧೀಶರೆಲ್ಲ ಒಂದೇ ಪಂಕ್ತಿಯಾಗಿ ಮಾರ್ಪಡುತ್ತಾರೆ. ಶ್ರಮಧರ್ಮ ಸಂಸ್ಕೃತಿ ಪ್ರಿಯರೆಲ್ಲ ಮತ್ತೊಂದು ಪಂಕ್ತಿಯಾಗುತ್ತಾರೆ.

- ಆರ್. ಮಾನಸಯ್ಯ
 ರಾಯಚೂರು
benkibelaku@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.