ಕನ್ನಡದ ಅನ್ನದಲ್ಲಿ ಅನ್ಯಭಾಷೆಯ ಕಲ್ಲು!
ಕರ್ನಾಟಕ ರಾಜ್ಯವು ವಿಚಿತ್ರವಾದ ಭಾಷಾ ಸಮಸ್ಯೆಯನ್ನು ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಶುದ್ಧ ಕನ್ನಡ ಮಾಯವಾಗುತ್ತಿದೆ. ಕೇವಲ ಎರಡು ದಶಕಗಳ ಹಿಂದೆ ಪ್ರಯೋಗದಲ್ಲಿದ್ದ ಕನ್ನಡ ಪದಗಳು ಬಳಕೆಯಿಂದ ಮಾಯವಾಗುತ್ತಿವೆ. ಇತ್ತೀಚೆಗೆ ಅನ್ಯ ಭಾಷೆಯ ಹೊಸ ಶಬ್ದಗಳು ನಸುಳಿಕೊಂಡಿವೆ. ಉದಾಹರಣೆಗೆ "ಬರಿ ಓಳು" ಶಬ್ದ ಹಿಂದೆ ಇರಲೇ ಇಲ್ಲ. ಈಗ ಸುಳ್ಳ ಶಬ್ದಕ್ಕೆ ಪರ್ಯಾಯವಾಗಿ ಬಳಸಲ್ಪಡುತ್ತಿದೆ.
ಮುಖ್ಯವಾಗಿ ಚಲನಚಿತ್ರಗಳಲ್ಲಿ ಬಳಸುವ ಸಂಭಾಷಣೆಗಳು ಬಹು ಜನರ ಮೇಲೆ ಪರಿಣಾಮ ಬೀರುತ್ತಿವೆ. ಸಂಬಂಧಪಟ್ಟವರು ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಇಷ್ಟೇ ಅಲ್ಲದೆ, ಇತ್ತೀಚೆಗೆ ಪತ್ರಿಕೆಗಳಲ್ಲೂ ಸಹ ಶೀರ್ಷಿಕೆಗಳನ್ನು ಶುದ್ಧ ಕನ್ನಡದಲ್ಲಿ ಇಡಲಾಗುತ್ತಿಲ್ಲ. ಪ್ರಾಸಕ್ಕೋಸ್ಕರವೋ, ಆಕರ್ಷಿಸಲೋಸುಗವೋ ಆಂಗ್ಲ ಭಾಷೆಯ ಶಬ್ದಗಳು ಮಾಮೂಲಾಗುತ್ತಿವೆ. ಭಾಷಾ ಶುದ್ಧತೆಗೆ ಬದ್ಧವಾಗಿರಬೇಕಾದ ಪತ್ರಿಕೆಗಳೇ ಈ ರೀತಿ ವರ್ತಿಸಿದರೆ ಭಾಷೆಯನ್ನು ಕಾಪಾಡುವವರು ಯಾರು ಎಂಬ ಚಿಂತೆ ಆವರಿಸಿದೆ. ಭಾಷಾ ಪ್ರೇಮವಿರುವ ಯಾರಾದರೂ ಒಂದು ಪ್ರಬಂಧವನ್ನೋ, ವಿಚಾರ ಮಂಥನವನ್ನೋ, ಅಷ್ಟೇಕೆ ಸಂಪಾದಕೀಯವನ್ನೋ ಓದುವಾಗ ಅನ್ಯ ಭಾಷೆಯ ಶಬ್ದಗಳು ಅನ್ನದಲ್ಲಿ ಕಲ್ಲು ಸಿಕ್ಕಂತೆ ಭಾಸವಾಗುತ್ತವೆ. ಬಹುತೇಕ ಪತ್ರಿಕೆಗಳಲ್ಲಿ "ಸಿಎಂ ಗರಂ" ಎಂಬ ಶೀರ್ಷಿಕೆ ಬರುತ್ತದೆ.ಆದರೆ ಸಿಎಂ ಎನ್ನುವ ಬದಲು ಮು.ಮಂ(ಮುಖ್ಯಮಂತ್ರಿ) ಎಂದು ಅಷ್ಟೇ ಪರಿಣಾಮಕಾರಿಯಾಗಿ ಬಳಸಬಹುದಲ್ಲವೇ? ತೀರಾ ಅನಿವಾರ್ಯವಾಗದ ಹೊರತು ಅನ್ಯ ಭಾಷೆಯ ಬಳಕೆಯೇಕೆ?
ಯಾವುದೇ ಪದವಾದರೂ, ಅದು ಎಷ್ಟೇ ಕಷ್ಟವಾಗಿದ್ದರೂ ಬಳಸುತ್ತಾ ಬಂದರೆ ಕಾಲಕ್ರಮೇಣ ಅದು ನಮಗೆ ಆಪ್ತವಾಗುತ್ತಾ ಸಾಗುತ್ತದೆ. ಸುಲಭ ಎಂಬುದು ಈಸಿ ಆಗಿದೆ, ಶಾಲೆಗಳು ಸ್ಕೂಲ್ಗಳಾಗಿವೆ, ಊಟದ ಡಬ್ಬಿ(ಬುತ್ತಿ ) ಲಂಚ್ ಬಾಕ್ಸ್ ಆಗಿದೆ! ಬೆಂಗಳೂರಿನಲ್ಲಿ ಸೇಬು ಎಂದೋ ಆ್ಯಪಲ್ ಆಗಿದೆ. ಗೆಜ್ಜರಿ, ಹುರುಳಿ ಕಾಯಿ ಎಂದು ನಾವೆಲ್ಲ 15-20 ವರ್ಷಗಳ ಹಿಂದೆ ಸರಾಗವಾಗಿ ಬಳಸುತ್ತಿದ್ದ ಪದಗಳೆಲ್ಲ ಈಗೆಲ್ಲಿ?
ಇಷ್ಟಕ್ಕೆಲ್ಲ ಕಾರಣಗಳು ಕಣ್ಣ ಮುಂದೆ ಇವೆ. ಹಾಗಾಗಿ ಪ್ರತಿಯೊಬ್ಬರೂ ಕಟಿಬದ್ಧರಾಗಿ ಆಂದೋಲನದ ರೀತಿ ಕನ್ನಡ ಭಾಷೆಯ ಉಳಿವಿಗಾಗಿ ಪರಿಶ್ರಮ ಪಡಬೇಕು.
ಮಾಧ್ಯಮಗಳು ಮಾಡಬೇಕಾದದ್ದೇನು?: ಅತ್ಯಂತ ಪ್ರಭಾವಶಾಲಿ ಮಾಧ್ಯಮವಾದ ದೂರದರ್ಶನ ಗುರುತರ ಜವಾಬ್ದಾರಿ ಹೊರಬೇಕಾಗಿದೆ. ಶುದ್ಧ ಕನ್ನಡದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುವುದು, ಶುದ್ಧ ಕನ್ನಡದ ಧಾರಾವಾಹಿಗಳನ್ನು ಪ್ರಸಾರ ಮಾಡುವುದು, ನಿರೂಪಣೆಯಲ್ಲಿ ಅನ್ಯ ಭಾಷೆಯ ಪದಗಳು ನುಸುಳದಂತೆ ಎಚ್ಚರವಹಿಸುವುದು, ಮರೆಯಾಗುತ್ತಿರುವ ಶಬ್ದಗಳಿಗೆ ಮರುಜೀವ ಕೊಡುವ ಕಾರ್ಯಕ್ರಮಗಳನ್ನು ರೂಪಿಸುವುದು. ವಿಷಯ ತಜ್ಞರಿಂದ ಕಾರ್ಯಕ್ರಮಗಳನ್ನು ಕೊಡಿಸುವುದು. ಮೊನ್ನೆ ಚಂದನ ವಾಹಿನಿಯಲ್ಲಿ 'ಥಟ್ಟಂತ ಹೇಳಿ' ಕಾರ್ಯಕ್ರಮದಲ್ಲಿ ಸಮುದ್ರಕ್ಕೆ ಶುದ್ಧ ಕನ್ನಡ ಶಬ್ದ 'ಮುನ್ನೀರು' ಎಂದು ತಿಳಿಸಿರುತ್ತಾರೆ. ಈ ರೀತಿಯ ಪದಗಳನ್ನು ಜನಪ್ರಿಯಗೊಳಿಸುವುದು. ಹೇಗೆ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಿಂದ ಯುವ ಜನತೆ ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡಿತೋ, ಅದೇ ರೀತಿ ಕನ್ನಡಕ್ಕಾಗಿ ನಡೆಸುವ ಕಾರ್ಯಕ್ರಮಗಳೂ ಪ್ರಭಾವ ಬೀರಬಲ್ಲವು.
ಸರ್ಕಾರ ಮಾಡಬೇಕಾದದ್ದೇನು?: ಭಾಷೆ ಎಷ್ಟು ಸಮೃದ್ಧವಾದರೂ ಅನ್ನ ಕೊಡುವ ಭಾಷೆಯನ್ನು ಬಹು ಜನರು ಬಳಸುತ್ತಾರೆ. ಹಾಗಾಗಿ ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿ ರೂಪಿಸುವುದು. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವುದು. ಶಾಲೆಯಲ್ಲಿ ಭಾಷೆಯ ಸೊಗಸನ್ನು ಸವಿಯುವ ರೀತಿಯಲ್ಲಿ ಶಿಕ್ಷಣ ರೂಪಿಸುವುದು. ಅಲಂಕಾರ, ಛಂದಸ್ಸು, ಪದಗಳ ಹಿರಿಮೆ, ಪದಗಳ ಲಾಲಿತ್ಯ ಮುಂತಾದವುಗಳ ಬಗ್ಗೆ ಮಕ್ಕಳಿಗೆ ಜ್ಞಾನ ಕೊಡುವುದು. ಭಾಷೆಯ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವುದು.
ಸಾರ್ವಜನಿಕರು ಮಾಡಬೇಕಾದದ್ದೇನು?: ಮನೆಯಲ್ಲಿ ಕನ್ನಡದಲ್ಲೇ ಮಾತನಾಡುವುದು. ಒಳ್ಳೆಯ ಕನ್ನಡ ಪುಸ್ತಕಗಳನ್ನು ಮಕ್ಕಳಿಗೆ ತಂದು ಕೊಡುವುದು. ಕನ್ನಡ ಪತ್ರಿಕೆಯನ್ನು ತರಿಸುವುದು. ಚಂದಾಮಾಮ, ಬಾಲಮಿತ್ರ ಮುಂತಾದ ಪುಸ್ತಕಗಳನ್ನು ತಂದುಕೊಡುವುದು. ಆದಷ್ಟೂ ಶುದ್ಧಕನ್ನಡದಲ್ಲಿ ಮಾತನಾಡುವುದು. ಕನ್ನಡ ಮಾತನಾಡುವುದು ಹೆಮ್ಮೆ ಎಂದು ಮಕ್ಕಳಿಗೆ ತಿಳಿಸುವುದು.
ಸಂಘ ಸಂಸ್ಥೆಗಳು ಮಾಡಬೇಕಾದದ್ದೇನು?: ಆಂದೋಲನದ ರೂಪದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸಬೇಕು. ಗೋಕಾಕ್ ಚಳವಳಿಯು "ಭಾಷಾಭಿಮಾನವನ್ನು" ಜಾಗೃತಗೊಳಿಸಿದ ಹಾಗೆ. ಈಗ ಮತ್ತೊಮ್ಮೆ ಅಂಥ ಚಳವಳಿಯ ಅಗತ್ಯವಿದೆ ಎಂದನಿಸುತ್ತದೆ.
ಎಮ್.ಆರ್. ಜ್ಯೋತಿ, ದಾವಣಗೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

