ಅಂಕಣಗಳು

ಕರುನಾಡಿಗೆ ಕುರುಬರ ಕೊಡುಗೆ ಕಡೆಗಣಿಸಲಾದೀತೇ?

Published On :

ಏಪ್ರಿಲ್ 6ರಂದು ಕುರುಬರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಕುರುಬ ಜನಾಂಗದ ಕುರಿತು ಇದುವರೆಗೂ ಹಲವಾರು ಸಂಶೋಧನೆಗಳು ನಡೆದಿವೆ. ಈ ಜಗತ್ತಿನಲ್ಲಿ ಪರಮೇಶ್ವರನನ್ನು ಹೊರತಾಗಿ ಬೇರ್ಯಾವ ಅಂಶವೇ ಇಲ್ಲ ಎಂಬುದೇ ಕುರುಬ ಸಮಾಜದ ನಂಬಿಕೆ. ಕುರುಬ ಸಮುದಾಯ ಪರಮೇಶ್ವರನ ಆರಾಧಕರಾಗಿದ್ದು ಬೀರಲಿಂಗ, ಬೀರೇಶ್ವರ, ರೇವಣ ಸಿದ್ದೇಶ್ವರ, ಮೈಲಾರ ಲಿಂಗೇಶ್ವರ, ದೊಡ್ಡ ಬೀರೇಶ್ವರ ಎಂಬ ಹೆಸರಿನಲ್ಲಿ ಪೂಜಿಸುತ್ತಾರೆ.
ಹಾಲು ಎಂಬ ಮೂಲದಿಂದ ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ ಮುಂತಾದ ಉಪ ಉತ್ಪನ್ನಗಳು ಹುಟ್ಟಿಕೊಂಡಂತೆ ಹಾಲುಮತದಿಂದ ಅನೇಕ ಜಾತಿಗಳ ಉದಯವಾಯಿತು ಎನ್ನುವುದನ್ನು ನಾವು ಗಮನಿಸಬಹುದು. "ಕುರುಬ ಹುಟ್ಟುವ ಮುನ್ನ ಕುಲವಿಲ್ಲ, ಜಾತಿಯಿಲ್ಲ, ಕುರುಬನೇ ಆದಿ ಈ ಜಗಕೆ" ಎಂಬ ಅಲ್ಲಮ ಪ್ರಭುಗಳ ವಚನವು ಕುರುಬ(ಹಾಲುಮತ) ಜನಾಂಗದ ಪ್ರಾಚೀನತೆಯನ್ನು ಸೂಚಿಸುತ್ತದೆ.
ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಸಹ ಕುರು ವಂಶಗಳ ಹಾಗೂ ಯದು ವಂಶಗಳ ಮೂಲವಾಗಿದ್ದ 'ಕುರು' ಎಂಬ ಪದದ ಅರ್ಥ ಗುಡ್ಡ, ಮರಡಿ ಅಥವಾ ಎತ್ತರದ ಪ್ರದೇಶವೆಂದು. ಈ ಪದಕ್ಕೆ 'ಬ' ಎಂಬ ಪದ ಸೇರುವುದರಿಂದ ಕುರುಬ ಎಂಬ ಪದ ಸೃಷ್ಟಿಯಾಗಿದ್ದು. ಸಾಕು ಪ್ರಾಣಿಗಳೊಂದಿಗೆ ಗುಡ್ಡ ಬೆಟ್ಟದಲ್ಲಿ ವಾಸಮಾಡುವವರು ಕುರುಬರು ಎಂದು ಕರೆಸಿಕೊಂಡರು.  ಮೂಲ ಪುರುಷರನ್ನು ಇಂದಿಗೂ ಸಹ ಅರಣ್ಯಭಾಗದಲ್ಲಿ ಗಮನಿಸಬಹುದಾಗಿದ್ದು, ಇವರನ್ನು ಕಾಡು ಕುರುಬ, ಜೇನು ಕುರುಬ, ಸೋಲಿಗ, ನಾಯಕ ಎಂದು ಕರೆಯಲಾಗುತ್ತದೆ. ಕಸುಬನ್ನು ಆಧರಿಸಿ ನಂತರದ ದಿನಗಳಲ್ಲಿ ಅನೇಕ ವಿಗಂಡಣೆಗಳಾದವಾದರೂ ಮೂಲವನ್ನು ಹುಡುಕುತ್ತಾ ಹೋದಾಗ ಅತಿ ಪುರಾತನವಾದ ಜಾತಿ ಕುರುಬ ಸಮುದಾಯದ್ದೇ ಎಂದು ಹೇಳಬಹುದಾಗಿದೆ. ಕುರುಬರು ಕುರಿಯ ಹಾಗೆ ಮುಗ್ಧ ಸ್ವಭಾವದವರು, ನಿಷ್ಕಪಟಿಗಳು, ಶ್ರಮಜೀವಿಗಳು. ಕೃಷಿಯ ಜೊತೆಗೆ ಕುರಿ ಸಾಕಾಣಿಕೆಯನ್ನು ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡವರು. 'ಕುಂತರೆ ಕುರುಬ ನಿಂತರೆ ಕಿರುಬ' ಎಂಬ ಗಾದೆಯ ಹಾಗೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಹೋರಾಡುವ ಮನಸ್ಥಿತಿಯುಳ್ಳವರು.
ಭಾರತದ ಇತಿಹಾಸದಲ್ಲೇ ಪ್ರಥಮ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ ಚಂದ್ರಗುಪ್ತನು ಸಹ ಕುರಿ ಕಾಯುವ ವಂಶದವನಾಗಿದ್ದನು. ಚಂದ್ರಗುಪ್ತನು ಆಗಿನ ನಂದದೊರೆಗಳ ವಿರುದ್ಧ ಸಿಡಿದೆದ್ದು ತನ್ನದೇ ಸಾಮ್ರಾಜ್ಯವನ್ನು ಕಟ್ಟಿದನು. ಇದರ ನೆನಪಿಗಾಗಿ ಭಾರತ ಸರ್ಕಾರ ನವದೆಹಲಿಯ ಪಾರ್ಲಿಮೆಂಟ್ ಕಟ್ಟಡದ 5ನೇ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ 'ಕುರಿ ಕಾಯುವ ಹುಡುಗ ತಾನು ಕಟ್ಟುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತ್ತಿರುವುದು' ಎಂದು ಬರೆದಿದೆ. ಕರ್ನಾಟಕದಲ್ಲಿ ಕುರುಬರದ್ದು ಮೂರನೇ ಅತಿದೊಡ್ಡ ಸಮುದಾಯವಾಗಿದೆ. ಭಾರತದ ಮುಖ್ಯ ಸಾಮ್ರಾಜ್ಯಗಳನ್ನು ಕಟ್ಟಿದವರೂ ಕುರುಬ ಗೌಡರುಗಳಾಗಿದ್ದು ಇವುಗಳಲ್ಲಿ ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳು ಪ್ರಮುಖವಾಗಿದ್ದು, ಹಿಂದು ಸಂಸ್ಕೃತಿ ಉಳಿಯಲು ಕುರುಬ ಗೌಡರಾದ ಹಕ್ಕ-ಬುಕ್ಕರ ಪ್ರಮುಖ ಪಾತ್ರವಿದೆ ಎನ್ನುವುದನ್ನು ಮರೆಯುವಂತಿಲ್ಲ.
ಕರ್ನಾಟಕದಲ್ಲಿ ಕುರುಬರನ್ನು ಕಾಡು ಕುರುಬ, ಜೇನು ಕುರುಬ, ರಾಜ ಗೊಂಡ, ಗೊಂಡ, ಹಾಲುಮತ ಹೆಗ್ಗಡೆ ಎಂದು ಕರೆದರೆ ಕೇರಳ ಮತ್ತು ತಮಿಳುನಾಡಿನಲ್ಲಿ ಕುರುಮನ್, ಕುರುಂಬ ಮತ್ತು ಮಲ್ಲು ಕುರುಮನ್ ಎಂದೂ, ಮಹಾರಾಷ್ಟ್ರದಲ್ಲಿ ಧನಗರ್, ಉತ್ತರ ಪ್ರದೇಶದಲ್ಲಿ ಗದ್ದಾರಿಗಳೆಂದು ಕರೆಯುತ್ತಾರೆ. ಆದರೆ ಈ ಎಲ್ಲರೂ ಸಹ ಹಾಲುಮತ ಕುರುಬರೆಂದು ಹಾಲುಮತದ ಚರಿತ್ರೆ ಹೇಳುತ್ತದೆ.
ಜಾನಪದ ಕಲೆಗಳಲ್ಲಿಯೂ ಸಹ ಇವರ ಕೊಡುಗೆ ಅಪಾರವಾಗಿದ್ದು ನಂದಿ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಗೊರವನ ಕುಣಿತ, ಬೀರದೇವರ ಕುಣಿತ, ಇವರ ಸಾಂಪ್ರದಾಯಿಕ ಕಲೆಗಳಾಗಿವೆ.
ಪ್ರಾಚೀನ ಭಾಷೆ ಸಂಸ್ಕೃತದಿಂದ ಪ್ರಾರಂಭವಾದ ಸಾರಸ್ವತ ಲೋಕಕ್ಕೆ ಈ ವರ್ಗದ ಮಹನೀಯರು ನೀಡಿದ ಕೊಡುಗೆ ಅಪಾರವಾಗಿದ್ದು, ಮಹಾಕವಿ ಕಾಳಿದಾಸನು ರಘುವಂಶಮ್, ಕುಮಾರಸಂಭವಮ್ ಎಂಬ ಮಹಾಕಾವ್ಯಗಳನ್ನು ಮೇಘದೂತ ಋತುಸಂಹಾರಮ್ ಎಂಬ ಖಂಡ ಕಾವ್ಯಗಳು ಅಭಿಜ್ಞಾನ ಶಾಕುಂತಲ, ಮಾಳವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನು ರಚಿಸಿದರೆ, ಸಂತ- ಕವಿ ಕನಕದಾಸರು ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನರ ಸಿಂಹಸ್ತವ ಕೃತಿಗಳನ್ನು ರಚಿಸಿ ಕುರುಬ ಜನಾಂಗದ ಪ್ರಮುಖ ಕುರುಹುಗಳಾಗಿದ್ದಾರೆ.


- ಎಂ.ಡಿ.ಉಮೇಶ್ ಮಳವಳ್ಳಿ
umesha.m.d@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.