'ನನ್ನ ಹೆಸರು ಕಾರ್ಮನ್ ಟಾರ್ಲೆಟನ್. ಆಸ್ಪತ್ರೆಯೊಂದರಲ್ಲಿ ಹೆಡ್ ನರ್ಸ್ ಆಗಿದ್ದ ನಾನು ವಾಸವಿದ್ದುದು, ಅಮೆರಿಕದ ಪ್ರಮುಖ ನಗರಗಳಲ್ಲಿ ಒಂದಾದ ಬೋಸ್ಟನ್ಗೆ ಸಮೀಪದ ಒಂದು ಪಟ್ಟಣದಲ್ಲಿ. ಅಕ್ಕ, ತಮ್ಮ ಮತ್ತು ಅಮ್ಮ, ನನ್ನ ಕುಟುಂಬದ ಇತರೆ ಸದಸ್ಯರಾಗಿದ್ದರು. ಮೆಡಿಕಲ್ ರೆಪ್ರಸೆಂಟೇಟಿವ್ ಕಮ್ ಸೇಲ್ಸ್ಮನ್ ಆಗಿದ್ದ ಹೆರ್ಬಟ್ ರೋಜರ್ಸ್, ನನಗೆ ಪರಿಚಯವಾದದ್ದು 1998ರಲ್ಲಿ. ಈ ಪರಿಚಯ ಬಹುಬೇಗನೆ ಪ್ರೇಮಕ್ಕೆ ತಿರುಗಿ, ಮದುವೆಯಲ್ಲಿ ಕೊನೆಗೊಂಡಿತು. ನಮ್ಮ ದಾಂಪತ್ಯಕ್ಕೆ, ಲೀಸಾ ಮತ್ತು ಹೆನ್ನಾ ಎಂಬ ಇಬ್ಬರು ಮಕ್ಕಳಾದರು.
ಎಂಟು ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ನಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವೇ ಇರಲಿಲ್ಲ. ಕುಟುಂಬದವರೆಲ್ಲ ನನ್ನ ಗಂಡನನ್ನು -'ಸೌಮ್ಯ ಸ್ವಭಾವದ ಸೌಜನ್ಯವಂತ' ಎಂದೇ ಕರೆಯುತ್ತಿದ್ದರು. ಆದರೆ, ಇಸವಿ 2007ರಲ್ಲಿ ನಮ್ಮ ಮಧ್ಯೆ ಅಪನಂಬಿಕೆಯ ಗೋಡೆ ಎದ್ದು ನಿಂತಿತು. ಚಿಕ್ಕ ಪುಟ್ಟ ವಿಷಯಕ್ಕೂ ಜಗಳ ಶುರುವಾಗುತ್ತಿತ್ತು. ಒಂದಾಗಿ ಬಾಳಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಡೈವೋರ್ಸ್ ಪಡೆದಿದ್ದಾಯಿತು. ಮಕ್ಕಳಿಬ್ಬರೂ ನನ್ನೊಂದಿಗೇ ಉಳಿದರು.
ಅದು, 2007, ಜೂನ್ 10ರ ಮಧ್ಯರಾತ್ರಿ. ಇದ್ದಕ್ಕಿದ್ದಂತೆ ಮನೆಯ ಹೊರಗೆ ಭಾರೀ ಶಬ್ದವಾಯಿತು. 'ಅಯ್ಯೋ ದೇವರೇ, ಭೂಕಂಪವಾಯಿತೇನೋ ಎಂಬ ಗಾಬರಿಯಿಂದಲೇ ಎದ್ದು ಕೂತೆ. ಏನು ಅನಾಹುತವಾಗಿದೆಯೋ ನೋಡೋಣ ಎಂದುಕೊಂಡು ಬಾಗಿಲು ತೆರೆದೆ. ಅಷ್ಟೆ: ಕಡುಗಪ್ಪಿನ ಬಟ್ಟೆ ಧರಿಸಿದ್ದವನೊಬ್ಬ ಬಿರುಗಾಳಿಯಂತೆ ಒಳಗೆ ನುಗ್ಗಿದ. 'ಓಹ್, ಇವನು ಕಳ್ಳ. ದರೋಡೆ ಮಾಡಬೇಕೆಂಬ ಉದ್ದೇಶದಿಂದಲೇ ಬಂದಿದ್ದಾನೆ ಅನ್ನಿಸಿತು. ಆ ಬಲಿಷ್ಠನೊಂದಿಗೆ ಹೊಡೆದಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ಅರ್ಥವಾದಾಗ ಹೇಳಿಬಿಟ್ಟೆ: 'ನಿನಗೆ ಏನು ಬೇಕೋ ಅದನ್ನು ತಗೊಂಡು ಹೋಗು. ದಯವಿಟ್ಟು ನಮಗೆ ಏನೂ ತೊಂದರೆ ಮಾಡಬೇಡ...' ನನ್ನ ಮಾತುಗಳು ಮುಗಿಯುವ ಮೊದಲೇ ಆತ ನನ್ನತ್ತ ಬರತೊಡಗಿದ. ಆಗಲೇ ಗೊತ್ತಾಗಿ ಹೋಯ್ತು. ಅವನು ಕಳ್ಳನಲ್ಲ; ನನ್ನ ಮಾಜಿ ಗಂಡ ಹೆರ್ಬರ್ಟ್ ರೋಜರ್ಸ್! ತಕ್ಷಣವೇ ಚೀರಿಕೊಂಡೆ: ಹೆರ್ಬ್, ನಾನು ಕಣೋ, ನಿನ್ನ ಹೆಂಡ್ತಿ. ಇಷ್ಟು ಹೊತ್ತಿನಲ್ಲಿ, ಈ ವೇಷದಲ್ಲಿ ಯಾಕೆ ಬಂದೆ?'
ಉಹುಂ, ಆತ ಏನೂ ಮಾತಾಡಲಿಲ್ಲ. ನನ್ನನ್ನೇ ದುರುದುರು ನೋಡುತ್ತಾ ನುಗ್ಗಿ ಬಂದ. ಅವನ ಕೈಯಲ್ಲಿ ಬೇಸ್ ಬಾಲ್ ಆಟದ ಬ್ಯಾಟ್ ಇತ್ತು. ಮೊದಲೇ ನಿರ್ಧರಿಸಿದಂತೆ ಅದರಿಂದ ಒಂದೇ ಸಮನೆ ಹೊಡೆಯತೊಡಗಿದ. ನನ್ನ ಚೀರಾಟ ಕೇಳಿ ಮಕ್ಕಳೂ ಓಡಿ ಬಂದರು. ಈ ಧೂರ್ತ ಅವರಿಗೂ ಎರಡೇಟು ಹಾಕಿದ. ತಕ್ಷಣವೇ ಕೂಗಿ ಹೇಳಿದೆ. ನಿಮ್ಮ ರೂಂಗೆ ಹೋಗಿಬಿಡಿ. ಒಳಗಿನಿಂದ ಲಾಕ್ ಮಾಡಿಕೊಳ್ಳಿ. ಪೊಲೀಸ್ಗೆ ಫೋನ್ ಮಾಡಿ, ಸಹಾಯಕ್ಕಾಗಿ ಪ್ರಾರ್ಥಿಸಿ...' ಈ ಮಾತು ಮುಗಿವ ಮೊದಲೇ ಹೆರ್ಬರ್ಟ್ನ ಹೊಡೆತ ತಲೆಗೇ ಬಿತ್ತು. ಮರುಕ್ಷಣವೇ ಕಣ್ಣು ಕಾಣಿಸದಂತಾಗಿ, ಕುಸಿದು ಬಿದ್ದೆ. ಪ್ರಾಣಭಯದ ಕಾರಣಕ್ಕೇ ಇರಬೇಕು. ಕೆಲವೇ ನಿಮಿಷಗಳಲ್ಲಿ ಎಚ್ಚರವಾಯಿತು. ಕಣ್ತೆರೆದರೆ, ಎದುರಿಗೆ ದೊಡ್ಡ ಕ್ಯಾನ್ ಹಿಡಿದು ಹೆರ್ಬರ್ಟ್ ನಿಂತಿದ್ದ. ಆತ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾನೇನೋ ಅಂದುಕೊಂಡೆ. ಆಗಲೇ, ಆ ಕ್ಯಾನ್ನಲ್ಲಿದ್ದ ದ್ರವವನ್ನು ಆತ ನನ್ನ ಕೆನ್ನೆಯ ಮೇಲೆ ಸುರಿದದ್ದು!
ನಿಗಿನಿಗಿ ಕೆಂಡವೊಂದು ಚರ್ಮದ ಮೇಲೆ ಬಿದ್ದಾಗ, ಕುದಿಯುತ್ತಿರುವ ಎಣ್ಣೆ ಮುಖಕ್ಕೆ ಸಿಡಿದಾಗ ಆಗುತ್ತದಲ್ಲ; ಅಂಥ ಯಾತನೆಯಾಯಿತು. ಅಮ್ಮಾ ಎಂದು ನಾನು ಚೀರುವ ಮೊದಲೇ, ತೋಳಿನ ಮೇಲೆ, ತಲೆಯ ಮೇಲೆ, ಕುತ್ತಿಗೆಯ ಮೇಲೆ, ಕಿವಿ-ಕಣ್ಣುಗಳ ಮೇಲೆ, ಕೈ -ಕಾಲುಗಳ ಮೇಲೆ, ಹೊಟ್ಟೆ, ಬೆನ್ನು ಹಾಗೂ ತೊಡೆಯ ಭಾಗಕ್ಕೆ ಆ ದ್ರವ ಪದಾರ್ಥವನ್ನು ಹೆರ್ಬರ್ಟ್ ಸುರಿಯುತ್ತಲೇ ಹೋದ. ಆತ ಸುರಿಯುತ್ತಿರುವುದು ಆಸಿಡ್ ಎಂದು ಆ ವೇಳೆಗೆ ನನಗೆ ಅರ್ಥವಾಗಿ ಹೋಗಿತ್ತು. ಉರಿ ತಡೆಯಲಾಗದೆ, ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ಪ್ಲೀಸ್ ಹೆಲ್ಪ್, ಸೇವ್ ಮೀ ಪ್ಲೀಸ್ ಎಂದು ಚೀರುತ್ತಿದ್ದಾಗಲೇ ಹೊರಗಿನಿಂದ ಗಂಭೀರ ಧ್ವನಿಯೊಂದು ಕೇಳಿಸಿತು: ಮಿಸ್ಟರ್ ಹೆರ್ಬರ್ಟ್, ನಾನು ಪೊಲೀಸ್ ಆಫೀಸರ್ ಹೇಳ್ತಾ ಇದೀನಿ. ತಕ್ಷಣವೇ ನೀನು ಮನೆಯಿಂದ ಹೊರಗೆ ಬಂದ್ರೆ ಸರಿ. ಇಲ್ಲಾಂದ್ರೆ ಒಳಗೆ ನುಗ್ಗಿ ಶೂಟ್ ಮಾಡಬೇಕಾಗುತ್ತೆ. ಹುಷಾರ್...' ಅನಂತರವೂ ನಾನು ನರಳುತ್ತಲೇ ಇದ್ದೆ. ಮುಂದಿನ ಕೆಲವೇ ಕ್ಷಣದಲ್ಲಿ, ನನ್ನ ಮಕ್ಕಳು ಪೊಲೀಸರಿಗೆ ಹೇಳಿಕೆ ಕೊಡುತ್ತಿದ್ದುದೂ, ಆ್ಯಂಬುಲೆನ್ಸ್ ಬಂದು ನಿಂತದ್ದೂ ಅಸ್ಪಷ್ಟವಾಗಿ ಕೇಳಿಸಿತು. ಮುಂದೆ ಏನಾಯಿತೆಂದೇ ನನಗೆ ತಿಳಿಯಲಿಲ್ಲ...'
ಮಾಜಿ ಗಂಡನಿಂದಲೇ ಆಸಿಡ್ ದಾಳಿಗೆ ಒಳಗಾಗಿ, ಶೇ. 90ರಷ್ಟು ಸುಟ್ಟು ಹೋಗಿದ್ದರೂ, ಆನಂತರವೂ ಬದುಕಿ ಉಳಿದಿರುವ ಕಾರ್ಮನ್ ಟಾರ್ಲೆಟನ್ ಎಂಬಾಕೆ, ಆಕ್ರಮಣಕ್ಕೆ ಒಳಗಾದ ನಂತರ ತನ್ನ ಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿರುವುದು ಹೀಗೆ. ಆನಂತರದಲ್ಲಿ ಕಾರ್ಮನ್ಳನ್ನು ಉಳಿಸಿಕೊಳ್ಳಲು ಯಾವ್ಯಾವ ಚಿಕಿತ್ಸೆ ನೀಡಲಾಯಿತು ಎಂಬುದನ್ನು, ಕಾರ್ಮನ್ಳ ಅಕ್ಕ, ಕೆಸ್ಟಿನ್ ವಿವರಿಸುವುದು ಹೀಗೆ:
'ಕಾರ್ಮನ್ಳ ಮೇಲೆ ಆಸಿಡ್ ದಾಳಿ ನಡೆದಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ತಿಳಿದಾಕ್ಷಣ, ನಾವು ಕುಟುಂಬದವರೆಲ್ಲಾ ಆಸ್ಪತ್ರೆಗೆ ಧಾವಿಸಿದೆವು. ಡೈವೋರ್ಸ್ನ ನಂತರ, ಬೇರೊಬ್ಬನೊಂದಿಗೆ ಕಾರ್ಮನ್ ಸಂಬಂಧ ಹೊಂದಿದ್ದಾಳೆ ಎಂದು ಊಹಿಸಿ, ಅದೇ ಸಿಟ್ಟಿನಲ್ಲಿ ಅವಳ ಮೇಲೆ ಆಸಿಡ್ ಹಾಕಿದ್ದೆ ಎಂದು ಆ ವೇಳೆಗೆ ಹೆರ್ಬರ್ಟ್ ತಪ್ಪೊಪ್ಪಿಗೆ ನೀಡಿದ್ದ. ಐಸಿಯು ವಾರ್ಡ್ನಿಂದ ಹೊರಬಂದ ವೈದ್ಯರು, ತುಂಬ ಸಂಕಟದಿಂದ ಹೇಳಿದರು: 'ಉರಿಯುತ್ತಿರುವ ಕೊಳ್ಳಿಯ ಮೇಲೆ ನೀರು ಸುರಿದಾಗ ಕಾಣುತ್ತದಲ್ಲ? ಅದೇ ಆಕಾರದಲ್ಲಿದ್ದಾಳೆ ಕಾರ್ಮನ್. ಆಕೆಯ ಕಣ್ಣು, ಕಿವಿ, ತಲೆ, ಭುಜ, ಹೊಟ್ಟೆ, ತೊಡೆ... ಹೀಗೆ ಎಲ್ಲ ಭಾಗವೂ ಸುಟ್ಟು ಹೋಗಿದೆ. ಈವರೆಗಿನ ಸರ್ವೀಸ್ನಲ್ಲಿ ನಾನು ಕಂಡ ಅತ್ಯಂತ ಭಯಾನಕ ಕೇಸ್ ಇದು. ಈಕೆ ಬದುಕುತ್ತಾಳೆ ಅಂತ ಗ್ಯಾರಂಟಿ ಕೊಡಲು ಸಾಧ್ಯವೇ ಇಲ್ಲ...' ಅವರ ಮಾತು ಮುಗಿಯುತ್ತಿದ್ದಂತೆಯೇ ನನ್ನ ತಾಯಿ ಹೇಳಿಬಿಟ್ಟಳು: 'ಡಾಕ್ಟರೇ, ಕಾರ್ಮನ್ ಸಾಯುವುದು ಗ್ಯಾರಂಟಿ ಎಂಬರ್ಥದಲ್ಲಿ ಮಾತಾಡ್ತಾ ಇದೀರ. ಹಾಗಾದ್ರೆ ನನ್ನ ಮಗಳು ಟ್ರೀಟ್ ಮೆಂಟ್ ತಗೊಂಡೇ ಸಾಯಲಿ. ನಿಮ್ಮ ಪ್ರಯತ್ನ ನೀವು ಮಾಡಿ. ಅವಳ ಹಣೆಬರಹ ಹೇಗಿದೆಯೋ ಹಾಗೆ ಆಗಲಿ...'
ಡಾಕ್ಟರು, ನಮ್ಮ ತಾಯಿಯನ್ನು ಮರುಕದಿಂದ ನೋಡಿ ಹೇಳಿದರು: 'ಟ್ರೀಟ್ಮೆಂಟ್ ಶುರು ಮಾಡುವುದು, ಮಾತಾಡಿದಷ್ಟು ಸುಲಭವಲ್ಲ. ಆಸಿಡ್ ಬಿದ್ದಿರುವ ಕಾರಣದಿಂದ ನರಗಳೆಲ್ಲಾ ಸುಟ್ಟು ಹೋಗಿವೆ. ಕರುಳೂ ಸುಟ್ಟು ಹೋಗಿದೆ. ಕಿಡ್ನಿಗೂ ತೊಂದರೆಯಾಗಿದೆ. ರಕ್ತದ ಸಂಚಾರವೂ ಸರಿಯಾಗಿಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ, ಆಕೆಗೆ ಈಗ ಕಣ್ಣು ಕಾಣಿಸುವುದಿಲ್ಲ. ಕಿವಿ ಕೇಳುವುದಿಲ್ಲ. ಸ್ಪರ್ಶ ಜ್ಞಾನವೂ ಇಲ್ಲ. ಈ ಸಂದರ್ಭದಲ್ಲಿ, ದೇಹದಲ್ಲಿ ಉಳಿದಿರುವ ಚರ್ಮದ ಮೃದು ಭಾಗವನ್ನು ತೆಗೆದು ಬೇರೆ ಕಡೆಗೆ ಅಂಟಿಸಬೇಕು; ಈ ಚಿಕಿತ್ಸೆ ಆರಂಭಿಸಿದರೆ ಮೂರು ತಿಂಗಳು ಸುದೀರ್ಘ ಕಾಲ ಕಾರ್ಮನ್ಳನ್ನು ಕೋಮಾದಲ್ಲಿ ಇರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಒಂದರ ಹಿಂದೊಂದು ಆಪರೇಷನ್ ಆಗುತ್ತಿರುತ್ತದೆ. ಬಗೆ ಬಗೆಯ ಔಷಧಿ ನೀಡುವ ಕೆಲಸವೂ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಾರ್ಮನ್ಳಿಗೆ ಸಾವು ಬರಬಹುದು ಅಥವಾ ಔಷಧಿಗಳಿಂದ ಉಂಟಾಗುವ ಸೈಡ್ ಎಫೆಕ್ಟ್ನ ಕಾರಣದಿಂದಾಗಿ ಕ್ಯಾನ್ಸರ್ನಂಥ ಮಾರಕ ಕಾಯಿಲೆಯೂ ಬಂದು ಬಿಡಬಹುದು. ಯಾವ ರೀತಿಯಿಂದ ನೋಡಿದರೂ ನಮ್ಮದು ಸಾವಿನೊಂದಿಗಿನ ಸರಸದಾಟ. ಕೆಟ್ಟ ಸುದ್ದಿಯನ್ನು ಕೇಳುವುದಕ್ಕೆ ಮಾನಸಿಕವಾಗಿ ಸಿದ್ಧವಾಗಿರಿ...'
ನೋಡ ನೋಡುತ್ತಲೇ 3 ತಿಂಗಳು ಕಳೆದು ಹೋದವು. ಈ ಅವಧಿಯಲ್ಲಿ ಕೋಮಾದಲ್ಲಿದ್ದ ಸ್ಥಿತಿಯಲ್ಲೇ ಕಾರ್ಮನ್ಗೆ 39 ಆಪರೇಷನ್ಗಳು ಆಗಿ ಹೋದವು. ಈ ಸಂದರ್ಭದಲ್ಲಿ ಡಾಕ್ಟರ್ಗಳು ಯಾವ್ಯಾವ ರೀತಿಯ ಚಿಕಿತ್ಸೆ ನೀಡಿದರೋ; ಭಗವಂತ ಬಲ್ಲ. ಆದರೆ, ಡಾಕ್ಟರ್ಗಳ ಪ್ರಯತ್ನದಿಂದ, ಶೇ. 90ರಷ್ಟು ಭಾಗ ಸುಟ್ಟು ಹೋಗಿದ್ದರೂ ಕಾರ್ಮನ್ ಬದುಕಿಬಿಟ್ಟಳು. ಆರು ತಿಂಗಳ ತರುವಾಯ 'ಅವಳಿಗೆ ಸ್ವಲ್ಪ ಮಟ್ಟಿನ ಕಿವಿ ಕೇಳಿಸುತ್ತಿದೆ, ಆದರೆ ದೃಷ್ಟಿ ಮರಳುವ ಯಾವುದೇ ಸಾಧ್ಯತೆಯಿಲ್ಲ. ಸಮಾಧಾನವೆಂದರೆ, ಆಕೆಗೆ ಸ್ಪರ್ಶ ಜ್ಞಾನ ಮರಳುತ್ತ್ತಿದೆ ಎಂದು ಡಾಕ್ಟರು ಹೇಳಿದರು. 6 ತಿಂಗಳು ಕಳೆದ ನಂತರ ನಮ್ಮ ಕುಟುಂಬದವರನ್ನು ಸ್ಪರ್ಶದ ಮೂಲಕವೇ ಕಾರ್ಮನ್ ಗುರುತಿಸತೊಡಗಿದಳು. ಈ ವೇಳೆಗೆ ಮತ್ತೆ 10 ಆಪರೇಷನ್ಗಳಾದವು. ಅಂದರೆ, ಆಸಿಡ್ ದಾಳಿ ನಡೆದ ನಂತರದ ಒಂದೇ ವರ್ಷದಲ್ಲಿ ಒಟ್ಟು 49 ಆಪರೇಷನ್ಗಳಿಗೆ ಕಾರ್ಮನ್, ದೇಹ ಒಪ್ಪಿಸಿ, ಗೆದ್ದು ಬೀಗಿದ್ದಳು.
ಅವಳು ಕೋಮಾ ಸ್ಥಿತಿಗೆ ಜಾರಿದ್ದಾಗ ನಮಗೆ ಸಮಸ್ಯೆ ಎದುರಾಗಿರಲಿಲ್ಲ. ಚಿಕಿತ್ಸೆ ಮುಗಿದು ಅವಳನ್ನು ಮನೆಗೆ ಕರೆತಂದವಲ್ಲ? ಆ ಕ್ಷಣದಿಂದಲೇ ಒಂದೊಂದೇ ಸಮಸ್ಯೆಗಳು ಜೊತೆಯಾದವು. ಯಾವುದೇ ಕಾರಣಕ್ಕೂ ಕಾರ್ಮನ್ಳ ದೇಹಕ್ಕೆ ಗಾಯಗಳಾಗಬಾರದು. ಯಾವುದೇ ಸಂದರ್ಭದಲ್ಲೂ ಆಕೆಯ ಕಂಗಳಿಂದ ನೀರು ಬರಬಾರದು. ಹಾಗೇನಾದರೂ ಆಗಿಬಿಟ್ರೆ ಇನ್ಫೆಕ್ಷನ್ ಆಗಿ ತುಂಬಾ ತೊಂದರೆಯಾಗಬಹುದು. ಪ್ರಾಣಕ್ಕೇ ಸಂಚಕಾರ ಬರಬಹುದು ಎಂದು ಡಾಕ್ಟರು ಮೊದಲೇ ಎಚ್ಚರಿಸಿದ್ದರು. ಡಿಪ್ರೆಷನ್ ಕಾಡದಂತೆ ಮಾಡಬೇಕು ಎಂಬ ಉದ್ದೇಶದಿಂದ, ಅವಳಿಗೆ ಹಾಡು ಕೇಳಿಸಿದೆ. ಕಥೆ ಹೇಳಿದೆ. ಕಾದಂಬರಿ ಓದಿದೆ. ಕಡೆಗೊಮ್ಮೆ ಭಾರತದ ಗಡಿ ದಾಟಿ ಅಮೆರಿಕಕ್ಕೂ ಬಂದಿರುವ ಗೌತಮಬುದ್ಧನ ಸಂದೇಶವನ್ನು ವಿವರಿಸಿದೆ. ಕ್ಷಮೆಗಿಂತ ಮಿಗಿಲಾದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಬುದ್ಧ ಹೇಳಿದ್ದಾನೆ ಎನ್ನುತ್ತಿದ್ದಂತೆ -'ಅಕ್ಕಾ, ಒಂದ್ನಿಮಿಷ ತಾಳು' ಎಂದಳು ಕಾರ್ಮನ್. ಆಕೆ ಏನು ಹೇಳಬಹುದು ಎಂಬ ಕುತೂಹಲದಲ್ಲಿ ನಾನಿದ್ದಾಗಲೇ ಆಕೆ ಹೇಳಿಬಿಟ್ಟಳು: ಕ್ಷಮೆಗಿಂತ ಮಿಗಿಲಾದುದು ಬೇರೇನೂ ಇಲ್ಲ ಎಂದೆಯಲ್ಲವೆ? ಅದನ್ನು ನಾವೂ ಪಾಲಿಸೋಣ. ನನ್ನ ಮೇಲೆ ಆಸಿಡ್ ಎರಚಿದನಲ್ಲ; ಅವನನ್ನು ನಾವೂ ಕ್ಷಮಿಸಿ ಬಿಡೋಣ ಎಂದಳು! ಈ ವೇಳೆಗೆ ವಿಚಾರಣೆ ನಡೆದು ಅಮೆರಿಕದ ನ್ಯಾಯಾಲಯ ಹೆರ್ಬರ್ಟ್ಗೆ 70 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಈ ವಿಷಯ ತಿಳಿದ ನಂತರ-'ಶಿಕ್ಷೆಗೆ ಒಳಗಾಗಿರುವಾತ ನನ್ನ ಮಾಜಿ ಗಂಡ. ಆತನನ್ನು ನಾನು ಕ್ಷಮಿಸಿದ್ದೇನೆ. ಎಂಥ ಕ್ರೂರ ಶಿಕ್ಷೆ ವಿಧಿಸಿದರೂ ಈಗ ವಿರೂಪಗೊಂಡಿರುವ ನನ್ನ ದೇಹ ಸರಿಯಾಗಲಾರದು. ಆತನ ಶಿಕ್ಷೆಯನ್ನು ಕಡಿತ ಮಾಡಿ' ಎಂದು ಕಾರ್ಮನ್ ಮನವಿ ಮಾಡಿಕೊಂಡಳು. ಪರಿಣಾಮವಾಗಿ, ಹೆರ್ಬರ್ಟ್ನ ಶಿಕ್ಷೆಯ ಅವಧಿ 30 ವರ್ಷಕ್ಕೆ ಇಳಿಯಿತು.
ಈ ವೇಳೆಗೆ ಒಟ್ಟು 60 ಆಪರೇಷನ್ಗಳು ಆಗಿದ್ದವು ನಿಜ. ಆದರೆ, ಆಗಲೂ ಕಾರ್ಮನ್ಳ ದೇಹಕ್ಕೆ ಒಂದು 'ಶೇಪ್' ಎಂಬುದು ಇರಲಿಲ್ಲ. ಸಿನಿಮಾಗಳಲ್ಲಿ ಕಾಣಿಸುವ ಡ್ರಾಕುಲಾಗಳ ಥರವೇ ಆಕೆ ಕಾಣಿಸುತ್ತಿದ್ದಳು. 'ದೇಹದ ಹೆಚ್ಚಿನ ಭಾಗ ಸುಟ್ಟು ಹೋಗಿದೆ. ಈಗ ಉಳಿದಿರೋದು ಒಂದೇ ದಾರಿ. ಈಗಲೋ ಆಗಲೋ ಸಾಯುತ್ತೇನೆ ಎಂಬಂತಿರುವ ಮಹಿಳೆಯೊಬ್ಬರು ಆಕೆಯ ದೇಹದ ಚರ್ಮ ದಾನ ಮಾಡಿದರೆ, ಅದು ಕಾರ್ಮನ್ಳ ದೇಹಕ್ಕೆ ಹೊಂದಿಕೆಯಾದರೆ, ನಂತರ ಚರ್ಮದ ಕಸಿ ಮಾಡಿ ಆಕೆಯ ಮುಖಕ್ಕೆ ಮತ್ತು ಇಡೀ ದೇಹಕ್ಕೆ ಒಂದು ಆಕಾರ ಕೊಡಬಹುದು. ಆದರೆ ಇದು ಬಹಳ ರಿಸ್ಕೀ. ಈವರೆಗೂ ಇಡೀ ದೇಹಕ್ಕೆ ಚರ್ಮದ ಕಸಿ ಮಾಡಿಸಿಕೊಂಡಿರುವುದು ಇಡೀ ಜಗತ್ತಿನಲ್ಲಿಯೇ ಕೇವಲ 23 ಮಂದಿ...' ಎಂದೆಲ್ಲಾ ವೈದ್ಯರು ಹೇಳಿದ್ದರು. ನಮ್ಮ ಕುಟುಂಬದ ಪಾಲಿಗೆ ಕಾರ್ಮನ್ ಬದುಕಿದ್ದೇ ಹೆಚ್ಚು ಎಂಬಂಥ ವಿಷಯವಾಗಿತ್ತು. ಹೆಚ್ಚಿನ ನಿರೀಕ್ಷೆಯನ್ನು ನಾವ್ಯಾರೂ ಇಟ್ಟುಕೊಂಡಿರಲಿಲ್ಲ.
ಹೀಗಿರುವಾಗಲೇ, 2013ರ ಫೆಬ್ರವರಿಯಲ್ಲಿ ಏನಾಯಿತೆಂದರೆ, ಕಾರ್ಮನ್ಗೆ ಟ್ರೀಟ್ಮೆಂಟ್ ಆಯಿತಲ್ಲ. ಆದೇ ಆಸ್ಪತ್ರೆಯಲ್ಲಿ ಸಿರಲ್ ಡ್ಯಾನಿಲ್ಲೇ ರೈಟರ್ ಎಂಬಾಕೆ ಸಾವಿನ ಕ್ಷಣಗಳನ್ನು ಎಣಿಸುತ್ತಿದ್ದಳಂತೆ. ಅಂಗಾಂಗ ದಾನ ಮಾಡುವ ಆಸೆಯನ್ನು ಆಕೆ ವೈದ್ಯರ ಮುಂದಿಟ್ಟಾಗ, ದೇಹದ ಚರ್ಮವನ್ನು ನೀವೇಕೆ ದಾನ ಮಾಡಬಾರದು? ಶೇ.90 ರಷ್ಟು ಸುಟ್ಟ ಗಾಯದಿಂದ ನರಳುತ್ತಿರುವ ಒಬ್ಬರಿಗೆ ನಿಮ್ಮ ದೇಹದ ಚರ್ಮದ ಕಸಿ ಮಾಡಿ ಒಂದು ಜೀವ ಉಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಆಕೆ ತಕ್ಷಣವೇ ಒಪ್ಪಿದ್ದಾರೆ. ನಂತರದ ಅರ್ಧ ಗಂಟೆಯಲ್ಲೇ ಆಸ್ಪತ್ರೆಯಿಂದ ಫೋನ್ ಬಂತು. ಮೊದಲು ಕಾರ್ಮನ್ಳ ರಕ್ತದ ಹಾಗೂ ರಕ್ತದ ಗುಂಪು ಒಂದೇ ಆಗಿದೆಯೇ ಎಂದು ಪರೀಕ್ಷಿಸಿದ್ದಾಯಿತು. ನಂತರ, ಹೊಸ ಚರ್ಮದೊಂದಿಗೆ ಕಾರ್ಮನ್ಳ ದೇಹದ ರಕ್ತನಾಳ ಹಾಗೂ ನರವ್ಯೂಹಗಳು ಹೊಂದಿಕೊಳ್ಳುತ್ತವೆಯೇ ಎಂದೂ ಪರೀಕ್ಷಿಸಲಾಯಿತು. ಆನಂತರದಲ್ಲಿ ಮತ್ತೆ 6 ಆಪರೇಷನ್ ಮಾಡಿ, ಕಾರ್ಮನ್ಳ ದೇಹಕ್ಕೆ ಒಂದು ಆಕಾರ ಕೊಡಲಾಯಿತು. ಪರಿಣಾಮವಾಗಿ, ಸತ್ತೇ ಹೋಗುತ್ತಾಳೆ ಎಂದುಕೊಂಡಿದ್ದ ನನ್ನ ತಂಗಿ ನಮಗೆ ಮರಳಿ ಸಿಕ್ಕಿದಳು. ವೈದ್ಯಕೀಯ ಲೋಕದ ವಿಸ್ಮಯ ಎಂಬ ಖ್ಯಾತಿಗೂ ಪಾತ್ರಳಾದಳು...'
ನನನ
ಈಗ, ಅಮೆರಿಕದುದ್ದಕ್ಕೂ ಕಾರ್ಮನ್ಳ ಯಶೋಗಾಥೆಯದ್ದೇ ಸುದ್ದಿ. ಈಕೆಯ ಕಥೆಯನ್ನು ವಿಶ್ವದ ಎಲ್ಲ ಪತ್ರಿಕೆಗಳೂ ಮುಖಪುಟ ಸುದ್ದಿಯನ್ನಾಗಿ ಪ್ರಕಟಿಸಿವೆ. ಟಿ.ವಿ. ಚಾನೆಲ್ಗಳು ಸಂದರ್ಶನ ಪ್ರಸಾರ ಮಾಡಿವೆ. ದೇಶ ವಿದೇಶಗಳ ವಿಶ್ವವಿದ್ಯಾಲಯಗಳು ಈಕೆಯ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿವೆ. ಕಾರ್ಯನ್, ತನ್ನ ಬದುಕಿನ ಕಥೆಯನ್ನು ಕಢಜ್ಠ ್ಛ್ಟಟಜ: ಇ್ಡ್ಠಟಿಜಜ, ಇಟ್ಝಟಿಜಜಜ ಛಟಿಜ ಇಟಜಡಡಜಜ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾಳೆ. ಈ ಹಿಂದೆ, ನರ್ಸ್ ಆಗಿದ್ದ ಸಂದರ್ಭದಲ್ಲಿ -ದೇವರು ಕಾಪಾಡ್ತಾನೆ, ಹೆದರಬೇಡಿ ಎಂದು ಎಲ್ಲರಿಗೂ ಧೈರ್ಯ ಹೇಳುತ್ತಿದ್ದವಳು, ಈಗಲೂ ಅದೇ ಮಾತನ್ನು ರಿಪೀಟ್ ಮಾಡುತ್ತಿದ್ದಾಳೆ. ನಮಗೆ ಇರೋದು ಒಂದೇ ಜನ್ಮ. ಏನಾದರೂ ಸಾಧಿಸಿದ ನಂತರವೇ ಸಾಯೋಣ ಅನ್ನುತ್ತಿದ್ದಾಳೆ.
ಈ ಸಾಧಕಿಯ ಹೋರಾಟದ ಬದುಕಿನಿಂದ ನಾವೆಲ್ಲ ಕಲಿಯಬೇಕಾದದ್ದು ತುಂಬಾ ಇದೆ, ಅಲ್ಲವೇ?
-ಎ.ಆರ್. ಮಣಿಕಾಂತ್
armanikanth@gmail.com