ಮಹಾಸಮರದ ನೆನಪಿಗೆ ಶತಮಾನ, ನಮ್ಮಲ್ಲೂ ಉಕ್ಕಲಿ ಅಭಿಮಾನ

1914ಕ್ಕೆ ನೂರು ಕೂಡಿಸಿದರೆ 2014. ಈಗ ನಾವು ಜೀಕುತ್ತಿರುವ ಇಸ್ವಿ. ಅದು ಕೇವಲ ಅಂಕಿ...
ಮಹಾಸಮರದ ನೆನಪಿಗೆ ಶತಮಾನ, ನಮ್ಮಲ್ಲೂ ಉಕ್ಕಲಿ ಅಭಿಮಾನ
Updated on: 

1914ಕ್ಕೆ ನೂರು ಕೂಡಿಸಿದರೆ 2014. ಈಗ ನಾವು ಜೀಕುತ್ತಿರುವ ಇಸ್ವಿ. ಅದು ಕೇವಲ ಅಂಕಿಯಾಗಿ ಉಳಿಯದೇ ನಮ್ಮೆದೆಯಲ್ಲಿ ಅಭಿಮಾನವೊಂದನ್ನು ಸ್ಫುರಿಸುವುದಕ್ಕೆ ಕಾರಣವಾಗಬೇಕಿದೆ. ಆ ಬಗ್ಗೆ ಮಾತನಾಡುವ ಸಮಯವೀಗ ಸನಿಹವಾಗಿದೆ.
ನೂರು ವರ್ಷಗಳ ಹಿಂದೆ ಜಾಗತಿಕ ಭೂಪಟದ ಸಮೀಕರಣಗಳನ್ನೇ ಬದಲಿಸುವ ಮಹಾಯುದ್ಧವೊಂದು ನಡೆದುಹೋಯಿತು. ಇವತ್ತಿಗೆ ಅದನ್ನು ಮೊದಲನೇ ವಿಶ್ವಯುದ್ಧ ಎಂದು ಚರಿತ್ರೆ ಗುರುತಿಸುತ್ತದೆ. ಇನ್ನೇನು, ಆಗಸ್ಟ್ ತಿಂಗಳು ಬರುತ್ತಲೇ ಜಾಗತಿಕ ವೇದಿಕೆಗಳಲ್ಲಿ ಶತಮಾನ ಆಚರಣೆಗಳು ವಿಜೃಂಭಿಸಲಿವೆ. ಏಕೆಂದರೆ, ಜೂನ್ ವೇಳೆಗೆಲ್ಲ ಸಂಘರ್ಷದ ಕಿಡಿಗಳು ಹೊತ್ತಿಕೊಂಡಿದ್ದರೂ ಇಂಗ್ಲೆಂಡ್ ಎಂಬ ಅಂದಿನ ದೈತ್ಯಶಕ್ತಿ ರಣರಂಗಕ್ಕೆ ಇಳಿದಿದ್ದು 1914ರ ಆಗಸ್ಟ್ ವೇಳೆಗಾದ್ದರಿಂದ ಆ ಹಂತಕ್ಕೇ ಮೆರುಗು ಹೆಚ್ಚು. ಜರ್ಮನಿ, ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯಗಳು ಒಂದು ಕಡೆಗಾದರೆ, ನಾನಾ ವ್ಯಾಪಾರಿ ಒಪ್ಪಂದಗಳ ಹಿತಾಸಕ್ತಿ ಹೊಂದಿದ್ದ ಯುರೋಪಿನ ಇತರ ದೇಶಗಳು ಇನ್ನೊಂದು ಗುಂಪಿನಲ್ಲಿ ಧ್ರುವೀಕರಿಸಿ, ಕೊನೆಗೆ ವಿಶ್ವದ ಬಹುತೇಕ ರಾಷ್ಟ್ರಗಳನ್ನೆಲ್ಲ ಕದನ ಕಣಕ್ಕೆ ಕರೆತಂದ ಮಹಾಯುದ್ಧ ಅದಾಗಿತ್ತು. 1918ರ ನವೆಂಬರ್‌ನಲ್ಲಿ ಜರ್ಮನಿ ಪಾಳೆಯವು ಸೋತು, ಸಂಧಾನಕ್ಕೆ ಸಹಿ ಹಾಕುವುದರೊಂದಿಗೆ ತೆರೆಬಿದ್ದ ಮಹಾಯುದ್ಧವದು. ಸುಮಾರು ಒಂದು ಕೋಟಿ ಮಂದಿಯ ಪ್ರಾಣವನ್ನೂ, ಇನ್ನೆರಡು ಕೋಟಿ ಗಾಯಾಳುಗಳನ್ನೂ ಸೃಷ್ಟಿಸಿದ, ಹೆಸರಿಗೆ ತಕ್ಕನಾದ ಮಹಾಯುದ್ಧ.
ವಿಶ್ವಯುದ್ಧಕ್ಕೆ ಕಾರಣರಾದವರು ಯಾರು, ಕಾದಾಡಿದ ಎರಡು ಪಾಳೆಯಗಳ ಪೈಕಿ ಮುಗ್ಧರು ಯಾರು ಎಂಬುದರ ಕುರಿತೆಲ್ಲ ಕೊನೆ ಮೊದಲಿಲ್ಲದ ಚರ್ಚೆಗಳು ನಡೆದಿದ್ದಾಗಿದೆ. ಅತ್ಯಂತ ಸಂಕೀರ್ಣ ರಾಜಕೀಯ ಲೆಕ್ಕಾಚಾರಗಳಲ್ಲಿ ಇದಮಿತ್ಥಂ ಎಂದು ಸರಿ-ತಪ್ಪುಗಳ ಲೆಕ್ಕಾಚಾರವನ್ನು ಎದುರಿಗಿಡುವುದು ಯಾರಿಗೂ ಸಾಧ್ಯವಾಗಿಲ್ಲ. ನಂತರದ ದಿನಗಳಲ್ಲಿ ರಷ್ಯದಲ್ಲಿ ಸ್ಟಾಲಿನ್ ಅಟ್ಟಹಾಸ ಮೆರೆಯುವುದಕ್ಕೆ, ಇಟಲಿಯಲ್ಲಿ ಫ್ಯಾಸಿಸಂ ಎಂಬ ಭಯಾನಕ ಆಡಳಿತ ತನ್ನ ಆಟ ಮೆರೆಯುವುದಕ್ಕೆ, ನಾಜಿ ಜರ್ಮನಿಯು ಬಲಗೊಂಡು ಲಕ್ಷಾಂತರ ಯಹೂದಿಗಳು ನರಮೇಧಕ್ಕೆ ಒಳಗಾಗಿದ್ದಕ್ಕೆ ಬೀಜಾಂಕುರವಿಟ್ಟಿದ್ದೇ ಮೊದಲ ವಿಶ್ವಯುದ್ಧದ ಫಲಿತಾಂಶ ಎಂಬ ಅಭಿಪ್ರಾಯಗಳೂ ಇವೆ. ಬ್ರಿಟನ್- ಅಮೆರಿಕ- ರಷ್ಯಗಳಂಥ ಶಕ್ತಿಕೇಂದ್ರಗಳನ್ನು ಬಲಪಡಿಸಿದ ಈ ಯುದ್ಧ ಇವತ್ತಿನ ಜಾಗತಿಕ ನಕ್ಷೆಯನ್ನು ರೂಪಿಸುವುದಕ್ಕೆ ನಿರ್ಣಾಯಕವಾಗಿ ನೆರವಾದ ವಿದ್ಯಮಾನ ಎಂಬುದನ್ನಂತೂ ಯಾರೂ ಅಲ್ಲಗಳೆಯುವಂತಿಲ್ಲ.
ಮೊದಲ ಮಹಾಯುದ್ಧದ ನೆನಪಿಗೆ ನೂರು ತುಂಬುತ್ತಿರುವ ಹೊತ್ತಿನಲ್ಲಿ ಹುತಾತ್ಮರಾದವರನ್ನು ನೆನಪಿಸಿಕೊಳ್ಳುವುದು ನಾಗರಿಕತೆಯ ಲಕ್ಷಣ. ಪಾಶ್ಚಾತ್ಯ ರಾಷ್ಟ್ರಗಳು ಅದನ್ನು ಅಬ್ಬರದಿಂದಲೇ ಮಾಡುತ್ತವೆ. ಮಹಾಯುದ್ಧವನ್ನು ಜಯಿಸಿ ಮನುಕುಲವನ್ನು ಹೊಸಜಾಡಿನ ನಡಿಗೆಗೆ ಹಚ್ಚಿದ್ದೇ ನಾವು ಅಂತ ಜಂಬ ಕೊಚ್ಚಿಕೊಳ್ಳುತ್ತವೆ. ಮಹಾಯುದ್ಧದ ಪ್ರೇರಕ ಸನ್ನಿವೇಶಗಳನ್ನೆಲ್ಲ ನೆನೆ ನೆನೆದು ತಮ್ಮ ದೇಶವಾಸಿಗಳಲ್ಲಿ ಆ ಬಗ್ಗೆ ಅಭಿಮಾನ ಹೊರಹೊಮ್ಮುವಂತೆ ಮಾಡುತ್ತಾರೆ. ಹುತಾತ್ಮರಾದ ಕದನಕಲಿಗಳನ್ನು ನೆನಪಿಸಿಕೊಂಡು ಗೌರವ ಸಲ್ಲಿಸುತ್ತಾರೆ. ಶಾಂತಿಪರ್ವದಲ್ಲಿ ನಿಂತು ಯಾರೆಷ್ಟೇ ಚೆಂದದಲ್ಲಿ ಫಿಲಾಸಫಿಯ ಮಾತುಗಳನ್ನು ಆಡಬಹುದು, ಅದು ಪ್ರಸ್ತುತವೂ ಆಗಬಹುದು. ಆದರೆ ಸಂಘರ್ಷ ಸ್ಫೋಟಿಸಿದ ಕಾಲಘಟ್ಟದಲ್ಲಿ ಗೌರವ ಸಲ್ಲಬೇಕಾದ್ದು ನಿಂತು ಸೆಣೆಸಿದವರಿಗಷ್ಟೆ. ಆ ಯುದ್ಧ ತಪ್ಪಿಸಬಹುದಿತ್ತಾ, ಅದರಿಂದ ಜನಸಾಮಾನ್ಯನಿಗೆ ಸಿಕ್ಕಿದ್ದೇನು ಎಂಬ ಜಿಜ್ಞಾಸೆಗಳನ್ನೆಲ್ಲ ಈಗ ತಣ್ಣಗೆ ಕುಳಿತು ಸಾವಿರ ಬಗೆಯಲ್ಲಿ ಮಾಡಬಹುದಾದರೂ ಬೆಂಕಿ ಹೊತ್ತಿದ ಕಾಲಕ್ಕೆ ಅಂಥ ಪ್ರಶ್ನೆಗಳೆಲ್ಲ ಅಪ್ರಸ್ತುತ. ಹೀಗಾಗಿ ಮಹಾಯುದ್ಧದಲ್ಲಿ ಪ್ರಾಣತೆತ್ತವರನ್ನು ನೆನಪಿಸಿಕೊಂಡು ಮನುಕುಲದ ಪರವಾಗಿ ಸಂತಾಪ ಸಲ್ಲಿಸುವುದಕ್ಕೆ ಜಗತ್ತಿನೊಂದಿಗೆ ನಾವೂ ಧ್ವನಿಗೂಡಿಸಬೇಕು.
ಹಾಗಾದರೆ ವಿಶ್ವದ ಮೊದಲ ಮಹಾಯುದ್ಧವೆಂಬ ಚರಿತ್ರೆಯ ಪುಟಗಳನ್ನು ತೆರೆವಾಗ ನಮ್ಮಲ್ಲಿ ಅಭಿಮಾನ ಉಕ್ಕುವ ಸಂಗತಿ ಏನಿದೆ? ನಾವಾಗ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಭಾಗವಾಗಿದ್ದೆವು ಎಂಬ ಅಂಶ ಪ್ರಾರಂಭದಲ್ಲೇ ಮುಜುಗರವೊಂದನ್ನು ಹುಟ್ಟುಹಾಕಿ, ಆ ಸಾಮ್ರಾಜ್ಯದ ಹಿತಾಸಕ್ತಿಗೆ ನಾವೂ ಕಾದಾಡಿದೆವು- ಅದರಲ್ಲೇನು ವಿಶೇಷ ಎಂಬ ಹಾರಿಕೆ ಉತ್ತರವೊಂದನ್ನು ಸೃಷ್ಟಿಸಿಬಿಡುತ್ತದೆ. ಆದರೆ, ನೂರುವರ್ಷಗಳ ಹಿಂದಿನ ಆ ಮಹಾಯುದ್ಧದಲ್ಲಿ ತನ್ನ ಪಾಳೆಯವನ್ನು ಗೆಲವಿನೆಡೆ ಮುನ್ನಡೆಸಿದ್ದು ತಾನೇ ಅಂತ ಬ್ರಿಟನ್ ಎದೆ ಉಬ್ಬಿಸುವಾಗ ಆ ಶ್ರೇಯಸ್ಸಿನಲ್ಲಿ ಭಾರತದ ಪಾಲೇ ದೊಡ್ಡದಿದೆ ಎಂದು ನೆನಪಿಸುವ ಕೆಲಸವನ್ನು ಮುಲಾಜಿಲ್ಲದೇ ಮಾಡಬೇಕಿದೆ.
ಬ್ರಿಟಿಷ್ ಸಾಮ್ರಾಜ್ಯದ ಪರ ಅವತ್ತು ಭಾರತದಿಂದ ರಣರಂಗಕ್ಕೆ ಇಳಿದಿದ್ದವರು 9,50,000 ಸೈನಿಕರು ಹಾಗೂ 4,50,000 ಇತರೆ ಸಹಾಯಕರು. ಜರ್ಮನಿ ಮತ್ತದರ ಮಿತ್ರಪಡೆಗಳ ವಿರುದ್ಧ ಯುದ್ಧ ಘೋಷಿಸಿ, ನಂತರದಲ್ಲಿ ಮಹಾಯುದ್ಧವನ್ನು ಮುನ್ನಡೆಸಿದ್ದೇ ತಾನು ಎಂದು ಬೀಗಿದ ಬ್ರಿಟಿಷ್ ಸಾಮ್ರಾಜ್ಯವು ತನ್ನ ಸೇನೆಯಲ್ಲಿ ಹೊಂದಿದ್ದ ಯೋಧರಾದರೂ ಎಷ್ಟು? 2,47, 500 ಮಂದಿ. ಜರ್ಮನಿಯ ಸೇನೆಯೊಂದೇ 8 ಲಕ್ಷ ಯೋಧರನ್ನು ಹೊಂದಿತ್ತು. ಅವತ್ತು ಭಾರತವೂ ಸೇರಿದಂತೆ, ಬ್ರಿಟಿಷ್ ಸಾಮ್ರಾಜ್ಯದ ಅಧೀನವಾಗಿದ್ದ ಯಾವುದೇ ರಾಷ್ಟ್ರ, 'ಅದೇನು ಬೇಕಾದರೂ ಮಾಡಿಕೊಳ್ಳಿ. ನಾವಂತೂ ಯುದ್ಧದಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ' ಎಂದುಬಿಟ್ಟಿದ್ದರೆ ಬ್ರಿಟನ್ ನಾಮಾವಶೇಷವಾಗಿಬಿಡುತ್ತಿತ್ತು. ಸ್ವಯಂಪ್ರೇರಿತರಾಗಿ ಯುದ್ಧದಲ್ಲಿ ಪಾಲ್ಗೊಂಡರೆ ಅದಕ್ಕೆ ತಕ್ಕ ಇನಾಮು ನೀಡುವುದಾಗಿ ಬ್ರಿಟನ್ ಹೇಳಿದ್ದಕ್ಕೆ ಇಪ್ಪತ್ತು ಲಕ್ಷಕ್ಕೂ ಮೀರಿ ಅಧೀನ ರಾಷ್ಟ್ರಗಳ ಯೋಧರು ಜಮೆಯಾಗಿದ್ದು ವಿಶೇಷ. ಹೀಗಾಗಿ ಮೊದಲ ಮಹಾಯುದ್ಧದ ಜಯದ ಶ್ರೇಯಸ್ಸು ಸಲ್ಲಬೇಕಿರುವುದು ಅಂದಿನ ವಸಾಹತುಶಾಹಿ ದೇಶಗಳಿಗೇ ಹೊರತು ಬ್ರಿಟನ್ ಎಂಬ ಸಾಮ್ರಾಜ್ಯಕ್ಕಲ್ಲ. ಅದರಲ್ಲೂ ಸಿಂಹಪಾಲು ಸಲ್ಲಬೇಕಿರುವುದು ಭಾರತಕ್ಕೆ ಎಂಬುದರಲ್ಲಿ ಸಂಶಯವಿಲ್ಲ. ಯುದ್ಧಕಣದಲ್ಲಿ ಅರ್ಧದಷ್ಟು ಪಡೆಯನ್ನು ರೂಪಿಸಿದ್ದೇ ಭಾರತೀಯರು. ಅಷ್ಟೇಕೆ? ಬ್ರಿಟನ್‌ನ ಪರವಾಗಿ ಜರ್ಮನಿಯ ಮೇಲೆ ಮೊದಲ ಗುಂಡು ಹಾರಿದ್ದು ಜರ್ಮನಿ ಸಾಮ್ರಾಜ್ಯದ ಭಾಗವೇ ಆಗಿದ್ದ ಪಶ್ಚಿಮ ಆಫ್ರಿಕಾದ ಟೊಗೊಲ್ಯಾಂಡ್ ತೀರದಲ್ಲಿ. ಅಂಥದೊಂದು ಕ್ರೆಡಿಟ್, ಲ್ಯಾನ್ಸ್ ಕಾರ್ಪೊರಲ್ ಅಲ್ಹಜಿ ಗುನ್ಶಿ ಎಂಬ ಭಾರತೀಯನ ಹೆಸರಲ್ಲಿ. ಮಹಾಯುದ್ಧದಲ್ಲಿ ಬದುಕುಳಿದಿದ್ದ ಅವರು ನಂತರ ಮಿಲಿಟರಿ ಮೆಡಲ್‌ನ ಗೌರವಕ್ಕೂ ಪಾತ್ರರಾದರು. ಇಂಥ ಅವೆಷ್ಟೋ ಗುನ್ಶಿಗಳ ಪರಾಕ್ರಮದಿಂದ ಮಾತ್ರವೇ ಬ್ರಿಟನ್ ಯುದ್ಧ ಗೆಲ್ಲುವುದಕ್ಕೆ ಸಾಧ್ಯವಾಗಿದ್ದು. ಇವತ್ತು ದೆಹಲಿಯಲ್ಲಿ ಕಾಣುತ್ತಿರುವ ಇಂಡಿಯಾ ಗೇಟ್, ಮಹಾಯುದ್ಧದಲ್ಲಿ ಮಡಿದ ಎಪ್ಪತ್ತು ಸಾವಿರ ಭಾರತೀಯ ಯೋಧರ ನೆನಪಿನ ಬಿಂಬ. ಈಗಿನ ಹರ್ಯಾಣವನ್ನೂ ಒಳಗೊಂಡ ಪಂಜಾಬ್‌ನ ಪ್ರಾಂತ್ಯದಿಂದ ಹೋದ ಯೋಧರು ಹೆಚ್ಚಿನವರು. ಗಡವಾಲ ಮತ್ತು ಕುಮಾಂವ್ ರೆಜಿಮೆಂಟ್‌ಗೆ ಸೇರಿದ ಸಿಪಾಯಿಗಳು. ಪೂರ್ವದ ರಾಜ್ಯಗಳನ್ನು ಒಳಗೊಂಡ ಬೆಂಗಾಲ್ ರೆಜಿಮೆಂಟ್ ಕೂಡ ಮಹಾಯುದ್ಧದ ಪ್ರಮುಖ ಭಾಗವೇ. ತಾವೆಂದೂ ಊಹಿಸಿಯೇ ಇರದಿದ್ದ ಈಜಿಪ್ತ್, ಪ್ಯಾಲಸ್ತೀನ್ ಹಾಗೂ ಆಫ್ರಿಕಾದ ನೆಲಗಳಲ್ಲಿ ಕಾದಾಡಿದರು ನಮ್ಮ ಯೋಧರು. ಹಾಗೆ ನೋಡಿದರೆ ಬ್ರಿಟನ್ ಸಾಮ್ರಾಜ್ಯಕ್ಕೆ ಭಾರತೀಯರು ಗೆದ್ದುಕೊಟ್ಟ ಮಹಾಯುದ್ಧವದು. ನಮ್ಮ ನೆಲದ ಅಸಂಖ್ಯ ಅನಾಮಧೇಯ ಯೋಧರನ್ನು ನಾವು ಭಾವಪೂರ್ಣವಾಗಿ ನೆನೆಯುವುದು ಬೇಡವೇ?
ಅವತ್ತಿಗೆ ಬ್ರಿಟಿಷರ ಯುದ್ಧದಲ್ಲಿ ಭಾರತವೂ ಕೈಜೋಡಿಸಲಿ ಅಂತ ಕಾಂಗ್ರೆಸ್, ರಾಜಮನೆತನಗಳು ಮತ್ತು ಮುಸ್ಲಿಂಲೀಗ್ ಅನುಮೋದಿಸಿದ್ದರಲ್ಲಿ ಆಸೆಯ ಅಂಶವೊಂದು ಅಡಕವಾಗಿತ್ತು. ಮಹಾಯುದ್ಧ ಮುಗಿಯುತ್ತಲೇ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯವನ್ನಲ್ಲದಿದ್ದರೂ ಸ್ವಾಯತ್ತ ಆಡಳಿತದಂಥ ಯಾವುದೋ ವ್ಯವಸ್ಥೆಯೊಂದನ್ನು ಬ್ರಿಟಿಷರು ನೀಡುತ್ತಾರೆ ಎಂಬ ನಿರೀಕ್ಷೆ. ಸಾಮಾನ್ಯ ಸಿಪಾಯಿಗೆ ಇಂಥ ವಿಶಾಲ ತಿಳಿವಳಿಕೆಗಳೇನೂ ಇದ್ದಂತಿರಲಿಲ್ಲ. ಅವರೆಲ್ಲ ಆ ಕ್ಷಣದ ವಾಸ್ತವವನ್ನು ಗೌರವಿಸಿದವರು. ಸರಿಯೋ, ತಪ್ಪೋ ತಮ್ಮನ್ನಾಳುತ್ತಿರುವವರು ಬ್ರಿಟಿಷರು. ಅವರು ಮಹಾಯುದ್ಧದಲ್ಲಿ ಸೋಲುವುದೆಂದರೆ ತಾವೂ ಸೋತಂತೆ. ಇದು ಮರ್ಯಾದೆಯ ಪ್ರಶ್ನೆ. ಇಂಥ ಸಂದರ್ಭದಲ್ಲಿ ನೆರವಾಗದೇ ಮರ್ಯಾದೆ ಕಳೆದುಕೊಳ್ಳುವುದಕ್ಕೆ ಬಿಡುವುದೆಂದರೆ ತಮ್ಮ ಗೌರವದ ಪ್ರಶ್ನೆ ಅಲ್ಲವೇ ಎಂಬುದು ಅವರ ಸರಳ ವಾದ. 'ಕಡಿಮೆ ಅಪಾಯ ಮತ್ತು ಹೆಚ್ಚು ಪಗಾರ' ಅಂತ ಬ್ರಿಟಿಷರು ಒಡ್ಡಿದ್ದ ಆಮಿಷವೂ ಸ್ವಲ್ಪ ಕೆಲಸ ಮಾಡಿದ್ದು ಹೌದಾದರೂ ಕೊನೆಗೆ ಅವರ ಭರವಸೆಯೇನೂ ನಿಜವಾಗಲಿಲ್ಲ. ಆರ್ಥಿಕ ಕಾರಣಗಳು ಎಲ್ಲ ನಿರ್ಧಾರಗಳಲ್ಲೂ ಸಹಜ. ಆದರೆ, ಭಾರತೀಯ ಯೋಧರಿಗೆ ರಣರಂಗದಲ್ಲಿ ಕಾದಾಡುವುದಕ್ಕೆ ಮುಖ್ಯಪ್ರೇರಣೆ ಒದಗಿಸಿದ್ದು 'ಗೌರವ'ದ ಪ್ರಶ್ನೆಯೇ. ತಮ್ಮನ್ನಾಳುತ್ತಿರುವುದು ಬ್ರಿಟಿಷ್ ಸರ್ಕಾರ. ಸಂಕಷ್ಟದ ಸಮಯದಲ್ಲಿ ನಿಷ್ಠೆ ಮರೆಯಲೇಬೇಕು ಎಂಬ ಧೋರಣೆ ಅವರದ್ದು. ಭಾರತೀಯ ಯೋಧರನ್ನು ಹೊತ್ತೊಯ್ದ ಹಡಗೊಂದರ ಹೆಸರು 'ಲಾಯಲ್ಟಿ' ಎಂದಿದ್ದದ್ದು ಧ್ವನಿಪೂರ್ಣವಾಗಿಯೇ ಇದೆ.  
ಅವರ ಬಲಿದಾನವನ್ನು ಆ ಕಾಲಘಟ್ಟದಲ್ಲಿ ಮಾತ್ರವೇ ನಿಂತು ಅರ್ಥಮಾಡಿಕೊಳ್ಳುವ ಕೆಲಸವಾಗಬೇಕು. ಅವರು ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ಮಡಿದರು ಎಂಬ ಕಾರಣಕ್ಕಾಗಿ ಅವರನ್ನೆಲ್ಲ ನಮ್ಮ ಇತಿಹಾಸದ ಅಭಿಮಾನದ ಪುಟಗಳಲ್ಲಿ ಬಿಟ್ಟುಕೊಳ್ಳದಿದ್ದರೆ ಹೇಗೆ? ನಮ್ಮ ಪರಂಪರೆಯಲ್ಲಿ ಶೌರ್ಯವಿದೆ, ಅದನ್ನು ಯಾರೋ ಬಳಸಿಕೊಂಡರು ಹಾಗೂ ಇನ್ನಾದರೂ ಆ ಪರಂಪರೆಯ ಪುಳಕದಲ್ಲಿ ಸ್ಫೂರ್ತಿಗೊಂಡು ನಮ್ಮ ಶಕ್ತಿಯನ್ನು ನಮ್ಮ ಒಳಿತಿಗೇ ಮುಡಿಪಾಗಿಡೋಣ ಎಂಬ ವಿಚಾರ ನಮ್ಮಲ್ಲಿ ಒಡಮೂಡಬೇಕು. ಮಹಾಯುದ್ಧದಲ್ಲಿ ಪಾಲ್ಗೊಂಡವರ ತ್ಯಾಗದ ಕತೆಗೆ ನಮ್ಮ ಪಠ್ಯಗಳಲ್ಲೂ ಜಾಗವಿರಬೇಕು. ಶತ ಶತಮಾನಗಳಿಂದ ನಮ್ಮಲ್ಲೊಂದು ಅಗಾಧ ಶಕ್ತಿಯಿದೆ, ಅದಕ್ಕೆ ದಿಕ್ಕು ನೀಡುವ ನಾಯಕತ್ವ ನಮ್ಮಲ್ಲೇ ರೂಪುಗೊಳ್ಳಬೇಕು ಎಂಬ ಸಂಕಲ್ಪ ನಮ್ಮದಾಗಬೇಕೇ ಹೊರತು ಯಾರೋ ಬ್ರಿಟಿಷರಿಗೆ ಹೋರಾಡಿದವರನ್ನು ನಾವೇಕೆ ನಮ್ಮವರೆಂದುಕೊಳ್ಳೋಣ ಎಂಬ ಸಿನಿಕತೆಯಲ್ಲ.


- ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com