ಅಂಕಣಗಳು

ಬಡವರ ಚಿಂತೆಯಿಲ್ಲದವನ ಧರ್ಮವ್ಯಾವುದು?

ಬಡವರ ಚಿಂತೆಯಿಲ್ಲದವನ ಧರ್ಮವ್ಯಾವುದು?
Published On :

ಯಾವ ದೇಶದಲ್ಲಿ 40 ಪ್ರತಿಶತ ಜನರು ಬಡತನದ ರೇಖೆಗಿಂತಲೂ ಕೆಳಗಿದ್ದು, ಕೇವಲ 20 ರುಪಾಯಿಗಿಂತ ಅಲ್ಪ ಹಣದಲ್ಲಿ ದಿನ ದೂಡುವ ಅಸಹಾಯಕತೆಯಲ್ಲಿ ನರಳುತ್ತಿದ್ದಾರೋ, ಯಾವ ದೇಶದಲ್ಲಿ ಬಹುಪಾಲು ಜನರು ಚಿಂದಿ ಆರಿಸಿ, ಫುಟ್‌ಪಾತ್‌ಗಳ ಮೇಲೆ ಮಲಗಿ ಬದುಕು ದೂಡುತ್ತಾರೋ, ಅಂಥ ದೇಶದಲ್ಲಿ ಕೋಮು ಉತ್ಸಾಹ ಹುಟ್ಟು ಹಾಕಿ ಚುನಾವಣೆಯನ್ನು ಎದುರಿಸಿವುದು ಅಪರಾಧವಷ್ಟೆ ಅಲ್ಲ, ಘೋರ ಪಾಪ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾದ ಕಾರಣಕ್ಕೆ ಕೋಟ್ಯಂತರ ಜನರು ಪ್ರತಿದಿನವೂ ರಾಷ್ಟ್ರದ ಯಾವ ಪರಮ ವೈಭವವನ್ನು ಕಾಣಲು ಬಯಸುತ್ತಾರೋ ಮತ್ತು ಆ ವೈಭವದತ್ತ ಸಮಾಜವನ್ನು, ದೇಶವನ್ನು ತಲುಪಿಸಲು ಸಂಕಲ್ಪ ಮಾಡುತ್ತಾರೋ, ಅಂಥವರ ಪ್ರತಿದಿನದ ಪ್ರಾರ್ಥನೆಯ ಮೊದಲ ಸಾಲುಗಳೇ, "ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ಶುರುವಾಗುತ್ತದೆ. ಹಿಂದುತ್ವವನ್ನು ಉಪಶಬ್ದ ಎಂದು ಹಂಗಿಸಿ ತಿರಸ್ಕಾರ ಮಾಡುವವರು, ನಮ್ಮ ಧರ್ಮದ ಕಲ್ಪನೆಯಲ್ಲಿ ಆರ್ಥಿಕ ವಿಕಾಸವೂ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.
ಬಡತನ ಮತ್ತು ಹಸಿವಿನ ನಿರ್ಮೂಲನೆಯೇ ಧರ್ಮನಿಷ್ಠೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಬಡವರು ಹಸಿದ ಹೊಟ್ಟೆಯಲ್ಲೇ ಮಲಗುವಂಥ ಪರಿಸ್ಥಿತಿಯಲ್ಲಿರುವಾಗ, ನಾವು ಮಂದಿರ ಮಸೀದಿಗಳ ಮಾತನಾಡಿದರೆ, ಕೋಮು ದ್ವೇಶಕ್ಕೆ ಕಾರಣವಾಗುವ ಭಾಷಣ ಮಾಡಿದರೆ, ವಿಪಕ್ಷದ ನಾಯಕರನ್ನು ತುಂಡು ತುಂಡುಮಾಡುತ್ತೇನೆ ಎಂದು ಧಮಕಿ ಹಾಕಿದರೆ, ಯಾವುದೋ ಒಂದು ಧರ್ಮದವರನ್ನು ಸುತ್ತಲೂ ಕೂಡಿಸಿಕೊಂಡು, 'ಸೆಕ್ಯುಲರ್ ಆಗಿದ್ದು ಸಾಕು ಈಗ ಕಮ್ಯೂನಲ್ ಆಗಿಬಿಡಿ ಮತ್ತು ನಮ್ಮವರಿಗೇ ಮತ ನೀಡಿ' ಎಂದು ಹೇಳಿದರೆ ಅದರಿಂದ ಭಾರತಕ್ಕೆ ಹಿತವಾಗುತ್ತದೆಯೇ? ಭಾರತಕ್ಕಷ್ಟೇ ಅಲ್ಲ, ಇದು ಮಾನವೀಯತೆಗೂ ಮಾರಕವಾದಂಥ ಮನಸ್ಥಿತಿ.
ನಮ್ಮ ದೇಶದಲ್ಲಿ ಭಗವಂತನ ಸೇವೆಯೆಂದರೆ ಮನುಷ್ಯನ ಸೇವೆ ಎಂಬ ಅರ್ಥವಿದೆ. ರಾಮಕೃಷ್ಣ ಪರಮಹಂಸರು, "ಶಿಬೇರ್ ಸೇವಾ, ಜೀಬೇರ್ ಸೇವಾ"( ಜೀವದ ಸೇವೆಯೇ ಈಶ್ವರನ ಸೇವೆ) ಎಂದು ಹೇಳಿದ್ದರು. ಈ ಮಾತಿನ ಅರ್ಥ ಕೋಟ್ಯಂತರ ರುಪಾಯಿ ಹಗರಣ ಮಾಡುವವರಿಗೂ ತಿಳಿಯದು, ಮುಸಲ್ಮಾನರು ಕೇವಲ ವೋಟ್ ಬ್ಯಾಂಕ್‌ಗಳಷ್ಟೇ ಎಂದು ಭಾವಿಸುವವರಿಗೂ ನಿಲುಕದು. ಅನ್ಯ ಧರ್ಮೀಯರ ದೇಶಭಕ್ತಿಯ ಮೇಲೆ ಸಂದೇಹಪಡುವ ಅಧಿಕಾರ ಯಾರಿಗೂ ಇಲ್ಲ, ಅದರಂತೆಯೇ ಎಲ್ಲರಿಗಿಂತಲೂ ತಾವೇ ದೊಡ್ಡ ದೇಶಭಕ್ತರು, ಧರ್ಮ ರಕ್ಷಕರು ಎಂದು ಭಾವಿಸುವುದೂ ತಪ್ಪು. ಸತ್ಯವೇನೆಂದರೆ, ಎಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ ಸಹ ನಮಗೆ ನಮ್ಮದೇ ಅಂಗವಾದ ಕಾಶ್ಮೀರದಲ್ಲಿನ ಮಂದಿರಗಳನ್ನು ಉಳಿಸಲಾಗಲಿಲ್ಲ, ಕಾಶ್ಮೀರಿ ಹಿಂದುಗಳ ರಕ್ಷಣೆಯನ್ನು ಮಾಡಲಾಗಲಿಲ್ಲ. ನಮ್ಮ ತೀರ್ಥ ಕ್ಷೇತ್ರಗಳು ಕಸದ ಕೇಂದ್ರಗಳಾಗಿವೆ, ಪಂಡಿತರು ಮತ್ತು ಪೂಜಾರಿಗಳ ಧ್ಯಾನವೆಲ್ಲ ದೂರದಿಂದ ಬಂದ ಯಾತ್ರಾರ್ಥಿಗಳಿಂದ, ಭಕ್ತರಿಂದ ಹಣ ಪೀಕುವುದರತ್ತಲೇ ನೆಟ್ಟಿರುತ್ತದೆ. ಈ ವಿಷಯಗಳತ್ತ ಯಾರ ಗಮನವೂ ಹರಿಯುವುದಿಲ್ಲ.  ಯಾವ ನೆಲದಲ್ಲಿ ಭೂಮಾತೆಯ ಸೇವೆ ಮಾಡುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯಕ್ಕೆ ಸಿಲುಕುತ್ತಿದ್ದಾರೋ, ಆ ನೆಲದಲ್ಲಿ ಕೋಮು ದ್ವೇಷದ ಬಿರುಗಾಳಿಯನ್ನು ಹುಟ್ಟುಹಾಕಿ ರಕ್ತದ ಚಿತ್ತಾರ ಬಿಡಿಸುವುದು ಅದೆಂಥ ರಾಜನೀತಿ? ಅದ್ಯಾವ ದೇಶ ರಕ್ಷಣೆ? ಕೆಲವು ಸಮಯದ ಹಿಂದೆ, ಬಿಹಾರದಲ್ಲಿ ಗುಪ್ತಚರ ದಳಗಳು ಮಾಹಿತಿ ನೀಡಿದರೂ ಭಯಾನಕ ಆತಂಕವಾದಿಯೊಬ್ಬನನ್ನು ಬಂಧಿಸಲು ಅಲ್ಲಿನ ಸೆಕ್ಯುಲರ್ ಸರ್ಕಾರ ನಿರಾಕರಿಸಿಬಿಟ್ಟಿತು. ಕೊನೆಗೆ ಆತನನ್ನು ಬಂಧಿಸಲು ಕೋಲ್ಕತ್ತಾದಿಂದ ಎನ್‌ಐಎ ಅನ್ನು ಕರೆಸಬೇಕಾಯಿತು. ಇದು ಯಾವ ರೀತಿಯಲ್ಲಿ ಭಾರತದ ಭಕ್ತಿಯಾಗಿತ್ತು? ಒಬ್ಬ ಆತಂಕವಾದಿಯನ್ನು ಬಂಧಿಸುವುದರಿಂದ ಅಲ್ಲಿನ ಎಲ್ಲಾ ಮುಸಲ್ಮಾರು ಮುನಿಸಿಕೊಂಡುಬಿಡುತ್ತಾರೆ ಎಂದು ಆ ಸರ್ಕಾರ ಭಾವಿಸಿತಾ ಅಥವಾ ಆತನನ್ನು ಬಂಧಿಸದಿದ್ದರೆ ಮುಸಲ್ಮಾನರ ವೋಟ್ ಬ್ಯಾಂಕ್ ಭದ್ರವಾಗಿಬಿಡುತ್ತದೆ ಎಂದು ಆಸೆ ಪಟ್ಟಿತಾ? ಹೀಗೆ ಯೋಚಿಸುವುದೂ ದೇಶ ಮತ್ತು ಮುಸಲ್ಮಾನ ಸಮಾಜಕ್ಕೆ ಅಪಮಾನ ಮಾಡಿದಂತೆ. ಏಕೆಂದರೆ ಭಾರತದ ಮುಸಲ್ಮಾನರು ಅಬ್ದುಲ್ ಹಮೀದ್, ಕ್ಯಾಪ್ಟನ್ ಹನೀಫುದ್ದೀನ್ ಮತ್ತು ಅಬ್ದುಲ್ ಕಲಾಂರನ್ನು ಸಮರ್ಥಿಸುತ್ತಾರೆಯೇ ಹೊರತು, ಭಟ್ಕಲ್ ಮತ್ತು ಆತನಿಗೆ ಅನುಕಂಪ ಸೂಚಿಸುವವರನ್ನಲ್ಲ.  
"ಸೋತರೂ ಅಡ್ಡಿಯಿಲ್ಲ. ನಾನು ಹಿಂದುಗಳ ವೋಟ್ ಕೇಳುವುದಿಲ್ಲ, ಮುಸಲ್ಮಾನರ ಮತಯಾಚಿಸುವುದಿಲ್ಲ. ಇಡೀ ಹಿಂದುಸ್ತಾನಿಯರ ಮತ ನನಗೆ ಬೇಕು" ಎಂದು ಇದುವರೆಗೂ ಭಾರತದಲ್ಲಿ ಒಬ್ಬೇ ಒಬ್ಬ ನಾಯಕ(ಮೋದಿ) ಮಾತ್ರ ಸ್ಪಷ್ಟವಾಗಿ ಘೋಷಿಸಿದ್ದಾನೆ. ಮುಝಫ್ಫರ್ ನಗರ ಗಲಭೆಯ ನಂತರ ಪೀಡಿತರಿಗೆ ಸಾಂತ್ವನ ನೀಡುವ ಬದಲು ಯುರೋಪ್ ಯಾತ್ರೆಗೆ ಓಡಿ ಹೋದವರಿಗೆ ಮೋದಿಯವರ ಈ ಮೇಲಿನ ಮಾತು ನಡುಕ ಹುಟ್ಟಿಸುತ್ತಿದೆ. ಮುಝಫ್ಫರ್ ನಗರದ ಮುಸಲ್ಮಾನ ಯುವಕರು ಲಷ್ಕರ್ ಏ ತೋಯ್ಬಾಕ್ಕೆ ಸೇರುತ್ತಿದ್ದಾರೆ ಎಂಬ ನಾಯಕನಿಗೆ ಅಥವಾ ಇಮಾಮ್ ಬುಖಾರಿಯಿಂದ ತಮಗೆ ಸೆಕ್ಯುಲರ್ ಸರ್ಟಿಫಿಕೆಟ್ ಕೊಡಿಸಿಕೊಂಡ, 1984ರ ದಂಗೆಗಳಲ್ಲಿ ಯಾರು ಮುಖ್ಯ ಪಾತ್ರವಹಿದ್ದರೋ ಆ ನಾಯಕ ನಿರಪರಾಧಿಯೆಂದು ಸುಳ್ಳು ಕಥೆ ಹಬ್ಬಿಸುತ್ತಾ, ಹಳೆಯ ಗಾಯವನ್ನು ಗೆದಕುತ್ತಿರುವ ನಾಯಕಿಗೆ ಒಂದು ಪ್ರಶ್ನೆಯಿದೆ. ಹಿಂದು ಮತ್ತು ಮುಸಲ್ಮಾನರ ವಿಷಯ ಬಂದಾಗ ಬಲು ಮುತುವರ್ಜಿ ವಹಿಸಿ ಮಾತನಾಡುವ ಇವರುಗಳೆಂದಾದರೂ, ಅದರ ಅರ್ಧದಷ್ಟು ಕಾಳಜಿಯಿಂದ ಬಡವರ ಬಗ್ಗೆ, ಅವರ ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡಿದ್ದಾರಾ? ಸಾವಿರಾರು ರುಪಾಯಿಗಳ ದುಬಾರಿ ಚಪ್ಪಲಿಗಳನ್ನು ಮೆಟ್ಟಿಕೊಂಡು ಬಡವರ ಮನೆಯಲ್ಲಿ ಉಳಿಯುವುದರಿಂದ, ರೈತರ ನೇಗಿಲನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಳ್ಳುವುದರಿಂದ ಆತ್ಮೀಯತೆ ಬೆಳೆಯುವುದಿಲ್ಲ. ದಶಕಗಳಿಂದ ಈ ನೇತಾರರ ಬಂಗಲೆಗಳಿಗೆ ಸಾಮಾನ್ಯ ಜನರಿಗೆ ಪ್ರವೇಶವಿಲ್ಲ. ದೇಶದ ಹಣ ಕೊಳ್ಳೆಹೊಡೆದು ಅನ್ಯ ದೇಶಗಳಲ್ಲಿ ಜಮೆ ಮಾಡುತ್ತಾ, ಸಾವಿರಾರು ಎಕರೆಗಳನ್ನು ಪುಕ್ಕಟೆಯಾಗಿ ಖರೀದಿಸಿ ಮಾರಾಟ ಮಾಡುವವರನ್ನು ಪ್ರಶ್ನಿಸಿದರೆ, ಅದಕ್ಕೆ ಅವರ ಪತ್ನಿ ಕಣ್ಣೀರು ಹಾಕುತ್ತಾ ಮರುಪ್ರಶ್ನಿಸುತ್ತಾರೆ- "ನೋಡಿ, ನೋಡಿ...ಹೇಗೆ ಜನ ನಮ್ಮ ಕುಟುಂಬದ ಮೇಲೆ ಮತ್ತು ನನ್ನ ಪತಿಯ ಮೇಲೆ ದಾಳಿಮಾಡುತ್ತಿದ್ದಾರೆ ಅಂತ" ಎಂದು!!
ಇದೆಲ್ಲ ಏನು ಸ್ವಾಮಿ? ಇದನ್ನು ರಾಜಕೀಯವೆನ್ನಬೇಕೋ ಅಥವಾ ತಮ್ಮ ಪರಿವಾರದ ಸಾಮಂತಶಾಹಿ ಎಲ್ಲಿ ಕಳಚಿ ಬೀಳುತ್ತದೆ ಎನ್ನುವ ಭಯದಿಂದ ಉತ್ಪನ್ನವಾದ ರೋದನವೆನ್ನಬೇಕೋ? ಈ ಬಾರಿ ನಡೆಯುತ್ತಿರುವುದು ಭಾರತ ಭಾಗ್ಯ ವಿಧಾತನ ಚುನಾವಣೆಗಳು. ಈ ದೇಶ ಮುಂದೆಯೂ ಬಡತನ, ಅನ್ಯಾಯ, ಲೂಟಿ, ಅಹಂಕಾರವೇ ತುಂಬಿದ ಇಂಡಿಯಾದಿಂದ ತುಳಿಸಿಕೊಳ್ಳುತ್ತಲೇ ಇರಬೇಕು ಎಂದು ಮತದಾರ ಬಯಸುತ್ತಿದ್ದಾನೋ ಅಥವಾ ನವಸಾಮಂತರನ್ನು ಅವರ ಅರ್ಹತೆಗನುಸಾರವಾಗಿ ಕಸದಬುಟ್ಟಿಗೆ ಎಸೆಯುತ್ತಾನೋ? ಪ್ರಪಂಚದ ಇತಿಹಾಸದಲ್ಲಿ ಬದಲಾವಣೆಗಳು ಆಗುವ ಸಮಯದಲ್ಲೆಲ್ಲ ಅದನ್ನು ಯಥಾಸ್ಥಿತಿವಾದಿ ಧನಪತಿಗಳು ಮತ್ತು ರಾಜದರ್ಬಾರಿನಲ್ಲಿ ವರ್ಷಗಳಿಂದ ಹೊಟ್ಟೆ ಬೆಳೆಸುತ್ತಾ ಸಾಗಿದ್ದ ದಲ್ಲಾಳಿಗಳು ವಿರೋಧಿಸಿ, ಹತ್ತಿಕ್ಕಲು ತಮ್ಮೆಲ್ಲ ತಾಕತ್ತನ್ನು ಬಳಸಿದ ಉದಾಹರಣೆಗಳಿವೆ. ಈಗಲೂ ಹಾಗೇ ಆಗುತ್ತಿದೆ. ಮಾಧ್ಯಮಗಳು ಮತ್ತು ದೆಹಲಿಯ ಸುಲ್ತಾನರಿಗೆ ಎದುರಾಗುತ್ತಿರುವ ಸೋಲನ್ನು, ಬದಲಾವಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥವರೇ ಚುನಾವಣೆಗೆ ಕೋಮುವಾದಿ ಬಣ್ಣವನ್ನು ಕೊಟ್ಟು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವುದು. ಏಕೆಂದರೆ ಅವರ ವೋಟ್ ಬ್ಯಾಂಕ್‌ನ ಲಾಭ ಅರ್ಥನೀತಿಯಿಂದಲ್ಲ, ಬದಲಾಗಿ ಅನರ್ಥನೀತಿಯಿಂದಲೇ ಹೆಚ್ಚಿದೆ. ಆದರೆ ಇವರುಗಳಿಗೆಲ್ಲ ಎದುರಾಗಲಿರುವ ವೈಫಲ್ಯವನ್ನು ತಪ್ಪಿಸಲಾಗದು ಎನ್ನುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ.


= ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.