ಅಂಕಣಗಳು

'ಗುಜರಾತ್ ಮಾದರಿ' ನಿರೂಪಣೆಯ ಸರ್ಕಸ್ಸು

Published On :

ಲೋಕಸಭೆಯ ಚುನಾವಣೆಯಲ್ಲಿ ಮತದಾನದ ಒಂದೊಂದು ಹಂತ ಪೂರ್ಣವಾಗುತ್ತಿದ್ದಂತೆಯೂ ರಾಜಕೀಯ ಅಖಾಡದಲ್ಲಿ ವಾಕ್ಸಮರ ಜೋರಾಗಿದೆ. ನೆಹರು-ಗಾಂಧಿ ಕುಟುಂಬ ಮತ್ತು ನರೇಂದ್ರ ಮೋದಿ ನಡುವಿನ ವಾಗ್ಯುದ್ಧ ಹೆಚ್ಚಿನ ಸ್ಥಾನವನ್ನು ಆಕ್ರಮಿಸುತ್ತಿರುವುದು ಸುಳ್ಳಲ್ಲ. ಈ ಮಾತಿನ ಚಕಮಕಿಯಲ್ಲಿ ಕಟಕಟೆಗೆ ಬಂದಿರುವುದು ಮೋದಿಯವರು ಮತ್ತು ಬಿಜೆಪಿ ಅಭಿಮಾನದಿಂದ ಹೇಳಿಕೊಳ್ಳುತ್ತಿರುವ 'ಗುಜರಾತ್ ಮಾದರಿ' ಅಭಿವೃದ್ಧಿ. ಗುಜರಾತ್‌ನದು 'ಟಾಫಿ'ಮಾಡೆಲ್ ಅಷ್ಟೆ, ಉದ್ಯಮಿಗಳಿಗೆ ಅತಿಕಡಿಮೆ ಬೆಲೆಯಲ್ಲಿ ಭೂಮಿ ಕೊಡಲಾಗಿದೆ ಎಂಬ ರಾಹುಲ್ ಗಾಂಧಿ ಭಾಷಮದ ಬೆನ್ನಲ್ಲೇ ಹಲವು ಈಟಿಗಳು ತೂರಿ ಬಂದಿವೆ. ಗುಜರಾತ್‌ನಲ್ಲಿ ನರೇಂದ್ರ ಮೋದಿ 'ಸ್ನೇಹಿತ'ರಿಗೆ ಲಾಭ ಮಾಡಿಕೊಟ್ಟಿದ್ದಾರೆ ಅಷ್ಟೇ ಅಂತ ಪ್ರಿಯಾಂಕಾ ವಾದ್ರಾ ಸಹ ದೂರಿದರು. ಅಂಕಿಅಂಶಗಳಲ್ಲಿ ತುಲನೆ ಮಾಡಿದರೂ ಗುಜರಾತ್ ಒಂದು ಸಾಧಾರಣ ರಾಜ್ಯವಷ್ಟೇ, ಉಚ್ಛವೂ ಅಲ್ಲ, ನೀಚವೂ ಅಲ್ಲ ಎಂದು ಚಿದಂಬರಂ ಹೇಳಿಕೆ ನೀಡಿದರು. ಈ ಎಲ್ಲ ಆರೋಪಗಳಿಗೆ ಉತ್ತರವಾಗಿ ಉದ್ಯಮಿ ಅದಾನಿ, ಸಂದರ್ಶನವೊಂದನ್ನು ನೀಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಅನುಸರಿಸಿದ ನೀತಿಯನ್ನೇ ಮೋದಿ ಅನುಸರಿಸಿದ್ದಾರಲ್ಲದೇ ತಮಗೆ ಯಾವ ವಿಶೇಷ ಸವಲತ್ತನ್ನೂ ನೀಡಿಲ್ಲ ಎಂಬುದನ್ನು ಅಂಕಿಅಂಶಗಳ ಆಧಾರದಲ್ಲೇ ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಮಾದರಿ ಕುರಿತ ಹೊಸ ಚರ್ಚೆಗೆ ಮಾಧ್ಯಮಲೋಕದ ಅಭಿಪ್ರಾಯ ನಿರೂಪಕರು ಹೇಗೆಲ್ಲ ಸ್ಪಂದಿಸಿದ್ದಾರೆ ನೋಡೋಣ.
-----
ನಂಬರ್ ಒನ್ ಎಂಬುದನ್ನು ಕೆಲವೇ ಅಂಕಿಅಂಶಗಳ ಆಧಾರದಲ್ಲಿ ನಿರ್ಧರಿಸಲಾಗುವುದಿಲ್ಲ. ಅವುಗಳ ವಿಶ್ಲೇಷಣೆಯ ಅಗತ್ಯವೂ ಇದೆ ಎಂದು ಅಂಕಣಕಾರ ಮಿನ್ಹಾಜ್ ಮರ್ಚೆಂಟ್ ಪ್ರತಿಪಾದಿಸಿದ್ದಾರೆ. ರಾಜ್ಯಗಳು ವಿಸ್ತಾರ ಮತ್ತು ಜನಸಂಖ್ಯೆಗಳಲ್ಲಿ ಅಗಾಧ ಭಿನ್ನತೆಗಳನ್ನು ಹೊಂದಿರುವಾಗ ಅಂಕಿಯ ಏರುಪೇರು ಮಾತ್ರವೇ ಯಾವುದೇ ರಾಜ್ಯದ ಸ್ಥಾನವನ್ನು ನಿರ್ಧರಿಸುವುದಿಲ್ಲ ಅನ್ನೋದು ಅವರ ವಾದ.  2012ರ ಹಣಕಾಸು ವರ್ಷದ ವರದಿಯ ಆಧಾರದಲ್ಲಿ 1,01,314 ರುಪಾಯಿಗಳ ತಲಾ ಆದಾಯದೊಂದಿಗೆ ಮಹಾರಾಷ್ಟ್ರ ನಂಬರ್ 1 ಸ್ಥಾನದಲ್ಲಿದ್ದರೆ, 89,668 ರು. ತಲಾ ಆದಾಯದ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಆದರೆ ಜಗತ್ತಿನ ಶ್ರೀಮಂತ ನಗರದಲ್ಲೊಂದಾದ ಮುಂಬೈನ ಯೋಗದಾನವೇ ಇದರಲ್ಲಿ ಹೆಚ್ಚಿದೆ. ಉಳಿದೆಲ್ಲ ರಾಜ್ಯಗಳು ಮತ್ತು ವಿದೇಶಿ ವಹಿವಾಟುದಾರರೂ ತುಂಬಿರುವ ಮುಂಬೈನ ಕೊಡುಗೆಯನ್ನು ಮಹಾರಾಷ್ಟ್ರದ ಜಿಡಿಪಿಯಲ್ಲಿ ಸೇರಿಸದೆ ತೆಗೆದಿಟ್ಟರೆ ಆಗ ಅದು ಸುಮಾರು 78 ಸಾವಿರ ತಲಾ ಆದಾಯದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದು ಬಿಡುತ್ತದೆ ಅಂತಾರೆ ಮಿನ್ಹಾಜ್. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನ ಸಾಲದ ಪ್ರಮಾಣ ಮೂರುಪಟ್ಟಾಗಿದೆ ಎಂಬ ಕೇಜ್ರಿವಾಲ್ ಹೇಳಿಕೆಯನ್ನೂ ಪ್ರತ್ಯೇಕ ಓದಿಕೊಂಡರೆ ಹೌದಲ್ಲ ಎನಿಸುತ್ತದೆ. ವಾಸ್ತವ ಏನೆಂದರೆ ಜಿಡಿಪಿ ಹೆಚ್ಚುತ್ತಿರುವ ಯಾವುದೇ ಅರ್ಥವ್ಯವಸ್ಥೆಯಲ್ಲಿ ಸಾಲದ ಪ್ರಮಾಣ ಹೆಚ್ಚಾಗಿಯೇ ಕಾಣುತ್ತದೆ. ಗುಜರಾತ್‌ನ ಜಿಡಿಪಿ ದರವೂ ಕಳೆದ 10 ವರ್ಷದ ಅವಧಿಯಲ್ಲಿ ಸುಮಾರು ಮೂರುಪಟ್ಟು ಹೆಚ್ಚಳಕ್ಕೆ ಜಿಗಿದಿರುವುದನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು ಅನ್ನೋದು ಮಿನ್ಹಾಜ್ ವಾದ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿ 800ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕೇಜ್ರಿವಾಲ್ ಮಾತನ್ನೂ ಹೋಲಿಕೆಗಳಲ್ಲೇ ಇಟ್ಟು ನೋಡಬೇಕು. ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯೂ ಇರಬಾರದು ನಿಜ. ಆದರೆ, 2012ರ ವರ್ಷವೊಂದರಲ್ಲೇ ಕಾಂಗ್ರೆಸ್ ಆಡಳಿತದ ಮಹಾರಾಷ್ಟ್ರದಲ್ಲಿ 3786 ಮತ್ತು ಆಂಧ್ರಪ್ರದೇಶದಲ್ಲಿ 2572 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ಖಂಡಿತ ಗುಜರಾತ್ ಆರೋಗ್ಯ, ಶಿಕ್ಷಣ ಮತ್ತು ಮಕ್ಕಳ ಬೆಳವಣಿಗೆ ವಿಷಯಗಳಲ್ಲಿ ಸಾಧಿಸಬೇಕಾದ ಪ್ರಗತಿ ಬಹಳವಿದೆ. ಹಾಗಂತ ಭಾರತದ ದೊಡ್ಡ ರಾಜ್ಯಗಳಿಗೆ ಹೋಲಿಸಿ ನೋಡಿದಾಗ ಉತ್ತಮ ಸಾಧನೆಯನ್ನೇ ಮಾಡಿದೆ ಎಂಬುದು ಮಿನ್ಹಾಜ್ ವಾದ.
-----
ಕಾಂಗ್ರೆಸ್ ವಕ್ತಾರ ಸಂಜಯ್ ಜಾ, ಎನ್‌ಡಿಟಿವಿ ಜಾಲತಾಣಕ್ಕೆ 'ನಿಜಕ್ಕೂ ಗುಜರಾತ್‌ನದೂ ಟಾಫಿ ಮಾದರಿಯೇ' ಎಂದು ಕುಟುಕಿದ್ದಾರೆ. ಅವರ ಅಭಿಪ್ರಾಯದ ಸಾರಸಂಗ್ರಹ ಇಷ್ಟು: ಮೋದಿ ಸರ್ಕಾರದ ನೆರಳಲ್ಲಿ ಅದಾನಿ ಹಾಗೂ ಅವರಂಥ ಲಾಭಕೋರ ಉದ್ಯಮಿಗಳೇ ತುಂಬಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ಸಣ್ಣ ಉದ್ದಿಮೆದಾರರು, ಬುಡಕಟ್ಟು ಮಂದಿ ಮತ್ತು ರೈತರು ಬಸವಳಿದಿರುವುದನ್ನು ಇವರು ಗಮನಕ್ಕೇ ತೆಗೆದುಕೊಂಡಿಲ್ಲ. ಗುಜರಾತ್ ರಾಜ್ಯವು ಕಾಂಗ್ರೆಸ್ ಆಡಳಿತದ ಕಾಲದಿಂದಲೂ ಬೆಳವಣಿಗೆ ದರದಲ್ಲಿ ಮುಂದಿದೆ. ಅದರ ಶ್ರೇಯಸ್ಸು ಅಲ್ಲಿನ ಗುಜರಾತಿ ಉದ್ಯಮ ಸಮುದಾಯದ ಚಾಣಾಕ್ಷ್ಯತನಕ್ಕೆ ಸಲ್ಲಬೇಕು. ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರಿಗೆ ಮಾಡುವುದಕ್ಕೆ ಉಳಿದಿರುವುದು ಸಮಾಜದ ದುರ್ಬಲ ವರ್ಗಗಳ ಬಲವರ್ಧನೆ, ಮಹಿಳಾ ವಿಮೋಚನೆ, ಕಲ್ಯಾಣ ಕಾರ್ಯಕ್ರಮಗಳು ಮತ್ತು ಕೋಮು ಸಾಮರಸ್ಯ ಕಾಪಾಡುವುದು. ಆದರೆ ಇವೆಲ್ಲದರಲ್ಲೂ ಮೋದಿ ವೈಫಲ್ಯ ಹೊಂದಿದ್ದಾರೆ. ಮೋದಿಯವರ ಗುಜರಾತ್ ಮಾದರಿಯು ಮುಕ್ತ ಮಾರುಕಟ್ಟೆ ಪ್ರತಿಪಾದಿಸುವ ಅಮೆರಿಕ ಅಕಾಡೆಮಿಕ್ ವಲಯದ ಭಾರತೀಯ ಪ್ರೊಫೆಸರ್‌ಗಳಿಂದ ತುಂಬಿದೆ. ಅದನ್ನೇ ಅವರು 'ಬೆಳವಣಿಗೆ' ಎನ್ನುತ್ತಿದ್ದಾರೆ. ಬಿಜೆಪಿಯ ಪ್ರಣಾಳಿಕೆ ಬರೆಯುವುದಕ್ಕೆ ಬಂದವರೂ ಇವರೇ. ಇವರ ಆಲೋಚನೆಗಳು ಪಶ್ಚಿಮದಲ್ಲಿ ವೈಫಲ್ಯ ಹೊಂದಿ 'ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ' ಎಂಬಂಥ ಅಭಿಯಾನಗಳಿಗೆ ಕಾರಣವಾಗಿವೆ. ಕೊನೆಕ್ಷಣದಲ್ಲಿ ಮೋದಿ ಪಾಳೆಯದ ಬಲಪಂಥೀಯ ಅರ್ಥ ಪರಿಣತರಿಗೂ ಈ ದೇಶವನ್ನು ಕಾಪಾಡುವುದು ಕಾಂಗ್ರೆಸ್ ಪ್ರಣೀತ ನೀತಿಗಳೇ ಎಂದು ಜ್ಞಾನೋದಯವಾಗಿರುವುದರಿಂದ ಅವರು ನಮ್ಮ ಪ್ರಣಾಳಿಕೆಯನ್ನು ಕಾಪಿ ಮಾಡಿದ್ದಾರೆ. ಮೋದಿಯವರದ್ದು ಒಂದು ರುಪಾಯಿಗೆ ಸಿಕ್ಕಬಹುದಾದ ಟಾಫಿ ಮಾಡೆಲ್ ಎಂದು ರಾಹುಲ್ ಗಾಂಧಿ ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ.
----
ಸಂಜಯ್ ಜಾ ಯಾವ ವಿದೇಶಿ ವ್ಯಾಮೋಹಿಗಳನ್ನು ದೂರುತ್ತಿದ್ದಾರೋ ಅವರೇ ಮೋದಿಯನ್ನು ವಿನಾಕಾರಣ ವಿರೋಧಿಸುವವರ ಪಾಳೆಯದಲ್ಲಿದ್ದಾರೆ ಎಂಬುದನ್ನು ಅರ್ಥ ಪರಿಣತ ಸುರ್ಜಿತ್ ಭಲ್ಲಾ, 'ಇಂಡಿಯನ್ ಎಕ್ಸ್‌ಪ್ರೆಸ್‌'ನ ಅಂಕಣದಲ್ಲಿ ಜಾಹೀರು ಮಾಡಿದ್ದಾರೆ. ಮೋದಿಯ ಕುರಿತು ಏನೆಲ್ಲ ಹೇಳುತ್ತಿರುವ ಬುದ್ಧಿಜೀವಿಗಳು ಬರಿದೇ ಬಾಯಿಬಡಿದುಕೊಳ್ಳದೇ ತಮ್ಮ ಮಾತುಗಳಿಗೆ ಆಧಾರವನ್ನು ಕೊಡಬೇಕು ಎನ್ನುತ್ತಾರೆ ಸುರ್ಜಿತ್. ಶಿವ ವಿಶ್ವನಾಥನ್‌ರಂಥ ಸಮಾಜಶಾಸ್ತ್ರಜ್ಞರು, 'ಗುಜರಾತು ಭಿನ್ನ ಬುಡಕಟ್ಟುಗಳಿಗೆ, ಅಲೆಮಾರಿ ಸಮಾಜಗಳಿಗೆ, ಕೌಶಲ ಗುಂಪುಗಳಿಗೆ ಆಶ್ರಯವಾಗಿತ್ತು. ಮೋದಿ ಪ್ರಣೀತ ಅಭಿವೃದ್ಧಿಯಲ್ಲಿ ಇವರೆಲ್ಲ ಎಲ್ಲಿ ಕಾಣೆಯಾಗಿದ್ದಾರೆ' ಎಂದುಬಿಡುತ್ತಾರೆ. ಹಾಗಾದರೆ ನಿಜಕ್ಕೂ ಮೋದಿ ಆಡಳಿತದಲ್ಲಿ ಬುಡಕಟ್ಟು ಮಂದಿ ಅಭ್ಯುದಯ ಕಡೆಗಣನೆಯಾಗಿದಿಯೇ ಎಂಬ ಬಗ್ಗೆ ಯಾವ ಅಂಕಿಅಂಶಗಳನ್ನೂ ಈ ಟೀಕಾಕಾರರು ನೀಡುವುದಿಲ್ಲ. ಗುಜರಾತ್‌ನ ಪರಿಶಿಷ್ಟ ಪಂಗಡದ ಏಳಿಗೆಯನ್ನು ಉಳಿದ ರಾಜ್ಯಗಳೊಂದಿಗೆ ಹೋಲಿಸಿ ನೋಡಿದಾಗ ಅದೇನೂ ಹಿಂದುಳಿದಿಲ್ಲ ಎಂಬುದು ಗೊತ್ತಾಗುತ್ತದೆ. ಹಾಗೆ ನೋಡಿದರೆ ಮೊನ್ನೆಯವರೆಗೆ ಸೋನಿಯಾ ಅವರ ಬಿಟ್ಟಿ ಕೊಡುಗೆ ಆಡಳಿತ ನೀತಿಯಲ್ಲಿದ್ದ ರಾಜಸ್ಥಾನದ ಎಸ್‌ಟಿ ಸಮುದಾಯದ ಅಭಿವೃದ್ಧಿ ಗಣನೀಯವಾಗಿ ಹಿಂದುಳಿದಿದೆ- ಅಂತಾರೆ ಸುರ್ಜಿತ್.
---
ಟೈಮ್ಸ್ ಆಫ್ ಇಂಡಿಯಾದ ಖ್ಯಾತ ಅಂಕಣಕಾರ, ಅರ್ಥ ಪರಿಣತ ಸ್ವಾಮಿನಾಥನ್ ಅಯ್ಯರ್ ಸಹ ಗುಜರಾತ್ ಮಾದರಿಯನ್ನು ಪ್ರಶಂಸಿಸುತ್ತಾರೆ. ಗುಜರಾತ್ ಮಾದರಿ ಉತ್ಪ್ರೇಕ್ಷಿತವೋ ವಾಸ್ತವವೋ ಎಂಬ ಬಗ್ಗೆ ಹಲವು ಅಂಕಿಅಂಶಗಳ ಆಧಾರದಲ್ಲಿ ಭಿನ್ನ ಭಿನ್ನ ವಾದಗಳಿವೆ. ಆದರೆ 'ಆರ್ಥಿಕ ಸ್ವಾತಂತ್ರ್ಯ'ವನ್ನು ಮಾನದಂಡವಾಗಿರಿಸಿಕೊಂಡರೆ ಅರ್ಥ ಚಟುವಟಿಕೆ ಹಮ್ಮಿಕೊಳ್ಳುವ ಉತ್ತಮ ವಾತಾವರಣ, ಗುಜರಾತ್‌ನಲ್ಲಿ ಇದ್ದಂತೆ ಇನ್ನೆಲ್ಲೂ ಇಲ್ಲ ಅಂತಾರೆ ಅಯ್ಯರ್. ಪ್ರಕರಣಗಳು ಬೇಗ ವಿಲೇವಾರಿಯಾಗುತ್ತವೆ. ನ್ಯಾಯಾಂಗದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನೂ ತಗ್ಗಿಸಲಾಗಿದೆ. ಅಲ್ಲದೇ ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಇರುವುದರಿಂದ ಕೃಷಿಯಲ್ಲಿ ಶೇ. 10ರ ಅತಿ ತ್ವರಿತ ಬೆಳವಣಿಗೆ ಸಾಧ್ಯವಾಗಿದೆ. ಪುಕ್ಕಟೆ ವಿದ್ಯುತ್‌ನಂಥ ಗಿಮಿಕ್‌ಗಳಿಗೇನೂ ಹೋಗದ ಮೋದಿ, ರೈತರಿಂದ ಶುಲ್ಕ ವಸೂಲು ಮಾಡುತ್ತಾರೆ. ಆದರೆ ಸೇವೆಯಲ್ಲಿ ಉತ್ತಮಿಕೆ ಕಾಪಾಡಿದ್ದಾರೆ. ಇದರಿಂದ ವಿದ್ಯುತ್ ಕಂಪನಿಗಳೂ ಅಲ್ಲಿ ಲಾಭದಲ್ಲಿವೆ. ಕೃಷಿ ಮತ್ತು ಉದ್ಯಮ ಎರಡೂ ವಲಯಗಳಿಗೂ ಈಮಟ್ಟದ ಬೆಳವಣಿಗೆ ಸ್ವಾತಂತ್ರ್ಯ ಇರುವುದು ಗುಜರಾತ್‌ನಲ್ಲಿ ಮಾತ್ರ ಎಂಬುದು ಸ್ವಾಮಿನಾಥನ್ ಪ್ರತಿಪಾದನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.