ಅಂಕಣಗಳು

ಭಾರತೀಯ ನ್ಯಾಯಾಂಗದ ಕಾಶಿ ಕರ್ನಾಟಕದ ಮರತೂರು

ಭಾರತೀಯ ನ್ಯಾಯಾಂಗದ ಕಾಶಿ ಕರ್ನಾಟಕದ ಮರತೂರು
Published On :

ಕಳೆದ ವಾರದ ರಾಷ್ಟ್ರಕೂಟರ ಕಾಲದ ಶಿರವಾಲ್ ಲೇಖನದ ಬಗ್ಗೆ ಮೈಸೂರಿನ ಲಕ್ಷ್ಮೀಪುರಂ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ ನಿಖಿತ ಹೆಚ್.ಎಸ್. ತನ್ನ ಸಂತಸವನ್ನು ಪತ್ರದ ಮೂಲಕ ಬರೆದು ತಿಳಿಸಿದ್ದಾಳೆ. ಇನ್ನೋರ್ವ ಶಿರವಾಲ್ ಗ್ರಾಮ ನಿವಾಸಿ ದೂರವಾಣಿಯ ಮೂಲಕ ಕರೆ ಮಾಡಿ ಶಿರವಾಲ್ ಅವಿಭಾಜ್ಯ ಗುಲ್ಬರ್ಗಾದಲ್ಲಿತ್ತು, ಆದರೆ ಈಗ ಯಾದಗೀರ್ನಲ್ಲಿದೆ ಎಂದು ನನ್ನನ್ನು ತಿದ್ದಿದ್ದಾರೆ. ಇದೇ ರೀತಿ ಇನ್ನೊಂದು ಮಹತ್ವವಾದ ಇತಿಹಾಸ ಪ್ರಸಿದ್ಧವಾದ ಕಲಬುರ್ಗಿಯ ಮರತೂರಿಗೆ ಈಗ ನಿಮ್ಮನ್ನು ಕರೆದೊಯ್ಯುತ್ತೇನೆ.  
ಅತ್ಯದ್ಭುತ ಜಾಗಗಳು ಮತ್ತು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟು ಪೂಜಿಸಬೇಕಾದ ಮಹನೀಯರ ಬಗ್ಗೆ ನಮಗೆ ಅರಿವೇ ಇಲ್ಲದಿರುವುದು ಶೋಚನೀಯ. ಅಂಥ ಪ್ರಸಿದ್ಧ ಆದರೆ ಹೆಚ್ಚಾಗಿ ಗೊತ್ತಿಲ್ಲದ ಸ್ಥಳ ಮರತೂರು ಮತ್ತು ಅಲ್ಲಿನ ಮಹನೀಯ ವ್ಯಕ್ತಿ ವಿಜ್ಞಾನೇಶ್ವರರು. ಹನ್ನೆರಡನೇ ಶತಮಾನದ ಭಾರತದಲ್ಲಿ ಅತ್ಯಂತ ಪ್ರಸಿದ್ಧರಾದ ನ್ಯಾಯಶಾಸ್ತ್ರಜ್ಞ ವಿಜ್ಞಾನೇಶ್ವರರು. "ಮಿತಾಕ್ಷರ" ಎನ್ನುವ ಅವರ ಶಾಸ್ತ್ರ ಗ್ರಂಥವು ವಂಶಪಾರಂಪರ್ಯ ಆಸ್ತಿಯನ್ನು ಹೊಂದುವ ಬಗ್ಗೆ ಹಿಂದು ಕಾನೂನುನಿನಲ್ಲಿ ಪ್ರಭಾವಶಾಲಿ ಗ್ರಂಥವಾಗಿದೆ. ಭಾರತೀಯ ನ್ಯಾಯಾಂಗ ಪರಂಪರೆಯ ವಿಭೂತಿ ಪುರುಷರಾದ ವಿಜ್ಞಾನೇಶ್ವರರು ಹುಟ್ಟಿದ್ದು ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಮರತೂರಿನಲ್ಲಿ. ಅವರು ಬಸವಕಲ್ಯಾಣದ ಚಾಲುಕ್ಯ ಅರಸು ಆರನೇ ವಿಕ್ರಮಾದಿತ್ಯನ (1076-1126) ಆಸ್ಥಾನದಲ್ಲಿ ನ್ಯಾಯಶಾಸ್ತ್ರಜ್ಞರಾಗಿದ್ದವರು.
ಯಾಜ್ಞವಲ್ಕ್ಯ ಸ್ಮೃತಿಯ ಮೇಲೆ ರಚಿಸಲಾದ ಭಾರತೀಯ ನ್ಯಾಯಾಂಗ ಇತಿಹಾಸದ ಮೇರು ಕೃತಿ ಮಿತಾಕ್ಷರ (ಹಿಂದು ನ್ಯಾಯ ಸಂಹಿತೆ)ಯ ಕರ್ತೃ ವಿಜ್ಞಾನೇಶ್ವರರು. ಮಿಥಿಲಾ ನಗರದ ಜ್ಞಾನಿಗಳಾದ ಮಹಾರಾಜರು ಋಷಿಗಳಾದ ಯಾಜ್ಞವಲ್ಕ್ಯರನ್ನು ತಮಗೆ ಧರ್ಮದ ಬಗ್ಗೆ ಶಿಕ್ಷಣ ನೀಡಬೇಕೆಂದು ಕೇಳಿಕೊಂಡಾಗ ಒಂದು ಸಾವಿರದ ಹತ್ತು ಶ್ಲೋಕಗಳನ್ನೊಳಗೊಂಡ ಯಾಜ್ಞವಲ್ಕ್ಯ ಸ್ಮೃತಿ ರಚನೆಯಾಗುತ್ತದೆ. ಧರ್ಮವನ್ನು ವಿವರಿಸುವಾಗ ಯಾಜ್ಞವಲ್ಕ್ಯ ಋಷಿಗಳು ಮೂರು ಭಾಗಗಳಾಗಿ ವಿವರಿಸುತ್ತಾರೆ. ಆಚಾರ ಅಂದರೆ ಉತ್ತಮ ನಡವಳಿಕೆ, ವ್ಯವಹಾರ ಅಂದರೆ ನ್ಯಾಯಾಂಗ ಕಾರ್ಯವಿಧಾನ ಮತ್ತು ಪ್ರಾಯಶ್ಚಿತ್ತ ಅಂದರೆ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತವಾಗಿ ದೇಹವನ್ನು ದಂಡಿಸಿಕೊಳ್ಳುವುದು. ಈ ಕೃತಿಯು ಮನುಸ್ಮೃತಿಯ ಮೇಲೆ ಆಧಾರವಾಗಿದ್ದರೂ ಸಹ ರಾಜ್ಯಾಡಳಿತ ಮತ್ತು ನ್ಯಾಯ ಕೌಶಲಗಳಲ್ಲಿ ಪ್ರಭಾವಶಾಲಿ ವ್ಯತ್ಯಾಸಗಳಿರುವುದನ್ನು ನಾವು ಕಾಣಬಹುದಾಗಿದೆ. ಮಿತಾಕ್ಷರ ಕೃತಿಯು ಯಾಜ್ಞವಲ್ಕ್ಯ ಸ್ಮೃತಿಯನ್ನೂ ಒಳಗೊಂಡು 492 ಪುಟಗಳ ಪೂರ್ವ ಮೀಮಾಂಸ ಪದ್ಧತಿಯನ್ನು ಅನುಸರಿಸಿ ರಚನೆಯಾಗಿದೆ.
ಮಹಾನ್ಯಾಯ ಪಂಡಿತರಾಗಿದ್ದ ವಿಜ್ಞಾನೇಶ್ವರರು ತಮ್ಮ ತಾರ್ಕಿಕ ಕುಶಾಗ್ರಮತಿಯ ವಿವರಣೆ, ವಿಶ್ಲೇಷಣೆಯಿಂದ ಮಿತಾಕ್ಷರವನ್ನು ಚಿರಸ್ಥಾಯಿಯಾಗಿಸಿದ್ದಾರೆಂದು ದಾಖಲಿಸಿದ್ದು ಇಂಗ್ಲೆಂಡಿನ ಪ್ರೈವಿ ಕೌನ್ಸಿಲ್. ಧರ್ಮಶಾಸ್ತ್ರ ಸಾಹಿತ್ಯದಲ್ಲಿ ವಿಜ್ಞಾನೇಶ್ವರರ ಮಿತಾಕ್ಷರವು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ವ್ಯಾಕರಣದಲ್ಲಿ ಪತಂಜಲಿಯ ಮಹಾಭಾಷ್ಯಕ್ಕೆ ಅದು ಸಮಾನವಾದದ್ದು, ಧರ್ಮಶಾಸ್ತ್ರದ ಮೂಲ ಸತ್ವವನ್ನು ಅದು ಪ್ರತಿನಿಧಿಸುತ್ತದೆ ಎಂದವರು ಭಾರತರತ್ನ ಪಿ. ವಿ. ಕಾಣೆಯವರು. ಸ್ವತಂತ್ರ ಭಾರತದ ಆರು ದಶಕಗಳಲ್ಲಿ ವಿವಿಧ ಹಂತದಲ್ಲಿನ ಎಲ್ಲ ನ್ಯಾಯಾಲಯಗಳೂ ನ್ಯಾಯನಿರ್ಣಯ ಪ್ರಕಟಿಸುವಾಗ ಮಿತಾಕ್ಷರ ಗ್ರಂಥವನ್ನು ಉಲ್ಲೇಖಿಸಿವೆ. ಕಾನೂನು ವಿದ್ಯಾರ್ಥಿಗಳಿಗೆಲ್ಲ ಮಿತಾಕ್ಷರ ಕುರಿತು ಅರಿವಿದೆ ಎಂದೆಲ್ಲ ವಿವರಿಸುವಾಗ ಇಂತಹ ಮಹತ್ವದ ಭಾರತದ ನ್ಯಾಯಾಂಗದ ಮೇರು ಕೃತಿ ಮತ್ತು ಅದರ ಕರ್ತೃ ವಿಜ್ಞಾನೇಶ್ವರರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತಾನಾಗೇ ಮೂಡುತ್ತದೆ. ಕುತೂಹಲ ಕಾಡುತ್ತದೆ.
ಡಾ ಎಸ್. ಶ್ರೀಕಂಠಶಾಸ್ತ್ರಿಯವರ ಗ್ರಂಥದ ಪ್ರಕಾರ  (‘source of Karnataka history’ -P 174) ಮಿತಾಕ್ಷರ ಗ್ರಂಥ 89ಕ್ಕೂ ಹೆಚ್ಚು ಕೃತಿಗಳನ್ನು ಆಧರಿಸಿದ್ದರಿಂದ ಅದನ್ನು "ಧರ್ಮಶಾಸ್ತ್ರದ ವಿಶ್ವಕೋಶ" ಎನ್ನಬಹುದು ಎಂದು ಹೇಳಲಾಗಿದೆ. ಹಿಂದು ನ್ಯಾಯವ್ಯವಸ್ಥೆ ಮೂಲಭೂತವಾದಿಗಳ ಕೈಯಲ್ಲಿ ನಲುಗುತ್ತಿದ್ದಾಗ ಅದನ್ನು ದೇಶಾದ್ಯಂತ ಸರ್ವರಿಗೂ ಒಪ್ಪಿಗೆಯಾಗುವಂತೆ ಮಾಡಿದ್ದು ಮಿತಾಕ್ಷರ. ಸಂಕೀರ್ಣ ವಿಷಯಗಳನ್ನು ಸರಳವಾಗಿಸಿ, ಮನಮುಟ್ಟುವಂತೆ ವಿವರಿಸುವ ಕೌಶಲ್ಯ, ಜನಪರ ಮತ್ತು ಮಹಿಳೆಯರ ಕಾಳಜಿ ಎಲ್ಲವನ್ನೂ ಮಿತಾಕ್ಷರದಲ್ಲಿ ಕಾಣುತ್ತೇವೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, ಮುಂತಾದ ಸರ್ವವ್ಯಾಪಿ, ಸರ್ವಸ್ಪರ್ಶಿ ಬದಲಾವಣೆಗೆ ಮಿತಾಕ್ಷರದಲ್ಲಿದ್ದ ಹಿಂದು ನ್ಯಾಯ ದರ್ಶನದ ಚಿಂತನೆಗಳೇ ಪ್ರಾಯಶಃ ಬುನಾದಿಯಾದವು ಎಂದರೆ ಅತಿಶಯೋಕ್ತಿಯಾಗಲಾರದು. ಮಿತಾಕ್ಷರ ಪ್ರಾಚೀನ ಭಾರತದ ಕಾನೂನು ಸಾಹಿತ್ಯದ ಮೇರು ಕೃತಿ. ಭಾರತದ ನ್ಯಾಯಶಾಸ್ತ್ರ ಇತಿಹಾಸದ ಅಸಂಖ್ಯ ನ್ಯಾಯವೇತ್ತರ ನಭೋಮಂಡಲದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ ವಿಜ್ಞಾನೇಶ್ವರ ಎನ್ನುವ ನ್ಯಾ. ಡಾ. ಮ. ರಾಮಾಜೋಯಿಸರ ಮಾತು ಮತ್ತು ವಿಜ್ಞಾನೇಶ್ವರರ ಮಿತಾಕ್ಷರಾವು ಯಾಜ್ಞವಲ್ಕ್ಯ ಸ್ಮೃತಿಯ ಅತ್ಯಂತ ಅಧಿಕೃತ ಭಾಷ್ಯವಾಗಿದ್ದು ತನ್ನ ಅಸಮಾನ ತಾರ್ಕಿಕ ನಿಲುವಿನಿಂದಾಗಿ ಭಾರತದಾದ್ಯಂತ ಪ್ರಚಲಿತ ಕೃತಿಯಾಗಿದೆ ಎನ್ನುವುದು ಭಾರತದ ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಎಸ್. ರಾಜೇಂದ್ರರ ಮಾತು. ಹಿಂದು ಕಾನೂನು ಸಂಹಿತೆಯಾಗಿರುವ ಮಿತಾಕ್ಷರ 900 ವರ್ಷಗಳ ಹಿಂದೆ ರಚಿತವಾಗಿದ್ದರೂ ಎಲ್ಲ ಕಾಲಕ್ಕೂ ಅದು ಸಮಾಜಕ್ಕೆ ಪ್ರಸ್ತುತವಾಗಿದೆ ಎನ್ನುವ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾದ ನ್ಯಾ. ಶಿವರಾಜ ಪಾಟೀಲರ ಮಾತುಗಳು ವಿಜ್ಞಾನೇಶ್ವರರ ಆ ಕೃತಿಯ ಪ್ರಸ್ತುತತೆಯನ್ನು ತಿಳಿಸುತ್ತದೆ. ಸುಪ್ರೀಂಕೋರ್ಟ್ನ ಅಂದಿನ ಮುಖ್ಯ ನ್ಯಾಯಾಧೀಶರಾದ ಆರ್.ಸಿ. ಲಾಹೋಟಿಯವರು "ಮರತೂರ ಮರೆಯಲಾರದ ಊರಾಗಿದೆ" ಎಂದಿದ್ದಾರೆ.
ಪಾ.ಭಿ. ದೇಸಾಯಿಯವರ "ಪ್ರಾಚೀನ ಕರ್ನಾಟಕ ಹೊಸ ಬೆಳಕು" (1-2-1932ರ) ಸಂಚಿಕೆಯಲ್ಲಿ ಮರತೂರ ಶಾಸನದ ಕುರಿತು ಮೊಟ್ಟಮೊದಲಬಾರಿಗೆ ಪ್ರಕಟಿಸಿದರು. ಲಿಪಿಶಾಸ್ತ್ರಜ್ಞ  ಸೀತಾರಾಮ ಜಾಗೀರದಾರ್ರವರು ಶಾಸನದ ಕುರಿತಾಗಿ ಸಮಗ್ರ ಹಾಗೂ ಮಹತ್ವದ ಅಂಶಗಳನ್ನು "ಮಿತಾಕ್ಷರದ ವಿಜ್ಞಾನೇಶ್ವರರು ಮತ್ತು ಮರತೂರಿನ ಶಾಸನ" ಎಂಬ ಪುಸ್ತಕ ಪ್ರಕಟಿಸಿದ್ದು ಮೂಲ ದಾಖಲೆ ಎನ್ನಬಹುದು. ಪ್ರೊ. ಬಿ.ಎನ್. ಸಂಪತ್ರ "ಪರಮಹಂಸ ವಿಜ್ಞಾನೇಶ್ವರ" ಕೃತಿಯಲ್ಲಿ ಸಹ ವಿವರಗಳು ಲಭ್ಯವಿವೆ. ವಿಜ್ಞಾನೇಶ್ವರರು ಮಿತಾಕ್ಷರದಲ್ಲಿ ಅನೇಕಾನೇಕ ಸ್ಮೃತಿ ಮತ್ತು ಸೂತ್ರಗಳ ಆಧಾರ ವಿವರಿಸಿದ್ದರೆ, ಅವರ ನಂತರ ಬಂದ ಅನೇಕ ವಿದ್ವಾಂಸರು, ಕೃತಿಕಾರರು, ಅದನ್ನೇ ವಿಷಯವಸ್ತುವನ್ನಾಗಿಟ್ಟುಕೊಂಡು ತಮ್ಮ ಗ್ರಂಥಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಶ್ರೀನಿವಾಸ ಸಿರನೂರಕರ್ 'ವಿಜ್ಞಾನೇಶ್ವರ ಮಿತಾಕ್ಷರ' ಎಂಬ ಕೃತಿಯನ್ನು ರಚಿಸಿದ್ದಾರೆ.
ಮಿತಾಕ್ಷರದಲ್ಲಿ ಪ್ರತಿಪಾದಿಸಿರುವ ವಿಚಾರಗಳ ಪರ ಅಥವಾ ವಿರೋಧ ಕುರಿತು ನಂತರದ ಪಂಡಿತರು ತಮ್ಮ ಗ್ರಂಥಗಳಲ್ಲಿ ಚರ್ಚಿಸಿರುವುದರಿಂದ ನ್ಯಾಯಶಾಸ್ತ್ರದ ಕೇಂದ್ರವಾಗಿ ಮಿತಾಕ್ಷರ ಪ್ರಸಿದ್ಧಿಯಾಗಿತ್ತು ಎಂದರ್ಥ. ಸಂಪರ್ಕ ಸಾಧನಗಳು, ಮಾಧ್ಯಮಗಳು ಇಲ್ಲದ ಅಂದಿನ ಕಾಲದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಮಿತಾಕ್ಷರ ಪಡೆದ ಪ್ರಸಿದ್ಧಿ ಮಹಾನ್ ವಿದ್ವಾಂಸ ವಿಜ್ಞಾನೇಶ್ವರರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಇಂತಹ ಮಹಾನ್ ನ್ಯಾಯಪಂಡಿತ ಕನ್ನಡಿಗನೆಂಬುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ರಾಷ್ಟ್ರಕೂಟ, ಚಾಲುಕ್ಯ, ಸಗರರಂತಹ ಪ್ರಸಿದ್ಧ ರಾಜಮನೆತನಗಳಾಳಿದ ನಾಡಿನ, ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮ, ಅಕ್ಕ ಮಹಾದೇವಿ, ಸಿದ್ಧರಾಮ, ಶರಣಬಸವರಂಥ ಶರಣ-ಶರಣೆಯರ, ಪುರಂದರದಾಸ, ಜಗನ್ನಾಥದಾಸರಂತಹ ದಾಸಪರಂಪರೆಯ, ಕಡಕೋಳ ಮಡಿವಾಳಪ್ಪನವರಂತಹ ತತ್ವಪದಕಾರರ ಬೀಡಾಗಿ ಇರುವುದರ ಜೊತೆಗೆ ಕಲಬುರ್ಗಿ ಕಲ್ಯಾಣ ನಾಡು ವಿಜ್ಞಾನೇಶ್ವರರಂತಹ ನ್ಯಾಯವೇತ್ತರ ನಾಡಾಗಿತ್ತು ಎಂಬ ಹೆಮ್ಮೆ ಗರಿಗೆದರುತ್ತದೆ. ರಸ್ತೆ, ದೂರವಾಣಿ, ಮುಂತಾದ ಸಂಪರ್ಕ ಸಾಧನಗಳಿಲ್ಲದ ಅಂದಿನ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ (ಕೇರಳ ಮತ್ತು ಪ.ಬಂಗಾಲ ಹೊರತಾಗಿ) ಮಿತಾಕ್ಷರ ಕಾನೂನು ಸಂಹಿತೆ ಎಲ್ಲ ಕಡೆ ರೂಢಿಯಲ್ಲಿತ್ತು ಮತ್ತು ಅದರಲ್ಲಿನ ಕಾನೂನಿನ ಸಂಗತಿಗಳು ಇಂದಿನ ನ್ಯಾಯನಿರ್ಣಯಕ್ಕೆ ಆಧಾರವಾಗಿದೆ ಎಂಬ ವಿಷಯ ಮಿತಾಕ್ಷರಕ್ಕೆ ಸಂದ ಗೌರವವಾಗಿದೆ.
ಸ್ಮಾರಕದ ಅಭಿವೃದ್ಧಿಗಾಗಿ ಕಲಬುರ್ಗಿಯನ್ನು ಪ್ರವಾಸಿತಾಣವನ್ನಾಗಿ ಮಾಡಲು ವಿಜ್ಞಾನೇಶ್ವರರ ಘನತೆಗೆ ತಕ್ಕಂತೆ ಸರ್ಕಾರ ಒಂದು ಕೋಟಿ ರುಪಾಯಿಗಳ ಅನುದಾನ ನೀಡಿ ವಿಜ್ಞಾನೇಶ್ವರರ ಉದ್ಯಾನವನ ಮತ್ತು ಸಮುದಾಯ ಭವನ ನಿರ್ಮಿಸುತ್ತಿದೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರುಗಳು,  ನ್ಯಾಯಾಧೀಶರುಗಳು, ರಾಜ್ಯಪಾಲರು, ಕುಲಪತಿಗಳು, ವಿದ್ವಾಂಸರು, ಮಠಾಧೀಶರು, ಸಂಶೋಧಕರು, ಮಂತ್ರಿವರ್ಯರು, ದಾನಿಗಳು, ಸಾಧು ಸಂತರು, ಆಸಕ್ತ ಜನತೆ ಎಲ್ಲರೂ ಮರತೂರಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಸಂಶೋಧಕರಿಗೆ ಒಂದು ಸುಸಜ್ಜಿತ ವಾಚನಾಲಯ ಸ್ಥಾಪಿಸಲಾಗಿದೆ. ಕಾನೂನು ಕಲಿಯುವ, ಕಲಿಸುವ ಮತ್ತು ನ್ಯಾಯಾಂಗದ ಭಾಗವಾಗಿರುವ ಎಲ್ಲರೂ ತಪ್ಪದೇ ಕಲಬುರ್ಗಿಗೆ ಬಂದು ಭಾರತೀಯ ನ್ಯಾಯಾಂಗದ ಕಾಶಿ ಎಂದು ಹೆಸರಾದ ಅಂತರಾಷ್ಟ್ರೀಯ ಖ್ಯಾತಿಯ ಮರತೂರಿನ ವಿಜ್ಞಾನೇಶ್ವರ ಸ್ಮಾರಕಕ್ಕೆ ಭಾರತೀಯ ನ್ಯಾಯಾಂಗ ಪರಂಪರೆಯ ಅಪರೂಪದ ಗ್ರಂಥಗಳನ್ನು ಹೊಂದಿದ ಗ್ರಂಥಾಲಯಕ್ಕೆ ಭೇಟಿ ನೀಡಬೇಕು. ಒಂದು ವಿಶ್ವಸ್ಥ ಮಂಡಳಿಯ ಮೂಲಕ ಈ ಸ್ಮಾರಕವನ್ನು ಬೆಳಕಿಗೆ ತರಲಾಗಿದೆ. ಮಾತ್ರವಲ್ಲ ಗುಲಬರ್ಗ ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಪೀಠ ಮತ್ತು ಭಾರತೀಯ ನ್ಯಾಯದರ್ಶನ ಮತ್ತು ರಾಜಪದ್ಧತಿ ಕುರಿತಾದ ಸ್ನಾತಕೋತ್ತರ ಶಿಕ್ಷಣ ಆರಂಭವಾಗಿದೆ. ಕರ್ನಾಟಕ ಸರ್ಕಾರ ಇತ್ತೀಚೆಗೆ ವಿಜ್ಞಾನೇಶ್ವರ ಕಾನೂನು ಮಹಾವಿದ್ಯಾಲಯ ಆರಂಭಿಸಿದೆ.
ನಮ್ಮ ಭಾಗದ ಅಪರೂಪದ ರಾಷ್ಟ್ರೀಯ ಸ್ಮಾರಕ ವಿಜ್ಞಾನೇಶ್ವರ ಭವನಕ್ಕೆ ಭೇಟಿ ನೀಡುವುದರಿಂದ ಸನಾತನ ಮತ್ತು ಪುರಾತನ ಪರಂಪರೆಗೆ ನಮ್ಮನ್ನು ಜೋಡಿಸಿಕೊಂಡಂತಾಗುತ್ತದೆ. ನಮ್ಮ ಸ್ವಾಭಿಮಾನ ಚಿಗುರಿ, ಇನ್ನೂ ಹೆಚ್ಚಿನ ಶ್ರೇಷ್ಠತೆಯನ್ನು ಮೆರೆಯುವತ್ತ ಪ್ರತಿಯೊಬ್ಬರಿಗೂ ಕೆಲಸ ಮಾಡಲು ಪ್ರೇರಣೆ ದೊರಕಿದಂತಾಗುತ್ತದೆ.


- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.