ಅವಕಾಶವಾದಿ ರಾಜಕಾರಣಿಗಳೂ, ನಮ್ಮ ಅಸ್ವಸ್ಥ ಮನಸ್ಥಿತಿಯೂ...

ಹಿಂದಿನ ಕಾಲದಲ್ಲಿ ಐದಾರು ಮಕ್ಕಳಿದ್ದರೆ ಅದೇ ಕಡಿಮೆ. 10-12 ಸಂಖ್ಯೆಯ ಮಕ್ಕಳು ಸಾಮಾನ್ಯ. ಆ ಎಲ್ಲಾ ಮಕ್ಕಳನ್ನು ತಾಯಿ ಸ್ವಲ್ಪವೂ ಕೊರತೆಯಾಗದಂತೆ ಸಾಕುತ್ತಿದ್ದಳು. ಆದರೆ ರಕ್ತ ಹೀರುವ ಒಬ್ಬನೇ ಮಗನನ್ನು ತಾಯಿಯಿಂದ ಸೈರಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶದ ಸದ್ಯದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಹಾಲು ಕುಡಿಯುವ ಮಕ್ಕಳಿಗಿಂತಲೂ ರಕ್ತ ಹೀರುವ ಮಕ್ಕಳೇ ಹೆಚ್ಚಾದಂತೆ ಕಾಣುತ್ತದೆ. ಒಂದೆಡೆ ಗಣಿಗಾರಿಕೆಯಿಂದ ಭೂಮಿಯನ್ನೆಲ್ಲ ಅಗೆದು ನಾಶ ಮಾಡುತ್ತಿದ್ದಾರೆ. ಮತ್ತೊಂದೆಡೆ ಕಾಡನ್ನೆಲ್ಲ ಕಡಿದು ಭೂಮಿಯನ್ನು ಬೋಳು ಮಾಡುತ್ತಿದ್ದಾರೆ. ಇನ್ನೊಂದೆಡೆ ನೀರಿಗಾಗಿ ಲಕ್ಷಾಂತರ ಬೋರ್ವೆಲ್ ಕೊರೆದು ಭೂಮಿಯನ್ನು ಹಾಳು ಮಾಡುತ್ತಿದ್ದಾರೆ. ಹಿಂಗಾರು ಮಳೆಯೇ ಆಗದೆ ಚಳಿಗಾಲದಲ್ಲೇ ಸೆಕೆ ಪ್ರಾರಂಭವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಚುನಾವಣೆಯ ಕಾವು ಏರುತ್ತಿದೆ. ಕಾವು ಏರುತ್ತಿದೆ ಎನ್ನುವುದಕ್ಕಿಂತ ಬೇಗೆ ಹೊತ್ತಿಕೊಳ್ಳುತ್ತಿದೆ ಎನ್ನುವುದೇ ಸರಿಯಾಗಬಹುದೇನೋ?
ಕನ್ನಡದಲ್ಲಿ ಒಂದು ಪ್ರಸಿದ್ಧವಾದ ಗಾದೆ ಇದೆ. ಉರಿಯುವ ಮನೆಯಲ್ಲಿ ಗಳ ಇರಿದರು. ಮನೆಗೆ ಬೆಂಕಿ ಹತ್ತಿರುವಾಗ ಆರಿಸುವ ಪ್ರಯತ್ನ ಮಾಡದೆ ಆ ಮನೆಯ ಛಾವಣಿಗೆ ಹಾಕಿದ್ದ ಗಳಗಳನ್ನು ಇರಿದುಕೊಳ್ಳುವ ಪ್ರಯತ್ನ ಮಾಡುವವರಿಗೆ ಯಾವ ಹೆಸರಿಂದ ಕರೆಯಬೇಕು? ಅವರ ಕೀಳು ಸ್ವಾರ್ಥವನ್ನು ಯಾವುದಕ್ಕೆ ಹೋಲಿಸಬೇಕು? ತೃತೀಯ ಮತ್ತು ಚತುರ್ಥ ರಂಗಗಳನ್ನು ಕಟ್ಟಲು ಹೊರಟಿರುವ ಮಾಜಿ ಪ್ರಧಾನಿ ದೇವೇಗೌಡ, ಮುಲಾಯಂಸಿಂಗ್, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಜಯಲಲಿತ ಇವರಿಗೆ ಯಾವ ಶಬ್ದಗಳಿಂದ ಪಾಠ ಹೇಳಬೇಕೋ ಅರ್ಥವಾಗುತ್ತಿಲ್ಲ. ಮತದಾರರನ್ನು ಇವರು ಏನೆಂದು ಭಾವಿಸಿದ್ದಾರೆ? ಈಗಾಗಲೇ 5 ಬಾರಿ ಮೋಸ ಹೋಗಿರುವ ಮತದಾರರನ್ನು ಮತ್ತೆ ವಂಚಿಸಲು ಹೊರಟಿದ್ದಾರೆ ಈ ಆರು ಜನ ಬುದ್ಧಿವಂತರು!
ಇವರ ಒಬ್ಬೊಬ್ಬರ ಹಿನ್ನೆಲೆಯು ಅತ್ಯಂತ ಅದ್ಭುತವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಸರ್ಕಾರವನ್ನು ರಚಿಸುತ್ತೇವೆಂದು ಬೊಗಳೆ ಬಿಡುವ ದೇವೇಗೌಡರು, ವಾಜಪೇಯಿಯಂತಹ ಮುತ್ಸದ್ಧಿಯನ್ನು ಪ್ರಧಾನಮಂತ್ರಿ ಗಾದಿಯಿಂದ ದೂರವಿಡಲು ನರಸಿಂಹರಾಯರ ಪಾದ ಹಿಡಿದುದನ್ನು ಜನ ಮರೆತಿದ್ದಾರೆ ಎಂದು ತಿಳಿದುಕೊಂಡಂತಿದೆ. ಏನಕೇನ ಪ್ರಕಾರೇಣ, ಹತ್ತು ತಿಂಗಳು ಪ್ರಧಾನ ಮಂತ್ರಿಯಾಗಿ, ದೇಶದ ಆರ್ಥಿಕತೆಯನ್ನು ದುಸ್ಥಿತಿಗಿಳಿಸಿದ ದೇವೇಗೌಡರು ಈಗ ಮುಪ್ಪಿನ ಕಾರಣದಿಂದ ದೈಹಿಕವಾಗಿ ಕ್ಷೀಣರಾಗಿದ್ದರೂ ದೇಶವನ್ನು ದುರ್ಬಲಗೊಳಿಸಲು, ಶತಾಯ ಗತಾಯ ಲೋಕಸಭೆಯನ್ನು ಅತಂತ್ರಗೊಳಿಸಲು ತೃತೀಯ ರಂಗಕ್ಕೆ ಚಾಲನೆ ನೀಡಿದ್ದಾರೆ. ತೃತೀಯ ರಂಗದಲ್ಲಿ ಮೂರು ಜನ, ಚತುರ್ಥ ರಂಗದಲ್ಲಿ ಮೂರು ಜನ, ಪ್ರಧಾನಿ ಗದ್ದುಗೆಯ ಆಕಾಂಕ್ಷಿತರಿದ್ದಾರೆ. ಅದರಲ್ಲಿಯೂ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ ಎಂತಹ ಹಠದ ಸ್ವಭಾವದವರು ಎಂಬುದು ದೇಶದ ಜನರಿಗೆಲ್ಲಾ ಗೊತ್ತಿದೆ. ದುರದೃಷ್ಟವಶಾತ್ ಮಮತಾ ದೀದಿ ಪ್ರಧಾನ ಮಂತ್ರಿಯಾದರೆ ಕಲ್ಕತ್ತಾದಿಂದಲೇ ಆಡಳಿತ ನಡೆಸುವ ಪಟ್ಟು ಹಿಡಿಯಬಹುದು. ಜಯಲಲಿತಾ ಪ್ರಧಾನ ಮಂತ್ರಿಯಾದರೆ ದೆಹಲಿಯ ಎಲ್ಲಾ ದರ್ಬಾರು ಚೆನ್ನೈಗೆ ಏಕೆ ವರ್ಗಾವಣೆ ಆಗಬಾರದು ಎಂದು ಕೇಳಿದರೂ ಆಶ್ಚರ್ಯವಿಲ್ಲ. ಹಗರಣಗಳಿಂದಾಗಿ ಜೈಲಿನಲ್ಲಿರಬೇಕಾದ ಮುಲಾಯಂ ಸಿಂಗ್, ಕಾಂಗ್ರೆಸನ್ನು ಎದುರಿಸುತ್ತಾ ಸಿ.ಬಿ.ಐ. ಕುಣಿಕೆಯಿಂದ ಪಾರಾಗಿರುವುದು ತಿಳಿಯದ ವಿಷಯವೇನಲ್ಲ. ಉತ್ತರ ಪ್ರದೇಶದಲ್ಲಿ ಇವರ ಪುತ್ರ ನಡೆಸುತ್ತಿರುವ ಸರ್ಕಾರ ವೋಟ್ ಬ್ಯಾಂಕನ್ನು ಸೃಷ್ಟಿಸಲು ಹೋಗಿ, ಜಂಗಲ್ರಾಜ್ ಸರ್ಕಾರವೆಂದು ಕುಖ್ಯಾತಿಗೆ ಒಳಗಾಗಿದ್ದರೂ ಮುಲಾಯಂ ಮಾತ್ರ ತೂಕಡಿಸುತ್ತಾ ಪ್ರಧಾನಮಂತ್ರಿಯ ಕನಸನ್ನು ಕಾಣುತ್ತಿದ್ದಾರೆ.
ತತ್ವ ಸಿದ್ಧಾಂತಗಳಿಗೆಲ್ಲಾ ತಿಲಾಂಜಲಿ ಕೊಟ್ಟು ಕಾಂಗ್ರೆಸ್ ಬೆಂಬಲದಿಂದ ತನ್ನ ಸರ್ಕಾರವನ್ನು ಉಸಿರಾಡಿಸುವಂತೆ ಮಾಡಿರುವ ನಿತೀಶರಿಗೆ ಕಾಂಗ್ರೆಸ್ರಹಿತ ಕೇಂದ್ರ ಸರ್ಕಾರವನ್ನು ರಚಿಸಿ ಪ್ರಧಾನ ಮಂತ್ರಿಯಾಗುವುದು ಈ ಜನ್ಮದಲ್ಲಿಯೇ ಸಾಧ್ಯವಾಗದ ಮಾತು. ಇಂತಹವರೆಲ್ಲ ಅದಾವ ಮುಖ ಇಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತಾರೆ? ಹೌದು, ಅವರಿಗೆ ಈ ಶಕ್ತಿಯನ್ನು ತಂದು ಕೊಟ್ಟವರು ನಾವೇ. ಜಾತಿ, ಧರ್ಮ, ಭಾಷೆ, ಹಣ, ಹೆಂಡ, ಬಟ್ಟೆ, ನೌಕರಿಯ ಆಸೆ ಮುಂತಾದ ಕೀಳು ಬಯಕೆಗಳಿಂದಾಗಿ ನಾವು ಮೊದಲು ತತ್ವ ಸಿದ್ಧಾಂತಗಳನ್ನು ಬಲಿ ಕೊಡುತ್ತಿದ್ದೇವೆ. ಎಲ್ಲಿಯತನಕ ಮತದಾರರಲ್ಲಿ ರಾಷ್ಟ್ರಪ್ರಜ್ಞೆ, ನೈತಿಕ ಪ್ರಜ್ಞೆ ಜಾಗೃತವಾಗುವುದಿಲ್ಲವೋ, ಅಲ್ಲಿಯತನಕ ಸಮಯ ಸಾಧಕ, ಅವಕಾಶವಾದಿ ರಾಜಕಾರಣಿಗಳಿಗೆ ಹಬ್ಬವೋ ಹಬ್ಬ.
ಪ್ರಾದೇಶಿಕತೆಯ ವಿಷ ಬೀಜ ಬಿತ್ತಿ, ಜಾತೀಯತೆಯ ಗೊಬ್ಬರ ಹಾಕಿ ನೀರಿನ ಬದಲಾಗಿ ಹೆಂಡವನ್ನು ಎರೆದು ಕೋಮು ದಳ್ಳುರಿಯಲ್ಲಿ ಸ್ವಾರ್ಥದ ವಿಷ ವೃಕ್ಷಗಳನ್ನು ಬೆಳೆಯಲು ಹೊರಟಿರುವ ಕೀಳು ಮನೋಭಾದವರ ಕೆಲವು ರಾಜಕಾರಣಿಗಳ ಕುತಂತ್ರಕ್ಕೆ ಭಾರತಮಾತೆಯೇ ಕೃಶಳಾಗಿ ಪರಕೀಯರ ದಾಳಿಗೆ ತುತ್ತಾಗುವ ಭೀತಿಯಿಂದ ನಡುಗುತ್ತಿದ್ದಾಳೆ. ಪಕ್ಕದ ಚೀನಾ, ದಿನಕ್ಕೊಂದು ಕುತಂತ್ರದ ಆಲೋಚನೆ ಮಾಡುತ್ತಾ, ಪಾಕಿಸ್ತಾನ, ಬರ್ಮಾ, ಶ್ರೀಲಂಕಾಗಳಲ್ಲಿ ತನ್ನ ಯುದ್ಧ ನೆಲೆಗಳನ್ನು ಸ್ಥಾಪಿಸುತ್ತಾ ಹೊರಟಿದೆ. ಇವೆಲ್ಲವನ್ನೂ ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ಅಧಿಕಾರಾಂಧರಾಗಿರುವ ತೃತೀಯ ರಂಗದವರನ್ನು ಮಟ್ಟ ಹಾಕುವ ಕೆಲಸ ಮತದಾರರಿಂದ ಬಿಟ್ಟು ಮತ್ತಾರಿಂದಲೂ ಸಾಧ್ಯವಿಲ್ಲ.
ಇನ್ನು ಲೆಕ್ಕವಿಲ್ಲದಷ್ಟು ಲಕ್ಷ ಕೋಟಿ ಹಗರಣಗಳನ್ನು ಮಾಡಿ, ಭಾರತ ಮಾತೆಯ ರಕ್ತ ಹೀರಿರುವ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ಗಾಂಧಿ ಒಡಿಶಾದಲ್ಲಿ ಮಾತನಾಡುತ್ತಾ, "ನಮ್ಮ ಶಿಕ್ಷಣ ಪದ್ಧತಿಯೇ ಚೆನ್ನಾಗಿಲ್ಲ. ಇದನ್ನು ಬದಲಾಯಿಸುವ ಇಚ್ಛಾಶಕ್ತಿ, ರಾಜಕಾರಣಿಗಳಿಗಿಲ್ಲ" ಎಂದು ಮಾತು ಉದುರಿಸಿದ್ದಾರೆ. ಇದನ್ನು ಯಾರು ನಂಬಬೇಕು? 60 ವರ್ಷಗಳಿಂದ ಆಡಳಿತ ನಡೆಸಿರುವ ನಿಮ್ಮ ಮುತ್ತಾತನಿಂದ ಹಿಡಿದು ನಿಮ್ಮ ಪ್ರೀತಿಯ ಅಮ್ಮನವರೆಗೆ ಯಾರಿಗೂ ಇಚ್ಛಾಶಕ್ತಿ ಇಲ್ಲದ ಮೇಲೆ ಮತ್ತೇಕೆ ಇನ್ನೊಂದು ಅವಧಿಗಾಗಿ ಗದ್ದುಗೆ ಹಿಡಿಯ ಬಯಸಿದ್ದೀರಿ? ನೈತಿಕ ಜವಾಬ್ದಾರಿ ಹೊತ್ತು ಯೋಗ್ಯರಿಗೆ, ಅನುಭವಿಗಳಿಗೆ ಆಡಳಿತ ನಡೆಸಲು ಬಿಟ್ಟು ಕೊಡಿ. ಬಿಟ್ಟು ಕೊಡುವ ಮನಸ್ಸಿಲ್ಲದಿದ್ದರೆ ಪರವಾಗಿಲ್ಲ. ಮುಗ್ಧ ಮತದಾರರಲ್ಲಿ ದ್ವೇಷದ ವಿಷ ಬೀಜಗಳನ್ನು ಬಿತ್ತುವುದನ್ನಾದರೂ ನಿಲ್ಲಿಸಿ. ಚುನಾವಣಾ ಆಯೋಗ ವಿಧಿಸುವ ನಿಯಮಗಳಿಗನುಸಾರವಾಗಿಯಾದರೂ ಚುನಾವಣೆ ನಡೆಸಲು ಅವಕಾಶ ಕೊಡಿ. ಆಗ ಜನರೇ ನಿಮ್ಮನ್ನು ಇಳಿಸಿ ಯೋಗ್ಯರಿಗೆ ಅವಕಾಶ ಮಾಡಿಕೊಡುತ್ತಾರೆ. ಕೊನೆಯದಾಗಿ ಕೇಜ್ರಿವಾಲರ ವಿಕ್ಷಿಪ್ತತೆಯ ಬಗ್ಗೆ ಏನು ಹೇಳುವುದು? ಸಣ್ಣ ಮಕ್ಕಳು ರಚ್ಚೆ ಹಿಡಿದಂತೆ ತಾನು ಅಂದುಕೊಂಡದ್ದೇ ಸತ್ಯ, ತನ್ನ ಮನಸ್ಸಿಗೆ ಬಂದದ್ದೇ ಸಂವಿಧಾನ ನಿಯಮ ಎಂದುಕೊಂಡು ದಿಲ್ಲಿಯ ಜನರನ್ನು ಭ್ರಮನಿರಸನಗೊಳಿಸಿದ್ದಾರೆ. ಜನ ಲೋಕಪಾಲ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದರೆ ಏನು ತೊಂದರೆ? ಅದು ಬಿಟ್ಟು ಹೊರಗೆ ಮೈದಾನದಲ್ಲಿಯೇ ಅಂಗೀಕರಿಸಬೇಕೆಂಬ ಹುಚ್ಚು ಏಕೆ? ಈಗಾಗಲೇ ಜನತಾ ದರ್ಬಾರ್, ತುಘಲಕ್ ದರ್ಬಾರನ್ನು ನಾಚಿಸುವಂತೆ ನಡೆದು, ಪೊಲೀಸರನ್ನೆಲ್ಲಾ ಸುಸ್ತುಗೊಳಿಸಿರುವಾಗ ಮಸೂದೆಯನ್ನು ಹೊರೆಗೆ ಅಂಗೀಕರಿಸಲು ಹಠ ಹಿಡಿದು ಪೊಲೀಸರಿಂದ ಕಾನೂನು ಸುವ್ಯವಸ್ಥೆ ಸಾಧ್ಯವಾಗದಿದ್ದರೆ, ಪ್ಯಾರಾ ಮಿಲಿಟರಿಯನ್ನು ಕಳಿಸಿಕೊಡಿ ಎಂದು ಕೇಳುವ ಕೇಜ್ರಿವಾಲರನ್ನು ತುಘಲಕ್ಗೆ ಹೋಲಿಸದೆ ಮತ್ಯಾರಿಗೆ ಹೋಲಿಸಬಹುದು ನೀವೇ ಹೇಳಿ? ಇವರೆಲ್ಲಾ ಸೇರಿ ದೇಶವನ್ನು ಏನು ಮಾಡಲು ಹೊರಟಿದ್ದಾರೆ?
ಮತದಾರರು ಈ ಸಂದರ್ಭದಲ್ಲಿ ಮಂಪರಿಗೆ ಒಳಗಾಗಬಾರದು. ಜಾಗೃತರಾಗಿ ರಾಜಕಾರಣಿಗಳ ಈ ಕೀಳು ಪ್ರವೃತ್ತಿಗೆ ಮಣೆ ಹಾಕದೆ ಅವರು ಕೊಡುವ ಪುಡಿಗಾಸಿಗೆ ಆಸೆ ಮಾಡದೆ, ಸದೃಢ, ಸುಸ್ಥಿರ ಸರ್ಕಾರವನ್ನು ಸ್ಥಾಪಿಸುವತ್ತ ಕಂಕಣಬದ್ಧರಾಗಬೇಕು. ಪ್ರಾದೇಶಿಕ ಪಕ್ಷಗಳ ಸಂಕುಚಿತ ಮನೋಭಾವನೆಗೆ ಒಳಗಾಗದೆ ರಾಷ್ಟ್ರೀಯ ವಿಚಾರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಹಾ ಚುನಾವಣೆಯಲ್ಲಿ ಭಾಗವಹಿಸಬೇಕು. ವಿದ್ಯಾವಂತರು, ಸರ್ಕಾರಿ ನೌಕರರು ಚುನಾವಣೆಯ ರಜವನ್ನು ಮೋಜಿನಲ್ಲಿ ಕಳೆಯದೇ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು. ಈ ಬಾರಿ ಶೇ. 85ಕ್ಕಿಂತಲೂ ಹೆಚ್ಚು ಮತದಾನವಾದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಯಿತೆಂದು ಭಾವಿಸಬೇಕು. ಇಲ್ಲವಾದರೆ ನಾಳಿನ ಭವಿಷ್ಯ ಕರಾಳವಾಗಿದೆ. ನೀವು ಪ್ರೀತಿಯಿಂದ ಸಾಕುತ್ತಿರುವ ನಿಮ್ಮ ಮಕ್ಕಳಿಗೆ ಶುದ್ಧ ಕುಡಿಯುವ ನೀರೂ ಸಿಗದಂತಾಗಬಹುದು. ರಾಜಕೀಯ ದುರವಸ್ಥೆ ಎಲ್ಲಾ ರಂಗಗಳಲ್ಲಿಯೂ ದುರವಸ್ಥೆಯನ್ನು ತರಬಹುದು. ಈ ಕಾರಣದಿಂದ ಸಿನಿಕರಾಗಿ ಕುಳಿತಿರುವ ಎಲ್ಲಾ ಧರ್ಮದ ಮುಖಂಡರುಗಳು ಮತದಾನದಲ್ಲಿ ಭಾಗವಹಿಸುವುದರ ಜೊತೆಗೆ ತಮ್ಮ ಅನುಯಾಯಿಗಳಿಗೆ ಮತದಾನವನ್ನು ಮಾಡುವಂತೆ ಪ್ರೇರೇಪಿಸಬೇಕು. ಆ ಮೂಲಕ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ದೇಶ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಬೇಕು.
- ಶ್ರೀ ಬಸವಾನಂದ ಸ್ವಾಮಿಗಳು
ಮೊಬೈಲ್-9449227799
gljbcp@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


