ಇತಿಹಾಸವೇನೋ ಮರುಕಳಿಸಲಿದೆ, ಭಾರತ ಹೇಗೆ ಮೆರೆಯಲಿದೆ?

ಇತಿಹಾಸ ಸೃಷ್ಟಿ ಎಂಬುದು ತೂಕದ ಪದಪುಂಜವೇ ಹೌದು. ಒಂದು ಬಹುದೊಡ್ಡ...
ಇತಿಹಾಸವೇನೋ ಮರುಕಳಿಸಲಿದೆ, ಭಾರತ ಹೇಗೆ ಮೆರೆಯಲಿದೆ?
Updated on: 

ಇತಿಹಾಸ ಸೃಷ್ಟಿ ಎಂಬುದು ತೂಕದ ಪದಪುಂಜವೇ ಹೌದು. ಒಂದು ಬಹುದೊಡ್ಡ ಸಮೂಹ ಒಟ್ಟಾಗಿ ಸಂಚಲನ ಸೃಷ್ಟಿಸಿದಾಗ ಮಾತ್ರವೇ 'ಚರಿತ್ರೆಯ ನಿರ್ಮಾಣ' ಎಂಬಂಥದ್ದೇನೋ ಘಟಿಸುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಹೀಗಾಗಿಯೇ, 'ಇಪ್ಪತ್ತೊಂದನೇ ಶತಮಾನ ಭಾರತಕ್ಕೆ ಸೇರಿದ್ದು' ಅಂತ ಭಾಷಣಗಳಲ್ಲಿ ಕೇಳಿದಾಗ ಆ ಕ್ಷಣಕ್ಕೆ ರೋಮಾಂಚನವಾದರೂ ಮರುಕ್ಷಣದಲ್ಲಿ ದೇಶದ ನಕಾರಾತ್ಮಕ ಅಂಶಗಳೆಲ್ಲ ಕಣ್ಮುಂದೆ ಕುಣಿಯುವುದಕ್ಕೆ ಶುರುವಾಗಿ 'ಇವೆಲ್ಲ ಆಗುವ ಹೋಗುವ ಮಾತಾ' ಎಂಬ ಸಿನಿಕತೆ ಆವರಿಸುತ್ತದೆ.
ಆದರೆ ಈ ಚರಿತ್ರೆಗೆ ಮತ್ತೊಂದು ಮಜದ ಆಯಾಮವಿದೆ. ಒಂದಿಡೀ ದೇಶ ಬದಲಾವಣೆಗೆ ಸಿದ್ಧವಾಗಿದೆಯೋ ಇಲ್ಲವೋ ಎಂದೇನೂ ಕಾಯುತ್ತ ಕೂರದ ಇತಿಹಾಸ, ಚಕ್ಕನೇ ಮೈಲಿಗಲ್ಲೊಂದನ್ನು ನೆಟ್ಟುಬಿಡುತ್ತದೆ. ಇದನ್ನು ನಿಚ್ಚಳವಾಗಿಸಿಕೊಳ್ಳಬೇಕೆಂದರೆ ನಮ್ಮ ದೇಶವನ್ನೇ ಉದಾಹರಿಸಿಕೊಳ್ಳಬಹುದು. ಬ್ರಿಟೀಷರು ಭಾರತವನ್ನು ಇನ್ನೂರು ವರ್ಷಗಳ ಕಾಲ ಆಳಿದರು ಎನ್ನುತ್ತೇವೆ. ಅವರು ಆಳಿದ ನಮೂನೆಯಾದರೂ ಯಾವುದು? ಜಿಲ್ಲೆ- ತಾಲೂಕುಗಳಲ್ಲೆಲ್ಲ ಇಂಗ್ಲಿಷ್ ಅಧಿಕಾರಿಗಳು ಬಂದು ಟಿಕಾಯಿಸಿಕೊಂಡಿದ್ದರೇ? ಹಾಗೇನೂ ಇಲ್ಲ. ನಮ್ಮದೇ ಪೊಲೀಸ್ ಪಡೆ, ಈ ದೇಶದ್ದೇ ಶ್ರಮಿಕ ಜನವರ್ಗ. ಆದರೆ ಈಸ್ಟ್ ಇಂಡಿಯಾ ಕಂಪನಿ ರೂಪದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಭಾಗವಾಗಿದ್ದ ಕೆಲವೇ ಕೆಲವರು ಆಯಕಟ್ಟಿನ ಜಾಗದಲ್ಲಿದ್ದರು. ಅಲ್ಲಿಗೆ ಭಾರತ ಪರಕೀಯವಾಯಿತು, ಇತಿಹಾಸದ ಕಡತ ತನ್ನೊಳಗೆ ಏನೆಲ್ಲ ವಿವರಗಳನ್ನು ತುಂಬಿಸಿಕೊಂಡಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಅದರ ಜನಸಂಖ್ಯೆ 35 ಕೋಟಿ. ಈ ಮೂವತ್ತೈದು ಕೋಟಿಯನ್ನು ತಮ್ಮ ಅಂಕೆಯೊಳಗಿಟ್ಟುಕೊಂಡ ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರಿಗಳು ಅಬ್ಬಬ್ಬಾ ಎಂದರೆ ಎಷ್ಟಿರಬಹುದು? ಕೆಲವು ಸಾವಿರ, ಹೆಚ್ಚೆಂದರೆ ಲಕ್ಷ. ಜಗತ್ತಿನ ಬಹುತೇಕ ಭಾಗಗಳಲ್ಲಿ ತಮ್ಮ ವಸಾಹತುಶಾಹಿ ಸಾಮ್ರಾಜ್ಯದ ವ್ಯಾಪ್ತಿಯನ್ನೂ ಆ ವ್ಯವಸ್ಥೆಯ ಪ್ರತಿನಿಧಿಗಳನ್ನೂ ಹೊಂದಿದ್ದ ಇಂಗ್ಲಿಷರು ತಮ್ಮದು 'ಸೂರ್ಯ ಮುಳುಗದ ಸಾಮ್ರಾಜ್ಯ' ಎಂದು ಜಂಬ ತೋರಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಕೊನೆಗೊಮ್ಮೆ ಅವರ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗಿದ.
ಆದರೆ ಸಾಮ್ರಾಜ್ಯಗಳ ಕಥಾನಕಕ್ಕೆ ಯಾವತ್ತೂ ಪೂರ್ಣವಿರಾಮವಿಲ್ಲ. ಅವು ಒಂದು ಶಕ್ತಿಕೇಂದ್ರದಿಂದ ಇನ್ನೊಂದರತ್ತ ವಾಲುತ್ತವೆ ಅಷ್ಟೆ. ವಸಾಹತುಶಾಹಿ ಎಂದು ಕರೆಯುತ್ತಿದ್ದ ಅದನ್ನು ಉದ್ಯಮ ಸಾಮ್ರಾಜ್ಯ, ಬಂಡವಾಳಶಾಹಿ ಎಂಬ ಶಬ್ದಗಳಿಂದ ಗುರುತಿಸಲಾಗುತ್ತಿದೆ. ಇದರ ಕೇಂದ್ರಭಾಗದಲ್ಲಿ ಅಮೆರಿಕವು ಪ್ರತಿಷ್ಠಾಪನೆಗೊಂಡು, ಇನ್ನೊಂದೆಡೆ ಚೀನಾ ಪೈಪೋಟಿ ಒಡ್ಡುತ್ತಿರುವುದು ಮೇಲ್ಮೇಲಿನ ಚಿತ್ರಣವಾದರೂ ಆಂತರ್ಯದಲ್ಲಿ ಇದೊಂದು ಗಡಿಗಳಿಲ್ಲದ ವ್ಯವಸ್ಥೆ. ಹೀಗೆ ಗೆರೆಗಳು ಮುಸುಕಾಗಿರುವ ಜಾಗದಲ್ಲಿ ಭಾರತದ್ದೆನ್ನಬಹುದಾದ ಪಡಿಯಚ್ಚುಗಳು ವ್ಯಾಪಕವಾಗಿ ಆವರಿಸಿಕೊಳ್ಳುತ್ತ ಭವಿಷ್ಯದ ಬಗ್ಗೆ ಕುತೂಹಲವೊಂದನ್ನು ಗರಿಗೆದರಿಸಿಬಿಟ್ಟಿವೆ.
ಮೊನ್ನೆ ಹೈದರಾಬಾದ್ ಮೂಲದ ಸತ್ಯ ನಾದೆಲ್ಲ ಮೈಕ್ರೊಸಾಫ್ಟ್‌ನಂಥ ದೈತ್ಯ ಜಾಗತಿಕ ಕಂಪನಿಯ ಸಿಇಒ ಹುದ್ದೆ ಅಲಂಕರಿಸಿದಾಗ ಭಾರತ ಅದನ್ನು ತನ್ನದೇ ಸಾಧನೆ ಎಂಬಂತೆ ಪುಳಕಗೊಂಡಿದ್ದು ಸುಳ್ಳಲ್ಲ. ನಾದೆಲ್ಲ ಹೋಗಿ ಮೈಕ್ರೊಸಾಫ್ಟ್‌ನ ಆಯಕಟ್ಟಿನ ಹುದ್ದೆಯಲ್ಲಿ ಕುಳಿತರೆ ಭಾರತಕ್ಕೆ ಬಂದ ಭಾಗ್ಯವೇನು ಅಂತ ಕೇಳಬಹುದು. ಭಾರತೀಯ ಮೂಲದವ ಅದರ ಮುಖ್ಯಸ್ಥನಾದ ಮಾತ್ರಕ್ಕೆ ಮೈಕ್ರೊಸಾಫ್ಟ್‌ನ ಉತ್ಪನ್ನಗಳು ನಮಗೋಸ್ಕರ ಸೋವಿಗೆ ಸಿಕ್ಕುಬಿಡುತ್ತದೆಯೇ ಎಂಬುದೂ ತೀರ ವಾಸ್ತವದ ಪ್ರಶ್ನೆಯೇ ಆಗುತ್ತದೆ. ಇವೆಲ್ಲದರ ಹೊರತಾಗಿಯೂ ಇಂಥ ವಿದ್ಯಮಾನಗಳು ಯುವ ಭಾರತಕ್ಕೆ ದೊಡ್ಡದೊಂದು ಸ್ಫೂರ್ತಿಯನ್ನು ಕಟ್ಟಿಕೊಡುತ್ತಿವೆ ಹಾಗೂ ಭವಿಷ್ಯದ ಟ್ರೆಂಡ್ ಒಂದಕ್ಕೆ ಇದು ದಿಕ್ಸೂಚಿಯಾಗಿದೆ ಎಂಬುದನ್ನು ಮಾತ್ರ ಸಾವಧಾನದಿಂದ ಗಮನಿಸಬೇಕು. ಭಾರತದ ಕಾಲೇಜು, ಇಲ್ಲಿನ ಪರಿಸರದಲ್ಲಿ ಓದಿಕೊಂಡು ಹೋದವರೂ ಪರಿಶ್ರಮ- ಕೌಶಲಗಳನ್ನು ಜತೆಗಿಟ್ಟುಕೊಂಡರೆ ಜಾಗತಿಕ ಕಂಪನಿಗಳನ್ನು ಮುನ್ನಡೆಸಬಹುದು, ಅಂಥ ಸಾಮರ್ಥ್ಯ ನಮ್ಮಲ್ಲಿದೆ ಎಂಬ ಸಂದೇಶವನ್ನಷ್ಟೇ ಇಲ್ಲಿಂದ ಎತ್ತಿಕೊಂಡರೆ ಸಾಕು. ಉಳಿದ ಚೌಕಾಶಿಗಳನ್ನು ಆಮೇಲೆ ಮಾಡಿದರಾಯಿತು. ಹಾಗೆಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬದುಕು ಕಟ್ಟಿಕೊಂಡಿರುವ ನಮ್ಮವರೇ ಖಡಾಖಡಿಯಾಗಿ ಹೇಳುವ ಮಾತು- ಭವಿಷ್ಯದ ಟ್ರೆಂಡ್‌ನಲ್ಲಿ ಪಶ್ಚಿಮದ ಜನಾಂಗವು ಭಾರತೀಯ ಬಾಸ್‌ಗಳ ಆಣತಿಯಂತೆ ಕೆಲಸ ಮಾಡುವುದು ಅನಿವಾರ್ಯವಾಗಲಿದೆ. ನಾದೆಲ್ಲ ಕಣ್ಣಿಗೆ ರಾಚುವ ಪ್ರಸ್ತುತದ ಉದಾಹರಣೆಯಾದರೂ ಭಾರತೀಯ ಬಾಸ್‌ಗಳ ಜಮಾನಾ ಅದಾಗಲೇ ಶುರುವಾಗಿಬಿಟ್ಟಿರುವುದರ ಸೂಚನೆಗಳು ಸ್ಪಷ್ಟವಾಗಿವೆ. ಮೂಲತಃ ವ್ಯವಸ್ಥೆ ಪಾಶ್ಚಾತ್ಯ ಉದ್ಯಮ ದೊರೆಗಳದ್ದೇ ಆಗಿ ಉಳಿದರೂ ಆ ಸಾಮ್ರಾಜ್ಯ ನಿರ್ವಹಣೆಯನ್ನು ಭರತ ಭೂಮಿಯಿಂದ ಪುಟಿದೆದ್ದು ಬರುತ್ತಿರುವ ಯುವಬಾಹುಗಳ ತೆಕ್ಕೆಗೆ ಬಿಡುವುದು ಅವರಿಗೂ ಅಗತ್ಯ ಮತ್ತು ಅನಿವಾರ್ಯ ಎನಿಸುವ ದಿನಗಳು ಹತ್ತಿರವಾದಂತೆ ತೋರುತ್ತಿದೆ. ಅಲ್ಲಿಗೆ ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಕ್ಲೀಷೆಯದ್ದಾದರೂ ಭಾರತದ ಪಾಲಿಗೆ ಆಪ್ತವೇ. ಬ್ರಿಟನ್ ಮೂಲದ ದೈತ್ಯ ಬಹುರಾಷ್ಟ್ರೀಯ ಕಂಪನಿ ವೊಡಾಫೋನ್‌ನ ಸಿಇಒ ಆಗಿ 2003-2008ರ ಅವಧಿಗೆ ಅನನ್ಯವಾಗಿ ಮುನ್ನಡೆಸಿದ ಹೆಗ್ಗಳಿಕೆ ಭಾರತೀಯ ಮೂಲದ ಅರುಣ್ ಸರಿನ್ ಹೆಸರಿಗಿದೆ. ಖರಗಪುರದ ಐಐಟಿಯಲ್ಲಿ ಪದವಿ ಪಡೆದಿದ್ದ ಮಧ್ಯಪ್ರದೇಶದ ವ್ಯಕ್ತಿ ಅರುಣ್. ಮೊಟೊರೊಲಾದ ಉನ್ನತ ಹುದ್ದೆಯಲ್ಲಿದ್ದು ಈಗ 'ಸಿಸ್ಕೊ'ದ ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಮುಖ್ಯಸ್ಥೆ ಆಗಿರುವ ಪದ್ಮಶ್ರೀ ವಾರಿಯರ್ ಆಂಧ್ರದ ವಿಜಯವಾಡದ ಮಹಿಳೆ. ಓದಿದ್ದು ದೆಹಲಿಯ ಐಐಟಿಯಲ್ಲಿ. ಹಳ್ಳಿಮೂಲೆಯನ್ನೂ ಆಕ್ರಮಿಸಿರುವ 'ಪೆಪ್ಸಿಕೊ'ವನ್ನು 2006ರಿಂದ ಮುನ್ನಡೆಸುತ್ತಿರುವವರು ತಮಿಳುನಾಡಿನಿಂದ ಹೋದ ಇಂದಿರಾ ನೂಯಿ ಎಂಬುದು ಹೆಚ್ಚಿನವರಿಗೆ ತಿಳಿದಿರುವ ಸಂಗತಿಯೇ. ದೆಹಲಿಯ ಶ್ರೀರಾಂ ಕಾಲೇಜಿನಲ್ಲಿ ಅರ್ಥಶಾಸ್ತ್ರ ಓದಿದ ಅನ್ಷುಮಾನ್ ಜೈನ್ ಅವರಿಗೆ ಜರ್ಮನ್ ದೊಯ್ಚ್ ಬ್ಯಾಂಕ್‌ನ ಕೊ-ಸಿಇಒ ಆಗುವುದು ಸಾಧ್ಯವಾಗಿದೆ ಎಂಬುದು ಅವರ ವೈಯಕ್ತಿಕ ಸಾಮರ್ಥ್ಯವೇ ಆಗಬಹುದಾದರೂ ಭಾರತೀಯರ ಸಾಧನೆಗಳ ಸಾಧ್ಯತೆಯನ್ನೂ ತೆರೆದಿಡುತ್ತದೆ. ಮಾಸ್ಟರ್‌ಕಾರ್ಡ್‌ನ ಸಿಇಒ ಅಜಯ್ ಬಂಗಾ, ಅಬೋಡ್ ಸಿಸ್ಟಮ್‌ನ ಸಿಇಒ ಶಾಂತನು ನಾರಾಯಣ್, ನಮಗೆಲ್ಲ ಚಿರಪರಿಚಿತ ಉತ್ಪನ್ನಗಳಾದ ಹಾರ್ಪಿಕ್, ಮಾರ್ಟಿನ್, ಡೆಟ್ಟಾಲ್‌ನಂಥವುಗಳ ಉತ್ಪಾದನಾ ಕಂಪನಿ ಇಂಗ್ಲೆಂಡ್ ಮೂಲದ ರೆಕಿಟ್ ಬೆಂಕೈಸರ್‌ನ ಸಿಇಒ ರಾಕೇಶ್ ಕಪೂರ್... ಹೀಗೆಲ್ಲ ಭಾರತದಿಂದ ಚಿಮ್ಮಿದ ಬೆಳಕುಗಳನ್ನು ಪಟ್ಟಿ ಮಾಡುತ್ತ ಹೋಗಬಹುದು.
ಮುಂಬರುವ ದಿನಗಳಲ್ಲಿ ಈ ಟ್ರೆಂಡ್ ಇನ್ನೂ ಗಟ್ಟಿಯಾಗುತ್ತ, ಪಾಶ್ಚಾತ್ಯ ದೇಶಗಳ ಉದ್ಯೋಗ ವಲಯದಲ್ಲಿ ಭಾರತೀಯ ಬಾಸ್‌ಗಳು ಅನಿವಾರ್ಯ ಹಾಗೂ ಅತಿಸಹಜರಾಗುತ್ತಾರೆ ಎಂಬುದಕ್ಕೆ ಬಾರ್ಸಿಲೋನಾ ನಿವಾಸಿ ರಂಗಸ್ವಾಮಿ ಮೂಕನಹಳ್ಳಿಯವರು ಕೆಲ ಕಾರಣಗಳನ್ನು ಒದಗಿಸಿದರು. ಜನ ಸಂಪನ್ಮೂಲ ಅದರಲ್ಲೂ ಯುವಶಕ್ತಿಯನ್ನು ಮುಂದಿನ ದಿನಗಳಲ್ಲಿ ಪೂರೈಸಲಿರುವ ಪ್ರಮುಖ ರಾಷ್ಟ್ರಗಳೆಂದರೆ ಭಾರತ ಮತ್ತು ಚೀನಾ. ಚೀನಾದ ಉದ್ಯಮಶೀಲತೆ ಅತ್ಯಂತ ಪ್ರಖರವಾಗಿಯೇ ಇರುವುದು ಹೌದಾದರೂ ಭಾರತದ ಯುವಜನ ಇಂಗ್ಲಿಷಿನ ವಿಷಯದಲ್ಲಿ ಅವರನ್ನು ಹಣಿದುಬಿಡುತ್ತಾರೆ. ಅಭಿವೃದ್ಧಿಯಲ್ಲಿ ಖುದ್ದು ದಾಪುಗಾಲಿಕ್ಕುತ್ತಿದ್ದರೂ ಜಾಗತಿಕ ಗಂಧವನ್ನು ತನ್ನೊಳಗೆ ಬಿಟ್ಟುಕೊಳ್ಳದೇ ಪ್ರತಿಯೊಂದರಲ್ಲೂ ತನ್ನದೇ ಪರ್ಯಾಯ ವ್ಯವಸ್ಥೆ ಹುಟ್ಟುಹಾಕುತ್ತಿರುವ ಚೀನಾಕ್ಕೆ ತನ್ನ ಮಂದಿಯನ್ನು ವಿಶ್ವ ಭೂಮಿಕೆಯ ಹೊಂದಾಣಿಕೆಗಳಿಗೆ ಒಗ್ಗುವಂತೆ ಮಾಡುವುದು ಕಷ್ಟವಾಗಬಹುದು. ಭಾರತದ ಹುಡುಗ-ಹುಡುಗಿಯರಿಗೆ ಅಂಥ ಕಷ್ಟಗಳಿಲ್ಲ. 'ವೂಲ್ಫ್ ಆಫ್ ವಾಲ್‌ಸ್ಟ್ರೀಟ್‌' ಚಿತ್ರ ಅಮೆರಿಕದಲ್ಲಿ ಬಿಡುಗಡೆಯಾದ ಕೆಲದಿನಗಳಲ್ಲೇ ಇಲ್ಲಿ ಇಂಟರ್‌ನೆಟ್‌ನಲ್ಲಿ ಇಳಿಸಿಕೊಂಡು ಸವಿಯುವ ಪ್ರಚಂಡರು ನಾವು! ಪಾಶ್ಚಾತ್ಯ ದೇಶಗಳ ಈ ಹಿಂದಿನ ಶತಮಾನಗಳ ಸಾಧನೆ ಏನೇ ಇದ್ದರೂ ಈಗ ಅಲ್ಲಿನ ಯುವ ಜನಾಂಗವು ಮುಕ್ತ ಸಮಾಜದ ಸೆಕ್ಸ್, ಡ್ರಗ್ಸ್ ಇನ್ನಿತರ ಮೋಜುಗಳಿಗೇ ಹೆಚ್ಚು ಆಕರ್ಷಿತವಾಗುತ್ತಿದೆ. ನರ್ಸರಿಯಲ್ಲಿ ಸೀಟು ಗಿಟ್ಟಿಸುವುದರಿಂದ ಹಿಡಿದು ಎಲ್ಲದರಲ್ಲೂ ಸ್ಪರ್ಧೆಯಲ್ಲೇ ಈಜಾಡಿ ಜಗತ್ತಿನ ಹೊಸ್ತಿಲಿಗೆ ಎಡತಾಕುವ ಭಾರತದ ವೀರಪುತ್ರ/ಪುತ್ರಿಯರು, ಮುಂದಿನ ದಿನಗಳಲ್ಲಿ ಉಳಿದ ದೇಶದ ಯುವಕರನ್ನು ಅವರದೇ ನೆಲದಲ್ಲಿ ನಿರುದ್ಯೋಗಿಗಳನ್ನಾಗಿಸುವ ಸಂಗತಿ ಸಹ್ಯವೋ ಅಲ್ಲವೋ, ಹಾಗಾಗುವುದಂತೂ ಪಕ್ಕಾ ಎನಿಸುತ್ತಿದೆ. ಉದ್ಯಮ ಬೆಳಗುತ್ತದೆ ಅಂತಾದರೆ ಜಾತಿ- ನೆಂಟಸ್ತನ ನೋಡದೇ ಅರ್ಹರಿಗೆ ಮಣೆ ಹಾಕುವ ಪಾಶ್ಚಾತ್ಯರ ಧೋರಣೆಗೂ ಥ್ಯಾಂಕ್ಸ್ ಹೇಳಬೇಕಾಗುತ್ತದೆ.
ಕೇವಲ ಆರೇ ದಶಕಗಳಲ್ಲಿ ಕಾಲಚಕ್ರ ಅದೆಂಥ ಜೋರಿನಲ್ಲಿ ಉರುಳಿಬಿಟ್ಟಿದೆಯೆಂದರೆ, ನಾವು ಭಾರತವನ್ನು ಆಕ್ರಮಿಸಿದ್ದೆವು ಅಂತ ಇಂಗ್ಲೆಂಡ್‌ನವರು ಕೊಚ್ಚಿಕೊಳ್ಳುವಂತೆಯೂ ಇಲ್ಲ. ಏಕೆಂದರೆ ಭಾರತೀಯ ಮೂಲದ ವ್ಯಾಪಾರಸ್ಥರು ಅದರಲ್ಲೂ ಪಂಜಾಬಿಗಳು ಆ ಸಮಾಜವನ್ನು ತಮ್ಮ ವಹಿವಾಟಿನ ಮೂಲಕ ಗಣನೀಯವಾಗಿ ಆಕ್ರಮಿಸಿಕೊಂಡುಬಿಟ್ಟಿದ್ದಾರೆ! ಅಲ್ಲಿನ ವರ್ಕ್‌ಫೋರ್ಸ್‌ನಲ್ಲಿ ಭಾರತೀಯರ ದರ್ಬಾರೂ ಜೋರಾಗಿಯೇ ಇದೆ.
ಶ್ರೀಶ್ರೀಶ್ರೀ
ಇದೆಲ್ಲ ಸರಿ. ಆದರೆ ಭಾರತದ ಯುವಶಕ್ತಿ ಜಾಗತಿಕ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯುವುದರಿಂದ ಅಂಥ ಹೆಮ್ಮೆಯ ಹೊರತಾಗಿ ಭಾರತಕ್ಕೇನಾಗಲಿದೆ? ಇದಕ್ಕೆ ಉತ್ತರವನ್ನು ಈ ದೇಶ ಕಂಡುಕೊಳ್ಳಬೇಕು. ಜಾಗತಿಕವಾಗಿ ಲಭಿಸುತ್ತಿರುವ ಅವಕಾಶಗಳನ್ನು ಈ ನೆಲವೂ ಒದಗಿಸುವುದಾದರೆ ಯುವಶಕ್ತಿಯ ವಿರಾಟ್‌ರೂಪ ಇಲ್ಲೂ ಪ್ರದರ್ಶಿತವಾಗಬಹುದು. ಜತೆಗೆ ಈ ದಾಪುಗಾಲು ಕೇವಲ ಅಮೆರಿಕ ಮಾದರಿಯ ವಾಲ್‌ಸ್ಟ್ರೀಟ್‌ಗಳನ್ನೂ, ಇಲ್ಲದ ಮೌಲ್ಯವನ್ನು ಇದೆಯೆಂದು ನಂಬಿಸಿ ಜೂಜಿಗೆ ಹಚ್ಚಿ ಕೆಲವರನ್ನಷ್ಟೇ ಹಣದ ಸೌಧದಲ್ಲಿ ಕೂರಿಸುವ ವ್ಯವಸ್ಥೆಯನ್ನೂ ಸೃಷ್ಟಿಸದಂತೆ ನೋಡಿಕೊಳ್ಳುವ ನಾಯಕತ್ವವೂ ಬೇಕಾಗುತ್ತದೆ. ಯುವಶಕ್ತಿಯನ್ನು ಬಳಸಿಕೊಂಡು ಕಟ್ಟುವ ಆರ್ಥಿಕತೆಯು ಷೇರುಪೇಟೆಗಳಿಗಿಂತ ಹೆಚ್ಚಾಗಿ ದೇಶದ ಎಲ್ಲ ಮೂಲೆಗಳ ತೇರುಪೇಟೆಗಳನ್ನೂ ಗಟ್ಟಿಗೊಳಿಸಿದರೆ ಮಾತ್ರ ಒಂದು ದೀರ್ಘಾವಧಿ ಯಶಸ್ಸು ಭಾರತದ್ದಾಗುತ್ತದೆ. ಹೀಗೆಲ್ಲ ಯೋಚಿಸಿದಾಗ ಸದ್ಯದ ಮಟ್ಟಿಗೆ ನರೇಂದ್ರ ಮೋದಿ ಹುಟ್ಟಿಸಿರುವ ಭರವಸೆಯನ್ನು ನಂಬೋಣ ಎನಿಸುತ್ತದೆ. 'ಗೂಗಲ್-ಆ್ಯಪಲ್‌ಗಳಂಥ ಸಂಸ್ಥೆಗಳನ್ನು ನಮ್ಮ ಯುವಕರು ಈ ನೆಲದಲ್ಲೇ ಕಟ್ಟುವಂತಾಗಲಿ' ಎನ್ನುತ್ತಿರುವುದು, 'ನಮ್ಮ ಆಮದಿನಲ್ಲಿ ಇಲೆಕ್ಟ್ರಾನಿಕ್ ಸಾಧನಗಳ ಪಾಲು ದೊಡ್ಡದಿದೆ. ಅವನ್ನೆಲ್ಲ ಇಲ್ಲೇ ಉತ್ಪಾದಿಸುವಂತಾಗಬೇಕು. ರಕ್ಷಣಾ ಉಪಕರಣಗಳಿಗಾಗಿ ವಿದೇಶಗಳನ್ನು ಅವಲಂಬಿಸುವ ಸ್ಥಿತಿ ಹೋಗಬೇಕು. ಮಾಹಿತಿ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡಾಗ ದೇಶದಲ್ಲಿ ಮಹಾ ಪರಿವರ್ತನೆ ಸಾಧ್ಯವಿದೆ' ಎಂದೆಲ್ಲ ನಿಖರ ನೀಲನಕ್ಷೆ ಹರವಿಡುತ್ತಿರುವುದು ಆಪ್ಯಾಯವೆನಿಸುತ್ತಿದೆ. ಅಲ್ಲದೇ ಇಂಥ ಉದ್ಯಮ ವಲಯ ಕೆಲ ನಗರಗಳಿಗೆ ಸೀಮಿತಗೊಂಡಿರದೇ ಈಶಾನ್ಯ ಭಾರತದ ಅಲಕ್ಷಿತ ರಾಜ್ಯಗಳಿಗೂ ವಿಸ್ತರಿಸಬೇಕು ಎಂಬ ಒಳನೋಟದಲ್ಲೊಂದು ಪುಳಕವಿದೆ.
ಎಲ್ಲೋ ಓದಿದ ಭಾರತದ ಸುವರ್ಣಯುಗವನ್ನು ನೆನಪಿಸುವ ದಿನಗಳು ಮತ್ತೆ ಬರುವ ಎಲ್ಲ ಸಾಧ್ಯತೆಗಳೂ ಇವೆ. ಹಾಗೆ ತೆರೆದುಕೊಳ್ಳಲಿರುವ ಅಧ್ಯಾಯಗಳಲ್ಲಿ ನಾವು ಕೆತ್ತಲಿರುವುದು ಈ ಮೊದಲಿನ ಸಾಮ್ರಾಜ್ಯಗಳ ಒಣಜಂಭವನ್ನೋ ಅಥವಾ ಮನ್ವಂತರಗಳವರೆಗೆ ಮುಸುಕಾಗದ ಮಾದರಿಯನ್ನೋ ಎಂಬುದು ಉಳಿದಿರುವ ಪ್ರಶ್ನೆ.



- ಚೈತನ್ಯ ಹೆಗಡೆ
ಝಛ್ಛಜ್ಜಜಜಅ್ಜಟಛ್ಝಟ.್ಛ್ಟಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com